ನೀಲಿ ನಕ್ಷತ್ರವೊಂದರ ನೆನಪ ಇಬ್ಬನಿಯಲ್ಲಿ ……….

ಈ ಅಂಕಣವನ್ನು ಬರೆಯಲು ಕುಳಿತ ಹೊತ್ತಿಗೆ ಆತನ ಹೋರಾಟದ ಬದುಕು ಮತ್ತು ಆ ಬದುಕನ್ನು ಆವರಿಸಿದ್ದ ತಲ್ಲಣಗಳು ವ್ಯಕ್ತಿಗೊಬ್ಬನಿಗಷ್ಟೇ ಸಂಬಂಧಿಸಿದ್ದಲ್ಲವೆಂಬ ಸಂಕಟ ನನ್ನನಾವರಿಸಿಬಿಟ್ಟಿತ್ತು. ನಭದ ಚುಕ್ಕಿ, ಚಂದ್ರಮ, ಗ್ರಹ, ತಾರಾದಿಗಳಷ್ಟು ಹೊಳಪನ್ನು ಕಣ್ಣುಗಳಲ್ಲಿ ತುಂಬಿಕೊಂಡು ಭೂಮ್ಯಾಕಾಶಗಳ ನಡುವಲ್ಲೊಂದು ‘ನೀಲಿ ಏಣಿ’ ಕಟ್ಟುವ ಕನಸಲ್ಲಿದ್ದ ತರುಣನೊಬ್ಬ ದಿಢೀರನೆ ಉಲ್ಕೆಯೊಂದರಂತೆ ಉರಿದು ಮರೆಯಾಗಿದ್ದು ವಿವರಿಸಲಾರದ ನೋವಿಗೆ ಕಾರಣವಾಗಿದೆ.

ಅದು 2016 ರ ಜನವರಿ17. ದೇಶವೊಂದು ಹೊಂದಿರಬೇಕಾದ ಅಂತರಾಳದ ನೈತಿಕ ಪ್ರಜ್ಞೆಯನ್ನು ಹಾಗೂ ಅದರ ಅಸ್ತಿತ್ವವನ್ನು ಪ್ರಶ್ನಿಸಿದ ಯುವ ಕಾಮ್ರೇಡನೊಬ್ಬ ವ್ಯವಸ್ಥೆಯ ನೈತಿಕ ಅಧಃಪತನಕ್ಕೆ ಬೆದರಿ ತನ್ನ ಬದುಕನೇ ಬಲಿಕೊಟ್ಟ ದಿನ. ಆ ಕಾಮ್ರೇಡನ ಹೆಸರು ರೋಹಿತ್ ವೇಮುಲ. ಮುಂದಿನ ಮಾತುಗಳಿಗೆ ಹೋಗುವ ಮುನ್ನ ‘ನೀಲಿಏಣಿ’ ಕನಸಿನ ಆ ಹೊಳಪು ಕಂಗಳು ಶಾಶ್ವತವಾಗಿ ಮುಚ್ಚುವ ಮುನ್ನ ಅಕ್ಷರಗಳಾದ ಪರಿಯ ನೋಡಿಬಿಡಿ.

ಶುಭ ಮುಂಜಾನೆ

ಈ ಪತ್ರವನ್ನು ನೀವು ಓದುವಾಗ ನಾನಿರುವುದಿಲ್ಲ, ಕೋಪ ಮಾಡಿಕೊಳ್ಳಬೇಡಿ. ನನಗೆ ಗೊತ್ತು. ನಿಮ್ಮಲ್ಲಿ ಹಲವರು ನಿಜಕ್ಕೂ ನನ್ನ ಬಗ್ಗೆ ಕಾಳಜಿ ತೋರಿದಿರಿ, ಪ್ರೀತಿಸಿದಿರಿ ಮತ್ತು ಚೆಂದ ನೋಡಿಕೊಂಡಿರಿ. ಯಾರ ಮೇಲೂ ನನಗೆ ದೂರುಗಳಿಲ್ಲ, ಯಾವಾಗಲೂ ನನಗೆ ಸಮಸ್ಯೆಯಿದ್ದಿದ್ದು ನನ್ನೊಂದಿಗೇನೆ, ನನ್ನ ದೇಹ ಮತ್ತು ಆತ್ಮದ ನಡುವಿನ ಕಂದಕ ದೊಡ್ಡದಾಗುತ್ತಿರುವ ಭಾವನೆ ಮತ್ತು ನಾನು ರಾಕ್ಷಸನಾಗಿಬಿಟ್ಟಿದ್ದೇನೆ.

ಯಾವಾಗಲೂ ಒಬ್ಬ ಬರಹಗಾರನಾಗಬೇಕೆಂಬುದು ನನ್ನ ಬಯಕೆಯಾಗಿತ್ತು. ಕಾರ್ಲ್ ಸಗಾನ್‌ನಂತೆ, ವಿಜ್ಞಾನದ ಬರಹಗಾರನಾಗ ಬಯಸಿದ್ದೆ. ಕೊನೆಗೆ, ಇದೊಂದು ಪತ್ರವನ್ನಷ್ಟೇ ನನ್ನಿಂದ ಬರೆಯಲಾಗುತ್ತಿರುವುದು. ವಿಜ್ಞಾನ, ನಕ್ಷತ್ರ, ಪ್ರಕೃತಿಯನ್ನು ಪ್ರೀತಿಸಿದೆ; ಆದರೆ ಪ್ರಕೃತಿಯಿಂದ ಮನುಷ್ಯರು ವಿಚ್ಛೇದನ ಪಡೆದು ಬಹಳ ಕಾಲವಾಯಿತು ಎಂಬುದನ್ನು ಅರಿಯದೆ ಮನುಷ್ಯರನ್ನು ಪ್ರೀತಿಸಿದೆ. ನಮ್ಮ ಭಾವನೆಗಳೆಲ್ಲ ಸೆಕೆಂಡ್ ಹ್ಯಾಂಡು. ಪ್ರೀತಿಯನ್ನಿಲ್ಲಿ ‘ಕಟ್ಟಲಾಗಿದೆ’ (constructed), ನಂಬಿಕೆಗಳಿಗಿಲ್ಲಿ ಬಣ್ಣ ಬಳಿಯಲಾಗಿದೆ. ನಮ್ಮ ಸ್ವಂತಿಕೆಗೆ ಪ್ರೀತಿಸುವುದು ನಿಜಕ್ಕೂ ಕಷ್ಟಕರವಾಗಿಬಿಟ್ಟಿದೆ.

ಅದು ಅಧ್ಯಯನ ಕ್ಷೇತ್ರದಲ್ಲಿರಲಿ, ಬೀದಿಗಳಲ್ಲಿರಲಿ, ರಾಜಕೀಯದಲ್ಲಿರಲಿ, ಸಾವಿನಲ್ಲಿರಲಿ ಅಥವಾ ಬದುಕಿನಲ್ಲೇ ಇರಲಿ; ಮನುಷ್ಯನ ಮೌಲ್ಯ ಎಂಬುದು ಅವನ ತತ್‌ಕ್ಷಣದ ಅಸ್ಮಿತೆ ಮತ್ತು ಸಮೀಪದ ಯಾವುದೋ ಒಂದು ಸಾಧ್ಯತೆಯ ಮಟ್ಟಕ್ಕಷ್ಟೇ ಇಳಿದುಬಿಟ್ಟಿದೆ. ಒಂದು ವೋಟಿಗೆ, ಒಂದು ಸಂಖ್ಯೆಗೆ, ಒಂದು ವಸ್ತುವಿಗೆ. ಅಷ್ಟೆ. ಮನುಷ್ಯನನ್ನು ಅವನ ಮನಸ್ಸಿನ ಮೂಲಕ ಎಂದೂ ಪರಿಗಣಿಸಲಿಲ್ಲ. ನಭೋಮಂಡಲದ ನಕ್ಷತ್ರಗಳ ಧೂಳಿನಿಂದ ಮಾಡಲ್ಪಟ್ಟ ಅತ್ಯದ್ಭುತ ವಸ್ತುವಿನಂತೆ ಎಂದೂ ಅವನನ್ನು ಗುರುತಿಸಲಿಲ್ಲ. ಈ ರೀತಿಯ ಪತ್ರವನ್ನು ಮೊದಲ ಬಾರಿಗೆ ಬರೆಯುತ್ತಿದ್ದೇನೆ. ಇದು ಅಂತಿಮ ಪತ್ರದ ಮೊದಲ ಯತ್ನ. ಏನಾದರೂ ತಪ್ಪಾಗಿ ಬರೆದಿದ್ದರೆ ಮನ್ನಿಸಿ.


ಬಹುಷಃ ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನು ತಪ್ಪಿದೆ. ಪ್ರೀತಿ, ನೋವು, ಬದುಕು, ಸಾವು ಇವನ್ನೆಲ್ಲಾ ಅರ್ಥ ಮಾಡಿಕೊಳ್ಳುವಲ್ಲಿ ಸೋತೆ. ಆತುರವೇನಿರಲಿಲ್ಲ. ನಾನು ಓಡುತ್ತಲೇ ಇದ್ದೆ. ಬದುಕು ಪ್ರಾರಂಭಿಸುವ ಹತಾಶೆಯಿಂದ ಓಡುತ್ತಿದ್ದೆ. ಕೆಲವರಿಗೆ ಬದುಕೇ ಒಂದು ಶಾಪ. ನನಗೆ, ನನ್ನ ಹುಟ್ಟೇ ನನಗೆ ಮಾರಣಾಂತಿಕ ಅಪಘಾತ. ನನ್ನ ಬಾಲ್ಯದ ಏಕಾಂಗಿತನದಿAದ ನಾನೆಂದೂ ಚೇತರಿಸಿಕೊಳ್ಳಲಾರೆ. ನನ್ನ ಗತದಿಂದ ಬಂದ ಪಾಪಿ ಕೂಸು ನಾನು.

ಈ ಕ್ಷಣದಲ್ಲಿ ನನಗೆ ನೋವಾಗುತ್ತಿಲ್ಲ. ದುಖಃವಾಗುತ್ತಿಲ್ಲ; ಖಾಲಿ ಖಾಲಿ ಅನಿಸುತ್ತಿದೆ. ನನ್ನ ಬಗ್ಗೆ ನನಗೇ ಕಾಳಜಿಯಿಲ್ಲದಾಗಿದೆ. ಇದು ಅಸಹ್ಯ, ಹಾಗಾಗಿ ಈ ಕೆಲಸ ಮಾಡುತ್ತಿದ್ದೇನೆ. ಜನರು ನನ್ನನ್ನು ಹೇಡಿಯೆಂದು ಜರಿಯಬಹುದು. ನಾನು ಹೋದ ಮೇಲೆ ಸ್ವಾರ್ಥಿ, ಮೂರ್ಖ ಎನ್ನಬಹುದು. ಅದರ ಬಗ್ಗೆಯೇನೂ ಚಿಂತೆಯಿಲ್ಲ. ಪುನರ್ ಜನ್ಮದ ಕತೆಗಳಲ್ಲಿ ಭೂತ, ಪಿಶಾಚಿಗಳಿರುವುದರಲ್ಲಿ ನನಗೆ ನಂಬಿಕೆಯಿಲ್ಲ. ಏನಾದರೂ ನಂಬುವುದಿದ್ದರೆ ಅದು ನಾನು ತಾರೆಗಳವರೆಗೆ ಪ್ರಯಾಣಿಸಬಲ್ಲೆನೆಂಬುದನ್ನು ಮಾತ್ರ ಮತ್ತು ಇತರ ಪ್ರಪಂಚಗಳ ಬಗ್ಗೆ ತಿಳಿದುಕೊಳ್ಳಬಲ್ಲೆ ಎಂಬುದನ್ನು ಮಾತ್ರವೇ.

ಈ ಪತ್ರ ಓದುತ್ತಿರುವ ನೀವು ನನಗೇನಾದರೂ ಮಾಡಬಹುದಾದರೆ, ಕಳೆದ ಏಳು ತಿಂಗಳಿನ ಫೆಲೋಶಿಪ್ ಹಣ ಒಂದು ಲಕ್ಷದ ಎಪ್ಪತ್ತೆöÊದು ಸಾವಿರ ರೂಪಾಯಿ ಇನ್ನೂ ಬರಬೇಕಿದೆ. ಅದು ನನ್ನ ಕುಟುಂಬದವರಿಗೆ ತಲುಪುವಂತೆ ಮಾಡಿ. ರಾಮ್‌ಜಿಗೆ ನಲವತ್ತು ಸಾವಿರದಷ್ಟು ಕೊಡಬೇಕಿದೆ. ಅವನದ್ಯಾವತ್ತೂ ವಾಪಸ್ ಕೇಳಿಲ್ಲ. ದಯವಿಟ್ಟು ನನಗೆ ಬರುವ ಹಣದಲ್ಲಿ ಅವನ ಹಣವನ್ನು ಕೊಟ್ಟುಬಿಡಿ.

ನನ್ನ ಅಂತ್ಯಕ್ರಿಯೆ ಶಾಂತವಾಗಿ, ಸುಗಮವಾಗಿ ನಡೆಯಲಿ. ಹಿಂಗೆ ಕಾಣಿಸಿಕೊಂಡು ಹಂಗೆ ಮರೆಯಾಗಿಬಿಟ್ಟ ಎನ್ನುವಂತೆ ವರ್ತಿಸಿ. ನನಗಾಗಿ ಕಣ್ಣೀರು ಬೇಡ. ಜೀವಂತವಾಗಿದ್ದಾಗ ಇರುವುದಕ್ಕಿಂತಲೂ ಸತ್ತಮೇಲೆಯೇ ನಾನು ಖುಷಿಯಾಗಿರುತ್ತೇನೆ ಎನ್ನುವುದು ಗೊತ್ತಿರಲಿ. ‘ಮಬ್ಬುಗತ್ತಲೆಯಿಂದ ತಾರೆಗಳೆಡೆಗೆ’. ಉಮಾ ಅಣ್ಣ ಈ ಕೆಲಸಕ್ಕೆ ನಿಮ್ಮ ರೂಮನ್ನು ಉಪಯೋಗಿಸಿದ್ದಕ್ಕೆ ಕ್ಷಮೆ ಇರಲಿ. ನಿರಾಸೆ ಮೂಡಿಸಿದ್ದಕ್ಕೆ ‘ಆಸಾ’ ಕುಟುಂಬದ (ASA: Ambedkar Students Association) ಕ್ಷಮೆ ಕೋರುತ್ತೇನೆ. ನೀವೆಲ್ಲರೂ ನನ್ನನ್ನು ತುಂಬಾ ಪ್ರೀತಿಸಿದಿರಿ. ನಿಮ್ಮೆಲ್ಲರ ಉಜ್ವಲ ಭವಿಷ್ಯಕ್ಕೆ ಹಾರೈಸುತ್ತಿದ್ದೇನೆ. ಇದೋ ಕೊನೆಯ ಒಂದು ಸಲ,
ಜೈ ಭೀಮ.

ಫಾರ್ಮಾಲಿಟಿಗಳನ್ನು ಬರೆಯುವುದನ್ನು ಮರೆತುಬಿಟ್ಟೆ. ನನ್ನ ಸಾವಿಗೆ ಯಾರೂ ಹೊಣೆಗಾರರಲ್ಲ. ಯಾರೂ ನನ್ನನ್ನು ತಮ್ಮ ಕೃತ್ಯಗಳಿಂದಾಗಲೀ, ಮಾತಿನಿಂದಾಗಲೀ ಇದಕ್ಕೆ ಉತ್ತೇಜಿಸಲಿಲ್ಲ. ಇದು ನನ್ನ ನಿರ್ಧಾರ ಮತ್ತು ಇದಕ್ಕೆ ನಾನೊಬ್ಬನೇ ಜವಾಬ್ದಾರ. ನಾನು ಹೋದ ಮೇಲೆ ಈ ವಿಷಯವಾಗಿ ನನ್ನ ಸ್ನೇಹಿತರಿಗೆ ಮತ್ತು ಶತ್ರುಗಳಿಗೆ ತೊಂದರೆ ಕೊಡಬೇಡಿ.

ರೋಹಿತ್ ವೇಮುಲ

ಪತ್ರದ ನಿಷ್ಕರ್ಷೆಗೆ ನಾನು ಹೋಗುವುದಿಲ್ಲ. ತನ್ನ ಆಸೆ, ಆಕಾಂಕ್ಷೆ, ಹೋರಾಟ ಹಾಗೂ ನಿರಾಸೆಗಳ ಕುರಿತಾಗಿ ಆತ ಸಾಕಷ್ಟು ಮುನ್ನೆಚ್ಚರಿಕೆಯೊಡನೆ ವಿಸ್ತಾರವಾಗಿಯೇ ಅರುಹಿದ್ದಾನೆ. ಇಪ್ಪತ್ತಾರರ ಯುವಕನೊಬ್ಬನ ದಾರುಣ ಮರಣ ಪತ್ರ ಆತನ ಕನಸುಗಳ ಮೋಹಕತೆಯ ಸರಿಸಮಾಪ್ತಿಗೆ ಸಾಕ್ಷಿಯಾಗಿ ನಿಂತಿದ್ದಷ್ಟನ್ನೆ ಇಲ್ಲಿ ವಿಶದಪಡಿಸುತ್ತೇನೆ.

ದೇಶದೆಲ್ಲೆಡೆ ‘ಸಾಂಸ್ಥಿಕ ಕೊಲೆ’ಯೆಂದು ಕರೆಸಿಕೊಂಡ ಈ ಸಾವಿಗೆ ಕಾರಣವಾದರೂ ಏನು? ಉತ್ತರ ಮತ್ತದೇ ಮನುಪ್ರತಿಪಾದಿತ ಜಾತಿವ್ಯವಸ್ಥೆಯ ಹಳವಂಡದ ಕೂಪದೆಡೆಗೆ ಕೈದೋರುತ್ತದೆ. ವಿಶ್ವವಿದ್ಯಾಲಯದ ಸಂಶೋಧಕನಾಗಿ ಅರಿವಿನ ಹರಹುಗಳನ್ನು ವಿಸ್ತರಿಸಿಕೊಳ್ಳುತ್ತಿದ್ದ ಪ್ರತಿಭಾವಂತನೊಬ್ಬ ತನ್ನ ಅಪರಿಮಿತ ಓದು ಹಾಗೂ ಆ ಓದಿನ ಕಾರಣಕ್ಕಾಗಿ ಬದಲಾಯಿಸುವ ಮಾಯ್ಕಾರನಾಗುತ್ತಾನೆ ಎಂಬ ಭಯವೇ ಪಟ್ಟಭದ್ರ ಜಾತಿವಂತರ ಕೆಂಗಣ್ಣಿಗೆ ಕಾರಣವಾಗಿತ್ತು. ಖೂಳರ ಕೂಟದ ದುಷ್ಟ ಸಂಚಿಕೆ ವೇಮುಲ ಬಲೆಗೆ ಬಿದ್ದುಹೋಗಿದ್ದ. ಆತನ ಬದುಕಿನ ಬರವಸೆಗಳನ್ನು ಮಂಕಾಗಿಸುವಲ್ಲಿ ಯಶಸ್ವಿಯಾಗಿದ್ದವರ ಸಂಚು ಕೈಗೂಡಿಯೇಬಿಟ್ಟಿತ್ತು. ಆತ ಜೀವ ಚೆಲ್ಲಿದ್ದ.

ವಿದ್ಯಾರ್ಥಿಗಳ ನಡುವಿನ ಸೈದ್ಧಾಂತಿಕ ಹೋರಾಟವೊಂದು ಕೋಮು ಬಣ್ಣದ ದಳ್ಳುರಿ ಹೊತ್ತಿಸಿ ಹೋಹಿತನ ಬಲಿ ಪಡೆದಿತ್ತು. ಆತನ ಸಾವಿನ ನಂತರ ನಡೆದದ್ದೆಲ್ಲವೂ ಸಂಚಿನ ಆಟಗಳೇ. ತುಳಿತಕ್ಕೊಳಗಾದ ಬದುಕು ನಡೆಸಿದ್ದ ಧೀರ ವೇಮುಲನ ಹುಟ್ಟಿನ ಜಾತಿಯ ಕುರಿತಾದ ಗೊಂದಲವೆಬ್ಬಿಸಿ ಸಂಚುಗಾರರೆಲ್ಲ ಲಾಭಕ್ಕಾಗಿ ಸಾಲಾಗಿ ನಿಂತ ಪರಮನೀಚ ನಡೆಯನ್ನು ಸೂಕ್ಷö್ಮಮತಿಗಳಾರೂ ಮರೆಯಲಾರರು.

ಆತನ ತಾಯಿ ಆಂಧ್ರಪ್ರದೇಶದ ದಲಿತ ಸಮುದಾಯಕ್ಕೆ ಸೇರಿದ ರಾಧಿಕಾ ವೆಮುಲಾ ಗಟ್ಟಿ ಹೆಣ್ಣುಮಗಳು. ತನ್ನ ಮತ್ತೊಬ್ಬ ಮಗನೊಡಗೂಡಿ ಕಳೆದುಹೋದ ಮಗನಿಗಾಗಿ ಸುರಿಯುತ್ತಿರುವ ಕಣ್ಣೀರಿನೊಡನೆಯೇ ನಿರಂತರವಾಗಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.

ಸ್ಪಟಿಕ ಸ್ಪಷ್ಟವಿದೆ.  ಬಸವನ ಕೊಂದವರೆ ವೇಮುಲನನ್ನು ಕೊಂದಿದ್ದರು.  ಅನ್ನ ಕೇಳಿದವರಿಗೆ ಅಕ್ಷತೆ ದಯಪಾಲಿಸುತ್ತಿರುವ ಈ ಸುಭಿಕ್ಷ ಕಾಲದಲ್ಲಿ ರೋಹಿತ ಅನುಭವಿಸಿದ ಸಂಕಟ........

ಲೇಖಕರು :
ಪ್ರೊ. ಸಂದೇಶ ಎಚ್ ರತ್ನಪುರಿ ಮೈಸೂರು,
ಇಂಗ್ಲೀಷ್ ಪ್ರಾಧ್ಯಾಪಕರು

Leave a Reply

Your email address will not be published. Required fields are marked *