ಹಾಕಿದ ಹುಲ್ಲು …. ಕಟ್ಟಿದ ಗೂಟ…

ಆನ್ ಲೈನ್ ನಲ್ಲಿ ಒಬ್ಬರ ಪ್ರವಚನವೊಂದನ್ನು ಕೇಳುತ್ತಾ ಇದ್ದೆ… ಪ್ರವಚನದ ವಿಷಯ ” ಒಂದು ವ್ಯವಹಾರ ಅಥವಾ ಹಲವು ವ್ಯವಹಾರಗಳನ್ನು ಹೊಂದಿ ಅದೆಷ್ಟೋ ಜನ ಜೀವನದಲ್ಲಿ ಯಶಸ್ವಿಯಾದವರು ಇದ್ದಾರೆ. ಆದರೆ, ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ ಇದ್ದು ಯಶಸ್ಸನ್ನು ಕಾಣಬಹುದೇ ? ” ಎಂಬ ಪ್ರಶ್ನೆಗೆ ಉತ್ತರ ವಾಗಿತ್ತು. ಪ್ರವಚನದ ಮದ್ಯೆ ಪ್ರೇಕ್ಷಕರೋರ್ವರು ತಮ್ಮ ವೃತ್ತಿ ಜೀವನದ ಕಹಿ ಅನುಭವವನ್ನು ಪ್ರವಚನಕಾರರ ಮುಂದೆ ಇರಿಸಿದ್ದು ಈ ಪ್ರಶ್ನೆ ಹುಟ್ಟಲು ಕಾರಣವಾಗಿತ್ತು.

ಆ ಪ್ರೇಕ್ಷಕರ ಪ್ರಕಾರ, ಅವರ ವೃತ್ತಿಜೀವನದಲ್ಲಿ ಹೊಸತನ ಇರಲಿಲ್ಲ… ಅದೇ ದಿನದ ಪುನರಾವೃತ್ತಿಗೊಳ್ಳುವ ಅಥವಾ ಒಂದೇ ರೀತಿಯದ್ದು ಎನಿಸುವ ಕೆಲಸ … ಹಿರಿಯ ಅಧಿಕಾರಿಗಳ ಬೈಗುಳ ಕೇಳುವುದು … ಕಿರಿಯ ಸಹಉದ್ಯೋಗಿಗಳಿಗೆ ಬೈಗುಳ ಕೊಡುವುದು… ದಿನೇ ದಿನೇ ಏರುವ ಖರ್ಚುಗಳು… ತಿಂಗಳ ಕೊನೆಯಲ್ಲಿ ಮೇಲಕ್ಕೇರದ ಸಂಬಳ… ಒಟ್ಟಿನಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿ ಸಾಕಲಾಗುತ್ತಿರುವ ಒಂದು ಹಸುವಿನಂತೆ ಎಂಬ ರೀತಿಯ ತಮ್ಮ ವೃತ್ತಿ ಜೀವನವನ್ನು ವಿವರಿಸಿದ್ದರು. ಇಂಥಹ ಜೀವನ ಇರುವಾಗ ಯಶಸ್ಸು ಅಥವಾ ಆರ್ಥಿಕ ಸುಸ್ಥಿತಿ ಎನ್ನುವುದು ಸಾಧ್ಯವೇ ಎಂಬ ಪ್ರಶ್ನೆಗೆ ಪ್ರವಚನಕಾರರು ಉತ್ತರ ಕೊಡಬೇಕಿತ್ತು.

ಪ್ರವಚನ ಕಾರರಿಂದ ಉತ್ತರ ಥಟ್ಟನೆ ಉತ್ತರ ಬಂದೆ ಬಿಟ್ಟಿತು.. ” ಹೌದು …. ಸಾಧ್ಯ… ” .

” ಹಾಗಿದ್ದರೆ ಹೇಗೆ… ? “

ಈ ಬಾರಿಯ ಈ ಪ್ರಶ್ನೆ ನೆರೆದ ಪ್ರೇಕ್ಷರೆಲ್ಲರದ್ದಾಗಿತ್ತು ಎಂದರೆ ತಪ್ಪಿರಲಿಲ್ಲ.. ಪ್ರವಚನಕಾರರಲ್ಲವೇ ? ಕಥೆಯ ಮೂಲಕವೇ ತಮ್ಮ ಮಾತನ್ನು ಶುರು ಮಾಡಿದ್ದರು… ” ತಮಿಳು ನಾಡಿನಲ್ಲಿ ಒಬ್ಬ ಸಾಧಾರಣ ಕುಟುಂಬದಲ್ಲಿ ಹುಟ್ಟಿದ ಒಬ್ಬ ಹುಡುಗ ತನ್ನ ಬುದ್ದಿ ಸಾಮರ್ಥ್ಯದಿಂದ ಒಂದು ದಿನ ಟೆಕ್ ಕಂಪನಿಯೊಂದರಲ್ಲಿ ಉದ್ಯೋಗ ಹೊಂದುತ್ತಾನೆ. ಆ ಕಂಪನಿ ಜಗತ್ತಿನ ಪ್ರಖ್ಯಾತ ಕಂಪೆನಿಯಾದ ಮೈಕ್ರೋಸಾಫ್ಟ್ ನ ಒಂದು ಉತ್ಪನ್ನವೊಂದಕ್ಕೆ ಅವಲಂಬಿತ ವಾಗಿ ಉಪಯೋಗ ಗೊಳ್ಳಬಹುದಾದ ಉಪ ಉತ್ಪನ್ನವೊಂದನ್ನು ಅಭಿವೃದ್ಧಿ ಗೊಳಿಸುತ್ತಿತ್ತು. ಈ ಅಭಿವೃದ್ಧಿ ತಂಡದ ಮುಂದಾಳತ್ವವನ್ನು ಈ ಹುಡುಗ ವಹಿಸುವಂತಾಗಿತ್ತು. ಈ ಹಂತದಲ್ಲಿ ಆ ಹುಡುಗ ಈ ಉಪ ಉತ್ಪನ್ನವನ್ನು ಪ್ರಮುಖ ಉತ್ಪನ್ನವಾಗಿ ಮಾರ್ಪಡಿಸುವ ಕನಸು ಕಾಣುತ್ತಾನೆ . ಅದಕ್ಕೆ ತಕ್ಕುದಾದ ತನ್ನ ಯೋಜನೆಗಳನ್ನು ಹಿರಿಯ ಅಧಿಕಾರಿಗಳ ಮುಂದೆ ಇಡುತ್ತಾನೆ. ಹಲವು ಕಾರಣಗಳನ್ನು ಮುಂದಿಕ್ಕಿದ ಹಿರಿಯ ಅಧಿಕಾರಿಗಳು ಈ ಯೋಜನೆಯನ್ನು ತಿರಸ್ಕರಿಸುತ್ತಾರೆ.

ಆದರೆ ಪಟ್ಟು ಬಿಡದ ಆ ಹುಡುಗ ಮುಂದೊಂದು ದಿನ ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತಂದು ತಾನು ಕೆಲಸ ಮಾಡುತ್ತಿದ್ದ ಕಂಪನಿಯನ್ನು ಜಗತ್ತಿನ Technology Giant ಎಂದು ಹೆಗ್ಗಳಿಕೆ ಹೊಂದಿದ ಕಂಪೆನಿಯನ್ನಾಗಿ ರೊಪಗೊಳಿಸುತ್ತಾನೆ. ಆ ಕಂಪನಿ ಯಾವುದು ಗೊತ್ತೇ ? ಗೂಗಲ್ … ಆ ಹುಡುಗ ಭಾರತದ ತಮಿಳು ನಾಡಿನ ಸುಂದರ್ ಪಿಚೈ … “

ಇಷ್ಟು ಹೇಳಿ ಪ್ರವಚನ ಕಾರರು ಒಂದು ಕ್ಷಣ ಮೌನವಹಿಸಿ ಪ್ರೇಕ್ಷಕರತ್ತ ನೋಡಿದರು. ” ಸುಂದರ್ ಅವರು ಮೈಕ್ರೋಸಾಫ್ಟ್ internet explorer ನೊಂದಿಗೆ ಕೆಲಸ ಮಾಡಬಹುದಾದ ಗೂಗಲ್ search bar ನ ಮೇಲೆ ಕೆಲಸ ಮಾಡುತ್ತಾ, google search ಎಂಜಿನ್ ಅನ್ನು ಅಭಿವೃದ್ಧಿ ಪಡಿಸಿ ಬಿಟ್ಟಿದ್ದರು. google ಇದು ಕೇವಲ search ಬಾರ್ ಆಗಿರದೆ ಪರಿಪೂರ್ಣ search engine ಎನಿಸಿಬಿಟ್ಟಿತ್ತು. Google ತನ್ನದೇ ಆದ Chrome ಹೆಸರಿನಲ್ಲಿ browser ಹೊಂದಿಬಿಟ್ಟಿತ್ತು . ಅತ್ಯುತ್ತಮ browser ಎನಿಸಿ ಮೈಕ್ರೋಸಾಫ್ಟ್ ನ internet exloprer ನ್ನು ಮೀರಿ ಬೆಳೆದು ನಿಂತಿತ್ತು… 2010 ರಲ್ಲಿ ಅತ್ಯುತ್ತಮ browser ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇವೆಲ್ಲದರ ರೂವಾರಿ ಸುಂದರ್ ಪಿಚೈ…! ಸುಂದರ್ ಪಿಚೈಯವರಿಗೆ facebook , Twitter ನಂತಹ ದೊಡ್ಡ ದೊಡ್ಡ ಕಂಪನಿಗಳು ದೊಡ್ಡ ದೊಡ್ಡ ಹುದ್ದೆಯ ಪ್ರಸ್ತಾಪವನ್ನು ಇಟ್ಟರೂ ಅವು ಯಾವುದಕ್ಕೂ ಒಪ್ಪದೇ google ಗಾಗಿಯೇ ಇಂದಿಗೂ ದುಡಿಯುತ್ತಿದ್ದಾರೆ. ಇದು ಯಶಸ್ಸಲ್ಲವೇ ? ” ಪ್ರವಚನಕಾರ ಮರು ಪ್ರಶ್ನೆಗೆ ಪ್ರೇಕ್ಷಕರು ಮೌನವಹಿಸಿದ್ದರು.

ಪ್ರವಚನ ಕಾರರು ಮುಂದುವರಿಸಿದ್ದರು ” ನಾವು ಒಂದು ಉದ್ಯೋಗ ಸಿಕ್ಕರೆ ಸಾಕು ಅದರಲ್ಲೂ ಒಂದು ಗವರ್ನಮೆಂಟ್ ಕೆಲಸ ಸಿಕ್ಕರೆ ಸಾಕು ಎಂದುಕೊಳ್ಳುತ್ತೇವೆ. ಸಿಕ್ಕಿದ ಮೇಲೆ ಜೀವನ ಹೋಗುತ್ತಿದೆ… ಇಷ್ಟಕ್ಕೆ ಸಾಕು… ಎಂಬ ನಿಲುವು ಹೊಂದಿ ಬಿಡುತ್ತೇವೆ… ಇಲ್ಲಿಯೇ ನಾವುಗಳು ಎಡವುವುದು.. ನಾವು ಕೆಲಸ ಮಾಡುವ ರಂಗದಲ್ಲಿ, ನಮಗೆ ಆಸಕ್ತಿಯಿದ್ದು , ಆ ರಂಗವನ್ನು ನಮ್ಮ ಸಾಮರ್ಥ್ಯವನ್ನು ಬಳಸಿ, ಅಭಿವೃದ್ಧಿ ಪಡಿಸುವ ಗೋಜಿಗೆ ಹೋಗುವುದೇ ಇಲ್ಲ.. ಇದಕ್ಕೆ ಬೇಕಾದ ನಮ್ಮ ಜ್ಞಾನ ಅಥವಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುವುದೇ ಇಲ್ಲ.. ಅಲ್ಲಿಗೆ ಜೀವನ ರಸಹೀನವಾಗಿ ಬಿಡುತ್ತದೆ. ನಾವು ಕೆಲಸ ಮಾಡುವ ರಂಗದಲ್ಲಿ ಅಥವಾ ವಾತಾವರಣದಲ್ಲಿ ಹಲವು ತೊಂದರೆ ಗಳು ಇರಬಹುದು… ಆದರೆ, ನಮ್ಮ ಸಾಮರ್ಥ್ಯದಿಂದ ನಾವು ಕೆಲಸ ಮಾಡುತ್ತಿರುವ ರಂಗ ಅಥವಾ ವಾತಾವರಣವು ನಮ್ಮನ್ನು ಆಳುವ ಬದಲು ಅದೇ ರಂಗ ಅಥವಾ ವಾತಾವರಣವು ನಮ್ಮ ಮೇಲೆ ಅವಲಂಬಿತ ವಾಗಬೇಕು ; ಈ ನಿಟ್ಟಿನಲ್ಲಿ ದಿನೇ ದಿನೇ ನಾವು ಅಭಿವೃದ್ಧಿ ಹೊಂದುತ್ತ ಇರಬೇಕಾಗುತ್ತದೆ.

ಊಟದಲ್ಲಿ ಉಪ್ಪಿನ ಕಾಯಿ ಆಗುವ ಬದಲು ಅಡಿಗೆಗೇ ಉಪ್ಪಿನ ಹಾಗೆ ಎನಿಸಿ…. ಏಕೆಂದರೆ ಆಗ ನಿಮಗೆ ಬೇಕಾದಷು ಹುಲ್ಲು ನಿಮ್ಮ ಮುಂದೆ ಇರುತ್ತದೆ… ಹಾಗೆ ನಿಮ್ಮನ್ನು ಕಟ್ಟಿ ಹಾಕಿರುವ ಗೂಟವೂ ನಿಮ್ಮ ಮಾತು ಕೇಳುತ್ತದೆ… ” ಎಂದು ಮಾತು ಮುಗಿಸಿದ್ದರು..

ಈ ಬಗ್ಗೆ ತಮ್ಮ ಅಭಿಪ್ರಾಯ ಏನು ? ತಿಳಿಯಬಹುದೇ…?

Leave a Reply

Your email address will not be published. Required fields are marked *