ನಾಡಿನ ಸಶಕ್ತ ಬರಹಗಾರ್ತಿ, ಪ್ರಗತಿಪರ ಚಿಂತಕಿ ಡಾ. ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಜೊತೆಜೊತೆಗೇ ಕಥೆ ಕವನದ ಝರಿ ಜಿನುಗಿಸುತ್ತ ಬಂದವರು. ತಮ್ಮ ‘ಮಂಥನ’ ಸಂಘಟನೆಯಡಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸರಣಿ ಕಾರ್ಯಕ್ರಮ ಹಮ್ಮಿಕೊಂಡು ಹೊಸ ಹೊಸ ಸಾಧ್ಯತೆಗಳಿಗಾಗಿ ಕಿಟಕಿ ಬಾಗಿಲು ತೆರೆದವರು.
ಜಿಡ್ಡುಗಟ್ಟಿದ ವ್ಯವಸ್ಥೆಯ ವಿರುದ್ಧ ಮುಲಾಜಿಲ್ಲದೇ ಧ್ವನಿ ಎತ್ತಿದವರು. ನಾಡಿನ ಬೇರೆ ಬೇರೆ ಸಂಘಟನೆಗಳಲ್ಲೂ ತೊಡಗಿಕೊಂಡು ಅಸಹಾಯಕರ ಪರ ನಿಂತವರು. ಸಮಾಜದದಲ್ಲಿನ ಅಸಮಾನತೆಯ ವಿರುದ್ಧ ಆಗಾಗ್ಗೆ ಮಾಧ್ಯಮಗಳಲ್ಲೂ ನಿಷ್ಠುರವಾಗಿ ಪ್ರತಿಕ್ರಿಯಿಸುತ್ತ ಬಂದವರು. ಕೊರೋನಾ ಸಮಯದಲ್ಲಂತೂ ನಗರಗಳ ಬಹುತೇಕ ಶ್ರೀಮಂತ ಆಸ್ಪತ್ರೆಗಳು ಮಾನವೀಯತೆಯನ್ನೇ ಮರೆತು ಬಡಬಗ್ಗರಿಂದ ಹಣ ಪೀಕುವಾಗ ಡಾ. ಅನುಪಮಾ ಕವಲಕ್ಕಿ ಗ್ರಾಮದ ತಮ್ಮ ‘ಜಲಜ ಜನರಲ್ ಮತ್ತುಮೆಟರ್ನಿಟಿ ಕ್ಲಿನಿಕ್’ ನಲ್ಲಿಯೇ ತಾಯಿಯಾಗಿ ಹಳ್ಳಿಗಾಡಿನ ಜನರನ್ನು , ಗರ್ಭಿಣಿಯರನ್ನು ನಗುನಗುತ್ತ ಸಲುಹಿದರು.
ಇದೀಗ ಡಾ. ಎಚ್.ಎಸ್.ಅನುಪಮಾ ತಮ್ಮ ಕರ್ಮಭೂಮಿ ಕವಲಕ್ಕಿಯಲ್ಲಿ, ಅವರದೇ ಮನೆಯಲ್ಲಿ ಮನುಷ್ಯಲೋಕದ ‘ಪ್ರಜ್ಞಾ ಜಾಗೃತಿಯನ್ನು ವಿಸ್ತರಿಸಲು ತಮ್ಮ ಮಿತಿಯಲ್ಲಿ ಪ್ರಯತ್ತಿಸುತ್ತಿದ್ದಾರೆ. ಮುವತ್ತು ವರ್ಷದೊಳಗಿನ ನಾಡಿನ ವಿವಿಧೆಡೆಯ ಆಸಕ್ತರಿಗಾಗಿಯೇ ‘ಪ್ರಜ್ಞಾ ಜಾಗೃತಿ ಶಿಬಿರ’ವನ್ನು ಪ್ರತಿ ತಿಂಗಳು ಎರಡನೇ ಶನಿವಾರ-ಬಾನುವಾರ ಹಮ್ಮಿಕೊಳ್ಳುತ್ತಿದ್ದಾರೆ. ಸುಮಾರು 25-30 ಆಸಕ್ತರಿಗಷ್ಟೇ ಇಲ್ಲಿ ಅವಕಾಶ ಇರುತ್ತದೆ. ಇನ್ನುಳಿದ ಆಸಕ್ತರು ಮುಂದಿನ ತಿಂಗಳು ಎರಡನೇ ಶನಿವಾರ-ಭಾನುವಾರ ಬರುವುದನ್ನೇ ಕಾಯಬೇಕು. ನಯಾಪೈಸೆ ಶುಲ್ಕವಿಲ್ಲದೇ ಈ ಶಿಬಿರ ನಡೆಸುವ ಡಾ. ಅನುಪಮಾ ತಮ್ಮ ಮನೆಯಲ್ಲಿಯೇ ಶಿಬಿರಾರ್ಥಿಗಳಿಗೆ ಉಚಿತವಾಗಿ ಊಟ,ತಿಂಡಿ, ವಸತಿ ವ್ಯವಸ್ಥೆ ಮಾಡಿ ಎರಡು ದಿನ ಅವರೊಟ್ಟಿಗೆ ತಾವೂ ಇದ್ದೂ ಕಳುಹಿಸಿಕೊಡುತ್ತಾರೆ.
ನಮ್ಮ ಸುತ್ತಮುತ್ತಲ ಸಮಾಜವನ್ನು, ಬಾಳಿನ ಅನುಭವಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಲೋಕಹಿತಕಾರಿಯಾಗಿ ಬದುಕುವುದು ಹೇಗೆಂಬ ಸಹಜ ಅರಿವು ಉಂಟಾಗುತ್ತದೆ. ಆದರೆ ಈ ಅರಿವು ಒಮ್ಮೆ ಬಂದು ಮುಗಿಯುವುದಲ್ಲ, ನಿರಂತರ ನಮ್ಮೊಳಗನ್ನು ತುಂಬುತ್ತಲೇ ಹೋಗಬೇಕು. ಅದಕ್ಕಾಗಿ ಬದುಕಿನ ಎಲ್ಲ ಮುಖಗಳಿಗೂ ನಮ್ಮನ್ನೊಡ್ಡಿಕೊಳ್ಳುತ್ತ, ವಿಶ್ಲೇಷಿಸಿಕೊಳ್ಳುತ್ತ ಹೋಗಬೇಕು. ಇದು ಪ್ರಜ್ಞಾ ಜಾಗೃತಿ. ಯುವಪೀಳಿಗೆಯೊಡನೆ ಒಡನಾಡುವ ಮೂಲಕ ಪರಸ್ಪರರಲ್ಲಿ ಪ್ರಜ್ಞಾ ಜಾಗೃತಿ ಉಂಟಾದೀತೆಂಬ ಭರವಸೆಯಿಂದ ಕಾರ್ಯಾಗಾರ ನಡೆಸುತ್ತಿದ್ದು ಯುವತಿ, ಯುವಕರಿಗೆ ನಡೆಯುವ ಪ್ರತ್ಯೇಕ ಶಿಬಿರಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬರುವ ಯುವಜನರು ಭಾಗವಹಿಸಿ ಸಂವಾದ, ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ. ಬದುಕಲು ಕಲಿಯಿರಿ’ ಎಂದು ಪುಸ್ತಕದಲ್ಲಿ ಬರೆದಿದೆ, ಓದಿ ಎಂದು ಹೇಳಿದರೆ ಇಂದಿನ ಯುವ ಸಮುದಾಯಕ್ಕೆ ತಲುಪುವುದೇ? ಕಷ್ಟ. ಆಪ್ತವಾಗಿ ಹೆಗಲ ಮೇಲೆ ಕೈಯಿಟ್ಟು ಕರೆದು ಬಳಿಸಾರಿ, ಅವರ ಮಾತಿಗಷ್ಟು ಅವಕಾಶ ಕೊಟ್ಟು, ಮನಸ್ಸು ಹಗುರಾಗಿಸಿಕೊಳ್ಳುವ ಬರಹದ ಬಾಗಿಲು ತೆರೆದು ಅವರನ್ನು ಒಳಗು ಮಾಡಿಕೊಳ್ಳಬೇಕು. ಹೌದು. ಆಗಷ್ಟೇ ಅವರು ನಮ್ಮ ಕಣ್ಣಳವಿನ ಬಯಲಲ್ಲಿ ಭೇಟಿಯಾಗಲು ಸಿಗುತ್ತಾರೆ. ‘ಪ್ರತಿ ತಲೆಮಾರೂ ಒಂದು ಹೊಸ ದೇಶ’ ಎಂಬ ಡಾ. ಬಿ. ಆರ್. ಅಂಬೇಡ್ಕರರ ಮಾತಿನಲ್ಲಿ ನಂಬಿಕೆಯಿಟ್ಟು ಹೊಸ ತಲೆಮಾರನ್ನು ಎದುರುಗೊಳ್ಳುವ, ಅವರೆದುರು ನಮ್ಮ ಬದುಕು-ಚಿಂತನೆಗಳನ್ನು ಮಂಡಿಸುವ, ನಮ್ಮ ಯೋಚನೆಗಳನ್ನು ಯುವಪೀಳಿಗೆಯ ವಿಶ್ಲೇಷಣೆಗೊಡ್ಡಿ ನವೀಕರಿಸಿಕೊಳ್ಳಬಯಸುವ, ನಾಳೆಗಾಗಿ ಭರವಸೆಯನ್ನು ತುಂಬಿಕೊಳ್ಳುವ ಪ್ರಯತ್ನವಾಗಿ ಈ ಶಿಬಿರ ನಡೆಯುತ್ತದೆ. ಜೀವನ್ಮುಖಿ ಪರಿಕಲ್ಪನೆಯೊಂದಿಗೆ ತನ್ನ ಪಾಡಿಗೆ ತಾನು ಕಳೆದ ಎರಡು ವರ್ಷಗಳಿಂದ ‘ಪ್ರಜ್ಞಾ ಜಾಗೃತಿ ಶಿಬಿರ’ ನಡೆಸುತ್ತ ಬಂದಿದ್ದಾರೆ.
ಯಾವುದೇ ಸಂಘ-ಸಂಸ್ಥೆ-ಸಂಘಟನೆ-ಎನ್‌ಜಿಒ ಮೂಲಕ ಇದನ್ನು ನಡೆಸುತ್ತಿಲ್ಲ. ನಮ್ಮನ್ನು ರೂಪಿಸಿದ ಸಮಾಜದ ಒಳಿತಿಗೆ ಅರ್ಥಪೂರ್ಣವಾದ ಏನನ್ನಾದರೂ ಹಿಂತಿರುಗಿಸಬೇಕೆಂಬ ಆಶಯದಿಂದ ಕವಲಕ್ಕಿಯ ತಮ್ಮ ಮನೆಯಲ್ಲಿ ಬಹಿರಂಗ-ಅಂತರಂಗಗಳ ಕಡೆಗೊಂದು ಕನ್ನಡಿ ಹಿಡಿದುಕೊಳ್ಳಲು ಯುವ ಮನಸುಗಳನ್ನು ಪ್ರೇರೇಪಿಸುವುದು, ವೈಯಕ್ತಿಕ, ಸಾಮಾಜಿಕ ಸಂಬಂಧಗಳ ಬಗೆಗೆ, ಸಮಾಜಸೇವೆಯ ಬಗೆಗೆ, ಸಾಮೂಹಿಕತೆಯ ಸೌಂದರ್ಯದ ಬಗೆಗೆ, ಮನುಷ್ಯ ಪ್ರೀತಿಯೆಂಬ ಅದ್ಭುತದ ಬಗೆಗೆ ತಿಳಿವು ಮೂಡಿಸುವುದು, ಘನತೆಯ, ಸರಳ ಸಮಾಜಮುಖಿ ಬದುಕನ್ನು ನಡೆಸುವ ಕನಸನ್ನು ಬಿತ್ತುವುದು ಡಾ. ಅನುಪಮಾ ಅವರ ಉದ್ದೇಶ. ಇದು ಅವರ ವೈದ್ಯ ವೃತ್ತಿ, ಬರವಣಿಗೆ, ಸಾಮಾಜಿಕ ಕಾರ್ಯಗಳು ಎಷ್ಟೋ ಅಷ್ಟೇ ಜವಾಬ್ದಾರಿಯನ್ನು, ಸಾರ್ಥಕ ಭಾವವನ್ನು ಈ ಶಿಬಿರಗಳು ಉದ್ದೀಪಿಸಿವೆ.
ಮೊದಲೇ ಹೇಳಿದಂತೆ ಶಿಬಿರಕ್ಕೆ ಬರಲಿಚ್ಚಿಸುವವರಿಗೆ ನೋಂದಾವಣಿ ಶುಲ್ಕವಿಲ್ಲ. ಕವಲಕ್ಕಿ ತಲುಪುವ ಖರ್ಚುವೆಚ್ಚವನ್ನು ಶಿಬಿರಾರ್ಥಿಗಳು ಭರಿಸಿಕೊಳ್ಳಬೇಕು. ಶಿಬಿರದ ಶಿಸ್ತಿಗೆ ಒಳಪಡಲು ಸಮ್ಮತಿಯಿದ್ದರೆ, ನಿಮ್ಮೆದೆಗಳಲ್ಲಿ ಸ್ನೇಹಭಾವ, ಜೀವಪ್ರೀತಿ, ಸಮಾಜಸೇವೆ- ಸಾಮೂಹಿಕತೆಯ ಉತ್ಸಾಹ ತುಂಬಿಕೊಂಡಿದ್ದರೆ ಅದೇ ಅರ್ಹತೆ.
ಪ್ರಜ್ಞಾ ಜಾಗೃತಿ ಶಿಬಿರದ ಚಿತ್ರಣ ಹೀಗಿರುತ್ತದೆ : ಮೊದಲ ದಿನ ಬೆಳಿಗ್ಗೆ ಶಿಬಿರಾರ್ಥಿಗಳು ಪ್ರಕೃತಿ ಸೌಂದರ್ಯದ ಗಣಿ ಉತ್ತರಕನ್ನಡ ಜಿಲ್ಲೆಯ ಬೆಟ್ಟ, ಕೋಟೆ, ದ್ವೀಪ, ನದಿ, ತೂಗುಸೇತುವೆ, ಚತುರ್ಮುಖ ಬಸದಿಗಳನ್ನು ಮಿನಿ ಬಸ್‌ನಲ್ಲಿ ನೋಡಿಬರುತ್ತಾರೆ. ಅಂದು ರಾತ್ರಿ ಉತ್ತರಕನ್ನಡದ ಚರಿತ್ರೆ, ಭೌಗೋಳಿಕ-ಸಾಂಸ್ಕೃತಿಕ- ಪ್ರಾಕೃತಿಕ ವಿವರಗಳನ್ನು ಅವರೊಡನೆ ಸ್ವತಃ ಡಾ. ಅನುಪಮಾ ಅವರೇ ಚರ್ಚಿಸುತ್ತಾರೆ. ಬಳಿಕ ಆರೋಗ್ಯ, ವಿಸ್ಮಯ ವಿಶ್ವ ಕುರಿತ ಮಾತುಕತೆ ನಡೆಸಿ ರಾತ್ರಿ ಆಗಸದಡಿ ಅರ್ಧತಾಸು ಮೌನ/ಅಂತರಂಗದಲ್ಲೊಂದು ಸುತ್ತು ಇರುತ್ತದೆ. ಪ್ರತಿಸಲವೂ ಯಾವುದಾದರೊಂದು ಆತ್ಮಚರಿತ್ರಾತ್ಮಕ ವಿಷಯದ ಬಗೆಗೆ ಹೆಸರು ನಮೂದಿಸದೇ ಒಂದುಪುಟದ ಬರವಣಿಗೆ ಮಾಡಲು ಹೇಳಲಾಗುತ್ತದೆ. ಎರಡನೆಯ ದಿನ ಬೆಳಿಗ್ಗೆ ಕವಲಕ್ಕಿ ಊರಿನಲ್ಲಿ ಶ್ರಮದಾನ ನಡೆಯುವುದು. ಬಳಿಕ ಇಡಿಯ ದಿನ ದೇಹ, ಲಿಂಗತ್ವ, ಲೈಂಗಿಕತೆ, ಮೊಬೈಲ್ ಬಳಕೆ, ಸೌಂದರ್ಯ ಪ್ರಜ್ಞೆ, ಮನೆಗೆಲಸ, ಕೊಳ್ಳುಬಾಕತನ, ಮೂಢನಂಬಿಕೆ, ಜಾತಿ, ಮೀಸಲಾತಿ, ಅಸ್ಪೃಶ್ಯತೆ, ಅತ್ಯಾಚಾರ, ಲೈಂಗಿಕ ಸಂಬಂಧಗಳು, ಕೌಟುಂಬಿಕ ಸಂಬಂಧಗಳೇ ಮೊದಲಾದ ವಿಷಯಗಳ ಮೇಲೆ ಗುಂಪು ಸಂವಾದ ನಡೆಯುತ್ತದೆ. ಬಳಿಕ ಅನಾಮಿಕರಾಗಿ ಬರೆದು ಕೊಟ್ಟದ್ದನ್ನು ಓದಿ ಆಪ್ತ ಸಮಾಲೋಚನೆ ನಡೆಯುತ್ತದೆ. ಸಂಜೆ ಆರು ಗಂಟೆಯವರೆಗೂ ಗುಂಪು ಚಟುವಟಿಕೆ ನಡೆದ ಬಳಿಕ ಅವಲೋಕನ ಮತ್ತು ವಿದಾಯ.
ಸಂಪರ್ಕ:ಡಾ. ಎಚ್. ಎಸ್. ಅನುಪಮಾ, ಜಲಜ ಜನರಲ್ ಮತ್ತು ಮೆಟರ‍್ನಿಟಿ ಕ್ಲಿನಿಕ್, ಕವಲಕ್ಕಿ ಅಂಚೆ, ಹೊನ್ನಾವರ ತಾಲೂಕು, ಉತ್ತರ ಕನ್ನಡ ಜಿಲ್ಲೆ, ಪಿನ್: 581361, Ph: 9480211320.ಕವಲಕ್ಕಿಯ ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ಮೇಲ್-ಮೆಸೇಜ್ ಮೂಲಕ ಅಥವಾ ಈ ಪೋಸ್ಟಿಗೆ ಉತ್ತರಿಸುವ ಮೂಲಕ ಹೆಸರು ನೀಡಿ. ಮೊದಲ 25 ಜನರಿಗೆ/ಒಂದು ಊರಿನ, ತಂಡದ 4-5 ಜನರಿಗೆ ಮಾತ್ರ ಅವಕಾಶ. ದಯವಿಟ್ಟು ಕರೆ ಮಾಡುವುದನ್ನು ತಪ್ಪಿಸಿ. ಹ್ಞಾಂ, ಅವಸರ ಬೇಡ. ಒಮ್ಮೆ ಹೆಸರು ಕೊಟ್ಟ ಮೇಲೆ ಬರಲೇಬೇಕು. ಯೋಚಿಸಿ, ನಿಮ್ಮ ಪುರುಸೊತ್ತು-ಹಬ್ಬ ಹರಿದಿನಗಳ ವಿಚಾರ ಮಾಡಿ ಹೆಸರು ಕೊಡಿ. (ದಯವಿಟ್ಟು ತುರ್ತು ಸಂದರ್ಭಗಳಿಗೆ ಮಾತ್ರ ಕರೆಯನ್ನು ಮೀಸಲಾಗಿರಿಸಿ.) .
2024 ಜನವರಿ ಎರಡನೆಯ ಶನಿವಾರ ಭಾನುವಾರ ಯುವಕರ ‘ಪ್ರಜ್ಞಾ ಜಾಗೃತಿ ಶಿಬಿರ ನಡೆಯಿತು. ಡಾ. ಎಚ್. ಎಸ್.ಅನುಪಮಾ ಅವರೇ ಶಿಬಿರದ ಕುರಿತಂತೆ ಹಂಚಿಕೊಂಡ ಆಪ್ತ ಅವಲೋಕನ ಇಲ್ಲಿದೆ.
ಗಮನಿಸಿ. – ಸಂಪಾದಕ.
ಯುವಜನರಿಗೆ ಬೇಕಿರುವುದು ಉಪದೇಶವಲ್ಲ I ವಿಶೇಷ ಚೇತನನ ಬಾಯಲ್ಲಿ ‘ಮುಕ್ಕಾಲೊಂದ್ಲೆ ಮಗ್ಗಿ !
ನಾವು ನೀವು ಪೂರ್ಣ ಸಂಖ್ಯೆಗಳ ಮಗ್ಗಿ ಹೇಳುತ್ತೇವೆ. ಆದರೆ ಇವ, ಬರೀ ಪೂರ್ಣ ಸಂಖ್ಯೆಗಳ ಮಗ್ಗಿ ಮಾತ್ರ ಹೇಳಬೇಕು ಯಾಕೆ? ನಾನು ಮುಕ್ಕಾಲೊಂದ್ಲೆ ಮಗ್ಗಿ ಹೇಳುವೆ’ ಎಂದು ಮುಕ್ಕಾಲೊಂದ್ಲೆ ಮುಕ್ಕಾಲು, ಮುಕ್ಕಾಲೆರಡ್ಲೆ ಒಂದೂವರೆ, ಮುಕ್ಕಾಲು ಮೂರ್ಲೆ ಎರಡೂ ಕಾಲು, ಮುಕ್ಕಾಲು ನಾಕ್ಲೆ ಮೂರು’ ಎಂದು ಒಂದೇ ಉಸಿರಿಗೆ ಮುಕ್ಕಾಲರ ಮಗ್ಗಿ ಹೇಳಿದ. ಎಲ ಎಲಾ, ಹೌದಲ್ಲ!? ಈ ಯೋಚನೆ ಹೊಳೆದವ ವಿಶೇಷ ಚೇತನನಾಗಿದ್ದ. ಲೋಕ ಯಾವುದು ಕಡಿಮೆ ಇದೆಯೆಂದು ತನ್ನ ನೋಡಿ ಭಾವಿಸುವುದೋ, ಅದು ಕಡಿಮೆಯಲ್ಲ. ಅದೂ ಒಂದು ಪೂರ್ಣವೇ ಎನ್ನುವುದನ್ನು ಮುಕ್ಕಾಲರ ಮಗ್ಗಿ ಹೇಳುವ ಮೂಲಕ ಅವನು ಸಾಧಿಸಿಕೊಂಡ ಹಾಗೆನಿಸಿತು. ಆತ್ಮವಿಶ್ವಾಸ, ಸ್ವಮರುಕವಿಲ್ಲದ ನಡವಳಿಕೆ ಗಮನ ಸೆಳೆಯುವಂತಿದ್ದವು.
ಇದು ಆದದ್ದು ಜನವರಿ 13, 14, ಶನಿವಾರ-ರವಿವಾರ ಕವಲಕ್ಕಿಯಲ್ಲಿ ಯುವಕರ ಪ್ರಜ್ಞಾ ಜಾಗೃತಿ ಶಿಬಿರ ನಡೆದಾಗ. ತುಮಕೂರು, ಜಮಖಂಡಿ, ಮದ್ದೂರು, ಸವದತ್ತಿ, ರಾಯಚೂರು, ಮಳವಳ್ಳಿ, ಮೈಸೂರು, ಬಳ್ಳಾರಿ, ಯಾದಗಿರಿ, ಹೊಸಪೇಟೆಗಳಿಂದ ವಿವಿಧ ವೃತ್ತಿ, ಅಭಿರುಚಿ, ಓದಿನ ಹಂತದಲ್ಲಿರುವ; ಕುಸ್ತಿಪಟು, ಅನಿಮೇಷನ್ ಡೈರೆಕ್ಟರ್, ಚಿತ್ರಕತೆ- ಹಾಡು ಬರೆವ, ಪಿಎಚ್ಡಿ ಮಾಡುತ್ತಿರುವ, ಸ್ವಿಗ್ಗಿಯಲ್ಲಿ ಖಾದ್ಯ ಪೂರೈಸಿ ನಾಲಗೆ ತಣಿಸುವ, ಕಸವಿಲೇವಾರಿಯಲ್ಲಿ ಆಸಕ್ತರಾಗಿರುವ, ಓದುಗುಳಿಯಾಗಿರುವ, ವ್ಯಂಗ್ಯ ಚಿತ್ರಕಾರರಾಗಿರುವ, ಆರ್. ಜೆ. ಆಗಿರುವ ಇಪ್ಪತ್ತೈದು ಯುವಕರು ಪ್ರಜ್ಞಾ ಜಾಗೃತಿ ಶಿಬಿರದ ಸಲುವಾಗಿ ಕವಲಕ್ಕಿಗೆ ಬಂದರು. ಅಬ್ಬರದ ನಗು, ಮೌನ, ವಿಷಾದ, ಉತ್ಸಾಹ ಮುಂತಾಗಿ ಮಿಶ್ರ ಮನೋಭಾವಗಳು ಒಂದಕ್ಕೊಂದು ಸಮತೋಲನಗೊಳ್ಳುತ್ತ ಮಿಳಿತಗೊಳ್ಳುತ್ತ ಅವರ ಕೆಳೆತನ ವಿಸ್ಮಯಕಾರಿಯಾಗಿ ಬೆಳೆಯಿತು. ಬರೀ ಸೆಲ್ಫಿ ತೆಗೆಯೋದಲ್ಲ, ಪ್ರಕೃತಿಯಲ್ಲಿ ಮನಸೆಳೆದದ್ದನ್ನು ತೆಗೆದು ಹಾಕಿ ಎಂಬ ಒಂದೇ ಸೂಚನೆಗೆ ಅಪರೂಪದ ವೀಡಿಯೋ, ಚಿತ್ರಗಳ ತೆಗೆದು ಗ್ರೂಪಿನಲ್ಲಿ ತುಂಬಿಸಿದರು. ಸಂಕ್ರಾಂತಿ ಹಬ್ಬ, ಅಕಾಲ ಮಳೆ ಎರಡನ್ನೂ ಲೆಕ್ಕಿಸದೆ ಬಂದವರು ಎರಡು ದಿನ ಸಾಲದು, ಮೂರು ದಿನ ಶಿಬಿರ ಮಾಡಿ’,ಕನಸಿನ್ಯಾಗ ಆದಂಗ ಅನಿಸೇತಿ’, ಮತ್ತೆ ಕರೀರಿ’,ದಿನ ಹ್ಯಂಗ ಹೋತಂತನೆ ತಿಳೀಲಿಲ್ಲರಿ’ ಮುಂತಾಗಿ ಹೇಳುತ್ತ ಈಗ ಹೊರಟಿದ್ದಾರೆ. ಚೆಲುವಿನ ನೆಲೆಗಳ ನೋಡಿಬಂದು ವಿಸ್ಮಯಗೊಂಡ ಮನಸುಗಳು ಬಳಿಕ ಒಂದೂವರೆ ದಿವಸದ ಸಂವಾದ, ಪ್ರಶ್ನೋತ್ತರ, ಚರ್ಚೆಯಲ್ಲಿ ತಮ್ಮ ಒಳಗಣ, ಹೊರಗಣವನ್ನು ತೆರೆದು, ತುಂಬಿ, ತುಂಬಿಸಿದ್ದಾರೆ.
ಯುವಜನರಿಗೆ ಬೇಕಿರುವುದು ಉಪದೇಶವಲ್ಲ, ನಾವು ನಂಬಿದಂತೆ ಬದುಕಿ ಅವರಿಗೆ ತೋರಿಸುವುದು. `ಈಗಿನ ಜಮಾನಾದ ಹುಡುಗ ಹುಡುಗೀರು ಬರೀ ಸೆಲ್ಫಿಯಲ್ಲಿ ಮುಳುಗಿರ್ತಾವೆ, ಅಕ್ಕ ಪಕ್ಕ ನೋಡಲ್ಲ, ಕೇಳಲ್ಲ’ ಎಂದು ಗೊಣಗಿದರೆ ಉಪಯೋಗವಿಲ್ಲ. ಕೆಳೆತನದಲ್ಲಿ ಬಳಿ ಸಾರಬೇಕು. ಬದುಕಿನಲ್ಲಿ, ಪ್ರಕೃತಿಯಲ್ಲಿ ಎಂತೆಂತಹ ಸಂಗತಿಗಳಿವೆ ಎಂಬ ಮಾಹಿತಿ ನೀಡಿ ದೂರ ನಿಲ್ಲಬೇಕು. ಹೊಸ ಹೊಳಹು ಅವರ ತಲೆಯಲ್ಲಿ ಬಿತ್ತಿದರೆ ಸಾಕು, ಅಗತ್ಯವಾದದ್ದನ್ನು ಬೆಳೆದುಕೊಳ್ಳುತ್ತಾರೆ. ಇದು ಶಿಬಿರದ ಯುವಜನರ ಒಡನಾಟದಲ್ಲಿ ಈ ಸಲ ಮತ್ತಷ್ಟು ಗಟ್ಟಿಯಾಯಿತು.
ಸೂರ್ಯ ದಿಕ್ಕು ಬದಲಿಸುವ ದಿನ ಸಂಕ್ರಾಂತಿ. ಪ್ರೇಮದಲಿ ಮೀಯಿಸಿ ಮಿಂದು, ಮನದಲೊಂದು ಭರವಸೆಯ ದೀಪ ಹಚ್ಚಿ ಹೊರಟ ಪ್ರಿಯ ಮಿತ್ರರೇ, ದಿಕ್ಕು ಬದಲಾಯಿಸುವ ಸ್ಪಷ್ಟ ಸೂಚನೆ ದೊರೆತ ಇಂದೇ ನಮಗೆ ಸಂಕ್ರಾಂತಿ. ಶುಭ ಹಾರೈಕೆಗಳು.
ಮಂಗಳೂರು: ಸಶಕ್ತ ರಂಗಕರ್ಮಿ, ರಾಜ್ಯ ಪ್ರಶಸ್ತಿ ಪುರಸ್ಕೃತ, ಚಲನ ಚಿತ್ರ ನಿರ್ದೇಶಕ, ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಅವರಿಗೆ ಡಾ. ಪಿ.ದಯನಂದ ಪೈ ಪ್ರಾಯೋಜಿತ ವಿಶ್ವ ಕೊಂಕಣಿ ಕೇಂದ್ರ ನೀಡುವ […]
ಇಂದಿನ ದಿನಗಳಲ್ಲಿ ನವೋದಯ ಪರೀಕ್ಷೆ ಈ ಹೆಸರು ಕೇಳದವರಿಲ್ಲ. ಈ ನವೋದಯಕ್ಕೆ ಆಯ್ಕೆಯಾಗಬೇಕು, ಆಯ್ಕೆಯಾಗಲು ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು… ಇದರಿಂದ ಒಂದು ರೀತಿಯ ಮರ್ಯಾದೆ ಸಮಾಜದಲ್ಲಿ ವಿದ್ಯಾರ್ಥಿಯಾದವನಿಗೆ ಹೆಚ್ಚುತ್ತದೆ ಎನ್ನುವುದು ಪಾಲಕರ ಮತ್ತು ವಿದ್ಯಾರ್ಥಿಗಳ ನಡುವೆ […]
ಅಂತೂ ಗಜಪ್ರಸವದಂತೆ ರಾಜ್ಯ ಬಿಜೆಪಿ ಘಟಕಕ್ಕೆಅಧ್ಯಕ್ಷರನ್ನಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ, ಶಿಕಾರಿಪುರ ಶಾಸಕಬಿ.ವೈ.ವಿಜಯೇಂದ್ರ ಅವರನ್ನು ಆ ಪಕ್ಷದ ಹೈಕಮಾಂಡ್ ನೇಮಕ ಮಾಡಿದೆ ಅನ್ನುವುದಕ್ಕಿಂತ ‘ಹೇರಿದೆ’ ಅಂದರೆಹೆಚ್ಚು ಸೂಕ್ತ. ಹಾಗಾಗಿ ವಿಜಯೇಂದ್ರ ದೊಡ್ಡ […]