ಹಿಂದಿನವಾರ ಉತ್ತಮ ಮಾತುಗಾರ ರಾಗಬೇಕೆಂದರೆ ಯಾವ ವಿಚಾರಗಳನ್ನು ಗಮನದಲ್ಲಿಟ್ಟು ಕೊಳ್ಳಬೇಕು ಎಂಬುದನ್ನು ಗಮನಿಸಿದೆವು. ಕೆಲವೊಮ್ಮೆ ಮೌನವೂ ಅತ್ಯುತ್ತಮ ಉತ್ತಮ ಸಂವಹನವಾಗಬಹುದಾಗಿದ್ದು, ಯಾವ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಬಾರದೋ ಅಲ್ಲಿ ಮೌನವಾಗಿರುವುದೇ ಲೇಸು. ಇದರಿಂದಾಗಿ ವಿನಾ ಕಾರಣ ಮೂರ್ಖರಾಗುವ ಹಾಗೂ ಮುಜುಗರದಿಂದ ತಪ್ಪಿಸಿಕೊಳ್ಳಬಹುದು ಎಂಬುದನ್ನ ಅರಿತುಕೊಂಡೆವು.

ಇನ್ನಷ್ಟು ಉತ್ತಮ ಮಾತುಗಾರ ರಾಗಲು ನಾವು ಕೆಳಕಂಡ ಪ್ರಯತ್ನಗಳನ್ನು ಮಾಡಬಹುದು.ನಮ್ಮ ನಡವಳಿಕೆ ಹಾಗೂ ಮಾತಿನ ಶೈಲಿಯ ಕುರಿತು ಪ್ರತಿದಿನ ನಮ್ಮನ್ನು ನಾವೇ ವಿಮರ್ಶಿಸಿ ಕೊಳ್ಳಬೇಕು. ಪ್ರತಿದಿನ ಮಾತಿನಲ್ಲಿನ ನಮ್ಮ ನ್ಯೂನತೆಗಳನ್ನು ಅರಿತುಕೊಂಡು ಸರಿಪಡಿಸಿಕೊಳ್ಳಬೇಕು. ಪ್ರತೀ ಮಾತಿನ ಸಂದರ್ಭದಲ್ಲೂ ನಾನು ಹೇಳಿದ ವಿಚಾರ ತೀರಾ ಅವಶ್ಯಕ ಹಾಗೂ ಅನಿವಾರ್ಯವಾಗಿದ್ದು, ಇನ್ನೂಉತ್ತಮ ರೀತಿಯಲ್ಲಿ ಈ ವಿಷಯ ತಿಳಿಸಬಹುದಾಗಿತ್ತಾ ಎಂದು ವಿಶ್ಲೇಷಿಸಿಕೊಳ್ಳಬೇಕು. ನಾವಾಡಿದ ನಿರ್ದಿಷ್ಟ ಮಾತುಗಳಿಂದ ಒಂದು ಕುಟುಂಬಕ್ಕೆ (ಮನೆಯ ಸಂದರ್ಭವಾಗಿದ್ದರೆ) ಕಛೇರಿಗೆ, ಸಂಘಟನೆಗೆ ಉಂಟಾದ ಲಾಭ-ನಷ್ಟ,ಗಳಿಕೆ ಹಾನಿಯ ಕುರಿತು ವಿಶ್ಲೇಷಿಸಬಹುದು, ಮಾತಿನ ಮಧ್ಯೆ ನಮ್ಮ ಧ್ವನಿಯ ಕುರಿತು ಗಮನಿಸುವುದರಿಂದ ಏರಿಳಿತಗಳಲ್ಲಾಗುವ ಏಕತಾನತೆಯನ್ನು ತೊಡೆದು ಹಾಕಬಹುದು, ಮಾತುಗಾರ ಅರ್ಥವಾಗುವಂತಹ ಪದಗಳನ್ನು ಬಳಸಿ ಮಾತನಾಡುವುದರಿಂದ ಕೇಳುಗನಿಗೆ ಹತ್ತಿರವಾಗಬಲ್ಲ.ತನ್ನ ಮಾತಿನ ಮೇಲೆ ಮೊದಲಾಗಿ ಮಾತುಗಾರನಿಗೆ ನಂಬಿಕೆಯಿದ್ದರೆ ನಮ್ಮ ಮಾತನ್ನು ಇತರರೂ ಕೇಳುವರು. ನಾನು ಹೇಳಿದ ವಿಚಾರವನ್ನೇ ಇನ್ನೊಬ್ಬರು ನನ್ನ ಕುರಿತಾಗಿ ಹೇಳಿದಾಗ ನನ್ನ ಪ್ರತಿಕ್ರಿಯೆ ಹೇಗಿರಬಹುದೆಂಬ ಕನಿಷ್ಟ ಯೋಚನೆಯನ್ನೂ ಒಬ್ಬ ಸಂವಹನಕಾರ ಮಾಡಬೇಕು.

ಇಂದಿನ ದಿನದಲ್ಲಿ ವ್ಯಾವಹಾರಿಕ ಪ್ರಪಂಚದ ಸಂದರ್ಭಗಳಲ್ಲಿ ವ್ಯಕ್ತಿಯೊಬ್ಬನ ಸಂವಹನ ಸಾಮರ್ಥ್ಯವೇ ಹೆಚ್ಚು ಗಣನೆಗೆ ಬರುತ್ತಿದ್ದು, ಅಲ್ಲಿ ಸ್ಪಷ್ಟವಾದ ಮಾತುಗಾರಿಕೆ, ಗಹನವಾಗಿ ಕೇಳಿಸಿಕೊಳ್ಳುವಿಕೆ, ಸಹ್ಯವಾಗಬಹುದಾದ ಆಂಗಿಕ ಭಾಷೆ ಇವೆಲ್ಲವನ್ನೂ ಸೇರಿಸಿಕೊಂಡರೆ ಉಳಿದ ವ್ಯಕ್ತಿಗಳಿಗಿಂತ ಆತ ಸರ್ಧೆಯಲ್ಲಿ ಸದಾ ಉನ್ನತ ಸ್ಥಾನದಲ್ಲಿರಬಲ್ಲ. ಸ್ವಪ್ರಯತ್ನದಿಂದ ಸಂವಹನ ಜಾಣ್ನೆಯನ್ನು ವೃದ್ಧಿಸಿಕೊಳ್ಳಬಹುದಾಗಿದ್ದು, ಇದರಿಂದ ಉತ್ತಮ ಮಾತುಗಾರನು ಸಮಾಜದಲ್ಲಿ, ಕುಟುಂಬದಲ್ಲಿ, ವೃತ್ತಿ ಕ್ಷೇತ್ರದಲ್ಲಿ ಪ್ರಶಂಸೆಗೆ ಒಳಗಾಗುತ್ತಾನೆ. ಸಂವಹನ ಕ್ಷೇತ್ರದಲ್ಲಿ ಪ್ರತಿನಿತ್ಯವೂ ಕಲಿಯುವುದು ಮತ್ತು ಅಳವಡಿಸಿಕೊಳ್ಳುವುದು ಬಹಳಷ್ಟಿದ್ದು, ಯಾವ ವ್ಯಕ್ತಿ ಆಗಿಂದಾಗ್ಗೆ ತನ್ನ ಸ್ವಭಾವವನ್ನು ಸ್ವಯಂ ಪರಿಶೀಲನೆಗೆ ಒಳಪಡಿಸಿಕೊಳ್ಳುತ್ತಿರುತ್ತಾನೋ ಆತ ಮಾತನ್ನು ಗೆಲ್ಲಬಲ್ಲ ಮಾತನ್ನು ಗೆದ್ದವನು ಪ್ರಪಂಚವನ್ನೇ ಗೆಲ್ಲಬಲ್ಲ ಎನ್ನಬಹುದು.
ಸಾಮಾನ್ಯ ಸಂವಹನವನ್ನು ಹೊರತುಪಡಿಸಿ ನೋಡಿದಾಗ ನಮಗೆ ಪ್ರಪಂಚದ ಹಲವು ಆಶ್ಚರ್ಯಕರ ಆತೀಂದ್ರಿಯ ಸಂವಹನದ ಸ್ಯಾಂಪಲ್ ಗಳು, ಇಲ್ಲಿವೆ ಗಮನಿಸಿ, ಅವುಗಳಲ್ಲಿ ಮುಖ್ಯವಾದವುಗಳು:

ಅಲ್ಬಟ್ರೋಸಸ್ ತಾಯಿ (Albatrosses) ಪಕ್ಷಿಯು ಸಮುದ್ರದ ತೀರದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ಒಂದೇ ರೀತಿಯಲ್ಲಿ ಕಾಣುವ ಪಕ್ಷಿಗಳ ನಡುವೆ ದೂರದಿಂದ ಕೊಕ್ಕಿನಲ್ಲಿ ಸಂರಕ್ಷಿಸಿಕೊಂಡು ತಂದ ಆಹಾರವನ್ನು ಕ್ಷಣವೇ ನೇರವಾಗಿ ತನ್ನ ಮರಿಗಳ ಬಳಿಯೇ ಇಳಿದು ಅವುಗಳಿಗೆ ತಿನ್ನಿಸುತ್ತವೆ. ಇದೊಂದು ಅದ್ಭುತ ಸೋಜಿಗದ ಸಂವಹನವಲ್ಲವೇ?

ಅವಳಿ ಜವಳಿಯಾಗಿ ಜನಿಸಿದವರನ್ನು ತೆಗೆದುಕೊಂಡಾಗ ಅಪಘಾತದಲ್ಲಿ ಈರ್ವರಲ್ಲಿ ಒಬ್ಬರು ಪ್ರಪಂಚದ ಯಾವ ಮೂಲೆಯಲ್ಲಿ ಸಾವಿಗೀಡಾದರೂ ಇನ್ನೊಬ್ಬರಿಗೆ ತಕ್ಷಣ ಅರಿವಿಗೆ ಬರುತ್ತದಂತೆ.

ಸಾಲ್ಮನ್ (Salman) ಜಲಚರ ಸಣ್ಣ ನೀರಿನ ಝರಿಯಲ್ಲಿ ಜನಿಸಿದ್ದು, ಈಶಾನ್ಯ ಪೆಸಿಫಿಕ್‌ನ ಬಿಯಕೊಲಂ ನದಿಯ ಮುಖಾಂತರ ಸಾಗರಕ್ಕೆ ಸೇರುತ್ತದೆ. ಸಾಗರದ ವಿಶಾಲವಾದ ಸ್ಥಳಗಳಲ್ಲೆಲ್ಲಾ ಓಡಾಡಿಕೊಂಡು ಎಷ್ಟೋ ವರ್ಷಗಳ ನಂತರ ತಾನು ಜನಿಸಿದ ನೀರಿನ ಝರಿಯ ಸ್ಥಳಕ್ಕೇ ವಾಪಸ್ಸು ಬರುತ್ತದೆಯೇ ಹೊರತು ತಪ್ಪಾಗಿ ಇತರ ನೀರಿನ ಝರಿಗಳನ್ನು ಸೇರುವುದಿಲ್ಲ.ಆಫ್ರಿಕಾ ದೇಶದ ಕೆಲವು ಮರಗಳು ಮೈಲುಗಳಾಚೆ ಇರುವ ಇತರೆ ಮರಗಳಿಗೆ ತಮ್ಮನ್ನು ಭಕ್ಷಿಸಿ ವಿನಾಶ ಮಾಡುವ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಸೂಕ್ತ ಸಮಯಗಳಲ್ಲಿ ತಮ್ಮ ಎಲೆಗಳಲ್ಲಿ ಟ್ಯಾನಿನ್ (tannin) ಎಂಬ ರಾಸಾಯನಿಕದ ಉತ್ಪಾಧನೆಯನ್ನು ಹೆಚ್ಚಿಗೆ ಮಾಡುವ ಮುಖಾಂತರ ತಮ್ಮ ಎಲೆಗಳನ್ನು ತಿನ್ನಲು ಅನುಪಯೋಗಿಯಾಗುವಂತೆ ಪರಿವರ್ತಿಸಿಕೊಳ್ಳುತ್ತವೆ.

ಹಾರ್ಸ್ ಷೂ ಎಂಬ ಜಾತಿಯ ಏಡಿಗಳು, ವರ್ಷಕ್ಕೊಮ್ಮೆ ಹುಣ್ಣಿಮೆಯ ದಿನ ಸಹಸ್ರಾರು ಲಕ್ಷ ಸಂಖ್ಯೆಯಲ್ಲಿ ಸಂಗಾತಿಗಳ ಜೊತೆ ಬೆರೆಯಲು ಒಂದೇ ಸಮುದ್ರ ತೀರದಲ್ಲಿ ಸೇರುತ್ತವೆ. ಬೆಳಕಿನ ಕಿರಣ ತಲುಪದಂತಹ ದುರ್ಗಮ ಸಮುದ್ರದ ಆಳದಲ್ಲಿರುವ ಈ ಏಡಿಗಳ ಸಂವಹನ ನಿಖರತೆ ಇಂದಿಗೂ ಸಂವಹನಗಳಲ್ಲೊಂದು ಅದ್ಭುತ ಎನಿಸುತ್ತದೆ.
ಹಲವಾರು ದೇಶಗಳ ಚಿಕ್ಕ ಮಕ್ಕಳಿಗೆ ಜಪಾನಿ ಭಾಷೆಯಲ್ಲಿರುವುದನ್ನು ಓದಿ ಹೇಳಿ, ನಂತರ ಅವರನ್ನು ಅವರು ಕೇಳಿದ್ದು ಅರ್ಥವಿಹೀನ ಪದಪುಂಜಗಳ ಮಾಲೆಯೋ ಅಥವಾ ಒಂದು ಸುಂದರ ಕವಿತೆಯೋ ಎಂದು ಕೇಳಿದಾಗ, ಜಪಾನ್ ರಾಷ್ಟ್ರದ ಪ್ರತಿಶತಃ ನೂರರಷ್ಟು ಮಕ್ಕಳು ಸರಿಯಾದ ಉತ್ತರ ನೀಡಿದರಂತೆ. ಅಷ್ಟೇ ಅಲ್ಲ ಇತರ ರಾಷ್ಟ್ರಗಳ, ತಮ್ಮ ಜೀವನದಲ್ಲಿ ಜಪಾನಿ ಭಾಷೆಯನ್ನೇ ಕೇಳದ ಇತರೆ ಮಕ್ಕಳಲ್ಲಿ ಪ್ರತಿಶತಃ 50 ರಷ್ಟಕ್ಕೂ ಹೆಚ್ಚು ಮಕ್ಕಳು ಸರಿಯಾದ ಉತ್ತರವನ್ನು ನೀಡಿದರಂತೆ.
ಪ್ರಪಂಚದಲ್ಲಿರುವ ಹಲವಾರು ಅದ್ಭುತಗಳಂತೆ, ಸಂವಹನ ಶಾಸ್ತ್ರದಲ್ಲಿಯೂ ವಿಜ್ಞಾನದ ಪೂರ್ಣವ್ಯಾಪ್ತಿಗೆ ಇನ್ನೂ ಸ್ಪಷ್ಟ ಹಾಗೂ ನಿಖರವಾಗಿ ಹೇಳಬಲ್ಲಂತ ಪ್ರತಿಶತಃ ನೂರರ ಉತ್ತರಗಳನ್ನು ಹೇಳಲಾಗದ ವಿಶ್ವದ ವೈಶಿಷ್ಟ್ಯಗಳು ಮೇಲಿನಂತೆ ಕಂಡು ಬರುತ್ತವೆ.
ಮುಂದಿನ ವಾರ ಕೊನೆಯ ಸಂಚಿಕೆಯಾಗಿದ್ದು ಮಾತುಕತೆಯಲ್ಲಿ ಅಡಗಿರುವ ಸರಳಾರ್ಥ, ಆ ಕ್ಷಣದ ಮಾತುಗಳ ಸಾಮರ್ಥ್ಯದ ನಿರ್ಧಾರ ಆಗುವ ಬಗೆ ಹಾಗೂ ಆ ನಿರ್ಧಾರಗಳನ್ನು ಎಂದಿಗೂ ಸರಿ ತಪ್ಪು ಎಂದು ಕಾರಣಗಳ ಆಧಾರದ ಮೇಲೆ ವಿಶ್ಲೇಷಿಸುವುದರ ಹಿಂದಿರುವ ಕಷ್ಟ, ಅಂತಹ ನಿರ್ಧಾರಗಳಿಗೆ ಪೂರಕವಾದ ಪರ ವಿರೋಧದ ಸಂಗತಿಗಳು ನಮಗೆ ಆಧಾರವಾಗಿ ದೊರಕಬಹುದೆ? ಅದಕ್ಕೆ ಪೂರಕವಾಗಿ ನಾವೇನು ಮಾಡಬಹುದು ಎಂಬುದರ ಕುರಿತಾಗಿ ಮಾಹಿತಿಯನ್ನು ಪಡೆದುಕೊಳ್ಳೋಣ.

ಲೇಖಕರು :
ಆರ್.ಕೆ. ಬಾಲಚಂದ್ರ
ಬೆಂಗಳೂರು