ಕವಿ ಉಮೇಶ ಮುಂಡಳ್ಳಿ ಕವನ ಸಂಕಲನ ಬಿಡುಗಡೆ
ಕವಿ, ಗಾಯಕ ಉಮೇಶ ಮುಂಡಳ್ಳಿ ಅವರು ತಮ್ಮ ಹನಿಗವನ ಸಂಕಲನ ‘ತಿಂಗಳ ಬೆಳಕು’ ಕೃತಿಯ ಮೊದಲ ಪ್ರತಿಯನ್ನು ನಾಡಿನ ಹಿರಿಯ ವಿಮರ್ಶಕ, ಜಾನಪದ ವಿದ್ವಾಂಸ, ಕವಿ ವಿ.ಗ.ನಾಯಕ ಅವರ ಬೊಗಸೆಯಲ್ಲಿಟ್ಟು ಬಿಡುಗಡೆಯನ್ನು ಮಾಡಿಸಿದ ಅರ್ಥಪೂರ್ಣ ಘಳಿಗೆಗೆ ‘ಪ್ರಭುಧಾಮ’ ಸಾಕ್ಷಿಯಾಯಿತು.
ಇತ್ತೀಚೆಗೆ ಮಂಗಳೂರಿನ ‘ಸುವರ್ಣಗಿರಿ’ಯಿಂದ ಬಂದ ವಿ.ಗ.ನಾಯಕ ಮತ್ತು ಸ್ಮೃತಿ ಪ್ರಕಾಶನದ ಸಂಚಾಲಕಿ ಶ್ಯಾಮಲಾ ಕರ್ಕಿಕೋಡಿ ದಂಪತಿಯ ವಾಸ ಇದೀಗ ಕುಮಟಾದ ‘ಪ್ರಭುಧಾಮ’ ನಿವಾಸದಲ್ಲಿ. ಕಳೆದ ಐದು ದಶಕಗಳಿಂದ ದಕ್ಷಿಣ ಕನ್ನಡದ ಅಡ್ಯನಡ್ಕ, ಮಂಗಳೂರಿನಲ್ಲಿದ್ದ ವಿ.ಗ.ನಾ. ಇದೀಗ ಹುಟ್ಟೂರಿಗೆ ಬಂದು ನೆಲೆಸಿದ್ದಾರೆ.

ಪತ್ನಿ ರೇಷ್ಮಾ, ಮಕ್ಕಳಾದ ನಿನಾದ, ಉತ್ಥಾನ ಹೀಗೆ ತಮ್ಮ ಮುದ್ದಾದ ಸಂಸಾರದೊಂದಿಗೆ ಉಮೇಶ ಮುಂಡಳ್ಳಿ ಅವರು ಅಂದು ಮುಂಜಾನೆ ‘ತಿಂಗಳ ಬೆಳಕು’ ಹಿಡಿದು ಭಟ್ಕಳದಿಂದ ವಿ.ಗ.ನಾಯಕ ಅವರ ಮನೆಗೆ ತೆರಳಿದರು. ವಿ.ಗ.ನಾ. ದಂಪತಿ ಈ ಮಕ್ಕಳನ್ನು ಕಂಡು ಖುಷಿಪಟ್ಟು ಬರಮಾಡಿಕೊಂಡರು. ನಿಜ, ‘ಪ್ರಭುಧಾಮ’ ಅಕ್ಷರಶಃ ‘ಅಕ್ಷರಧಾಮ’ವೇ ಆಗಿತ್ತು.
ಕೆಲವಾರು ವರ್ಷಗಳ ಹಿಂದೆ ನಿತ್ಯ ರಾತ್ರಿ ಉಮೇಶ ಮುಂಡಳ್ಳಿ ಚಂದ್ರನ ಬಗ್ಗೆ ಒಂದೊಂದು ಹನಿಗವನ ಬರೆಯುವುದನ್ನು ರೂಢಿ ಮಾಡಿಕೊಂಡಿದ್ದರು. ಅವುಗಳನ್ನು ಅದೇ ದಿನ ರಾತ್ರಿ ವಾಟ್ಸಾಪ್, ಫೇಸ್ ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳಿಗೆ ರವಾನಿಸುತ್ತಿದ್ದರು. ಇದೀಗ ಅಂಥ ಹನಿಗವನಗಳನ್ನೆಲ್ಲ ಒಟ್ಟು ಗೂಡಿಸಿ ‘ತಿಂಗಳ ಬೆಳಕು’ ಶೀರ್ಷಿಕೆ ಕೊಟ್ಟು ಪುಟ್ಟ ಕವನ ಸಂಕಲನ ಹೊರತಂದಿದ್ದಾರೆ. ಅದನ್ನು ‘ಹನಿಗವನಗಳ ಸಾಮ್ರಾಟ’ ವಿ.ಗ.ನಾಯಕ ಅವರಿಂದಲೇ ಬಿಡುಗಡೆ ಮಾಡಿಸಬೇಕು ಎಂಬುದು ಅವರ ಒತ್ತಾಸೆ. ಅಂತೇಯೇ ಕಳೆದ ವಾರ ವಿ.ಗ.ನಾಯಕರಲ್ಲಿಗೆ ಮುಂಡಳ್ಳಿ ಸಂಸಾರ ಹೊರಟಿತ್ತು.

ಅದೊಂದು ಆಪ್ತ ಘಳಿಗೆ. ಎಲ್ಲೂ ಆಡಂಬರ ಇರಲಿಲ್ಲ. ಕಾವ್ಯಪ್ರೀತಿ ಮತ್ತು ಮನುಷ್ಯಪ್ರೀತಿ ಮಾತ್ರ ಇದ್ದ ಕ್ಷಣ. ಈ ಸಂದರ್ಭದಲ್ಲಿ ಉಮೇಶ ಮುಂಡಳ್ಳಿ ಅವರು ‘ತಿಂಗಳ ಬೆಳಕು’ ಹನಿಗವನ ಸಂಕಲನವನ್ನು ವಿ.ಗ.ನಾ. ಬೊಗಸೆಯಲ್ಲಿಟ್ಟರು. ಪುಸ್ತಕ ಕಂಡಿದ್ದೇ ಕವಿ ಹೃದಯ ಅರಳಿತು. ತುಂಬ ಮಮತೆಯಿಂದ ‘ತಿಂಗಳ ಬೆಳಕು’ ಹನಿಗವನ ಸಂಕಲನವನ್ನು ಬಿಡುಗಡೆ ಮಾಡಿದರು. ಪತ್ನಿ ಶ್ಯಾಮಲಾ ಕರ್ಕಿಕೋಡಿ ಅವರೂ ಕೃತಿ ಬಿಡುಗಡೆಯಲ್ಲಿ ಜೊತೆಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ವಿ.ಗ.ನಾ. ಹನಿಗವನವನ್ನು ಎಂದಿಗೂ ಹಗುರವಾಗಿ ಭಾವಿಸಬಾರದು. ಅದನ್ನು ಪುಟ ತುಂಬುವ ಸರಕು ಅಂತ ಅಸಡ್ಡೆ ಮಾಡಬಾರದು. ಒಂದು ಸಶಕ್ತ ಹನಿಗವನ ಹತ್ತೆಂಟು ರೀತಿಯಲ್ಲಿ ಧ್ವನಿ ಹೊರಡಿಸುತ್ತದೆ. ಗದ್ಯಕ್ಕಿಂತಲೂ ಹನಿಗವನ ಗಂಭೀರತೆಯನ್ನು ಉಳಿಸಿಕೊಂಡಿರುತ್ತದೆ. ಹನಿಗವನ ರಚನೆಯಲ್ಲಿ ಹುಡುಗಾಟಿಕೆ ಸಲ್ಲ ಎಂದು ಹೇಳಿ ಉಮೇಶ ಮುಂಡಳ್ಳಿ ಬೆನ್ನು ತಟ್ಟಿದರು. ಮತ್ತಷ್ಟು ಬರೆಯುವಂತೆ ಹುರಿದುಂಬಿಸಿದರು.

ತಮ್ಮ ಮಗಳು ಇತ್ತೀಚೆಗೆ ನಿಧನರಾದ ಲೇಖಕಿ, ಪತ್ರಕರ್ತೆ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ ಅವರಿಗೆ ‘ತಿಂಗಳ ಬೆಳಕು’ ಅರ್ಪಣೆ ಮಾಡಿದ ಪುಟವನ್ನು ಕಂಡು ವಿ.ಗ.ನಾ ದಂಪತಿ ಭಾವುಕರಾದರು. ವಿ.ಗ.ನಾಯಕ ಅವರು ತಮ್ಮ ಸಂಗ್ರಹದಲ್ಲಿದ್ದ ನೂರು ಪುಸ್ತಕಗಳನ್ನು ಉಮೇಶ ಮುಂಡಳ್ಳಿ ಅವರ ‘ನಿನಾದ ಸಾಹಿತ್ಯ, ಸಂಗೀತ ಸಂಚಯ’ ಸಂಘಟನೆಗೆ ನೀಡಿ ಶುಭ ಹಾರೈಸಿದರು.