ಜನ ವಿದ್ಯಾರ್ಥಿಗಳ ಶ್ರಮ ನೆನೆಸಿಕೊಂಡರೆ ಎನ್.ಎಸ್.ಎಸ್. ಶಿಬಿರ ಸಾರ್ಥಕ !
ಕುಮಟಾ : ಗದ್ದೆ, ತೋಟಗಳ ಕುಟುಂಬ ಹಿನ್ನೆಲೆಯ ಎಷ್ಟೋ ವಿದ್ಯಾರ್ಥಿಗಳು ಕೈಕಾಲಿಗೆ ಮಣ್ಣು ಮಾಡಿಕೊಳ್ಳದೆ
ಕಾಲೇಜಿಗೆ ಬಂದು ಹೋಗುತ್ತಾರೆ. ಆದರೆ ಅವರು ಮನೆಯಲ್ಲಿ ತಮ್ಮ ಅಗತ್ಯಗಳಿಗೆ ಕೃಷಿಯಿಂದ ಬಂದ
ಆದಾಯವನ್ನು ಮಾತ್ರ ನಿರೀಕ್ಷಿಸುವುದು ಸಾಮಾನ್ಯ. ಪ್ರತೀ ತಿಂಗಳು ಉತ್ತಮ ಸಂಬಳ ಬರುವ ಉದ್ಯೋಗ ಸಿಗುತ್ತದೆ
ಎಂದಾದರೆ ನಮ್ಮ ಮಕ್ಕಳು ಆಕಾಡೆಮಿಕ್ ಆಗಿ ಕೃಷಿ, ತೋಟಗಾರಿಕೆಯನ್ನು ಪ್ರೀತಿಯಿಂದ ಕಲಿಯಬಲ್ಲರು. ಆದರೆ
ಮನೆಯ ತೋಟ, ಗದ್ದೆಗಳ ನಿರ್ವಹಣೆಯಲ್ಲಿ ತಂದೆ- ತಾಯಿ, ಸಹೋದರರಿಗೆ ನೆರವಾಗುವಂಥ ಸಂಸ್ಕೃತಿ ಹೆಚ್ಚಿನ

ವಿದ್ಯಾರ್ಥಿಗಳಲ್ಲಿ ಬೆಳೆಯದಿರುವುದು ಬೇಸರದ ಸಂಗತಿ. ಆದರೆ ಗಾಂಧಿ ತತ್ವಗಳಲ್ಲಿ ಇಂಥ ಸಂಸ್ಕೃತಿ ಬೆಳೆಸುವ
ಅನೇಕ ಉತ್ತಮ ಮಾರ್ಗಗಳಿವೆ. ಕಾಲೇಜುಗಳಲ್ಲಿ ಈಚಿನ ದಿನಗಳಲ್ಲಿ ಪ್ರಸಿದ್ಧಿ ಹೊಂದುತ್ತಿರುವ ಎನ್.ಎಸ್.ಎಸ್ (ರಾಷ್ಟ್ರೀಯ ಸೇವಾ ಯೋಜನೆ) ಶಿಬಿರ ಕೂಡ ಒಂದು. ಈಚೆಗೆ ಕುಮಟಾದ ಸರ್ಕಾರಿ ಪದವಿ ಕಾಲೇಜಿನ ಎನ್.ಎಸ್.ಎಸ್. ಘಟಕತಾಲೂಕಿನ ಹೊಲನಗದ್ದೆಯಲ್ಲಿ ನಡೆದ ಕಾಲೇಜಿನ ಎನ್.ಎಸ್.ಎಸ್ ಸೇವಾ ವಿಶೇಷ ಶಿಬಿರವನ್ನು ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಮಾಡುವಲ್ಲಿ ಯಶಸ್ಸು ಕಂಡಿದೆ. ವಿದ್ಯಾರ್ಥಿಗಳು ತಮಾಷೆಯ ಗುಂಗಿನಲ್ಲಿ ತಮ್ಮ ಗೆಳೆಯರೊಟ್ಟಿಗೆ ಅಡ್ಡಾಡಲು ಸಮುದ್ರ ತೀರಕ್ಕೆ ಹೋದರೆ ಆಗ ಅವರೂ ಸಾಮಾಜಿಕ ಪ್ರಜ್ಞೆ ಮೆರತು ಎಲ್ಲರಂತೆ ತಿಂಡಿ ಪೊಟ್ಟಣದ ಪ್ಲಾಸ್ಟಿಕ್ ಕವರ್, ನೀರಿನ ಖಾಲಿಬಾಟಲುಗಳಂತಹ ತ್ಯಾಜ್ಯಗಳನ್ನು ಸಮುದ್ರ ತೀರದಲ್ಲಿಎಸೆದು ಖುಷಿ ಪಡುತ್ತಾರೆ. ಆದರೆ ಮೊನ್ನೆ ಹೊಲನಗದ್ದೆಯಲ್ಲಿ ನಡೆದ ಸರ್ಕಾರಿ ಕಾಲೇಜಿನ ಎನ್.ಎಸ್.ಎಸ್. ವಿಶೇಷ ಸೇವಾ ಶಿಬಿರ ವಿದ್ಯಾರ್ಥಿಗಳು ಸಮುದ್ರ ತೀರದಲ್ಲಿ ಯಾರೋ ಎಸೆದು ಹೋದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಸ್ಥಳೀಯ ಗ್ರಾಮ ಪಂಚಾಯ್ತಿಗೆ ನೀಡಿ ಗಮನಸೆಳೆದಿದ್ದಾರೆ.

ಮಾಹಿತಿ ನೀಡಿದ ಕಾಲೇಜಿನ ಇಂಗ್ಲೀಷ್ ವಿಭಾಗ ಮುಖ್ಯಸ್ಥೆ ಹಾಗೂ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ.
ನಮೃತಾ ಹೆಗ್ಡೆ, ಎನ್.ಎಸ್.ಎಸ್ ಶಿಬಿರದಲ್ಲಿ ನಮ್ಮ ವಿದ್ಯಾರ್ಥಿಗಳು ಊರಿನ ರಸ್ತೆ ಗುಡಿಸಿ ಶುಚಿಗೊಳಿಸುವಾಗ ಗ್ರಾಮಸ್ಥರು ಅವರನ್ನು ಗಮನಿಸಿದರು. ವಿದ್ಯಾರ್ಥಿಗಳು ಊರಿನ ಬಸ್ ನಿಲ್ದಾಣ, ಶಾಲೆ ವೆರಾಂಡದ ರಕ್ಷಣಾ ಗ್ರಿಲ್ಸ್, ಕಾಂಪೌoಡ್ ಗೋಡೆ ಮುಂತಾದವುಗಳನ್ನು ಶುಚಿಗೊಳಿಸಿ ಪೇಂಟಿಂಗ್ ಮಾಡುವಾಗ ಶಿಕ್ಷಕರಾದ ನಾವು ಅವರಲ್ಲಿ ಕುಶಲ ಪೈಂಟರ್ ಅನ್ನು ಕಂಡೆವು. ನಮ್ಮ ವಿದ್ಯಾರ್ಥಿಗಳು

ಮಾಡಿದ ಕೆಲಸದ ಬಗ್ಗೆ ನಿಧಾನವಾಗಿ ಗ್ರಾಮಸ್ಥರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದವು. ಇನ್ನೊಮ್ಮೆ ರಸ್ತೆ ಬದಿ ಕಸ ಹಾಕುವಾಗ, ಬಸ್ ನಿಲ್ದಾಣದ ಗೋಡೆಯ ಮೇಲೆ ಏನಾದರೂ ಗೀಚಿ ಗಲೀಜು ಮಾಡುವಾಗ ಗ್ರಾಮಸ್ಥರಿಗೆ ನಮ್ಮ ವಿದ್ಯಾರ್ಥಿಗಳ ಶ್ರಮ ಖಂಡಿತಾ ನೆನಪಿಗೆ ಬಂದು ಕಣ್ಣಿಗೆ ಕಟ್ಟುತ್ತದೆ. ಆ ಮಟ್ಟಿಗೆ ಅವರು ಊರಿನವರ, ಶಾಲೆಯವರ ಮನ ಗೆದ್ದು ಎನ್.ಎಸ್.ಎಸ್ ಶಿಬಿರದ ಸಾರ್ಥಕತೆ ಪಡೆದುಕೊಂಡಿದ್ದಾರೆ. ಇಷ್ಟು ಸಾಕಲ್ಲವೇ? ಗಾಂಧಿ ನಿರೀಕ್ಷಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಅಂದರೆ ಇದೇ ಎನ್ನವುದನ್ನು ನಮ್ಮ ವಿದ್ಯಾರ್ಥಿಗಳಿಗೆ ಮನದಟ್ಟ ಮಾಡುವಲ್ಲಿ ತಕ್ಕ ಮಟ್ಟಿಗೆ ಯಶಸ್ಸು ಕಂಡಿದ್ದೇವೆ ಎನಿಸಿತು; ಎಂದರು. ಇನ್ನೋರ್ವ ಕಾರ್ಯಕ್ರಮಾಧಿಕಾರಿ ಪ್ರೊ.ನಾಗರಾಜ್ ಬಿ ,
ಮನೆಯ ಕೆಲಸ ಅಥವಾ ಕಾಲೇಜಿನ ಎನ್.ಎಸ್.ಎಸ್ ಶಿಬಿರಗಳಲ್ಲಿ ಯಾವುದೇ ಕೆಲಸ ಮಾಡಲು ವಿದ್ಯಾರ್ಥಿಗಳ ಮನಸ್ಥಿತಿಯನ್ನು ಅಣಿಗೊಳಿಸುವುದು ಮುಖ್ಯ.
ನಾವು ನಮ್ಮ ಮನೆಯ ಕೆಲಸಗಳಲ್ಲಿ ಹಿರಿಯರಿಗೆ ನೆರವಾಗುವುದು ಎಷ್ಟು ಮುಖ್ಯ, ಸಾರ್ವಜನಿಕ ಕೆಲಸಗಳು
ಯಾವ ಕಾರಣಕ್ಕಾಗಿ ಸಮಾಜಕ್ಕೆ ಅಗತ್ಯ, ಇಂಥ ಸೇವೆಗಳಿಗಾಗಿಸಮಾಜ ವಿದ್ಯಾರ್ಥಿಗಳ ನೆರವು ನಿರೀಕ್ಷಿಸುತ್ತದೆ

ಎನ್ನುವುದನ್ನು ಅವರಿಗೆ ಮನದಟ್ಟ ಮಾಡಬೇಕು. ಎಲ್ಲರೂಕೈ ಜೋಡಿಸಿದರೆ ಎಂಥ ದೊಡ್ಡ ಕೆಲಸವಾದರೂ ಚಿಟಿಕೆ
ಹೊಡೆಯುವುದರಲ್ಲಿ ಮುಗಿಸಬಹುದು. ಮುಂದೆ ಜೀವನವೂ ಇದೇ ಮಾದರಿಯಲ್ಲಿರುತ್ತದೆ ಎನ್ನುವುದನ್ನು
ಅವರಿಗೆ ತಿಳಿಯಪಡಿಸಿದರೆ ಆಗ ವಿದ್ಯಾರ್ಥಿಗಳು ಅರ್ಪಣಾಮನೋಭಾವದಿಂದ ಯಾವುದೇ ಕೆಲಸಗಳಲ್ಲಿ ತಮ್ಮನ್ನು
ತೊಡಗಿಸಿಕೊಳ್ಳಲು ಸಾಧ್ಯ ಎಂದರು.