ಅಂದು ನನ್ನ ಇಬ್ಬರು ಜನ ಗೆಳೆಯರೊಂದಿಗೆ ಹರಟೆ ಹೊಡೆಯುತ್ತಿದ್ದೆ. ಆಗ ಒಬ್ಬ ಗೆಳೆಯ ತನ್ನ ಜೇಬಿನಿಂದ ಒಂದು ಗುಟ್ಕಾ ಪ್ಯಾಕ್ ತೆಗೆದು ಬಾಯಿಗೆ ಸುರಿದ ಅದರ ಜೊತೆ ಇನ್ನೊಂದನ್ನು ಸುರಿದ…
ನಾನು ಸುಮ್ಮನೆ ಕೇಳಿದೆ…
‘ ದಿನಕ್ಕೆ ಎಷ್ಟು ಬೇಕಾಗುತ್ತದೆ ನಿನಗೆ ಇದು … ‘
‘ದಿನಕ್ಕೆ ಎಂಟರಿಂದ ಹತ್ತು …. ಟೆನ್ಶನ್ ಇರುವಾಗ ಲೆಕ್ಕ ಇರುವುದಿಲ್ಲ… ” ಅವನೆಂದ …
‘ ಮಗಾ… ಬಿಟ್ಟ ಹಾಕು ಅದು ಒಳ್ಳೆಯದಲ್ಲ… ಆ ಪ್ಯಾಕ್ ನ ಮೇಲೆಯೇ ಕ್ಯಾನ್ಸರ್ ನ ಹುಣ್ಣಿನ ಫೋಟೋ ಹಾಕಿರುತ್ತಾರೆ ಕಾಣೋದಿಲ್ವಾ ನಿನಗೆ ?’
ನಮ್ಮ ನಡುವೆ ಇದ್ದ ಇನ್ನೊಬ್ಬ ಗೆಳೆಯ ಹೇಳಿದ…
ಅದಕ್ಕೆ ಉತ್ತರವೋ ಎಂಬಂತೆ ಅವನು ಗುಟ್ಕಾ ಅಗೆಯುತ್ತಲೇ ಇದ್ದ…
ಇನ್ನೊಬ್ಬ ಗೆಳೆಯ ತನ್ನ ಬೋಧನೆ ಮುಂದುವರಿಸಿ ಗುಟ್ಕಾ ಸೇವನೆಯ ದುಷ್ಪರಿಣಾಮಗಳನ್ನು ವಿವರಿಸುತ್ತಲೇ ಇದ್ದ …
ಅಷ್ಟಕ್ಕೇ ಗುಟ್ಕಾ ಅಗೆಯುತ್ತಿದ್ದ ಗೆಳೆಯ ಬೇಸತ್ತು…
” ಎ ಮಾರಾಯ ನಾನು ನಿನ್ನ ತರ ಅಲ್ಲ … ನಂದು ಸ್ಟ್ರಾಂಗ್ ಬಾಡಿ… ನನಗೆ ಯಾವ ರೋಗಾನೂ ಅಂಟೋದಿಲ್ಲ… “
ಎಂದು ಬಿಟ್ಟಿದ್ದ. ಬೋಧನೆ ಮಾಡುತ್ತಿದ್ದವವ ನಿಗೆ ಕೆಲವು ಫುಡ್ ಅಲರ್ಜಿ ಇದೆ ಅಂತ ಅವನಿಗೆ ಗೊತ್ತಿತ್ತು. ಅದಕ್ಕಾಗಿ ಈ ಮಾತನ್ನು ಹೇಳಿಬಿಟ್ಟಿದ್ದ. ಬೋಧನೆ ಮಾಡುತ್ತಿದ್ದವ ಕೊಂಚ ಮನನೊಂದು ಸುಮ್ಮನಾಗಿದ್ದ… ” ಅವನ ಬೋಧನೆ ನಿಂತುದನ್ನು ನೋಡಿ ಗುಟ್ಕಾ ಪ್ರಿಯ ಗೆಳೆಯ ಮುಂದುವರಿಸಿದ್ದ…
“ಅಷ್ಟಕ್ಕೂ , ನೀನು ಗುಟ್ಕಾ ತಿಂತಾ ಇಲ್ಲ ತಾನೇ ? ಮತ್ತೆ ನಿನಗೇಕೆ ಪದೇ ಪದೇ ಆರಾಮ ಅನ್ನುವುದು ಇರುವುದಿಲ್ಲ ? ಡಾಕ್ಟರ್ ಬಳಿ ಹೋಗುತ್ತಲೇ ಇರುತ್ತೀಯಲ್ಲ…? ನನ್ನ ನೋಡು ಲೈಫ್ ಎಂಜಾಯ್ ಮಾಡ್ತಾ ಇದ್ದೀನಿ … ಲೈಫ್ ನಲ್ಲಿ ಎಲ್ಲ ಇರಬೇಕು.. ತಿಳಿತಾ … ? ” ಎಂದ…
ಈ ಮದ್ಯೆ ನಾನು ನನ್ನ ಮಾತು ತೂರಿಸಿದೆ… ” ಈ ಗುಟ್ಕಾ ತಿನ್ನುವುದು ಪ್ರಾರಂಭ ವಾದುದು ಯಾವಾಗ ? ” ಎಂದು ಕೇಳಿದೆ ಗುಟ್ಕಾ ಪ್ರಿಯನಿಗೆ…
‘ಇದು ಶುರುವಾದುದು , ನಾನು ಕಾಲೇಜ್ ಫಸ್ಟ್ ಇಯರ್ ನಲ್ಲಿ ಇದ್ದಾಗ ನನ್ನ ದೋಸ್ತ ತೆಗೆದುಕೋ ಅಂದ.. ಬೇಡ ಎಂದೇ … ಒಂದೇ ಕಾಳು … ಜಗಿದು ನೋಡು… ಚೆನ್ನಾಗ್ ಇರ್ತದೆ ಅಂದ… ಅಂದು ತಿಂದು ಒಂದು ಕಾಳು ಇವತ್ತಿಗೆ ಪ್ಯಾಕೆಟ್ ಗಟ್ಟಲೆ ತಿನ್ನೋತರ ಮಾಡಿ ಬಿಟ್ಟಿದೆ…’ ಎಂದು ಉತ್ತರಿಸಿದ…
‘ ನೀನಿದನ್ನು ಬಿಡಬೇಕೆಂದು ಪ್ರಯತ್ನಿಸಲಿಲ್ಲವಾ ?” ಮತ್ತೆ ಕೇಳಿದೆ
‘ಏಯ್ , ಹೋಗು ಮಾರಾಯ… ಇದಿಲ್ಲದಿದ್ದೆ ತಲೆ ಓಡೋದಿಲ್ಲ …’ ಎಂದ ಗುಟ್ಕಾ ಪ್ರಿಯ ಗೆಳೆಯ…
‘ ನಿನ್ನ ಈ ಪ್ರಾಬ್ಲಮ್ ಶುರು ಆಗಿದ್ದು ಹೇಗೆ ? ‘ ಬೋಧನೆ ನೀಡಿ ಸುಮ್ಮನಾದ ಗೆಳೆಯನಿಗೆ ಕೆಣಕಿದೆ…
‘ಚಿಕ್ಕವನಿದ್ದಾಗಿನಿಂದ ಇದೆ ಮಾರಾಯ … ಒಮ್ಮೊಮ್ಮೆ ವಿಪರೀತ ತಲೆನೋವು… ಮೈಯೆಲ್ಲಾ ತದ್ದು ಎದ್ದುಕೊಳ್ಳುವುದು… ಕೆಲವೊಮ್ಮೆ ವಾಂತಿ ಹೀಗೆ ನಡೆದಿದೆ… ಹಲವು ಡಾಕ್ಟರ್ ಗಳಿಗೆ ತೋರಿಸಿದೆ… ಪರಿಹಾರ ಇನ್ನೂ ಸಿಕ್ಕಿಲ್ಲ.. ನನಗೆ ಯಾವ ಚಟವೂ ಇಲ್ಲ ಆದರೂ ನೋಡು … ಕೆಲವು ದಿನದ ಹಿಂದೆ ಒಬ್ಬರು ಆಯುರ್ವೇದದ ಔಷದಿ ಮಾಡಲು ಸೂಚಿಸಿದ್ದಾರೆ.. ಅದೊಂದು ಮಾಡಿ ನೋಡುವುದು ಬಾಕಿ ಇದೆ … ‘ ಎಂದು ಬೇಸರಗೊಂಡ…
ಅಂದು ಅಲ್ಲಿದ್ದವರು ಎಲ್ಲರೂ ಗೆಳೆಯರು … ಯಾರ ಮಾತಿಗೂ ಯಾರು ಬೇಸರಗೊಂಡಿರಲಿಲ್ಲ ಎಂಬುದೇನೋ ನಿಜ.. ಆದರೆ ಅವರ ಆ ಮಾತುಗಳನ್ನು ಕೇಳುತ್ತಿದ್ದ ನನ್ನ ಮನದಲ್ಲಿ ಅದೆಷ್ಟೋ ವಿಚಾರಗಳು ಹಾದು ಹೋದವು… ಹುಟ್ಟಿನ ನಂತರದ ನಮ್ಮೆಲ್ಲರ ದಾರಿ ಸಾವಿನೆಡೆಗೆಯೇ ಆಗಿರುತ್ತದೆ ನಿಜ… ಅಂದು ನಂಗೆ ಇಬ್ಬರು ದಾರಿ ಹೋಕರು ಕಂಡರು. ಒಬ್ಬ ತನ್ನ ಪ್ರಯಾಣ ಸುಖಕರ ಗೊಳಿಸಲು ಹೆಣಗಾಡುತ್ತಿದ್ದ … ಇನ್ನೋರ್ವ ಮುಂದೊಂದು ದಿನ ಘಾತಕ ವೆನಿಸುವ ಕ್ಷಣಿಕ ಸುಖವನ್ನೇ ನಿಜವಾದ ಸುಖವೆಂದು ನಂಬಿ ತನ್ನ ಕೈಯಾರೆ ತನ್ನ ಪ್ರಯಾಣವನ್ನು ಕಠಿಣ ಎಣಿಸಿಕೊಳ್ಳುತ್ತಿದ್ದ…ಇವೆಲ್ಲ ಆಲೋಚಿಸುತ್ತಿದ್ದ ನನಗೆ ನನ್ನ ವಿಚಾರಗಳು ನನಗೇ ಒಂದು ಮರು ಪ್ರಶ್ನೆ ಕೇಳಿದವು ” ನೀನು ಯಾವ ರೀತಿಯ ಪ್ರಯಾಣ ಮಾಡುತ್ತಿದ್ದೀಯಾ ? ” ಎಂದು ….
ಲೇಖಕರು :
ರಾಘವೇಂದ್ರ ಲಕ್ಷ್ಮೇಶ್ವರ್
Founder & Creative Head
Grapito Desings (Design and Marketing agency)