ಕುಮಟಾ : ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ.17 ರಂದು ಕುಮಟಾ ತಾಲೂಕಿನ ಇತಿಹಾಸ ಕುರಿತಂತೆ ಜಿಲ್ಲಾ ಮಟ್ಟದ ಇತಿಹಾಸ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನ ಸಮಿತಿಯ ಸಂಚಾಲಕ ಹಾಗೂ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಪ್ರಮೋದ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಲೇಜಿನ ಐಕ್ಯೂಎಸಿ, ಇತಿಹಾಸ ಸಂಘ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘ ಇವುಗಳ ಸಹಯೋಗದಲ್ಲಿ ನಡೆಯುವ ಈ ಸಮ್ಮೇಳನದ ಉದ್ಘಾಟನೆಯನ್ನು ಅಂದು ಮುಂಜಾನೆ 10 ಗಂಟೆಗೆ ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಲಿದ್ದು, ಪ್ರಾಚಾರ್ಯೆ ವಿಜಯಾ ಡಿ.ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಸ್ತಾವಿಕ ನುಡಿಯನ್ನು ಸಂಚಾಲಕ ಪ್ರೊ.ಪ್ರಮೋದ ಹೆಗಡೆ ಆಡಲಿದ್ದು, ಧಾರವಾಡ ಕವಿವಿಯ ಪ್ರಾಚೀನ ಬಾರತ ಇತಿಹಾಸ ಮತ್ತು ಶಾಸನ ವಿಜ್ಞಾನ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ಶ್ರೀನಿವಾಸ ಪಾಡಿಗಾರ್ ದಿಕ್ಸೂಚನೆ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಯಾಗಿ ಕುಮಟಾದ ಡಾ. ಎ.ವಿ.ಬಾಳಿಗಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಜಿ.ನಾಯ್ಕ, ಇತಿಹಾಸ ತಜ್ಞ ಶ್ಯಾಮಸುಂದರ ಗೌಡ ಅಂಕೋಲಾ, ಕಾಲೇಜಿನ ಸಹ ಪ್ರಾಧ್ಯಾಪಕರಾದ ಪ್ರೊ. ಐ.ಕೆ.ನಾಯ್ಕ, ಪ್ರೊ.ವಿನಾಯಕ ಎಂ.ನಾಯಕ, ಡಾ.ಗೀತಾ ಜಿ. ನಾಯಕ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರು ವಿವಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಗಣಪತಿ ಗೌಡ ಅವರು ಕುಮಟಾ ತಾಲೂಕಿನ ರಾಜಕೀಯ ಇತಿಹಾಸ ವಿಷಯದ ಬಗ್ಗೆ ಪ್ರಬಂಧ ಮಂಡಿಸಲಿದ್ದು, ಕುಮಟಾ ತಾಲೂಕಿನ ಮೂರ್ತಿ ಶಿಲ್ಪ ಮತ್ತು ವಾಸ್ತು ಶಿಲ್ಪ ವಿಷಯದ ಬಗ್ಗೆ ಕಾರವಾರ ಸದಾಶಿವಗಡದ ಬಿ.ಜಿ.ವಿ.ಎಸ್. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೇಮಂತ್ ಭಟ್ ಪ್ರಬಂಧ ಮಂಡಿಸಲಿದ್ದಾರೆ. ಉತ್ತರ ಕನ್ನಡದಲ್ಲಿ ಸ್ವಾತಂತ್ರ್ಯ ಸಂಗ್ರಾಮ ವಿಷಯದ ಬಗ್ಗೆ ದಾಂಡೇಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಬಸವರಾಜ ಅಕ್ಕಿ ಪ್ರಬಂಧ ಮಂಡಿಸಿದರೆ, ಕುಮಟಾ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಬೆಳವಣಿಗೆ ಬಗ್ಗೆ ಕುಮಟಾದ ಡಾ.ಎ.ವಿ. ಬಾಳಿಗಾ ಕಾಲೇಜಿನ ಪ್ರಾಧ್ಯಾಪಕ ಡಾ. ಅರವಿಂದ ನಾಯಕ ಪ್ರಬಂಧ ಮಂಡನೆ ಮಾಡಲಿದ್ದಾರೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕುಮಟಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ವಿಜಯಾ ಡಿ. ನಾಯ್ಕ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಎ.ವಿ.ಬಾಳಿಗಾ ಕಾಲೇಜಿನ ನಿವೃತ್ತ ಪಾಧ್ಯಾಪಕರಾದ ಪ್ರೊ.ಆರತಿ ನಾಯಕ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ, ‘ಹಣತೆ ವಾಹಿನಿ’ ಸಂಪಾದಕ ಅರವಿಂದ ಕರ್ಕಿಕೋಡಿ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ಸಮ್ಮೇಳನದ ಸಂಚಾಲಕ ಪ್ರೊ. ಪ್ರಮೋದ ಹೆಗಡೆ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ
ಹಾಗೂ ಸಮ್ಮೇಳನದ ಸಹ ಸಂಚಾಲಕ ಪ್ರೊ. ಸಂದೇಶ ಎಚ್. ಅವರು ಪಾಲ್ಗೊಳ್ಳಲಿದ್ದಾರೆ.