ಶತಮಾನೋತ್ಸವ ಆಚರಿಸಿಕೊಂಡ ಖರ್ವಾ ಪ್ರಾಥಮಿಕ ಶಾಲೆಯನ್ನು ಸಲುಹಿದ ನಾಥಗೇರಿಯ ‘ದೊಡ್ಮನೆ’
ಸೇವಾ ಮನೋಭಾವ ಉಳ್ಳವರಿಗೆ ಕುಟುಂಬ, ಪರಿಸರ ಇದಾವುದೂ ಅಡ್ಡಿ ಆತಂಕಗಳೇ ಇರುವುದಿಲ್ಲ. ಅದೊಂದು ಗುಂಡಬಾಳ ನದಿ ಕಿನಾರೆಯ ನೆರೆ ಪೀಡಿತ ಪ್ರದೇಶ. ಅಲ್ಲಿ ಅವಿಭಕ್ತ ಕುಟುಂಬದ ದೊಡ್ಡದಾದ ಒಂದು ಸಂಸಾರ. ಅದು ಸುಂದರ ಮನಸ್ಸುಗಳುಳ್ಳ ಒಂದು ಜೇನುಗೂಡು.
ಶತಮಾನದ ಹಿಂದಿನ ಕತೆ ವ್ಯಥೆ. ಅದು ವಿದ್ಯುದ್ದೀಪ, ಆಧುನಿಕ ಸೌಲಭ್ಯಗಳಿಂದ ವಂಚಿತವಾಗಿದ್ದ ಕಾಲ.. ಆದರೆ ಅಂಬೇಡ್ಕರ್ ,ಗಾಂಧೀಜಿಯವರಂಥ ಅನೇಕ ಮಹಾತ್ಮರು ಬದುಕಿದ್ದ ಕಾಲ… ಇಂಥವರ ವಿಚಾರಧಾರೆಗಳ ಪ್ರಭಾವವೂ , ಸ್ಫೂರ್ತಿಯೂ ಇರಬಹುದು. ಹೊನ್ನಾವರ ತಾಲೂಕಿನ ಖರ್ವಾ ಮಜರೆಯ ನಾಥಗೇರಿಯ ದಿ. ನಾಗಪ್ಪ ಸಣ್ತಮ್ಮ ನಾಯ್ಕರ ಮನೆಯ ಮಾಳಿಗೆಯ ಮೇಲೆ ಸಾಕ್ಷಾತ್ ಸರಸ್ವತಿಯ ಪ್ರತಿಷ್ಠಾಪನೆ ಪ್ರಾಯೋಗಿಕವಾಗಿಯೇ ಆಗುತ್ತದೆ. ಅದು 1923 ನೇ ಇಸವಿ. ಖರ್ವಾ ಗ್ರಾಮದ ನಾಥಗೇರಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ತೆರೆಯಲು ಅಂದಿನ ಸರ್ಕಾರದ ಅನುಮತಿ ದೊರೆತಾಗ ಸ್ಥಳಾವಕಾಶದ ಅಭಾವದಿಂದಾಗಿ ಶಾಲೆ ಬೇರೆಡೆಗೆ ಸ್ಥಳಾಂತರಗೊಳ್ಳುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿದ್ದವು. ಆ ಸಮಯದಲ್ಲಿ ಅಕ್ಷರದ ಮಹತ್ವವನ್ನು ಅರಿತ ದೊಡ್ಮನೆ ಕುಟುಂಬದ ನಾಗಪ್ಪ ನಾಯ್ಕ ಅವರು ತಮ್ಮ ಮನೆಯ ಮಾಳಿಗೆಯಲ್ಲಿ ಶಾಲೆಯನ್ನು ತೆರೆಯಲು
ಅವಕಾಶ ಮಾಡಿಕೊಟ್ಟಿದ್ದು ಈ ನೆಲದ ಪುಣ್ಯ! ನಿರಂತರ. 33 ವರ್ಷಗಳ ಕಾಲ ಮನೆಯ ಮಾಳಿಗೆಯ ಎರಡು ಕೋಣೆಗಳಲ್ಲಿ ನಾಲ್ಕನೇ ತರಗತಿಯವರೆಗೆ ಹೊಳೆ ಬದಿಯ ನಿಸರ್ಗದ ಮಡಿಲಲ್ಲಿ ಶಾಲೆ ನಿರಂತರವಾಗಿ ಸಾಗಿ ಬಂದಿದ್ದು ಒಂದು ದೊಡ್ಡ ಇತಿಹಾಸವಾದರೆ 1956ರಲ್ಲಿ ಹೆಚ್ಚುತ್ತಿರುವ ಮಕ್ಕಳ ಸಂಖ್ಯೆ ,ಊರಿನ ಹಿರಿಯರ-ಶಿಕ್ಷಕರ ಒತ್ತಾಸೆ ,ಊರ ನಾಗರಿಕರ ಪ್ರಯತ್ನದಿಂದಾಗಿ ಶಾಲೆ ನಾಥಗೇರಿಯಿಂದ ‘ಕರುವಾ’ ಕೆ ಅದೇ ದೊಡ್ಮನೆ ಕುಟುಂಬದ 20
ಗುಂಟೆ ಜಾಗದಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ತಲೆಯೆತ್ತಿದ್ದು ಆ ‘ಜೇನುಗೂಡಿ’ನ ಉದಾರ ಹೃದಯ ಶ್ರೀಮಂತಿಕೆಗೆ, ಅಕ್ಷರ ಪ್ರೀತಿಗೆ ಹಿಡಿದ ಕನ್ನಡಿಯಾಗಿದೆ.

.ಅಂದು ಹಿರಿಯ ಪ್ರಾಥಮಿಕ ಶಾಲೆಯಾಗಿ ತಲೆಯೆತ್ತಿದ ಶಾಲೆ ಸಾವಿರಾರು ವಿದ್ಯಾರ್ಥಿಗಳ ಬಾಳು ಬೆಳಗಿ ಯೋಗ, ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದ ಮಾದರಿ ಶಾಲೆ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಇದೀಗ ಅದು ‘ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಖರ್ವ’ ಎಂಬ ಹೆಸರಿನಲ್ಲಿ ಗರ್ವದಿಂದ ನಿಂತಿದೆ. ವಿಶಾಲವಾದ ಬಯಲಿನಲ್ಲಿ ಸಾಕಷ್ಟು ಕೋಣೆಗಳು, ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಶಾಲೆ ಇಂದು ಶತಮಾನವನ್ನು ಪೂರೈಸಿ ಇತ್ತೀಚಿಗಷ್ಟೇ ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಹೆಮ್ಮೆಯಿಂದ, ಸ್ವಾಭಿಮಾನದಿಂದ ನಿಂತಿರುವುದು ಅದರ ಘನತೆ-ಗೌರವಕ್ಕೆ ಹಿಡಿದ ಕನ್ನಡಿಯಾಗಿದೆ .ಈ ಶಾಲೆಯಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ವೈದ್ಯರಾಗಿ, ವಿಜ್ಞಾನಿಗಳಾಗಿ ಉನ್ನತ ಅಧಿಕಾರಿಗಳಾಗಿ, ಸಂಗೀತ ಸಾಹಿತ್ಯ ಕ್ಷೇತ್ರದ ದಿಗ್ಗಜರಾಗಿ ಸೇವೆ ಸಲ್ಲಿಸಿದ್ದು, ಎಲ್ಲರೂ ಶತಮಾನೋತ್ಸವದ ಸಂದರ್ಭದಲ್ಲಿ ಕೈಜೋಡಿಸಿ ಮರಳಿ ಗೂಡಿಗೆ ಬಂದು ಈ ‘ವಿದ್ಯಾದೇಗುಲ’ದ ಗತವೈಭವವನ್ನು ಮೆಲುಕು ಹಾಕುವಂತೆ ಮಾಡಿದ್ದು ಒಂದು ಯಶಸ್ವಿ ಮೈಲಿಗಲ್ಲು! ಇದೇ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿಗಳು, ದಾನಿಗಳು, ಹಳೆ ವಿದ್ಯಾರ್ಥಿಗಳು ತನು ಮನ ಧನ ಸಹಾಯ ನೀಡಿ ಅತ್ಯಂತ ಸಡಗರದಿಂದ ಕೂಡಿದ ಅರ್ಥಪೂರ್ಣ ಶತಮಾನೋತ್ಸವಕ್ಕೆ ಸಾಕ್ಷಿಯಾದರೆ, ದೊಡ್ಮನೆ ಕುಟುಂಬದ ಅಕ್ಷರ ಪ್ರೀತಿಯೇ ಬೇರೆ ರೀತಿಯದು .

ತಂದೆಯಿಂದ ಬಳುವಳಿಯಾಗಿ ಬಂದ ಅಕ್ಷರ ಪ್ರೇಮವನ್ನು ಶಿರಸಾ ವಹಿಸಿ ಶಾಲೆಯ ಸಮಗ್ರ ಏಳಿಗೆ ಅಭಿವೃದ್ಧಿಯಲ್ಲಿ ದೊಡ್ಮನೆ ಕುಟುಂಬದ ಮುಂದಿನ ಕುಡಿಗಳು ತೊಡಗಿಸಿಕೊಂಡು ‘ದೊಡ್ಮನೆ’ ಹೆಸರಿಗೆ ಮತ್ತಷ್ಟು ಹಿರಿಮೆ ಸಿಗುವಂತೆ ಮಾಡಿದರು. ಒಂದು ದಿನದ ಕಾರ್ಯಕ್ರಮಕ್ಕೆ ಧನ ಸಹಾಯ ಮಾಡಿದರೆ ವ್ಯರ್ಥವಾಗಿ ವ್ಯಯವಾಗಬಹುದೆಂಬ ಕಾರಣದಿಂದ ದೂರವೇ ಉಳಿದಿದ್ದ ಕುಟುಂಬ ಶಾಲೆಯ ಸಮಗ್ರ ಅಭಿವೃದ್ಧಿಗೆ ಬೇಕಾದ ಅಮೂಲ್ಯವಾದ
ವಸ್ತು ರೂಪದ ಕಾಣಿಕೆಗಳನ್ನು ನೀಡುವುದರ ಮೂಲಕ ಶಾಲೆ ಇಂದು ವಿಜ್ಞಾನ ತಂತ್ರಜ್ಞಾನದ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಮುನ್ನಡೆಯಲು ದಾರಿದೀಪವಾಗಿದೆ. ಇಡೀ ಕುಟುಂಬದ ಎಲ್ಲ ಸಹೋದರರು ಕೈಜೋಡಿಸಿ ದೊಡ್ಡ ಮೊತ್ತದ ಹಣ ಸಂಗ್ರಹಿಸಿ ಶಾಲೆಗೆ ತುಂಬಾ ಅಗತ್ಯವಾದ ಸ್ಮಾರ್ಟ್ ಕ್ಲಾಸ್ ಅಂದರೆ ಸ್ಮಾರ್ಟ್ ಟಿವಿ , ಡಿಶ್, ಲ್ಯಾಪ್ ಟಾಪ್, ಔಟ್ ಡೋರ್ ಮೈಕ್, ಇವುಗಳ ಅಗತ್ಯಕ್ಕೆ ತಕ್ಕಂತೆ ವೈ- ಫೈ ಸೌಲಭ್ಯ, ಗ್ರಂಥಾಲಯದ ಸದ್ಭಳಕೆಗಾಗಿ ರ್ಯಾಕ್ಸ್ ; ಇವೆಲ್ಲಕ್ಕೂ ಮುಖ್ಯವಾಗಿ ಶಾಲೆಗೆ ಮತ್ತೋರ್ವ ಅತಿಥಿ ಶಿಕ್ಷಕರನ್ನೂ ಸ್ವತಃ ವೇತನ ಪಾವತಿಸುವುದರ ಮೂಲಕ ಊರ ವಿದ್ಯಾದೇಗುಲದ ಅಭಿವೃದ್ಧಿಗೆ ಒಂದು ಅಮೂಲ್ಯ ಕಾಣಿಕೆ ನೀಡಿದ್ದಾರೆ. ಈ ರೂಪದಲ್ಲಿ ಕಲಿತ ಶಾಲೆಗೆ ಋಣ ಸಂದಾಯ ಮಾಡುತ್ತಿರುವ, ಹೆಸರಿಗೆ ತಕ್ಕಂತೆ ‘ದೊಡ್ಮನೆ’ ಮಾತ್ರವೇ ಆಗಿರದೆ ದೊಡ್ಡ ಮನಸ್ಸಿನ ಕುಟುಂಬವೂ ಆಗಿ ಸುತ್ತಮುತ್ತಲಿನ ಎಲ್ಲರಿಗೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿಯೂ ಶಾಲೆಯ ಅಭಿವೃದ್ಧಿಗೆ ಕೈಜೋಡಿಸುವ ಭರವಸೆ ನೀಡಿದ ದೊಡ್ಮನೆ ಕುಟುಂಬದ ಸೇವಾ ಮನೋಭಾವ ಶಿಕ್ಷಣ ಪ್ರೇಮ ಪ್ರಶಂಸನೀಯ. ಈ ಕುಟುಂಬದ ವಿದ್ಯಾವಂತ ಪ್ರತಿಭಾವಂತ, ಫಾರೆನ್ ರಿಟರ್ನಡ್ ಎಂಜಿನಿಯರ್ ಸತೀಶ್ ನಾಯ್ಕ ಅವರು ಶಾಲೆಗೆ ಬಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕರ ಜೊತೆ ಸಮಾಲೋಚನೆ ನಡೆಸಿ ಶಾಲೆಯ ಅಭಿವೃದ್ಧಿಗೆ ಏನೆಲ್ಲಾ ಮಾಡಬಹುದು? ಯಾವೆಲ್ಲ ಸಾಧ್ಯತೆಗಳಿವೆ ಎಂಬ ಸಲಹೆ, ಮಾರ್ಗದರ್ಶನ ನೀಡಿದ್ದು ಇವರ ಶೈಕ್ಷಣಿಕ ಕಾಳಜಿ ತುಂಬಾ ಶ್ಲಾಘನೀಯವಾದುದು. ದೂರದ ನಗರ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡರೂ ತನ್ನೂರು , ತಾನು ಕಲಿತ ಶಾಲೆಯ ಬಗೆಗಿರುವ ಕಾಳಜಿ, ದೂರಾದೃಷ್ಟಿ ಅನನ್ಯವಾದುದು. ಶಾಲೆಗೆ ಮತ್ತೋರ್ವ ಅತಿಥಿ ಶಿಕ್ಷಕರನ್ನು ಸ್ಪಾನ್ಸರ್ ಮಾಡಿದ್ದು ಇವರೇ ಎಂಬುದು ಆಮೇಲೆ ತಿಳಿಯಿತು. ಪ್ರತಿ ಊರಲ್ಲಿ ಇಂತಹ ನಾಲ್ಕಾರು ಜನರಿದ್ದರೂ ಸರ್ಕಾರಿ ಶಾಲೆಗಳು ನಂದಗೋಕುಲಗಳಾಗುವುದರಲ್ಲಿ ಅನುಮಾನವಿಲ್ಲ.ವಿದ್ಯೆ ಕಲಿಯುವುದು ಉನ್ನತ ನೌಕರಿ ಹಿಡಿಯಲು, ಹೆಚ್ಚು ಹೆಚ್ಚು ಹಣ ಸಂಪಾದನೆ ಮಾಡಲು, ದೇಶ ವಿದೇಶಗಳಲ್ಲಿ ವೈಭವೋಪೇತ ಜೀವನ ನಡೆಸಲು ಎಂಬ ಸ್ವಾರ್ಥ ಪರವಾದ ನಿಲುವಿನ ಬಹು ಜನರ ನಡುವೆ ಬೆರಳೆಣಿಕೆಯಷ್ಟು ಸಂಖ್ಯೆಯ ಇಂತಹ ಅಕ್ಷರ ಪ್ರೇಮಿಗಳು, ಹೃದಯ ಶ್ರೀಮಂತಿಕೆ ಉಳ್ಳವರು ಅಲ್ಲಲ್ಲಿ ಕಂಡುಬರುವುದರಿಂದಲೇ ಸಮಾಜದ ಸ್ವಾಸ್ಥ್ಯ ಇನ್ನೂ ಸುಸ್ಥಿರವಾಗಿರಲು ಕಾರಣವಾಗಿದೆ.

ವೃತ್ತಿ ಬದುಕಿನ 25 ವರ್ಷಗಳ ಸೇವಾವಧಿಯನ್ನು ಒಂದೇ ಶಾಲೆಯಲ್ಲಿ ಪೂರೈಸಿ ಪರಿವರ್ತನೆಯ ಹೊಸ ಗಾಳಿಗೆ ಹಂಬಲಿಸಿ ಶತಮಾನದ ಹೊಸ್ತಿಲಲ್ಲಿರುವ ಶಾಲೆಗೆ ವರ್ಗಾವಣೆ ಬಯಸಿ ಬಂದ ನನಗೆ, ನನ್ನ ಮುಖ್ಯಾಧ್ಯಾಪಿಕೆಯ ಅವಧಿಯಲ್ಲಿ ಶತಮಾನದ ಸಂಭ್ರಮ
ಗರಿಗೆದರಿದ್ದು ನನಗೊದಗಿದ ಅತ್ಯಂತ ಸಂಭ್ರಮದ ಮತ್ತು ಸವಾಲಿನ ಕ್ಷಣಗಳು. ಕೇವಲ ಇಬ್ಬರೇ ಶಿಕ್ಷಕಿಯರು, ಇನ್ನಿಬ್ಬರು ಅತಿಥಿ ಶಿಕ್ಷಕರನ್ನೊಳಗೊಂಡು ಎಲ್ಲವನ್ನೂ ನಿಭಾಯಿಸುವ ಗುರುತರ ಜವಾಬ್ದಾರಿ ಹೆಗಲೇರಿದಾಗ ತುಂಬಾ ಒತ್ತಡ, ಕಷ್ಟ ಎನಿಸಿದರೂ ನಿರೀಕ್ಷಿಸಿದ್ದಕ್ಕಿಂತ ಯಶಸ್ವಿಯಾಗಿ ಕಾರ್ಯಕ್ರಮ ನಡೆದ ಬಗ್ಗೆ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿ ಬರುವಾಗ ಧನ್ಯತಾ ಭಾವ! ಒತ್ತಡದ ನಡುವೆಯೂ ನೂರು ವರ್ಷಗಳ ಮಾಹಿತಿಯನ್ನು ಕಲೆಹಾಕುವ ನಿಮಿತ್ತ ಮೂಲ ಶಾಲೆ ಆರಂಭವಾದ ದೊಡ್ಮನೆ ಕುಟುಂಬದ 125 ವರ್ಷಗಳ ಹಳೆಯ ಮನೆಯನ್ನು ಕಣ್ಣಾರೆ ನೋಡುವ, ಮಾತನಾಡಿಸುವ ತವಕವೂ ನನ್ನೊಳಗೆ ಮನೆಮಾಡಿತ್ತು. ಮೂಲ ಶಾಲೆ
ಪ್ರಾರಂಭವಾದ ಆ ಮನೆಯ ಮಾಳಿಗೆಯ ಕೋಣೆಯನ್ನು ನೋಡಿ ಕಾಲ್ಪನಿಕವಾಗಿ ಕಳೆದುಹೋಗಿದ್ದೆ! ಅದೇ ಸ್ಥಳದಲ್ಲಿ ಕುಟುಂಬದ ಬಯೋವೃದ್ಧ ಹಿರಿಯರನ್ನು ನಿಲ್ಲಿಸಿ ಗತಕಾಲದ ವೈಭವವನ್ನು ನೆನಪಿಸಿಕೊಳ್ಳುವಂತೆ ಸಂದರ್ಶನವನ್ನು ನಡೆಸಿದ್ದು, ನನಗೆ ನನ್ನ ವೃತ್ತಿ ಜೀವನದಲ್ಲಿ ಸಿಕ್ಕ ಒಂದು ಅಪರೂಪದ ಅವಿಸ್ಮರಣೀಯ ಕ್ಷಣ ಎಂದುಕೊಳ್ಳುತ್ತೇನೆ.

ಶತಮಾನ ಕಂಡ ಶಾಲೆಯ ಯಶೋಗಾಥೆಯನ್ನು ದಾಖಲಿಸುವಾಗ ಏನೋ ಪುಳಕ ; ಒಂಥರಾಸುಖ! ದೊಡ್ಮನೆ ಕುಟುಂಬದ ಹಿರಿಯರಾದ ಶ್ರೀ ಎಸ್ ಎನ್ ನಾಯ್ಕ, ಗೋಪಾಲ ನಾಯ್ಕ, ಈಶ್ವರ ನಾಯ್ಕ ಮತ್ತು ಮನೆ ಮಂದಿ ಎಲ್ಲರೂ ತುಂಬಾ ಪ್ರೀತಿಯಿಂದ ಸಹಕರಿಸಿದ್ದು ವಿಶೇಷವಾಗಿತ್ತು. ಅಷ್ಟೇ ಅಲ್ಲ, ಇಡೀ ಕುಟುಂಬ ಶತಮಾನೋತ್ಸವದಲ್ಲಿ ಪಾಲ್ಗೊಂಡು ಗಣ್ಯರ ಸಮ್ಮುಖದಲ್ಲಿ ತಂದೆಯವರ ಸವಿ ನೆನಪಿಗೆ ನೀಡಿದ ಸತ್ಕಾರವನ್ನು ಸ್ವೀಕರಿಸಿದ ಹಿರಿಯ ಜೀವ ನಿವೃತ್ತ ಶಿಕ್ಷಕ ಶ್ರೀ ಈಶ್ವರ ನಾಯ್ಕ ದಂಪತಿಯನ್ನು ಸತ್ಕರಿಸುವುದರ ಮೂಲಕ ನಾವು ಧನ್ಯರಾದೆವು. ಇಡೀ ಕುಟುಂಬ ಶಾಲೆಯ ಸ್ಥಾಪನೆ, ಬೆಳವಣಿಗೆಗೆ ನೀಡಿದ ಬಹುದೊಡ್ಡ ಕೊಡುಗೆಗೆ ಶರಣು ಶರಣಾರ್ಥಿ. ಇಂಥವರ ಸಂತತಿ ಗರಿಕೆಯಂತೆ ಬಿದ್ದಲ್ಲಿ ಎಲ್ಲೆಲ್ಲೂ ಚಿಗುರಲಿ…

ಶತಮಾನೋತ್ಸವದ ಸಂದರ್ಭದಲ್ಲಿ ಶಾಲೆಗೆ ದೇಣಿಗೆಯ ರೂಪದಲ್ಲಿ ಹರಿದು ಬಂದ ವಸ್ತು ರೂಪದ ಕೊಡುಗೆಗಳು ಅಪಾರ. ದೊಡ್ಮನೆ ಕುಟುಂಬದ ಜೊತೆಗೆ ಇನ್ನೂ ಹಲವಾರು ಶಿಕ್ಷಣಪ್ರೇಮಿ ಮನಸ್ಸುಗಳು ಶಾಲೆಗೆ ಅಗತ್ಯವಿರುವ ಹಲವಾರು ವಸ್ತುಗಳನ್ನು ನೀಡಿ ವಿದ್ಯಾದೇಗುಲದ ಆರಾಧನೆಯಲ್ಲಿ ಭಾಗಿಯಾಗಿದ್ದರೆ. ಈ ಎಲ್ಲರ ಮನಸ್ಸಿನಲ್ಲೂ ನಿತ್ಯ ನೂರಾರು, ಸಾವಿರಾರು ಮಲ್ಲಿಗೆಯ ಮೊಗ್ಗುಗಳು ಅರಳಿಕೊಳ್ಳುತ್ತಿರಲಿ.

ಸುಧಾ ಭಂಡಾರಿ, ಹಡಿನಬಾಳ
ಮುಖ್ಯಾಧ್ಯಾಪಿಕೆ,
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಖರ್ವಾ, ಹೊನ್ನಾವರ