ಆ ಕ್ಷಣದ ಮಾತುಗಳ ಸಾಮರ್ಥ್ಯದ ನಿರ್ಧರಣೆ

ಹಿಂದಿನ ವಾರ ಇಂದಿನ ದಿನದಲ್ಲಿ ವ್ಯಾವಹಾರಿಕ ಪ್ರಪಂಚದ ಸಂದರ್ಭಗಳಲ್ಲಿ ವ್ಯಕ್ತಿಯೊಬ್ಬನ ಸಂವಹನ ಸಾಮರ್ಥ್ಯವೇ ಹೆಚ್ಚು ಗಣನೆಗೆ ಬರುತ್ತಿದ್ದು, ಅಲ್ಲಿ ಸ್ಪಷ್ಟವಾದ ಮಾತುಗಾರಿಕೆ, ಗಹನವಾಗಿ ಕೇಳಿಸಿಕೊಳ್ಳುವಿಕೆ,

ಸಹ್ಯವಾಗಬಹುದಾದ ಆಂಗಿಕ ಭಾಷೆ ಇವೆಲ್ಲವನ್ನೂ ಸೇರಿಸಿಕೊಂಡರೆ ಉಳಿದ ವ್ಯಕ್ತಿಗಳಿಗಿಂತ ಆತ ಸರ್ಧೆಯಲ್ಲಿ ಸದಾ ಉನ್ನತ ಸ್ಥಾನದಲ್ಲಿರಬಲ್ಲ. ಸ್ವಪ್ರಯತ್ನದಿಂದ ಸಂವಹನ ಜಾಣ್ಮೆಯನ್ನು ವೃದ್ಧಿಸಿಕೊಳ್ಳಬಹುದಾಗಿದ್ದು, ಇದರಿಂದ ಉತ್ತಮ ಮಾತುಗಾರನು ಸಮಾಜದಲ್ಲಿ, ಕುಟುಂಬದಲ್ಲಿ, ವೃತ್ತಿ ಕ್ಷೇತ್ರದಲ್ಲಿ ಪ್ರಶಂಸೆಗೆ ಒಳಗಾಗುತ್ತಾನೆ ಎಂಬುದನ್ನ ಅರಿತುಕೊಂಡೆವು.

ಮಾತುಕತೆಯಲ್ಲಿ ಅಡಗಿರುವ ಸರಳಾರ್ಥ, ಆ ಕ್ಷಣದ ಮಾತುಗಳ ಸಾಮರ್ಥ್ಯದ ನಿರ್ಧಾರ ಆಗುವ ಬಗೆ ಹಾಗೂ ಆ ನಿರ್ಧಾರಗಳನ್ನು ಎಂದಿಗೂ ಸರಿ ತಪ್ಪು ಎಂದು ಕಾರಣಗಳ ಆಧಾರದ ಮೇಲೆ ವಿಶ್ಲೇಷಿಸುವುದರ ಹಿಂದಿರುವ ಕಷ್ಟ, ಅಂತಹ ನಿರ್ಧಾರಗಳಿಗೆ ಪೂರಕವಾದ ಪರ ವಿರೋಧದ ಸಂಗತಿಗಳು ನಮಗೆ ಆಧಾರವಾಗಿ ದೊರಕಬಹುದೆ? ಅದಕ್ಕೆ ಪೂರಕವಾಗಿ ನಾವೇನು ಮಾಡಬಹುದು ಎಂಬುದರ ಕುರಿತಾಗಿ ಮಾಹಿತಿಯನ್ನು ಪಡೆದುಕೊಳ್ಳೋಣ.

ಮುಲ್ಲಾ ನಸ್ರುದ್ದೀನ್ ಜ್ಞಾನೋದಯಕ್ಕಾಗಿ (Enlightement) ಹುಡುಕಾಟ ನಡೆಸಿರುತ್ತಾನೆ. ಹುಡುಕುತ್ತಾ, ಹುಡುಕುತ್ತಾ ಹಿಮಾಲಯ ಪರ್ವತಕ್ಕೆ ಬರುತ್ತಾನೆ – ಓರ್ವ ಯೋಗಿಯನ್ನು ಭೇಟಿಯಾಗುತ್ತಾನೆ. ಆ ಯೋಗಿಯಾದರೂ ಅಲ್ಲಿಯೇ ಕುಳಿತು ಪಕ್ಷಿ, ಪ್ರಾಣಿ, ಪ್ರಕೃತಿ, ಬದಲಾವಣೆ ಮತ್ತಿತರವುಗಳನ್ನೇ ನೋಡುತ್ತಾ,
ನಿಗಾವಹಿಸುತ್ತಾ, ಮನುಷ್ಯರಿಗೆ ಉಪಯೋಗವಾಗಬಹುದಾದಂತಹ ಹಲವಾರು ಸಂಗತಿಗಳನ್ನು ಕಲಿತಿರುತ್ತಾನೆ. ನಾನು ಜೀವನದ ಬಹುಪಾಲು ಸಮಯವನ್ನು ಇಲ್ಲಿಯೇ ಕಳೆದು ಜೀವನದ ಹಲವಾರು ಸಂಗತಿಗಳ ಮುಖಾಂತರ ಜ್ಞಾನೋದಯದ ಹಾದಿಯನ್ನು ಕಂಡು ಕೊಂಡಿದ್ದೇನೆ. ಜೀವನದ ವಿವಿಧ ಮಜಲುಗಳನ್ನು ಅನುಭವಿಸಿದ್ದೇನೆ ಎಂದು ಹೇಳುತ್ತಾನೆ. ಆಗ ಮುಲ್ಲಾ ಹೇಳುತ್ತಾನೆ. ಅಹುದಹದು, ನಾನೂ ಸಹ, ಒಮ್ಮೆ ನನ್ನ ಪ್ರಾಣವನ್ನು ಒಂದು ಮೀನು ಉಳಿಸಿತು. ಎಂದುತ್ತರಿಸುತ್ತಾನೆ. ಆಗ ಆ ಸನ್ಯಾಸಿಗೆ ಆಶ್ಚರ್ಯ, ಹೌದೆ? ಹೇಗೆ? ಮೀನು ನಿನ್ನ ಪ್ರಾಣವನ್ನು ಹೇಗೆ ಉಳಿಸಿತು ಎಂಬುದನ್ನು ಹೇಳಿದರೆ ನಾನು ಇದುವರೆಗೂ ಕಲಿತಿರುವ ಸಕಲ ವಿದ್ಯೆಗಳ ಗೌಪ್ಯತೆಗಳ ಸಾರಾಂಶವನ್ನು ತಿಳಿಸುತ್ತೇನೆ ಎನ್ನುತ್ತಾನೆ. ಸರಿ ಹಾಗಾದರೆ ನೀವು ನಿಮ್ಮ ಸಕಲ ವಿದ್ಯೆಗಳ ಗೌಪ್ಯತೆಯ ಸಾರಾಂಶಗಳನ್ನು ಮೊದಲು ತಿಳಿಸಿರಿ; ನಂತರ ನಾನು ಮೀನು ನನ್ನ ಪ್ರಾಣ ಉಳಿಸಿದ ವಿಷಯ ಹೇಳುತ್ತೇನೆ ಎನ್ನುತ್ತಾನೆ. ಆ ಮಾತಿಗೆ ಒಪ್ಪಿದ ಸನ್ಯಾಸಿ, ತನ್ನ ಜೀವನದ ಕಲಿಕೆಯ ಎಲ್ಲಾ ಸಾರಾಂಶಗಳನ್ನು ಮುಲ್ಲಾನಿಗೆ
ಹೇಳಿಕೊಡುತ್ತಾನೆ. ಹಾಗೂ ಮುಲ್ಲಾನ ಪ್ರಾಣ ಹಾಗೂ ಮೀನಿನ ಘಟನೆ ತಿಳಿಸು ಎನ್ನುತ್ತಾನೆ. ಆಗ ನಸುನಕ್ಕ ಮುಲ್ಲಾ, ಅದೇನು ಬಹಳ ದೊಡ್ಡ ವಿಷಯವಲ್ಲ, ಒಮ್ಮೆ ಏನಾಯಿತೆಂದರೆ, ನಾನು ಪ್ರಯಾಣಿಸುತ್ತಿದ್ದಾಗ ನನಗೆ ಅತೀವ ಹಸಿವೆಯಾಯಿತು. ಹಸಿವೆಯಿಂದ ನಾನು ಸಾಯುತ್ತೇನೆ ಎನ್ನುವ ಪರಿಸ್ಥಿತಿ ತಲುಪಿದೆ. ಸುತ್ತಲೂ ಆಹಾರ ಖರೀದಿಸಲು ಯಾವುದೇ ಹಳ್ಳಿಯಾಗಲಿ, ಪಟ್ಟಣವಾಗಲಿ ಇರಲಿಲ್ಲ. ಅಂತಹ ಸಮಯದಲ್ಲಿ ನನಗೆ ಒಂದು ಸಣ್ಣ
ನೀರು ಹರಿಯುವ ತಾಣ ಸಿಕ್ಕಿತು. ಅಲ್ಲಿಯೇ ಕುಳಿತಿದ್ದಾಗ ಒಂದು ಮೀನನ್ನು ಹಿಡಿದು ಅದನ್ನು ತಿಂದೆ. ಆ ಮೀನು ಮುಂದಿನ ಎರಡು ದಿನಗಳವರೆಗೆ, ನನಗೆ ಪಟ್ಟಣವೊಂದು ಸಿಗುವವರೆಗೆ ನನ್ನ ಪ್ರಾಣವನ್ನು ಕಾಪಾಡಿತು ಎಂದು ಹೇಳುತ್ತಾನೆ.

ಸ್ನೇಹಿತರೇ, ಇದು ಸಂವಹನದಡಿ ಬರುವ ಮಾತುಕತೆಯ (Negotiation) ಒಂದು ಸ್ಯಾಂಪಲ್ ಅಷ್ಟೆ, ಇದರ ಸರಳಾರ್ಥ ಇದರಲ್ಲಿ ಯಾವುದೇ ಕಟ್ಟುನಿಟ್ಟಾದ ನೀತಿ ನಿಯಮಗಳಿಲ್ಲ. ಸಂದರ್ಭಕ್ಕೆ ಅನುಗುಣವಾಗಿಯೇ ನೀತಿ ನಿಯಮಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಇದರಲ್ಲಿ ಆ ಕ್ಷಣದ ಮಾತುಗಳ ಸಾಮರ್ಥ್ಯದ ನಿರ್ಧರಣೆ
ಆಗುತ್ತವೆ. ಆದರೆ ಆ ನಿರ್ಧಾರಗಳನ್ನು ಎಂದಿಗೂ ಸರಿತಪ್ಪು ಎಂದು ಕಾರಣಗಳ ಆಧಾರದ ಮೇಲೆ ವಿಶ್ಲೇಷಿಸುವುದು ಕಷ್ಟವಾಗುತ್ತದೆ. ಆದಾಗ್ಯೂ ಅಂತಹ ನಿರ್ಧಾರಗಳಿಗೆ ಪೂರಕವಾದ ಪರ ವಿರೋಧದ ಸಂಗತಿಗಳು ಆಧಾರವಾಗಿ ದೊರಕಬಹುದು.

ಮುಂದಿನ ವಾರ ಕೊನೆಯ ಸಂಚಿಕೆಯಾಗಿದ್ದು, ಇದು ಔನ್ನತ್ಯದ ಜೀವನದ ರುಚಿಗೆ ಮಾತ್ರ ಸೀಮಿತವಾಗಿಲ್ಲ. ಜೀವನದ ಪ್ರಾರಂಭಿಕ ಹಂತಗಳಲ್ಲಿ ಎಲ್ಲಾ ಭಾವ, ಅನುಭಾವಗಳನ್ನು
ಬಿಂಬಿಸಿಕೊಂಡು ಸಂವಹನ ಕ್ರಿಯೆಗಳಲ್ಲಿ ತೊಡಗಿಕೊಂಡಾಗ ಸಂವಹನದ ಪ್ರಭಾವ, ಯಶಸ್ಸು,
ಸಾಧನಾ ಅಂಶಗಳು ನಿಮಗೇ ಮನನವಾಗುತ್ತವೆ. ಅದಕ್ಕೆ ಪೂರಕವಾಗಿ ನಾವೇನು ಮಾಡಬಹುದು ಎಂಬುದರ ಕುರಿತಾಗಿ ಮಾಹಿತಿಯನ್ನು ಪಡೆದುಕೊಳ್ಳೋಣ.

ಲೇಖಕರು :
ಆರ್.ಕೆ. ಬಾಲಚಂದ್ರ ಬೆಂಗಳೂರು
ಬ್ಯಾಂಕಿಂಗ್ , ವ್ಯಕ್ತಿತ್ವ ವಿಕಸನ ತರಬೇತಿದಾರರು


Leave a Reply

Your email address will not be published. Required fields are marked *