(…ಹಿಂದಿನ ಸಂಚಿಕೆಯಿಂದ ಮುಂದುವರೆದದ್ದು : ಭಾಗ -4)
ಬೆಳವಣಿಗೆ :
ಯಕ್ಷಗಾನ ರಂಗಭೂಮಿ ತನ್ನ ಇತಿಹಾಸದುದ್ದಕ್ಕೂ ಅನೇಕ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ.ಅವುಗಳಲ್ಲಿ ಕೆಲವು ಇತ್ಯಾತ್ಮಕವಾದರೆ ಕೆಲವು ನೇತ್ಯಾತ್ಮಕ.
ಕೆಲವು ಪೂರಕ ಬೆಳವಣಿಗೆಗಳಾದರೆ ಕೆಲವು ಮಾರಕ ಬೆಳವಣಿಗೆಗಳು.ಆಧುನಿಕ ಸೌಕರ್ಯಗಳು, ವಿದ್ಯಾವಂತರ ಆಗಮನ, ಮಹಿಳೆಯರ ಆಗಮನ,ಕಾಲಮಿತಿ ಪ್ರಯೋಗ, ಗಂಗಾಧರ ಶಾಸ್ತ್ರಿಗಳ ‘ ಸುಧೋರಣೆಯ ಸುಧಾರಣೆ’ ,ಕೆರೆಮನೆ ಶಿವಾನಂದ ಹೆಗಡೆಯವರು ತಮ್ಮ ಮೇಳದಲ್ಲಿ ನಡೆಸಿರುವ ಪ್ರಯೋಗಗಳು,ಯಕ್ಷಗಾನದ ಕರಪತ್ರಗಳಲ್ಲಿ ಪ್ರಸಂಗದ ಜೊತೆಗೆ ಪ್ರಸಂಗ ಕರ್ತ ಕವಿಗಳ ಹೆಸರನ್ನು ಮುದ್ರಿಸುತ್ತಿರುವುದು ಪೂರಕ ಬೆಳವಣಿಗೆಗಳಾದರೆ ಅಸಮತೋಲನ, ಅತಿಯಾದ ವಾಣಿಜ್ಯೀಕರಣ, ಬೇರೆ ಕಲಾ ಪ್ರಕಾರ ಗಳಿಂದ ತಂದು ಕಸಿಕಟ್ಟುವಿಕೆ, ಕಲೆಯನ್ನೂ ಮೀರಿ ಕಲಾವಿದ ಬೆಳೆದದ್ದು, ಪ್ರೇಕ್ಷಕರ ಅಲ್ಪ ತೃಪ್ತಿ ಮುಂತಾದವುಗಳು ಮಾರಕ ಬೆಳವಣಿಗೆಗಳು.

ಪೂರಕ ಬೆಳವಣಿಗೆಗಳು :
1 ) ಆಧುನಿಕ ಸೌಕರ್ಯಗಳು:
ಮೊದಲೆಲ್ಲ ಕಲಾವಿದರು ತುಂಬಾ ಕಷ್ಟಪಡಬೇಕಾಗಿತ್ತು. ಅವರ ಪೆಟ್ಟಿಗೆಯನ್ನು ಅವರೇ ಹೊತ್ತುಕೊಂಡು ಊರಿಂದೂರಿಗೆ ಅಲೆಯಬೇಕಾತ್ತು. ಆಮೇಲೆ ಚಕ್ಕಡಿಗಾಡಿ ಬಂತು. ಈಗ ವಾಹನ ಸೌಕರ್ಯ ಬಂದಿದೆ. ಹೆಚ್ಚಿನ ಕಲಾವಿದರು ಸ್ವಂತ ವಾಹನ ಹೊಂದುವಷ್ಟು ಆಢ್ಯರಾಗಿದ್ದಾರೆ. ವ್ಯವಸ್ಥಿತವಾದ ರಂಗ ಸಜ್ಜಿಗೆ ಇರಲಿಲ್ಲ. ಬೆಳಕಿನ ವ್ಯವಸ್ಥೆ ಇರಲಿಲ್ಲ.ಜಿಮ್ಮಟಿಗೆ ಬೆಳಕಿನಲ್ಲಿ ಯಕ್ಷಗಾನ ನಡೆಯಬೇಕಾಗಿತ್ತು. ಆಮೇಲೆ
ಪೆಟ್ರೊಮ್ಯಾಕ್ಸ ( ಗ್ಯಾಸ್ ಲೈಟ್ ) ಬಂತು. ಈಗ ಸುಸಜ್ಜಿತ ರಂಗ ಸಜ್ಜಿಕೆ ಜಗಮಗಿಸುವ ವಿದ್ದ್ಯುದ್ದೀಪಗಳು ಬಂದಿವೆ.ಮೊದಲೆಲ್ಲ ಧ್ವನಿವರ್ಧಕದ ವ್ಯವಸ್ಥೆ ಇರಲಿಲ್ಲ.ಕಲಾವಿದರು ಕುಣಿಯುತ್ತ ಮುಂದೆ ಹೋದ ಹಾಗೆ ಭಾಗವತರು ಪದ್ಯ ಹೇಳುತ್ತಾ ಅವರ ಹಿಂದೇ ಹೋಗುತ್ತಿದ್ದರೆಂದು ನನ್ನ ಅಜ್ಜ ಕೊಂಡದಕುಳಿ ರಾಮ ಹೆಗಡೆಯವರು ಹೇಳಿದ್ದನ್ನು ಕೇಳಿದ್ದೇನೆ. ಕಂಠ ತ್ರಾಣ ಉಳ್ಳವರು ಮಾತ್ರ ಭಾಗವತರಾಗುತ್ತಿದ್ದರಂತೆ. ಈಗ ಧ್ವನಿ ವರ್ಧಕಗಳು ಬಂದಿವೆ. ಆದರೂ ಭಾಗವತರು ಇದ್ದಷ್ಟೂ ತ್ರಾಣ ಹಾಕಿ ಕಿರುಚುವುದು ಏಕೆ ಅನ್ನುವುದೇ ಅರ್ಥವಾಗುವುದಿಲ್ಲ. ಹಿಂದೆಲ್ಲ ಬಣ್ಣದ ಕಲ್ಲುಗನ್ನು ತೇದು ಬಣ್ಣ ಬಳಿದುಕೊಳ್ಳುತ್ತಿದ್ದರೆಂದು ಅಜ್ಜ ಹೇಳುವುದನ್ನು ಕೇಳಿದ್ದೇನೆ. ಈಗ ಬೇಕಾದ ರೀತಿಯ ಪ್ರಸಾದನ ಸಾಮಗ್ರಿಗಳು ಬಂದಿವೆ. ಕಸೆ ವಸ್ತ್ರವಿರಲಿಲ್ಲ; ಮನೆಯಲ್ಲಿರುವ ಸೀರೆಗಳನ್ನೆ

ಕಸೆವಸ್ತ್ರವಾಗಿ ಬಳಸುತ್ತಿದ್ದರು. ಈಗ ಅಂದವಾದ ಕಸೆವಸ್ತ್ರ ಬಂದಿದೆ.ಮೊದಲೆಲ್ಲ ಹುಲ್ಲಿನ ಅಟ್ಟೆಯಿಟ್ಟು ಪೊಗಡೆ ಕಟ್ಟಬೇಕಾಗಿತ್ತು. ಬಿಳೆ ಕೋರನ್ನು ಮಾತ್ರ ಸುತ್ತುತ್ತಿದ್ದರು. ಈಗಿನ ಹಾಗೆ ಕೆಂಪು ಹಳದಿ ಕೋರುಗಳಿರಲಿಲ್ಲ ಪೊಗಡೆಯ ತುದಿಗೆ ಬೆಂಡಿನ ಹೂವಿನ ದಂಡೆಯನ್ನು ಇಂಗ್ಲೀಷ್ ಎಂಟರಾಕೃತಿಯಲ್ಲಿಟ್ಟು ಕಟ್ಟುತ್ತಿದ್ದರು. ಈಗ ಅದರ ಜಾಗದಲ್ಲಿ
ಥರ್ಮಾಕೂಲಿನ ಹಗುರವಾದ ಸಿದ್ಧ ಮಾದರಿಯ ಪೊಗಡೆಗಳು ಬಂದಿವೆ. ವಿದ್ಯುದ್ದೀಪಗಳಿಂದ ಅಲಂಕೃತವಾದ ಸೊಗಸಾದ ರಂಗ ಸಜ್ಜಿಕೆ ಅಚ್ಚುಕಟ್ಟಾದ ವೇಷ ಭೂಷಣಗಳಿಂದ ಯಕ್ಷಗಾನ ರಂಗಭೂಮಿ ಮೊದಲಿಗಿಂತ ಹೆಚ್ಚು ಆಕರ್ಷಕವಾಗಿದೆ. ಆದರೂ ಮೊದಲಿನ ದೊಂದಿಬೆಳಕಿನ ಆಟಕ್ಕೆ ಅದರದ್ದೇ ಆದ ಸೊಗಸು ಇತ್ತು ಎಂಬುದನ್ನು ಅಲ್ಲಗಳೆಯುವ ಹಾಗಿಲ್ಲ.
2 ) ವಿದ್ಯಾವಂತರ ಆಗಮನ:
ವಿದ್ಯಾವಂತರ ಆಗಮನದಿಂದ ಯಕ್ಷಗಾನ ರಂಗಭೂಮಿಗೆ ಅಪಾರವಾದ ಪ್ರಯೋಜನವಾಗಿದೆ.ತೀರಾ ಗ್ರಾಮ್ಯ ಮಟ್ಟದಲ್ಲಿದ್ದ ಯಕ್ಷಗಾನದ ಮಾತುಗಾರಿಕೆ ತನ್ನ ಸಕಲ ಸಾಧ್ಯತೆಗಳಿಂದ ಸುಪುಷ್ಠವಾಗಿ ಬೆಳೆದದ್ದು ವಿದ್ಯಾವಂತರ ಆಗಮನದಿಂದ ಎಂಬುದನ್ನು ಮರೆಯುವಹಾಗಿಲ್ಲ. ಸಂಭಾಷಣೆಯನ್ನು ಹೆಣೆಯುವಲ್ಲಿ, ಪಾತ್ರ ಚಿತ್ರಣದಲ್ಲಿ, ಪಾತ್ರ ಪೋಷಣೆಯಲ್ಲಿ ಪ್ರಸಂಗ ನಿರ್ವಹಣೆಯಲ್ಲಿ ಯಕ್ಷಗಾನಕ್ಕೊಂದು ಸೈದ್ಧಾಂತಿಕ ನೆಲೆಗಟ್ಟನ್ನು
ಘನತೆಯನ್ನು ಒದಗಿಸಿದ ಅವರ ಶ್ರಮ ಶ್ಲಾಘನೀಯ.
3 ) ಮಹಿಳೆಯರ ಆಗಮನ
ಯಕ್ಷಗಾನಕ್ಕೆ ಮಹಿಳೆಯರ ಆಗಮನ ಒಂದು ಆಶಾದಾಯಕ ಬೆಳವಣಿಗೆ. ಮಹಿಳೆ ಈವೊತ್ತು ಎಲ್ಲ ರಂಗಗಳಲ್ಲಿಯೂ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದ್ದಾಳೆ. ಯಕ್ಷಗಾನದಲ್ಲಿಯೂ ಅಂಥ ದಿನಗಳು ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಸುಭಾಷಿತವೊಂದು ಹೇಳುವ ಹಾಗೆ ಹೆಣ್ಣಿಗೆ ಗಂಡಸರಿಗಿಂತ ನಾಲ್ಕುಪಟ್ಟು ಬುದ್ಧಿ
ಆರುಪಟ್ಟು ಸಾಹಸ. ಯಕ್ಷಗಾನದಲ್ಲಿ ಮಹಿಳೆಯರು ಈಗಷ್ಟೇ ಅಂಬೆಗಾಲಿಕ್ಕುತ್ತಿದ್ದಾರೆ. ಮಹಿಳೆ ಯಾವುದನ್ನೂ ಉಢಾಪೆಯಾಗಿ ತೆಗೆದುಕೊಳ್ಳುವುದಿಲ್ಲ. ಮಹಿಳೆಯ ಈ ಗುಣ
ಮುಂದೊಂದು ದಿನ ಯಕ್ಷಗಾನಕ್ಕೆ ವರವಾಗಬಹುದು. ಆದರೆ ಮಹಿಳೆಯರು ಪುರುಷ ಕಲಾವಿದರನ್ನೆ ಅನುಸರಿಸುತ್ತಾ ಅವರು ಎಸಗಿದ ತಪ್ಪುಗಳನ್ನೇ ಎಸಗುತ್ತಾ ಮುಂದುವರಿಯುತ್ತಿರುವುದು ವಿಷಾದದ ಸಂಗತಿ.ಅದೇ ಚಾಲು ಕುಣಿತ,ಅತಿ ಅಭಿನಯಗಳನ್ನು ಮಾಡದೇ ಯಕ್ಷಗಾನದ ನಾಲ್ಕೂ ಅಂಗಗಳಲ್ಲಿ ಸಮನ್ವಯತೆಯನ್ನು ಸಾಧಿಸಿ ತಾವೇ ಮಾದರಿಗಳಾಗಬೇಕು ಎಂಬುದು ಆಶಯ.
ಡಾ. ಎನ್.ಆರ್.ನಾಯಕರು ತಮ್ಮ ‘ನಾಡವರ ಸಂಸ್ಕೃತಿ ‘ ಎಂಬ ಪುಸ್ತಕದಲ್ಲಿ ಒಂದು ವಿಷಯ ಪ್ರಸ್ತಾಪ ಮಾಡುತ್ತಾರೆ. 1940 ರ ಸುಮಾರಿಗೆ ‘ನಾಡವರು ‘ ಸುಬೋಧ ಯಕ್ಷಗಾನ ಮಂಡಳಿ ‘ ಯನ್ನು ಕಟ್ಟಿ 8 -10 ವರ್ಷಗಳ ಕಾಲ ಅದನ್ನು ನಡೆಸಿ ಖ್ಯಾತಿ ಗಳಿಸಿದ್ದಲ್ಲದೆ ಇವರ ಮೇಳದಲ್ಲಿ ‘ ಶಾಂತಿ ದೇವಳಿ ‘ ಎಂಬ ಹೆಣ್ಣುಮಗಳೊಬ್ಬಳು
ಕಲಾವಿದೆಯಾಗಿ ಭಾಗವಹಿಸಿದ್ದರ ಉಲ್ಲೇಖವನ್ನು ಅವರು ಆ ಪುಸ್ತಕದಲ್ಲಿ ಮಾಡುತ್ತಾರೆ. ಅವರು ಹೇಳುವಂತೆ ಈಕೆ ಯಕ್ಷಗಾನದಲ್ಲಿ ಭಾಗವಹಿಸಿದ ಮೊದಲ ಮಹಿಳೆ. ನಾವೆಲ್ಲ ತುಂಬಾ ಚಿಕ್ಕವರಿರುವಾಗ ಅಕ್ಕಾಣಿ ಅಮ್ಮ ಎನ್ನುವವರು ಯಕ್ಷಗಾನದಲ್ಲಿ ಪಾತ್ರವಹಿಸಿದ್ದನ್ನು ಕೇಳಿದ್ದೇವೆ,ಪತ್ರಿಕೆಗಳಲ್ಲಿ ಓದಿದ್ದೇವೆ. ಆಮೇಲೆ ನೃಪಾಂಗಿ ಮತ್ತು ಸುಜಾತ ಅನ್ನುವವರು ಯಕ್ಷಗಾನದ ಖ್ಯಾತ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರೊಂದಿಗೆ
ಪಾತ್ರವಹಿಸಿದ್ದನ್ನು ನೋಡಿದ್ದೇನೆ. ಆಮೇಲೆ ಸುಜಾತ ಯಕ್ಷಗಾನದ ಸುಪ್ರಸಿದ್ಧ ಭಾಗವತ ಸುಬ್ರಮಣ್ಯ ಧಾರೇಶ್ವರರನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ. ಈಗ ಸುಮಾ ಗಡಿಗೆಹೊಳೆ, ನಿರ್ಮಲಾ

ಗೋಳಿಕೊಪ್ಪ,ಮಯೂರಿ ಉಪಾಧ್ಯಾಯ, ಸೌಮ್ಯಶ್ರೀ ಗೋಟಗಾರ್ ಮುಂತಾದವರು ಯಕ್ಷಗಾನದಲ್ಲಿಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ಅಶ್ವಿನಿ ಕೊಂಡದಕುಳಿ, ನಾಗಶ್ರೀ ಗೀಜಗಾರ್, ಅರ್ಪಿತಾ ಹೆಗಡೆ, ಕಿರಣ್ ಪೈ ಶಿವಮೊಗ್ಗ
ಮುಂತಾದವರು ಯಕ್ಷಗಾನವನ್ನು ವೃತ್ತಿಯಾಗಿಯೇ ಸ್ವೀಕರಿಸಿದ್ದಾರೆ. ತೆಂಕಿನಲ್ಲಿ ಬಹಳ ಮೊದಲೇ ಲೀಲಾವತಿ ಬೈಪಡಿತ್ತಾಯ್ ಯಕ್ಷಗಾನ ಭಾಗವತಿಕೆಯನ್ನು ವೃತ್ತಿಯಾಗಿ ಸ್ವೀಕರಿಸಿ ಈಗ ನಿವೃತ್ತರಾಗಿದ್ದಾರೆ. ತೆಂಕಿನಲ್ಲಿ ಕಾವ್ಯಶ್ರೀ ಅಜೇರ್, ಅಮೃತಾ ಅಡಿಗ ಪ್ರಸಕ್ತ ಬಹು ಬೇಡಿಕೆಯ ಮಹಿಳಾ ಭಾಗವತೆಯರು.ಕು ಚಿಂತನಾ ಹೆಗಡೆ ಮಾಳ್ಕೋಡ್ ಬಡಗಿನ ಮೊದಲ ವೃತ್ತಿಪರ ಮಹಿಳಾ ಭಾಗವತೆ.ಬಹು ಬೇಡಿಕೆಯಲ್ಲಿರುವ ಜನಪ್ರೀಯ ಭಾಗವತೆ ಕೂಡಾ.ಕು.ಶ್ರೀರಕ್ಷಾ ಹೆಗಡೆ ಬಡಗಿನ ಭರವಸೆಯ ಮಹಿಳಾ ಭಾಗವತೆಯಾಗಿ ಹೊರಹೊಮ್ಮುತ್ತಿದ್ದಾರೆ. ಈ ಮೇಲಿನ ಬೆಳವಣಿಗೆಗಳನ್ನು ಗಮನಿಸಿದಾಗ ಮಹಿಳೆಯರು ಯಕ್ಷಗಾನದಲ್ಲಿ ಅಪಾರವಾದದ್ದನ್ನು ಸಾಧಿಬಲ್ಲರು ಎಂಬುದು ನಿಚ್ಚಳವಾಗಿ ಗೋಚರಿಸುತ್ತಿದೆ.
4 ) ಅನ್ಯ ಧರ್ಮೀಯರ ಮತ್ತು ಅನ್ಯ ಭಾಷಿಕರ ಆಗಮನ:
ಯಕ್ಷಗಾನದ ಆಕರ್ಷಣೆಗೊಳಗಾಗಿ ಅನ್ಯ ಮತೀಯರೂ ಅನ್ಯ ಭಾಷಿಕರೂ ಯಕ್ಷಗಾನ ರಂಗವನ್ನು ಒಪ್ಪಿ ಅಪ್ಪಿಕೊಳ್ಳುತ್ತಿರುವುದು ಯಕ್ಷಗಾನದ ವ್ಯಾಪ್ತಿ ವಿಸ್ತಾರವನ್ನು ಹೆಚ್ಚಿಸಿದೆ.ಮುಸ್ಲಿಂ ಮತಾನುಯಾಯಿಗಳಾಗಿ ಯಕ್ಷಗಾನ ರಂಗದಲ್ಲಿ,ತಾಳಮದ್ದಲೆಯಲ್ಲಿ ಅಪಾರ ಸಾಧನೆ ಮಾಡಿದ ‘ಜಬ್ಬರ್ ಸುಮೊ’ಹೆಸರನ್ನು ಇಲ್ಲಿ ಪ್ರಸ್ತಾಪಿಸಲೇ ಬೇಕು.ಹಾಗೆಯೇ ‘ಮಹಮ್ಮದ್ ಗೌಸ್’ ಯಕ್ಷಗಾನ ಕಲಾವಿದರಾಗಿ ಹೆಸರು ಮಾಡುವುದರ ಜೊತೆಗೆ ಕುಂದಾಪುರ ಪಟ್ಟಣದಲ್ಲಿ ಹಲವು ವರ್ಷಗಳಿಂದ ಯಕ್ಷಗಾನ ಸಪ್ತಾಹ ನಡೆಸುತ್ತಿದ್ದಾರೆ.”ಆರ್ಷಿಯಾ” ಎಂಬ ಮುಸ್ಲಿಂ ಮಹಿಳೆ ಪುತ್ತೂರಿನ ರಾಮ ಭಟ್ಟರಲ್ಲಿ ತೆಂಕುತಿಟ್ಟು ಯಕ್ಷಗಾನ ವನ್ನು ವಿಧಿವತ್ತಾಗಿ ಅಭ್ಯಾಸ ಮಾಡಿ ರಕ್ಕಸ ಪಾತ್ರ ಗಳಲ್ಲಿ ಮಿಂಚುತ್ತಿದ್ದಾಳೆ.ನಾವು ಎಳೆಯವರಿದ್ದಾಗ ಕ್ರಿಶ್ಚನ್ ಬಾಬು ಎನ್ನುವವರು ಯಕ್ಷಗಾನ ಪಾತ್ರವಹಿಸಿದ್ದನ್ನು ಕೇಳಿದ್ದೇನೆ.ಇತ್ತೀಚೆಗೆ ಕುಮಟಾ ತಾಲೂಕು ಮೂರೂರಿನ “ಮಾರ್ಷಲ್”ಎನ್ನುವವರು ಯಕ್ಷಗಾನ ರಂಗದಿಂದ ಆಕರ್ಷಿತರಾಗಿ ಅದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ

5 ) ಕಾಲಮಿತಿ ಪ್ರಯೋಗ :
ಕೆರಮನೆ ಮಹಾಬಲ ಹೆಗಡೆಯವರು ಕಮಲ ಶಿಲೆ ಮೇಳದಲ್ಲಿ ಈ ಪ್ರಯೋಗವನ್ನು ನಡೆಸಿದರು.ಪ್ರೇಕ್ಷಕರು ಅಷ್ಟು ಸುಲಭದಲ್ಲಿ ಹೊಸತನ್ನು ಒಪ್ಪಿಕೊಳ್ಳುವುದಿಲ್ಲ.ಮೂರು ಕಾಸಿನ ಮೇಳವೆಂದು ಅಪಹಾಸ್ಯ ಮಾಡಿದ್ದನ್ನು ಕೇಳಿದ್ದೇನೆ. ನಾನು ಆವಾಗ ಮೈಸೂರಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದೆ.ಹಾಗಾಗಿ ನನಗೆ ಅದನ್ನು ನೋಡುವ ಅವಕಾಶ ಒದಗಿಬರಲಿಲ್ಲ. ನಾನು ನೋಡುವ ಕಾಲಕ್ಕೆ ಕಾಲಮಿತಿ ಕಲಾವಿದರಿಗಾಯಿತೇ ವಿನ: ಪ್ರೇಕ್ಷಕರಿಗಾಗಲಿಲ್ಲ ಅನ್ನಿಸಿದ್ದುಂಟು. ರಾತ್ರಿ 12_ 1 ಘಂಟೆಗೆ ಆರಂಭಿಸಿ ಬೆಳಗಿನ ಜಾವ 4 ಘಂಟೆಗೆ ಮಂಗಳ ಹಾಡುತ್ತಿದ್ದರು.ನೋಡುಗರಿಗೆ ರಾತ್ರಿ ಇಡೀ ನಿದ್ದೆ ಗೆಡುವುದು ತಪ್ಪಲಿಲ್ಲ.ಈಗೀಗ ಸಮಯಕ್ಕೆ ಸರಿಯಾಗಿ ಕಾಲಮಿತಿ ಯಕ್ಷಗಾನಗಳು ನಡೆಯುತ್ತಿವೆ. ಕಾಲಮಿತಿ ಯಕ್ಷಗಾನದಲ್ಲಿ ಕಾಲದ ಹಂಚಿಕೆ ಸರಿಯಾಗಿ ಆಗದೇ ಇರುವುದು ದುರ್ದೈವದ ಸಂಗತಿ. ಪ್ರಧಾನ ಪಾತ್ರಧಾರಿ ಹೇಳದ್ದೇ ಹೇಳುತ್ತಾ ಮಾಡಿದ್ದೇ ಮಾಡುತ್ತ ಎಲ್ಲ ಪದ್ಯಗಳನ್ನು ಬಳಸಿಕೊಂಡು ಬಾಕಿ ಕಲಾವಿದರಿಗೆ ಕಾಲಮಿತಿಯಾದದ್ದೇ ಹೆಚ್ಚು.ಕೆರೆಮನೆ ಶಿವಾನಂದ ಹೆಗಡೆ ಕಾಲಮಿತಿಯನ್ನು ಸಮನ್ವಯಗೊಳಿಸಿ ಪ್ರದರ್ಶನಗಳನ್ನು ನೀಡುತ್ತಾ ಈ ಕೊರತೆಯನ್ನು ನೀಗಿಸಿ ಮಾದರಿಯಾಗಿದ್ದಾರೆ.
6 ) ಸುಧೋರಣೆಯ ಸುಧಾರಣೆ:
ಇದು ಕೆರಮನೆ ಮಹಾಬಲ ಹೆಗಡೆಯವರ ಪರಿಕಲ್ಪನೆ. ಶ್ರೀಯುತ ಗಂಗಾಧರ ಶಾಸ್ತ್ರಿಗಳು ತುಂಬಾ ನಿರೀಕ್ಷೆಗಳೊಂದಿಗೆ ಈ ಪ್ರಯೋಗಕ್ಕೆ ಕೈ ಹಾಕಿದ್ದರು. ಆದರೆ ಆರ್ಥಿಕ ಅಡಚಣೆ ಮತ್ತು ಕಲಾವಿದರ ಅಸಹಕಾರಗಳಿಂದ ನಿರೀಕ್ಷಿತ ಯಶಸ್ಸು ಸಿಗಲಿಲ್ಲ.ಕೇವಲ ಒಂದು ಪ್ರಯೋಗಕ್ಕಷ್ಟೆ ಸೀಮಿತವಾಯಿತು. ನುರಿತ ಕಲಾವಿದರು ಮನಸ್ಸು ಮಾಡಿದ್ದಿದ್ದರೆ ಕೇವಲ ಹತ್ತು ಹದಿನೈದು ನಿಮಿಷಗಳ ಸಮಾಲೋಚನೆ ಸಾಕಾಗುತಿತ್ತು ಅದನ್ನು ಕಾರ್ಯಗತಗೊಳಿಸಲು. ಆದರೆ ಯಕ್ಷಗಾನದ ದುರ್ದೈವ ಹಾಗಾಗಲಿಲ್ಲ.ಅದು ತಾಂತ್ರಿಕ ಸೋಲೇ ವಿನ: ಶಾಸ್ತ್ರಿಗಳ ಸೋಲಲ್ಲ. ಅವರ ಧೋರಣೆ ಸರಿಯಾಗಿಯೇ ಇತ್ತು. ಪಾತ್ರದ ಸ್ವಭಾವಕ್ಕೆ ಹೊಂದುವ ಅಂಗ ಸೌಷ್ಠವ, ವ್ಯಕ್ತಿತ್ವ ,ಸ್ವರ ಇವುಗಳಿರುವ ಕಲಾವಿದರನ್ನು ಕಲೆ ಹಾಕಿ ಪ್ರದರ್ಶನ ನೀಡಿದರೆ 50 ಪ್ರತಿಶತ ಗೆದ್ದಹಾಗೆ ಎಂಬುದು ಅವರ ಅಭಿಮತ. ಇನ್ನುಳಿದದ್ದು ಕಲಾವಿದರ ನಿರ್ವಹಣೆಗೆ ಬಿಟ್ಟಿದ್ದು.ಕಲಾವಿದ ಎಷ್ಟೇ ಚೆನ್ನಾಗಿ ನಿರ್ವಹಣೆ
ಮಾಡಿದರೂ ಪಾತ್ರಕ್ಕೊಪ್ಪುವ ಸ್ವಭಾವ ಸೌಷ್ಠವ ಅವನದಲ್ಲದೇ ಹೋದರೆ ಪ್ರದರ್ಶನ ಪ್ರೇಕ್ಷಕರನ್ನು ತಲುಪುವಲ್ಲಿ ವಿಫಲವಾಗುತ್ತದೆ ಎಂಬ ಅವರ ಮಾತಿನಲ್ಲಿ ಹುರುಳಿದೆ. ಅವರು ಪ್ರತಿಪಾದಿಸುವ ಇನ್ನೊಂದು ವಿಚಾರವೆಂದರೆ ರಂಗದಲ್ಲಿ ನಡೆಯು ಕ್ರಿಯೆಗಳೆಲ್ಲ ಅಲೌಕಿಕವಾಗಿರುವಾಗ ಹಿಮ್ಮೇಳದವರು ಅಂಗಿ ಪಂಚೆ ತೊಟ್ಟು ತೀರ ಲೌಕಿಕರಂತೆ ಕುಳಿತುಕೊಳ್ಳುವುದು ಎಷ್ಟರ ಮಟ್ಟಿಗೆ ಸಮಂಜಸ ಎನ್ನುವುದು ಅವರ ವಾದ. ಹೀಗಾಗಿ ಹಿಮ್ಮೇಳದವರಿಗೂ ಕನಿಷ್ಠ ಮೇಕಪ್, ಝರಿ ಶಾಲು, ಝರಿ ಪೇಟ, ಕೊರಳಲ್ಲಿ ಹಾರ
ಇರುವುದು ಸೂಕ್ತ ಎಂಬುದು ಅವರ ಅಭಿಮತ. ಅವರ ಧೋರಣೆಗೆ ಒಳಪಟ್ಟು ವ್ಯವಹರಿಸು ಸಮರ್ಥ ಕಲಾವಿದರ ಸಹಕಾರದಿಂದ ಆ ಪ್ರದರ್ಶನ ನಡೆದಿದ್ದರೆ ಯಕ್ಷಗಾನದ ಇತಿಹಾಸದಲ್ಲಿ ದಾಖಲಾರ್ಹ ಸಂಗತಿಯಾಗುತ್ತಿತ್ತು. ಜೊತೆಗೆ ಇನ್ನು ಮುಂದಿನಯಕ್ಷಗಾನ ಹೇಗಿರಬೇಕೆಂಬುದಕ್ಕೆ ಮಾದರಿಯಾಗುತ್ತಿತ್ತು. ಅವರ ಅಭಿಪ್ರಾಯದಲ್ಲಿ ಯಕ್ಷಗಾನ ಒಂದು ದೃಶ್ಯ ಮಾಧ್ಯಮ.ರಂಗದ ಒಂದೊಂದು ಸನ್ನಿವೇಶವೂ ಕಣ್ತುಂಬಿಕೊಳ್ಳುವಂತಿರಬೇಕು
ಎಂಬುದು ಅವರ ವಾದ. ಉದಾಹರಣೆಗೆ ದೇವ ಸಭೆ ಅಂದರೆ ಅಷ್ಟ ದಿಕ್ಪಾಲಕರು, ರಂಭಾದಿ ನರ್ತಕಿಯರ ನರ್ತನ, ಝಗಮಗಿಸುವ ವೇಷ ಭೂಷಣ ಇವೆಲ್ಲ ಇದ್ದು ದೇವಲೋಕದ ವೈಭವವನ್ನು ಕಟ್ಟಿಕೊಡುವಂತಿರಬೇಕು. ಆದರೆ ವಾಸ್ತವದಲ್ಲಿ ಹಾಗಿಲ್ಲ.ಹೆಚ್ಚಾಗಿ ಮೇಳಕ್ಕೆ ಹೊಸದಾಗಿ ಬಂದ ಯುವ ಕಲಾವಿದರು ಈ ಪಾತ್ರವನ್ನು ಮಾಡುವುದು ಜಾಸ್ತಿ. ಬಣ್ಣ ಬೇಡಿಗೆಯಿರದ ವೇಷವನ್ನು ಧರಿಸಿ ಯಾವುದೇ ವತ್ತು ವೇಷಗಳಿರದೆ ಒಂಟಿಯಾಗಿ ಪ್ರವೇಶಿಸಿ
ಮಾತಿನಲ್ಲಿಯೇ ದೇವಲೋಕದ ವೈಭವವನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಾರೆ.
ಪಾತ್ರ ಮಾಡಿದವನು ಯಾರು ಅನ್ನುವದಕ್ಕಿಂತ ಪಾತ್ರ ಯಾವುದು ಎನ್ನುವುದು ಪ್ರಧಾನವಾಗಬೇಕು ಎಂಬುದು ಅವರ ಪ್ರಾಮಾಣಿಕ ಕಳಕಳಿ. ಮುಖ್ಯ ವೇಷಧಾರಿ ದೇವೇಂದ್ರನ ಪಾತ್ರ ಮಾಡಿದರೆ ಈ ಎಲ್ಲ ಸೌಕರ್ಯಗಳು ಇರುತ್ತವೆ. ಈ ತಾರತಮ್ಯ ನಿವಾರಣೆಯಾಗಬೇಕೆನ್ನುವುದು ಅವರ ಅಭಿಪ್ರಾಯ. ಸಣಕಲು ಕಡ್ಡಿಯನ್ನು ಭೀಮನೆಂದು
ಬಿಂಬಿಸಿದರೆ ಮನಸ್ಸು ಒಪ್ಪಿಕೊಳ್ಳಲಾರದು ಎಂಬುದು ಅವರ ಖಚಿತ ನಿಲುವು. ಪರ ಊರಿನಲ್ಲಿರುವವರು ಊರಿಗೆ ಬಂದಾಗ ಆಡಿಸುವ ಹರಕೆ ಆಟದಲ್ಲಿ ಮದ್ದು ಗುಂಡು, ಬಾಣ ದಿರಿಸುಗಳಿಗೆ 4-5 ಲಕ್ಷ ಖರ್ಚು ಮಾಡಿ ಪ್ರತಿಷ್ಠೆ ಮೆರೆಸುವ ಬದಲಿಗೆ ಅದರ ಅರ್ಧ ಖರ್ಚು ಮಾಡಿದರೂ ಈ ಎಲ್ಲ ಕೊರತೆಗಳನ್ನು ನೀಗಿಸಿಕೊಂಡು ಒಂದು ಉತ್ತಮ ಯಕ್ಷಗಾನ ಪ್ರದರ್ಶನ ನೀಡಬಹುದುದೆಂದು ಅವರ ಪ್ರಮಾಣಿಕ ಅನಿಸಿಕೆ.

7 ) ಕೆರೆಮನೆ ಶಿವಾನಂದ ಹೆಗಡೆಯವರ ಪ್ರಯೋಗ
ಯಕ್ಷಗಾನಕ್ಕೆ ಏನಾಗಿದೆ ಏನಾಗಬೇಕಿದೆ ಎಂಬುದನ್ನು ಸರಿಯಾಗಿ ಗ್ರಹಿಸಿದ ಕಲಾವಿದರೆಂದರೆ ಕೆರೆಮನೆ ಶಿವಾನಂದ ಹೆಗಡೆ. ಅವರು ತಣ್ಣಗೆ ತಮ್ಮ ಮೇಳದಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿ ಯಶಸ್ವಿಯೂ ಆಗಿದ್ದಾರೆ. ಅವರ ಮೇಳದ ‘ ವಾಲಿ ವಧೆ ‘ ‘ ‘ಸೀತಾಪಹಾರ ‘ ಪ್ರಸಂಗಗಳು ಇಡಿ ಇಡಿಯಾಗಿ ಜನರನ್ನು ತಲುಪಿವೆ.ಅಲ್ಲಿ ಯಾವುದೇಒಂದು ಪಾತ್ರದ ವಿಜೃಂಭಣೆ ಇಲ್ಲ. ಅಥವಾ ಯಕ್ಷಗಾನದ ಯಾವುದೇ ಒಂದು ಅಂಗ ವಿಜೃಂಭಿಸುವುದಿಲ್ಲ. ಇಲ್ಲೆಲ್ಲ ವ್ಯಷ್ಠಿಗಿಂತ ಸಮಷ್ಠಿ ಪ್ರಜ್ಞೆ ಕೆಲಸಮಾಡಿರುವುದು ಎದ್ದು ಕಾಣಿಸುತ್ತದೆ. ಯಕ್ಷಗಾನಕ್ಕೆ ನಿರ್ದೇಶನದ ಅವಶ್ಯಕತೆಯನ್ನು ಮನಗಂಡಿರುವ ಅವರು ತಮ್ಮ
ಮೇಳದ ಪ್ರದರ್ಶನ ಎಲ್ಲಿಯೇ ಇರಲಿ ನಿರ್ದೇಶನಕ್ಕೊಳಪಟ್ಟು ತಾಲೀಮು ನಡೆಸಿಯೇ ರಂಗ ಪ್ರದರ್ಶನಕ್ಕೆ ಅಣಿಯಾಗುತ್ತಾರೆ. ತಮ್ಮ ಪ್ರದರ್ಶನಗಳಲ್ಲಿ ಅವರು ತೆರೆಯನ್ನು ಬಳಸಿಕೊಳ್ಳವ ರೀತಿ ಅನನ್ಯವಾದದ್ದು.’ ವಾಲಿ ವಧೆ ‘ ಪ್ರಸಂಗದಲ್ಲಿ ರಾಮ ಲಕ್ಷ್ಮಣರ ಪ್ರವೇಶಕ್ಕೆ ತೆರೆಯನ್ನು ಬಳಸಿಕೊಳ್ಳು ರೀತಿ ಅಲ್ಲಿಯ ವರೆಗೆ ನಡೆದ ಕಥಾ ವಿವರಗನ್ನು ತೆರೆಯಲ್ಲಿಯೇ ಅಭಿನಯಿಸಿ ತೋರಿಸುವ ರೀತಿ ಅನ್ಯಾದೃಶ. ಅವರು ಯಕ್ಷಗಾನದ ಸಾಂಪ್ರದಾಯಿಕತೆಗೆ ಕುಂದುಂಟಾಗದ ಹಾಗೆ ಆರೋಗ್ಯಕರವಾದ ಪ್ರಯೋಗಗಳನ್ನು ನಡೆಸಿ ಯಕ್ಷಗಾನದ ಭವಿಷ್ಯದ ಬಗ್ಗೆ ಆತಂಕಿತರಾದ ಯಕ್ಷಗಾನದ ಹಿತೈಸಿಗಳಿಗೆ ಭರವಸೆಯ ಬೆಳಕಾಗಿದ್ದಾರೆ. ಈ ಹಿಂದೆಯೂ ಶಂಭು ಹೆಗಡೆಯವರ ನೇತ್ರತ್ವದ ಕೆರೆಮನೆ ಮೇಳ ಯಕ್ಷಗಾನದ ನಾಲ್ಕೂ ಅಂಗಗಳಲ್ಲಿ ಸಮನ್ವಯ ಸಾಧಿಸಿ ಮಾದರಿ ಮೇಳವಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳುತ್ತೇನೆ. ತದನಂತರದ ದಿನಗಳಲ್ಲಿ ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡಯವರ ನೇತ್ರತ್ವದಲ್ಲಿ ” ಪೂರ್ಣಚಂದ್ರ ಯಕ್ಷಕಲಾ ಪತಿಷ್ಠಾನ ” ಗುಣಮಟ್ಟದ ಯಕ್ಷಗಾನವನ್ನು ಪ್ರದರ್ಶಿಸುತ್ತ ಮುನ್ನಡೆಯುತ್ತಿರುವುದು
ಆಶಾದಾಯಕ ಬೆಳವಣಿಗೆಯಾಗಿದೆ.

8 ) ಇತ್ತೀಚೆಗೆ ಯಕ್ಷಗಾನದ ಕರಪತ್ರಗಳಲ್ಲಿ,ಯಕ್ಷಗಾನ ಪ್ರಯೋಗಕ್ಕೆ ಮೊದಲು ಪ್ರಸಂಗ ಕರ್ತರ ಹೆಸರನ್ನು ಉಲ್ಲೇಖಿಸುತ್ತಿರುವುದು ಧನಾತ್ಮಕ ಬೆಳವಣಿಗೆ. ಲಾಗಾಯ್ತಿನಿಂದ ಯಕ್ಷಗಾನ ಕವಿಗಳು ಅಜ್ಞಾತರಾಗಿಯೇ ಉಳಿದಿದ್ದರು.
(ಮುಂದಿನ ಸಂಚಿಕೆಗೆ ಮುಂದುವರೆಯುವುದು…)
ಯಕ್ಷಗಾನ ನಡೆದು ಬೀಗಿದ ರೀತಿಯನ್ನು ನಯನ ಮನೋಹರವಾಗಿ ಬಿಚ್ಚಿಟ್ಟ ಪರಿ ಸೊಗಸಾಗಿದೆ. ಅಧ್ಯಯನ ಮಾಡಿ ಲೇಖನ ಬರೆದ ತಮಗೆ ಅನಂತ ಧನ್ಯವಾದಗಳು. ಪದಗಳ ಪ್ರಯೋಗಗಳು ಲೇಖನಿಗೆ ಗಟ್ಟಿತನ ನೀಡಿದೆ.
ಯಕ್ಷಗಾನದಲ್ಲೂ ಟ್ರೈಲ್ ಇರಬೇಕು. ಆಡುವ ಮಾತುಗಳು ಕಥೆಯ ಚೌಕಟ್ಟನ್ನು ಅಂದಗೊಳಿಸಬೇಕು. ನೋಡುಗರಿಗೆ ಖುಷಿ ಕೊಟ್ಟರೆ ಯಕ್ಷಗಾನ ಗೆದ್ದಂತೆ. ಚೌಕಿ ಮನೆಯಲ್ಲಿ ಈ ಬಗ್ಗೆ ಮಾತುಕತೆ ಆಗಬೇಕು.