ಮಕ್ಕಳನ್ನು ಇಂಗ್ಲಿಷಿನ ವ್ಯಾಮೋಹ ಮತ್ತು ಆದಷ್ಟು ಬೇಗ ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಲೆಂಬ ಮಹದಾಸೆಯಿಂದ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಾರೆ
ಸರಿಹೊತ್ತಿನ ಶಿಕ್ಷಣ ಪದ್ಧತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಕೆಲವು ವಿಚಾರಗಳು ಸ್ಪಷ್ಟವಾಗಿ ಗೋಚರವಾಗುತ್ತವೆ. ಅದರಲ್ಲಿ ಮುಖ್ಯವಾಗಿ,
ಮಕ್ಕಳನ್ನು ಪ್ರತಿಭಾವಂತರನ್ನಾಗಿ ಮಾಡುವುದಕ್ಕಿಂತ ಮುಖ್ಯವಾಗಿ ಹೆಚ್ಚು ಅಂಕಗಳನ್ನು ಪಡೆಯುವ ವಿದ್ಯಾವಂತರನ್ನಾಗಿ ಮಾಡುವುದರಕಡೆಗೇ ಒತ್ತು ಕೊಟ್ಟು ಅದೇ ರೀತಿಯಲ್ಲಿ ಶೈಕ್ಷಣಿಕ ಪರಿಕಲ್ಪನೆಗಳು ಇರುವಂತೆ ನೋಡಿಕೊಳ್ಳುತ್ತಿದ್ದೇವೆ. ತರಗತಿಯಲ್ಲಿ ಕಲಿತದ್ದು ಸ್ವಾಧ್ಯಾಯಕ್ಕಿಳಿದು, ಅಂತರ್ಗತವಾಗಿ ಜೀವನದ ಗತಿಬಿಂಬಕ್ಕೆ ಒದಗುವಂತೆ ಮಾಡುವ ಯಾವ ದೊಡ್ಡ ಪ್ರಯತ್ನವೂ ನಡೆಯುತ್ತಿಲ್ಲ
ವೆಂದೇ ಶಿಕ್ಷಣ ತಜ್ಞರು ಅಭಿಪ್ರಾಯಪಡುತ್ತಾರೆ. ವೈಯಕ್ತಿಕವಾಗಿ, ನನ್ನ ಅನುಭವವೂ ಇದಕ್ಕೆ ಪೂರಕವಾಗೇ ಇದೆ. ಯಾಕೆಂದರೆ, ಗಾಂಧಿ, ಠಾಗೋರ್, ರಾಧಾಕೃಷ್ಣನ್ನರೇ ಮುಂತಾದವರ ಶಿಕ್ಷಣದ ಪರಿಕಲ್ಪನೆಗಳು ಮೂಲ ಶಿಕ್ಷಣಕ್ಕೇ ಪ್ರಧಾನತೆಯನ್ನುನೀಡಿವೆ. ಮೂಲಭತ ಬೌದ್ಧಿಕ ಅಗತ್ಯಗಳು, ಜೀವನಕ್ಕೆ ಬೇಕಾದ ಸಾಂಪತ್ತಿಕ ಶಕ್ತಿಯನ್ನು ತಾನು ವಾಸಿಸುವ ಪ್ರಕೃತಿ ಅಥವಾ ಸುತ್ತಲಿನ ಪರಿಸರದಲ್ಲಿ ತನಗೆ ಹೊಂದಿಕೊಳ್ಳುವ ಹಾಗೆ ಪಡೆಯುವ, ಹಾಗೆ

ಪಡೆಯುವಲ್ಲಿ ಯಾವ ಕೆಡುಕು ತನ್ನ ಅಸ್ತಿತ್ವಕ್ಕೆ ಎರವಾದ ಈ ಪರಿಸರಕ್ಕೆ ಆಗಬಾರದೆಂಬ ಎಚ್ಚರದಲ್ಲಿ ಮನುಷ್ಯ ಬದುಕನ್ನು ಸಾಗಿಸಲು ಬೇಕಾದ ಜ್ಞಾನವನ್ನು ಹೊಂದುವುದು ಸಾಧ್ಯವಾದರೆ ಶಿಕ್ಷಣದ ಮೂಲ ಉದ್ದಿಶ್ಯಗಳು ಸಫಲಗೊಂಡಂತೆ. ಇದಕ್ಕೆ ಮುಖ್ಯವಾಗಿ ಬೇಕಾದದ್ದು ಕಾರ್ಯಾನುಭವ. ಜೀವನ ಕೌಶಲಗಳನ್ನು ಪಠ್ಯದಲ್ಲಿ ಅಳವಡಿಸುವುದು. ಈ ಮೊದಲಿನ ಶಿಕ್ಷಣ ಪದ್ಧತಿಯಲ್ಲಿ ಈ ಬಗೆಯ ಕೌಶಲಗಳ ಅಭಿವೃದ್ಧಿಗೆ ವಿಪುಲ ಅವಕಾಶ ಇತ್ತು. ಈಗ ಇಲ್ಲವೆಂದಲ್ಲ. ಆದರೆ, ಆಧುನಿಕತೆಯ ಮತ್ತು ಅವಸರದ ಯಾಂತ್ರಿಕ ಬದುಕು ನಮ್ಮ ಬೌದ್ಧಿಕ, ಮಾನಸಿಕ ಮತ್ತು ವೈಚಾರಿಕ ಸಾಮರ್ಥ್ಯವನ್ನು ಹರಿತಗೊಳಿಸಲು ಸಾಧ್ಯವಾಗದಂತೆ ನಮ್ಮನ್ನು ನಿಯಂತ್ರಿಸುತ್ತಿದೆ. ನಿತ್ಯದ ಬದುಕು ಜಟಿಲವಾಗುತ್ತಿದೆ. ಮಕ್ಕಳಿಗೆ ಬೌದ್ಧಿಕವಾಗಿ, ಮಾನಸಿಕವಾಗಿ ಒತ್ತಡವನ್ನು ಹೇರಲಾಗುತ್ತಿದೆ. ಅವರನ್ನು ಸಹಜವೆಂಬಂತೆ ಇರಲು ಬಿಡದೆ, ಬೆಳೆಯಬಿಡದೆ, ಇಲ್ಲದ ಕನಸುಗಳನ್ನು ಅವರ ಎಳವೆಯಲ್ಲೇ ಹೆತ್ತವರು ಕಾಣತೊಡಗುತ್ತಾರೆ. ಇದು ಮಗುವಿಗೆ ಯಾವ ರೀತಿಯಲ್ಲಿ ಪ್ರತಿಕೂಲವನ್ನು ಉಂಟುಮಾಡಬಲ್ಲುದು ಎಂಬುದನ್ನು ಅರ್ಥೈಸಿಕೊಳ್ಳದೆ ತಮ್ಮ ಪ್ರತಿಷ್ಠೆಗಾಗಿ, ಔನ್ನತ್ಯವನ್ನು ಮೆರೆಯುವುದಕ್ಕಾಗಿ ತಮ್ಮ ಮಕ್ಕಳನ್ನು ಬಲಿ ಕೊಡುವ ಹುನ್ನಾರದ ಪ್ರವೃತ್ತಿ ಹೆಚ್ಚುತ್ತಿದೆ.

ಶಾಲೆಯೆಂದರೆ ಮತ್ತೊಂದು ಮನೆಯೆಂದು ಭಾವಿಸಿದ ದಿನಮಾನಗಳ ಒಂದು ಕಾಲವಿತ್ತು. ಆದರೆ ಈಗ ಚಿತ್ರಣ ಬದಲಾಗಿದೆ. ಶಾಲೆಗಳಲ್ಲಿ ಈಗ ಮನೆಯ ವಾತಾವರಣವಿಲ್ಲ. ಆತ್ಮೀಯತೆ, ಪ್ರೀತಿ, ತಾದಾತ್ಮ್ಯ, ಮನುಷ್ಯ ಸಂವೇದನೆಗಳೇ ಮುಂತಾದುವು ಶುದ್ಧ ವ್ಯಾವಹಾರಿಕವಾಗಿ ಕಾಣಲಾರಂಭಿಸಿ ಕೆಲವು ವರ್ಷಗಳೇ ಸಂದಿವೆ. ಮಕ್ಕಳು ಮತ್ತು ಶಿಕ್ಷಕರ ಸಂಬಂಧ, ಮಕ್ಕಳು ಮತ್ತು ಶಾಲೆಯ ಸಂಬಂಧ, ಶಾಲೆ ಮತ್ತು ಪೋಷಕರ ಸಂಬಂಧ ತೀರಾ ಎಂಬಷ್ಟು ಮೊದಲಿನ

ಹಾಗೆ ಆತ್ಮೀಯವಾದ ನೆಲೆಯಲ್ಲಿಲ್ಲ ತನ್ನ ಮಕ್ಕಳಿಗೆ ಪಾಠ ಹೇಳುವ ಶಿಕ್ಷಕನನ್ನು ತನ್ನ ಮಕ್ಕಳೆದುರೇ ಹೀನಮಟ್ಟದ ಭಾಷೆಯಲ್ಲಿ ಬೈಯುವ, ಏಕವಚನದಲ್ಲಿ ಜೋರು ಮಾಡುವ ಪೋಷಕರನ್ನು ನಾನು ನೋಡಿದ್ದೇನೆ. ನಾವು ಹಣ ಕೊಡುತ್ತೇವೆ, ನೀವು ಅಂಕಗಳನ್ನು ಕೊಡಿ, ನನ್ನ ಮಕ್ಕಳಿಗೆ ಬೈಯುವ, ಹೊಡೆಯುವ ಅಧಿಕಾರ ನಿಮಗೆ ಕೊಟ್ಟವರ್ಯಾರು? ನಿಮ್ಮ ಕೆಲಸ ಎಷ್ಟೋ ಅಷ್ಟು ಮಾಡಿಕೊಂಡು ಹೋಗಿ ಎಂದು ಹೇಳುವವರನ್ನೂ ನೋಡಿದ್ದೇನೆ. ಇಂಥವರ ಮುಂದೆ, ಯಾವ ಮೌಲ್ಯಗಳ ಬಗ್ಗೆ ಮಾತಾಡಿ ಪ್ರಯೋಜನವಿದೆ ಹೇಳಿ?

ಮನೆಯಂತೆ ಶಾಲೆಯೂ ಮಕ್ಕಳ ಬದುಕಿನಲ್ಲಿ ಮಹತ್ತ್ವದ ಪಾತ್ರವನ್ನುವಹಿಸುತ್ತದೆ. ಸಂಸ್ಕಾರ, ಸಂಸ್ಕೃತಿ, ಸಭ್ಯತೆ, ಆಚಾರ-ವಿಚಾರಗಳ ವಾಹಿನಿಯಾಗಿ ಮನೆಯೂ, ಕಲೆ, ಭಾಷೆ, ಸಾಹಿತ್ಯ, ಸಂಗೀತ, ಸಂವಹನ ಸೃಷ್ಟಿಶೀಲತೆಯ ವಾಹಿನಿಯಾಗಿ ಶಾಲೆಗಳೂ ಮಕ್ಕಳ ಜೀವನದಲ್ಲಿ ಬಹು ಮಹತ್ತರವಾದ ಪ್ರಭಾವವನ್ನು ಬೀರುತ್ತವೆ. ಚಿತ್ರಕಲೆ, ಸಂಗೀತ, ಭರತನಾಟ್ಯ, ಕತೆ-ಕವನರಚನೆ, ನಾಟಕ ರಚನೆ ಮತ್ತು ಅಭಿನಯ, ಏಕಪಾತ್ರಾಭಿನಯ, ಮಿಮಿಕ್ರಿ, ಅನುವಾದ, ಒಂದು ಭಾಷೆಯಲ್ಲಿರುವ ವಿಚಾರಗಳನ್ನು ಇನ್ನೊಂದು ಭಾಷೆಯಲ್ಲಿ ಅಥವಾ ಇಂಗ್ಲಿಷಿಗೆ ಭಾಷಾಂತರ ಮಾಡುವ ಕೌಶಲವನ್ನು ಶಾಲೆಯಲ್ಲೂ ಹೇಗೆ ಕಲಿಸಬಹುದು ಎಂಬುದನ್ನು ಶಿಕ್ಷಣದ ಪರಿಕಲ್ಪನೆಗಳಲ್ಲಿಅಳವಡಿಸುವುದು ತೀರಾ ಅಗತ್ಯವಾಗಿದೆ. ಯಾಕೆಂದರೆ, ಶಿಕ್ಷಣ ಅಂದರೇನೆ ಸೃಜನಶೀಲತೆ. ಮಕ್ಕಳು ತಮ್ಮ ಭಾವನೆಗಳನ್ನು, ಚಿಂತನೆಗಳನ್ನು, ಆಲೋಚನೆಗಳನ್ನು, ಗ್ರಹಿಕೆಗಳನ್ನು ತನ್ನ ಮನೆಯ ಅಥವಾ ಪ್ರಾದೇಶಿಕವಾದ ಭಾಷೆಯಲ್ಲಿ ಅಭಿವ್ಯಕ್ತಿಸಲು ಅವಕಾಶವಿರುವಂತೆ ಶಿಕ್ಷಣದ ಸಿದ್ಧಾಂತಗಳು ಅವಕಾಶವನ್ನೂ, ಆಸ್ಪದವನ್ನೂ ಈಯಬೇಕು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಶಿಕ್ಷಣ ಪದ್ಧತಿಯಾದ ಸಿಸಿಇಯಲ್ಲೂ ಮಕ್ಕಳಲ್ಲಿ ಸೃಷ್ಟಿಶೀಲ ಕೌಶಲವನ್ನು ತರಗತಿ ಮತ್ತು ತರಗತಿಯೇತರ ಅವಧಿಗಳಲ್ಲಿ ಬೆಳೆಸಲು ವಿಪುಲವಾದ ಅವಕಾಶವಿದೆ. ಆದರೆ, ಅದನ್ನು ಅನುಷ್ಠಾನಕ್ಕೆತರುವಲ್ಲಿ ವ್ಯತ್ಯಯಗಳಾಗಿ ಅದು ಕೂಡ ಆಂತರಿಕವಾದ ಅಂಕಗಳ ಮೌಲ್ಯವನ್ನು ಕಳೆದುಕೊಂಡು ನಿಸ್ಸಾರವಾಗುತ್ತಿದೆ. ರಾಜ್ಯ ಮತ್ತು ರಾಷ್ಟ್ರೀಯ ಶೈಕ್ಷಣಿಕ ನೀತಿನಿಯಮಗಳು ಏನೇ ಹೇಳಿದರೂ ಪ್ರತಿ ಶಿಕ್ಷಣಸಂಸ್ಥೆಗಳೂ ಅದರದ್ದೇ ಆದ ಒಂದು ಪ್ರತ್ಯೇಕ ಅಸ್ಮಿತೆಯನ್ನು ತನ್ನ ನಿತ್ಯದ ಶಿಕ್ಷಣ ಕ್ರಮದಲ್ಲಿ ಹೊಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಒಂದು ವಿದ್ಯಾಲಯ ಜನಮಾನ್ಯತೆಯನ್ನು, ಜನಪ್ರೀತಿಯನ್ನು ಪಡೆಯುವುದರ ಹಿಂದೆ ಆವಿದ್ಯಾಲಯವು ಹೊಂದಿರುವ ಕಲಿಕಾಂಶಗಳ ಮಟ್ಟ, ಶೈಕ್ಷಣಿಕ ಸುಧಾರಣೆ, ಶಿಕ್ಷಣ ಮೌಲ್ಯಗಳವರ್ಧನೆ, ಪಠ್ಯ ಪಠ್ಯೇತರ ಚಟುವಟಿಕೆಗಳಿಗೆ ನೀಡುವ ಪ್ರಾಧಾನ್ಯತೆಯನ್ನು ಆಧರಿಸಿರುತ್ತದೆ. ಅನೇಕ ವಿದ್ಯಾಲಯಗಳು ಇದರಿಂದಾಗಿ ಜನಮಾನಸದಲ್ಲಿ ವಿಶೇಷ ಮಾನ್ಯತೆಯನ್ನು, ಗೌರವವನ್ನು ಹೊಂದಿದೆ.
ಗಾಂಧಿಹೇಳಿದ್ದು: ಒಂದು ಅತ್ಯುತ್ತಮ ಸೃಜನಶೀಲ ಭಾರತೀಯ ಮನಸಿನಲ್ಲಿ ಎರಡು ಅಂಶಗಳು ಕೂಡಿಕೊಂಡಿರುತ್ತವೆ. 1: ನಮ್ಮ ನೆಲದ ಪರಂಪರೆಯಲ್ಲಿ ಬೇರೂರಿ ಅದರ ಸತ್ತ್ವವನ್ನು ಹೀರಿಕೊಳ್ಳಬಲ್ಲ ಶಕ್ತಿ. 2 : ಹೊರಗಿನ ನಿತ್ಯ ನೂತನ ಆಕಾಶಕ್ಕೆ ತೆರೆದಿದ್ದು, ಎಲ್ಲೆಡೆಯಿಂದಲೂ ಪ್ರೇರಣೆಗಳನ್ನು ಪಡೆದುಕೊಳ್ಳಬಲ್ಲ ಶಕ್ತಿ. ಕುವೆಂಪು, ಕಾರಂತ, ಡಿವಿಜಿ, ಮಾಸ್ತಿ, ಪುತಿನ, ಶ್ರೀರಂಗರಲ್ಲಿ ಇವೆರಡೂ ಕೂಡಿದ ವ್ಯಕ್ತಿತ್ವವನ್ನು ಕಾಣಬಹುದು ಅಂತ ಅನಂತಮೂರ್ತಿಯವರು ಹೇಳುತ್ತಾರೆ. ನಮ್ಮ ನಮ್ಮ ವೈಚಾರಿಕತೆ ಹುಟ್ಟೋದು ಕೂಡ ಇಲ್ಲಿಂದಲೇ. ಆಧುನಿಕತೆ ಎಷ್ಟು ಬೆಳೆದಿದೆಯೆಂದರೆ ಯಾವ ದೇಸೀಯತೆಯನ್ನೂ ಉಳಿಸಿಕೊಳ್ಳಲಾಗದೇ ಹೋಗುವ ಬರ್ಬರತೆ ಆವರಿಸಿದೆ.

ಕನ್ನಡ ಪೂರ್ಣವಾಗಿ ಉಳಿಯದೇ ಅಳಿಯದೇ ಒಂದು ಅತಂತ್ರವಾದ ಸ್ಥಿತಿಯಲ್ಲಿ ಕೋಮಾವಸ್ಥೆಗೆ ಹೋಗಿರುವುದರಿಂದ ನಮ್ಮ ಮಕ್ಕಳು ನಮ್ಮ ಮನೆಯ ಮಕ್ಕಳಾಗಿ ಬೆಳೆಯುತ್ತಿಲ್ಲವೆಂದು ಅನಿಸುತ್ತಿದೆ. ಜಾಗತೀಕರಣದ ಪರಿಣಾಮವಿದು. ಇದರಿಂದಾಗಿ ಅತ್ತ ಆಂಗ್ಲ ಭಾಷೆಯೂ ಸರಿಯಾಗಿ ಬರದ, ಇತ್ತ ಕನ್ನಡವೂ ಸರಿಯಾಗಿ ಬರದ ಒಂದು ಎಡವಟ್ಟು ಜನಾಂಗ ದೇಶದಲ್ಲಿ ಬೆಳೆಯುತ್ತಿದೆ. ದೇಶವನ್ನು ಬಡತನದಿಂದ ಮೇಲೆತ್ತಲು ನಮ್ಮ ಸರ್ಕಾರ ಶತಪ್ರಯತ್ನ ಮಾಡುತ್ತಿದೆಯೆಂದು ಸರ್ಕಾರದ ಹಣ ತಿಂದು ತೇಗುವ ರಾಜಕಾರಣಿಗಳಂತೆ ತಮ್ಮ ಮಕ್ಕಳನ್ನು ಇಂಗ್ಲಿಷಿನ ವ್ಯಾಮೋಹ ಮತ್ತು ಆದಷ್ಟು ಬೇಗ ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಲೆಂಬ ಮಹದಾಸೆಯಿಂದ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸಿ, ಕನ್ನಡದ ಉಳಿವಿನ ಬಗ್ಗೆ ನಾಟಕೀಯವಾಗಿ ಮಾತನಾಡುತ್ತ ಒಳಗೊಳಗೇ ಅಸಹ್ಯವೂ ಅಣಕವೂ ಮಾಡುವವರಿದ್ದಾರೆ.

ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡದ, ಕನ್ನಡದ ಪತ್ರಿಕೆಗಳನ್ನು ಓದದ, ಕನ್ನಡ ಸುದ್ದಿವಾಹಿನಿಗಳನ್ನು ನೋಡದ, ಕನ್ನಡದಲ್ಲಿ ಮಾತಾಡದ, ಆದರೆ ಕನ್ನಡದಲ್ಲಿ ಮಾತ್ರ 125 ಕ್ಕೆ 125 ಅಂಕಗಳೇ ಬರಬೇಕೆನ್ನುವ ಮನಸ್ಥಿತಿ ಇಂದಿನ ವಿದ್ಯಾರ್ಥಿಗಳದ್ದು, ಪೋಷಕರದ್ದು. ಹೊರ ಆದರ್ಶದ ಮಾರ್ಗವಾಗಿಯೂ ಸಾಹಿತ್ಯಕ ಒಲವಿಲ್ಲ. ಸರಳವಾದ ವಿಚಾರವನ್ನು ಸರಳವಾದ ರೀತಿಯಲ್ಲಿ ಹೇಳುವುದಕ್ಕೂ, ಸರಳವಾದ ವಿಚಾರವನ್ನು ಸರಳವಾಗಿ ಕೇಳಿ ತಿಳಿಯುವುದಕ್ಕೂ, ಸರಳವಾದ ಸಂಗತಿಯನ್ನು ಸರಳವಾಗಿ ಓದುವುದಕ್ಕೂ, ಸರಳವಾದ ಅಭಿಪ್ರಾಯಗಳನ್ನು ಸರಳವಾಗಿ ಬರೆಯುವುದಕ್ಕೂ ದೇಶ ಭಾಷೆಯಲ್ಲೇ ಬೋಧನೆಯಾಗಬೇಕೆಂಬುದು ಜಾಗತಿಕ ಭಾಷಾಶಾಸ್ತ್ರಜ್ಞರ ಇಂಗಿತವಾಗಿದ್ದೂ, ಇದನ್ನೇ ಮತ್ತಷ್ಟು ಪುಷ್ಟೀಕರಿಸುತ್ತ ದೇಶ ಭಾಷಾ ಮಾಧ್ಯಮದ ಮೂಲಕವೇ ಮೂಲ ಶಿಕ್ಷಣದ ಕಲಿಕೆ ಸಾಧ್ಯವಾದರೆ ಭವಿಷ್ಯದಲ್ಲಿ ಸೃಜನಶೀಲ ಮನಸ್ಸಿನ ಪ್ರತಿಭಾವಂತ ಜನಾಂಗವನ್ನು ನಿರ್ಮಿಸಲು ಸಾಧ್ಯವಿದೆ.

ಲೇಖಕರು
ದೇವಿದಾಸ್ ಟಿ.