ನನ್ನ ದೋಸ್ತ ವೇಂಕಟೇಶ ಮೇಸ್ತ ಮರೆಯಾಗಿಬಿಟ್ಟ…

ಹೊಸ ವರ್ಷದ ಮೊದಲ ವಾರವೇ ‘ನದಿ’ ಅಂಕಣವನ್ನು ತುಂಬ ನೋವಿನಿಂದ ಬರೆಯುವ
ಸಂದರ್ಭ ನನ್ನ ಪಾಲಿಗೆ. ಆದರೂ ಬರೆಯಲೇ ಬೇಕು. ಅವನ ಬಗ್ಗೆ ನೋವಿನಿಂದ
ಮಾತ್ರವಲ್ಲ, ಸಿಟ್ಟಿನಿಂದಲೂ ಬರೆಯಬೇಕಾಗಿದೆ. ಯಾರಿಗೂ ಮೋಸ ಮಾಡದ ಆತ ಕೊನೆಗೂ
ಎಲ್ಲರಿಗೂ ಮೋಸ ಮಾಡಿಯೇ, ಹೇಳದೇ ಕೇಳದೇ ಮರೆಯಾದ.

ಬುಧವಾರ ಮುಂಜಾನೆ ಹೊನ್ನಾವರದಿಂದ ಗೆಳೆಯ ಜಗದೀಶ ಕಾಲ್ ಮಾಡಿ ಸಣ್ಣ
ಧ್ವನಿಯಲ್ಲಿ ‘ವೆಂಕಟೇಶ ಮೇಸ್ತ ನೇಣು ಹಾಕಿಕೊಂಡು ಸತ್ತೇ ಹೋದ’ ಅಂದಾಗ ನನಗೆ
ಸರಿಯಾಗಿ ಕೇಳಿಸಲಿಲ್ಲ, ಅಥವಾ ಕೇಳಿದರೂ ಇನ್ನೊಮ್ಮೆ ಖಚಿತ ಪಡಿಸಲು ಹಾಗೆ
ಅಂದನೇನೋ ಗೊತ್ತಿಲ್ಲ. ಸುದ್ದಿ ನಿಜವಾಗಿತ್ತು. ಅನಂತರ ಆ ಕಡೆಯಿಂದ ಒಂದೊಂದೇ
ಫೋನ್ ಕರೆಗಳು ಬರಲಾರಂಭಿಸಿದವು. ನಾನು ಕಲ್ಲಾಗಿ ಹೋದೆ. ಮನೆಯಲ್ಲೂ
ಯಾರೊಂದಿಗೂ ಮಾತನಾಡದಷ್ಟು ಕುಸಿದು ಕುಳಿತು ಬಿಟ್ಟೆ.

ನನಗರಿವಿಲ್ಲದೇ ಒದ್ದೆಯಾದ ಕಣ್ಣಿನಲ್ಲಿ ನನ್ನ ವೆಂಕಟೇಶನ ಬಿಂಬವೇ ಅಸ್ಪಷ್ಟವಾಗಿ ಕಂಡಂತಾಗುತ್ತಿತ್ತು. ಯಾಕೆ ಹೀಗೆ ಮಾಡಿಕೊಂಡ? ಅಂತ ಪ್ರಶ್ನೆ ಹಾಕಿಕೊಂಡರೂ ಆತ ಈ
ಜಂಜಾಟ ಬೇಡವೆಂದು ಎದ್ದು ಹೋದ ಕಾರಣ ನನಗೆ ಖಂಡಿತವಾಗಿ ಗೊತ್ತಿತ್ತು.

ಎರಡು ವಾರಗಳ ಹಿಂದೆ ನಾನು ನನ್ನೂರು ಹೊನ್ನಾವರದ ಕರ್ಕಿಕೋಡಿಗೆ ಹೋಗುತ್ತಿರುವಾಗ ಆತ ನನ್ನ ಮೊಬೈಲ್ ಗೆ ಕಾಲ್ ಮಾಡಿ ‘ದೋಸ್ತ ಎಲ್ಲಿದ್ದೆ?’ ಅಂತ ಕೇಳಿದ್ದ. ನಾನು ‘ಊರಿಗೆ ಹೋಗುತ್ತಿದ್ದೇನೆ’ ಅಂದಾಗ ‘ಸ್ವಲ್ಪ ಮಾತನಾಡುವುದಿತ್ತು’ ಅಂತ ಹೇಳಿ ಸೈಲೆಂಟ್ ಆದ.

‘ಆಯ್ತು ಊರಿಂದ ಬರುವಾಗ ನಿನಗೆ ಕಾಲ್ ಮಾಡ್ತೇನೆ. ಹೊನ್ನಾವರ ಕಾಮತ್ ಹೊಟೆಲ್ನಲ್ಲಿ ಭೇಟಿಯಾಗೋಣ’ ಅಂತ ಹೇಳಿ ನಾನು ಕರ್ಕಿಕೋಡಿಯತ್ತ ಹೋದೆ. ಬರುವಾಗ
ವೆಂಕಟೇಶನಿಗೆ ಮತ್ತೆ ಕಾಲ್ ಮಾಡಿ ‘ಎಲ್ಲಿದ್ಯಾ ದೋಸ್ತ’ ಅಂದೆ. ಆತ ‘ಹೊನ್ನಾವರದಲ್ಲೇ
ಇದ್ದೇನೆ. ಇವತ್ತು ಮಾತನಾಡುವುದು ಬೇಡ. ಜೊತೆಗೆ ಯಾರೋ ಇದ್ದಾರೆ. ಇನ್ನೊಮ್ಮೆ
ನಿಮ್ಮ ಮನೆಗೇ ಬರುತ್ತೇನೆ’ ಅಂದ. ‘ಸರಿ’ ಎಂದು ನಾನು ಕುಮಟಾದತ್ತ ಸ್ಟೇರಿಂಗ್ ತಿರುಗಿಸಿದೆ.
ಇವಿಷ್ಟು ನನ್ನ ಮತ್ತು ಅವನ ನಡುವೆ ನಡೆದ ಕೊನೆಯ ಮಾತುಕತೆ. ಕೊನೆಯ ಬಾರಿ ನನ್ನ
ವೆಂಕಟೇಶನ ಧ್ವನಿ ಕೇಳಿದ್ದು ಆಗಲೇ. ಆತ ಯಾಕೆ ಈ ನಿರ್ಧಾರಕ್ಕೆ ಬಂದ ಎಂಬುದರ ಬಗ್ಗೆ
ನಾನಿಲ್ಲಿ ಚರ್ಚಿಸುವುದಿಲ್ಲ. ಆದರೆ ಆತನ ನಿರ್ಧಾರಕ್ಕೆ ಮಾತ್ರ ಯಾವತ್ತೂ ಕ್ಷಮೆಯೇ ಇಲ್ಲ.
ಹೆಂಡತಿ ಮತ್ತು ಮುದ್ದು ಮಗಳನ್ನು ಬಿಟ್ಟು ಹೋಗಲು ಹೇಗಾದರೂ ಅವನಿಗೆ ಮನಸ್ಸು
ಬಂತು? ಎಷ್ಟೊಂದು ಗಟ್ಟಿ ಮನಸ್ಸಿನಿಂದ ಈ ನಿರ್ಧಾರಕ್ಕೆ ಬಂದಿರಲಿಕ್ಕಿಲ್ಲ? ಮಧ್ಯರಾತ್ರಿ
ಮನೆಯಲ್ಲಿ ನೇಣಿನ ಕುಣಿಕೆಗೆ ತಲೆ ಒಡ್ಡುವಾಗ ಏನೂ ಅರಿಯದೇ ಮಲಗಿದ ಹೆಂಡತಿ ಮತ್ತು
ಮಗಳ ಮುಖವನ್ನು ಎಷ್ಟು ಬಾರಿ ನೋಡಿ ಅತ್ತಿದ್ದನೋ?

2002ರ ಸುಮಾರಿಗೆ ನಾನು ‘ಪ್ರಜಾವಾಣಿ’ ವರದಿಗಾರನಿದ್ದಾಗ ಎಂ.ಜಿ.ನಾಯ್ಕ ‘ಕನ್ನಡ
ಜನಾಂತರಂಗ’, ಎಂ.ಜಿ.ಹೆಗಡೆ ‘ಇಂಡಿಯನ್ ಎಕ್ಸ ಪ್ರೆಸ್’ ..ಇನ್ನೂ ಕೆಲವು ಗೆಳೆಯರು
ಹೊನ್ನಾವರದಲ್ಲಿ ಪತ್ರಕರ್ತರು. ಈ ವೆಂಕಟೇಶ ಕೂಡ ತನ್ನ ಊರು ಮಂಕಿಯ ಸಣ್ಣಪುಟ್ಟ
ಸುದ್ದಿ, ಕೊಂಕಣ ಖಾರ್ವಿ ಸಮದಾಯದ ಶೃಂಗೇರಿ ಸ್ವಾಮಿಗಳ ಪಾದಪೂಜೆಯ ಸುದ್ದಿ,
ತಾನು ನಂಬಿದ ಕಲ್ಕಿ ಭಗವಾನ್ ಪೂಜೆಯ ಸುದ್ದಿ ಇಂಥವನ್ನೆಲ್ಲ ತಂದುಕೊಡುತ್ತಿದ್ದ.
ಕೊನಗೆ ಆತನೂ ‘ಕನ್ನಡ ಜನಾಂತರಂಗ’, ‘ಸಂಯುಕ್ತ ಕರ್ನಾಟಕ’ ಇನ್ನಿತರ ಕೆಲ ಪತ್ರಿಕೆಗಳಿಗೆ
ವರದಿಗಾರನಾಗಿದ್ದ. ಕೊನೆಗೊಂದು ದಿನ ಆತ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ
ಸದಸ್ಯನಾಗಿಯೂ ನೇಮಕ ಆದ. ಆ ಜವಾಬ್ದಾರಿಯನ್ನು ತುಂಬ ಅಚ್ಚುಕಟ್ಟಾಗಿ
ನಿಭಾಯಿಸಿದ್ದ.
ನನಗೆ ಆತ ಪತ್ರಕರ್ತ ಅನ್ನುವುದಕ್ಕಿಂತ ಒಬ್ಬ ಉತ್ತಮ ಫೋಟೋಗ್ರಾಫರ್ ಮತ್ತು
ವಿಡಿಯೋಗ್ರಾಫರ್ ಎಂದು ಹೇಳಿಕೊಳ್ಳಲು ತುಂಬ ಹೆಮ್ಮೆಯಿದೆ. ಅವನು ಕ್ಲಿಕ್ ಮಾಡಿದ
ಎಷ್ಟೋ ಫೊಟೋಗಳು ಆ ದಿನಗಳಲ್ಲಿ ಪ್ರಜಾವಾಣಿಯ ಮುಖಪುಟದಲ್ಲಿ ಅವನ

ಹೆಸರಿನೊಂದಿಗೆ ಪ್ರಕಟವಾಗಿತ್ತು. ಒಂಚೂರೂ ಅಹಂಕಾರ, ದುಶ್ಚಟವಿಲ್ಲದ ಹುಡುಗ ಆತ.
ಯಾವತ್ತೂ ಹತ್ತೆಂಟು ಸಂಘಟನೆಗಳ ಕಾರ್ಯಕ್ರಮಗಳ ಸಿದ್ಧತೆಯ ಬಗ್ಗೇ ತಲೆಯಲ್ಲಿ
ತುಂಬಿಕೊಂಡಿರುತ್ತಿದ್ದ.

ನಾನೀಗ ನನ್ನ ಮತ್ತು ಅವನ ಬದುಕಿನ ಮುಖ್ಯ ಘಟನೆಯೊಂದನ್ನು ಹೇಳಬೇಕು. ನಾನು
2002 ರಲ್ಲಿ ನನ್ನ ಕನಸಿನ ‘ಹಣತೆ’ ಸಾಹಿತ್ಯಕ ಸಾಂಸ್ಕೃತಿಕ ಜಗಲಿಯನ್ನು ಹುಟ್ಟು
ಹಾಕಿದ್ದೆ. ಆಗ ಜೊತೆಗಿದ್ದವ ಇದೇ ನಗು ಮುಖದ ವೆಂಕಟೇಶ. ಆ ಸಂಘಟನೆಯನ್ನು
ಆರಂಭಿಸುವಾಗ ಯಾಕೋ ಇವನನ್ನೂ ಜೊತೆಗೆ ಇಟ್ಟುಕೊಳ್ಳೋಣ ಅನಿಸಿತು. ಯಾಕೆಂದರೆ
ನಾನು ಅವನನ್ನು ಅಷ್ಟು ಪ್ರೀತಿಸುತ್ತಿದ್ದೆ. ‘ಹಣತೆ’ ಹಚ್ಚಲು ಬಾ ಅಂದೆ. ಆತ ಬಂದ.
ಮೊದಲು ನಾನು ಅಧ್ಯಕ್ಷ , ಆತ ಕಾರ್ಯದರ್ಶಿ ಅಂತ ನೆಪಕ್ಕೆ ಹುದ್ದೆ ಇಟ್ಟುಕೊಂಡೆವು.
ಉದ್ಘಾಟನೆಯ ಚಿಕ್ಕ ಆಮಂತ್ರಣ ಪತ್ರಿಕೆ ಅಚ್ಚಿಗೆ ಹೋಗುವಾಗ ಏರುಪೇರು ಬೇಡ ಅಂತ,
ಆತ ನನಗೆ ಸರಿಸಮಾನಾಗಿಯೇ ಇರಬೇಕು ಅಂತಲೂ, ಇಬ್ಬರೂ ಸಂಚಾಲಕರಾಗಿಯೇ
ಇರಬೇಕು ಅಂತಲೂ ‘ಸಂಚಾಲಕ’ ಪದದ ಕೆಳಗೆ ನನ್ನ ಹೆಸರು, ನನ್ನ ಕೆಳಗೆ ಅವನ ಹೆಸರು
ಇರುವಂತೆ ಮಾಡಿಕೊಂಡೆ . ಇನ್ನೇನು ಆಮಂತ್ರಣ ಮುದ್ರಣ ಆಗುತ್ತದೆ ಅನ್ನುವಾಗ, ಮತ್ತೆ
ಬದಲಾಯಿಸಿ ‘ಸಂಚಾಲಕ’ ಪದದ ಕೆಳಗೆ ಎಡಬಲಕ್ಕೆ, ಅಕ್ಕಪಕ್ಕದಲ್ಲೇ ನಮ್ಮಿಬ್ಬರ ಹೆಸರು
ಬರುವಂತೆ ಮುದ್ರಿಸಿದೆ.

ಹೊನ್ನಾವರದ ಶರಾವತಿ ದಡದ ಹೊಯಿಗೆ ರಾಶಿಯಲ್ಲಿನ ಗಾಳಿಮರಗಳ ತಂಗಾಳಿಯಲ್ಲಿ
ಕಾರ್ಯಕ್ರಮ. ರಾತ್ರಿ ಹಗಲೆನ್ನದೇ ದುಡಿದ. ನಾವು ಅಲ್ಲಿಯೇ ಶಾಮಿಯಾನ ಹಾಕಿ ಒಂದಿಡೀ
ದಿನದ ಕಾರ್ಯಕ್ರಮ ಮಾಡಿದ್ದೆವು. ವಿ.ಗ.ನಾಯಕ ಉದ್ಘಾಟಿಸಿದ್ದರು. ಬಿ.ಟಿ.ಲಿಲಿತಾ
ನಾಯಕ್ , ಕಾ.ತ.ಚಿಕ್ಕಣ್ಣ. ಅಬ್ದುಲ್ ರಶೀದ್, ಬಿ.ಗಣಪತಿ, ಜಿ.ಪಿ.ಬಸವರಾಜು, ವಿವೇಕ್
ಶಾನಭಾಗ್ ಇನ್ನೂ ಅನೇಕ ಹಿರಿಯರು ‘ಹಣತೆ’ ಬೆಳಗಲು ಬಂದಿದ್ದರು.

ಸಂಘಟನೆಯಲ್ಲಿ ವೆಂಕಟೇಶನ ವಿಶ್ವರೂಪ ದರ್ಶನ ನಮಗೆಲ್ಲ ಆಗಿತ್ತು. ಸಂಘಟನೆ ಅಂದರೆ
ಅದೊಂದು ಬದ್ಧತೆ ಅಂತ ಆತ ಮನಗಂಡಿದ್ದ. ಆಗ ‘ಹಣತೆ’ ಬೆನ್ನಿಗೆ ನಿಂತವರು
ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ನಾಗರಾಜ ಹೆಗಡೆ ಅಪಗಾಲ, ಸಂದೀಪ ನಾಯಕ,
ಆರ್.ಕೆ.ಬಾಲಚಂದ್ರ, ವಿಜಯಕುಮಾರ ಮುಂತಾದ ಗೆಳೆಯರು.

ಒಮ್ಮೆ ಯು.ಆರ್.ಅನಂತಮೂರ್ತಿ ಅವರು ಹೊನ್ನಾವರದಲ್ಲಿ ನಮ್ಮ ಜಗಲಿಗೆ ಬಂದಾಗಲೂ
ವೆಂಕಟೇಶ್ ಅವರ ಗಮನ ಸೆಳೆದಿದ್ದ. ಪಾದರಸದಂಥ ಅವನ ವ್ಯಕ್ತಿತ್ವ ಎಂಥವರೂ ಅವನೆಡೆಗೆ
ಗಮನಕೊಡುತ್ತಿದ್ದರು. ಹತ್ತು ವರ್ಷಗಳ ನಂತರ ನಾನು ಬೆಂಗಳೂರಿನಲ್ಲಿ ‘ಹಣತೆ’ ದೀಪಾವಳಿ
ವಿಶೇಷಾಂಕಕ್ಕಾಗಿ ಯು.ಆರ್. ಅನಂತಮೂರ್ತಿ ಸಂದರ್ಶನ ಮಾಡಲು ಅವರ ಮನೆಗೆ
ಹೋದಾಗಲೂ ವೆಂಕಟೇಶನನ್ನು ನೆನಪಿನಿಂದ ವಿಚಾರಿಸಿದ್ದರು. ವೆಂಕಟೇಶ್ ವ್ಯಕ್ತಿತ್ವ
ಅಂಥದ್ದು.

ಒಮ್ಮೆ ನಾವೆಲ್ಲ ಪತ್ರಕರ್ತ ಗೆಳೆಯರು ಸಮುದ್ರದ ನಡುಗಡ್ಡೆ ನೇತ್ರಾಣಿ ಗುಡ್ಡಕ್ಕೆ
ಪ್ರವಾಸಕ್ಕೆಂದು ಹೊರಟಿದ್ದೆವು. ಆಗಲೂ ಇದೇ ವೆಂಕಟೇಶನೇ ನಮಗೆ ದಾರಿ ತೋರಿಸುವ
‘ತಾಂಡೇಲ’. ಅವನೇ ಮಂಕಿ ಸಮುದ್ರ ತೀರಕ್ಕೆ ಒಂದು ಚಿಕ್ಕ ಬೋಟ್ ತರಿಸಿ ನಮ್ಮನ್ನೆಲ್ಲ
ಅದರಲ್ಲಿ ತುಂಬಿದ. ಸಮುದ್ರದ ಮಧ್ಯದಲ್ಲಿ ಹೋದಂತೆ ನಮಗೆಲ್ಲ ಕೊಂಚ
ಭಯವಾಗತೊಡಗಿತು. ಎಂ.ಜಿ.ನಾಯ್ಕ ತಲೆ ತಿರುಗುತ್ತದೆ ಅಂದರೆ, ಎಂ.ಜಿ.ಹೆಗಡೆ ವಾಂತಿ
ಮಾಡಿಕೊಂಡ. ಮನೆಯಲ್ಲಿ ಹೇಳದೇ ನೇತ್ರಾಣಿ ಗುಡ್ಡಕ್ಕೆ ಹೊರಟ ನನಗೂ ಒಳಗೊಳಗೇ
ಪುಕಪುಕ. ಆಗೆಲ್ಲ ನಮ್ಮ ದೇಖರೇಕಿ ನೋಡುತ್ತ, ಧೈರ್ಯು ತುಂಬುತ್ತ ನೇತ್ರಾಣಿ ಗುಡ್ಡಕ್ಕೆ
ಕರೆದುಕೊಂಡು ಹೋಗಿದ್ದ. ನೇತ್ರಾಣಿ ಗುಡ್ಡಕ್ಕೆ ಪ್ರವಾಸಕ್ಕೆ ಹೋಗಿ ಬಂದ ನಂತರ
ಎಂ.ಜಿ.ನಾಯ್ಕ ‘ಪ್ರಜಾವಾಣಿ’ ಕರ್ನಾಟಕ ದರ್ಶನದ ಮಖಪುಟಕ್ಕೆ ಫೋಟೋ ಸಹಿತ ಒಂದು
ಲೇಖನವನ್ನು ಬರೆದ. ಅದರಲ್ಲಿ ವೆಂಕಟೇಶ ಮೇಸ್ತ ಪದೇ ಪದೇ ಪ್ರಸ್ತಾಪ ಆಗುತ್ತಾನೆ.
ಅವನೇ ಕ್ಲಿಕ್ ಮಾಡಿದ ಫೋಟೊ ಅಲ್ಲಿ ಪ್ರಕಟವಾಗಿದೆ. ಆ ಪತ್ರಿಕೆಯ ಹಳೆಯ
ತುಣುಕೊಂದನ್ನು ಈ ಅಂಕಣದದಲ್ಲಿ ಬಳಸಿದ್ದೇನೆ. ಗಮನಿಸಿ.

. ‘ಹಣತೆ ವಾಹಿನಿ’ಯ ಆರಂಭದಲ್ಲಿ ಅಂದರೆ ಕಳೆದ ಆರು ಸಂಚಿಕೆಯ ಹಿಂದೆ ಮೊದಲ
ಸಂಚಿಕೆಯ ‘ನದಿ’ ಅಂಕಣದಲ್ಲಿ ನಾನು ವೆಂಕಟೇಶ ಮೇಸ್ತನ ಬಗ್ಗೆ ಪ್ರಸ್ತಾಪಿಸಿದ್ದನ್ನು ನೀವು
ಓದಿರಬಹುದು. ಅದಾದ ಆರೇ ವಾರದಲ್ಲಿ ಆತನನ್ನು ಈ ರೀತಿಯಾಗಿ ನೆನಪು
ಮಾಡಿಕೊಳ್ಳುತ್ತೇನೆ ಅಂತ ಊಹಿಸಲೂ ಸಾಧ್ಯವಿರಲಿಲ್ಲ.

ಹೇಳುತ್ತ ಹೋದರೆ ಅವನೊಂದಿಗಿನ ಪ್ರಯಾಣ ತುಂಬ ಇದೆ. ಹೆಜ್ಜೆ ಹೆಜ್ಜೆಗೂ ಆತನ
ನೆನಪಾಗುತ್ತಾನೆ. ಇನ್ನು ಯಾವತ್ತೂ ನೋಡಲು ಸಿಗದ ಗೆಳೆಯ ವೆಂಕಟೇಶ ನನ್ನ
ನೆನಪಿನಾಳದಲ್ಲಿ ಶಾಶ್ವತವಾಗಿರುತ್ತಾನೆ. ನಾನು ಬದುಕಿರುವವರೆಗೆ ಆತ ನನ್ನೊಳಗೆ ಜೀವಂತ
ಇರುತ್ತಾನೆ.

One thought on “ನನ್ನ ದೋಸ್ತ ವೇಂಕಟೇಶ ಮೇಸ್ತ ಮರೆಯಾಗಿಬಿಟ್ಟ…

  1. ಮೇಸ್ತ್ರಿ ಅವರ ಮರಣದ ಸುದ್ದಿ ತಿಳಿದು ಬೇಸರವಾಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನನ್ನು ಪ್ರಾರ್ಥಿಸುತ್ತೇನೆ.

Leave a Reply

Your email address will not be published. Required fields are marked *