ಜೋಯಿಡಾದಲ್ಲಿ ಮಳೆಯಾದರೆ
ಹಳ್ಳ ಕೊಳ್ಳವೆಲ್ಲ ತುಂಬಿ
ದಾಟಲಾಗದೆ ಶಾಲೆ ಕನಸು
ಕಾಣುವ ಮಕ್ಕಳ ಮನ
ಮರಿ ದುಂಬಿಯಾಗಿ
ಹಾರಿ ಹಾರಿ
ಅಕ್ಷರವಾಗುವ ಹೊತ್ತು
ಕಾಲು ಸಂಕದ ಮೇಲೆರುವ ಹೊಳೆ
ನೋಡು ನೋಡುತ್ತಲೆ ಕರಗಿದ
ಕನಸುಗಳೆಲ್ಲ ಒಲೆ ಬೆಂಕಿಯಲಿ
ಬೆಂದು ಈಗ ಹೊಗೆ
ಮಳೆ ಮೋಡ ಕರಿ ಮೋಡ
ಬಗೆ ಬಗೆ
ಒಂದೆ ಸಮನೆ ಬಿದ್ದ ಮಳೆ
ಗೆ ಹುಲ್ಲಿನ ಮಾಡು
ಸೋರುವ ಸೂರು
ಇಟ್ಟ ಆಯ್ದಾನಗಳಲ್ಲಿ
ನೀರು ಟಿಪ್ ಟಿಪ್
ಸದ್ದು ಕದ್ದದ್ದು
ಇರುಳ ನಿದಿರೆಯ ಹಾಡು
ಕಾಡ ಹಳ್ಳಿಗಳೆಲ್ಲ
ದ್ವೀಪ
ದೀಪಹಚ್ಚಲಾಗದ ಅಸಹಾಯಕತೆಯ
ಕಣ್ಣಲ್ಲೂ ನಿಲ್ಲದ ಮಳೆ
ಒಂದೇ ಸಮನೆ ಬಿದ್ದ ಮಳೆ
ಗೆ ರವಿ ಕಾಣೆ
ರಾಹುಕೇತುವಾದ ಮೋಡ
ಕಾಡೀಗ
ಮೌನ ವೃತ
ರಜಾಯಿಯೊಳಗೆ
ಚಳಿಯ ಕಾದಾಟ
ಹರಿವ ನೀರು
ಗಿಡ ಗಂಟಿ ಹುಲ್ಲ ಮೈಯೇರಿ
ನಿಂತಿದೆ ಆಗಸಕೆ
ಕನ್ನಡಿಯಾಗಿ ಹೊಳೆ
ದು ಅದರ ಪಾದದಡಿಯಲಿ
ಉಸಿರುಗಟ್ಟಿ ಮಲಗಿದ
ಸಸಿಗಳದ್ದು ಶವಾಸನದ
ಆಯಸ್ಸು
ಒಂದೇ ಸಮನೆ ಬಿದ್ದ ಮಳೆ
ಗೆ ಪ್ರತಿ ಘಟ್ಟಕೂ ನಡುಕ
ಮಣ್ಣು ಕಲ್ಲು ಜಾರಿಸಿ
ಗುಡುಗುಟ್ಟಿದರೆ
ಬೇರು ಸಡಿಲಾಗಿ
ಮರ ಮಲಗುವ
ಖಚಿತ ಜಾತಕ
ಜೋಯಿಡಾದಲ್ಲಿ ಮಳೆಯಾದರೆ
ಕಾಳಿಗೆ ಬಲು ಪ್ರೀತಿ
ತೆರೆದ ಗೇಟಿನಿಂದ ಹಾರಿ
ಸಮುದ್ರ ಸೇರುವ ಹುಕ್ಕಿ
– ಅಕ್ಷತಾ ಕೃಷ್ಣಮೂರ್ತಿ
ಜೊಯಿಡಾ ದ ವಾಸ್ತವತೆಯನ್ನು,ಅಲ್ಲಿನ ಶಾಲಾ ಮಕ್ಕಳು,ಶಿಕ್ಷಕರu ಗಳು,ಜನತೆ,ಅನುಭವಿಸುವ ವಾಸ್ತವ ಕವಿತೆಯಾಗಿ ಮೂಡಿಬಂದಿದೆ. ಅಕ್ಷತಾ ಕೃಷ್ಣ ಮೂರ್ತಿ ಮೂಲತಃ ಅಂಕೋಲಾ ದವರಾದರು ಜೊಯಿಡಾ ದ ಅಣಶಿ ಯಲ್ಲಿ ಶಾಲಾ ಶಿಕ್ಷಕರಾಗಿ ತಮ್ಮ ಅನುಭವಕ್ಕೆ ಬಂದದ್ದನ್ನು ಕವಿತೆಯಾಗಿ ಸುವಲ್ಲಿ ಅವರದು ಪಳಗಿದ,ಮಾಗಿದ,ಕೈ .ಕವಿತೆ ಅರ್ಥ ಗರ್ಭಿತ.ಧನ್ಯವಾದಗಳು .