ನಾನು ಹೊನ್ನಾವರ ತಾಲೂಕಿನ ಚಂದಾವರ ಚರ್ಚ್ ಬಳಿ ಬೈಕ್ ನಿಲ್ಲಿಸಿ ವಿನಾಯಕನಿಗೆ ಕಾಲ್ ಮಾಡಿದೆ. ಐದು ನಿಮಿಷದಲ್ಲೇ ಆತ ನಾನಿದ್ದಲ್ಲಿಗೆ ಬಂದ. ಆತನ ಕಣ್ಣಿನಲ್ಲಿ ಇನ್ನೂ ಮೂರು ದಿನಗಳ ನಿದ್ದೆ ತುಳುಕುತ್ತಿತ್ತು. ನನ್ನ ಕಾಲ್ ಹೋದ ತಕ್ಷಣ ಪ್ರೀತಿಯಿಂದ ನಿದ್ದೆಗಣ್ಣಿನಲ್ಲೇ ಸರಸರನೇ ಎದ್ದು ಬಂದಿದ್ದಾನೆ.
ನಾನು ಅವನಿಗೆ ಮೊದಲ ದಿನ ಕಾಲ್ ಮಾಡುವಾಗ ಆತ ಅಯೋಧ್ಯಾದಿಂದ ಟ್ರೇನ್ ನಲ್ಲಿ ಬರುತ್ತಿದ್ದ. ನನ್ನ ಪರಿಚಯ ಆತನೊಂದಿಗೆ ಮಾಡಿಕೊಂಡು, ಅವನ ಬಗ್ಗೆ ನನಗಿದ್ದ ಅಲ್ಪಸ್ವಲ್ಪ ಮಾಹಿತಿಯನ್ನು ಅವನೊಂದಿಗೆ ಹಂಚಿಕೊಂಡೆ. ‘ನಿನ್ನನ್ನು ನೋಡಬೇಕಾಗಿತ್ತು ವಿನಾಯಕ್. .’ಹಣತೆ ವಾಹಿನಿ’ಗೆ ನಿನ್ನ ಕುರಿತು ನಾಲ್ಕು ಸಾಲು ಬರೆಯೋಣ ಅಂತ ಕಾಲ್ಮಾಡ್ತಿದ್ದೇನೆ’ ಅಂದೆ. ಆತ ‘ಆಗಲಿ ಸರ್, ನಾಳೆ ಬೆಳಿಗ್ಗೆ ಊರಲ್ಲಿ ಇರ್ತೇನೆ. ಮೂರು
ದಿನಗಳಿಂದ ಟ್ರಾವೆಲ್ ಮಾಡ್ತಿದ್ದೇನೆ. ಈಗ ಹತ್ತಿರ ಹತ್ತಿರ ಇದ್ದೇನೆ. ನಾಳೆ ಮಧ್ಯಾಹ್ನ ಭೇಟಿ ಆಗೋಣವಾ. ಚಂದಾವರ ಚರ್ಚ್ ಬಳಿ ಬನ್ನಿ. ಅಲ್ಲಿಗೆ ನಾನೇ ಬರ್ತೇನೆ’ ಅಂದ. ‘ಆಗಲಿ’ ಎಂದು ನಾನು ಕಾಲ್ ಕಟ್ ಮಾಡಿದೆ.

ಮರುದಿನ ಚಾಂದಾವರ ಚರ್ಚ್ ಬಳಿ ನಮ್ಮಿಬ್ಬರ ಭೇಟಿ. ತನ್ನ ಪರಿಚಯ ಮಾಡಿಕೊಂಡ. ಹೊನ್ನಾವರದ ಕೆಕ್ಕಾರ ಗ್ರಾಮದ ತುಳಸು ಗೌಡರ ಮಗ ಆತ. ಬಡತನದ ಕುಟುಂಬ. ಅದಕ್ಕಾಗಿಯೇ ಎಸ್.ಎಸ್.ಎಲ್.ಸಿ. ವರೆಗೆ ಓದಿ ಅರ್ಧಕ್ಕೆ ನಿಲ್ಲಿಸಿದ. ಮುಂದೆ? ಬೆಳಕು ಇಲ್ಲದ ಹಾದಿ. ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಯಾರದ್ದೋ ಬೆನ್ನು ಹಿಡಿದು
ಪುಣೆಯ ಒಂದು ಚಹಾ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಬರುವ ಸಣ್ಣ ಸಂಬಳದಲ್ಲೇ ತಾನೂ ಇಟ್ಟುಕೊಂಡು ಮನೆಗೂ ಕಳುಹಿಸಿದ.
ಬದುಕು ಸಾಗುತ್ತಿತ್ತು. ಆದರೆ ಅವನೊಳಗೆ ಒಬ್ಬ ಕಲಾವಿದ ಮಿಸುಕಾಡುತ್ತಿದ್ದ. ಆ ಕಲಾವಿದನಿಗೆ ಹೇಗೆ ಈಚೆ ಬರಬೇಕು ಎಂದು ಗೊತ್ತಾಗಲಿಲ್ಲ. ಚಹಾ ಅಂಗಡಿಯಲ್ಲೂ ಏನೇನೋ ಮನಸ್ಸಿಗೆ ಕಂಡದ್ದೆಲ್ಲ ಬಿಳಿ ಹಾಳೆ ಸಿಕ್ಕಾಗಲೆಲ್ಲ ಗೀಚುತ್ತಲೇ ಇದ್ದ. ಒಮ್ಮೆ ಊರಿಗೆ ಬರುತ್ತಾನೆ. ಕೆಕ್ಕಾರದ ಗ್ರಾಮದೇವಿ ದೇವಸ್ಥಾನದ ಎದುರಿನ ವೀರಗಂಬ ಶಾಸನವನ್ನು ತದೇಕ ಚಿತ್ತದಿಂದ ನೋಡುತ್ತಾನೆ. ನಿತ್ಯ ಹೋಗಿ ಅದೇ ಕಂಬ ನೋಡುತ್ತ ನಿಂತ. ಚಿಕ್ಕ
ವಯಸ್ಸಿನಿಂದಲೂ ದೇವಸ್ಥಾನಕ್ಕೆ ಹೂವು ಹಾಕಲು ಹೋಗುವಾಗ ಆ ವೀರಗಂಬ ಈತನನ್ನು ಸೆಳೆಯುತ್ತಲೇ ಇತ್ತು. ಒಂದು ಹಾಳೆಯಲ್ಲಿ ಅದೇ ವೀರಗಂಬದಲ್ಲಿನ ಕುದುರೆ, ಆನೆ, ಶಿವಲಿಂಗ, ಕಾದಾಡುತ್ತಿರುವ ಸೈನಿಕರ ಚಿತ್ರ ಎಲ್ಲವನ್ನೂ ಬಿಡಿಸಲು ಪ್ರಯತ್ನಿಸಿದ. ತಾನೂ ಶಿಲ್ಪಿಯಾಗಬೇಕು ಎಂದು ನಿರ್ಧಾರ ಮಾಡಿಯೇ ಬಿಟ್ಟ. ಅಜ್ಜ ಹನುಮಂತ ಗೌಡರಿಗೆ, ಅಪ್ಪ ತುಳಸು ಗೌಡರಿಗೆ ಹೀಗೆ ಯಾರಿಗೂ ಶಿಲೆ ಕೆತ್ತನೆ ಕೆಲಸವೂ ಗೊತ್ತಿಲ್ಲ.

ವಿನಾಯಕ ಈ ಹುಚ್ಚು ಸಾಹಸದ ಕನಸು ಕಟ್ಟಿಕೊಂಡ. ಕನಸಿಗೆ ರೆಕ್ಕೆಪುಕ್ಕ ಬಂದಂತೆ ಕಾರ್ಕಳದಲ್ಲಿ ಕೆನರಾ ಬ್ಯಾಂಕ್ ಪ್ರಾಯೋಜಿತ ಸಿ.ಇ.ಕಾಮತ್ ಇನ್ಸ್ಟಿಟ್ಯೂಟ್ ಫಾರ್ಆರ್ಟಿಸನ್ (C E Kamath Institute for Artisan) ತರಬೇತಿ ಸಂಸ್ಥೆ ಬಗ್ಗೆ ತಿಳಿದು ಅಲ್ಲಿ ಹೋಗಿ ಹೆಸರು ನೋಂದಾಯಿಸಿಕೊಂಡ. 18 ತಿಂಗಳ ಕೋರ್ಸ್ ಅದು. ಅಲ್ಲಿ ಒಮ್ಮೆ ಒಳಗೆ ಹೋದರೆ ಮತ್ತೆ ಹೊರ ಬೀಳುವುದು 18 ತಿಂಗಳ ನಂತರವೇ. ಅನಂತರ ವಿನಾಯಕ
ಹಿಂತಿರುಗಿ ನೋಡಿಯೇ ಇಲ್ಲ. ಅಲ್ಲಿಂದ ಹೊರ ಬಿದ್ದ ಮೇಲೆ ಬೆಂಗಳೂರಿನ ಹೆಸರಾಂತ ಶಿಲ್ಪಿಗಳಾದ ಸುರೇಶ್ ಗುಡಿಗಾರ್, ಅಶೋಕ್ ಗುಡಿಗಾರ್ ಅವರಲ್ಲಿ 3 ವರ್ಷ ಕೆಲಸ ಮಾಡಿದ. ಆಗಲೇ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಕೋಲಾರ, ತುಮಕೂರು,
ರಾಮನಗರ ಮುಂತಾದೆಡೆ ಹಮ್ಮಿಕೊಳ್ಳುತ್ತಿದ್ದ 15 ದಿನಗಳ ಕ್ಯಾಂಪ್ ಗಳಲ್ಲೂ
ಪಾಲ್ಗೊಂಡು ಕ್ರಿಯೇಟಿವ್ ಆರ್ಟ್ ನಲ್ಲಿನ ಬೇರೆ ಬೇರೆ ಮೂರ್ತಿಗಳನ್ನು ಮಾಡಿ ಮೆಚ್ಚುಗೆ ಗಳಿಸಿದ. ಈಗಲೂ ತುಮಕೂರಿನ ಬೂರಿನ ಕಣಿವೆ ಡ್ಯಾಂ ನಲ್ಲಿ ವಿನಾಯಕ ಗೌಡ ಮಾಡಿದ ಮಹಾತ್ಮಾ ಗಾಂಧೀಜಿಯ ಪ್ರತಿಮೆ ಗಮನ ಸೆಳೆಯುತ್ತದೆ. ಕೋಲಾರದಲ್ಲಿ ಮಾಡಿದ ಶಿಲೆಯ ಎರಡು ಜಿಂಕೆಗಳು ಗಮನ ಸೆಳೆಯುತ್ತವೆ. ಬೆಂಗಳುರು ವಿಶ್ವವಿದ್ಯಾಲಯದಲ್ಲಿ ವಿನಾಯಕ ಮಾಡಿದ ಪ್ರಕೃತಿ ಬುದ್ಧ ಇಂದಿಗೂ ಧ್ಯಾನಸ್ಥನಾಗಿ ಬೋಧಿವೃಕ್ಷದ ಕೆಳಗೆ ಕುಳಿತು ಜನರಿಗೆ ಶಾಂತಿ ಸಂದೇಶ ನೀಡುತ್ತಲೇ ಇದ್ದಾನೆ.

‘ನನಗೆ ಬೆಂಗಳೂರಿನಲ್ಲಿ ಚಿತ್ರಕಲಾ ಪರಿಷತ್ ನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿ ಶಿಲ್ಪ ಶಾಸ್ತ್ರ ಕಲಿಯ ಬೇಕೆಂಬ ಆಸೆ ಬಹಳ ಇತ್ತು. ಆದರೆ ವರ್ಷಕ್ಕೆ 80 ಸಾವಿರ ರೂಪಾಯಿ ಕಟ್ಟಲು ತನ್ನಂಥವನಿಂದ ಸಾಧ್ಯವಿಲ್ಲದ ಮಾತು. ಹಾಗಾಗಿ ಆ ಆಸೆ ಅಲ್ಲಯೇ ಚಿವುಟಿಕೊಂಡೆ’ ಅಂತ ಬೇಸರ ಪಡುತ್ತಾನೆ.

ಟ್ರೆಡಿಶನಲ್ ಆರ್ಟ್ ಬಗ್ಗೆಯೇ ಹೆಚ್ಚು ಆಸಕ್ತಿ ಇರುವ ವಿನಾಯಕ ಗೌಡ ತಾನು ಊರಿನಲ್ಲೇ
ಸಣ್ಣ ಶಿಲ್ಪ ಉದ್ಯಮ ಮಾಡಬೇಕೆಂದು ಕೆಕ್ಕಾರಿಗೆ ಬಂದು ಚಂದಾವರ ಹೊನ್ನಾವರ ರಸ್ತೆ
ಬದಿಯಲ್ಲಿ ಒಂದು ಸಣ್ಣ ಚಪ್ಪರ ಕಟ್ಟಿಕೊಂಡು ಶಿಲ್ಪ ಕೆತ್ತನೆ ಆರಂಭಿಸಿಯೇ ಬಿಟ್ಟ.
ಕಾರ್ಕಳದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಲ್ಲುಗಳನ್ನೂ ತರಿಸಿ ಹಾಕಿಕೊಂಡ. ಆದರೆ
ಇಲ್ಲಿ ದೊಡ್ಡ ದೊಡ್ಡ ದೇವರ ಮೂರ್ತಿಗಳನ್ನು ಮಾಡಲು ಹೇಳುವವರು ಕಡಿಮೆ. ನಾಗರ,
ಮಾಸ್ತಿ, ಜಟಕ ಇಂಥ ಪ್ರತಿಮೆಗಳನ್ನೇ ಮಾಡಲು ಹೆಚ್ಚು ಹೆಚ್ಚು ಗಿರಾಕಿ ಬರಲು ಆರಂಭಿಸಿದರು. ಅದೇ ಸಂದರ್ಭದಲ್ಲಿ ಕೊರೋನಾ ಪೀಡೆ ಬಂದು ವಿನಾಯಕನ ಬದುಕು, ಕನಸು ಎಲ್ಲವನ್ನೂ ನುಚ್ಚು ನೂರು ಮಾಡಿತು. ಕಂಗಾಲಾದ ಹುಡುಗ ಕಾರ್ಕಳದಿಂದ ತರಿಸಿದ ಲಕ್ಷಾಂತರ ರೂ ಬೆಲೆ ಬಾಳುವ ಕಲ್ಲುಗಳನ್ನೆಲ್ಲ ರಸ್ತೆ ಬದಿಯಲ್ಲೇ ಬಿಟ್ಟು ಯಾರ್ಯಾರದೋ ಕೈ ಕೆಳಗೆ ಕೆಲಸ ಮಾಡಲು ಆರಂಭಿಸಿದ. ಇದೀಗ ಬೈಂದೂರಿನ ಪ್ರಶಾಂತ ಆಚಾರ್ಯ ಅವರೊಟ್ಟಿಗೆ ಕೆಲಸ ಮಾಡುತ್ತಿದ್ದಾನೆ. ರಸ್ತೆ ಬದಿಯಲ್ಲಿ ಬಿದ್ದ ಬೆಲೆ ಬಾಳುವ ಕಾರ್ಕಳದ ಕಲ್ಲುಗಳು ಅನಾಥವಾಗಿ ಮೈಚೆಲ್ಲಿ ಬಿದ್ದಿವೆ.
ಇದೀಗ ವಿನಾಯಕನ ‘ಅಯೋಧ್ಯಾ ಕಾಂಡ’ ಹೇಗಿತ್ತು ಅಂತ ನೋಡೋಣ :
ವಿನಾಯಕ ತನ್ನ ಬದುಕಿನಲ್ಲಿ ಏರಿದ್ದೆಲ್ಲವೂ ಅನಿರೀಕ್ಷಿತ ಮೆಟ್ಟಿಲುಗಳೇ. ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Rama Mandir) ಕೆಲಸ ಮಾಡುವ ಅವಕಾಶ ಕೂಡ ಹೇಳಿಕೇಳಿ ಬಂದಿದ್ದಲ್ಲ. ಹುಬ್ಬಳ್ಳಿಯ ಹಿರಿಯ ಶಿಲ್ಪಿ ರವೀಂದ್ರ ಆಚಾರ್ ಅವರಿಂದ ವಿನಾಯಕನಿಗೆ ಅನಿರೀಕ್ಷಿತ ಫೋನ್ ಕರೆ ಬರುತ್ತದೆ. ಅವರಿಗೆ ಹಿರಿಯ ಶಿಲ್ಪಿಯೊಬ್ಬರು ಇವನ ಕೆಲಸ ನೋಡಿ ರವೀಂದ್ರ ಆಚಾರ್ ಅವರಿಗೆ ವಿನಾಯಕನ ಫೋನ್ ನಂಬರ್ ಕೊಟ್ಟಿರುತ್ತಾರೆ.
ಅವರು ಫೋನ್ ಮಾಡಿ ಪ್ರೊಫೈಲ್ ಕಳುಹಿಸಲು ಹೇಳುತ್ತಾರೆ. ವಿನಾಯಕ ಅಯೋಧ್ಯೆಯಲ್ಲಿ ಕೆಲಸ ಮಾಡುವ ಉಮೇದಿಯಲ್ಲಿ ತನ್ನ ಪ್ರೊಫೈಲ್ ಕಳುಹಿಸುತ್ತಾನೆ. ಆಯ್ಕೆ ಆಗಿಯೇ ಬಿಡುತ್ತಾನೆ. ಮರುಕ್ಷಣವೇ ಒಬ್ಬನೇ ಅಯೋಧ್ಯೆಗೆ ಹೊರಡಲು ಟ್ರೇನ್ ಹತ್ತೇ ಬಿಡುತ್ತಾನೆ. ಮೂರು ದಿನ ಪ್ರವಾಸ ಮಾಡಿ ಅಯೋಧ್ಯೆಯಲ್ಲಿ ಕಾಲಿಡುತ್ತಿದ್ದಂತೆಯೇ ಈ ಹುಡುಗನಿಗೆ ರೋಮಾಂಚನ ಅನುಭವ. ಆ ನೆಲಕ್ಕೆ ಕೈ ಮುಗಿದು ರವೀಂದ್ರ ಆಚಾರ್ ಅವರನ್ನು ಭೇಟಿ
ಯಾಗುತ್ತಾನೆ.

ಮರುದಿನವೇ ಕೆಲಸ ಆರಂಭ. ಸುಮಾರು ಮೂರು ಸಾವಿರ ಶಿಲ್ಪಿಗಳ ಉಳಿ ಏಟಿನ ಶಬ್ದಗಳು
ಕಿವಿಗೆ ಕೇಳಿಸುತ್ತಲೇ ಇರುತ್ತದೆ. ದೊಡ್ಡ ದೊಡ್ಡ ಕಲ್ಲುಗಳು ಲಾರಿಗಳ ಮೂಲಕ ಬರುತ್ತಲೇ
ಇರುತ್ತವೆ. ನೂರಾರು ಹಿಟಾಚಿ, ಜೆಸಿಬಿ ಗಳು ಮಣ್ಣು ಅಗಿಯುತ್ತಿವೆ. ದೊಡ್ಡ ದೊಡ್ಡ ಕ್ರೇನ್
ಗಳು ಕಲ್ಲಿನ ಪಿಲ್ಲರ್ ಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುತ್ತಲೇ ಇವೆ.
ರಾಮ ಮಂದಿರದ ಆವರಣದ ತುಂಬ ವಿಪರೀತ ಸಶಸ್ತ್ರಧಾರಿ ಭದ್ರತಾ ಸಿಬ್ಬಂದಿಗಳಿರುತ್ತಾರೆ.
ಒಮ್ಮೆ ಒಳಗೆ ಹೋದ ಮೇಲೆ ಯಾರನ್ನೂ ಹೊರಗೆ ಬಿಡುವುದಿಲ್ಲ. ಅಷ್ಟೊತ್ತಿಗಾಗಲೇ ತುಂಬ ಪಿಲ್ಲರ್ ಗಳನ್ನು ನಿಲ್ಲಿಸಿ ಒಂದು ಹಂತದ ಮಂದಿರವನ್ನು ನಿರ್ಮಿಸಲಾಗಿದೆ. ವಿನಾಯಕನಂಥ ಶಿಲ್ಪಿಗಳ ಕೆಲಸ, ನಿಲ್ಲಿಸಿದ ಫಿಲ್ಲರ್ ಗಳ ಮೇಲೆ ಶಿಲ್ಪ ಕೆತ್ತನೆ ಮಾಡುವುದು.
ಒಂದು ಪಿಲ್ಲರ್ ಮೇಲೆ 20 ಬೇರೆ ಬೇರೆ ದೇವರ ವಿಗ್ರಹಗಳು ಇರುತ್ತವೆ. ನಾಲ್ಕು ಮೈಗೆ ನಾಲ್ಕು ಗಣಪತಿ ಶಿಲ್ಪ ಮೂಡಬೇಕು. ಅದರಲ್ಲಿ ಎರಡು ಗಣಪತಿ ಶಿಲ್ಪವನ್ನು ನಮ್ಮ ಕೆಕ್ಕಾರದ ಹುಡುಗ ವಿನಾಯಕ ಕೆತ್ತಿದ್ದಾನೆ ಎಂಬುದೇ ನಮಗೆಲ್ಲ ಹೆಮ್ಮೆ.

‘ಒಮ್ಮೇಲೇ ಶಿಲ್ಪ ಕೆತ್ತನೆ ಮಾಡುವುದಲ್ಲ. ಹಾಗೆ ಮಾಡುವ ಮೊದಲು ಇವರು ತಾವು
ಮಾಡುವ ಗಣೇಶನ ಶಿಲ್ಪ ಕಲಾಕೃತಿಯ ಡ್ರಾಯಿಂಗ್ ಮಾಡಿ ಅಲ್ಲಿಯ ಇಂಜಿನಿಯರ್ಸ್ ಗೆ
ತೋರಿಸಬೇಕು. ಅದರಲ್ಲಿ ಕರೆಕ್ಷನ್ ಇದ್ದರೆ ಅವರು ತಿಳಿಸುತ್ತಾರೆ. ಶಿಲ್ಪ ಕೆತ್ತನೆಯಾದ ನಂತರ
ಮತ್ತೆ ಇಂಜಿನಿಯರ್ಸ್ ನೋಡುತ್ತಾರೆ ಮಾತ್ರವಲ್ಲ, ರಾಮ ಮಂದಿರದ ಸಮಿತಿಯ
ಪ್ರತಿನಿಧಿಗಳೂ ಬಂದು ನೋಡುತ್ತಾರೆ. ಅವರಿಗೆ ಸರಿ ಅನಿಸಿದರೆ ಒಪ್ಪಿಗೆ ನೀಡುತ್ತಾರೆ.
ಇಲ್ಲದಿದ್ದರೆ ಮತ್ತೆ ಕೆಲ ಕರೆಕ್ಷನ್ ಹೇಳುತ್ತಾರೆ. ವಿನಾಯಕ್ ಅಲಂಕಾರದ ಗಣೇಶನ ಶಿಲ್ಪ ಕೆತ್ತಿ
ಶಹಬ್ಬಾಸ್ ಅನಿಸಿಕೊಂಡು ಬಂದಿದ್ದಾನೆ’ ಎಂದು ಹಿರಿಯ ಶಿಲ್ಪಿ ರವಿಂದ್ರ ಆಚಾರ್
ತಿಳಿಸಿದ್ದಾರೆ. ‘ಹಣತೆ ವಾಹಿನಿ’ ಪರವಾಗಿ ಧಾರವಾಡದ ರವೀಂದ್ರ ಆಚಾರ್ ಅವರನ್ನು ನಾನು ಸಂಪರ್ಕಿಸಿದಾಗ ವಿನಾಯಕ ಗೌಡನ ಪರವಾಗಿ ತುಂಬ ಅಭಿಮಾನದ ಮಾತುಗಳನ್ನಾಡಿದ್ದಾರೆ.
‘ತುಂಬ ಪ್ರತಿಬಾವಂತ ಹುಡುಗ ವಿನಾಯಕ. ನಾನು ಮೊದಲೇ ಅಯೋಧ್ಯೆ ರಾಮ ಮಂದಿರದ
ಕೆಲಸಕ್ಕೆ ಹೋಗಿದ್ದೆ. ಆಗ ನನಗೆ ಕರ್ನಾಟಕದ ಶಿಲ್ಪಿಗಳಿಂದ ಕೆಲಸ ಮಾಡಿಸೋಣ ಅನಿಸಿತು.
ಅಲ್ಲಿ ಪ್ರತಿಭಾವಂತ ಶಿಲ್ಪಿಗಳ ಅಗತ್ಯ ತುಂಬ ಇತ್ತು. ಆಗ ಸಿಕ್ಕಿದವ ವಿನಾಯಕ. ರಾಮ
ಮಂದಿರದ ಗ್ರೌಂಡ್ ಪ್ಲೋರ್ ನಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಆಗಿರುತ್ತದೆ. ಅದೇ
ಮುಖ್ಯ ಪ್ರಾಂಗಣ. ಅದರ ಮೇಲೆ ರಾಮ ದರ್ಬಾರ್ ಇರುತ್ತದೆ. ರಾಮ ಲಲ್ಲಾ ಇರುವ
ಗ್ರೌಂಡ್ ಪ್ಲೋರ್ ನಲ್ಲಿ ಶಿವನ ಮಂಟಪ, ನವರಂಗ ಪಂಟಪ ಹೀಗೆ ಐದು ಮಂಟಪ
ಮಾಡಿದ್ದಾರೆ. ನವರಂಗ ಪಂಟಪದ ಪಿಲ್ಲರ್ ಒಂದರಲ್ಲಿ ಎರಡು ಗಣಪತಿಯನ್ನು
ಆಕರ್ಷಕವಾಗಿ ವಿನಾಯಕ ಕೆತ್ತಿದ್ದಾನೆ. ಇದೀಗ ಅಲ್ಲಿ ಪ್ರತಿಷ್ಠಾಪನಾ ಪೂಜಾ ಕಾರ್ಯುದ
ಸಿದ್ಧತೆಗಳು ನಡೆಯುತ್ತಿರುವುದರಿಂದ ಮತ್ತು ವಿಪರಿತ ಭದ್ರತೆ ಒದಗಿಸಿದ್ದಾರೆ. ಹೀಗಾಗಿ ಎಲ್ಲ
ಶಿಲ್ಪಿಗಳನ್ನು ಮನೆಗೆ ಕಳುಹಿಸಿದ್ದಾರೆ. ರಾಮ ಮಂದಿರ ಉದ್ಘಾಟನೆಯ ಬಳಿಕ ಮತ್ತೆ ಕೆಲಸ
ಆರಂಭವಾಗುತ್ತದೆ. ಆಗ ಪುನಃ ವಿನಾಯಕನನ್ನು ಕರೆಸಿಕೊಳ್ಳುತ್ತೇವೆ’ ಎಂದು ರವೀಂದ್ರ
ಆಚಾರ್ ಪ್ರತಿಕ್ರಿಯಿಸಿದ್ದಾರೆ.
‘ನಿನಗೆ ಸಂಭಾವನೆ ಸಮಾಧಾನಕರವಾಗಿದೆಯಾ’ ಅಂತ ನಾನು ವಿನಾಯಕನನ್ನು ಕೇಳಿದಾಗ
‘ಸರ್, ನಾನು ಹಣಕ್ಕಾಗಿ ಹೋಗಿಯೇ ಇಲ್ಲ, ಎಷ್ಟೋ ಜನ್ಮದ ಪುಣ್ಯವೆಂಬಂತೆ ದೇವರೇ ಈ
ಕೆಲಸ ಕೊಡಿಸಿದ್ದಾನೆ. ನಾನು ದುಡಿಮೆಯಲ್ಲೇ ದೇವರನ್ನು ಕಾಣುವವ’ ಎಂದು ಮುಗ್ಧವಾಗಿ
ನುಡಿಯುತ್ತಾನೆ. ನನಗೆ ಕೆಲಸ ಕೊಟ್ಟ ಹಿರಿಯ ಶಿಲ್ಪಿ ರವೀಂದ್ರ ಆಚಾರ್ ಅವರನ್ನು
ಅಭಿಮಾನದಿಂದ ನೆನೆಯುವ ವಿನಾಯಕ ಗೌಡ ತನ್ನೊಟ್ಟಿಗೆ ಸಹ ಶಿಲ್ಪಿಗಳಾದ ರಮೇಶ ಗದಗ,
ಕೀರ್ತಿ ಚಿತ್ರದುರ್ಗ, ರಾಜೇಶ ಶಿಮಮೊಗ್ಗ ಮುಂತಾದವರ ಸಹಕಾರವನ್ನೂ ಮರೆಯದೇ
ಹೇಳಿಕೊಳ್ಳುತ್ತಾನೆ.

ಕಳೆದ ವರ್ಷ ಕೆಕ್ಕಾರದಲ್ಲಿ ನಡೆದ ಹಾಲಕ್ಕಿ ಜಾನಪದ ಉತ್ಸವದ ಸಂದರ್ಭದಲ್ಲಿ ಊರಿನ
ನೀರಿನ ಟ್ಯಾಂಕ್ ಒಂದರ ಮೇಲೆ ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತರಾದ ಸುಕ್ರಿ ಗೌಡ ಮತ್ತು
ತುಳಸಿ ಗೌಡ ಅವರ ಚಿತ್ರವನ್ನು ತುಂಬ ಆಕರ್ಷಕವಾಗಿ ವಿನಾಯಕ ಬಿಡಿಸಿ ಹಿರಿಯ
ತಾಯಂದರಿಗೆ ಗೌರವ ಅರ್ಪಿಸಿದ್ದಾನೆ.

ಶ್ರೀರಾಮ ಲಂಕೆಗೆ ಹೋಗುವಾಗ ರಾಮಸೇತುವನ್ನು ವಾನರ ಸೈನ್ಯ ಕಟ್ಟುತ್ತದೆ. ಆಗ ಒಂದು
ಅಳಿಲು ಸಮುದ್ರ ತೀರದ ಮರಳನ್ನು ಮೈಗೆ ಅಂಟಿಸಿಕೊಡು ಸಿದ್ದವಾಗುತ್ತಿರುವ ಸೇತುವೆ
ಮೇಲೆ ಉದುರಿಸಿ ತನ್ನ ಕೈಲಾದ ಸೇವೆ ಮಾಡಿತು ಎಂದು ಕಥೆ ಹೇಳುತ್ತದೆ. ಹಾಗೆಯೇ
ನಮ್ಮೂರ ವಿನಾಯಕ ಗೌಡ ಕೂಡ ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಅಳಿಲು ಸೇವೆ ಮಾಡಿ
ಬಂದಿದ್ದಾನೆ. ಅವನೊಳಗಿನ ಶಿಲ್ಪಕಲೆ ಪ್ರತಿಭೆ ಬಗ್ಗೆ ಹೆಮ್ಮೆ ಪಡುವ ಸರದಿ ಹೊನ್ನಾವರ
ತಾಲೂಕಿನದ್ದು, ಉತ್ತರ ಕನ್ನಡ ಜಿಲ್ಲೆಯದ್ದು.