ಬದುಕ ಪಯಣದಲಿ ಮರೆಯದ ಕಾಲೇಜು ನಿಲ್ದಾಣ

ಕಾಲೇಜು ದಿನಗಳೆಂದರೆ ಕೇವಲ ಕ್ಯಾಲೆಂಡರಿನ ಹಾಳೆಗಳ ದಿನಾಂಕಗಳಲ್ಲ. ಅದು ಹದಿಹರೆಯದ ಮನಸ್ಸುಗಳು ಸುಮಧುರ ಕನಸುಗಳನ್ನು ಕಟ್ಟಿಕೊಳ್ಳುವ ಕ್ಷಣ. ಆಗಲೇ ತಮ್ಮ ಸುಂದರ ನಾಳೆಗಳು ಹೇಗಿರಬೇಕು ಎಂಬುದನ್ನೂ ಯೋಚಿಸುವ-ಯೋಜಿಸುವ ಕಾಲ. ಆ ದಿನಗಳನ್ನು ಬದುಕಿನ ಬಂಗಾರದ ಕ್ಷಣ ಎಂದು ಬಣ್ಣಿಸುವವರೂ ಇದ್ದಾರೆ. ಅನಂತರದ ಎಷ್ಟೋ ವರ್ಷಗಳ ನಂತರ ಆ ಕಾಲೇಜು ದಿನಗಳತ್ತ ಹಿಂತಿರುಗಿ ನೋಡಿದರೆ ಹೃದಯ ಪುಳಕಗೊಳ್ಳುವುದು ಸುಳ್ಳಲ್ಲ.

ಹೊನ್ನಾವರದ ಎಸ್.ಡಿ.ಎಂ .ಕಾಲೇಜಿನ ಕಾಮರ್ಸ್ ವಿಭಾಗದ 1995-96ನೇ ಸಾಲಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು (Alumni 0f SDM College, Honnavar-1995-96 Commerce Section) ಇಂದು ಬದುಕಿನ ಯಾವುದೋ ತಿರುವಿನಲ್ಲಿ ನಿಂತು ಹಿಂತಿರುಗಿ ನೋಡಲು ಪ್ರಯತ್ನ ಪಟ್ಟಿದ್ದಾರೆ. ಅದಕ್ಕಾಗಿ ತಮ್ಮದೇ ಒಂದು ಪುಟ್ಟ ಸಂಘಟನೆಯನ್ನೂ ಹುಟ್ಟು ಹಾಕಿಕೊಂಡಿದ್ದಾರೆ. ಬದುಕು-ಸಂಸಾರ ಅಂತ ನೂರೆಂಟು ಜಂಜಾಟಗಳ ನಡುವಿನಲ್ಲೂ ಆ ದಿನಗಳ ಸುಮಧುರ ಕ್ಷಣಗಳನ್ನು ಮಮತೆಯಿಂದ ನೆನೆಯಲು, ಪರಸ್ಪರ ಮಾತು, ನಗು, ಕಷ್ಟ-ಸುಖಗಳನ್ನು ಹಂಚಿಕೊಳ್ಳಲು ಎಲ್ಲರೂ ಒಟ್ಟಾಗಿ ಸೇರಿದ್ದಾರೆ.

ಅಂದು ಕಾಲೇಜಿನಲ್ಲಿ ಜಿ.ಎಸ್.ಆದ ಅಜಿತ್ ಸಾಲೇಹಿತ್ತಲ್ ತಮ್ಮ ಸಂಪರ್ಕದ ಸಹಪಾಠಿಗಳ ನೆರವಿನಿಂದ ಉಳಿದೆಲ್ಲ ಸಹಪಾಠಿಗಳ ಬೊಬೈಲ್ ನಂಬರ್, ವಿಳಾಸಗಳನ್ನು ಕಲೆ ಹಾಕಲು ಆರಂಭಿಸಿದರು. ಬಹುತೇಕ ಸಹಪಾಠಿಗಳ ಮೊಬೈಲ್ ನಂಬರ್ ಸಿಕ್ಕಿತು. ಎಲ್ಲರ ನಂಬರ್ ಒಳಗೊಂಡ ವಾಟ್ಸಾಪ್ ಗ್ರೂಪ್ ಗಳನ್ನೂ ಮಾಡಿಕೊಂಡು ಜೇನುಗೂಡಿನಂತೆ ಒಂದಾಗಲು ವೇದಿಕೆ ನಿರ್ಮಿಸಿಕೊಂಡರು.

ಪೂರ್ವಯೋಜಿತ ಕಾರ್ಯಕ್ರಮದಂತೆ 2023 ಡಿಸೆಂಬರ್ 24 ರಂದು ಹೊನ್ನಾವರದ ತಗ್ಗುಪಾಳ್ಯದ ‘ಜೀವನ ಜ್ಯೋತಿ’ ಸಂಸ್ಥೆಯ ಸಭಾಭವನದಲ್ಲಿ 1995-96ನೇ ಸಾಲಿನ ಕಾಮರ್ಸ್ ವಿಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೇರಿಕೊಂಡರು. ಕೆಲವರ ಪರಿಚಯ ಕೆಲವರಿಗೆ ಸಿಕ್ಕಿದರೆ, ಮತ್ತೆ ಕೆಲವರು ಪರಿಚಯವೇ ಸಿಗದಷ್ಟು ಬದಲಾಗಿದ್ದಾರೆ. ಆದರೂ ಬದಲಾಗದ ಆ ನಗು ಪರಸ್ಪರ ಪರಿಚಯಿಸಿತು.

ಅನಂತರ ಶರಾವತಿ ನದಿಯ ತಂಗಾಳಿಯಲ್ಲಿ ಕೊಂಚ ದೂರದವರೆಗೆ ಎಲ್ಲ ಸ್ನೇಹಿತ ವೃಂದದವರು ದೋಣಿ ಪಯಣದಲ್ಲಿ ಕೇಕೆ ಹಾಕುತ್ತ, ಚಪ್ಪಾಳೆ ತಟ್ಟುತ್ತ, ‘ಹಿಪ್ ಹಿಪ್ ಹುರ್ರೇ’ ಅಂತ ಬಾಯ್ತುಂಬ ನಗುತ್ತ ಕ್ಯಾಮರಾಗಳಿಗೆ ಪೋಸ್ ಕೊಟ್ಟು ಜಗತ್ತನ್ನೇ ಮರೆಯುವಷ್ಟು ಖುಷಿಪಟ್ಟರು. ಮತ್ತೆ ಕೆಲವರು ಅಪರೂಪಕ್ಕೆ ಸಿಕ್ಕಿದ ಗೆಳೆಯ ಗೆಳತಿಯರೊಡನೆ ಸೆಲ್ಪೀ ಕ್ಲಿಕ್ಕಿಸಿಕೊಂಡರು. ಆದರೆ ಬದುಕಿನ ಪಯಣದಲ್ಲಿ ಅಂದಿನ ಕಾಲೇಜು ನಿಲ್ದಾಣವನ್ನು ಯಾರೂ ಮರೆತಿರಲಿಲ್ಲ ಎಂಬುದು ಮಾತ್ರ ವಾಸ್ತವ.

ಕೇರಳ, ಮಂಗಳೂರು, ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆ, ಕುಮಟಾ, ಹೊನ್ನಾವರ, ಭಟ್ಕಳ… ಹೀಗೆ ಎಲ್ಲೆಲ್ಲೋ ಮನೆ, ಸಂಸಾರ, ಕೆಲಸ ಅಂತ ನೆಲೆ ನಿಂತವರೆಲ್ಲ ಅಂದು ಹೊನ್ನಾವರದ ಶರಾವತಿ ತೀರಕ್ಕೆ ಬಂದು 28 ವರ್ಷಗಳ ಹಿಂದಿನ ಕಾಲೇಜು ದಿನಗಳನ್ನು ಮೆಲಕು ಹಾಕಿದರು.

ದೋಣಿ ಪಯಣದ ನಂತರ ಮರಳಿ ಸಭಾಭವನಕ್ಕೆ ಬಂದು ಪುಟ್ಟ ಸಭಾ ಕಾರ್ಯುಕ್ರಮ ಹಮ್ಮಿಕೊಳ್ಳಲಾಯಿತು. ಈ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅಂದು ಕಾಮರ್ಸ್ ವಿಷಯ ಕಲಿಸಿದ ಪ್ರೊ.ಜಿ.ಪಿ.ಹೆಗಡೆ ಪಾಲ್ಗೊಂಡಿದ್ದು, ಅಧ್ಯಕ್ಷತೆಯನ್ನು ಕಾಲೇಜಿನ ಎಂ.ಪಿ.ಇ. ಸೊಸೆಟಿಯ ಹಾಲಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ವಹಿಸಿದ್ದರು. ಗಣ್ಯರೀರ್ವರೂ ಬದುಕಿನ ವಿವಿಧ ಮಜಲುಗಳನ್ನು ಆತ್ಮೀಯವಾಗಿ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಅಜಿತ್ ಸಾಳೆಹಿತ್ತಲ್ ಎಲ್ಲರನ್ನೂ ಸ್ವಾಗತಿಸಿದರು. ವಿಠ್ಠಲ ಮಹಾಲೆ ನಿರ್ವಹಿಸಿದರು. ಯೋಗೇಶ ಮಿರ್ಜಾನ್ ನಿರೂಪಿಸಿದರು. ನಾಗರಾಜ ನಾಯ್ಕ ವಂದಿಸಿದರು.

One thought on “ಬದುಕ ಪಯಣದಲಿ ಮರೆಯದ ಕಾಲೇಜು ನಿಲ್ದಾಣ

  1. ಎಸ್ ಡಿ ಎಮ್ ಕಾಲೇಜು ನನ್ನ ಬದುಕಿನ ಬಹು ನೆನಪಿನ ಕಾಲೇಜು. ಕಲಿತಿದ್ದು ಮೂರೇ ವರ್ಷವಾದರೂ ಬಹಳ ಜೀವನದ ಆನಂದದ ಕ್ಷಣಗಳನ್ನು ಸವಿದ ಕಾಲೇಜು. ಜೀವನ ಮಟ್ಟವನ್ನ ಎತ್ತರಿಸಿದ ಕಾಲೇಜು. ಬಹಳ ಸುಂದ, ಕ್ಷಣಗಳವು. ತಾವೆಲ್ಲರೂ ಸಹಪಾಠಿಗಳು ಸೇರಿ ಒಂದು ಕಡೆ ಸೇರಿ ನಲಿದಿದ್ದು ಬಹಳ ಖುಷಿಯಾದ ಸಂಗತಿ.ಉತ್ತಮ ಲೇಖನವನ್ನ ಬರೆದಿದ್ದೀರಿ ಧನ್ಯವಾದಗಳು

Leave a Reply

Your email address will not be published. Required fields are marked *