ಯಕ್ಷಗಾನಕ್ಕೆ ಸ್ಥಿತಿ ಸ್ಥಾಪಕತ್ವ ಪರಮ ಗುಣವಿದೆ

(…ಹಿಂದಿನ ಸಂಚಿಕೆಯಿಂದ ಮುಂದುವರೆದದ್ದು)

ಹಾಗೆ ನೋಡಿದರೆ ಈ ರಂಗ ಭೂಮಿಯ ಚರಿತ್ರೆಯುದ್ದಕ್ಕೂ ಯಕ್ಷಗಾನ ಪದವೇ ಬಳಕೆಗೊಳ್ಳುತ್ತಾ ಬಂದಿಲ್ಲ. ಯಕ್ಷಗಾನ ತೀರಾ ಇತ್ತೀಚಿನ ಪರಿಭಾಷೆ. ಡಾ.ಶಿವರಾಮ ಕಾರಂತರು 1957 ರಲ್ಲಿ ಪ್ರಕಟಿಸಿದ ತಮ್ಮ ಪುಸ್ತಕಕ್ಕೆ ‘ ಯಕ್ಷಗಾನ ಬಯಲಾಟ ‘ ಎಂದು ಹೆಸರಿಸಿದರೆ 1977 ರಲ್ಲಿ ಮೈಸೂರು ವಿಶ್ವ ವಿದ್ಯಾಲಯದ ಪ್ರಸಾರಾಂಗಕ್ಕೆ ಬರೆದು ಕೊಟ್ಟ ತಮ್ಮ ಪುಸ್ತಕಕ್ಕೆ ‘ ಯಕ್ಷಗಾನ ‘ ಎಂದು ಹೆಸರಿಸಿದ್ದಾರೆ. ರಂಗಭೂಮಿಯ ಈ ಹೆಸರಿನ ಪಲ್ಲಟ ಇಪ್ಪತ್ತು ವರ್ಷಗಳ ಅವಧಿಯಲ್ಲಾದುದು. ಯಕ್ಷಗಾನದ ಮೊದಲ ಉಲ್ಲೇಖ ಕ್ರಿ.ಶ 1210 ರ ಶಾರ್ಙ ದೇವನ ‘ ಸಂಗೀತ ರತ್ನಾಕರ ‘ ದಲ್ಲಿ’ ಜಕ್ಕ’ಎಂದು ಆಗಿದ್ದು ಮುಂದೆ ಅದು ‘ಯಕ್ಕಲಗಾನ’ ಎಂದು ಕರೆಯಲ್ಲಿಟ್ಟಿತ್ತು ಅದೇ ‘ಯಕ್ಷಗಾನ’ ಆಯಿತು ಎಂಬ ವಾದವೂ ಇದೆ. ‘ ಗಂಧರ್ವ ಗ್ರಾಮ ‘ ಎಂಬ ಈಗ ನಶಿಸಿಹೋಗಿರುವಗಾನ ಪದ್ಧತಿಯಿಂದ ಗಾನವನ್ನೂ ಸ್ವತಂತ್ರ ಜಾನಪದ ಶೈಲಿಗಳಿಂದ ನೃತ್ಯವನ್ನೂ ರೂಢಿಸಿಕೊಂಡು ಯಕ್ಷಗಾನವು ರೂಪುಗೊಂಡಿತು ಎಂದು ಶಿವರಾಮ ಕಾರಂತರ ‘ ಯಕ್ಷಗಾನ ಬಯಲಾಟ ‘ ಎಂಬ ಸಂಶೋಧನಾ ಪ್ರಬಂಧಗಳ ಸಂಕಲನದಲ್ಲಿ ಹೇಳಿದೆ. ಯಕ್ಷಗಾನ ದೇವ ದಾಸಿಯರಿಂದ ಉಗಮ ಹೊಂದಿತು ಎಂದು ಸಾಧಿಸುವ ಗ್ರಂಥಗಳೂ ಬಂದಿವೆ. ಹೊನ್ನಾವರದ ನಿವೃತ್ತ ಪ್ರಾಧ್ಯಾಪಕ ಡಾ. ಎಸ್.ಡಿ.ಹೆಗಡೆಯವರು ತಮ್ಮ ಡಾಕ್ಟರೇಟ್ ಪ್ರಬಂಧದುದ್ದಕ್ಕೂ ಯಕ್ಷಗಾನ ಋತುಮತಿಯಾದ ಹೆಂಗಸರಿಂದ ಉಗಮವಾಯಿತೆಂದು ಪ್ರತಿಪಾದಿಸಿದ್ದಾರೆ. ಯಕ್ಷಗಾನ ಶಾಸ್ತ್ರೀಯ ಕಲೆ.ಅದು ಭರತನಾಟ್ಯದಿಂದ ಹುಟ್ಟಿಕೊಂಡಿತು ಎಂದು ಪ್ರತಿಪಾದಿಸುವ ಗ್ರಂಥಗಳೂ ಬಂದಿವೆ. ಈ ವಿಷಯದಲ್ಲಿ ವಿದ್ವಾಂಸರು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಮ್ಮತಕ್ಕೆ ಬರಬೇಕಾಗಿದೆ.

ಯಕ್ಷಗಾನಕ್ಕೆ ಆಟ, ಬಯಲಾಟ, ಭಾಗವತರ ಆಟ, ದಶಾವತಾರ ಆಟ, ಕೇಳಿಕೆಯ ಆಟ ಎಂಬ ಹೆಸರುಗಳೂ ಇದ್ದವು ಎಂಬುದು ಅಧ್ಯಯನದಿಂದ ತಿಳಿದುಬರುತ್ತದೆ. ಯಕ್ಷಗಾನದ ಸಂದರ್ಭದಲ್ಲಿ ಆಟ ಒಂದು ಪರಿಭಾಷೆ. ಆದರೆ ಸಾಮಾನ್ಯ ಆಟವಲ್ಲ ಲೀಲೆ. ಸರ್ವಾಂತರ್ಯಾಮಿಯ ವಿವಿಧಲೀಲೆಗಳನ್ನು ಭೂಲೋಕದ ರಂಗಸ್ಥಳದಲ್ಲಿ ಆಡಿ ತೋರಿಸುವ ಆಟ.ಆಟ ಎನ್ನುವ ಪದವೇ ಈಗ ಸರ್ವತ್ರ ಚಾಲ್ತಿಯಲ್ಲಿದೆ.

ಮೊದ ಮೊದಲು ಹಬ್ಬ ಹರಿದಿನಗಳಲ್ಲಿ ಊರಿನ ಬಯಲಿನಲ್ಲಿ ರಾತ್ರಿಯಿಡೀ ಈ ಆಟ ನಡೆಯುತ್ತಿದ್ದ ಕಾರಣ’ ಬಯಲಾಟ ‘ ಎಂಬ ಹೆಸರು ರೂಢಿಯಲ್ಲಿದೆ.ಖ್ಯಾತ ಯಕ್ಷಗಾನ ಸಂಶೋಧಕ ಡಾ.ರಾಘವ ನಂಬಿಯಾರರ ಅಭಿಪ್ರಾಯದಂತೆ ಯಕ್ಷಗಾನವು ಸಮಾಜದ ಅತ್ಯಂತ ಕೆಳ ಸ್ತರದ ಅಂದರೆ ಶೂದ್ರಾತಿ ಶೂದ್ರರಿಂದ ನಿರ್ವಹಿಸಲ್ಪಡುತ್ತಿದ್ದ ಜಾನಪದ ಕಲೆ. ಅವರುಗಳಿಗೆ ದೇವಸ್ಥಾನದ ಒಳಗಡೆಗೆ ಪ್ರವೇಶ ವಿರಲಿಲ್ಲವಾಗಿ ದೇವಸ್ಥಾನದ
ಎದುರುಗಡೆಯ ಬಯಲಿನಲ್ಲಿ ರಂಗಸ್ಥಳ ರಚಿಸಿ ಆರಾಧನಾ ರೂಪದಲ್ಲಿ  ಪ್ರದರ್ಶನ ನೀಡುತ್ತಿದ್ದರು. ಮುಂದೆ ಅದೇ ಪರಂಪರೆಯಾಗಿ ಬೆಳೆದು ಬಂದು ಬಯಲಿನಲ್ಲಿಯೇ ಆಟಗಳು ನಡೆದು’ ಬಯಲಾಟ ‘ ಎಂಬ ಹೆಸರು ಬಂದಿರಬೇಕೆಂದು ಅವರು ಅಭಿಪ್ರಾಯಪಡುತ್ತಾರೆ. ನನ್ನ ದೃಷ್ಠಿಯಲ್ಲಿ ಇದೇ ವಾಸ್ತವಕ್ಕೆ ಹೆಚ್ಚು ಹತ್ತಿರವಾದದ್ದು. ಇಂಗ್ಲೀಷಿನಲ್ಲಿ ನಾಟಕಕ್ಕೆ play ಎನ್ನುತ್ತಾರೆ. play ಎಂದರೆ ಆಟ. ಹೀಗಾಗಿ ನಾಟಕದಿಂದ ಯಕ್ಷಗಾನವನ್ನು ಬೇರ್ಪಡಿಸಿ ಹೇಳುವುದಕ್ಕಾಗಿಯೂ ಬಯಲಾಟ ಎಂಬ ಹೆಸರು ಚಾಲ್ತಿಯಲ್ಲಿ ಬಂದಿರಬಹುದು. ಒಂದು
ಕಾಲದಲ್ಲಿ ಯಕ್ಷಗಾನ ಬಯಲಾಟ ಎನ್ನುವುದು ಇಡೀ ರಂಗಭೂಮಿಯ ಹೆಸರಾದರೆ ಇಂದು ಯಕ್ಷಗಾನ ವಲಯದಲ್ಲಿ ಬಯಲಾಟವೆಂದರೆ ಧರ್ಮಾರ್ಥ ಆಟ, ಸೇವೆ ಆಟ, ಹರಕೆ ಆಟ, ಉಚಿತ ಪ್ರವೇಶದ ಆಟ ಎಂಬ ಸಂಕುಚಿತಾರ್ಥವನ್ನು ಪಡೆದುಕೊಂಡಿದೆ.

ಒಂದು ಕಾಲದಲ್ಲಿ ಯಕ್ಷಗಾನಕ್ಕೆ ಭಾಗವತರ ಆಟ ಎಂಬ ಹೆಸರೂ ಇತ್ತು.ಭಾಗವತ ಅಂದರೆ ಹಾಡುಗಾರನೇ ರಂಗಸ್ಥಳದ ಸಕಲ ವ್ಯವಹಾರಗಳ ಸೂತ್ರಧಾರ, ನಿಯಂತ್ರಕ, ನಿದೇಶಕ. ಆದುದರಿಂದ ಭಾಗವತರ ಆಟ ಎಂಬ ಹೆಸರು ಬಂದಿರಬಹುದು. ಭಗವಂತನ ಲೀಲೆಗಳನ್ನು ಆಡಿ ತೋರಿಸುವುದರಿಂದಲೂ ಈ ಹೆಸರು ಬಂದಿರಬಹುದು.

ಇದೇ ಯಕ್ಷಗಾನ ಆಟಕ್ಕೆ ಒಂದು ಕಾಲದಲ್ಲಿ ಇದ್ದ ಇನ್ನೊಂದು ಹೆಸರು ದಶಾವತಾರ ಅಥವಾ ದಶಾವತಾರ ಆಟ. ಯಕ್ಷಗಾನ ಆಟಕ್ಕೆ ಈ ಹೆಸರಿದ್ದುದರ ಬಗ್ಗೆ ಜಿಜ್ಞಾಸೆ ಇದೆ.ನಮ್ಮ ಆಟಗಳಲ್ಲಿ ಒಂದೇ ಪ್ರದರ್ಶನದಲ್ಲಿ ವಿಷ್ಣುವಿನ ಹತ್ತು ಅವತಾರಗಳನ್ನು ತೋರಿಸುವ ಕ್ರಮವಿಲ್ಲ. ದಶಾವತಾರ ಎಂಬ ಒಂದು ಪ್ರಸಂಗವಿದ್ದರೂ ಅದು ಇತ್ತೀಚೆಗೆ
ಬರೆದಿದ್ದಂತೆ. ಕರ ಸಂಕೇತಗಳಲ್ಲಿ ವಿಷ್ಣುವಿನ ದಶಾವತಾರಗಳನ್ನು ತೋರಿಸುವ ಕ್ರಮ ಹನುಮಂತನ ಪಾತ್ರದ ಪ್ರವೇಶ ನೃತ್ಯದಲ್ಲಿ ಇತ್ತಂತೆ; ಈಗ ಇಲ್ಲ.ರಾವಣ ವಧೆಯ ಕಂಡನಾಗ ವಿಶ್ವರೂಪವ ಪದ್ಯಕ್ಕೆ ರಾಮನ ಅವತಾರದವರೆಗಿನದನ್ನು ಹಸ್ತ ಮತ್ತು ನೃತ್ಯಾಭಿನಯದ

ಮೂಲಕ ತೋರಿಸುವ ಕೆರೆಮನೆ ಶಂಭು ಹೆಗಡೆಯವರ ಕ್ರಮ ತೀರಾ ಇತ್ತೀಚಿನದು. ಬಹುಶ:ದಶಾವತಾರಕ್ಕೆ ಸಂಬಂಧಪಟ್ಟ  ಪ್ರಸಂಗಗಳೇ ಹೆಚ್ಚಿಗೆ ಇರುವುದರಿಂದ  ಯಕ್ಷಗಾನಕ್ಕೆ ಆ ಹೆಸರು ಬಂದಿರಬಹುದು. ಯಕ್ಷಗಾನ ಮೇಳಕ್ಕೆ ದಶಾವತಾರ ಮೇಳ,ಯಕ್ಷಗಾನದ ಎಲ್ಲ ಅಂಗಗಳನ್ನು ಬಲ್ಲವನನ್ನು ಅಥವಾ ಯಕ್ಷಗಾನ ಪಾತ್ರಧಾರಿಯನ್ನು ದಶಾವತಾರಿ ಎಂದು ಕರೆಯುವ ಪರಿಪಾಠವಿತ್ತು. ಈಗ ಆ ಪದಗಳೂ ಕೂಡಾ ಮರೆಯಾಗುತ್ತಲಿವೆ.ಯಕ್ಷಗಾನ ಎಂಬ ಪದವೇ ಈ ಶಬ್ಧದ ಸ್ಥಾನದಲ್ಲಿ ಬಲವಾಗಿ ನೆಲೆಯೂರುತ್ತಿದೆ. ಈ ನಾಮ ಪಲ್ಲಟದಲ್ಲಿಯೇ ಯಕ್ಷಗಾನ ರಂಗ ಭೂಮಿಯ ಸಮಸ್ತ ವಿಘಟನೆಯ ಬೀಜವಿದೆಯೆಂದು
ವಾದಿಸುವವರಿದ್ದಾರೆ.ಖ್ಯಾತ ಯಕ್ಷಗಾನ ಸಂಶೋಧಕ ಡಾ.ಜಿ.ಎಸ್.ಭಟ್ ಸಾಗರ ಅವರು ಅಭಿಪ್ರಾಯ ಪಡುವಂತೆ  ‘ ಯಕ್ಷಗಾನ ‘ ಘಟಕವನ್ನೇ ಮೂಲಮಾನವಾಗಿಟ್ಟುಕೊಂಡು ಅದರ ಸ್ವರೂಪ ಸಾಧ್ಯತೆ ಬೆಳವಣಿಗೆಗಳನ್ನೆಲ್ಲ ಇಡಿಯಾಗಿ ಹಿಡಿದಿಡಬಲ್ಲ ಒಂದು ನಿರ್ವಚನವಾಕ್ಯ ಯಕ್ಷಗಾನಕ್ಕೆ ಬೇಕಾಗಿದೆ.ಅಂಥ ಸಮಗ್ರ ನೋಟದ ಲಕ್ಷಣ ವಾಕ್ಯ  ಇಲ್ಲವೆಂಬುದು ವಿಪರ್ಯಾಸವೇ ಸರಿ. ಯಕ್ಷಗಾನಕ್ಕೊಂದು ಆಧಾರ ಗ್ರಂಥ ಬೇಕೆಂದು ಪ್ರತಿಪಾದಿಸುವವರು
ಮೊದಲಿಗೆ ಒಂದು ವ್ಯಾವಹಾರಿಕ ಲಕ್ಷಣ ವಾಕ್ಯವನ್ನು ನಿರ್ಮಾಣ ಮಾಡಿಕೊಳ್ಳುವುದು ಒಳ್ಳೆಯದು.ಈಗಾಗಲೇ ಬೇಕಾದಷ್ಟು ನಿರ್ವಚನ ವಾಕ್ಯಗಳಿವೆ.ಇಲ್ಲವೆನ್ನುವುದಿಲ್ಲ. ಇವುಗಳಲ್ಲಿ ಕೆಲವು ಕಾಲ ಬದ್ಧ, ಇನ್ನು ಕೆಲವು ಸಂದರ್ಭ ಬದ್ಧ,ಮತ್ತೆ ಕೆಲವು ಅಸಮಗ್ರ. ಉಳಿದವು ಅತಿವ್ಯಾಪ್ತಿ ಅವ್ಯಾಪ್ತಿ ದೋಷಗಳಿಂದ ಕೂಡಿವೆ.

ಬೆಳೆದು ನಿಂತು, ಸ್ಥಿತಿ ಸ್ಥಾಪಕತ್ವ ಪರಮ ಗುಣವುಳ್ಳ ಯಕ್ಷಗಾನ ರಂಗ ಭೂಮಿ ಯಾರಿಗೆ ಏನು ಬೇಕಾದರೂ ಆಗಬಹುದು. ಮುಗ್ಧ ಭಕ್ತರಿಗೆ ತಮ್ಮ ದೈವಾರಾಧನೆಯ, ಹರಕೆ ಸಲ್ಲಿಸುವ ಒಂದು ಮಾರ್ಗ.ಬಂಡವಾಳಶಾಹಿಗಳಿಗೆ ಹಾಕಿದ ಹಣವನ್ನು  ಲಾಭಸಹಿತ ಮರಳಿ ಪಡೆಯುವ ವ್ಯಾಪಾರ. ದೊಡ್ಡ ದೊಡ್ಡ ಶಹರಗಳಲ್ಲಿ ಬದುಕು ಕಟ್ಟಿಕೊಂಡವರಿಗೆ ಹುಟ್ಟಿದ ಊರಿನಲ್ಲಿ ಪ್ರತಿಷ್ಠೆ ಮೆರೆಸುವ ಕಣ. ಕಲಾವಿದರಿಗೆ ಹೆಸರು ಮತ್ತು ಹಣಗಳಿಸುವ ಹಾದಿ.
ವಿದ್ವಾಂಸರಿಗೆ ವಿದ್ಯಾಗರ್ವ ತೋರಿಸುವ ಅವಕಾಶ. ಯಕ್ಷಗಾನವು ಕರ್ನಾಟಕದ ಹೆಮ್ಮೆಯ ಕಲೆ, ಅಭಿಜಾತ ಕಲೆ, ಸಾಂಪ್ರದಾಯಿಕ ಕಲೆ, ಜಾನಪದ ಕಲೆ,ಶಾಸ್ತ್ರೀಯ ಕಲೆ ಎಂಬೆಲ್ಲ ನುಡಿಗಳು ಭಾಗಶ: ಮತ್ತು ಸಾಂದರ್ಭಿಕ ಸತ್ಯ ಮಾತ್ರ. ಇಡಿಯಾಗಿ ಅಲ್ಲ.

(ಮುಂದಿನ ಸಂಚಿಕೆಗೆ ಮುಂದುವೆಯುವುದು)

ಗಣಪತಿ ಹೆಗಡೆ ಕೊಂಡದಕುಳಿ,ಕುಮಟಾ
ಕವಿ, ಹವ್ಯಾಸಿ ಯಕ್ಷಗಾನ ಕಲಾವಿದ

One thought on “ಯಕ್ಷಗಾನಕ್ಕೆ ಸ್ಥಿತಿ ಸ್ಥಾಪಕತ್ವ ಪರಮ ಗುಣವಿದೆ

Leave a Reply

Your email address will not be published. Required fields are marked *