ಜಾನಪದ ವಿದ್ವಾಂಸೆ ಶಾಂತಿ ನಾಯಕ ಅವರ ‘ಜೀವ ಉಳಿಸುವ ಕಳೆ ಕಂಟಿ ಗಿಡ ಮರ ಬಳ್ಳಿಗಳು’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ಇತ್ತೀಚೆಗೆ ಅಂಕೋಲಾದ ಪಿ ಎಮ್ ಹೈಸ್ಕೂಲಿನ ‘ರೈತ ಭವನ’ದಲ್ಲಿ ನಡೆಯಿತು.
ಕೃತಿಯ ಪ್ರಕಟಿಸಿದ‘ಭೂಮಿ ಜಾನಪದ ಪ್ರಕಾಶನ ಹೊನ್ನಾವರ’ ಮತ್ತು ಪಿ. ಎಮ್. ಹೈಸ್ಕೂಲು ಅಂಕೋಲಾ ಇವುಗಳ ಸಂಯುಕ್ತ ಆಶ್ರಯದಲ್ಲಿ, ದಿ. ವಿಠಾಬಾಯಿ ಜಿ ನಾಯಕ ಹಿರೇಗುತ್ತಿ ಇವರ ನೆನಪಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ, ಕ.ವಿ.ವಿ. ಧಾರವಾಡದ ನಿವೃತ್ತ ಸಸ್ಯಾಶಾಸ್ತ್ರ ಪ್ರಾಧ್ಯಾಪಕರಾದ ಡಾ. ಜಿ ಆರ್ ಹೆಗಡೆ ಮುರೂರು, ಇಂದು ಮರೆಯಾಗುತ್ತಿರುವ ನಮ್ಮ ಜನಪದರ ಪಾರಂಪರಿಕ ಔಷಧ ಸಸ್ಯಗಳ ಪ್ರಸ್ತುತತೆ ಮತ್ತು ಅವುಗಳನ್ನು ಉಳಿಸಿಕೊಳ್ಳಲು ಇರುವ ಸವಾಲುಗಳ ಕುರಿತು ಸಭೆಯ ಗಮನ ಸೆಳೆದು ‘ಸುಮಾರು ನಾಲ್ಕು ದಶಕಗಳ ಅವಿರತ ಕ್ಷೇತ್ರಕಾರ್ಯ ಮತ್ತು ಸಸ್ಯಶಾಸ್ತ್ರಜ್ಞರಿಂದ ಗಂಭೀರ ಪರಿಶೀಲನೆಗೊಳಗೊಂಡ ಈ ಕೃತಿಯು ಶಾಂತಿ ನಾಯಕರ ಸಂಶೋಧನ ಶಕ್ತಿಗೆ ಮತ್ತು ಉತ್ತರ ಕನ್ನಡ ನೆಲದ ಸಂಪತ್ತಿಗೂ ಹಿಡಿದ ಕನ್ನಡಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.

ಸಜೀವ ಸಸ್ಯ ಮಾದರಿಗಳು ಮತ್ತು ಪ್ರೊಜೆಕ್ಟರ್ ಮುಖಾಂತರ ಸಚಿತ್ರವಾಗಿ ನಡೆದ ಪುಸ್ತಕ ಪರಿಚಯವನ್ನು ಪ್ರೊ. ಗೀತಾ ನಾಯಕ, ಗಾಯತ್ರಿ ನಾಯ್ಕ, ಡಾ. ಪ್ರಕಾಶ ಮೇಸ್ತ ಮತ್ತು ಭಾರತಿ ಬಿ ನಾಯಕ ಇವರುಗಳು ಒಂದು ತಂಡವಾಗಿ ನಡೆಸಿಕೊಟ್ಟರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹಿರಿಯ ಆಯುರ್ವೇದ ವೈದ್ಯರು, ಕರ್ನಾಟಕ ಜೀವ ವೈವಿದ್ಯ ಮಂಡಳಿಯ ನಿವೃತ್ತ ಜಂಟಿ ನಿರ್ದೇಶಕ ಡಾ. ಸತ್ಯನಾರಾಯಣ ಭಟ್ಟ ಅವರು ಪ್ರಕಟಿತ ಕೃತಿಯಲ್ಲಿರುವ ಹಲವು ಸ್ಥಳೀಯ ಸಸ್ಯಗಳ ಔಷಧೀಯ ಮೌಲ್ಯಗಳ ಬಗ್ಗೆ ಪ್ರಸ್ತಾಪಿಸಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದರು ಮತ್ತು ಶಾಂತಿ ನಾಯಕ ಅವರ ಕೆಲಸವನ್ನು ಶ್ಲಾಘಿಸಿದರು. ಚಂದ್ರಶೇಖರ ಕಡೇಮನಿ ಮಾತನಾಡಿ ಉ. ಕ.ದ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾಳಜಿಯ ಕುರಿತು ಕೆನರಾ ವೆಲ್‌ಫೇರ್ ಟ್ರಸ್ಟ್ ಮತ್ತು ಅದರ ಭಾಗವಾದ ಪಿ. ಎಮ್. ಹೈಸ್ಕೂಲಿನ ಬದ್ಧತೆಯನ್ನು ಸಭೆಗೆ ತಿಳಿಸಿಕೊಟ್ಟರು. ಸಂಶೋದಕಿ ಮತ್ತು ಲೇಖಕಿ ಶಾಂತಿ ನಾಯಕ ಅವರು, ಸ್ಥಳೀಯ ಔಷಧ ಸಸ್ಯಗಳ ಕುರಿತಾದ ಅಜ್ಞಾನ ಮತ್ತು ಅಪನಂಬಿಕೆಗಳಿಂದ ಉಂಟಾಗುತ್ತಿರುವ ಪ್ರಮಾದಗಳ ಕುರಿತು ಆತಂಕ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಸೈನ್ಸ್‌ನ ಪರಿಸರ ವಿಜ್ಞಾನ ಕೇಂದ್ರ ಕುಮಟಾ ಘಟಕದ ಹಿರಿಯ ವಿಜ್ಞಾನಿ, ಡಾ. ಎಮ್. ಡಿ. ಸುಭಾಷ್‌ಚಂದ್ರನ್ ಅವರು ಶಾಂತಿ ನಾಯಕ ಅವರ ಪುಸ್ತಕದ ಪ್ರಾಮುಖ್ಯತೆಯನ್ನು ಕುರಿತು ಮಾತನಾಡಿದ್ದಲ್ಲದೆ, ವಿಜ್ಞಾನ ಇತಿಹಾಸದ ಹಲವು ಸ್ವಾರಸ್ಯಕರ ಸಂಗತಿಗಳನ್ನು ತಿಳಿಸಿಕೊಟ್ಟು ನೆರೆದಿದ್ದ ಸಭಿಕರ ಪರಿಸರ ಕಾಳಜಿ ಕುರಿತಂತೆ ಚಿಂತನೆಗೆ ಮಾರ್ಗ ಮಾಡಿಕೊಟ್ಟರು.

ಕಾರ್ಯಕ್ರಮದ ಆರಂಭದಲ್ಲಿ ಜನಪದ ಹಾಡುಗಾರ್ತಿ ನುಗಲಿ ಗೌಡ ಭೂಮ್ತಾಯಿಯನ್ನು ಪ್ರಾರ್ಥಿಸಿದರು. ವಿವೇಕಾನಂದ ನಾಯಕ ಮತ್ತು ಖ್ಯಾತಿ ನಾಯಕ ಸ್ವಾಗತಿಸಿದರು. ಜಿ. ಆರ್. ತಾಂಡೇಲ, ರಮೇಶ ಬಿ ನಾಯಕ, ಅನನ್ಯ ನಾಯಕ, ಶ್ರುತಿ ಆನಂದ್, ವಿಜೇತ್ ನಾಯಕ ಅತಿಥಿಗಳ ಪರಿಚಯ ಮಾಡಿದರು. ಬುಡ ಜಾನಪದ ಸಂಸ್ಥೆಯ ಮುಖ್ಯಸ್ಥೆ ಡಾ. ಸವಿತಾ ನಾಯಕ ಕೃತಿಯ ಕುರಿತಾಗಿ ಅರ್ಥಪುರ್ಣ ಪ್ರಸ್ತಾವನೆ ಸಲ್ಲಿಸಿದರು. ನಾಡಿನ ಹಿರಿಯ ಜಾನಪದ ವಿದ್ವಾಂಸ ಡಾ. ಎನ್ ಆರ್ ನಾಯಕ ಮತ್ತು ಶಾಂತಿ ನಾಯಕ ದಂಪತಿಗೆ ನಡೆದ ಕುಟುಂಬ ಸನ್ಮಾನದ ಬಗ್ಗೆ ವಿಘ್ನೇಶ ನಾಯಕ ಮಾತನಾಡಿದರು. ಮಮತೆಯಿಂದ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಎನ್, ಆರ್. ನಾಯಕ್ ತನ್ನ ಸೋದರ ಸೊಸೆ ದಿ. ವಿಠಾಬಾಯಿ ನಾಯಕ ಅವರ ಜೊತೆಗಿನ ಬಾಂದವ್ಯವನ್ನು ನೆನೆಸಿಕೊಂಡು, ಕಾರ್ಯಕ್ರಮಕ್ಕೆ ಶುಭಕೋರಿದರು. ಪುಸ್ತಕದ ಪ್ರಾಯೋಜಕರಾದ ಹಿರಿಯ ಸಾಹಿತಿ ಜಿ. ಯು. ನಾಯಕ ವಂದಿಸಿದರು. ಕವಿ ದಿವ್ಯಪ್ರಕಾಶ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ನಮ್ಮ ಜನಪದರ ಜ್ಞಾನ, ಆಯುರ್ವೇದ ಮತ್ತು ವಿಜ್ಞಾನದ ಅರ್ಥಪೂರ್ಣ ಮೇಳದಂತಿದ್ದ ಈ ಕಾರ್ಯಕ್ರಮಕ್ಕೆ ಉತ್ತರ ಕನ್ನಡದ ಹಲವು ಸಾಹಿತಿಗಳು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಪೌರ ಜನಪದರು ಸಾಕ್ಷಿಯಾದರು.