ಜಾಗತಿಕ ಬ್ಯಾಂಕಿಂಗ್ ವ್ಯವಸ್ಥೆ ದಿನದಿಂದ ದಿನಕ್ಕೆ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಜನತೆಯ ಆರ್ಥಿಕ ನಿರ್ವಹಣೆ ಸಾಧ್ಯವಾದಷ್ಟು ಕ್ಷಿಪ್ರವಾಗಿ ನಡೆಯುವಂತೆ ಹೊಂದಿಕೊಂಡಿದೆ.
ಎಲ್ಲ ಬ್ಯಾಂಕ್ ಗಳೂ ತನ್ನ ಕಾರ್ಯಬಾಹುಳ್ಯ ಸಲೀಸಾಗಿಸಲು ಮತ್ತು ಪಾರದರ್ಶಕವಾಗಿಸಲು ಮೊಟ್ಟ ಮೊದಲ ಕ್ರಾಂತಿಯಾಗಿ ಕಡತಗಳನ್ನೆಲ್ಲ ಅಟ್ಟಕ್ಕೆ ಸೇರಿಸಿ ಕಂಪ್ಯೂಟರೀಕೃತ ವ್ಯವಸ್ಥೆಗೆ ಸಜ್ಜಾಯಿತು. ಭಾರತದಲ್ಲಿಯೂ ಬೀಸಿದ ಹೊಸ ಗಾಳಿಗೆ ಪೂರಕವಾಗಿ ಕಂಪ್ಯೂಟರ್ ಕ್ರಾಂತಿಗೆ ಇಲ್ಲಿನ ಬ್ಯಾಂಕಿಂಗ್ ವ್ಯವಸ್ಥೆ ಕೂಡ ತನ್ನನ್ನು ತಾನು

ಪರಿಣಾಮಕಾರಿಯಾಗಿ ಒಗ್ಗಿಸಿಕೊಂಡಿತು. ಅನಂತರ ಅಂದರೆ ಇತ್ತೀಚಿನ ವರ್ಷಗಳಲ್ಲಿ ಎಟಿಎಂ ವ್ಯವಸ್ಥೆಗೆ ಬ್ಯಾಂಕುಗಳೂ, ಗ್ರಾಹಕರೂ ಒಗ್ಗಿಕೊಂಡರು. ಎಷ್ಟರ ಮಟ್ಟಿಗೆ ಅಂದರೆ ಬ್ಯಾಂಕುಗಳು ತನ್ನ ಅಗತ್ಯದ ಉದ್ಯೋಗ ನೇಮಕಾತಿಯನ್ನು ಬಹು ಶೇಕಡಾವಾರಿಗೆ ಕಡಿತಗೊಳಿಸಿತು. ಬ್ಯಾಂಕ್ ಸಿಬ್ಬಂದಿಗಳೂ ಗ್ರಾಹಕರ ನಿತ್ಯ ವಹಿವಾಟಿಗೆ ಎಟಿಎಂ ಕಾರ್ಡ್ ನ್ನೇ ಬಳಸಿ ಎಂದು ಒತ್ತಾಯ ಪೂರ್ವಕವಾಗಿ ಆಂದೋಲವನ್ನೇ ಮಾಡಿತು. ಅದರಂತೆ ಗ್ರಾಮ, ಪಟ್ಟಣ ಅಂತ ಗೆರೆ ಇಲ್ಲದೇ ಎಲ್ಲಡೆಯೂ ಎಟಿಎಂ ಶೆಡ್ ಗಳು ತಲೆ ಎತ್ತಿದವು.

ಮೊದಮೊದಲು ಅದಕ್ಕೆ ಹೊಂದಿಕೊಳ್ಳಲು ಹಳ್ಳಿಗಾಡಿನ ಅನಕ್ಷರಸ್ಥರಿಗೆ ಸ್ವಲ್ಪ ಕಷ್ಟವಾಯಿತು. ಆದರೆ ಈಗ ಬದುಕಿನ ಅನಿವಾರ್ಯ ಎಂಬಂತೆ ಎಟಿಎಂ ಮಶೀನುಗಳು ತನ್ನತ್ತ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.. ಅದರ ಬೆನ್ನಿಗೇ ಈಗ ಪೇ ಟಿಎಂ, ಗೂಗಲ್ಪೇ , ಯುಪಿಐ ಪೇಮೆಂಟ್ಸ್, ಬೊಬೈಲ್ ಬ್ಯಾಂಕಿಂಗ್ ನಂತಹ ಸರಾಗ ಹಣಕಾಸಿನ
ನಿರ್ವಹಣೆಯತ್ತ ಗ್ರಾಹಕರು ವಾಲಿದರೂ ಎಟಿಎಂ ಬೂತ್ ಎದುರು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಇದ್ದೇ ಇದೆ. ಈಗ ಒಂದು ಸಾಮಾನ್ಯ ಪಟ್ಟಣಗಳಲ್ಲಿ ರಾಷ್ಟ್ರೀಕೃತ, ಖಾಸಗಿ, ಸಹಕಾರಿ ಬ್ಯಾಂಕ್ ಗಳೆಲ್ಲ ಸೇರಿದಂತೆ ಕನಿಷ್ಠ ಹತ್ತರಿಂದ ಹದಿನೈದು ಎಟಿಎಂ ಬೂತ್ ಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಮಟ್ಟದಲ್ಲೂ ಎಟಿಎಂಗಳು ಹಣ
ಹಂಚಲು ಹಿಂದೆ ಬಿದ್ದಿಲ್ಲ. ಮೊದ ಮೊದಲು ಪ್ರತಿ ಎಟಿಎಂ ಬೂತ್ ಗೆ ಸಿಬ್ಬಂದಿ ಗುತ್ತಿಗೆ ಕಂಪನಿಯಿಂದ ಒಬ್ಬ ಸೆಕ್ಯೂರಿಟಿ ಮನ್ ನೇಮಕ ಮಾಡಲಾಯಿತು. ಈಗ ಕೆಲ ಬ್ಯಾಂಕುಗಳು ಅದರ ವೆಚ್ಚ ನಿಭಾಯಿಸುವುದು ಕಷ್ಟ ಅಂತ ಸೆಕ್ಯುರಿಟಿ ಮನ್ ಸೇವೆ ಹಿಂದಕ್ಕೆ ಪಡೆಯಿತು. ಈಗ ಕ್ರಮೇಣ ಕೆಲವು ಕಡೆಯ ಎಟಿಎಂ ಬೂತ್ ಮುಚ್ಚಲಾಗುತ್ತಿದೆ. ಇದು ಅನಗತ್ಯ ಆರ್ಥಿಕ ಹೊರೆ ಅನ್ನುವುದು ಬ್ಯಾಂಕುಗಳ ಅಭಿಪ್ರಾಯ.

ದೇಶದಲ್ಲಿ 2018ರ ಸುಮಾರಿಗೆ 2.50 ಲಕ್ಷ ಎಟಿಎಂ ಬೂತ್ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಅರ್ಧಕ್ಕೆ ಅರ್ಧದಷ್ಟು ಎಟಿಎಂ ಬೂತ್ ಕಣ್ಮುಚ್ಚಿದೆ. ನಿರ್ವಹಣಾ ವೆಚ್ಚ ನಿಭಾಯಿಸಲಿಕ್ಕಾಗದ ಕಾರಣಕ್ಕೆ ಗಮನಾರ್ಹ ಸಂಖ್ಯೆಯ ಎಟಿಎಂ ಗಳಿಗೆ ಬಾಗಿಲು ಹಾಕುವ ನಿರ್ಧಾರಕ್ಕೆ ಬರಬೇಕಾಯಿತು ಎಂದು ಎಟಿಎಂ ಉದ್ಯಮ ಒಕ್ಕೂಟವು (ಸಿಎಟಿಎಂಐ) ಬೆದರಿಕೆ ರೂಪದ ಎಚ್ಚರಿಗೆ ನೀಡಿದೆ. ಇದು ಒತ್ತಡ ಹೇರುವಂಥ ತಂತ್ರದ ಭಾಗವೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸುವುದು ಅಗತ್ಯ. ಬ್ಯಾಂಕ್ ಗ್ರಾಹಕರ ಹಿತಾಸಕ್ತಿಗೆ ಮಾರಕವಾಗಿ ಪರಿಣಮಿಸಲಿರುವ ಈ ಚಿಂತನೆ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಎಟಿಎಂಗಳ ನಿಯಂತ್ರಣ ಮತ್ತು ಸುರಕ್ಷತೆ ವ್ಯವಸ್ಥೆಯಲ್ಲಿ ಅಳವಡಿಸಲಾಗುತ್ತಿರುವ ಬದಲಾವಣೆಗಳ ವೆಚ್ಚ ಹೆಚ್ಚಳದ ಕಾರಣಕ್ಕೆ ಅವುಗಳನ್ನು
ನಿರ್ವಹಿಸುವುದು ಆರ್ಥಿಕವಾಗಿ ಲಾಭದಾಯಕವಾಗಿಲ್ಲ ಎನ್ನುವ ಏಕೈಕ ಕಾರಣಕ್ಕೆ ಅವಸರದ ನಿರ್ಧಾರಕ್ಕೆ ಬರುವುದು ನ್ಯಾಯೋಚಿತವಲ್ಲ. ಎಟಿಎಂ ನಿರ್ವಹಣೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ನಿಗದಿಪಡಿಸಿರುವ ಮಾರ್ಗದರ್ಶಿ ಸೂತ್ರಗಳ ಪಾಲನೆಗೆ ಹೆಚ್ಚುವರಿ ವೆಚ್ಚ ತಗಲುತ್ತಿದೆ. ನೋಟು ರದ್ಧತಿಯ ಸಂದರ್ಭದಲ್ಲಿ ಎಟಿಎಂ ಗಳ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಮೇಲ್ದರ್ಜೆಗೆ ಏರಿಸಲಾಗಿದೆ. ಅಷ್ಟೇ ಅಲ್ಲ, ಎಟಿಎಂ ಯಂತ್ರದಲ್ಲಿ ಕನಿಷ್ಟ
ಪ್ರಮಾಣದ ನಗದು ಹೊಂದಿರುವುದು, ನಗದು ವಿತರಣೆಗೆ ಅಗತ್ಯ ಮೂಲ ಸೌಕರ್ಯ, ಎಟಿಎಂ
ಕೇಂದ್ರಗಳಲ್ಲಿ ಭದ್ರತಾ ವ್ಯವಸ್ಥೆ ಇವೆಲ್ಲವೂ ಅದರ ನಿರ್ವಹಣಾ ವೆಚ್ಚ ಹೆಚ್ಚಿಸಿದೆ. ಗೃಹ ಸಚಿವಾಲಯವೂ ಭದ್ರತೆಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ನೀಡಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿರುವ ಎಟಿಎಂ ಗಳ ಅಸ್ತತ್ವಕ್ಕೆ ಈ ನಿರ್ಧಾರದಿಂದ ಧಕ್ಕೆ ಒದಗಲಿದೆ ಎಂಬುದು ಇನ್ನೊಂದು ಆತಂಕಕಾರಿ ಸಂಗತಿ. ಬ್ಯಾಂಕಿಂಗ್ ಸೇವೆ ವಿಸ್ತರಣೆಯೂ ಸೇರಿದಂತೆ ಆರ್ಥಿಕ ಸೇರ್ಪಡೆ ಕಾರ್ಯಕ್ರಮದಲ್ಲಿ ಎಟಿಎಂಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ. ಬ್ಯಾಂಕ್
ಶಾಖೆಗಳಿಲ್ಲದ ದೂರದ ಗ್ರಾಮೀಣ ಪ್ರದೇಶಗಳಲ್ಲಿ ನಗದು ವಿತರಣೆಗಳನ್ನು ಎಟಿಎಂ ಕೇಂದ್ರ ಸಮರ್ಥವಾಗಿ ನಿರ್ವಹಿಸುತ್ತಿವೆ. ಅವುಗಳನ್ನು ಒಂದೊಮ್ಮೆ ಏಕಾಏಕಿ ಮುಚ್ಚಿದರೆ ನೋಟು ರದ್ಧತಿ ಸಂದರ್ಭದಲ್ಲಿ ಎದುರಾಗಿದ್ದ ನಗದು ಕೊರತೆ ಸಮಸ್ಯೆ ಮತ್ತೆ ಉಲ್ಬಣಗೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಅಭಿವೃದ್ಧಿಯ ಲಾಭವು ಎಲ್ಲರಿಗೂ ದೊರೆಯಬೇಕು (ಆರ್ಥಿಕ ಸೇರ್ಪಡೆ) ಎನ್ನುವ ಸರ್ಕಾರದ ಆಶಯಕ್ಕೆ ಇದು ಅಡ್ಡಿಯಾಗಲಿದೆ. ಸರ್ಕಾರದ ವಿವಿಧ
ಯೋಜನೆಗಳ ಫಲಾನುಭವಿಗಳು ಸಬ್ಸಿಡಿ ಹಣ ಪಡೆಯುವುದೂ ದುರಸ್ತರವಾಗಲಿದೆ. ಎಟಿಎಂಗಳ ಬಾಗಿಲು ಹಾಕಿದರೆ ಜನರು ನಗದು ಪಡೆಯಲು ಬ್ಯಾಂಕ್ ಗಳನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ. ಇದರಿಂದ ಸಿಬ್ಬಂದಿ ಹೆಚ್ಚಳ, ಕಟ್ಟಡ ವಿಸ್ತರಣೆಯಂತಹ ಹೆಚ್ಚುವರಿ ಹೊರೆಯನ್ನು ಬ್ಯಾಂಕ್ ಗಳು ನಿಭಾಯಿಸಬೇಕಾಗುತ್ತದೆ. ಹೀಗಾಗಿ, ಎಟಿಎಂಗಳ ಸಂಖ್ಯೆ ಕಡಿತಗೊಳಿಸುವುದು ಹೆಚ್ಚುವರಿ ವೆಚ್ಚದ ಹೊರಗೆ ಪರಿಹಾರ ಒದಗಿಸದು. ಸುರಕ್ಷತೆಗೆ
ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದೂ ಸರಿಯಲ್ಲ. ಎಟಿಎಂಗಳ ವಹಿವಾಟನ್ನು ಸುಲಲಿತ ಮತ್ತು ಸುರಕ್ಷಿತವಾಗಿ ನಿರ್ವಹಿಸುವುದಕ್ಕೆ ಗರಿಷ್ಠ ಆಧ್ಯತೆ ನೀಡಬೇಕಾಗಿದೆ.
ಬ್ಯಾಂಕ್ ಗಳು ಎಟಿಎಂಗಳ ನಿರ್ವಹಣೆಯನ್ನು ಬೇರೆ ಸಂಸ್ಥೆಗಳಿಗೆ ಒಪ್ಪಿಸಿರುವುದರಿಂದ ಅವುಗಳ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸಬೇಕು. ಯಾವುದೇ ಕಾರಣಕ್ಕೂ ಎಟಿಎಂಗಳ ಸಂಖ್ಯೆನ್ನು ಕಡಿತ ಮಾಡಬಾರದು. ಎಟಿಎಂ ನಿರ್ವಾಹಕರು ಬ್ಯಾಂಕ್ ಗಳ ಜೊತೆ ಚರ್ಚಿಸಿ ಹೊಸ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕು. ಎಟಿಎಂಗಳಲ್ಲಿ ವಂಚನೆ ಎಸಗುವ ಕೃತ್ಯಗಳು ದಿನೇ ದಿನೇ ಹೆಚ್ಚೆಚ್ಚು ನಾಜೂಕಾಗುತ್ತಿವೆ.
ಇವುಗಳನ್ನು ಮಟ್ಟ ಹಾಕಲು ಸುರಕ್ಷತಾ ಮಾನದಂಡಗಳ ಅಳವಡಿಕೆಗೆ ಹೆಚ್ಚುವರಿ ವೆಚ್ಚ ಭರಿಸುವುದು ಅನಿವಾರ್ಯವಾಗುತ್ತಿದೆ. ಬ್ಯಾಂಕ್ ಗಳೂ ಈ ವಿಷಯದಲ್ಲಿ ಹೆಚ್ಚು ಹೊಣೆಗಾರಿಕೆಯಿಂದ ವರ್ತಿಸಬೇಕಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಸರ್ಕಾರ ಮತ್ತು ಬ್ಯಾಂಕ್ ಗಳು ಈ ವಿದ್ಯಮಾನವನ್ನು ಗಂಬೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ.

ಲೇಖಕರು
ಅರವಿಂದ ಕರ್ಕಿಕೋಡಿ
ಪ್ರಧಾನ ಸಂಪಾದಕರು
ಹಣತೆವಾಹಿನಿ