ಉತ್ತಮ ಮಾತುಗಾರರಾಗಲು ನಾವೇನು ಮಾಡಬಹುದು

ಹಿಂದಿನ ವಾರ ಮಾತು ವ್ಯಕ್ತಿ ವ್ಯಕ್ತಿಗಳ ಮಧ್ಯೆ ಸ್ನೇಹವನ್ನು ಬೆಳೆಸುವಲ್ಲಿ, ಸಂಬಂಧವನ್ನು
ಕೆಡಿಸುವಲ್ಲಿ ವ್ಯಕ್ತಿಗಳ ನಡುವೆ ಸರಸವನ್ನು ಸೃಷ್ಟಿಸುವಲ್ಲಿ ಹಾಗೂ ವಿರಸವನ್ನು ಮೂಡಿಸುವಲ್ಲಿ
ಪ್ರಮುಖ ಪಾತ್ರವಹಿಸಬಲ್ಲುದು.ಹಾಗೂ ನಮ್ಮ ಮಾತಿನ ಶೈಲಿಯಿಂದ ಬಲು ದೊಡ್ಡದಾದ
ಸಂಘಟನೆಯನ್ನು ಯಶಸ್ವಿಯಾಗಿ ನಿರ್ಮಿಸಿದರೆ, ಅಸಂಬದ್ಧ ಮಾತಿನಿಂದ ಅದೇ ಸಂಘಟನೆಯು

ಕ್ಷಣಾರ್ಧದಲ್ಲಿ ವಿಘಟಿಸಬಹುದು ಎಂಬುದನ್ನು ತಿಳಿದುಕೊಂಡಿದ್ದೇವೆ.. ಈ ವಾರ ಉತ್ತಮ ಮಾತುಗಾರ ರಾಗಬೇಕೆಂದರೆ ಯಾವ ವಿಚಾರಗಳನ್ನು ಗಮನದಲ್ಲಿಟ್ಟು ಕೊಳ್ಳಬೇಕು ಎಂಬುದನ್ನು ಗಮನಿಸೋಣ: ಕೆಲವೊಮ್ಮೆ ಮೌನವೂ ಅತ್ಯುತ್ತಮ ಉತ್ತಮ ಸಂವಹನವಾಗಬಹುದಾಗಿದ್ದು, ಯಾವ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಬಾರದೋ ಅಲ್ಲಿ ಮೌನವಾಗಿರುವುದೇ ಲೇಸು. ಇದರಿಂದಾಗಿ ವಿನಾ ಕಾರಣ ಮೂರ್ಖರಾಗುವ ಹಾಗೂ ಮುಜುಗರದಿಂದ ತಪ್ಪಿಸಿಕೊಳ್ಳಬಹುದು.ಮುಖದ ಭಾವಕ್ಕೆ ಬಾಯಿ ಮಾತಿನ ಮೂಲಕ ಉತ್ತರ ನೀಡದೆಯೇ ಉತ್ತರಿಸುವ ಸಾಮರ್ಥ್ಯವಿದೆ.ಮಾತನಾಡುತ್ತಿರುವಾಗ ಎದುರಿ ರುವವರನ್ನು ನೋಡಿಕೊಂಡೇ ಮಾತನಾಡಬೇಕು.ಮಾತುಕತೆಯ ಸಂದರ್ಭದಲ್ಲಿ ಮುಖದಲ್ಲಿ ಎದುರಿನ ವ್ಯಕ್ತಿಯ ಕುರಿತಾದ ತಿರಸ್ಕಾರ, ಬೇಸರ, ಕೋಪದ ಚರ್ಯೆಗಳನ್ನು ತೋರಬಾರದು. ವ್ಯಕ್ತಿಯೊಬ್ಬರ ಅನುಪಸ್ಥಿತಿಯಲ್ಲಿ ಆ ವ್ಯಕ್ತಿಯ ಕುರಿತು ಚರ್ಚಿಸುವುದು ಯಾವುದೇ ವ್ಯಕ್ತಿಗೂ ಶೋಭೆಯನ್ನು ತರದು. ಮಾತಿನ ಸಂದರ್ಭದಲ್ಲಿ ಮುಖ ಚರ್ಯೆಯು ಆದಷ್ಟು ಪ್ರಸನ್ನತೆಯಿಂದ ಕೂಡಿರಲಿ, ಇದರಿಂದ ನಿಮ್ಮ ಮೇಲೆ ಎದುರಿನ ವ್ಯಕ್ತಿಗೆ ಶೀಘ್ರವಾಗಿ ಸದಭಿಪ್ರಾಯವುಮೂಡುವುದು ಹಾಗೂ ನಮ್ಮೊಂದಿಗೆ ಕೂಡಲೇ ಆತ್ಮೀಯವಾಗಿ ಬೆರೆಯುತ್ತಾರೆ.

ನಾವು ಆಡುವ ಮಾತಿನ ಧಾಟಿಯು ಹೊಸದಾದ ಸಂಬಂಧಗಳನ್ನು ಕುದುರಿಸುವಂತಿರಬೇಕು. ಯಾವುದೇ ಒಂದು ವಿಚಾರದ ಕುರಿತಾಗಿ ನಕಾರಾತ್ಮಕವಾದ ಪ್ರತಿಕ್ರಿಯೆಯನ್ನು ನೀಡುವ ಸಂದರ್ಭಗಳಿದ್ದರೂ ಅದನ್ನು ಸಮಾಧಾನವಾಗಿ ವ್ಯಕ್ತಿಗೆ ಅರ್ಥವಾಗುವಂತೆ ಮತ್ತು ಆತನ ಮನಸ್ಸಿಗೆ ನಾಟುವಂತೆ ತಿಳಿಸುವ ಕೌಶಲ್ಯವನ್ನು ಹೊಂದಿದರೆ ಅಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶವಿರುವುದಿಲ್ಲ. ಯಾವುದೇ ಒಬ್ಬ ವ್ಯಕ್ತಿ ಉತ್ತಮ ಕೆಲಸ ಅಥವಾ ಸಾಧನೆಯನ್ನು ಮಾಡಿದ್ದರೆ ಆ ಸಾಧನೆ ಯಾ ಕೆಲಸವನ್ನು ಎಲ್ಲರೆದುರು ಮುಕ್ತ ಕಂಠದಿಂದ ಹೊಗಳಿ, ಅಭಿನಂದಿಸಿ ಆದರೆ ವ್ಯಕ್ತಿಯೊಬ್ಬನ ತಪ್ಪನ್ನು ತಿದ್ದುವ ಕೆಲಸವನ್ನು ನೀವು ಮಾಡುವ ಸಂದರ್ಭ ಬಂದರೆ ಆ ವ್ಯಕ್ತಿಯನ್ನು ವೈಯಕ್ತಿಕವಾಗಿ ಏಕಾಂತದಲ್ಲಿ ಭೇಟಿಯಾಗಿ ಆ ವ್ಯಕ್ತಿಗೆ ತನ್ನ ತಪ್ಪನ್ನು ತಿದ್ದಲು ತಿಳಿಹೇಳುತ್ತಿದ್ದಾರೆಂದು ಮನಸ್ಸಿಗೆ ಅನಿಸುವಂತೆ ಹಾಗೂ ತನ್ನ ತಪ್ಪಿನ ಅರಿವಾಗುವಂತೆ ತಿದ್ದಬೇಕು. ಎಲ್ಲರೆದುರು ಒಬ್ಬರ ತಪ್ಪನ್ನು ಎತ್ತಿ ತೋರಿಸಿದರೆ ಅದು ವ್ಯಕ್ತಿಯ ವ್ಯಕ್ತಿತ್ವಕ್ಕೆ ಮಾಡುವ ಅವಮಾನವಾಗಿ ಸದುದ್ದೇಶವಿದ್ದರೂ ಇಬ್ಬರ ಮಧ್ಯೆ ಹೊಸ ವೈಷಮ್ಯಕ್ಕೆ ಕಾರಣವಾಗಬಹುದು. ನಮ್ಮಿಂದ ಹಿರಿಯರೊಂದಿಗೆ ನಾವು ಮಾತನಾಡುತ್ತಿದ್ದರೆ ಅಲ್ಲಿ ಗೌರವದ ಭಾವನೆ ಸಹಾಯಹಸ್ತ ಚಾಚುವ ಭಾವನೆಯಿರಲಿ. ಸಹೋದ್ಯೋಗಿಗಳೊಡನೆ ಮಾತನಾಡುವಾಗ ನಾನು ಮತ್ತು ನನ್ನದು ಎಂಬ ಅಹಂಭಾವವಿಲ್ಲದೆ ಎಲ್ಲರೊಳಗೆ ನಾನೊಬ್ಬ ಎಂಬ ಜೊತೆಗೂಡಿ ಕೆಲಸಮಾಡುವ ಬಾಧವ್ಯವನ್ನು ನಮ್ಮ ಮಾತು ಪ್ರದರ್ಶಿಸುವಂತಿರಲಿ. ಉತ್ತಮ ಮಾತುಗಾರ ತಾನು ಮಾತನಾಡುವಾಗ ಉಪಯೋಗಿಸುವ ಪದಗಳಿಗೆ ಹೆಚ್ಚಿನ ಪ್ರಾಶಸ್ತ್ರವನ್ನು ನೀಡಬೇಕು.

ಮಾತು ಮಾತಿಗೂ ಇನ್ನೊಬ್ಬರ ಋಣಾತ್ಮಕ ವಿಚಾರಗಳನ್ನೇ ಹೇಳುವುದಕ್ಕಿಂತ – ವ್ಯಕ್ತಿಯ ಉತ್ತಮ ಅಂಶಗಳನ್ನು ಗುರುತಿಸಿ ಅದರ ಕುರಿತಾಗಿ ಮಾತನಾಡುವುದು ಸಭ್ಯ ವ್ಯಕ್ತಿಯ ಲಕ್ಷಣ, ಇನ್ನೊಬ್ಬರ ಕುರಿತಾಗಿ ತೀರಾ ಲಘುವಾಗಿ ಮಾತನಾಡುವುದು,ಅವರ ಕುರಿತಾಗಿ ಹಾಸ್ಯವಾಡುತ್ತಾ ಅವಹೇಳನ ಮಾಡುವುದರಿಂದ ನಮ್ಮ ವ್ಯಕ್ತಿತ್ವ ಹಾಗೂ ನಮ್ಮ ಮಾತನ್ನೇ ಅಪವಿತ್ರವಾಗಿಸುವುದು ಎನ್ನುವುದನ್ನು ಮರೆಯಬಾರದು. ಇನ್ನೊಬ್ಬರ ಕುರಿತಾಗಿ ಎಂದೂ ಚಾಡಿ
ಹೇಳಬಾರದು, ಅದೇ ರೀತಿ ಇನ್ನೊಬ್ಬರು ಅಡುವ ಚಾಡಿ ಮಾತಿಗೆ ಕಿವಿಕೊಟ್ಟು ಅವಸರದ ತೀರ್ಮಾನವನ್ನು
ತೆಗೆದುಕೊಳ್ಳುವ ಹುಂಬತನವನ್ನು ಎಂದಿಗೂ ತೋರಬಾರದು, ನಮ್ಮೆದುರು ಯಾರ ಬಗ್ಗೆಯಾದರೂ ಯಾರಾದರೂ ದೂರು ಹೇಳಿದರೆ ಅಂತಹ ವ್ಯಕ್ತಿಗಳನ್ನು ಆದಷ್ಟು ದೂರವಿರಿಸುವುದಕ್ಕೂ ಹಿಂದೇಟು ಹಾಕಬಾರದು. ಸಂವಹನದಲ್ಲಿ ಉತ್ತಮ ಕೇಳುಗನಾಗುವುದೂ ಬಹಳ ಮುಖ್ಯವಾಗಿದ್ದು, ಇಲ್ಲಿ ಪರಿಪೂರ್ಣ ಆಲಿಸುವಿಕೆಯು ಪ್ರಬುದ್ಧ ಮಾನಸಿಕ ಸ್ಥಿತಿಯಾಗಬಲ್ಲುದಾಗಿದ್ದು, ಮಾತನ್ನು ಗಮನಿಸಿ ಕೇಳುವುದರಿಂದ ಅರ್ಧದಷ್ಟು ಜಗಳಗಳಿಗೆ ಆಸ್ಪದ ಇರುವುದಿಲ್ಲ, ಒಬ್ಬ ಉತ್ತಮ ಕೇಳುಗ ಒಬ್ಬ ಉತ್ತಮ ವಾಗ್ಮಿಯೇ (ಮಾತುಗಾರ) ಆಗಿರುತ್ತಾನೆ, ಆದರೆ ಉತ್ತಮ ಮಾತುಗಾರರೆಲ್ಲರೂ ಉತ್ತಮವಾದ ಕೇಳುಗರಾಗಿರಬೇಕೆಂದಿಲ್ಲ. ಮಾತನಾಡುವ ಸಂದರ್ಭದಲ್ಲಿ ಮಧ್ಯದಲ್ಲಿ ಪ್ರಶ್ನೆಗಳಿದ್ದಾಗ ಅರ್ಥಪೂರ್ಣ ಮಾತುಕತೆ ಸಾಧ್ಯ.

ಪರಿಪೂರ್ಣ ಕೇಳುಗನಾಗಬೇಕಾದರೆ ಮಾತನಾಡುವ ಸಂದರ್ಭದಲ್ಲಿ ಎದುರಿನ ವ್ಯಕ್ತಿಯ ಮೇಲೆಯೇ ದೃಷ್ಟಿ ನೆಟ್ಟಿರಬೇಕು.ಮಾತನಾಡುವ ಸಂದರ್ಭದಲ್ಲಿ ಎದುರಿನ ವ್ಯಕ್ತಿಯು ಕೇಳಿಸಿಕೊಳ್ಳುತ್ತಿದ್ದಾರೆಂಬ ದೃಢೀಕರಣವಿಬೇಕು ಮಾತಿನ ಮಧ್ಯೆ ತಲೆ ಅಲ್ಲಾಡಿಸುವುದು, ಮಾತುಗಳನ್ನು ಪುಷ್ಟಿಕರಿಸುವುದು, ಪೂರಕವಾದ ಪದಗಳನ್ನು ಜ್ಞಾಪಿಸುವುದನ್ನು ಮಾಡಬೇಕು. ಅಭಿಪ್ರಾಯ ಭೇದವಿದ್ದರೆ ಅದು ಕೇವಲ ನಿರ್ದಿಷ್ಟ ವಿಷಯಕ್ಕೆ ಮಾತ್ರ ಸಂಬಂಧಿಸಿದ್ದೆಂದೂ ಭಾವಿಸಿ, ಅದು ವ್ಯಕ್ತಿಯ ಸ್ನೇಹ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರದಂತೆ ಎಚ್ಚರದಿಂದಉತ್ತರಿಸುವುದು, ಮಾತನಾಡುವವರನ್ನು ಮಾತಿನ ಮಧ್ಯದಲ್ಲಿ ಅರ್ಧದಲ್ಲೇ ಎಂದೂ ತಡೆಯಬಾರದು. ಮಾತನ್ನು ಆಲಿಸುತ್ತಿರುವಾಗ ಪ್ರಮುಖವಾದ ಅಂಶಗಳನ್ನು ಬರೆದಿಟ್ಟುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು.ಮಾತನ್ನು ಕೇಳುತ್ತಿರುವಾಗ ಇತರ ಯಾವುದೇ ಯೋಚನೆಯನ್ನು ಮಾಡಬಾರದು.ಮುಂದಿನ ವಾರ ಇನ್ನಷ್ಟು ಉತ್ತಮ ಮಾತುಗಾರರಾಗಲು ನಾವೇನು ಮಾಡಬಹುದು ಎಂಬುದರ ಕುರಿತಾಗಿ ಮಾಹಿತಿಯನ್ನು ಪಡೆದುಕೊಳ್ಳೋಣ.

ಲೇಖಕರು :
ಆರ್.ಕೆ. ಬಾಲಚಂದ್ರ
ಬೆಂಗಳೂರು

Leave a Reply

Your email address will not be published. Required fields are marked *