ಸಾನು ನಾಯ್ಕ ಅವರು ಕಟ್ಟಿದ ಕಟ್ಟಿನಿಂದಾಗಿ ಈ ಊರು ಸಾಣಿಕಟ್ಟೆಯಾಗಿ ಪ್ರಸಿದ್ಧವಾಯಿತು.
ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎಂಬುದು ಗಾದೆಮಾತು. ಈ ಮಾತನ್ನು ಅಕ್ಷರಶಃ ಸತ್ಯವಾಗಿಸಿದವರು ಸಾಣಿಕಟ್ಟೆಯ ಉಪ್ಪು ಮಾಲೀಕರ ಸಂಘ.
ಹೌದು, ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಸಾಣಿಕಟ್ಟೆಯಲ್ಲಿ ನಾಗರಬೈಲ್ ಉಪ್ಪು ಮಾಲೀಕರ ಸಹಕಾರಿ ಸಂಘ 1957 ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಮೊದಲು ಗೃಹೋಪಯೋಗಿ ಉಪ್ಪನ್ನು ತಯಾರಿಸುತ್ತಿದ್ದ ಸಂಸ್ಥೆ ಇದೀಗ ತನ್ನ ವ್ಯಾಪಾರ ವಹಿವಾಟನ್ನು ಇಡೀ ರಾಜ್ಯಾದ್ಯಂತ ವಿಸ್ತರಿಸಿಕೊಂಡಿದೆ. ಸಾಣಿಕಟ್ಟೆಯ ಉಪ್ಪಿನ ಉದ್ಯಮಕ್ಕೆ ಸುದೀರ್ಘ ಇತಿಹಾಸವಿದೆ. ಇದು ಪ್ರಾರಂಭವಾದದ್ದು 1720 ರಷ್ಟು ಹಿಂದೆ. ಸುಮಾರು 50 ಎಕರೆ ಪ್ರದೇಶದಲ್ಲಿ ಈಗಿನ 8ನೇ ಒಂದು ಪಾಲು ಪ್ರದೇಶದಲ್ಲಿ ಮಾತ್ರ ಈ ಉದ್ಯಮವನ್ನು ನಡೆಸಲಾಗುತ್ತಿತ್ತು. 50 ರಷ್ಟು ಬಿಡಿಬಿಡಿ ಉಪ್ಪು ಉದ್ಯಮ ಘಟಕಗಳು ಇಲ್ಲಿ ಇದ್ದವು. 1778 ರಲ್ಲಿ ಸಮುದ್ರ ಹಿನ್ನೀರು ಅಘನಾಶಿನಿ ಅಳಿವೆಯ ಮೂಲಕ ಭರತ ಮತ್ತು ಇಳಿತದ ಸಂದರ್ಭದಲ್ಲಿ ಒಳನುಗ್ಗುವ ಕೊಲ್ಲಿಗೆ ಒಂದು ಒಡ್ಡು ಕಟ್ಟಲಾಯಿತು.
ಉಪ್ಪಿನ ಘಟಕಗಳ ಮಾಲೀಕರು ಇಲ್ಲಿನ ಸಾನು ನಾಯ್ಕ ಎಂಬವರ ನೇತೃತ್ವದಲ್ಲಿ ಈ ಒಡ್ಡಿನ ಕೆಲಸ ಕೈಗೊಂಡರು. ಈ ಸಾನು ನಾಯ್ಕ ಅವರು ಕಟ್ಟಿದ ಕಟ್ಟಿನಿಂದಾಗಿ ಈ ಊರು ಸಾಣಿಕಟ್ಟೆಯಾಗಿ ಪ್ರಸಿದ್ಧವಾಯಿತು. ಈ ಕಾರಣದಿಂದ ಇಲ್ಲಿನ 400 ಎಕರೆಯಷ್ಟು ಪ್ರದೇಶ ಉಪ್ಪು ತಯಾರಿಕೆಗೆ ಲಭ್ಯವಾಯಿತು. ಅಂಕೋಲಾದಿಂದ ಭಟ್ಕಳದವರೆಗಿನ ಭಾಗ 1760 ರವರೆಗೂ ಬಿದನೂರು ರಾಜರ ಆಳ್ವಿಕೆಯಲ್ಲಿತ್ತು. ಉಳಿದೆಲ್ಲ ಜೀವನಾವಶ್ಯಕ ದಿನಸಿಗಳಂತೆ ಅಂದು ಉಪ್ಪು ಕರ ಮುಕ್ತವಾಗಿತ್ತು. ಮಧ್ಯವರ್ತಿಗಳನ್ನು ತೊಡೆದುಹಾಕಿ ಗ್ರಾಹಕರೊಂದಿಗೆ ನೇರ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಎಲ್ಲ ಉಪ್ಪು ಮಾಲೀಕರು ಸೇರಿಕೊಂಡು ‘ಸಾಣಿಕಟ್ಟಾ ಸಹಕಾರಿ ಉಪ್ಪು ಮಾರಾಟ ಸಂಘ ನಿಯಮಿತ’ ಎಂಬ ಸಂಘಟನೆಯನ್ನು ಅಸ್ತಿತ್ವಕ್ಕೆ ತಂದರು. ಮಧ್ಯವರ್ತಿಗಳ ಹಿಡಿತ ತಪ್ಪಿಸಿ ಗ್ರಾಹಕನಿಗೆ ಒಳ್ಳೆಯ ಗುಣಮಟ್ಟದ ಉಪ್ಪನ್ನು ಒದಗಿಸುವುದು ಇದರ ಉದ್ದೇಶವಾಗಿತ್ತು.
1954 ರಲ್ಲಿ ಈ ಸಂಘವು ನಾಗರಬೈಲ್ ಸಹಕಾರಿ ಸಂಘದೊಂದಿಗೆ ವಿಲೀನವಾಯಿತು. ಸ್ವಾತಂತ್ಯ್ರ ನಂತರ ಭಾರತ ಸರಕಾರ ಉಪ್ಪಿನ ಮೇಲಿನ ಕರವನ್ನು ರದ್ದುಪಡಿಸಿತು. ಇದರಿಂದ ಉತ್ಪಾದಕರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಯಿತು. ಹೀಗಾಗಿ ಭಾರತವು ಉಪ್ಪು ಆಮದನ್ನು ನಿಲ್ಲಿಸಿ ರಪ್ತುಮಾಡಲು ಸಾಧ್ಯವಾಯಿತು. ಹೀಗೆ ದೇಶದಲ್ಲಿ ಪ್ರಥಮ ಎನ್ನಬಹುದಾದ ಉಪ್ಪಿನ ಉತ್ಪಾದನೆ ಮತ್ತು ಮಾರಾಟ ಎರಡನ್ನು ನಿರ್ವಹಿಸುವ ‘ನಾಗರಬೈಲ್ ಉಪ್ಪು ಮಾಲೀಕರ ಸಂಘ ನಿಯಮಿತ’ 1952 ರಲ್ಲಿ ಮೈದಾಳಿತು. ಸಂಘವು ಒಟ್ಟು 469 ಎಕರೆ ಭೂಮಿ ಉಪ್ಪು ಉತ್ಪಾದನಾ ಕ್ಷೇತ್ರವನ್ನು ಹೊಂದಿದೆ. ಇದನ್ನು ನಾರಾಯಣಪುರ ಮತ್ತು ನಾಗರಬೈಲ್ ವಲಯಗಳೆಂದು ವಿಂಗಡಿಸಲಾಗಿದೆ. ನಾರಾಯಣಪುರ ವಲಯವು 36 ಎಕರೆ ಮತ್ತು ನಾಗರಬೈಲ್ ವಲಯವು 433 ಎಕರೆ ಕ್ಷೇತ್ರವನ್ನು ಹೊಂದಿದೆ. ಉಪ್ಪು ಉತ್ಪಾದನೆಯು ಸೂರ್ಯನ ನೈಸರ್ಗಿಕ ಶಾಖ ಮತ್ತು ವಾತಾವರಣವನ್ನು ಉಪಯೋಗಿಸಿ ತಯಾರಿಸುವ ಒಂದು ಪ್ರಕ್ರಿಯೆಯಾಗಿರುತ್ತದೆ. ಇದಕ್ಕೆ ವೈಜ್ಞಾನಿಕ ತಳಹದಿಯ ಮೇಲೆ ತಜ್ಞರ ಸಲಹೆ ಕೂಡ ಅವಶ್ಯವಿರುತ್ತದೆ.
ಮಳೆಗಾಲ ಮುಗಿದೊಡನೆ ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಿಂದ ಉಪ್ಪು ಬೆಳೆಸುವ ಕ್ಷೇತ್ರಗಳಲ್ಲಿನ ತಾಟುಗಳ ಪ್ರಾಥಮಿಕ ಕೆಲಸ ಪ್ರಾರಂಭಿಸಲಾಗುತ್ತದೆ. ಮಳೆಗಾಲದ ಸಿಹಿ ನೀರನ್ನು ಸಂಪೂರ್ಣವಾಗಿ ಹೊರಹಾಕಬೇಕಾಗುತ್ತದೆ. ತಾಟುಗಳಲ್ಲಿ ಹುಟ್ಟಿದ ಹುಲ್ಲುಗಳನ್ನು ತೆಗೆದುಹಾಕಿ ನಡೆದಾಡುವ ಹಾಳೆಗಳನ್ನು ಸರಿಪಡಿಸಬೇಕಾಗುತ್ತದೆ. ಇದರೊಂದಿಗೆ ಸಮುದ್ರದ ಸಾಂದ್ರತೆಯ ನೀರನ್ನು ತಾಟುಗಳಿಗೆ ಹರಿಸಲು ಬೇಕಾಗುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ವರ್ಷಕ್ಕೆ ಸರಾಸರಿ 10 ಮೆಟ್ರಿಕ್ ಟನ್ ಉಪ್ಪನ್ನು ಇಲ್ಲಿ ಉತ್ಪಾದಿಸಲಾಗುತ್ತದೆ. ಸಾಣಿಕಟ್ಟಾ ಉಪ್ಪಿಗೆ ಉತ್ತರಕನ್ನಡ, ಗದಗ, ಧಾರವಾಡ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅಪಾರ ಬೇಡಿಕೆ ಇದೆ. ಅಯೋಡಿನ್‌ಯುಕ್ತ ಉಪ್ಪನ್ನು ಗೃಹಬಳಕೆಗೆ ಉಪಯೋಗಿಸಿದರೆ, ಅಯೋಡಿನ್ ರಹಿತ ಉಪ್ಪನ್ನು ಕೃಷಿ ಚಟುವಟಿಕೆಗಳಿಗೆ, ಒಣ ಮೀನುಗಾರಿಕೆಗೆ, ಚರ್ಮೋದ್ಯಮಕ್ಕೆ ಬಳಕೆ ಮಾಡಲಾಗುತ್ತದೆ. ಪೊಟಾಶಿಯಂ ಅಯೋಡೇಟ್ ಎಂಬುದು ಪೌಡರ್ ರೂಪದಲ್ಲಿರುವ ಒಂದು ರಾಸಾಯನಿಕ ವಸ್ತು. ಒಂದು ಕಿಲೋ ಪೊಟಾಶಿಯಂ ಅಯೋಡೇಟ್ ಪೌಡರ್‌ನ್ನು25 ಲೀಟರ್ ನೀರಿಗೆ ಬೆರೆಸಿ ದ್ರಾವಣ ಮಾಡಿದರೆ ಇದನ್ನು 20 ಮೆಟ್ರಿಕ್ ಟನ್ ಉಪ್ಪಿಗೆ ಸಿಂಪಡಿಸಬಹುದಾಗಿದೆ. ಇದನ್ನು ಅಯೋಡಿನ್‌ಯುಕ್ತ ಉಪ್ಪು ಎಂದು ಕರೆಯಲಾಗುತ್ತದೆ. ಸಾಣಿಕಟ್ಟಾ ಉಪ್ಪು ಉದ್ಯಮದಲ್ಲಿ 150 ಮಹಿಳೆಯರು ಮತ್ತು 150 ಪುರುಷ ಕಾರ್ಮಿಕರು ಕೆಲಸ ಮಾಡುತ್ತಾರೆ. ಇವರು ಹಂಗಾಮಿ ಕೆಲಸಗಾರರಾಗಿದ್ದು, ವಾತಾವರಣಕ್ಕೆ ಹೊಂದಾಣಿಕೆಯಾಗುವಂತೆ ದಿನವೊಂದಕ್ಕೆ 3 ತಾಸು ಕೆಲಸ ಮಾಡುತ್ತಾರೆ. ಉಪ್ಪು ತೆಗೆಯುವ ಕೆಲಸವನ್ನು ಆಗೇರ ಸಮಾಜದ ಶ್ರಮಿಕರು ಮಾತ್ರ ನಿರ್ವಹಿಸುತ್ತದೆ. ಹೊರಗುತ್ತಿಗೆಯ ಕಾರ್ಮಿಕರಾಗಿ 30 ಮಂದಿ ಕೆಲಸ ಮಾಡುತ್ತಾರೆ. ಇವರಿಗೆ ಪ್ರಾವಿಡೆಂಡ್ ಫಂಡ್, ಬೋನಸ್, ಗ್ರಾಚ್ಯುಟಿ, ವಾರದ ರಜೆ, ನಿವೃತ್ತಿ ವೇತನ ಸೇರಿದಂತೆ ಕಾರ್ಮಿಕ ಕಾನೂನಿನಡಿ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತದೆ ಎನ್ನುತ್ತಾರೆ ಸಾಣಿಕಟ್ಟಾ ನಾಗರಬೈಲ್ ಉಪ್ಪಿನ ಮಾಲೀಕರ ಸಹಕಾರಿ ಸಂಘದ ಪ್ರಬಂಧಕ ಅನಿಲ್ ನಾಡ್ಕರ್ಣಿಯವರು.
ಪ್ರಾರಂಭದಲ್ಲಿ ಉಪ್ಪಿನ ಉತ್ಪಾದನೆಗೆ ಬೇಕಾಗುವ ಸಾಂದ್ರತೆಯ ನೀರನ್ನು ಸಂಗ್ರಹಿಸಲು ಕನಿಷ್ಟ 45 ರಿಂದ 60 ದಿನಗಳು ಬೇಕಾಗುತ್ತದೆ. ನಂತರ ಪ್ರತಿದಿನ ಈ ಸಾಂದ್ರತೆಯ ನೀರನ್ನು ಪಡೆದು ಉಪ್ಪನ್ನು ಉತ್ಪಾದಿಸಲಾಗುತ್ತದೆ. ಉಪ್ಪನ್ನು ಉತ್ಪಾದಿಸುವ ತಾಟುಗಳಿಗೆ ಗುನ್ನ ಅಥವಾ ಕ್ರಿಸ್ಟ ಲೈಸರ್‌ಗಳು ಎಂದು ಕರೆಯುತ್ತಾರೆ.
ಈ ಗುನ್ನಗಳಲ್ಲಿ ಸಮತಟ್ಟುಗೊಳಿಸಲು ಮತ್ತು ಉಪ್ಪನ್ನು ಕೇಂದ್ರೀಕರಿಸಲು ಆಗೇರ ಸಮಾಜದ ಕಾರ್ಮಿಕರನ್ನು ಉಪಯೋಗಿಸಲಾಗುತ್ತದೆ. ಕೊನೆಯ ಹಂತದಲ್ಲಿ ಪಡೆದ ಹೆಚ್ಚಿನ ಸಾಂದ್ರತೆಯ ನೀರನ್ನು ಗುನ್ನಗಳಲ್ಲಿ ಹರಿಬಿಟ್ಟಾಗ ಸಾಂದ್ರತೆಯ ನೀರು ಕಣಗಳಾಗಿ ಮಾರ್ಪಟ್ಟು ಗುನ್ನಗಳಲ್ಲಿ ಉಪ್ಪಿನ ಹರಳುಗಳ ರೂಪದಲ್ಲಿ ಸಂಗ್ರಹವಾಗುವುದು. ಹೀಗೆ ಉತ್ಪಾದನೆಯಾದ ಉಪ್ಪನ್ನು, ಉಪ್ಪನ್ನು ತೆಗೆಯುವ ಹಲಗೆಯ ಮೂಲಕ ಕಾರ್ಮಿಕರ ಸಹಾಯದಿಂದ ಪ್ರತಿ ಗುನ್ನದ ದಡದಲ್ಲಿ ಸಂಗ್ರಹಿಸಲಾಗುತ್ತದೆ. ಈ ಕೆಲಸವನ್ನು ಮಹಿಳಾ ಕಾರ್ಮಿಕರು ಮಾಡಿದರೆ, ಪುರುಷ ಕಾರ್ಮಿಕರು ಉಪ್ಪನ್ನು ತಲೆಯ ಮೂಲಕ ಹೊತ್ತು ದಡಕ್ಕೆ ಸಾಗಿಸುತ್ತಾರೆ. ಅಲ್ಲಿ ಮಹಿಳಾ ಕಾರ್ಮಿಕರು ಅಯೋಡಿನ್ ಬೆರೆಸಿ ಪ್ಯಾಕಿಂಗ್ ಕೆಲಸವನ್ನು ನಿರ್ವಹಿಸುತ್ತಾರೆ. ಉಪ್ಪು ಉದ್ಯಮದಲ್ಲಿ ತೊಡಗಿಸಿಕೊಂಡಿರುವ 300 ಕ್ಕೂ ಅಧಿಕ ಆಗೇರ ಸಮಾಜದ ಕಾರ್ಮಿಕರ ಹೊರತಾಗಿ ಈ ಕೆಲಸವನ್ನು ಇನ್ಯಾರು ಮಾಡಲಾರರು. ಏಕೆಂದರೆ ಉಪ್ಪು ತೆಗೆಯುವ ಕೆಲಸ ಅತಿ ಸೂಕ್ಷ್ಮವಾಗಿರುತ್ತದೆ. ಬಿಸಿಲಿನ ದಗೆಯಲ್ಲಿ ನಿಂತು ಈ ಕೆಲಸ ಮಾಡಬೇಕಾಗುತ್ತದೆ. ಜೊತೆಯಲ್ಲಿ ಉಪ್ಪಿನ ರಾಶಿಯ ಮಧ್ಯೆ ನಿಂತು ಈ ಕೆಲಸ ಮಾಡುವುದರಿಂದ ಹಲವು ತರಹದ ಖಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಸರಕಾರ ಇಂತಹ ಕಾರ್ಮಿಕರ ಬಗ್ಗೆ ಗಮನ ಹರಿಸಲಿ ಎಂಬುದು ‘ಹಣತೆ ವಾಹಿನಿ’ಯ ಕಳಕಳಿಯಾಗಿದೆ.
ತೇಜಸ್ವಿ ಬಿ. ನಾಯ್ಕ, ಗೋಕರ್ಣ
ಪತ್ರಕರ್ತರು