ವರ್ತಮಾನದ ಸುದ್ದಿ ಅಲ್ಲೋಲ ಕಲ್ಲೋಲ
ಗೊತ್ತಿರದ ಭೂತಗಳು ತಿನ್ನುತ್ತಿವೆ
ಬರಲಿರುವ ನಾಳೆಗಳ ಬಗೆಗೆ ಕಾತರ ಜಾಸ್ತಿ
ನೂರಕ್ಕೆ ನೂರೂ ಅವು ಕ್ಷೇಮವೆ?
ಮಣ್ಣ ನೋಡಿದರಿಲ್ಲಿ ಧೂಳೇ ತುಂಬಿದ ಪಾಡು
ಕಲ್ಲು ಮುಳ್ಳುಗಳಿಂದ ನರಯಾತನೆ
ಹಸನಾದ ನೇಗಿಲು ನೆಲದಾಳ ಗೀರುವ
ರಸ ವಿದ್ಯೆ ಮರೆತರೆ ಹೇಗೇ ತೆನೆ?
ಮೃಗಶಿರೆ ನಕ್ಕರೆ ಶುರುವಿತ್ತು ಮಳೆ ಧಾರೆ
ಈಗ ಕಾಲದ ಕಾಲು ಮುರಿದಂತಿದೆ
ಹೇಗೋ ಏನೋ ಎಲ್ಲೋ ದಿಕ್ಕು ತಪ್ಪಿದ ದಾರಿ
ವರ್ಷದುದ್ದಕೂ ವರ್ಷ ಬುಸುಗುಟ್ಟಿದೆ.
ಗಾಳಿಯು, ಬೆಂಕಿಯು ಸ್ನೇಹಕ್ಕೆ ಮುಂದಾದ
ಕಳವಳ ಅಸದಳ ಧಾರಿಣಿಗೆ
ವಾಯು ಭಾರದ ಕುಸಿತ,ಭೂಮಿಯ ಉಷ್ಣಾಂಶ
ಕಡಲಿನ ವರಸೆ ಭೂ ಕಬಳಿಕೆಗೆ
ಸಕಲ ಚರಾಚರ ಮೂಲಕೂ ಬಿದ್ದಿದೆ
ಬೀಸಿದ ಕೊಡಲಿಯ ಏಟುಗಳು
ನರನ ಬುದ್ಧಿಯ ತುಂಬ ಆಸೆ ಗೆದ್ದಲು ದಾಳಿ
ಕುಳಿತಿಹ ಮರವನ್ನೇ ಕಡಿವ ಗೀಳು
ಆದಿ ಶೇಷನ ನೆತ್ತಿ ಹೊತ್ತಿಹುದು ಕುಂಭಿನಿಯ
ಕ್ಷೀರ ಸಾಗರದಲ್ಲಿ ನಾರಾಯಣ…,
ಭೂರಮೆ ಬಸಿರು, ಬಂಜರಾದರೆ ಹೇಗೆ
ಅನವರತ ನೀ ಕಾಯೋ ಭೂರಮಣ..!!

–ಮಹಾಬಲಮೂರ್ತಿ ಕೊಡ್ಲೆಕರೆ, ಹಿರಿಯ ಕಥೆಗಾರ , ಕವಿ
ಬೆಂಗಳೂರು