ಬದುಕಲು ವಿಷ ತಿನ್ನಬೇಕು….

ಉದ್ಯಾನವನವೊಂದರಲ್ಲಿ ನಿಂತಿದ್ದೆ… ಅಲ್ಲಿಯ ಮರವೊಂದರಲ್ಲಿ ಹಕ್ಕಿಯೊಂದು ಆಚೆ ಈಚೆ ಹಾರಾಡುತ್ತ ತನ್ನ ಆಹಾರ ಹುಡುಕುತ್ತಿತ್ತು… ಅದರ ಚುರುಕು ಚಟುವಟಿಕೆ ನನಗೆ ತುಂಬಾ ಆಕರ್ಷಕ ಎನಿಸಿತು.

ತುಂಬಾ ಖುಷಿಯೆನಿಸುತ್ತಿತ್ತು… ಹಾಗೆಯೇ ನೋಡುತ್ತಲಿದ್ದೆ… ಅಷ್ಟಕ್ಕೇ ಧಿಡೀರನೆ ಮನದಲ್ಲೊಂದು ಪ್ರಶ್ನೆ ಹಾದುಹೋಯಿತು.

” ಈ ಪಕ್ಷಿ ಪ್ರಾಣಿಗಳನ್ನು ನೋಡಿದ ನಮಗೆ ಖುಷಿ ಕೊಡುತ್ತದೆ ನಿಜ… ಆದರೆ ನಮ್ಮನ್ನು ಅಂದರೆ ಮನುಷ್ಯರನ್ನು ನೋಡಿ ಅವುಗಳಿಗೆ ಖುಷಿ ಸಿಗುವುದೇ ? ಅಥವಾ …. ಕೇವಲ ಭಯ ಆತಂಕವೇ ? “

ಹೀಗೆ ಆಲೋಚನೆ ಬರುತ್ತಿದ್ದಂತೆ ನನ್ನ ಪ್ರಶ್ನೆಗೆ ಉತ್ತರವೆಂಬಂತೆಯೋ ಒಂದು ಆಕಳ ಕರುವೊಂದು ನನ್ನೆದುರಿನಿಂದ ಹಾದುಹೋಯಿತು. ನೋಡಲು ಮುದ್ದಾಗಿತ್ತು. ಆದರೆ ಅದರ ಹೊಟ್ಟೆಯ ಭಾಗದಲ್ಲಿ ದೊಡ್ಡದಾದ ಅಂದರೆ ಕಲ್ಲಂಗಡಿ ಹಣ್ಣಿನಷ್ಟು ದೊಡ್ಡದಾದ ಬಾವು ಇತ್ತು. ಆ ಆಕಳ ಕರುವು ಆ ಬಾವಿನ ಭಾರವನ್ನು ಹೊತ್ತು ನಡೆಯಲು ಶ್ರಮ ಪಡುತ್ತಿರುವುದು ಸ್ವಷ್ಟವಾಗಿ ತೋರುತ್ತಿತ್ತು. ಇದನ್ನು ನೋಡುತ್ತಿದ್ದ ನನ್ನ ಕಿವಿಯಲ್ಲಿ ಪಶುವೈದ್ಯರೊಬ್ಬರ ಮಾತುಗಳು ಮತ್ತೆ ಪ್ರತಿದ್ವನಿತ ವಾದಂತಿತ್ತು. ” ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಪ್ಲೇಟುಗಳು ಹೀಗೆ ಹಲವು ಜೀರ್ಣವಾಗದ ಪ್ಲಾಸ್ಟಿಕ್ ಸೇವನೆಯಿಂದ ಈ ರೀತಿಯ ಬಾವು ಹುಟ್ಟಿಕೊಳ್ಳುತ್ತದೆ ಮತ್ತು ಆಕಳ ಸಾವಿಗೆ ಕಾರಣವಾಗುತ್ತದೆ. ಇದಕ್ಕೆ ಚಿಕಿತ್ಸೆ ಇಲ್ಲ.. ಶಸ್ತ್ರ ಚಿಕಿತ್ಸೆ ಮಾಡಿಯೇ ಗುಣಪಡಿಸಬೇಕಾಗುತ್ತದೆ. ಆದರೆ ಶಸ್ತ್ರ ಚಿಕಿತ್ಸೆ ಮಾಡಿಸುವ ಗೋಜಿಗೆ ಯಾರು ಹೋಗುವುದಿಲ್ಲ…” ಎಂಬ ಮಾತುಗಳು. ಆ ಆಕಳ ಕರು ನಾನು ನೋಡುತ್ತಿದ್ದಂತೆಯೇ… ಅಲ್ಲಿಯೇ ಯಾರೋ ಪಾರ್ಟಿ ಮಾಡಿ ಬಿಸಾಡಿ ಹೋದ ಪ್ಲಾಸ್ಟಿಕ್ ಪೇಪರ್ ಪ್ಲೇಟ್ ಗಳನ್ನೂ ಜಗಿಯ ಹತ್ತಿತ್ತು.. ನಾನು ಅಂದು ನಿಂತಿದ್ದ ಉದ್ಯಾನದಲ್ಲಿ ಅದೆಷ್ಟೋ ಜನ ಪಾರ್ಟಿ ಮಾಡಿ ಪ್ಲಾಸ್ಟಿಕ್ ಚೀಲ , ತಟ್ಟೆ ಬಾಟಲಿ ಇತ್ಯಾದಿ ತ್ಯಾಜ್ಯವನ್ನು ಅಲ್ಲಿಯೇ ಬಿಸಾಡಿ ಹೋಗುವುದು ಸರ್ವೇ ಸಾಮಾನ್ಯವಾಗಿತ್ತು. ಪಾಪ … ಆ ಪ್ಲೇಟ್ ನಿಂದ ಬರುತ್ತಿದ್ದ ಅನ್ನದ ಪರಿಮಳಕ್ಕೆ ಕರು ಅದನ್ನು ತಿನ್ನುತ್ತಿತ್ತು. ಇಲ್ಲಿ ಮನುಷ್ಯ ಎನಿಸಿಕೊಂಡವ ತನ್ನ ಸ್ವಾರ್ಥ ಮುಗಿಸಿ ಹೋಗಿದ್ದು ಎದ್ದು ಕಾಣುತ್ತಿತ್ತು.

ಮನುಷ್ಯರೆನಿಸಿದ ನಮ್ಮಿಂದ ಈ ರೀತಿಯಲ್ಲಿ ತೊಂದರೆ ಅನುಭವಿಸುತ್ತಿರುವುದು ಕೇವಲ ಆಕಳುಗಳು ಅಲ್ಲ.. ತ್ಯಾಜ್ಯಗಳು ನದಿ ಸೇರುವುದರಿಂದ ನದಿಯ ಜೀವ ಜಗತ್ತು, ಸಮುದ್ರ ಸೇರುವುದರಿಂದ ಸಮುದ್ರದ ಜೀವ ಸಂಕುಲ, ಅದೂ ಅಲ್ಲದೆ ವನ್ಯಜೀವಿಗಳು, ಸಾಕು ಪ್ರಾಣಿಗಳು ಹೀಗೆ ಇಡೀ ಜೀವ ಸಂಕುಲ ತೊಂದರೆ ಅನುಭವಿಸುತ್ತಿದೆ… ಅದಕ್ಕೆ ಕಾರಣ ಮಾನವರೆನಿಸಿಕೊಳ್ಳುವ ಮಾನವರಾಗಿರುವ ನಾವುಗಳೇ…

ಹಾಗಾದರೆ ಮನುಷ್ಯರೆನಿಸಿದ ನಮ್ಮ ಈ ಸ್ವಾರ್ಥದಿಂದ ನಾವು ಉದ್ದಾರ ಆಗಿದ್ದೇವೆಯೇ ? ಖಂಡಿತ ಇಲ್ಲ.. ಸ್ವಾರ್ಥ ಆಹಾರ ಉತ್ಪಾದನೆಯ ಹೆಸರಿನಲ್ಲಿ ರಾಸಾಯನಿಕದ ಮೊರೆ ಹೋಗುತ್ತಿದ್ದೇವೆ… ಕೃಷಿಯ ಹೆಸರಿನಲ್ಲಿ ರಾಸಾಯನಿಕ ರಸಗೊಬ್ಬರಗಳ ಬಳಕೆ ಮಾಡುತ್ತೇವೆ.. ಇಂದಿನ ದಿನಗಳಲ್ಲಿ ಪಂಚಾಮೃತಗಳಲ್ಲಿ ಒಂದೆನಿಸಿದ ಸಕ್ಕರೆ ವಿಷವೆನಿಸಿದೆ ; ಏಕೆಂದರೆ ಸಕ್ಕರೆ ಅತಿಯಾಗಿ ಉತ್ಪಾದನೆ ಮಾಡುವ ತವಕದಲ್ಲಿ ಮಾನವ ರಾಸಾಯನಿಕಗಳ ಮೊರೆ ಹೋಗುತ್ತಾನೆ . ಅಮೃತಕ್ಕೆ ಸಮಾನ ಎನ್ನಲಾಗುತ್ತಿದ್ದ ಹಾಲನ್ನು ಸ್ವತಃ ವೈದ್ಯರೇ ಬಿಳಿ ವಿಷ ಎನ್ನುತ್ತಾರೆ ; ಏಕೆಂದರೆ ಆಕಳಿಗೆ ನೀಡುವ ಆಹಾರದಿಂದ ಪ್ರಾರಂಭಿಸಿ, ಹಾಲನ್ನು ಸಂಗ್ರಹಿಸಿ, ವಿತರಣೆ ಮಾಡುವ ವರೆಗೆ ಪ್ಲಾಸ್ಟಿಕ್ ಮತ್ತು ಕೆಲವು ರಾಸಾಯನಿಕಗಳನ್ನೇ ಅವಲಂಬಿಸಬೇಕಾಗುತ್ತದೆ.

ಈ ಎಲ್ಲ ಉತ್ಪಾದನೆ ಮತ್ತು ವಿತರಣೆಯ ಹಂತಗಳಲ್ಲಿ ಹುಟ್ಟಿಕೊಳ್ಳುವ ತ್ಯಾಜ್ಯವನ್ನು ನದಿ, ಸಮುದ್ರ ,ವನ – ಕಾಡು ಎನ್ನದೆ ಎಲ್ಲೆಂದರಲ್ಲಿ ಎಸೆದು, ಚೆಲ್ಲಿ ಮತ್ತೆ ಸ್ವಾರ್ಥ ಮೆರೆಯುತ್ತೇವೆ.. ರಸಗೊಬ್ಬರ ಬಳಕೆ, ಕ್ರಿಮಿನಾಶಕ ಸಿಂಪಡಿಕೆ ಹೀಗೆ ತರಕಾರಿ, ಹಣ್ಣು, ಬೇಳೆಕಾಳುಗಳೂ ವಿಷಕಾರಿಯಾಗುತ್ತವೆ. ರಾಸಾಯನಿಕ ಹೊಂದಿದ ನೀರು ನದಿ ಸಮುದ್ರಗಳನ್ನು ಸೇರಿ ಮೀನುಗಳೂ ವಿಷವನ್ನೇ ಹೊಂದಿ ನಮಗೆ ಆಹಾರವಾಗುತ್ತವೆ. ರಾಸಾಯನಿಕ ಹೊಂದಿದ ಆಹಾರ ನೀಡಿ ಕೋಳಿ, ಕುರಿ, ಹಂದಿ ಮೊದಲಾದ ಪ್ರಾಣಿಗಳ ಮಾಂಸಗಳೂ ವಿಷವನ್ನೇ ಹೊಂದಿರುತ್ತವೆ..

ಇದೂ ಅಲ್ಲದೆ ನಾವು ಮಾಡುವ ಜಾಹಿರಾತುಗಳ ಮೂಲಕ ನಮ್ಮ ಉತ್ಪನ್ನಗಳು ಮಾರಾಟವಾಗಬೇಕು ಎಂಬ ಸ್ವಾರ್ಥದಿಂದ ಇತರರಿಗೆ ವಿಷ ತಿನ್ನುವುದಕ್ಕಾಗಿಯೇ ಪ್ರಚೋದನೆ ನೀಡುತ್ತವೆ . ‘ಕಣ ಕಣ ದಲ್ಲಿ ಕೇಸರಿ’ ಎಂದು ಬೊಗುಳುತ್ತಾ… ಕಣ ಕಣ ದಲ್ಲಿ ಕ್ಯಾನ್ಸರ್ ನ್ನೇ ಇತರರಿಗೆ ಹಂಚುತ್ತೇವೆ.. ” ಕೋತಿ ತಾನು ಕೆಡುವುದಲ್ಲದೆ ವನವನ್ನೇ ಕೆಡಿಸಿತು ” ಅನ್ನುವ ಮಾತನ್ನು ತಪ್ಪದೆ ಪಾಲಿಸುತ್ತೇವೆ … ಕೋತಿಗಳ ವಂಶಜರಲ್ಲವೇ ನಾವು ?

ಹೀಗಿರುವಾಗ ಮನುಷ್ಯರೆನಿಸಿದ ಮನುಷ್ಯರಾದ ನಮಗೆ ಏನಿದೆ ಬದುಕಿರುವುದಕ್ಕಾಗಿ ತಿನ್ನಲು ? ಯೋಚಿಸಿ… ಹೌದು ‘ವಿಷ’ಉಪ ಮಾತ್ರ…

ನಾವೆಲ್ಲ ಪ್ಲಾಸ್ಟಿಕ್ ತ್ಯಾಜ್ಯ, ಕಲಬೆರಕೆ ವರ್ಜ್ಯ ಅಂತೆಲ್ಲ ಬೊಬ್ಬೆ ಹೊಡೆಯುತ್ತೇವೆ. ಅಸಲಿಗೆ ನಾವೇ ಈ ತ್ಯಾಜ್ಯ, ವರ್ಜ್ಯ ಎಲ್ಲೆಂದರಲ್ಲಿ ಬಿಸಾಡುಯತ್ತೇ.‌ ಇವುಗಳ ದೇಖರೇಕಿ ಕೇವಲ ಪೌರಕಾರ್ಮಿಕರಿಗೆ ಮಾತ್ರವೇ? ಈ ಬಗ್ಗೆ ಯುವಕರು ಯೋಚಿಸಬೇಕಾಗಿದೆ. ಊರೂರಿನಲ್ಲಿ ಯುವಕ/ ಯುವತಿ ಸಂಘಗಳಿವೆ. ಅವುಗಳನ್ನು ಬಳಸಿಕೊಂಡು ಶುದ್ಧ ಪರಿಸರದತ್ತ ಹೆಜ್ಜೆ ಇಡಬೇಕು.

ಲೇಖಕರು :
ರಾಘವೇಂದ್ರ ಲಕ್ಷ್ಮೇಶ್ವರ್

Founder & Creative Head
Grapito Desings (Design and Marketing agency)

One thought on “ಬದುಕಲು ವಿಷ ತಿನ್ನಬೇಕು….

  1. ಪ್ರಜ್ಞಾಪೂರ್ವಕ ಅರಿವು, ಕಾಳಜಿ ಮತ್ತು ನಿಜವಾದ ಪರಿಸರ ಪ್ರೇಮ ಇಂದಿನ ಯುವಕರಲ್ಲಿ ಮೊಳೆಯಬೇಕಾದ ಅಗತ್ಯತೆ ಇದೆ.ತೀರದ ಧನ ದಾಹ… ಮುಗಿಯದ ಆಸೆ.. ಜಾಣ ಕುರುಡುತನ… ಬೇಜವಾಬ್ದಾರಿ..ಮೂಕ ಪ್ರಾಣಿಗಳ ಜೀವಕ್ಕೆ ಹಾಗೆ ಪ್ರಕೃತಿಯ ನಾಶಕ್ಕೆ ಕಾರಣವಾಗಿದೆ…. It’s a right time to avoid plastic. ಯುವ ಜನತೆ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು! ನಿಮ್ಮ ಲೇಖನ ಸಾವಿರ ಯುವ ಮನಸ್ಸುಗಳ ಒಳ ಕನ್ನಡಿ ತೆರೆಯಲಿ….ವಸುಂಧರೆ ನಗು ಚೆಲ್ಲಲಿ
    ಸಕಲ ಜೀವ ರಾಶಿಗಳ ಜೀವ ಉಳಿಯಲಿ🙏

Leave a Reply

Your email address will not be published. Required fields are marked *