ಉತ್ತರ ಕನ್ನಡ ಅತ್ಯಮೂಲ್ಯವಾದ ಅರಣ್ಯ ಸಂಪತ್ತನ್ನು ಹೊಂದಿದ ಜಿಲ್ಲೆ. ವಿಶೇಷವಾಗಿ ಕರಾವಳಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಹಲವಾರು ಪ್ರಭೇದದ ಪ್ರಾಣಿ, ಪಕ್ಷಿ, ಕ್ರಿಮಿ ಕೀಟ, ಸರೀಸೃಪಗಳು ವಾಸ ಮಾಡುತ್ತಿವೆ.
ಈ ಪೈಕಿ ಕೆಲವೊಂದು ಅಪರೂಪದ ಪ್ರಾಣಿ ಸಂಕುಲಗಳು ಅಳಿವಿನಂಚಿನಲ್ಲಿವೆ. ಅಂತಹ ಅಳಿವಿನಂಚಿನಲ್ಲಿರುವ ಅಪರೂಪದ ಪ್ರಾಣಿ ಸಿಂಗಳೀಕದ ಕುರಿತಾಗಿ ಎಲ್ಲರೂ ತಿಳಿದುಕೊಳ್ಳಬೇಕಾದ ಕೆಲವಷ್ಟು ಮಾಹಿತಿ ಕೊಡುವ ಪ್ರಯತ್ನ ಇಲ್ಲಿದೆ. ಇಂಥ ಮಾಹಿತಿ ಪಡೆದು ‘ಭೂಮಿಯ ಮೇಲೆ ಕೆಲವೇ ಕೆಲವು ಸಂಖ್ಯೆಗಳಲ್ಲಿ ಉಳಿದಿರಬಹುದಾದ ಸಿಂಗಳೀಕದ ಕೊನೆಯ ತಳಿಯನ್ನಾದರೂ ಉಳಿಸಿಕೊಳ್ಳೋಣ ಸ್ವಾಮಿ’ ಎಂಬುದಷ್ಟೇ ‘ಹಣತೆ ವಾಹಿನಿ’ಯ ಆಶಯ.
ಅಪರೂಪದಲ್ಲಿ ಅಪರೂಪದ್ದು ಎನ್ನಲಾದ, ಕೇವಲ ಪಶ್ಚಿಮಘಟ್ಟದ ಮಧ್ಯ ಭಾಗದ ಪ್ರದೇಶವಾದ ಕರ್ನಾಟಕ, ಕೇರಳ, ತಮಿಳುನಾಡಿನ ಮಳೆಕಾಡುಗಳಲ್ಲಿ ಈ ಸಿಂಗಳೀಕದ ವಾಸಸ್ಥಾನ. ಕರ್ನಾಟಕದಲ್ಲಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಮತ್ತು ಹೊನ್ನಾವರ ತಾಲೂಕುಗಳಲ್ಲಿ ಹರಡಿಕೊಂಡಿರುವ ಗೇರುಸೊಪ್ಪ ಅರಣ್ಯ ಪ್ರದೇಶ ಅಂದರೆ ಶರಾವತಿ ಕಣಿವೆ (Sharavati Valley) ಭಾಗದಲ್ಲಿ, ಶಿವಮೊಗ್ಗ ಜಿಲ್ಲೆಯ ಆಗುಂಬೆ ಘಾಟಿಯಲ್ಲಿ ಮಾತ್ರ ಕಂಡುಬರುವ ಸಿಂಗಳೀಕ (Macaca Silenus) ಪ್ರಪಂಚದ ಅತ್ಯಂತ ಹಳೆಯ ವಾನರ ಪ್ರಭೇದಕ್ಕೆ ಸೇರಿದ ಪ್ರಾಣಿಯಾಗಿದೆ. ಸಿಂಗಳೀಕ ಸಾಮಾನ್ಯವಾಗಿ ದಟ್ಟಾರಣ್ಯ ಪ್ರದೇಶದಲ್ಲಿ ಮಾತ್ರ ವಾಸಿಸುತ್ತದೆ. ನೋಡಲು ತುಸು ಕೋತಿಯಂತೆ ಕಾಣುವ ಸಿಂಗಳೀಕದ ದೇಹರಚನೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಇದೆ. ಪೂರ್ತಿ ಕಪ್ಪು ಬಣ್ಣದಲ್ಲಿ ಕಂಡುಬರುವ ಸಿಂಗಳೀಕದ ಮುಖದ ಕೆಳಭಾಗದಲ್ಲಿ ಸಿಂಹದಂತೆ ಅಂದದ ಉದ್ದನೆಯ ಬಿಳಿಗಡ್ಡವನ್ನು ಹೊಂದಿರುತ್ತದೆ.
ಸಿಂಗಳೀಕದ ಆಕರ್ಷಣೆಯೇ ಈ ಗಡ್ಡದ ಕೂದಲು. ಸಿಂಗಳೀಕ ಬಹುಸೂಕ್ಷ್ಮ ಪ್ರಾಣಿಯಾಗಿದ್ದು, ಮಾನವನಿಗೆ ಅಪಾಯವನ್ನುಂಟು ಮಾಡುವುದಿಲ್ಲ. ದಟ್ಟಾರಣ್ಯದಲ್ಲಿ ಮಾತ್ರ ವಾಸಿಸುವ ಸಿಂಗಳೀಕಗಳು ಕಾಡಿನಲ್ಲಿ ಹಣ್ಣುಹಂಪಲಗಳನ್ನು ತಿಂದು ಜೀವಿಸುತ್ತವೆ. ಮನುಷ್ಯರನ್ನು ಕಂಡರೆ ನಾಚಿಕೊಳ್ಳುವ ಸ್ವಭಾವ ಸಿಂಗಳೀಕದ್ದು. ವಿಷಾದದ ಸಂಗತಿ ಏನೆಂದರೆ ಕಾಡಿನಲ್ಲಿ ಈಗ ಹಣ್ಣು ಹಂಪಲುಗಳ ಗಿಡಗಳೇ ಇಲ್ಲವಾಗುತ್ತಿವೆ. ಆಗುಂಬೆ ಘಾಟಿಯಲ್ಲಿ ಇದೇ ಕಾರಣಕ್ಕೆ ರಸ್ತೆ ಬದಿಗೆ ಆಹಾರಕ್ಕಾಗಿ ಬರುವ ಸಿಂಗಳೀಕಗಳು ಪ್ರವಾಸಿಗರು ಎಸೆಯುವ ಕೃತಕ ಆಹಾರಕ್ಕಾಗಿ ಆಸೆಪಟ್ಟು ರಸ್ತೆ ಬದಿಗೆ ಬರುತ್ತದೆ. ಎಷ್ಟೋ ಬಾರಿ ಪ್ರವಾಸಿಗರು ಎಸೆಯುವ ಕುರುಕಲು ತಿಂಡಿಯನ್ನು ತಿಂದು ಪ್ರಾಣ ಬಿಟ್ಟ ಸಿಂಗಳೀಕಗಳೂ ಇವೆ! ಅದಕ್ಕಾಗಿ ಅರಣ್ಯ ಇಲಾಖೆ ಸಿಂಗಳೀಕಗಳಿಗೆ ಕೃತಕ ಆಹಾರ ಕೊಡಬೇಡಿ ಎಂದು ಪ್ರವಾಸಿಗರಿಗೆ ಮನವಿ ಮಾಡುತ್ತಿದೆ. ಕೊರೋನಾ ಸಂದರ್ಭದಲ್ಲಿ ಜಗತ್ತೇ ಸ್ಥಬ್ಧವಾದಾಗ ಆಗುಂಬೆ ಘಾಟಿಯಲ್ಲಿ ಇತ್ತ ಪ್ರವಾಸಿಗರ ಸಂಚಾರವೂ ಇಲ್ಲದೇ, ಅತ್ತ ಕಾಡಿನಲ್ಲಿ ಹಣ್ಣು ಹಂಪಲು ಗಿಡಗಳೂ ಇಲ್ಲದೇ ಸಿಂಗಳೀಕಗಳು ಆಹಾರಕ್ಕಾಗಿ ಚಡಪಡಿಸಿವೆ. ಆಗ ಅರಣ್ಯ ಇಲಾಖೆಯೇ ಅವುಗಳಿಗೆ ಸಹಜ ಆಹಾರ ಪೂರೈಸುವಲ್ಲಿ ತುಂಬ ಹೆಣಗಿವೆ.
ಹೊನ್ನಾವರ ತಾಲೂಕಿನ ಗೇರುಸೊಪ್ಪ ಅರಣ್ಯ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಸಿಂಗಳೀಕಗಳನ್ನು ಅರಣ್ಯ ಇಲಾಖೆ ಈಗ ಸಂರಕ್ಷಿಸಲು ಮುಂದಾಗಿದೆ. 670 ಸಿಂಗಳೀಕ ಹೊಂದುವ ಮೂಲಕ ಕರ್ನಾಟಕ ರಾಜ್ಯ ಭಾರತದಲ್ಲಿಯೇ ಅತಿಹೆಚ್ಚು ಸಿಂಗಳೀಕವಿರುವ ರಾಜ್ಯ ಎನ್ನುವ ಹಿರಿಮೆಯನ್ನು ಹೊಂದಿದೆ! ಇಡೀ ಜಗತ್ತಿನಲ್ಲಿ 3000 ರಿಂದ 3500 ಗಳಷ್ಟೇ ಸಿಂಗಳೀಕಗಳಿವೆ ಎಂದು ಜಾಗತಿಕ ಸರ್ವೇ ಹೇಳುತ್ತದೆ.
ಉತ್ತರಕನ್ನಡ ಜಿಲ್ಲೆಯ ಪ್ರವಾಸೋಧ್ಯಮಕ್ಕೆ ತನ್ನದೇ ಆದ ವೈಶಿಷ್ಟ್ಯಪೂರ್ಣ ಸ್ವಭಾವದಿಂದ ಈ ಸಿಂಗಳೀಕವು ಮಹತ್ವ ಪಡೆದುಕೊಂಡಿದೆ. ಹೊನ್ನಾವರ ಮತ್ತು ಶಿರಸಿ ಅರಣ್ಯ ವಿಭಾಗಗಳನ್ನು ಸಿಂಗಳೀಕ ಸಂರಕ್ಷಿತ ಪ್ರದೇಶ ಎಂದು ಕರ್ನಾಟಕ ಸರಕಾರ ಸುಮಾರು 2949.20 ಹೆಕ್ಟೇರ್ ಪ್ರದೇಶವನ್ನು ಘೋಷಣೆ ಮಾಡಿದೆ. ಈ ಪ್ರಾಣಿಗೆ ಅನುಕೂಲಕರವಾದ ವಾತಾವರಣದ ಜೊತೆ ಆಹಾರಕ್ಕಾಗಿ ಕಾಡಿನಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಬೆಳೆಸುವ ಮೂಲಕ ಅರಣ್ಯ ಇಲಾಖೆ ಇವುಗಳ ಸಂತತಿ ಹೆಚ್ಚಿಸಲು ಪರಿಶ್ರಮ ಪಡುತ್ತಿದೆ.
ಈ ಪ್ರಾಣಿಯನ್ನು ಉಳಿಸಿಕೊಂಡು, ಸಂತಾನೋತ್ಪತಿಯನ್ನು ಹೆಚ್ಚಿಸುವ ದಿಸೆಯಲ್ಲಿ ಅರಣ್ಯ ಇಲಾಖೆ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಕಳ್ಳಬೇಟೆಯಾಡುವ ಅಪರಾಧಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಇದರೊಂದಿಗೆ ಹೊಸ ಚೆಕ್‌ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಸಹಾಯ ಪಡೆದು ಹೆಸ್ಕಾಂ ಅಧಿಕಾರಿಗಳ ನೆರವಿನೊಂದಿಗೆ ಅರಣ್ಯ ಇಲಾಖೆಯ ವತಿಯಿಂದ ಹೊನ್ನಾವರ ವಿಭಾಗದಲ್ಲಿ ತೋಟಕ್ಕೆ ಅಳವಡಿಸುವ ವಿದ್ಯುತ್ ತಂತಿಗಳನ್ನು ಸ್ಥಳಾಂತರಿಸಿ ಬದಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರಾಣಿಗಳ ಸಂಚಾರಕ್ಕೆ ವಿಶೇಷ ಸೇತುವೆಯನ್ನು ನಿರ್ಮಿಸುವ ಮೂಲಕ ರಸ್ತೆ ಅಪಘಾತದಿಂದ ಪ್ರಾಣಿಗಳು ನಾಶಹೊಂದದಂತೆ ಅರಣ್ಯ ಇಲಾಖೆ ನೋಡಿಕೊಳ್ಳುತ್ತಿದೆ. ಪ್ರಾಣಿ ಮತ್ತು ಪಕ್ಷಿಗಳ ಆಹಾರಕ್ಕಾಗಿ ಒಂದು ಲಕ್ಷಕ್ಕೂ ಅಧಿಕ ಹಣ್ಣಿನ ಗಿಡಗಳನ್ನು ಅರಣ್ಯದಲ್ಲಿ ಬೆಳೆಸುವ ಮೂಲಕ ಆಹಾರೋತ್ಪತ್ತಿಗೆ ಅವಕಾಶ ಕಲ್ಪಿಸಲಾಗಿದೆ. ಸಿಂಗಳೀಕದ ಬಗ್ಗೆ ಮಾಹಿತಿ ನೀಡುವ ಹಾಗೂ ಪ್ರವಾಸೋದ್ಯಮ ಸ್ಥಳವಾಗಿಸುವ ಕುರಿತು ಈ ಭಾಗದಲ್ಲಿ ತರಬೇತಿ ಶಿಬಿರ, ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ನಡೆಸುತ್ತಿದೆ.
ಅರಣ್ಯ ಇಲಾಖೆ ಸಿಂಗಳೀಕವನ್ನು ಉಳಿಸಿಕೊಳ್ಳಲು ಎಷ್ಟರ ಮಟ್ಟಿಗೆ ಕಟ್ಟುನಿಟ್ಟಾಗಿದೆ ಎಂಬುದಕ್ಕೆ ಒಂದು ಉದಾಹರಣೆ ಕೊಡುವುದಾದರೆ, ಆಗುಂಬೆ ಘಾಟಿಯ ರಸ್ತೆ ಅಗಲೀಕರಣ ಮಾಡಲು ಕೇಂದ್ರ ಹೆದ್ದಾರಿ ಪ್ರಾಧೀಕಾರ ಮುಂದಾದಾಗ ಅರಣ್ಯ ಇಲಾಖೆ ಅದಕ್ಕೆ ಆಕ್ಷೇಪ ಮಾಡುತ್ತದೆ. ರಸ್ತೆ ಅಗಲೀಕರಣ ಮಾಡುವುದಾದರೆ ರಸ್ತೆ ಬದಿಯ ಎಷ್ಟೋ ಮರಗಳನ್ನು ಅನಿವಾರ್ಯವಾಗಿ ಕಡಿಯಬೇಕಾಗುತ್ತದೆ. ಇದರಿಂದ ಎತ್ತರದ ಮರಗಳ ಮೇಲೆಯೇ ಹಾರುತ್ತ ಹಾರುತ್ತ ಸಂಚರಿಸುವ ಸಿಂಗಳೀಕಗಳಿಗೆ, ಅವುಗಳ ಸಹಜ ಜೀವನಕ್ಕೆ ತೊಂದರೆಯಾಗುತ್ತದೆ. ಹೆದ್ದಾರಿ ಅಗಲೀಕರಣಕ್ಕಾಗಿ ಮರಗಳನ್ನು ಕಡಿಯುವುದರಿಂದ ಸಿಂಗಳೀಕಗಳಿಗೆ ಹಾರಲು ಹತ್ತಿರ ಹತ್ತಿರಕ್ಕೆ ಮರಗಳು ಸಿಗದೇ ಅಂದಾಜು ತಪ್ಪಿ ರಸ್ತೆಯ ಮೇಲೆಯೇ ಬಿದ್ದು ಅಲ್ಲಿ ಓಡಾಡುವ ವಾಹನಗಳಿಗೆ ಸಿಕ್ಕಿ ಸಾಯುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕಾಗಿ ಅರಣ್ಯ ಇಲಾಖೆ ಅಗಲೀಕರಣ ಯೋಜನೆಗೆ ಒಪ್ಪಿಗೆ ನೀಡಲೇ ಇಲ್ಲ.
ಒಟ್ಟಿನಲ್ಲಿ ಅಪರೂಪದ ಪ್ರಾಣಿಯಾದ ಸಿಂಗಳೀಕವನ್ನು ಉಳಿಸುವ ಹೊಣೆ ಕೇವಲ ಸರಕಾರದ್ದು ಮಾತ್ರವಲ್ಲ, ನಮ್ಮೆಲ್ಲರದ್ದಾಗಿದೆ. ನಾವು ಜವಾಬ್ದಾರಿ ಮರೆತು `ಮುಂದಿನ ದಿನಗಳಲ್ಲಿ ಯುವಪೀಳಿಗೆಗೆ ಚಿತ್ರದ ಮೂಲಕ ಸಿಂಗಳೀಕವನ್ನು ತೋರಿಸುವ ಪರಿಸ್ಥಿತಿ ಬಾರದಿರಲೆಂಬುದು ‘ಹಣತೆ ವಾಹಿನಿ’ಯ ಆಶಯವಾಗಿದೆ.
ತೇಜಸ್ವಿ ಬಿ.ನಾಯ್ಕ, ಗೋಕರ್ಣ, ಹಿರಿಯ ಪತ್ರಕರ್ತರು