ಪ್ರಜಾಪ್ರಭುತ್ವದ ಎರಡು ಬಿಡಿ ಚಿತ್ರಗಳು !

ಅವರು ನಾಗರೀಕ ಸಮಾಜದ ಮುಖ್ಯವಾಹಿನಿಯಿಂದ ಹೊರಗೇ ವಾಸಿಸಲು ಇಷ್ಟಪಡುವ ಜನ. ತಮ್ಮದೇ ವಿಶಿಷ್ಟ ಸಂಸ್ಕೃತಿ-ಆಚರಣೆಗಳನ್ನು ಮೈಗೂಡಿಸಿಕೊಂಡವರು. ಸಮುದಾಯದ ಬಹುಪಾಲು ತಳಸ್ತರದ ಕೂಲಿ ಕಾರ್ಮಿಕರು. ಬಹುಶಃ ಸರ್ಕಾರಗಳಿನ್ನೂ ಅವರನ್ನು ತಲುಪಲು ಸಾಧ್ಯವೇ ಆಗಿಲ್ಲ.

ಚುನಾವಣೆಗಳಲ್ಲಿ ಮತ ಹಾಕಲಷ್ಟೇ ಉಪಯೋಗಿಸಲ್ಪಡುವ ಈ ಮಂದಿ ಎಂತಹ ಮೂಢರೆಂದರೆ ಸೋಕಾಲ್ಡ್ ಶ್ರೇಣೀಕೃತ ವ್ಯವಸ್ಥೆಯ ಅಧಿಕೃತ ವಾರಸುದಾರರೆಂಬ ಭ್ರಮೆಯಲ್ಲಿ ಜೀವಿಸುತ್ತಿದ್ದಾರೆ. ಆದರೆ ಅವರ ಈ ಭ್ರಮೆಯನ್ನು ದ್ವೇಷಿಸದೇ ಕನಿಕರದಿಂದ ನೋಡುವುದೇ ಸೂಕ್ತ. ಏಕೆಂದರೆ ಪ್ರಭಾವಿ ಸಮುದಾಯಗಳಿಗೆ ಇನ್ನುಳಿದವರೆಲ್ಲರೂ ಅಸ್ಪೃಶ್ಯರೇ ಎಂಬ ಅರವಿನ ಗಂಧಗಾಳಿಯೂ ಇವರಿಗಿಲ್ಲ.

ಘಟನೆ ಹೀಗಿದೆ, ಅತ ದಲಿತ ಯುವಕ. ಜೆಸಿಬಿ (JCB) ಯೊಂದರ ಚಾಲಕ. ಅದು ಚಿತ್ರದುರ್ಗ ಜಿಲ್ಲೆಯ ತರೀಕೆರೆ ತಾಲೂಕಿನ ಗೇರಮರಡಿ ಗ್ರಾಮ. ಹಿಂದುಳಿದ ಗೊಲ್ಲ ಸಮುದಾಯದ ಜನ ವಾಸಿಸುವ ಬೀದಿಯಲ್ಲಿ ಚರಂಡಿ ಕಾಮಗಾರಿಗಾಗಿ ಜೆಸಿಬಿ ಚಲಾಯಸಿಕೊಂಡು ಬಂದಿದ್ದೇ ಆ ಯುವಕ ಮಾಡಿದ ಮಹಾಪರಾಧ. ಆ ಮೂಢ ಮಂದಿ ಆತನನ್ನು ಸುತ್ತುವರೆದು ದಲಿತನೋರ್ವ ಬೀದಿ ಪ್ರವೇಶಿಸಿದ್ದಾನೆಂದು ಬಡಿದರು. ಜೊತೆಗೆ ದಂಡ ವಿಧಿಸಿದರು.

ಸುದ್ದಿ ಸದ್ದು ಮಾಡಿತು. ದಲಿತರ ದಂಡು ಸೇರಿತು. ಊರಿನ ಬಹುಪಾಲು ಮಂದಿ ರಾತ್ರೋ ರಾತ್ರಿ ಊರು ಬಿಟ್ಟರು. ದಂಡು ಆವರೆಗೂ ಪರಿಶೀಷ್ಟರಿಗೆ ಮುಖ ತೋರಿಸದೆ ಮಂದಿರದೊಳಗಿದ್ದ ದೇವರನ್ನು ನೋಡಲು ಅಧಿಕಾರಿಗಳ ಸಮ್ಮುಖದಲ್ಲಿ ಬೀಗ ಒಡೆದು ಒಳ ಪ್ರವೇಶಿಸಿದರು. ಮಂದಿನ ದಿನಗಳಲ್ಲಿ ಹಲ್ಲೆ ಮಾಡಿದವರ ಬಂಧನವಾಗಿ ಕಾನೂನು ರೀತಿಯಲ್ಲಿ ಶಿಕ್ಷೆಯಾಗುತ್ತದೆ.

ಉತ್ತರ ವಿಲ್ಲದೇ ಉಳಿದ ಪ್ರಶ್ನೆಗಳು :

  • ನಾಗರೀಕ ಸೌಲಭ್ಯಗಳಿಂದ ವಂಚಿತರಾಗಿ ಪಶುಸದೃಶ ಬದುಕು ನಡೆಸುತ್ತಿರುವ ಇಂತಹ ಹಿಂದುಳಿದ ಸಮುದಾಯಗಳು ವರ್ಣ ವ್ಯವಸ್ಥೆಯ ಭ್ರಮೆ ಕಳಚಲು ಇರುವ ಮಾರ್ಗೋಪಾಯಗಳೇನು?
  • ಬಾಬಾ ಸಾಹೇಬರ ದಾರಿ ನಮ್ಮದು ಎನ್ನುವವರು ಮಂದಿರ ಪ್ರವೇಶಕ್ಕಾಗಿ ಹೋರಾಟ ಮಾಡಬೇಕಾಗಿತ್ತೇ ?

2019 ರಲ್ಲಿ ಶೋಷಿತ ಸಮುದಾಯಗಳ ಜನಪ್ರತಿನಿಧಿಯೊಬ್ಬರಿಗೂ ಈ ಅನುಭವವಾಗಿತ್ತು ಎಂಬುದನ್ನಿಲ್ಲಿ ನಿಮಗೆ ನೆನಪಿಸುತ್ತೇನೆ.

ನಿಮ್ಮೊಳಗೆ ನಡೆಯಲಿ ನಿಷ್ಕರ್ಷೆ.

ಆತನ ಹೆಸರು ಬೇಡ ಇಲ್ಲಿ. ನಿರಂತರವಾಗಿ ಚುನಾವಣೆಗಳಲ್ಲಿ ವಿಜಯ ಸಾಧಿಸಿ ರಾಜ್ಯ ಮತ್ತು ರಾಷ್ಟ್ರದ ಶಾಸನ ಸಭೆಗಳಲ್ಲಿ ಇರುವಾತ ಸಜ್ಜನನೆಂದೂ, ಅಜಾತಶತ್ರುವೆಂದೂ ಹೆಸರು ಪಡೆದು ಆಗೀಗ ಸುದ್ದಿಯಲ್ಲೂ ಇರುವಾತ. ರಾಜ್ಯದ ಮೀಸಲು ಕ್ಷೇತ್ರವೊಂದರ ಪ್ರತಿನಿಧಿ. ಮಹಾನ್ ದೈವ ಭಕ್ತನೂ ಹೌದು!

ಸಾರ್ವತ್ರಿಕ ಚುನಾವಣೆಯೊಂದರ ಪ್ರಚಾರವೊಂದರ ಸಂದರ್ಭ. ಈ ಮಹಾನುಭಾವ ದೈವಬೀರುವೇ ಅಭ್ಯರ್ಥಿ. ಪ್ರಬಲರಿಗೆ ಸೇರಿದ ಊರ ದೇಗುಲದ ಆವರಣದಲ್ಲಿ ಪ್ರಚಾರ ಸಭೆ. ನಿರರ್ಗಳ, ನಿರ್ಭೀತ ಭಾಷಣದ ನಂತರ ಸೇರಿದ್ದ ಬೆಂಬಲಿಗರು ದೈವಾನುಗ್ರಹಕ್ಕಾಗಿ ದೇವರ ದರ್ಶನ ಪಡೆಯುವಂತೆ ಸಲಹೆಯಿತ್ತರು. ಸಾಹೇಬರಿಗೆ ಪೀಕಲಾಟ ಶುರುವಾಯಿತು.

ದೇಗುಲ ಪ್ರಬಲರದ್ದು. ದೈವ ಪ್ರಭಾವಿಗಳದ್ದು. ಈತನೋ ಅವರ ದೃಷ್ಟಿಯಲ್ಲಿ ಹುಟ್ಟಿನಿಂದ ಅಸ್ಪೃಷ್ಯ. ದೇವರ ಕಾಣಲು ದೇಗುಲದೊಳಗೆ ಹೋದರೆ ದೈವ ಬೀರುಗಳ ಕೆಂಗಣ್ಣಿಗೆ ಗುರಿಯಾಗಬೇಕಾದೀತು. ತನ್ನ ಪ್ರವೇಶದಿಂದ ಅವರ ಗುಡಿ ಮೈಲಿಗೆ ಮಾಡಿ ಚುನಾವಣೆಯಲ್ಲಿ ಪರಾಜಿತನಾಗುವ ಬದಲು, ತನ್ನ ತಾತ ಮುತ್ತಾತಂದಿರಂತೆ ಹೊರಗೆ ನಿಂತು ಕೈಮುಗಿದ. ಸ್ವಘೋಷಿತ ಜಾತಿವಂತರೆಲ್ಲ ಸಂಪ್ರೀತರಾಗಿ ಈತನ ಒಳ್ಳೆಯತನವನ್ನು ಮನಸಾರೆ ಮೆಚ್ಚಿದರು. ಅಭ್ಯರ್ಥಿ ಗೆದ್ದ. ಪ್ರಜಾಪ್ರಭುತ್ವಕ್ಕೆ ಸೋಲಾಯಿತು…!? ಇಲ್ಲ, ಪ್ರಭಾವಿಗಳು, ಪ್ರಬಲರು ಪ್ರಭುಗಳಾಗಿದ್ದು, ಆ ಪ್ರಭುತ್ವವನ್ನೂ, ಅದರ ಶಿಷ್ಟಾಚಾರಗಳನ್ನು ಅನೂಚಾನವಾಗಿ ಪಾಲಿಸುತ್ತಿರುವ ‘ಅಭ್ಯರ್ಥಿ’ಯಂತಹ ಪ್ರಜೆಗಳಿರುವಾಗ ಪ್ರಜಾ‘ಪ್ರಭುತ್ವ’ ಸೋಲುವುದುಂಟೆ…!

ಗಾಂಧಿ-ಅಂಬೇಡ್ಕರ್ರ ನಡುವಿನ ಪೂನಾ ಒಪ್ಪಂದವನ್ನು ಓದುಗರೊಮ್ಮೆ ಪರಾಮರ್ಶಿಸಬೇಕಾಗಿ ವಿನಂತಿ.

ಮೊದಲಿಗೆ ಉಲ್ಲೇಖಿಸಿದ ಗೇರುಮರಡಿ ಗೊಲ್ಲರ ಹಟ್ಟಿಯಲ್ಲಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ದಲಿತ ಚಳುವಳಿಗಾರರ ಸಮ್ಮುಖದಲ್ಲಿ ಹೊಡೆದವರು ಮತ್ತು ಹೊಡೆಸಿಕೊಂಡವರ ನಡುವೆ ಸೌಹಾರ್ದತೆ ಮೂಡಿಸಲು ಸಂಧಾನ ಸಭೆ.

ಹಲ್ಲೆಗೊಳಗಾದ ಯುವಕನ ಜಾತಿಗೆ ಸೇರಿದ ‘ಜಾತ್ಯತೀತ’ನೊಬ್ಬ ಮಾತಿಗೆ ಶರುವಿಟ್ಟ. ಸಭೆ ಘನಗಂಭೀರವಾಗಿ ಆಲಿಸುತ್ತಿತ್ತು.

ಅವನೆಂದ, ‘ಹಿಂದಿನಿಂದ ಅನುಸರಿಸಿಕೊಂಡು ಬರುತ್ತಿರುವ ಆಚರಣೆ-ಸಂಪ್ರದಾಯಗಳನ್ನು ಪಾಲಿಸಲು ಅನುವು ಮಾಡಿಕೊಡಿ.’

ಕವಿ ಚೆನ್ನಣ್ಣ ವಾಲೀಕಾರ ಬರೆಯುತ್ತಾರೆ…

ನೀ ಹೋದ ಮರುದಿನ
ಮೊದಲ್ಹಂಗ ನಮ್ ಬದುಕು
ಆಗ್ಯಾದೋ ಬಾಬಾ ಸಾಹೇಬ
ನಿನ್ನಂಗ ದುಡಿದವರು
ಕಳಕಳಿಯ ಪಡುವವರು
ಇನ್ನುತನ ಬರಲಿಲ್ಲ ಒಬ್ಬ
ಇನ್ನುತನ ಬರಲಿಲ್ಲ ಒಬ್ಬ
ನೀ ಹೋದ…’

ಲೇಖಕರು :
ಪ್ರೊ. ಸಂದೇಶ ಎಚ್ ರತ್ನಪುರಿ
ಮೈಸೂರು

Leave a Reply

Your email address will not be published. Required fields are marked *