ದೊಡ್ಡಾಟದ ಇತಿಹಾಸದಲ್ಲಿ ‘ಕುಮಾರ ರಾಮ’ ಅತ್ಯಂತ ಪ್ರಾಚೀನವಾದ ಕೃತಿ.
(…ಹಿಂದಿನ ಸಂಚಿಕೆಯಿಂದ ಮುಂದುವರೆದದ್ದು)
ಯಕ್ಷಗಾನ ಆಟಕ್ಕೆ ಶಾಸ್ತ್ರೀಯ ರೂಪುಕೊಟ್ಟು ಅದನ್ನು ಲೋಕಪ್ರಿಯವನ್ನಾಗಿ ಮಾಡಿದವರು ಸಂಗೀತ ತಜ್ಞರಾದ ಪುಂಡರೀಕ ವಿಠಲ ಮತ್ತು ಸಂಗೀತ ದರ್ಪಣಕಾರ ಚತುರ ದಾಮೋದರ. ಉಳಿದ ಸಂಗೀತದಲ್ಲಿ ರಾಗಾಶ್ರಯವಿದ್ದರೆ, ಯಕ್ಷಗಾನವು ತಾಳ ಮತ್ತು ಭಾವ ಪ್ರಧಾನವಾದ್ದು.
ಯಕ್ಷಗಾನಕ್ಕೂ ಅಸ್ಸಾಂ ನ ‘ಆಂಖಿಯಾ’ ಬಂಗಾಲದ ‘ಯಾತ್ರಾ’ ಬಿಹಾರದ ‘ಛಾವು’ ಓರಿಸ್ಸಾದ ‘ಪ್ರಹ್ಲಾದನಾಟ್ಯ’ ಆಂಧ್ರದ ‘ವೀದಿ ನಾಟಕಂ’ ತಮಿಳಿನ ‘ತೆರಕೊತ್ತು ಭಾಗವತ ಮೇಳ’ ಕೇರಳದ ‘ಕಥಕ್ಕಳಿ’ಗೂ ಹೋಲಿಕೆಯಿದ್ದರೂ ಈ ಎಲ್ಲವುಗಳಿಂದ ಭಿನ್ನವಾದದ್ದು ಯಕ್ಷಗಾನ.. ಕಾಂಬೋಡಿಯಾ, ಇಂಡೋನೇಶ್ಯಾ, ಬಾಲಿ ದ್ವೀಪಗಳಲ್ಲಿಯೂ ಯಕ್ಷಗಾನವನ್ನು ಹೋಲುವಂಥ ಕಲಾ ಪ್ರಕಾರಗಳಿವೆ.

ಅಭ್ಯಾಸದ ಅನುಕೂಲಕ್ಕಾಗಿ ಸಮಗ್ರ ಯಕ್ಷಗಾನವನ್ನು ‘ ಮೂಡಲಪಾಯ’ ಮತ್ತು ‘ ಪಡುವಲಪಾಯ’ ಎಂದು ಎರಡು ವಿಭಾಗಗಳನ್ನು ಮಾಡಲಾಗುತ್ತದೆ. ಮೂಡಲಪಾಯ ಯಕ್ಷಗಾನವು ಹಾಸನ ಜಿಲ್ಲೆಯ ಚೆನ್ನರಾಯ ಪಟ್ಟಣ, ಅರಸಿಕೆರೆ ತಾಲೂಕುಗಳಲ್ಲಿ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮತ್ತು ಚೆಳ್ಳೆಕೆರೆ ತಾಲೂಕುಗಳಲ್ಲಿ, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ, ತುಮಕೂರು ಜಿಲ್ಲೆಯ ತುರುವೆಕೆರೆ ತಾಲೂಕಿನಲ್ಲಿ ಕಂಡುಬರುತ್ತದೆ. ಮೂಡಲಪಾಯದಲ್ಲಿ ‘ ದೊಡ್ಡಾಟ ‘ಮತ್ತು ‘ ಸಣ್ಣಾಟ ‘ ಗಳೆಂದು ಸ್ಥೂಲವಾಗಿ ಎರಡು ಭಾಗಮಾಡಿಕೊಳ್ಳಬಹುದು. ಮೂಡಲಪಾಯವನ್ನು ದೊಡ್ಡಾಟ, ಅಟ್ಟದಾಟ, ಬೈಲ್ಕತೆ ಎಂದು ಕರೆಯುತ್ತಾರೆ. ದೊಡ್ಡಾಟವು ಉತ್ತರ ಕರ್ನಾಟಕ ಅಂದರೆ ರಾಯಚೂರು, ವಿಜಾಪುರ, ಬಾಗಲಕೋಟೆ, ಬೆಳಗಾವಿ, ಕಲಬುರಗಿ ಜಿಲ್ಲೆಗಳ ಪ್ರಸಿದ್ಧ ಕಲೆ.ಇದು 150 ವರ್ಷಗಳ ಇತಿಹಾಸ ಹೊಂದಿದೆ. ದೊಡ್ಡಾಟದ ಇತಿಹಾಸದಲ್ಲಿ ‘ ಕುಮಾರ ರಾಮ ‘ ಅತ್ಯಂತ ಪ್ರಾಚೀನವಾದ ಕೃತಿ. ಕರಿಭಂಟನ ಕಾಳಗ, ಶ್ರೀ ಕೃಷ್ಣ ಪಾರಿಜಾತ ಯಕ್ಷಗಾನಗಳು ಅತ್ಯಂತ ಜನಪ್ರೀಯವಾಗಿವೆ. ಚಾಮರಾಜ ನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನಲ್ಲಿ ‘ ಘಟ್ಟದ ಕೋರೆ ‘ ಎಂಬ ಯಕ್ಷಗಾನದ ಪ್ರಭೇದ ಚಾಲ್ತಿಯಲ್ಲಿದೆ. ಇದು ನಮ್ಮ ಯಕ್ಷಗಾನಕ್ಕೆ ತೀರ ಹತ್ತಿರವಾಗಿದೆ.


ಕೇರಳ ಕಾಸರಗೋಡಿನ ಚಂದ್ರಗಿರಿಯಿಂದ ಕರ್ನಾಟಕ ಕಾರವಾರದ ಕಾಳೀ ನದಿಯವರೆಗೆ ಕಡಲಿನಿಂದ ಘಟ್ಟದ ಒಡಲಿನವರೆಗೆ 250 ಕಿ.ಮೀ ಉದ್ದ 150 ಕಿ.ಮೀ ಅಗಲದ ಪ್ರದೇಶ ವ್ಯಾಪ್ತಿಯಲ್ಲಿ ಪ್ರಚಲಿತವಿರುವ ಯಕ್ಷಗಾನವೇ ಪಡುವಲಪಾಯ. ಅಂದರೆ ನಮ್ಮ ಕರಾವಳಿ ಯಕ್ಷಗಾನ. ಕರಾವಳಿ ಯಕ್ಷಗಾನದ ಮಟ್ಟಿಗೆ ಹೇಳುವುದಾದರೆ ಹದಿಮೂರನೇ ಶತಮಾನದಲ್ಲಿ ಸಿದ್ದಾಪುರ ಕಂಚಿಮನೆಯಲ್ಲಿ ದೊರಕಿರುವ ‘ಆದಿಪರ್ವ ‘ ತಾಡವಾಲೆ ಗ್ರಂಥ ಮೊದಲ ಕಾವ್ಯ ಕೃತಿ. ಅಜಪುರ ವಿಷ್ಣು ವಿರಚಿತ ‘ ವಿರಾಟ ಪರ್ವ ‘ವೇ ಎರಡನೇ ಲಿಖಿತ ದಾಖಲೆ. ಅದಕ್ಕೆ ಸಾಕಷ್ಟು ಪೂರ್ವದಲ್ಲಿಯೇ ಯಕ್ಷಗಾನ ಬೆಳವಣಿಗೆ ಹೊಂದಿರಬೇಕು. ಕ್ರಿ.ಶ 1600 ರಲ್ಲಿದ್ದ ಯಕ್ಷಗಾನ ಕವಿ ಪಾರ್ತಿ ಸುಬ್ಬನ ಕಾಲದಲ್ಲಿಯೇ ಯಕ್ಷಗಾನವು ಪರಿಪೂರ್ಣವಾಗಿ ವಿಕಾಸಗೊಂಡಿತ್ತು ಎಂದು ವಿದ್ವಾಂಸರ ಅಭಿಮತ. ನಗರೆಯಸುಬ್ಬ, ದೇವಿದಾಸ, ಧ್ಜಜಪುರದ ನಾಗಪ್ಪಯ್ಯ ಮೊದಲಾದ ಯಕ್ಷಗಾನ ಕವಿಗಳು ನಂತರದ ದಿನಗಳಲ್ಲಿ ಪ್ರಸಂಗ ರಚಿಸಿರುವುದಾಗಿ ತಿಳಿದು ಬರುತ್ತದೆ. ನಮ್ಮ ನೆಚ್ಚಿನ ಕವಿ ಮುದ್ದಣನು ಕ್ರಿ.ಶ 1900 ರ ಸುಮಾರಿಗೆ ‘ ರತ್ನಾವತಿ ಕಲ್ಯಾಣ ‘ ಕುಮಾರ ವಿಜಯ ‘ ಮುಂತಾದ ಯಕ್ಷಗಾನ ಪ್ರಸಂಗಗಳನ್ನು ರಚಿಸಿರುವುದಾಗಿ ತಿಳಿದುಬರುತ್ತದೆ. ಮಧ್ವಾಚಾರ್ಯರ ಅನುಯಾಯಿಯೂ ಕಳಿಂಗ ಸಾಮ್ರಾಜ್ಯದ ಮಂತ್ರಿಯೂ ಆದ ನರಹರಿ ತೀರ್ಥ ರಿಂದ ಮೊಟ್ಟ ಮೊದಲ ಬಾರಿಗೆ ಯಕ್ಷಗಾನವು ಉಡುಪಿಯಲ್ಲಿ ಪ್ರದರ್ಶಿಸಲ್ಪಟಿತು ಎನ್ನುವ ವಿವರವನ್ನು ಸಂಶೋಧಕರು ಕಲೆಹಾಕಿದ್ದಾರೆ. ‘ಕೂಚಿಪುಡಿ ‘ ಯ ಸಂಸ್ಥಾಪಕರೂ ಈ ನರ ಹರಿ ತೀರ್ಥರೇ ಆಗಿದ್ದಾರೆ ಎಂಬುದು ವಿದ್ವಾಂಸರ ಅಂಬೋಣವಾಗಿದೆ.


ಕರಾವಳಿ ಯಕ್ಷಗಾನದಲ್ಲಿ ತೆಂಕುತಿಟ್ಟು, ಬಡಗುತಿಟ್ಟು, ಬಡಾ ಬಡಗು ತಿಟ್ಟು ಎಂದು ಮೂರು ಪ್ರಕಾರಗಳು. ದಕ್ಷಿಣ ಕನ್ನಡ ಹಾಗೂ ಕಾಸರಕೋಡು ಜಿಲ್ಲೆಗಳಲ್ಲಿ ತೆಂಕುತಿಟ್ಟು ಶೈಲಿಯ ಯಕ್ಷಗಾನ ಪ್ರಚಲಿತವಿದ್ದರೆ, ಉಡುಪಿ ಜಿಲ್ಲೆಯಲ್ಲಿ ಬಡಗು ತಿಟ್ಟು ಶೈಲಿಯ ಯಕ್ಷಗಾನವಿದೆ. ಉತ್ತರ ಕನ್ನಡ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳಲ್ಲಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಬಡಾ ಬಡಗು ಶೈಲಿ ಯ ಯಕ್ಷಗಾನ ಕಂಡುಬರುತ್ತದೆ. ಸುಮಾರು 300 ವರ್ಷಗ ಳ ಹಿಂದೆಯೇ ತಿಟ್ಟುಗಳ ನಿರ್ಮಾಣವಾಗಿತ್ತು ಎನ್ನುವುದಕ್ಕೆ ಸಾಕ್ಷಿ 300 ವರ್ಷಗಳ ಹಿಂದೆ ಕುಮಟಾದಲ್ಲಿ ಸಿಕ್ಕಿರುವ ರಥದಲ್ಲಿರುವ ಶಿಲ್ಪಗಳು. ಆ ರಥದಲ್ಲಿ ಬಡಾ ಬಡಗು ಶೈಲಿಯ ಯಕ್ಷಗಾನದ ಸುಂದರ ಶಿಲ್ಪಗಳನ್ನು ಕೆತ್ತಲಾಗಿದೆ. ಈಗ ಆ ರಥ ಮೈಸೂರಿನಲ್ಲಿದೆ. ತೆಂಕು ತಿಟ್ಟಿನ ನಿರ್ಮಾತ್ರ ಪಾರ್ತಿ ಸುಬ್ಬನ ತಂದೆ ವೆಂಕಟ ಸುಬ್ಬ ಎನ್ನುವುದು ಶಿವರಾಮ ಕಾರಂತರ ಅಭಿಮತ. ತೆಂಕಿಗೂ ಬಡಗಿಗೂ ವೇಷ ಭೂಷಣ ಹಿಮ್ಮೇಳ ನರ್ತನಗಳಲ್ಲಿ ವತ್ಯಾಸಗಳಿದ್ದರೂ ಆಶಯ ಮತ್ತು ಧೋರಣೆಗಳು ಒಂದೆ. ಬಡಗಿನಲ್ಲಿ ಗತ್ತುಗಾರಿಕೆ ಕಂಡುಬಂದರೆ ಬಡಾ ಬಡಗಿನಲ್ಲಿ ಲಾಲಿತ್ಯ ಕಂಡುಬರುತ್ತದೆ. ಬಡಾಬಡಗಿನಲ್ಲಿ ಅಭಿನಯ ಮತ್ತು ಮುಖದ ಅಭಿವ್ಯಕ್ತಿಗೆ ಪ್ರಾಶಸ್ತ್ಯ ಜಾಸ್ತಿ. ಬಡಾ ಬಡಗಿನಲ್ಲಿ ‘ಕರ್ಕಿ ಶೈಲಿ’ಯ ಯಕ್ಷಗಾನ ಬಹಳ ಹಿಂದೆಯೇ ಪ್ರಸಿದ್ಧಿಯ ಉತ್ತುಂಗಕ್ಕೇರಿತ್ತು. ಆ ಕಾಲದಲ್ಲಿಯೇ ಮಹಾರಾಷ್ಟ್ರದ ಬಡೋದೆ ಸಂಸ್ಥಾನದಲ್ಲಿ ಕರ್ಕಿ ಹಾಸ್ಯಗಾರ ಮೇಳ ಯಕ್ಷಗಾನ ಪ್ರದರ್ಶನ ನೀಡಿತ್ತು. ಆಮೇಲೆ ಅದು ಇಡೀ ಮರಾಠಿ ರಂಗಭೂಮಿಯನ್ನು ಪ್ರಭಾವಿಸಿದ್ದು ಈಗ ಇತಿಹಾಸ. ಕರ್ಕಿ ಮೇಳದ ಮುಖ ವರ್ಣಿಕೆ, ಲಾಲಿ ಕುಣಿತ ವೈವಿಧ್ಯಮಯವಾದದ್ದು ಮತ್ತು ವಿಭಿನ್ನವಾದದ್ದು. ಕೇವಲ ಕರ್ಕಿ ಮೇಳದ ಕಲಾವಿದರಲ್ಲಿ ಮಾತ್ರ ಕಂಡು ಬರುವ ಕಣ್ಣು ಗುಡ್ಡೆಗಳನ್ನು ತಿರುಗಿಸುವ ರೀತಿ ವೈಶಿಷ್ಟ್ಯಪೂರ್ಣವಾದದು. ಇವುಗಳನ್ನೆಲ್ಲ ಕುಮಟಾದ ಡಾ. ಜಿ.ಎಲ್.ಹೆಗಡೆಯವರ ನೇತ್ರತ್ವದ ‘ಯಕ್ಷಗಾನ ಸಂಶೋಧನಾ ಕೇಂದ್ರ’ ದಾಖಲೀಕರಣ ಮಾಡಿದೆ. ಆಸಕ್ತರು ಗಮನಿಸಬಹುದು. ಇತ್ತೀಚಿನ ದಿನಗಳಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆಯವರು ಪಾತ್ರವನ್ನು ನೋಡಿದಾಕ್ಷಣ ಇದು ಇಂಥದ್ದೇ ಪಾತ್ರ ಎಂದು ಗುರುತಿಸಿ ಹೇಳಬಹುದಾದಷ್ಟು ನಿಖರವಾದ ಮುಖ ವರ್ಣಿಕೆಯನ್ನು ಮಾಡುತ್ತಿದ್ದಾರೆ. ಅವರ ಮುಖ ವರ್ಣಿಕೆಯಲ್ಲಿ ವೈವಿಧ್ಯತೆಯನ್ನೂ ಸ್ವಂತಿಕೆಯನ್ನು ಧಾರಾಳವಾಗಿ ಗುರುತಿಸಬಹುದು.

ಕರಾವಳಿಯ ಯಕ್ಷಗಾನವು ಕೇರಳದ ‘ ಕಥಕ್ಕಳಿ ‘ ಯಿಂದ ಪ್ರಭಾವಿತವಾಗಿದೆ ಎಂದು ಕೆಲವರ ವಾದ. ಆದರೆ ಅದು ಸರಿಯಲ್ಲ. ಕೇರಳದಲ್ಲಿ ಮೊದಲೇ ‘ ಕೃಷ್ಣನಾಟ್ಯಂ ‘ ಎಂಬುದು ಇದ್ದು ಅದೊಂದು ನಾಟ್ಯ ವಿಧಾನ ಮಾತ್ರ ಆಗಿತ್ತು. ಕೊಲ್ಲೂರು ಕ್ಷೇತ್ರಕ್ಕೆ ಆಗಾಗ ಬರುತ್ತಿದ್ದ ಕೇರಳದ ಕೊಟ್ಟಾರಕ ಮಹಾರಾಜನು ದಕ್ಷಿಣ ಕನ್ನಡದ ಯಕ್ಷಗಾನ ಬಯಲಾಟವನ್ನು ಕಂಡು ‘ಕೃಷ್ಣನಾಟ್ಯ’ ನೃತ್ಯಕ್ಕೆ ಹೊಸರೂಪ ಕೊಟ್ಟು ‘ಅಟ್ಟ ಕಥಾ’ ಎಂಬುದನ್ನು ಪ್ರಚಾರಕ್ಕೆ ತಂದನಂತೆ. ಇದೇ ‘ ರಾಮ ನಾಟ್ಟಂ’. ವಲ್ಲತ್ತೋಲ್ ನಾರಾಯಣ ಮೆನನ್ ಎಂಬವರು ಇವುಗಳನ್ನು ಪರಿಷ್ಕರಿಸಿ ಅದಕ್ಕೆ ‘ಕಥಕ್ಕಳಿ’ ಎಂದು ಹೆಸರು ಕೊಟ್ಟರು. ಇದರಲ್ಲಿ ಮೊದಲು ಪಾತ್ರಧಾರಿಗಳೇ ಹಾಡಿಕೊಳ್ಳುತ್ತಿದ್ದು ಆನಂತರ ಕರ್ನಾಟಕದ ಯಕ್ಷಗಾನದ ಪ್ರಭಾವದಿಂದಾಗಿ ಪ್ರತ್ಯೇಕ ಭಾಗವತರು ನೇಮಕಗೊಂಡರೆಂದು ಹೇಳಲಾಗುತ್ತದೆ. ನಮ್ಮ ಬಯಲಾಟದ ತಂತ್ರಗಾರಿಕೆ ಇದರಲ್ಲಿಲ್ಲ.
(ಮುಂದಿನ ಸಂಚಿಕೆಯಲ್ಲಿ ಇನ್ನಷ್ಟು…)