….ಆದರೆ, ಇನ್ನೂ ನನಗೆ ಅವರ ಮೇಲೆ ಕೋಪವಿದೆ !

(ನನ್ನ ವಿದ್ಯಾ ಗುರುಗಳಾದ ಹಳದೀಪುರದ ಎಚ್.ಎನ್.ಪೈ ಸರ್ ಅವರಿಗೆ ಜನವರಿ 21 ರಂದು ಭಾನುವಾರ ಅವರ ಶಿಷ್ಯವೃಂದ ಹಾಗೂ ಊರ ನಾಗರಿಕೆರೆಲ್ಲ ಸೇರಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಅವರಿಗೆ ಗೌರವಪೂರ್ವಕವಾಗಿ ಅಭಿನಂದನ ಗ್ರಂಥ ಅರ್ಪಿಸಲಾಗುತ್ತಿದೆ. ಗುರುವಂದನಾ ಸಮಿತಿ ನನ್ನಿಂದಲೂ ನನ್ನ ಪ್ರೀತಿಯ ವಿದ್ಯಾ ಗುರುಗಳ ಬಗ್ಗೆ ನಾಲ್ಕು ಸಾಲು ಬರೆಯಲು ಹೇಳಿದರು. ನಾನು ಪೈ ಸರ್ ಅವರನ್ನು ಅಭಿನಂದಿಸಿ ಪುಟ್ಟ ಬರಹ ಈ ಹೊತ್ತಿಗೆಗೆ ಕೊಟ್ಟಿದ್ದೇನೆ. ಅದನ್ನು ಈ ವಾರದ ‘ಹಣತೆ ವಾಹಿನಿ’ಯ ನನ್ನ ‘ನದಿ’ ಅಂಕಣದಲ್ಲಿ ಬಳಸಿಕೊಂಡು ನಿಮ್ಮೆಲ್ಲರೊಂದಿಗೆ ಮತ್ತೊಮ್ಮೆ ಈ ಮೂಲಕ ನನ್ನ ಪೈ ಸರ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. –ಅರವಿಂದ ಕರ್ಕಿಕೋಡಿ)

ನಾನು ಭಟ್ಕಳದ ಶಿರಾಲಿಯಲ್ಲಿನ ಜನತಾ ವಿದ್ಯಾಲಯದಲ್ಲಿ ಎಂಟು ಮತ್ತು ಒಂಭತ್ತನೇ ತರಗತಿ ಮುಗಿಸಿ ಎಸ್.ಎಸ್.ಎಲ್.ಸಿ. ಓದಲು ಇಲ್ಲಿ ಹೊನ್ನಾವರದ ಹಳದೀಪುರ ಆರ್.ಇ.ಎಸ್ .ಪ್ರೌಢಶಾಲೆಗೆ ಬಂದು ಸೇರಿಕೊಂಡಿದ್ದೆ. ಸರಕಾರಿ ನೌಕರಿಯಲ್ಲಿದ್ದ ನನ್ನ ತಂದೆ ಹಳದೀಪುರಕ್ಕೆ ವರ್ಗಾವಣೆಯಾಗಿ ಬಂದಿದ್ದಿರಿಂದ ಈ ಪ್ರೌಢಶಾಲೆಗೆ ನನ್ನನ್ನು ಸೇರಿಸಿದ್ದರು. ಹೊಸ ಹೈಸ್ಕೂಲು, ಹೊಸ ಹೊಸ ಗೆಳೆಯರು, ಕನ್ನಡಕ ಮೂಗಿನ ಮೇಲೆ ಇಟ್ಟುಕೊಂಡೇ ಗಂಭೀರವಾಗಿರುತ್ತಿದ್ದ ಅಧ್ಯಾಪಕವೃಂದ. ಹೊಸ ಹೈಸ್ಕೂಲಿನಲ್ಲಿ ಆರಂಭದ ಮೊದಲ ಪಿರಿಯಡ್ಡು ಇಂಗ್ಲಿಷು. ಪಿ.ವಿ.ಹಬ್ಬು ಸರ್ ಅವರದ್ದು. ಎರಡನೇ ಪಿರಿಯಡ್ಡು ಗಣಿತ. ಎಚ್.ಎನ್.ಪೈ ಸರ್ ಅವರದ್ದು. ಕ್ಲಾಸಿಗೆ ಬಂದವರೇ ಮುಂದಿನ ಡೆಸ್ಕ್ ನಲ್ಲಿ ಕುಳಿತ ನನ್ನನ್ನು ಕನ್ನಡಕದೊಳಗಿಂದ ದಿಟ್ಟಿಸಿ ನೋಡಿದರು. ನನಗೂ ಅವರದ್ದು ಹೊಸ ಮುಖ, ಅವರಿಗೂ ನಂದು ಹೊಸ ಮುಖ. ‘ಎಲ್ಲಿಂದ ಬಂದಿದ್ದೀಯಪ್ಪ, ಅಂತ ಕೇಳಿದರು. ನಾನು ನಿಂತು ವರದಿ ಒಪ್ಪಿಸಿದೆ. ‘ಚೆನ್ನಾಗಿ ಓದು’ ಅಂತ ಹೇಳಿದರು. ನಾನು ತಲೆ ಅಲ್ಲಾಡಿಸಿ ಕುಳಿತುಕೊಂಡೆ.

ಸ್ಪಷ್ಟ ಕನ್ನಡ, ನೀಟಾಗಿ ಶೇವ್ ಮಾಡಿದ ಗೌರವವರ್ಣದ ಮುಖ ಚಹರೆ, ಮುಖದ ಮೇಲೊಂದು ಕನ್ನಡಕ. ಮಾತನಾಡುವಾಗ ಸಣ್ಣ ಮಂದಹಾಸ. ನನಗೆ ಸ್ಪಷ್ಟವಾಗಿ ನೆನಪಿದೆ, ಆ ದಿನ ಅವರು ಕಾಫಿ ¨ಬಣ್ಣದ ಸಫಾರಿ ಹಾಕಿದ್ದರು. ಥಟ್ಟನೆ ನೋಡಿದರೆ ಕಾಲೇಜು ಪ್ರೊಫೆಸರ್ ಕಂಡಂತೆ ಯಾರಿಗೇ ಆದರೂ ಅನಿಸದೇ ಇರದು.

ಪಾಠ ಮಾಡಲು ಶುರು ಹಚ್ಚಿಕೊಂಡರು. ಇವರು ಗಣಿತ ಮೇಷ್ಟ್ರು ಕನ್ನಡ ಮೇಷ್ಟ್ರುಅಂತ ಗೊತ್ತಾಗುತ್ತಿರಲಿಲ್ಲ. ಅನೇಕರು ಗಣಿತವನ್ನು ಗಣಿತ ಭಾಷೆಯಲ್ಲೇ ಕಲಿಸುವುದರಿಂದ ಮಕ್ಕಳು ಬೆರಳು ಲೆಕ್ಕ ಮಾಡುವುದರಲ್ಲೇ ಕಕ್ಕಾಬಿಕ್ಕಿಯಾಗುತ್ತಾರೆ. ಆದರೆ ಈ ಸಫಾರಿ ಮೇಷ್ಟ್ರು ಗಣಿತವನ್ನು ಸುಲಲಿತ ಕನ್ನಡದಲ್ಲಿ ಕಲಿಸುವುದರಿಂದ ತಮ್ಮ ಪಾಠದಲ್ಲಿ ಚುಂಬಕದಂತೆ ಸೆಳೆದು ವಿದ್ಯಾರ್ಥಿಗಳು ಒಳಗೊಳ್ಳುವಂತೆ ಮಾಡುತ್ತಿದ್ದರು. ಪಿನ್ ಡ್ರಾಪ್ ಸೈಲೆನ್ಸ್ ಅಂತಾರಲ್ಲ, ಹಾಗೆ ಅವರ ಪಿರಿಯಡ್ಡು.. ಕ್ಲಾಸ್ ರೂಂ ಒಳಗೆ ಬರುವಾಗ ಅವರ ಸಿದ್ಧತೆ ಮತ್ತು ಬದ್ಧತೆ ಎದ್ದು ಕಾಣುತ್ತಿತ್ತು.

ಪ್ರಮೇಯಗಳು, ರೇಖಾಗಣಿತ, ಸಮೀಕರಣಗಳು… ಇವೆಲ್ಲವನ್ನು ಪಾಠ ಮಾಡುವಾಗ ಅವರು ಯಾವಾಗಲೂ ಹೇಳುತ್ತಿದ್ದ ಮಾತು ಈಗಲೂ ಮರೆಯದಷ್ಟು ನನ್ನೊಳಗೆ ಅಚ್ಚೊತ್ತಿದೆ. ‘ಗಣಿತ ವಿಷಯ ಎಂಬುದು ಸಂಪೂರ್ಣವಾಗಿ ಕಷ್ಟಕರ ಸಬ್ಜೆಕ್ಟ್ ಅಲ್ಲವೇ ಅಲ್ಲ’ ಎನ್ನುತ್ತ ‘Practice makes a man Perfectness’ ಎಂದು ಹೇಳುತ್ತಿದ್ದರು. ಅಂದರೆ ನಿರಂತರ ಅಭ್ಯಾಸದಿಂದ ಮನುಷ್ಯ ಪರಿಪೂರ್ಣನಾಗುತ್ತಾನೆ ಎಂದರ್ಥ. ಈ ಮಾತನ್ನು ಯಾಕೆ ಇಲ್ಲಿ ಮರೆಯುದೇ ಬಳಸಿದೆ ಅಂದರೆ ಇಂದಿನ ಎಸ್.ಎಸ್.ಎಲ್.ಸಿ ಮಕ್ಕಳಲ್ಲಿ ಯಾರಾದರೂ ಈ ಲೇಖನ ಓದಿದರೆ ಅವರೂ ನಮ್ಮ ಎಚ್.ಎನ್.ಪೈ ಸರ್ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಲಿ ಅಂತ.

ದಿನ ಕಳೆಯುತ್ತ ಹೋಯಿತು. ಯಾಕೋ ಗೊತ್ತಿಲ್ಲ, ನನ್ನ ಮೇಲೆ ಅವರ ನದರು ಜಾಸ್ತಿ ಇರುವುದು ಗಮನಕ್ಕೆ ಬಂತು. ಪದೇ ಪದೇ ನನಗೆ ಪಾಠಗಳ ಮಧ್ಯೆ ಪ್ರಶ್ನೆ ಕೇಳಲು ಸುರು ಮಾಡಿದ್ದರು. ಹಾಗಾಗಿ ಅವರ ಕ್ಲಾಸಿನಲ್ಲಿ ಕೊಂಚ ಹುಷಾರಾಗುಳಿದೆ. ‘ಸ್ವಲ್ಪ ಮಿಸುಕಾಡಿದರೂ ಗ್ರಹಚಾರ ನೆಟ್ಟಗಿರುವುದಿಲ್ಲ’ ಅಂತ ನನ್ನ ಸಹಪಾಠಿಗಳು ಅಷ್ಟೊತ್ತಿಗಾಗಲೇ ನನಗೆ ಕಿವಿ ಮಾತು ಹೇಳಿದ್ದರು.

ಕೇವಲ ಗಣಿತದ ವಿಷಯಕ್ಕೆ ಮಾತ್ರವಲ್ಲ, ಇಡೀ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಅವರ ನಡೆ-ನುಡಿ ಕೂಡ ತುಂಬ ವಿಶಿಷ್ಟ. ವಾರ್ಷಿಕೋತ್ಸವವಿರಲಿ, ಕ್ರೀಡಾಕೂಟವಿರಲಿ, ಸ್ವಾತಂತ್ರ್ಯ ದಿನಾಚರಣೆಯಿರಲಿ, ಗಣರಾಜ್ಯೋತ್ಸವವಿರಲಿ… ಅವರು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಡುವ ರೀತಿಯೇ ಅಪ್ಯಾಯಮಾನ.

ಇಷ್ಟೆಲ್ಲ ನಾನು ಹೇಳಿದ್ದು ಪೈ ಮಾಸ್ಟರ್ ಮೇಲಿನ ಪ್ರೀತಿ, ಗೌರವ ಮತ್ತು ಅಭಿಮಾನದಿಂದ. ಆದರೆ ನನಗೆ ಅವರ ಮೇಲೆ ಈಗಲೂ ಕೋಪ ಇದೆ. ಯಾಕೆ ಅಂತ ಈಗ ಕೇಳಿ: ಒಮ್ಮೆ ನಮಗೆಲ್ಲ ಅವರು ಏನೇನೋ ಹೋಂ ವರ್ಕ್ ಕೊಟ್ಟಿದ್ದಾರೆ. ನಾನು ಅವೆಲ್ಲವನ್ನೂ ಮಾಡಿಕೊಂಡು ಹೋಗಿದ್ದೆ. ನನ್ನ ಅಕ್ಷರವೋ ಕೋಳಿಕಾಲು; ಬ್ರಹ್ಮನಿಗಿಂತಲೂ ಒಂದು ಕೈ ಮೇಲು. ನಾನು ಬರೆದದ್ದು ನನಗೇ ಅರ್ಥವಾಗದಿರುವಷ್ಟರ ಮಟ್ಟಿಗೆ ಕಳಪೆಯಾಗಿತ್ತು. ಪೈ ಮಾಸ್ಟ್ರು ಕ್ಲಾಸಿಗೆ ಬಂದವರೇ ಎಲ್ಲರ ಹೋಂ ವರ್ಕ್ ಪಟ್ಟಿ ನೋಡುತ್ತ ನನ್ನ ಬಳಿ ಬಂದು ಪಟ್ಟಿ ನೋಡಿದರು. ಪಟ್ಟಿಯ ಪುಟ ತೆರೆದಂತೆ ಅವರ ಬಿಳಿ ಬಣ್ಣದ ಮುಖ ಕೆಂಪಾಯಿತು. ಎಲ್ಲರೆದುರೇ ಆ ಪಟ್ಟಿಯನ್ನು ಹರಿದು ನನ್ನ ಮುಖದ ಮೇಲೆಯೇ ಎಸೆದರು. ಅವರು ಅಗ್ನಿಯಾಗಿದ್ದರು, ಜಮದಗ್ನಿಯೇ ಆಗಿದ್ದರು. ಈ ತರ ಅಕ್ಷರ ಬರೆದರೆ ಓದುವವರು ಯಾರು? ಎಸ್.ಎಸ್.ಎಲ್.ಸಿ. ಓದ್ತಿದ್ದೀಯ. ಇನ್ನೂ ಅಕ್ಷರ ಸರಿಯಾಗಿ ಬರೆಯಲು ಬರುವುದಿಲ್ಲ. ನಾಚಿಕೆ ಆಗಲ್ವ, ನಾಳೆ ವಾರ್ಷಿಕ ಪರೀಕ್ಷೆಯಲ್ಲಿ ನಿನ್ನ ಉತ್ತರ ಪತ್ರಿಕೆ ಓದುವವರು ಯಾರು? ಅಂತೆಲ್ಲ ಒಂದೇ ಉಸುರಿಗೆ ಒದರಿದರು. ಬಹುಶಃ ಸಿಟ್ಟು ತಣಿಯಲಿಲ್ಲ ಅನಿಸುತ್ತದೆ, ನನ್ನನ್ನು ಬಗ್ಗಿಸಿ ಬೆನ್ನಿನ ಮೇಲೆ ಡುಂ ಅಂತ ಗುದ್ದಿದರು ‘ಜಮದಗ್ನಿ’! ಕಣ್ಣುಮುಚ್ಚಿ ಒಡೆಯುವುದರೊಳಗೆ ಇಷ್ಟೆಲ್ಲ ಆಗಿ ಹೋಗಿತ್ತು.

ನನಗೆ ಪೈ ಮಾಸ್ಟರ್ ಮೇಲೆ ಇವತ್ತಿನವರೆಗೂ ಕೋಪ ಇದೆ. ಕೋಪ ಇರುವುದು ಅವರು ಪಟ್ಟಿ ಹರಿದು ನನ್ನ ಮುಖದ ಮೇಲೆ ಎಸೆದದ್ದಕ್ಕಲ್ಲ, ಅಥವಾ ವಾಚಾಮಗೋಚರ ಬೈದಿದ್ದಕ್ಕಲ್ಲ, ಅಥವಾ ಬಗ್ಗಿಸಿ ಗುದ್ದು ಹೊಡೆದದ್ದಕ್ಕೂ ಅಲ್ಲ, ಅವರು ನನ್ನ ಕ್ಲಾಸಿನ ಹೆಣ್ಣು ಮಕ್ಕಳ ಮುಂದೆಯೇ ಈ ವೀರಪುರಷನಿಗೆ ಇಷ್ಟೆಲ್ಲ ಮಂಗಳಾರತಿ ಮಾಡಿ, ಬಗ್ಗಿಸಿ ಗುದ್ದು ಹೊಡೆದರಲ್ಲ? ಅದಕ್ಕೇ ಅವರ ಮೇಲಿನ ಕೋಪ ಇನ್ನೂ ತಣಿಯಲಿಲ್ಲ. ಅವರನ್ನು ನೋಡಿದಾಗೆಲ್ಲ ಅಂದಿನ ಆ ದೃಶ್ಯವೇ ಕಣ್ಣುಂದೆ ಈಗಲೂ ಹಾದು ಹೋಗುತ್ತದೆ. ಅಂದು ಅವರು ಅಷ್ಟೆಲ್ಲ ಹೆಣ್ಣು ಮಕ್ಕಳ ಮುಂದೆ ಜಮದಗ್ನಿಯಾಗಿ ನನ್ನ ಬೆನ್ನಿಗೆ ಗುದ್ದು ಹೊಡೆದ ದಿನದಂದೇ ನಿರ್ಧಾರ ಮಾಡಿದೆ; ನನ್ನ ಅಕ್ಷರ ಸುಧಾರಿಸಿಕೊಳ್ಳಲೇ ಬೇಕು ಅಂತ.

ಎಸ್.ಎಸ್.ಎಲ್.ಸಿ. ನಂತರ ನನ್ನ ಪಯಣ ಕುಮಟಾ ಬಾಳಿಗಾ ಕಾಲೇಜಿನತ್ತ. ಅಷ್ಟೊತ್ತಿಗಾಗಲೇ ನಾನು ಕಥೆ-ಕವನ ಅಂತ ಸಾಹಿತ್ಯದ ಗುಂಗಿನಲ್ಲಿ ಬಿದ್ದಿದ್ದೆ. ಒಮ್ಮೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನವರು ಕೈ ಬರಹದಲ್ಲಿಯೇ ರಾಜ್ಯಮಟ್ಟದ ಲೇಖನ ಸ್ಪರ್ಧೆ ಏರ್ಪಡಿಸಿದ್ದರು. ನಾನು ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದೆ. ಆಗ ನನಗೆ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದದ್ದಕ್ಕಿಂತ ಹೆಣ್ಣುಮಕ್ಕಳ ಮುಂದೆ ನನಗೆ ಹೊಡೆದ ಪೈ ಮಾಸ್ಟರ್ ಗುದ್ದಿಗೆ ಉತ್ತರ ಕೊಟ್ಟೆ ಎಂಬ ಖುಷಿ ದೊಡ್ಡದಾಗಿ ಕಂಡಿತ್ತು. ಮರುದಿನದ ಪತ್ರಿಕೆಗಳಲ್ಲಿ ನನಗೆ ಬಹುಮಾನ ಬಂದ ಸುದ್ದಿ ಮತ್ತು ನನ್ನ ಫೋಟೊ ಪ್ರಕಟಗೊಂಡಾಗ ನಮ್ಮ ಪೈ ಮಾಸ್ಟ್ರು ನನಗೆ ಫೋನ್ ಮಾಡಿ ಖುಷಿಯಿಂದ ಅಭಿನಂದಿಸಿದ್ದರು. ತಾವು ನನಗೆ ಹೆಣ್ಣು ಮಕ್ಕಳ ಎದುರು ಗುದ್ದು ಹೊಡೆದದ್ದು ಅವರಿಗೆ ನೆನಪೇ ಇರಲಿಲ್ಲ. ಫೋನ್‌ನಲ್ಲಿ ಅವರಿಗೆ ಪ್ರತಿಕ್ರಿಯಿಸುತ್ತ ನಾನು ‘ಸರ್ ನಿಮ್ಮ ‘ಆಶೀರ್ವಾದ’ದಿಂದಲೇ ಈ ಬಹುಮಾನ ಬಂದಿತು’ ಅಂತ ಸಣ್ಣದಾಗಿ ಹೇಳಿದೆ. ಅವರಿಗೆ ಆಗಲೂ ಹೆಣ್ಣು ಮಕ್ಕಳ ಮುಂದೆ ಈ ಹುಡುಗನಿಗೆ ‘ಕಜ್ಜಾಯ’ ಕೊಟ್ಟಿದ್ದು ನೆನಪಿಗೆ ಬಂದಿರಲಿಕ್ಕಿಲ್ಲ.

ಎರಡು ವರ್ಷಗಳ ಹಿಂದೆ ಕುಮಟಾದಲ್ಲಿ ನಡೆದ ಭರತನಾಟ್ಯ ಗುರು ವಿಜೇತಾ ಭಂಡಾರಿಯವರ ಶಿಷ್ಯವೃಂದದವರ ರಂಗಪ್ರವೇಶ ಕಾರ್ಯಕ್ರಮದಲ್ಲಿ ನಾನು ಮತ್ತು ಪೈ ಮಾಸ್ಟ್ರು ಒಂದೇ ವೇದಿಕೆಯನ್ನು ಹಂಚಿಕೊಂಡೆವು. ಕಾರ್ಯಕ್ರಮ ಉದ್ಘಾಟಿಸಿದ ನಾನು ಎಲ್ಲರೆದುರೇ ಈ ಗುರು-ಶೀಷ್ಯನ ‘ಗುದ್ದು ಪುರಾಣ’ವನ್ನು ಬಹಿರಂಗ ಮಾಡಿದೆ. ಆ ವೇದಿಕೆಗೆ ಅದು ಔಚಿತ್ಯಪೂರ್ಣ ಅನಿಸಿ ಅಂದಿನ ನನ್ನ ಎಸ್.ಎಸ್.ಎಲ್.ಸಿ ಕ್ಲಾಸ್ ರೂಮಿನ ಸನ್ನಿವೇಶವನ್ನು ನೆನಪು ಮಾಡಿಕೊಂಡೆ. ಪೈ ಮಾಸ್ಟ್ರು ತುಟಿಯಲ್ಲಿ ಮಂದಹಾಸ ಮೂಡಿತ್ತು. ಗುರುವಿನ ಶಿಕ್ಷೆಯಲ್ಲಿ ಪ್ರೀತಿ ಮತ್ತು ಕಾಳಜಿ ಇರುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ ಎಂದು ನಾನು ಒತ್ತಿ ಒತ್ತಿ ಹೇಳಬಲ್ಲೆ.

ಈಗೆಲ್ಲ ನಾನು ಹಿರಿಯ ಸಾಹಿತಿಗಳಿಗೆ ಬರೆದ ಪತ್ರದಲ್ಲಿನ ಅಕ್ಷರ ನೋಡಿ ‘ಅರವಿಂದ್, ನಿಮ್ಮ ಅಕ್ಷರ ಪ್ರಿಂಟ್ ಹಾಕಿಸಿದಂತೆ ಇರುತ್ತದೆ’ ಅಂದಾಗಲೆಲ್ಲ ನಮ್ಮ ಪ್ರೀತಿಯ ಪೈ ಮಾಸ್ಟರ್ ಮುಖವೇ ಕಣ್ಮುಂದೆ ಬರುತ್ತದೆ. ಆದರೆ, ಇನ್ನೂ ನನಗೆ ಅವರ ಮೇಲೆ ಕೋಪವಿದೆ ! ಯಾಕೆಂದರೆ ಅವರು ನನಗೆ ಹೆಣ್ಣು ಮಕ್ಕಳ ಮುಂದೆ ಬೆನ್ನು ಬಗ್ಗಿಸಿ ಗುದ್ದು ಹೊಡೆದರು !

Arvind karkikodi

ಲೇಖಕರು
ಅರವಿಂದ ಕರ್ಕಿಕೋಡಿ
ಪ್ರಧಾನ ಸಂಪಾದಕರು
ಹಣತೆವಾಹಿನಿ

Leave a Reply

Your email address will not be published. Required fields are marked *