ಚುನಾವಣೆ ಸುಧಾರಣೆ ಬೇಗ ಚಲಾವಣೆಗೆ ಬರಲಿ…

ಲೋಕಸಭಾ ಚುನಾವಣೆಗೆ ಇನ್ನೇನು ನಾಲ್ಕೈದು ತಿಂಗಳುಗಳಷ್ಟೇ ಬಾಕಿ ಇದೆ. ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥೀಗಳ ಹುಡುಕಾಟದ ಅವಸರದಲ್ಲಿವೆ. ಆಕಾಂಕ್ಷಿಗಳು ತೆರೆಮರೆಯಲ್ಲಿ ವಿವಿಧ ಪಕ್ಷಗಳಿಂದ ಟಿಕೆಟ್ ಗಿಟ್ಟಿಸಲು ಕಸರತ್ತು ಆರಂಭಿಸಿವೆ.

ಆದರೆ ಪಾರ್ಲಿಮೆಂಟ್ ಗೆ ನುಗ್ಗಲು ಹಲವು ಕ್ರಿಮಿನಲ್ ಹಿನ್ನೆಲೆಯ ಆಕಾಂಕ್ಷಿಗಳೂ ಸ್ಪರ್ಧೆಯಲ್ಲಿ ಇರುವುದುನ್ನು ಮಾಧ್ಯಮಗಳು ವರದಿ ಮಾಡುತ್ತಲೇ ಇವೆ. ಕೊನೆಗೆ ಏನೇನೋ ಸಬೂಬುಹೇಳಿ, ಕಾನೂನಿನ ಎಲ್ಲ ಕುಣಿಕೆ ತಪ್ಪಿಸಿಕೊಂಡು ಚುನಾವಣೆಗೆ ಸ್ಪರ್ಧಿಸಿ ಬಿಡಬಹುದಾದ ಅಪಾಯ ಇದ್ದೇ ಇದೆ.

ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳ ರಾಜಕೀಯ ಪ್ರವೇಶಕ್ಕೆ ತಡೆಯೊಡ್ಡುವ ಅಗತ್ಯದ ಕುರಿತು ಹಲವು ವರ್ಷಗಳಿಂದಲೂ ಚರ್ಚೆ ನಡೆಯುತ್ತಿದೆ. ಆದರೂ ಇಂಥ ವ್ಯಕ್ತಿಗಳ ಸ್ಪರ್ಧೆ ಚುನಾವಣೆಯಿಂದ ಚುನಾವಣೆಗೆ ಹೆಚ್ಚುತ್ತಿರುವುದು ವಿಪರ್ಯಾಸವೇ ಸರಿ. ಇದರಲ್ಲಿ ಎಲ್ಲ ರಾಜಕೀಯ ಪಕ್ಷಗಳ ಆಕಾಂಕ್ಷಿಗಳೂ ಇರುವುದನ್ನು ಗಮನಿಸಿದರೆ ಅಪರಾಧಿಗಳಿಗೆ ಮಣೆ ಹಾಕುವುದರಲ್ಲಿ ಯಾವ ಪಕ್ಷಗಳೂ ಹಿಂದೆ ಬಿದ್ದಿಲ್ಲ ಎಂಬುದು ಸ್ಪಷ್ಟ. ಅಭ್ಯರ್ಥಿಗಳ ಅಪರಾಧ ಹಿನ್ನೆಲೆ, ವಿದ್ಯಾರ್ಹತೆ, ಹಣಕಾಸು ಸ್ಥಿತಿ ಮತ್ತಿತರ ಅಂಶಗಳನ್ನು ವಿಶ್ಲೆಷಣೆ ಮಾಡಿ
‘ಅಸೋಸಿಯೇಷನ್ ಫಾರ್ ಡ್ರೆಮಾಕ್ರಟಿಕ್ ರಿಫಾರ್ಸ್ (ಎಡಿಆರ್) ವರದಿ ಬಿಡುಗಡೆ ಮಾಡಿದೆ. ನಮ್ಮ ಸಂಸತ್ತು ಹಾಗೂ ಶಾಸನ ಸಭೆಗಳಲ್ಲಿ ಮೂರನೇ ಒಂದರಷ್ಟು ಸಂಸದರು ಹಾಗೂ ಶಾಸಕರು ಅಪರಾಧ ಹಿನ್ನೆಲೆಯವರಿದ್ದಾರೆ ಎಂದೂ ಅಂದಾಜಿಸಲಾಗಿದೆ.

ಚುನಾವಣೆ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಈಚೆಗೆ ಸುಪ್ರಿಂ ಕೋರ್ಟ್ ಸೂಚಿಸಿದೆ. ರಾಜಕಾರಣಿಗಳ ವಿರುದ್ಧದ ಕ್ರಮಿನಿಲ್ ಪ್ರಕರಣಗಳ ತ್ವರಿತ

ವಿಚಾರೆಣೆಗೆ ವಿಶೇಷ ಕೋರ್ಟ್ ತೆರೆದರೂ ಪ್ರಕರಣ ಇತ್ಯರ್ಥದ ವೇಗ ಸಮಾಧಾನಕರವಾಗಿಲ್ಲ. ಅಪರಾಧಿಗಳನ್ನು ರಾಜಕೀಯದಿಂದ ಮುಕ್ತಗೊಳಿಸಲು ಇಂಥ ಕೋರ್ಟ್ ನೆರವಾಗಬೇಕು ಎಂಬುದು ಈ ಪರಿಕಲ್ಪನೆಯ ಹಿಂದಿರುವ ಆಶಯ. ಪ್ರಕರಣಗಳ ತ್ವರಿತ ಇತ್ಯರ್ಥದ ಪ್ರಕ್ರಿಯೆಗೆ ಕರ್ನಾಟಕವೂ ಸೇರಿದಂತೆ ಇನ್ನೂ ಕೆಲವು ರಾಜ್ಯಗಳಲ್ಲಿ ಚಾಲನೆಯಲ್ಲಿದೆ. ಅಪರಾಧ ಪ್ರಕರಣಗಳಲ್ಲಿ ಎರಡು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಶಿಕ್ಷೆಗೆ ಒಳಗಾಗುವ
ಚುನಾಯಿತ ಪ್ರತಿನಿಧಿಗಳು ತಕ್ಷಣವೇ ಸದಸ್ಯತ್ವ ಕಳೆದುಕೊಳ್ಳುತ್ತಾರೆ. ಸುಪ್ರಿಂ ಕೋರ್ಟ್ ಈ ಸಂಬಂಧ ಮಹತ್ವದ ತೀರ್ಪು ನೀಡಿದೆ. ಅಲ್ಲದೇ ಇಂಥ ಅಪರಾಧಿಗಳು ಕನಿಷ್ಟ ಆರು ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಆದರೆ, ಇಂಥವರ ಸ್ಪರ್ಧೆಗೆ ಶಾಶ್ವತವಾಗಿ ನಿಷೇಧ ಹೇರುವಂತೆ ಚುನಾವಣಾ ಆಯೋಗವೂ ಹೇಳಿದೆ. ಇದಕ್ಕೆ ಸಕರಾತ್ಮಕ ಸ್ಪಂದನೆ ದೊರೆತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಚುನಾವಣೆಗಳು ದುಬಾರಿ ವ್ಯವಹಾರವಾಗಿವೆ. ಜನರ
ಮತ ಸೆಳೆಯಲು ಕೋಟಿಗಟ್ಟಳೆ ಹಣ ವ್ಯಯಿಸುವಷ್ಟು ಸ್ಪರ್ಧಾತ್ಮಕತೆ ರಾಜಕೀಯ ಪಕ್ಷಗಳ ನಡವೆ ಸೃಷ್ಟಿಯಾಗಿದೆ. ಹಣಬಲ ಹಾಗೂ ತೋಳ್ಬಲ ಇದ್ದವರು ಮಾತ್ರ ಚುನಾವಣೆಗೆ ಸ್ಪರ್ಧಿಸಬೇಕು ಎನ್ನುವಂಥ ಪರಿಸ್ಥಿತಿ ಎದುರಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶುದ್ಧ ಹಿನ್ನೆಲೆಯವರು, ಸುಶಿಕ್ಷಿತರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗುವಂಥ ಪರಿಸ್ಥಿತಿ ನಿರ್ಮಾಣವಾಗಬೇಕು. ರಾಜಕಾರಣವನ್ನು ಸ್ವಚ್ಛಗೊಳಿಸುವ ಕೈಂಕರ್ಯ ಬಿರುಸಾಗಬೇಕು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ, ಕೇಂದ್ರ ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಪ್ರಮುಖ ಪಾತ್ರ ವಹಿಸಬೇಕು. ಕಳಂಕಿತರಿಗೆ ಮತ ನೀಡದಿರುವಷ್ಟು ಜಾಗೃತಿಯನ್ನು ಮತದಾರರೂ ಪ್ರದರ್ಶಿಸಬೇಕು. ಇಲ್ಲವಾದರೆ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

Leave a Reply

Your email address will not be published. Required fields are marked *