ವಾರಕ್ಕೊಮ್ಮೆ ಸೈಕಲ್ ಬಳಸಿ ಇಂಧನ ಉಳಸಿ : ವಿದ್ಯಾರ್ಥಿಗಳನ್ನು ಕೋರಿದ ವಿಜ್ಞಾನಿ ನಾಗೇಶ ಹೆಗಡೆ

ಹೊನ್ನಾವರ: ಇಂಧನ ಬಳಕೆಯ ಪ್ರಮಾಣವನ್ನು ತಗ್ಗಿಸಲು ಜಗತ್ತಿನ ಹಲವಾರು ರಾಷ್ಟ್ರಗಳು ಇಂದು ಸೈಕಲ್ ಪ್ರಯಾಣವನ್ನು ಮಾಡುತ್ತಿವೆ. ನೀವು ಕೂಡ ವಾರದಲ್ಲಿ ಒಮ್ಮೆಯಾದರೂ ಸೈಕಲ್ ಪ್ರಯಾಣ ಮಾಡಿ ಇಂಧನ ಬಳಕೆಯನ್ನು ಕಡಿಮೆ ಮಾಡಿ ಹಿರಿಯ ವಿಜ್ಞಾನಿಮ ವೈಜ್ಞಾನಿಕ ಬರಹಗಾರ, ಪತ್ರಕರ್ತ ನಾಗೇಶ ಹೆಗಡೆ ವಿಧ್ಯಾರ್ಥಿಗಳಿಗೆ ಕರೆ ನೀಡಿದರು.

ಪಟ್ಟಣದ ಎಸ್.ಡಿ.ಎಂ. ಕಾಲೇಜಿನಲ್ಲಿ , ವಿದ್ಯಾರ್ಥಿ ಒಕ್ಕೂಟ ಮತ್ತು ಕಾಲೇಜಿನ ವಿಜ್ಞಾನ ಸಂಘದ ಸಹಯೋಗದಲ್ಲಿ ನಡೆದ ‘ಜಾಗತಿಕ ತಾಪಮಾನ, ಅದರ ದುಷ್ಪರಿಣಾಮಗಳು ಮತ್ತು ಪರಿಹಾರೋಪಾಯಗಳು’ ವಿಷಯದ ಮೇಲೆ ಉಪನ್ಯಾಸ ಮಾಡುತ್ತಿದ್ದ ಅವರು, ಮಾನವ ತನ್ನ ಬೀಮನ ಭೀಮನ ಹೆಜ್ಜೆಯಿಂದ ಹಾಗೂ ಅನಿಯಮಿತ ಇಂಧನ ತೈಲಗಳ ಬಳಕೆಯಿಂದ ತಾಪಮಾನ ಹೆಚ್ಚಿಸುತ್ತಿದ್ದಾನೆ. ಉತ್ತರ ಮತ್ತು ದಕ್ಷಿಣ ದ್ರುವಗಳು ಕರಗುತ್ತಿದ್ದು, ಅಮೇರಿಕಾದ ಬಾಂಬ್ ಸೈಕ್ಲೋನ್ ಜ್ವಲಂತ ನಿದರ್ಶನವಾಗಿದೆ. ಇಂತಹ ವಿದ್ಯಮಾನಗಳು ಮನುಷ್ಯನನ್ನು 5000 ವರ್ಷ ಹಿಂದಕ್ಕೆ ಕರೆದುಕೊಂಡು ಹೋಗುವುದರಲ್ಲಿ ಸಂದೇಹವಿಲ್ಲ ಎಂದು ಅಭಿಪ್ರಾಯಪಟ್ಟರು.

ಸನಾತನ ಕಾಲದಿಂದ ಮಾತನಾಡುತ್ತಿರುವ ಭೂಮಿಯ ಕೂಗಿಗೆ ಮಾನವ ಸ್ಪಂದಿಸುತ್ತಿಲ್ಲ. ಮನುಷ್ಯ ಇಂದು ಪರಿಸರವನ್ನು ವಾಣಿಜ್ಯೀಕರಣಗೊಳಿಸಿ ಭೋಗ ಜಗತ್ತಿಗೆ ಕಾಲಿಟ್ಟಿದ್ದಾನೆ. ದೇಶದ ಪರಿಸರವನ್ನು ಉಳಿಸುವ ಚಳುವಳಿಗಳಲ್ಲಿ ಜೈವಿಕ ಸಂಪನ್ಮೂಲಗಳ ಭಂಡಾರವಾದ ಉತ್ತರ ಕನ್ನಡ ಜಿಲ್ಲೆ ಮುಂಚೂಣಿಯಲ್ಲಿದೆ. ಅಣುಸ್ಥಾವರದ ವಿರುದ್ಧದ ಕೈಗಾ ಚಳುವಳಿಯು ಏಷ್ಯಾ ಖಂಡದಲ್ಲಿಯೇ ಪ್ರಥಮ ಚಳುವಳಿಯಾಗಿದೆ. ಉತ್ತರ ಭಾರತದಲ್ಲಿ ನಡೆದ ಹಿಮ-ಜಲ- ಭೂಪ್ರಳಯಗಳು ಜಾಗತಿಕ ತಾಪಮಾನ ವಿಕೋಪಕ್ಕೆ ಹೋಗಿದೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿದೆ ಎಂದು ನಾಗೇಶ್ ಹೆಗಡೆ

ಪರಿಸರ ನಾಶ, ಜನಸಂಖ್ಯೆಯಲ್ಲಿ ಹೆಚ್ಚಳ, ಉದ್ಯಮಿಗಳ ಒತ್ತಡ, ಹವಾಮಾನ ಬದಲಾವಣೆ, ನೀರು, ತೈಲ ಕಬ್ಬಿಣ, ಪ್ಲಾಸ್ಟಿಕ್ ಮುಂತಾದ ಬೇಡಿಕೆಗಳಿಗಾಗಿ ಮಾನವ ಶೇ. 97ರಷ್ಟು ಭೂಮಿಯನ್ನು ತನ್ನ ಅಗತ್ಯಕ್ಕೆ ಅನುಗುಣವಾಗಿ ಮಾರ್ಪಾಡು ಮಾಡಿಕೊಂಡಿದ್ದಾನೆ. ಇದು ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕಾರಣವಾಗಿದೆ. ಸೇತುವೆ ನಿರ್ಮಾಣಕ್ಕೆ ನದಿ ಮರಳನ್ನು ಬರಿದು ಮಾಡುತ್ತ ಕಲ್ಲಿದ್ದಲು, ಡಿಸೈಲ್ , ಪೆಟ್ರೋಲ್, ರಬ್ಬರ್, ಗ್ಲಾಸ್, ಪ್ಲಾಸ್ಟಿಕ್ ಇವೆಲ್ಲವುಗಳ ಅತಿ ಮಾನುಷ ಬಳಕೆಯಿಂದ ‘ಅತಿ ಮಾನವ ಯುಗವನ್ನು ಸೃಷ್ಟಿಸಿದ್ದಾನೆ. ಇದರಿಂದಾಗಿ ಸಾಗರ ಉಬ್ಬರ, ಅತಿವೃಷ್ಟಿ, ಅನಾವೃಷ್ಟಿ, ಕಾಡಿನ ಬೆಂಕಿ, ಭೂಕಂಪ, ಜ್ವಾಲಾಮುಖಿ, ಸುನಾಮಿ ಉಂಟಾಗುತ್ತಿವೆ ತಿಳಿಸಿದರು.

ವೈವಿದ್ಯತೆಯ ಪಶ್ಚಿಮ ಘಟ್ಟಗಳ ಅರಣ್ಯ ಛೇದನದಿಂದ ಶರಾವತಿ ನದಿ ನೀರಿನ ಅಳಿವೆಗೆ ನುಗ್ಗಿದ ಸಮುದ್ರ ನೀರು ಉಪ್ಪೋಣಿಯವರೆಗೆ ಈಗಾಗಲೇ ತಲುಪಿದೆ. ಅದು ಜೊಗದವರೆಗೆ ತಲುಪಿ ಸಂಪೂರ್ಣ ಜಲರಾಶಿ ಉಪ್ಪುಮಯವಾಗುವ ದಿನಗಳು ದೂರವಿಲ್ಲ. ಹಸಿರು ನೆಲ, ಸ್ವಚ್ಚ ಜಲ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ಪ್ರತಿ ದಿನವೂ ಭೂಮಿ ದಿನವಾಗಬೇಕು. ಹಸಿವು ಮುಕ್ತ ಕರ್ನಾಟಕವಾಗಲಿ, ಆದರೆ ಹಸಿರು ಮುಕ್ತ ಕರ್ನಾಟಕ ಆಗದಂತೆ ನೋಡಿಕೊಳ್ಳಿ ಎಂದು ವಿಜ್ಞಾನಿ ನಾಗೇಶ ಹೆಗಡೆ ವಿದ್ಯಾರ್ಥಿಗಳಲ್ಲಿ ಕೋರಿದರು.

ನಿಸರ್ಗದ ಮೇಲೆ ಮನುಷ್ಯನ ದಬ್ಬಾಳಿಕೆ ಅಸಹ್ಯವಾದಾಗ ಪ್ರಕೃತಿ ತನ್ನ ಸಮತೋಲನವನ್ನು ಕಾಪಾಡಿಕೊಳ್ಳಲು ಉಗ್ರರೂಪ ತಾಳುತ್ತದೆ. ಈವರೆಗೆ ನಡೆದ 27 ಶೃಂಗಸಭೆಗಳಲ್ಲಿ ಜಾಗತಿಕ ತಾಪಮಾನದ ಕುರಿತು ಚರ್ಚೆಯಾಗಿದೆ. ಆದರೆ ಚರ್ಚೆಯಲ್ಲಿ ಕೈಗೊಂಡ ನಿರ್ಣಯಗಳು ಕಾರ್ಯರೂಪಕ್ಕೆ ಬಂದಿಲ್ಲ. ಶೃಂಗಸಭೆಗಳು ಕೇವಲ ಶೃಂಗಾರ ಸಭೆಗಳಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ನಾಗೇಶ ಹೆಗಡೆ ಅವರು ಜಗತ್ತಿನಲ್ಲಿ ಬಡತನ ನಿರ್ಮೂಲನೆಗಾಗಿ, ಆರೋಗ್ಯಕ್ಕಾಗಿ, ಹಸಿರು ಪ್ರಕೃತಿಗಾಗಿ ಸಂಘ ಸಭೆಗಳಾಳು ನಡೆಯಬೇಕಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಸಂಜೀವ ನಾಯಕ ವಹಿಸಿದ್ದರು. ವೇದಿಕೆಯಲ್ಲಿಕಾಲೇಜಿನ ಯೂನಿಯನ್ ಉಪಾಧ್ಯಕ್ಷ ಡಾ. ಜಿ.ಎನ್.ಭಟ್ಟ, ವಿಜ್ಞಾನ ಸಂಘದ ಸಂಚಾಲಕಿ ಕಾವೇರಿ ಮೇಸ್ತ, ವಿದ್ಯಾರ್ಥಿ ಪ್ರತಿನಿಧಿ ಜೀವನ ಶೆಟ್ಟಿ ಉಪಸ್ಥಿತರಿದ್ದರು. ಡಾ. ಎಂ.ಜಿ.ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ನಾಗರಾಜ ಹೆಗಡೆ, ಪ್ರೊ ವಿದ್ಯಾಧರ ನಾಯ್ಕ ನಿರೂಪಿಸಿದರು. ಜಿ.ಎನ್.ಭಟ್ಟ ವಂದಿಸಿದರು.

Leave a Reply

Your email address will not be published. Required fields are marked *