ಕೆರೆಗಳ ಅಂಗಳದಲ್ಲಿ ಸರ್ವೇ ಕಲ್ಲು ಮಾಯ, ಇಟ್ಟಂಗಿ ಬಟ್ಟಿಗೆ ಉಪಾಯ

ಇಂದು ಹಳಿಯಾಳ, ದಾಂಡೇಲಿ, ಜೋಯಿಡಾ (ಸೂಪಾ) ತಾಲ್ಲೂಕಿನ ಕೆರೆಗಳ ಸ್ಥಿತಿ ಚಿಂತಾಜನಕವಾಗಿದೆ. ಒತ್ತುವರಿ, ಹೂಳು ತುಂಬುವಿಕೆ ನೀರು ಶೇಖರಣಾ ಸಾಮರ್ಥ್ಯವನ್ನು ಕುಂಠಿತಗೊಳಿಸಿದೆ. ಕೆರೆಗೆ ನೀರು ಹರಿದು ಬರುವಕಾಲುವೆಗಳು, ಏರಿ, ಕೋಡಿಗಳು ಶಿಥಿಲಾವಸ್ಥೆ ತಲುಪಿದೆ.

ಸರ್ಕಾರ ಮಾಡಬೇಕಾದ ಕೆಲಸವನ್ನು ಹಳಿಯಾಳ, ಜೋಯಿಡಾ ತಾಲ್ಲೂಕಿನಲ್ಲಿ ಮಾಜಿ ಸಚಿವ,  ಹಾಲಿ ಶಾಸಕ  ಆರ್.ವಿ.ದೇಶಪಾಂಡೆಯವರ ನೇತೃತ್ವದ ಸ್ವಯಂ ಸೇವಾ ಸಂಸ್ಥೆ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ  ವಿವಿಧ ಕಂಪೆನಿಗಳ ಹಾಗೂ ಕೆನರಾಬ್ಯಾಂಕ್ ರುಡಸೆಟ್ ಸಹಕಾರದಿಂದ ಕೆರೆಗಳ ಹೂಳೆತ್ತುವ ಕಾರ್ಯ ಮಾಡಿದ್ದಾರೆ. ಇದರಿಂದ ಈ ತಾಲ್ಲೂಕುಗಳ ಕೆಲವು ಕೆರೆಗಳ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಾಗಿದ್ದರಿಂದ ಅಂತರ್ಜಲ ಮಟ್ಟ ಕೂಡ ಸುಧಾರಿಸಿದೆ. ಇದರಿಂದ ರೈತರಿಗೆ ಹಾಗು ಜಾನುವಾರುಗಳಿಗೆ  ಅನುಕೂಲವಾಗಿದೆ. ರೈತರು ವಿ.ಆರ್.ಡಿ. ಟ್ರಸ್ಟಿನ ಕಾರ್ಯದಿಂದ  ಸಂತುಷ್ಠರಾಗಿದ್ದಾರೆನ್ನುವುದೇನೊ ನಿಜ. ಆದರೆ ಕೆರೆಗಳ ಅಂಗಳದ ಒತ್ತುವರಿ, ಏರಿ, ಕೋಡಿಗಳ ನಾಶಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವವರು ಯಾರೆನ್ನುವ  ಪ್ರಶ್ನೆ  ರೈತ ಸಮುದಾಯದ್ದಾಗಿದೆ.

ಈ ಮೂರು ತಾಲ್ಲೂಕುಗಳಲ್ಲೀಗ  ಕೆರೆಗಳ ಒತ್ತುವರಿ ಎಂಬುದು ಸಾಮಾನ್ಯವಾಗಿದೆ. ಬದು, ಸರ್ವೇ ಕಲ್ಲುಗಳ ನಾಶ ಮಾಡಿ ಅತಿಕ್ರಮಣ ಮಾಡಿ ಕಬ್ಬು, ಬತ್ತ, ಗೇರು ಬೇಸಾಯ ಮಾಡಿಕೊಂಡಿದ್ದಾರೆ. ಇಟ್ಟಂಗಿ ಭಟ್ಟಿಯಂಥ ವಾಣಿಜ್ಯ ಉದ್ದೇಶಲ್ಲೂ ಬಳಸಿಕೊಂಡಿದ್ದಾರೆ. ಇನ್ನೂ ಮತ್ತಿತರ ಸ್ವಾರ್ಥ ಹಿತಾಸಕ್ತಿಗೆ ಕೆರೆಗಳ ಗಾತ್ರ, ಪಾತ್ರ ಕಿರಿದಾಗುತ್ತ ಬಂದಿದೆ. ಇದಕ್ಕೊಂದು ಉತ್ತಮ ಉದಾಹರಣೆ ದಾಂಡೇಲಿ ತಾಲ್ಲೂಕಿನ ಬಡಾಕಾನಶಿರಡಾ, ಆಲೂರು ಗ್ರಾಮದ ಕೆರೆಯ ಅಂಗಳದ ಅಂತ್ಯವಿಲ್ಲದ ಅತಿಕ್ರಮಣ.  

ಕೆರೆಯ ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕೆರೆಗಳ ಸಮೀಕ್ಷೆ ಮಾಡಿ ಕೆರೆ ಪ್ರದೇಶದಲ್ಲಿ ಯಾವುದೇ ಒತ್ತುವರಿಯಾಗದಂತೆ ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಪ್ರಾಧಿಕಾರ ರಚಿಸುವ ಮೂಲಕ ಕೆರೆಯ ಸಂರಕ್ಷಣೆಯ ದೃಷ್ಟಿಯಿಂದ ಜಿಲ್ಲೆಯ 11 ತಾಲ್ಲೂಕಿನ 2118 ಕೆರೆಗಳ ಸಮೀಕ್ಷಾ ಕಾರ್ಯ ಕೈಗೊಂಡಿರುವ ಮಾಹಿತಿ ಇದೆ. ಕೆರೆಗಳನ್ನು ಗುರುತಿಸಿ ಸರ್ವೇ ಸೇರಿದಂತೆ ಕೆರೆಗಳ ಸಂರಕ್ಷಣೆ ಕಾರ್ಯವನ್ನು ಮಾಡಲು ಜಿಲ್ಲಾಡಳಿತ ಪ್ರಾಧಿಕಾರ ದಿಂದ ಹಲವು ಸಭೆಗಳನ್ನು ನಡೆಸಿದೆ. ಇದು ಪ್ರಾಧಿಕಾರದ ಸದಸ್ಯರ ಸಭೆಗೆ ಸೀಮಿತವಾಗದೆ ತಾಲ್ಲೂಕಾಡಳಿತದಿಂದ ಕ್ರಮ ಜರುಗಿಸುವಂತಾಗಬೇಕು. ಜನರು ಒತ್ತುವರಿಯಾಗಿರುವ ಕೆರೆಯನ್ನು ಸರ್ವೇ ನಡೆಸಿತೆರವುಗೊಳಿಸಿ ಕೆರೆಯ ಮೂಲ ಸ್ವರೂಪಕ್ಕೆ ತಂದು ರಕ್ಷಣೆ ಮಾಡಬೇಕು ಎನ್ನುವ ಮನವಿ ಮಾಡುತ್ತಾ ಬಂದಿದ್ದಾರೆ.

ಈಗ ಜಿಲ್ಲಾಪಂಚಾಯತಿಯಿಂದ ಗ್ರಾಮೀಣ ಪ್ರದೇಶದ ಕೆರೆಗಳನ್ನು ಗ್ರಾಮ ಪಂಚಾಯ್ತಿಗೆ ಹಸ್ತಾಂತರ  ಮಾಡಲಾಗಿದೆ. ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಗ್ರಾಮ ಪಂಚಾಯ್ತಿಗಳು ಕೆರೆ ಸಂರಕ್ಷಣೆ ಹಾಗೂ ಒತ್ತುವರಿ ತೆರವಿಗೆ ಪ್ರಾಧಿಕಾರದೊಂದಿಗೆ ಕೈ ಜೋಡಿಸಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಆಧಾರಿತ  ಜೀವನಾಧಾರದ ಕೇಂದ್ರಬಿಂದು ಕೆರೆಗಳೇ ಆಗಿದ್ದು, ಇದು ಸಮುದಾಯದ ಆಸ್ತಿಯಾಗಿದೆ ಎನ್ನುವದನ್ನು ಯಾರು ಮರೆಯುವಂತಿಲ್ಲ.

ಜನ ಕೈಜೋಡಿಸಿದರೆ ಮಾತ್ರ ಕೆರೆಯ ಉಳಿವು ಸಾಧ್ಯವೆಂದು ಹಿರಿಯರು ಹಿಂದಿನಿಂದ ಹೇಳಿಕೊಂಡು ಬಂದಿದ್ದಾರೆ. ಜನ ಸಮುದಾಯ ಯೋಚಿಸಿ ಕೆರೆಗಳ ಸಂರಕ್ಷಣೆಗೆ ಸಮುದಾಯ ಆಧಾರಿತ ಕೆರೆಗಳ ಪುನಶ್ಚೇತನ ಕಾರ್ಯಕ್ರಮದ  ಮೂಲಕ ಕೆರೆಯ ಪರಿಸರ ಉತ್ತಮ ಸ್ಥಿತಿಯಲ್ಲಿಡುತ್ತಿದ್ದರು.ಇಂದು ಗ್ರಾಮೀಣ ಪ್ರದೇಶದ ಕೆರೆ ಪರಿಸರ ಅವನತಿಯತ್ತ ಸಾಗಿದೆ. ಎಲ್ಲದಕ್ಕೂ ಸರ್ಕಾರದ ಹಣವನ್ನೆ ನಿರೀಕ್ಷಿಸುವ ಜಾಯಮಾನ ಜನರಲ್ಲಿ ಬೆಳೆದಿದೆ. ಕೆರೆ ಸಂರಕ್ಷಣೆಯ ಸರ್ಕಾರದ ಕೆಲಸ  ಎಂಬಂತಾಗಿದೆ.

ಲೇಖಕರು :
ಎನ್. ಜಯಚಂದ್ರನ್,
ದಾಂಡೇಲಿ

Leave a Reply

Your email address will not be published. Required fields are marked *