ಗಾಂಧಾರಿ ನುಲಿದಂತೆ, ರಾಜ್ಯವನು ಪೊರೆದಂತೆ
ಮಗನೆದ್ದು ಬೆಳೆದಂತೆ ಮಾಗಿತ್ತು ಹೆರಳು
ಸ್ವೇಚ್ಛ ಕಾವಿನ ಮೇಲೆ ಮುಚ್ಚು ಕೌರವ ಪಾತ್ರೆ
ನಿಜದ ಕಾವಿಗೆ ಉಕ್ಕಿ ಬಂತು ಅಗಳು
ಕುಂತಿಯ ಕಣ್ಣಲ್ಲಿ ಕಳೆದ ಭಾಗ್ಯದ ನೆರಳು
ದ್ರೌಪದಿಯ ಕಣ್ಣಲ್ಲಿ ರೋಷ ನೂರಾರು
ಕೃಷ್ಣನೊಳಗಣ್ಣುಗಳ ಕಂಡವರು ಯಾರು?
ಧೃತರಾಷ್ಟ್ರ ಚುರುಗುಡಲು ಯಾರು ಮಾಡರು ಕೇರು
ನೋಡಿ ನಡೆಯದ ಹಾದಿ ಎಡ ಎಡವಿ ಬಿದ್ದರು
ಕಾಣುವ ಕಣ್ಣಿದ್ದು ಕಣ್ಣೆದುರೆ ಸತ್ತರು
ಅಂದು ಮುಚ್ಚಿದ ಕಣ್ಣು ಎಂದು ತೆರೆವುದೋ ಇನ್ನು?
ಎದ್ದಳಾ ಗಾಂಧಾರಿ, ಸಂಜಯನು ಬರುವ ಹೊತ್ತು
ಧೃತರಾಷ್ಟ್ರಗೇಕೀಗ ಕಣ್ಣೊಡೆವ ಹುಚ್ಚು?
ಸಂಜಯನ ವರದಿಯೊಳಗೇನಿತ್ತು ಮುಚ್ಚು?
ಯಾರ ಹಂಗಿನ ಕಣ್ಣು ಯಾವ ಕುನ್ನಿಗೆ ಬೇಕು
ತಾನು ನೋಡುವ ಗುಣವ ಪಡೆಯಬೇಕು
2010 ರಲ್ಲಿ ‘ಹಣತೆ’ ದೀಪಾವಳಿ ವಿಶೇಷಾಂಕಕ್ಕಾಗಿ ಏರ್ಪಡಿಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದ ದಿವ್ಯಪ್ರಕಾಶ ನಾಯಕ ಅಂಕೋಲಾ ಅವರ ‘ಹಂಗಿನ ಕಣ್ಣು’ ಕವನವನ್ನು ಇದೀಗ ಮತ್ತೊಮ್ಮೆ ‘ಹಣತೆ ವಾಹಿನಿ’ ವೆಬ್ ನ್ಯೂಸ್ ಪತ್ರಿಕೆಯಲ್ಲಿ ಅಭಿಮಾನಪೂರ್ವಕವಾಗಿ ಪ್ರಕಟಿಸುತ್ತಿದ್ದೇವೆ. ಅಂದು ಸ್ಪರ್ಧೆಯ ತೀರ್ಪುಗಾರರಾದ ಎಚ್.ಎಸ್.ರಾಘವೇಂದ್ರ ರಾವ್ ಮತ್ತು ಜಿ.ಪಿ.ಬಸವರಾಜು ಅವರು ಈ ಕವನ ಬಗ್ಗೆ ಹೀಗೆ ಹೇಳುತ್ತಾರೆ : ‘ಹಂಗಿನ ಕಣ್ಣು’ ನಮಗೆ ಇಷ್ಟವಾದ ಇನ್ನೊಂದು ಕವನ. ಅಷ್ಟೇನೂ ನಿಚ್ಚಳವೆನಿಸದ ಪೌರಾಣಿಕ ಚಿತ್ರಗಳ ನೆರವಿನಿಂದ ನಿರ್ದಿಷ್ಟ ವ್ಯಕ್ತಿಗಳ ಅಂಧತೆಯ ಬಗ್ಗೆ ಮಾತನಾಡುವ ಕವಿತೆ, ಅಲ್ಲಿಗೇ ಮುಗಿದಿದ್ದರೆ ಸಾಮಾನ್ಯವಾಗುತ್ತಿತ್ತು. ಆದರೆ, ಅದು ಕ್ರಮೇಣ
ಲೋಕವನ್ನು ನೋಡುವ ರೀತಿಯ ಬಗೆಗಿನ ವ್ಯಾಖ್ಯಾನವಾಗಿ ಕವಿತೆಯು ಸಂಕೀರ್ಣವಾಗುತ್ತದೆ. ಹಾಗೆ
ನೋಡಿದರೆ, ನಾವೆಲ್ಲರೂ ಹಂಗಿನ ಕಣ್ಣುಗಳಿಂದಲೇ ನೋಡುತ್ತಿರುವವರು. ನಮ್ಮ
ದೃಷ್ಟಿಕೋನವು ಹೊರಗಿನಿಂದ ದತ್ತವಾದಾಗ, ಕಾಣುವ ಯಾವ ನೆಲೆಗಳೂ
ಸ್ವಂತವಾಗುವುದಿಲ್ಲ. ಇಂತಹ ಹಂಗಿನ ಕಣ್ಣುಗಳು ಯಾರಿಗೂ ಬೇಡ. ಈಗ
ಹಿನ್ನೋಟದ ಬಲದಿಂದ ನೋಡಿದರೆ, ಜೀವನವೆಲ್ಲ ಬೇರೆಯವರ ಕಣ್ಣುಗಳ
ಮೂಲಕವೇ ನೋಡಿದ ದೃತರಾಷ್ಟ್ರ ಗಾಂಧಾರಿಯರ ಕುರುಡುತನವು ವಾಚ್ಯವಾಗಿ
ಮತ್ತು ಧ್ವನಿಯಾಗಿ ಮುಖ್ಯವೆನಿಸುತ್ತದೆ. ಈ ಸಂಕೀರ್ಣತೆ ಮತ್ತು ಲಯದ ಮೇಲಿನ
ಹಿಡಿತಗಳು ಈ ಕವಿತೆಯ ಯಶಸ್ಸಿಗೆ ಕಾರಣ’ ತೀರ್ಪುಗಾರರ ಈ ಅನಿಸಿಕೆಯನ್ನು ನಿಮ್ಮ
ಮುಂದೆ ಇಡುತ್ತ, ದಿವ್ಯಪ್ರಕಾಶ ನಾಯಕ ಅಂಕೋಲಾ ಅವರ ‘ಹಂಗಿನ ಕಣ್ಣು’
ಕವನೊದಳಗೆ ನಿಮ್ಮನ್ನು ಕರೆದೊಯ್ಯವ ಪ್ರಯತ್ನ ಇದು. – ಸಂ

ದಿವ್ಯಪ್ರಕಾಶ ನಾಯಕ ಅಂಕೋಲಾ