ಹೊನ್ನಾವರ: ಗದ್ದೆಹೊಲಗಳಲ್ಲಿಯೇ ತನ್ನ ಬದುಕನ್ನು ಸವೆಯುವ ರೈತ, ಮಳೆ ಬಿಸಿಲನ್ನು ನಂಬಿಕೊಂಡೇ ತನ್ನ ಹೊಟ್ಟೆಪಾಡಿಗೆ ದಾರಿ ಮಾಡಿಕೊಳ್ಳಬೇಕು. ಇದೀಗ ಹಿಂಗಾರು ಭತ್ತದ ಬೆಳೆಯನ್ನು ಕಟಾವು ಮಾಡುವ ಸಂದರ್ಭ.
ಆದರೆ ಅನಿರೀಕ್ಷಿತವಾಗಿ ಬಾನ ತುಂಬ ಮೋಡ ಕವಿದು ಕಳೆದ ಎರಡು ದಿನಗಳಿಂದ ಮಳೆ ಸುರಿದು ತಾಲೂಕಿನ ಗುಂಡಿಬೈಲ್ ಪ್ರದೇಶದ ಭತ್ತದ ಬೆಳೆಯೆಲ್ಲ ನಾಶವಾಗಿದೆ.
ಕೆಲ ದಿನಗಳ ಹಿಂದಷ್ಟೇ ಚೆನ್ನಾಗಿ ಬೆಳೆದ ಭತ್ತ ಸಸಿಯಿಂದ ಉತ್ತಮ ಫಸಲು ಬಂದಿದ್ದನ್ನು ಖಷಿಪಟ್ಟು ಖಟಾವಿಗೆ ಸಿದ್ದವಾಗುವಾಗಲೇ ಈ ಮಳೆಯಿಂದೆ ಅಪಾರ ನಷ್ಟವಾಗಿದೆ. ಹೊಲವನ್ನೇ ನಂಬಿ ಬದುಕುತ್ತಿರುವ ರೈತರಿಗೆ ಈ ಮಳೆ ಅಧೀರರನ್ನಾಗಿ ಮಾಡಿದೆ.

ಅಕಾಲಿಕ ಮಳೆಯಿಂದ ಆತಂಕಕ್ಕೀಡಾದ ರೈತ ಕೈಗೆ ಬಂದ ಬೆಳೆ ಬಾಯಿಗೆ ಬರಲಿಲ್ಲ ಅಂತ ತಲೆಗೆ ಕೈ ಹೊತ್ತಿದ್ದಾನೆ. ಗುಂಡಿಬೈಲ್ ಪ್ರದೇಶದ ನೂರಾರು ರೈತರು ಕಂದಾಯ ಮತ್ತು
ಕೃಷಿ ಅಧಿಕಾರಿಗಳು ಸ್ಥಳಕ್ಕೆ ಬಂದು ಹಾನಿಗೀಡಾದ ಬೆಳೆ ಪರಿಶೀಲಿಸಿ ಸರಕಾರಕ್ಕೆ ವರದಿ ನೀಡಬೇಕೆಂದು ನಾಗರಾಜ ರಂಗನಾಥ ನಾಯ್ಕ, ಶೇಖರಿ ಗೋವಿಂದ ನಾಯ್ಕ, ಸತೀಶ
ಸೀತಾರಾಮ ನಾಯ್ಕ ಮುಂತಾದ ರೈತರು ಮನವಿ ಮಾಡಿದ್ದಾರೆ.
ಈ ಬಗ್ಗೆ ‘ಹಣತೆ ವಾಹಿನಿ’ ಹೊನ್ನಾವರ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪುನೀತಾ ಕಿರಣ್ ಅವರನ್ನು ಸಂಪರ್ಕಿಸಿದಾಗ ಅವರು ‘ಅಕಾಲಿಕ ಮಳೆಯಿಂದ ಹೊನ್ನಾವರ ತಾಲೂಕಿನ ಗುಂಡಿಬೈಲ್ ಗ್ರಾಮದ ಭತ್ತದ ಫಸಲು ನೀರಿನಲ್ಲಿ ಮುಳುಗಿದೆ ಎಂಬ ಬಗ್ಗೆ ಸ್ಥಳೀಯರು ಮಾಹಿತಿ ನೀಡಿರಲಿಲ್ಲ. ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆಯವರು ಜಂಟಿಯಾಗಿ
ಸ್ಥಳಕ್ಕೆ ಭೇಟಿ ನೀಡಿ ಬೆಳೆ ನಾಶದ ಬಗ್ಗೆ ಪರಿಶೀಲಿಸಿ ಸರಕಾರಕ್ಕೆ ವರದಿ ನೀಡುತ್ತೇವೆ’ ಎಂದು ತಿಳಿಸಿದ್ದಾರೆ.