ಅಯೋಧ್ಯಾ ರಾಮನ ಹೆಸರಿನಲ್ಲಿ ರಾಜಕಾರಣಿಗಳಿಂದ ಏನೆಲ್ಲ ಡ್ರಾಮ

ಸರಯೂ ನದಿ ಪುಳಕಗೊಳ್ಳುವಂತೆ ಶ್ರೀರಾಮನ ಊರು ಅಯೋಧ್ಯೆ ಸಡಗರದಿಂದ ತನ್ನೊಡೆಯನ ಪುನಃ ಪ್ರತಿಷ್ಠಾಪನೆಗಾಗಿ ಸಜ್ಜುಗೊಳ್ಳುತ್ತಿದೆ. ಇದೀಗ ಬಾಲರಾಮ ಗರ್ಭಗುಡಿಯಲ್ಲಿ ನಿಂತಿದ್ದಾನೆ. ಮರ್ಯಾದಾ ಪುರುಷೋತ್ತಮ, ಶಾಂತಿಪ್ರಿಯ, ನ್ಯಾಯನಿಷ್ಠ, ಕರ್ತವ್ಯಬದ್ಧ ರಾಮ ಸಾವಿರಾರು ವರ್ಷಗಳಿಂದ ಜನರ ಮಸ್ತಕದಲ್ಲಿ, ಪುಸ್ತಕದಲ್ಲಿ ಮಾತ್ರವಲ್ಲ, ಕಣ ಕಣಗಳಲ್ಲೂ ಜೀವಂತ ಇದ್ದಾನೆ.

ರಾಮನಿಗೊಂದು ದೇಗುಲ ಕಟ್ಟಬೇಕೆಂಬುದು ದೇಶದ ರಾಮ ಭಕ್ತರ ಬಹು ದಿನದ ಕನಸು. ಅದೀಗ ನನಸಾದದ್ದು ಸಂತೋಷ. ಆದರೆ ಅಯೋಧ್ಯೆ ನೆಲದಲ್ಲಿ ನ್ಯಾಯ ಪರಿಪಾಲನೆಗಾಗಿ ಕ್ಷಣ ಕ್ಷಣಕ್ಕೂ ಚಿಂತಿಸುತ್ತಿದ್ದ ರಾಮ ಒಂದು ಕಣದಷ್ಟೂ ಜನರ ಭಾವನೆಯಲ್ಲಿ ಅಪನಂಬಿಕೆ ಬರದಂತೆ ನಡೆದುಕೊಂಡ ಅಂತ ವಾಲ್ಮೀಕಿ ಹೇಳಿದ್ದಾನೆ. ಅದಕ್ಕೆ ಉದಾಹರಣೆಯಾಗಿ ತನ್ನ ಮನದರಸಿ ಸೀತಾದೇವಿಯ ಬಗ್ಗೆ ಅಗಸನೊಬ್ಬ ಕೆಟ್ಟದಾಗಿ ಮಾತನಾಡಿದ್ದನ್ನು
ಮಾರುವೇಷದಲ್ಲಿದ್ದ ರಾಮ ಕೇಳಿಸಿಕೊಂಡು ತನ್ನನ್ನು ಹಿಂಬಾಲಿಸಿ ಬಂದ ಮಡದಿಯನ್ನೂ ಮತ್ತೆ ಕಾಡಿನಲ್ಲಿ ಬಿಟ್ಟು ಬರಲು ಸಹೋದರ ಲಕ್ಷ್ಮಣನಿಗೆ ಸೂಚಿಸುತ್ತಾನೆ. ಅಂತೆಯೇ ತುಂಬು ಗರ್ಬಿಣಿ ಸೀತಾದೇವಿ ಪತಿಯ ಆದೇಶಕ್ಕೋ, ಆತನ ಭಾವನೆಗೆ ಬೆಲೆಕೊಟ್ಟೋ ಕಾಡಿಗೆ ತೆರಳುತ್ತಾಳೆ. ಅಷ್ಟರ ಮಟ್ಟಿಗೆ ನ್ಯಾಯ ಬದ್ಧತೆಯನ್ನು ಮೆರೆದ ರಾಮ ಸದಾ ಅಜರಾಮರ.

ಆದರೆ ಈಗ ಅದೇ ರಾಮನ ಹೆಸರಿನಲ್ಲಿ, ಅವನ ದೇಗುಲದ ಹೆಸರಿನಲ್ಲಿ ಕೆಲವಾರು ನೂರು ವರ್ಷಗಳಿಂದ ಏನೆಲ್ಲ ವಾದ ವಿವಾದ ನಡೆಯಿತು ಎಂಬುದು ಬಯಲು ಸತ್ಯ. ರಾಮನ ಹೆಸರಿನಲ್ಲಿ ಏನೇನೆಲ್ಲ ರಾಜಕಾರಣ ನಡೆಯಿತು, ರಾಜಕಾರಣಕ್ಕಾಗಿ ಅಯೋಧ್ಯಾ ರಾಮನ ಹೆಸರನ್ನು ರಾಜಕಾರಣಿಗಳು ಹೇಗೆಲ್ಲ ಬಳಸಿಕೊಂಡರು ಎಂಬುದು ಕನ್ನಡಿಯಷ್ಟೇ ಸ್ಪಷ್ಟ.

ಇನ್ನು ಮೂರು ತಿಂಗಳಲ್ಲಿ ಲೋಕಸಭೆ ಚುನಾವಣೆ ಬರುತ್ತಿದೆ. ‘ಕಾಕತಾಳೀಯ’ ಈ ಚುನಾವಣೆಯ ಹೊಸ್ತಿಲಿನಲ್ಲೇ ಅಯೋಧ್ಯಾ ದೇಗುಲದ ಗರ್ಭಗುಡಿಯಲ್ಲಿ ರಾಮನನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಆದರೆ ಈ ಅವಸರ ಕೇವಲ ಕಾಕತಾಳೀಯ ಅಂತ ನಂಬುವಷ್ಟು ಜನ ದಡ್ಡರಲ್ಲ. ಒಂದು ರೀತಿಯಲ್ಲಿ ರಾಮ ಭಾರತದ ನೆಲದಲ್ಲಿ ಅವತರಿಸಿದ್ದೇ ನಮ್ಮ ಈಗಿನ ನೇತಾರರು ತಮ್ಮ ಚುನಾವಣೆಗೆ ಬಂಡವಾಳ ಮಾಡಿಕೊಳ್ಳುತ್ತಿರುವುದು ವಾಸ್ತವ.

ಎಷ್ಟರ ಮಟ್ಟಿಗೆ ಜನರನ್ನು ಸೆಳೆಯಲು ಮುಂದಾದರು ಅಂದರೆ ನೂತನ ಅಯೋಧ್ಯಾ ಮಂದಿರ ಉದ್ಘಾಟನೆಯಯ ನೆಪ ಮಾಡಿಕೊಂಡು ಅಯೋಧ್ಯಾ ರಾಮ ಮಂದಿರದ ಫೋಟೋ ಮತ್ತು ಮಂತ್ರಾಕ್ಷತೆಯನ್ನು ಹಿಡಿದು ‘ಹಿಂದುತ್ವದ ಜಪ’ ಮಾಡುತ್ತ ಮನೆ ಮನೆಗೆ ತೆರಳಿದ್ದಾರೆ. ಒಂದರ್ಥದಲ್ಲಿ ಪರೋಕ್ಷ ಚುನಾವಣಾ ಪ್ರಚಾರವನ್ನೇ ಆರಂಭಿಸಿಬಿಟ್ಟಿದ್ದಾರೆ. ಇಷ್ಟು ದಿನ ಮಲಗಿದ್ದ ರಾಜಕಾರಣಿಗಳೆಲ್ಲ ಇದೀಗ ಶಲ್ಯ ಕೊಡವಿಕೊಂಡು ಮಂತ್ರಾಕ್ಷತೆ ಕೊಡಲು ಮನೆ ಮನೆಗೆ ಬರುತ್ತಿರುವುದು ನಮ್ಮ ಪ್ರಜಾಪ್ರಭುತ್ವದ ವ್ಯಂಗ್ಯ ಎಂದು ಅನಿಸದೇ ಇರದು. ಹಳ್ಳಿ-ನಗರ ಎನ್ನದೇ ಅಮಾಯಕ ಜನರೂ ಆ ಮಂತ್ರಾಕ್ಷತೆಯನ್ನು ಕಣ್ಣಿಗೊತ್ತಿಕೊಂಡು ‘ಪಾವನರಾಗುತ್ತಿದ್ದಾರೆ.’ ಈ ಮಂತ್ರಾಕ್ಷತೆ
ಹಂಚುತ್ತಿರುವ ಬೆನ್ನಿಗೇ ಹಿಂದುತ್ವವಾದಿಗಳಲ್ಲೇ ಕೆಲವು ಹಿರಿಯರು,’ಮಂತ್ರಾಕ್ಷತೆ ಕೊಡುವ ಅಧಿಕಾರ ಯಾರಿಗಿದೆ? ರಾಮಮಂದಿರ ಉದ್ಘಾಟನೆ ಆಗುವ ಮುನ್ನವೇ ಮಂತ್ರಾಕ್ಷತೆ ಕೊಡುವುದು ಸರಿಯೇ? ಎಂದೆಲ್ಲ ಪ್ರಶ್ನೆ ಮಾಡುತ್ತ ಮುಖ ಸಿಂಡರಿಸಿಕೊಂಡಿದ್ದಾರೆ.

ಊರಿನ ಇದ್ದ ಬಿದ್ದ ದೇವಸ್ಥಾನಗಳನ್ನೆಲ್ಲ ಹಿಂದುತ್ವವಾದಿ ರಾಜಕಾರಣಿಗಳ ನೇತೃತ್ವದಲ್ಲಿ ಕಾರ್ಯಕರ್ತ ಪಡೆಯನ್ನು ಕಟ್ಟಿಕೊಂಡು ಅಯೋಧ್ಯಾ ರಾಮ ಮಂದಿರ ಉದ್ಘಾಟನೆಯ ಕಾರಣಕ್ಕೆ ನೀರು ಹಾಕಿ ತೊಳೆಯುತ್ತಿದ್ದಾರೆ. ಚುನಾವಣೆ ಬರದಿದ್ದರೆ ಈ ರೀತಿ ದೇವಸ್ಥಾನಗಳಿಗೆಲ್ಲ ಪ್ರಾಂಗಣವನ್ನು ತೊಳೆಯುತ್ತಿದ್ದರೆ? ಮಂತ್ರಾಕ್ಷತೆ ಕೊಡಲು ಮನೆಮನೆಗೆ ಬರುತ್ತಿದ್ದರೇ?

ಮತ್ತೆ ಕೆಲವು ಪ್ರಗತಿಪರ ವಿಚಾರವಾದಿಗಳು ಅನ್ನ ಕೊಡಬೇಕಾದ ನೇತಾರರು ಮಂತ್ರಾಕ್ಷತೆ ಕೊಟ್ಟು ಜನರಿಗೆ ಮಂಕು ಬೂದಿ ಎರಚಲು ಮುಂದಾಗುತ್ತಿರುವುದ ಆತಂಕದ ಸಂಗತಿ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ರಾಮನ ಹೆಸರನ್ನು ಬಳಸಿಕೊಂಡು ಚುನಾವಣೆಗಾಗಿ ಏನೇನೆಲ್ಲ ಡ್ರಾಮ ಮಾಡುತ್ತಿದ್ದಾರೆ ಜನರ ಭಾವನೆಯ ಜೊತೆಗೆ ಹೇಗೆಲ್ಲ ಆಟವಾಡಬೇಕೋ ಹಾಗೆಲ್ಲ ತಂತ್ರ ಹೆಣೆಯಲಾಗುತ್ತಿದೆ.

ದೇವರು, ಧರ್ಮದ ಹೆಸರನ್ನು ಬಳಸಿ ರಾಜಕಾರಣ ಮಾಡುವುದು ಇಂದು ನಿನ್ನೆಯ ಕಥೆಯಲ್ಲ. ಕೇವದ ಮುವತ್ತು ವರ್ಷಗಳಿಂದ ಈಚೆಗೆ ವಿಪರೀತ ಅನ್ನುವಷ್ಟರ ಮಟ್ಟಿಗೆ ನಡೆದೇ ಇದೆ. ಅಯೋಧ್ಯೆ ರಾಮ ಮಂದಿರದ ಸಬೂಬು ಮಾಡಿಕೊಂಡು ಇಟ್ಟಂಗಿ ಸಂಗ್ರಹ ಮಾಡಲು ರಥಯಾತ್ರೆ ಮಾಡಿ ಅಧಿಕಾರಕ್ಕೆ ಹತ್ತಿರವಾದರು. ಕೊನೆಗೆ ರಥಯಾತ್ರೆ
ಮಾಡಿವರನ್ನೇ ರಥದಿಂದ ಇಳಿಸಿ ತಾವೇ ರಥ ಏರಿ ಸಿಂಹಾಸನದ ಹತ್ತಿರ ನಡೆದರು. ಈಗ ರಥಯಾತ್ರೆ ಮಾಡಿದವರನ್ನು ಗೌರವ ಪೂರ್ವಕವಾಗಿ ಅಯೋಧ್ಯಾ ರಾಮ ಮಂದಿರ ಉದ್ಘಾಟನೆಗೆ ಕರೆಯಲು ಮೀನಮೇಷ ಮಾಡಿದರು. ಕೊನೆಗೆ ದೇಶದಾದ್ಯಂತ ತಪ್ಪು ಸಂದೇಶ ರವಾನೆಯಾಗುತ್ತಿದ್ದಂತೆ ಕಾಟಾಚಾರಕ್ಕೆ ರಥಕರ್ತನಿಗೆ ಕರೆದಂತೆ ಮಾಡಿದರು.

ಮರ್ಯಾದಾ ಪುರುಷೋತ್ತಮ, ನ್ಯಾಯನಿಷ್ಠುರ, ಕರ್ತವ್ಯ ನಿಷ್ಠ ರಾಮನ ಹೆಸರಿನಲ್ಲಿ ಏನೇನೆಲ್ಲ ಡ್ರಾಮಾ ನಡೆಯುತ್ತಿದೆ ಎಂದುದು ಗರ್ಭಗುಡಿಯಲ್ಲಿ ಪ್ರತಿಷ್ಠಪನೆಯಾದ ರಾಮನಿಗೆ ಗೊತ್ತಾಗದಿದ್ದರೂ, ಅಯೋಧ್ಯಾ ಅಂಚಿನಲ್ಲಿ ಸಾವಿರಾರು ವರ್ಷಗಳಿಂದ ತನ್ನ ಪಾಡಿಗೆ ತಾನು ಹರಿಯುತ್ತಿರು ಜೀವನದಿ ‘ಸರಯೂ’ ಮಾತ್ರ ಎಲ್ಲವನ್ನೂ ನೋಡುತ್ತಿರುವುದು ಮಾತ್ರ ಸುಳ್ಳಲ್ಲ.

Arvind karkikodi

ಲೇಖಕರು
ಅರವಿಂದ ಕರ್ಕಿಕೋಡಿ
ಪ್ರಧಾನ ಸಂಪಾದಕರು
‘ಹಣತೆ ವಾಹಿನಿ’

Leave a Reply

Your email address will not be published. Required fields are marked *