ವಾಲ್ಮೀಕಿ ಕವಿಯಾದುದು ಈ ನೆಲದ ಬಹುದೊಡ್ಡ ಪುಣ್ಯ

‘ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣ ಶ್ಲೋಕ ರೇಷ್ಮೆ ತೊಗಲು’

ಕವಿ ಅಡಿಗರು ಹೇಳಿದ ಮಾತಿದು. ರೇಷ್ಮೆ ಹುಳು ತನ್ನ ಮೈಯಿಂದ ಜಿನುಗುವ ಮೃದುವಾದ ನೂಲಿನಿಂದ
ತನ್ನಗೂಡನ್ನು ಕಟ್ಟಿಕೊಳ್ಳುತ್ತದೆ. ಅದರ ಮೈಯೂ ಮೃದು. ಜಿನುಗುವ ನೂಲೂ ಮೃದು.

ಹೊರ ಮೈಯಲ್ಲಿ ಬತ್ತಲೆಯಾಗಿ ಒಳ ಮೈಯಿಂದ ದ್ರವಿಸುವ ನೂಲಿನಿಂದ ತನ್ನ ಗೂಡನ್ನು ಕಟ್ಟಿಕೊಂಡು ಮನುಷ್ಯರು ಉಸಿರಾಡುವ ಗಾಳಿಗದು ಗಟ್ಟಿಯಾಗುತ್ತ ಹೋಗುತ್ತದೆ. ಈ ಮೃದುತ್ವ ಜೇನಿಗೊದಗುವುದು ಅದು ಬತ್ತಲೆಯಾದ್ದರಿಂದ. ಜೇನು ಬತ್ತಲಾಗುತ್ತಲೇ ತನ್ನ ಸುತ್ತ ಕಟ್ಟಿಕೊಳ್ಳುವ ಗೂಡಿನಲ್ಲಿ ತನ್ನ ಉಸಿರಾಟವನ್ನು ಹಿಡಿದು ಬದುಕುತ್ತದೆ. ವಾಲ್ಮೀಕಿ ಕವಿಯಾದದ್ದು ಜೇನಿನ ಥರದ ತನ್ನಉಸಿರಾಟದ ಬಿಗಿಯಾದ ಬಂಧದಲ್ಲಿ! ಹುತ್ತ ಗಟ್ಟದೆ ಚಿತ್ತ ಮತ್ತೆ ಕೆತ್ತಿತೇನು ಪುರುಷೋತ್ತಮನ ಆ ಅಂಥರೂಪು ರೇಖೆ? ಇದು ನಮ್ಮ ಪುಣ್ಯ! ಹುತ್ತ ಗಟ್ಟಿ ಕಾದು ಬೇಡನೊಬ್ಬ ವಾಲ್ಮೀಕಿಯಾದ, ಕವಿಯಾದ. ಅವನೊಳಗಿನ ಸೃಷ್ಟಿಶೀಲ ಅಂತರಂಗ ಬಲಿಯತೊಡಗಿದ್ದು ಆಪರಿಯಲ್ಲಿ! ಅವನನ್ನುಆರಾಧಿಸುವ ಅರಿವಿಗೆ ಅವನು ದಕ್ಕಬೇಕಾದದ್ದು ಕವಿಯಾಗಿ ಮಾತ್ರವಲ್ಲ, ಹಿಂದಿನ ಪರಿಶ್ರಮವನ್ನು ಅರಿಯುವುದರಲ್ಲಿ! ಸುಮ್ಮನೆ ಬೇಡನೊಬ್ಬ ಮಹರ್ಷಿಯಾದುದ್ದಲ್ಲ. ಮಹರ್ಷಿಯಾದ ಮೇಲೆ ಅವನ ಮನಸ್ಸು ಕ್ರೌಂಚದ ಉದ್ವೇಗದ ಅಳಲಿಗೆ ಮಿಡಿಯಿತು; ನೋಯಿತು; ಸಿಟ್ಟು ಗೊಂಡಿತು. ತನ್ನ ಹಿಂದಿನ ವ್ಯಾಧತ್ವವನ್ನು ಸಂಪೂರ್ಣವಾಗಿ ಕಳಚಿಕೊಳ್ಳಲು ಅವನಿಂದ ಸಾಧ್ಯವಾಗದೇ ಶಪಿಸಿಯೇಬಿಟ್ಟ. ಶೋಕವು ಶ್ಲೋಕವಾಯಿತು. ಅಹಂ ಕಳಚಿತು. ಎಲ್ಲ ಜೀವ ರಾಶಿಗಳೂ ತನ್ನಂತೆಯೇ ಎಂದು ಭಾವಿಸಿದ ಮನಸ್ಸೊಂದು ಕ್ರೌಂಚಕ್ಕೆ ಹೇಗೆ ಮಿಡಿಯಿತೋ ಹಾಗೆ ಸೀತೆಯ ವಿರಹಕ್ಕೂ ಮಿಡಿಯಿತು‌, ಮಣಿಯಿತು. ಸ್ಥಿತಪ್ರಜ್ಞನಾಗಿಯೂ ಪ್ರಜ್ಞೆಯಿಂದ ಅನುಕ್ರಮಿಸಿದ ವಾಲ್ಮೀಕಿ ಕವಿಯಾದ. ಮಹರ್ಷಿಯೆನಿಸಿದ. ಕವಿಯಾದ್ದರಿಂದ ರಾಮಾಯಣ ದೊರೆಯಿತು.‌ ಮಹರ್ಷಿಯಾದ್ದರಿಂದ ಭಾರತೀಯ ಮೌಲ್ಯಗಳು ಔನ್ನತ್ಯದ ಪ್ರಮಾಣದಲ್ಲಿ ಒದಗಿತು. ಇದು ಈ ನೆಲದ ಪುಣ್ಯ. ಅವನ ವೇದನೆ- ಸಂವೇದನೆಯಲ್ಲಿ ರಾಮಾಯಣ ಹುಟ್ಟಿತು. ಇದು ಭಾರತದ ಸೌಭಾಗ್ಯ!

ವ್ಯಾಧನೊಬ್ಬ ಕವಿಯಾದರೂ, ಮಹರ್ಷಿಯಾದರೂ ಮನುಷ್ಯಪಾಡು ಅವನನ್ನು ಬಿಡಲಿಲ್ಲವೆಂಬುದಕ್ಕೆ
ಸೀತೆಯ ವಿರಹ ನಿದರ್ಶನ. ಕೊನೆಗಾದರೂ ಸುಖಾಂತ್ಯವನ್ನು ಕಾಣಬೇಕೆಂದು ಸೀತೆಯನ್ನು ಅವಳ ಮಕ್ಕಳೊಂದಿಗೆ ಅಯೋಧ್ಯೆಯ ಧರ್ಮ ಸಭೆಗೆ ಕರೆತರುತ್ತಾನೆ. ರಾಮನ ಅಯಣ ಇನ್ನು ಮುಂದಾದರೂ ಸುಖಕರವಾಗಿರಲೆಂಬ ಮಹತ್ವಾಕಾಂಕ್ಷೆಯಿಂದ! ಒಬ್ಬ ಮಹರ್ಷಿಗೆ ಈ ಬಗೆಯ ಸಂವೇದನೆ ಹುಟ್ಟುತ್ತದೆಂದಾದರೆ ಯಾವ ಮನುಷ್ಯನಿಗೂ ಮನುಷ್ಯ ಸಹಜ ಪಾಡಿನಿಂದ ಬಿಡುಗಡೆಯೇ ಇಲ್ಲವೇನೋ! ವಾಲ್ಮೀಕಿಗೂ ಸೀತಾರಾಮರ ವಿರಹದ ನೋವು ಗಾಢವಾಗಿ ತಟ್ಟಿರಬೇಕು. ರಾಮನಿರ್ಯಾಣ, ಕೃಷ್ಣನ ಅಂತ್ಯ, ಗಾಂಧಿಯ ಕೊನೆ, ರಾಮಕೃಷ್ಣ ಪರಮಹಂಸರ ದುರ್ವಿಧಿ, ಏಸುವಿನ ದುರಂತ್ಯವನ್ನು ನೋಡಿ, ಯಾರಿಗೂ ಮನುಷ್ಯ ಸಹಜ ಒದಗಬಹುದಾದ ಯಾವ ಬಂಧನಗಳಿಂದಲೂ ಮುಕ್ತಿಯಿಲ್ಲದೇ ಪರಿತಪಿಸುವಂತಾಯಿತು. ಕ್ರೌಂಚನನ್ನುಕೊಂದದ್ದು ಬೇಡನೇ. ಮರುಗಿದ ಜೀವವೂ ಬೇಡನದ್ದೇ.

ಮಾನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀ ಸಮಾಃ|
ಯತ್ ಕ್ರೌಂಚ ಮಿಥುನಾದೇಕಮವಧೀಃ ಕಾಮ ಮೋಹಿತಂ||

ಋಷಿಯೊಬ್ಬ ಕವಿಯಾದದ್ದು ಶೋಕದ ಮೂಲಕ. ಶ್ಲೋಕದ ಉದ್ಗಾರದ ಮೂಲಕ. ಹೃದಯಾಂತರಾಳದ
ಸುಪ್ತ ಪ್ರಜ್ಞೆ ಹೊರಬಂದು ತನ್ನ ಗೂಡನ್ನು (ಕಾವ್ಯವನ್ನು) ಕಟ್ಟಿಕೊಳ್ಳಬೇಕಾದರೆ ಮನಸ್ಸು ಬತ್ತಲೆಯಾಗಬೇಕು. ಹೊರಗಿನ ಕ್ರಿಯೆಗೆ ಸ್ಪಂದಿಸುವ ಋಷಿಯ ಮನಸ್ಸು ಆ ಕ್ಷಣದಲ್ಲಿ ಗೊತ್ತಿಲ್ಲದೇ ಹುಟ್ಟಿದ, ಅಥವಾ ನಿರೀಕ್ಷಿತವಲ್ಲದ್ದು ಕಣ್ಣ ಮುಂದೆ ಘಟಿಸಿದಾಗ ಹುಟ್ಟಿದ್ದು ಅಥವಾ ಹುಟ್ಟುವುದು ಬತ್ತಲೆಯಾದಾಗಲೇ! ಬೇಡ ಕವಿಯಾಗಿ ಬತ್ತಲೆಯಾದ. ಬತ್ತಲೆಯಾದ್ದರಿಂದ ಕಾವ್ಯ ಹುಟ್ಟಿತು. ರಾಮ ಸಿಕ್ಕಿದ. ರಾಮಾಯಣ ಸಿಕ್ಕಿತು. ಭಾರತೀಯತ್ವ ಸಾಯದೇ ಊರ್ಜಿತಗೊಂಡಿತು. ರಾಮಾಯಣದಂಥ ಮಹಾಕಾವ್ಯದಿಂದ ಕಾಣಬೇಕಾದುದು ಇಂಥ ದರ್ಶನಗಳನ್ನೇ!

ಕ್ರೌಂಚದ ವಿರಹ ಸೀತೆಯ ವಿರಹವನ್ನು ನೆನಪಿಸಿರಬೇಕು. ರಾಮಕಥೆ ಕವಿಯಲ್ಲಿ ಜಿನುಗಿರಬೇಕು. ಇಲ್ಲಿ ಕ್ರೌಂಚ
ವಿರಹದ ಸಂದರ್ಭದಲ್ಲೇ ಅಲ್ಲಿ ರಾವಣನಿಂದ ಸೀತೆಯ ಅಪಹರಣವೂ ಆಗಿರಬೇಕು. ಕವಿ‌ ಮನಸ್ಸು ಮಿಡಿದದ್ದು ಆ ಹಿನ್ನಲೆಯಲ್ಲೇ ಇರಬೇಕು! ಅಂತೂ ಮಹಾಕಾವ್ಯವೊಂದರ ಹುಟ್ಟು ಹುಟ್ಟಲು ಬೇಡನೊಬ್ಬ ಕವಿಯಾಗಬೇಕು ಎನ್ನುವಷ್ಟು ಗಾಢ ಸಂವೇದನೆಯೇ ವಾಲ್ಮೀಕಿಯ ಹೃದಯವಾಗಿತ್ತು. ಅಂದರೆ ಜೇನುಹುಳುವಿನ ಹೊರಮೈಯ ಮೃದುತ್ವದಂತೆ ದ್ರವಿಸುವ ಜಿನುಗು ವಾಲ್ಮೀಕಿಯಲ್ಲಿ ಮೊದಲೇ ಅಂತರ್ಗತವಾಗಿತ್ತು. ಕವಿ ಹೃದಯದ ಮಹರ್ಷಿ ವಾಲ್ಮೀಕಿ ಕವಿಯಾದದ್ದು ನಮ್ಮ ಪುಣ್ಯ! ಈ ನೆಲದ ಸೌಭಾಗ್ಯ! ವಾಲ್ಮೀಕಿ ಕವಿಯಾಗಿ ದರ್ಶಿಸಿದ ಮೌಲ್ಯಗಳು ಶೇಷರಾಮಾಯಣದಲ್ಲಿ ಕಾಣುತ್ತವೆ. ವಾಲ್ಮೀಕಿ ದರ್ಶಿಸಿದ ಒಟ್ಟೂ ಮೌಲ್ಯಗಳೇ ನಾಗರಿಕ ಪ್ರಪಂಚವನ್ನು ಆವರಿಸುವಂತೆ ರಾಮಾಯಣ ಈ ನೆಲವನ್ನುಕಾಡಿದೆ, ಕಾಡುತ್ತಿವೆ. ಶ್ರೀರಾಮನ ಅಶ್ವಮೇಧ ಆದದ್ದು ಅಯೋಧ್ಯೆಯಲ್ಲಲ್ಲ. ಸರಯೂ ತಟದಲ್ಲೂ ಅಲ್ಲ. ಗೋಮತೀ ತೀರದ ನೈಮಿಷಾರಣ್ಯ ಕ್ಷೇತ್ರದಲ್ಲಿ!!! ಸೀತೆಯ ವಿರಹ ಮತ್ತಷ್ಟೂ ಕಾಡಬಹುದೆಂದು ಹಳೆಯ ಕ್ಷೇತ್ರದಲ್ಲಿ ಈ ಅಶ್ವಮೇಧ ನಡೆಯಲಿಲ್ಲವೇನೋ! ಈ ಅಶ್ವಮೇಧಕ್ಕೆ ಅನ್ಯಾನ್ಯ ದೇಶಗಳ ವಿಭಿನ್ನ ಬಗೆಯ ಜನರು ಬಂದಿದ್ದರು. ಮಹರ್ಷಿ ವಾಲ್ಮೀಕಿ ತನ್ನ ಶಿಷ್ಯರೊಡಗೂಡಿ ಬಂದಿದ್ದ. ಬಂದವರಿಗೆಲ್ಲ ಪ್ರತ್ಯೇಕವಾಗಿ ಬಿಡಾರವನ್ನು ವ್ಯವಸ್ಥೆ ಮಾಡಲಾಗಿತ್ತು. ಲವಕುಶರಿಗೆ ವಾಲ್ಮೀಕಿ ಮಹರ್ಷಿ ಹೇಳಿದ ಮೊದಲ ಕೆಲಸ: ಮಕ್ಕಳಿರಾ! ಈ ಯಜ್ಞ ನಡೆಯುವಲ್ಲಿಗೆ ಹೋಗಿ, ಪ್ರಾತಃಸವನ, ಮಾಧ್ಯಂದಿನಸವನ, ಸಾಯಂಸವನಗಳೆಂಬ ಮೂರು ವೇಳೆಗಳ ಯಜ್ಞಕಾರ್ಯ, ಆಹುತಿಗಳ ಹೊರತು ಉಳಿದ ವೇಳೆಗಳಲ್ಲಿ ಅಲ್ಲಿ ಕರ್ಮಾಂತಿಕವೆಂಬ ಕಾರ್ಯಕ್ರಮ ಇರುತ್ತದೆ. ಯಜ್ಞವೇದಿಯ ಸುತ್ತ, ಆ ಅಶ್ವಮೇಧ ಮಂಟಪದಲ್ಲಿ ಇತಿಹಾಸ ಪುರಾಣಾದಿಗಳ ಪ್ರವಚನ ಗಾಯನಾದಿಗಳಿಗೆ ಅವಕಾಶವಿರುತ್ತದೆ. ಅಲ್ಲಿ ನೀವು ಈ ರಾಮಾಯಣ ಪ್ರವಚನಕ್ಕೆ ಅವಕಾಶ ಮಾಡಿಕೊಳ್ಳಲು ಊರವರ, ಪ್ರಭುಗಳ ಗಮನಸೆಳೆಯಬೇಕು. ಅದಕ್ಕಾಗಿ ಇಲ್ಲಿ ಸುತ್ತ ಇರುವ ಋಷಿವಾಟಗಳಲ್ಲೂ, ಬ್ರಾಹ್ಮಣರ ಕೇರಿಗಳಲ್ಲೂ, ರಾಜವೀಥಿಗಳಲ್ಲೂ, ಅರಸರ-ಅರಸುಬಂಧುಗಳ ಮನೆಗಳಲ್ಲೂ, ವಿಶೇಷವಾಗಿ ಗಾಯನ ಮಾಡತಕ್ಕದ್ದು. ಅಲ್ಲಿ ಏನೂ ಪದಾರ್ಥಗಳನ್ನು ನೀವು ಮುಟ್ಟಬಾರದು. ಇಕೋ, ಈ ಹಣ್ಣುಗಳನ್ನು ಅರಣ್ಯದ ಬೆಟ್ಟದ ಮೇಲೆ ಬೆಳೆದವನ್ನೂ, ರುಚಿನೋಡನೋಡುತ್ತ ಹಾಡಿರಿ. ಶ್ರಮವಾಗುವುದಿಲ್ಲ. ಈ ಬೇರುಗಳೂ ಅಷ್ಟೇ ಸುಖದಾಯಕವಾಗಿರುತ್ತದೆ; ಕಂಠಮಾಧುರ್ಯಕ್ಕೂ ಸಹಾಯಕ ಎನ್ನುತ್ತಾ ಮಕ್ಕಳ ಜೋಳಿಗೆಯಲ್ಲಿ ಮಹರ್ಷಿ ಕೆಲವು ಕಂದ ಮೂಲಫಲಗಳನ್ನುಹಾಕುತ್ತಾನೆ. ಎರಡನೆಯ ಕೆಲಸ: ದಿವಸಕ್ಕೆ ಇಪ್ಪತ್ತು ಸರ್ಗಗಳನ್ನು ಮಾತ್ರ ಹಾಡಬೇಕು.

ಮಧುರ ಕಂಠದಲ್ಲಿ ಅನೇಕ ಪ್ರಮಾಣಾನುಸಾರವಾಗಿ! ಅದು ನಾನು ಉದ್ದೇಶ್ಯ ಮಾಡಿದ ರೀತಿಯಲ್ಲಿ
ಹೊಂದುವಂತೆಇ ರಬೇಕು. ಮೂರನೆಯ ಕೆಲಸ: ಚಕ್ರವರ್ತಿಯೇ ಆಗಲಿ, ಬೇರೆ ಧನಿಕ ಶ್ರೋತೃಗಳೇ ಆಗಲಿ,
ಯಾರಾದರೂ ಹೊನ್ನನ್ನೋ, ಹಣವನ್ನೋ ಕೊಡ ಬಂದರೆ, ಲೋಭಕ್ಕೆ ನೀವು ಒಳಗಾಗಬಾರದು! ಅದೇನನ್ನೂ
ಸ್ವೀಕರಿಸಬಾರದು. ಕೊಂಚವೂ, ಎಲ್ಲೋ ಅರಣ್ಯದ ಆಶ್ರಮಗಳಲ್ಲಿರುವವರಿಗೆ ಹಣದಿಂದಾಗ ಬೇಕಾದುದೇನು? ಹಣ್ಣುಹಂಪಲು ನಮ್ಮ ಜೀವನವಾಗಿದ್ದು, ಕಾಡಲ್ಲಿ ಬೇಕಾದಷ್ಟುಸಂಪೂರ್ಣ ಸಿಗುವಾಗ, ಹಣದಿಂದೇನು? ನಾಲ್ಕನೆಯ ಕೆಲಸ: ಚಕ್ರವರ್ತಿಯು ನಿಮ್ಮನ್ನು ‘ನೀವಾರು’?’, ಯಾರ ಕಡೆಯವರು’? ಎಂದು
ಕೇಳಿದರೆ, ನಾವು ವಾಲ್ಮೀಕಿ ಶಿಷ್ಯರು ಎಂದಿಷ್ಟೇ ಹೇಳಬೇಕು.(ಉದ್ಧೃತ-ವಾಲ್ಮೀಕಿ ಯಾರು?)
ಬದುಕಿನ ಮೌಲ್ಯಗಳನ್ನು ಬಾಲ್ಯದಲ್ಲೇ ಲವಕುಶರಿಗೆ ನೀಡಿದ ಮಹರ್ಷಿಯ ಬದುಕಿಗೂ ಲೌಕಿಕದ ಬಂಧನಗಳ
ಬಗ್ಗೆ ಗಾಢ ಅರಿವಿತ್ತು. ಸೀತೆ ಮತ್ತವಳ ಮಕ್ಕಳ ಗುರುತುಗಳು ಶ್ರೀರಾಮನಿಗೆ ಸಿಗಬಾರದು ಎಂಬ ಎಚ್ಚರದಲ್ಲೇ
ಮುಂದೊಂದು ದಿನ ಸೀತಾರಾಮರ ಸಮಾಗಮವನ್ನು ಮಹರ್ಷಿಯಾದ ಕವಿ ವಾಲ್ಮೀಕಿ ಕನವರಿಸಿರಬೇಕು. ಅದಕ್ಕೆ
ವೇದಿಕೆಯನ್ನು ಸಿದ್ಧ ಗೊಳಿಸುವುದನ್ನೂ ಕಂಡು ಕೊಂಡಿರಬೇಕು. ಕವಿಯೊಬ್ಬನ ಮಾನಸಿಕ ಸ್ಥಿತಿ
ಋಷಿಯಲ್ಲಿರುವಂತೆಯೂ ಅಡಗಿರುತ್ತದೆ. ಲೌಕಿಕಕ್ಕೆ ಸ್ಪಂದಿಸದ ಕವಿ ಮಹರ್ಷಿಯೂ ಆಗಲಾರ; ಲೌಕಿಕದ
ತಾದಾತ್ಮ್ಯ ಇಲ್ಲದ ಮಹರ್ಷಿ ಕವಿಯೂ ಆಗಲಾರ. ಎರಡೂ ವಾಲ್ಮೀಕಿಯಲ್ಲಿ ಸಹಜವಾಗೇ
ಅನುರಕ್ತಗೊಂಡಿತ್ತು. ಹಾಗಂತ ವಾಲ್ಮೀಕಿ ಸ್ಥಿತಪ್ರಜ್ಞನೂ ಅಹುದು. ಯಾವುದನ್ನೂ ಅತಿಯಲ್ಲಿ ಕಾಣುವ,
ಕಂಡು ಅದರ ಕೊನೆಯ ಸ್ಥಿತಿಯಲ್ಲಿ ಮೈಮರೆಯಲಾರ. ಎಲ್ಲ ಇದ್ದೂ ಇರದಂತೆ ಬದುಕುವ ಶಕ್ತಿ
ಮಹರ್ಷಿಯಾಗಿ ವಾಲ್ಮೀಕಿಗಿತ್ತು. ಇಲ್ಲದೆಯೂ ಇದೆಯೆಂದು ತಿಳಿಯುವ ಸಾಮರ್ಥ್ಯವೂ ಇತ್ತು. ಇದು ಸಂಸಾರಿಗೂ ಅನ್ವಯಿಸುವ ಮಾತು. ಸ್ಥಿತಪ್ರಜ್ಞನಾಗುವುದು ಅಂದರೆ ಎಲ್ಲದರೊಂದಿಗೆ ಇದ್ದೂ ಇರದಂತೆಯೂ, ಎಲ್ಲ ಇಲ್ಲದರ ನಡುವೆಯೂ ಇದೆಯೆಂದೂ, ಇದ್ದೂ ಭಾವಿಸುವುದು ಸ್ಥಿತಪ್ರಜ್ಞನಿಗೆ ಮಾತ್ರಸಾಧ್ಯವೇನೋ! ಈ ಸ್ಥಿತ ಪ್ರಜ್ಞೆಯಿಂದ ವಾಲ್ಮೀಕಿ ಕ್ರೌಂಚದ ವಿರಹಕ್ಕೆ ಸ್ಪಂದಿಸಿದ, ಮರುಗಿದ. ಕರುಣೆಯನ್ನೂ ತೋರಿದ. ಪರಿಣಾಮವಾಗಿ ಕರುಣೆಯ ಮತ್ತೊಂದು ಮುಖವಾದ ಕ್ರೋಧ ಅವನಲ್ಲಿ ಮಡುಗಟ್ಟುತ್ತದೆ. ಉದ್ವೇಗಕ್ಕೂ, ಸತತವಾಗಿ ಬಾಧಿಸುವ ದುಃಖಕ್ಕೂ ಹೇತುವಾಗಿಬಿಡುತ್ತದೆ. ಈ ಎರಡು ಸಂಚಾರಿ ಭಾವಗಳೂ ಕವಿಯಾಗಿ ವಾಲ್ಮೀಕಿಯಲ್ಲಿತ್ತು. ಆದರೆ ಅದರ ಫಲ ಸ್ವರೂಪವೂ ಮೂಲದಲ್ಲಿ ಕರುಣೆಯಿಂದಲೇ ಕವಲೊಡೆದಿತ್ತು. ಅಂದರೆ ವಿಷಾದವೆಂಬ ಸ್ಥಾಯೀ ಭಾವದಲ್ಲೂ, ಅಥವಾ ಎಂಥಾ ವಿರಹದಲ್ಲೂ ಕಾವ್ಯವೊಂದು ಹುಟ್ಟುತ್ತದೆಂಬುದು ವಾಲ್ಮೀಕಿಯಲ್ಲಿ ವೇದ್ಯವಾಗುತ್ತದೆ. ಕ್ರೋಧದಲ್ಲೂ ಕರುಣೆಯು ಅಂಕುರಗೊಂಡು ಕಾವ್ಯವನ್ನು ಉದ್ದೀಪಿಸುತ್ತದೆ.

ಮುಖ್ಯವಾಗಿ, ವಾಲ್ಮೀಕಿ ಸತ್ಯಕ್ಕೇ ಜಯಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ. ಸತ್ಯ ಮೇವ ಜಯತೇ ಎಂಬ
ಉಪನಿಷತ್ತಿನ ಮಾತನ್ನು ತನ್ನ ಕಾವ್ಯದಲ್ಲಿ ಅಭಿವ್ತಕ್ತಿಸಿದ. ಪಾತ್ರಗಳಲ್ಲಿ ಬಿಂಬಿಸಿದ. ಭಾರತೀಯ ಸಂಸ್ಕೃತಿಯ
ನೆಲೆಗಟ್ಟನ್ನು ಅಯೋಧ್ಯಾ ಸಂಸ್ಕೃತಿಯಲ್ಲಿ ಪ್ರತಿಬಿಂಬಿಸಿದ. ಡಾ.ಕೆ.ಎಸ್.ನಾರಾಯಣಾಚಾರ್ಯರು ಹೇಳುವಂತೆ, ರಾಮಾಯಣ ಮೂರು ವಿಭಿನ್ನ ಜೀವನಕ್ರಮಗಳನ್ನು ತೌಲನಿಕವಾಗಿ ತೂಗಿ, ತಾರತಮ್ಯವನ್ನು ತೋರಿಸಿದೆ: ೧) ಅಯೋಧ್ಯಾ ಸಂಸ್ಕೃತಿ೨) ಲಂಕಾ ಸಂಸ್ಕೃತಿ ೩) ಕಿಷ್ಕಿಂಧಾ ಸಂಸ್ಕೃತಿ. ಯಶಸ್ಸಿಗಾಗಿ ಏನನ್ನೂ ಮಾಡಬಲ್ಲವರೆಲ್ಲ ರಾವಣರೇ ಹೊರತು ರಾಮರಲ್ಲ. ಅಯೋಧ್ಯೆ ಎಲ್ಲ ವಿಧಗಳಿಂದಲೂ ಆದರ್ಶದ ಪರಮೋಚ್ಛದಲ್ಲಿತ್ತು. ಸಂಸ್ಕೃತಿಯ ಕೀರ್ತಿ ಉತ್ತುಂಗದಲ್ಲಿತ್ತು. ಲಂಕಾ ಸಂಸ್ಕೃತಿಯನ್ನು ವಿವರಿಸುವ, ವಿಶ್ಲೇಷಿಸುವ, ವ್ಯಾಖ್ಯಾನಿಸುವ, ನಿರ್ವಚಿಸಬೇಕಾಗಿಲ್ಲ.

ರಕ್ಕಸ ಸಂಸ್ಕೃತಿಯ ಎಲ್ಲ ಚರ್ಯೆಗಳೂ ಲಂಕಾಸಂಸ್ಕೃತಿಯಲ್ಲಿ ಇದ್ದವು ಎಂಬುದನ್ನು ಪ್ರತ್ಯೇಕವಾಗಿ ಉಲ್ಲೇಖಿಸುವ ಅಗತ್ಯವಿಲ್ಲ. ಇನ್ನೊಂದು ಕಿಷ್ಕಿಂಧಾ ಸಂಸ್ಕೃತಿ. ಅಯೋಧ್ಯಾ ಸಂಸ್ಕೃತಿಯ ಮೌಲ್ಯಗಳನ್ನೂ
ಆಚಾರ ವಿಚಾರಗಳನ್ನೂ ಹೊಂದಿದ್ದ ಹನುಮಂತ ಕಿಷ್ಕಿಂಧೆಯನ್ನು ಕಾಪಾಡಿದ ಎಂಬಲ್ಲಿಗೆ ಕಿಷ್ಕಿಂಧ ಸಂಸ್ಕೃತಿಯನ್ನು ಅರ್ಥೈಸಬಹುದು. ಒಬ್ಬನಿಂದ ಸಂಸ್ಕೃತಿ ಹುಟ್ಟಲಾರದು. ಆದರೆ, ಸಂಸ್ಕೃತಿ
ವಿನಾಶಕ್ಕೆ ಒಬ್ಬ ಸಾಕಾಗುತ್ತದೆ. ವಿಭೀಷಣನಿಗೆ ಲಂಕಾಸಂಸ್ಕೃತಿ ಒಗ್ಗಲಿಲ್ಲ. ಹನುಮಂತನಿಗೆ ಕಿಷ್ಕಿಂಧೆಯ ಸಂಸ್ಕೃತಿ ಇಷ್ಟವಾಗಲಿಲ್ಲ. ಆಧ್ಯಾತ್ಮದ ಬಲದಿಂದ ಅಯೋಧ್ಯೆ ನಿಂತಿತ್ತು; ಔನ್ನತ್ಯವನ್ನು ಕಂಡಿತ್ತೇ ಹೊರತು ಧನಬಲ, ಅಧಿಕಾರಬಲ, ಸೈನ್ಯ ಬಲದಿಂದಲ್ಲ. ಇವೆಲ್ಲ ಇದ್ದೂ ಸರ್ವನಾಶದ ಹಾದಿಹಿಡಿದದ್ದು ಲಂಕಾಸಂಸ್ಕೃತಿ! ಭಾರತೀಯ ಸಂಸ್ಕೃತಿಯು ಅಮೃತತ್ವವನ್ನು, ಸಂಜೀವಿನಿ ಗುಣವನ್ನು ಅಥವಾ ಕಾಲ ಜಯೀಗುಣವನ್ನು ಹೊಂದಿರುವುದು ಈ ನೆಲೆಯಿಂದ!

ಕೊನೆಯ ಮಾತು:
ವಾಲ್ಮೀಕಿ ಬೇಡನಾಗಿ ಮಾತ್ರವಲ್ಲ. ಹಾಗಂತ ಮನುಷ್ಯಸಹಜ ಸ್ವಭಾವವೂ ದೂರಾಗದೇ ಅವನಲ್ಲಿ ಕನಿಕರವೂ ಹುಟ್ಟುತ್ತದೆ; ಕೋಪವೂ ಹುಟ್ಟುತ್ತದೆ. ಕ್ರೌಂಚವನ್ನು ಯಾವ ಕಾರಣಕ್ಕಾದರೂ ಬೇಡ ಕೊಂದಿರಬಹುದು. ವಾಲ್ಮೀಕಿಯ ಶಾಪದ ಉಗ್ರತೆಯೂ ವಿಪರೀತವಾಗಿರಬಹುದು. ಆದರೆ, ದುಃಖ ಮತ್ತು ಕ್ರೋಧದಲ್ಲಿ ಹುಟ್ಟಿದ ಮಾತು ಲಯಬದ್ಧವಾಗಿ ಕಾವ್ಯವಾಗಿದ್ದು ಮಾತ್ರ ನಮ್ಮಪುಣ್ಯ. ವಾಲ್ಮೀಕಿ ಎಂಬ ರೇಷ್ಮೆ ಹುಳು ಬೆತ್ತಲೆಯಾಗಿ, ತಾನು ಸ್ರವಿಸಿದ ಜಿನುಗಿನಿಂದ ತನ್ನ ಕೋಶವನ್ನು ಕಟ್ಟಿಕೊಳ್ಳುವಂತೆ ಉತ್ಕಟತೆಯಲ್ಲಿ ಕವಿ ವಾಲ್ಮೀಕಿ ರಾಮಾಯಣವೆಂಬ ಕಾವ್ಯವನ್ನು ರಚಿಸಿದ. ನಾರದರಿಂದ ಹಿಂದಿನ ದಿನ ರಾತ್ರೆ ಕೇಳಿಸಿಕೊಂಡ ಕಥೆಯನ್ನು ಕಟ್ಟಿದ! ಪರಕಾಯ ಪ್ರವೇಶದ ತತ್ಪರತೆ ತನ್ಮಯತೆ-ಆಡಿದ ಮಾತು ತತ್ಕ್ಷಣವೇ ನಿಜವೆನ್ನಿಸುವವರವನ್ನು ಬ್ರಹ್ಮನಿಂದ ಪಡೆದ ವಾಲ್ಮೀಕಿ ಕವಿಯಾಗಿಯೂ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಆದರ್ಶವಾಗಿಯೂ ದಾರಿಯಾಗಬೇಕೇ ಹೊರತು ಜಾತಿಯ ಮೂಲದಿಂದಲ್ಲ!

ಲೇಖಕರು
ಟಿ. ದೇವಿದಾಸ್

Leave a Reply

Your email address will not be published. Required fields are marked *