‘ರಾಮ ಭರಾಟೆ’ಯ ವರ್ತಮಾನದಲ್ಲಿ ಈ ಅಧ್ಯಯನ ಹೊರಡಿಸುವ ಧ್ವನಿಗಳು ಹಲವು.
ಗಾಂಧಿಯ ಹೇ ರಾಮ ಮತ್ತು ಗುಂಪಿನ ಶ್ರೀರಾಮ ಪರಿಕಲ್ಪನೆಗಳ ತಾಕಲಾಟದ ತೀವ್ರತೆ ಹೆಚ್ಚಿರುವ ‘ಹೈವೋಲ್ಟೇಜ್’ ನ ಸಂದರ್ಭದಲ್ಲಿ ಈ ಬರಹ ಹಲವು ರಾಮಾಯಣಗಳ ಹತ್ತಾರು ರಾಜರುಗಳನ್ನು ನೋಡುವ ಪ್ರಯತ್ನ ನಡೆಸಿದೆ.
ಏಷ್ಯಾದ ಅದರಲ್ಲೂ ಭಾರತದಲ್ಲಿ ರಾಮಾಯಣ ಸಾರ್ವಕಾಲಿಕ ದಂತಕಥೆಯಾಗಿ, ಉತ್ಕೃಷ್ಟ ಸಾಹಿತ್ಯ ಕೃತಿಯಾಗಿ ಓದುಗರಿಗೆ ಸದಾಕಾಲಕ್ಕೂ ಹೊಸ ಹೊಳಹುಗಳನ್ನು ನೀಡುವ ರಚನೆಯಾಗಿದೆ. ಇಂತಹ ರಾಮಾಯಣ ಮತ್ತದರ ಮುಖ್ಯ ಪಾತ್ರಧಾರಿ ರಾಮ ಕಾಲದಿಂದ ಕಾಲಕ್ಕೆ – ಸಂಸ್ಕೃತಿಯಿಂದ ಸಂಸ್ಕೃತಿಗೆ ವಿಭಿನ್ನ ಕಥಾರೂಪಗಳನ್ನು ಪಡೆದು ವಿಶಿಷ್ಟವಾಗಿ ಮೈದಾಳಿದೆ. ರಾಮನ ಪಾತ್ರವಂತೂ ಸಹಜ ಮನುಷ್ಯನೊಬ್ಬ ತನ್ನೆಲ್ಲಾ ಮಿತಿಗಳನ್ನು

ಮೀರಲು ಯತ್ನಿಸಿದಾಗ ದಕ್ಕಬಹುದಾದ ಉನ್ನತ ಸ್ಥಾನವೇನೋ ಎಂಬಂತೆ ಚಿತ್ರಿಸಲು ಕಥನಕಾರರು ಪ್ರಯತ್ನಿಸಿದಂತೆ ತೋರುತ್ತದೆ. ಇರಲಿ, ಬೌದ್ಧ ಮತ್ತು ಜೈನ ಪರಂಪರೆಗಳು ಸೇರಿದಂತೆ ಭಾರತದ ನೆರೆಹೊರೆಯ ಎಲ್ಲಾ ಸಂಸ್ಕೃತಿಗಳು ತಮ್ಮ ಮೂಲದ ರಾಮಾಯಣಗಳನ್ನು ಹೊಂದುವ ಮೂಲಕ ‘ರಾಮನೊಬ್ಬ ಮೂಲ ಹಲವು ಎಂಬಂತೆ ರಾಮನ ಬದುಕಿನ ಭಿನ್ನ ಕಥೆಗಳನ್ನು ನಿರೂಪಿಸುತ್ತವೆ. ಥಾಯ್ಲೆಂಡಿನ ಅರಸೊತ್ತಿಗೆಯ ಬಹುಪಾಲು ರಾಜರು ‘ರಾಮ’ ಎಂದೇ ನಾಮಂಕಿತರಾಗಿದ್ದು, ವಿಭಿನ್ನ ಸಾರಗಳ ರಾಮಾಯಣಗಳನ್ನು ಕಥಿಸಿದ್ದಾರೆ

ಬನ್ನಿ, ನಾವೂ ಒಂದಷ್ಟು ಭಿನ್ನ ಕಥೆಗಳನ್ನು ತಿರುವಿ ಹಾಕೋಣ. ತನ್ಮೂಲಕ ‘ಸಂತೆಯೊಳಗಣ ಮನೆಯಲ್ಲಿ ಶಬ್ದಗಳಿಗಂಜದೆ’ ಮೌನ ಮಾತಾಗಿಸೋಣ.
ಆಸ್ಥಾನದ ಸಿಂಹಾಸನದಲ್ಲಿ ರಾಮ ಆಸೀನನಾಗಿದ್ದಾಗ ಆತನ ಕೈ ಬೆರಳಿನಿಂದ ಜಾರಿದ ಮುದ್ರೆ ಯುಂಗುರ ಉರುಳುತ್ತಾ ಹೋಗಿ ನೆಲದಲ್ಲಿದ್ದ ಸಣ್ಣ ರಂಧ್ರದ ಮೂಲಕ ತಲುಪಿದ್ದು ಪಾತಾಳ ಲೋಕವನ್ನು. ಹೀಗೆ

ಮುದ್ರೆಯುಂಗುರ ಕಳೆದುಕೊಂಡ ರಾಮ ಚಿಂತಾಕ್ರಾಂತನಾಗಿ, ತನ್ನ ನಂಬಿಕಸ್ಥ ಬಂಟ ಹನುಮನನ್ನು ಕರೆದು ಉಂಗುರ ಹುಡುಕಲು ಕಳಿಸಿದನು. ಹನುಮ ತನ್ನ ಮಾಂತ್ರಿಕ ಶಕ್ತಿಯ ಬಲದಿಂದ ರಂದ್ರದ ಗಾತ್ರಕ್ಕನುಗುಣವಾಗಿ ತನ್ನ ಆಕಾರವನ್ನು ಕುಗ್ಗಿಸಿ ಕೆಳಗೆ ನುಸುಳುತ್ತಾ ಹೋದಾಗ ಆತ ತಲುಪಿದ್ದು ಪಾತಾಳಲೋಕ. ಅಲ್ಲಿ ಆತ ಸಂಧಿಸಿದ್ದು ಪಾತಾಳ ಮೋಹಿನಿಯರನ್ನು. ಅಚಾನಕ್ಕಾಗಿ ತಮ್ಮ ಲೋಕದಲ್ಲಿ ಕಾಣಿಸಿಕೊಂಡ ಈ ವಿಚಿತ್ರ ಜೀವಿಯನ್ನು ಆ ಮೋಹಿನಿಯರು ತಮ್ಮ ರಾಜನ ಆಹಾರವಾಗಿ ಕಾಯಿಪಲ್ಲೆಗಳೊಂದಿಗೆ ರಾಜನ ಬಳಿಗೆ ಕಳುಹಿಸಿದರು.

ಇತ್ತ ರಾಮನ ಆಸ್ಥಾನಕ್ಕೆ ವಸಿಷ್ಠ ಮಹರ್ಷಿ ಹಾಗೂ ಬ್ರಹ್ಮದೇವ ಇವರುಗಳು ಆಗಮಿಸಿದರು. ರಾಮನೊಡನೆ ರಹಸ್ಯ ಮಾತುಕತೆ ಇರುವುದಾಗಿಯೂ, ತಮ್ಮ ರಹಸ್ಯ
ಮಾತುಕತೆಯ ನಡುವೆ ಯಾರೂ ಮಧ್ಯ ಪ್ರವೇಶಿಸದಂತೆ ನಿರ್ಬಂಧಿಸಬೇಕಾಗಿಯೂ ರಾಮನಿಗೆ ತಿಳಿಸಿದರು. ಅವರ ಬಿನ್ನಹಕ್ಕೆ ರಾಮ ಅಸ್ತು ಎಂದಾಗ, ಈರ್ವರೂ ಮತ್ತೆ
ನಮ್ಮ ಮಾತಿಗೆ ಯಾರಾದರೂ ಮಧ್ಯ ಪ್ರವೇಶಿಸಿ ಅಡಚಣೆ ಉಂಟುಮಾಡಿದರೆ ಅಂತಹವರ ಶಿರಚ್ಛೇದನದ ಆಜ್ಞೆಯಾಗಲಿ ಎಂದಾಗ ರಾಮ ಮರುಮಾತಾಡದೆ ಅಸ್ತು ಎಂದನು. ವಶಿಷ್ಠ ಮಹರ್ಷಿ, ಬ್ರಹ್ಮದೇವ ಮತ್ತು ರಾಮನ ಮಾತಿಗೆ ಕಾವಲುಗಾರರಾಗಿ ಯಾರನ್ನ ನಿಯೋಜಿಸಬೇಕೆಂಬ ಪ್ರಶ್ನೆ ಬಂದಾಗ ರಾಮನ ಮನಸ್ಸಿನಲ್ಲಿ ಹನುಮನ ಹೆಸರು ಸುಳಿಯಿತಾದರೂ, ಈಗ ಆತನಿಲ್ಲ. ಕಳೆದುಹೋದ ಉಂಗುರ ತರಲು ಹೋಗಿದ್ದಾನೆ.
ತಡಮಾಡದೆ ಸಹೋದರ ಲಕ್ಷ್ಮಣನನ್ನು ಕರೆದ ರಾಮ ವಿಷಯ ಅರುಹಿ ಕಾವಲಿಗೆ ನಿಲ್ಲಲು ಸೂಚಿಸಿದನು. ಮಾತುಕತೆ ಶುರುವಾಯಿತು. ಅತ್ಯಂತ ಜಾಗರೂಕನಾಗಿ ಲಕ್ಷ್ಮಣ ರಹಸ್ಯ ಮಂದಿರದ ಬಾಗಿಲು ಕಾಯುತ್ತಿದ್ದಾಗ ಅಲ್ಲಿಗೆ ಆಗಮಿಸಿದ್ದು ಪರಮ ಕೋಪಿಷ್ಟನೆಂದೇ
ಹೆಸರಾದ ಋಷಿ ವಿಶ್ವಾಮಿತ್ರ. ರಾಮನ ಭೇಟಿಯ ತುರ್ತಿರುವುದಾಗಿಯೂ, ಕಾಣಲು ಅನುವು ಮಾಡಬೇಕೆಂದು ಲಕ್ಷ್ಮಣನಲ್ಲಿ ವಿಶ್ವಾಮಿತ್ರ ಆಗ್ರಹಿಸಿದಾಗ, ಲಕ್ಷ್ಮಣ ರಹಸ್ಯ ಮಾತುಕತೆಯ ವಿಚಾರ ತಿಳಿಸಿ ರಾಮನನ್ನು ಈಗ ಕಾಣಲು ಸಾಧ್ಯವಿಲ್ಲವೆಂದಾಗ ಕುಪಿತಗೊಂಡ ವಿಶ್ವಾಮಿತ್ರ, ತತ್ಕ್ಷ ಣದಲ್ಲಿ ರಾಮನ ಭೇಟಿ ಸಾಧ್ಯವಾಗದಿದ್ದರೆ ಇಡೀ ಅಯೋಧ್ಯೆಯೇ ಬೆಂಕಿಗಾಹುತಿಯಾಗುವ ಶಾಪ ನೀಡುವೆನೆಂದು ಘರ್ಜಿಸಿದನು. ಲಕ್ಷ್ಮಣ

ಗೊಂದಲಕ್ಕೊಳಗಾದನು. ಒಳಗೆ ಹೋಗಿ ಅಣ್ಣ ರಾಮನಿಗೆ ವಿಶ್ವಾಮಿತ್ರನ ಆಗ್ರಹದ ಕುರಿತಾಗಿ ತಿಳಿಸಿದರೆ, ರಹಸ್ಯ ಮಾತುಕತೆಗೆ ಅಡಚಣೆ ಉಂಟುಮಾಡಿದಂತಾಗಿ, ರಾಮನಾಜ್ಞೆಯಂತೆ ತನ್ನ ಶಿರಚ್ಛೇದನವಾಗುವುದು. ಇಲ್ಲದಿದ್ದರೆ, ವಿಶ್ವಾಮಿತ್ರನ ಅವಜ್ಞೆಗೊಳಗಾಗಿ ಅಯೋಧ್ಯಾದಹನವಾಗುವುದು.

ದಾರಿ ಕಾಣದ ಲಕ್ಷ್ಮಣ ಅಂತಿಮವಾಗಿ ತನ್ನ ಪ್ರಾಣತ್ಯಾಗಕ್ಕೆ ಸಿದ್ಧನಾಗಿ, ರಾಮನಲ್ಲಿಗೆ
ತೆರಳಿ ವಿಶ್ವಾಮಿತ್ರನ ಆಗಮನದ ಸುದ್ದಿ ಅರುಹಿದನು. ವಸಿಷ್ಠ ಮತ್ತು ಬ್ರಹ್ಮದೇವರೊಡನೆ ತನ್ನ ರಹಸ್ಯ ಮಾತಿನ ಅಂತ್ಯದಲ್ಲಿದ್ದ ರಾಮ ವಿಶ್ವಾಮಿತ್ರನನ್ನು ಬರಹೇಳಲು ಲಕ್ಷ್ಮಣನಿಗೆ ತಿಳಿಸಿದನು. ರಾಮನಾಗಿ ನಿನ್ನ ಕಾರ್ಯ ಮುಗಿದಿದ್ದು, ಶೀಘ್ರವಾಗಿ ದೇವಗಣವನ್ನು ಮತ್ತೆ
ಸೇರಿಕೊಳ್ಳಬೇಕೆಂದು ರಾಮನಿಗೆ ರಹಸ್ಯ ಸಂದೇಶ ನೀಡುವುದೆ ಆ ರಹಸ್ಯ ಮಾತುಕತೆಯಾಗಿದ್ದಿತು.
ಇತ್ತ ಆ ಮೂವರ ಮಾತಿನಲ್ಲಿ ಮಧ್ಯ ಪ್ರವೇಶಿಸಕೂಡದೆಂಬ ರಾಮಾಜ್ಞೆಯಿದ್ದಾಗ್ಯೂ
ಅದನ್ನು ಉಲ್ಲಂಘಿಸಿದ ಪಾಪಪ್ರಜ್ಞೆಯಲ್ಲಿ ಬೇಯುತ್ತಿದ್ದ ಲಕ್ಷ್ಮಣ ತನ್ನ ಅಣ್ಣ ರಾಮನ ಬಳಿಸಾರಿ, ತನ್ನ ತಪ್ಪಿನ ಪ್ರಾಯಶ್ಚಿತವಾಗಿ ತನ್ನ ಶಿರಚ್ಛೇದನವಾಗಬೇಕೆಂದು ನಿವೇದಿಸಿದಾಗ ರಾಮ, ಲಕ್ಷ್ಮಣನಿಗೆ ಹೇಳುತ್ತಾನೆ. ‘ನೀನು ಪ್ರವೇಶಿಸಿದಾಗ ತಾವು ರಹಸ್ಯ ಮಾತಿನ ಅಂತ್ಯದಲ್ಲಿದ್ದರಿಂದ ಶಿಕ್ಷೆಯ ಅಗತ್ಯವಿಲ್ಲ’ವೆಂದನು. ಲೋಕಾಪವಾದದಿಂದ ಮುಕ್ತನಾಗಲು ಪತ್ನಿಯನ್ನೇ ಶಿಕ್ಷಿಸಿದ ರಾಮ, ಸಹೋದರ ಪ್ರೇಮದ ಮೋಹಕ್ಕೊಳಗಾಗಿ ತನ್ನನ್ನು ಶಿಕ್ಷಿಸುತ್ತಿಲ್ಲವೆಂದು ತಿಳಿದ (ಆದಿಶೇಷನ ಲಕ್ಷ್ಮಣಾವತಾರ) ಲಕ್ಷ್ಮಣ ಸರಯೂ ನದಿಗೆ ಹಾರಿ ಪ್ರಾಣ ಕಳೆದುಕೊಂಡನು.
ಸಹೋದರನ ಮೃತ ವಾರ್ತೆ ಕೇಳಿದ ರಾಮ ಆಸ್ಥಾನಿಕರನ್ನೆಲ್ಲಾ ಕರೆದು ತನ್ನೀರ್ವರು ಮಕ್ಕಳಾದ ಲವ-ಕುಶರಿಗೆ ಪಟ್ಟಾಭಿಷೇಕ ಮಾಡುವಂತೆ ತಿಳಿಸಿ, ಲಕ್ಷ್ಮಣನ ಅಗಲಿಕೆಯನ್ನು ತಾಳಲಾರದೆ ತಾನೂ ಸರಯೂ ನದಿಗೆ ಹಾರಿ ಪ್ರಾಣಬಿಟ್ಟನು. ಇತ್ತ ಪಾತಾಳಲೋಕದಲ್ಲಿ ರಾಮನ ಮುದ್ರೆಯುಂಗುರ ಹುಡುಕಲು ತೆರಳಿ ರಾಮಜಪ ಮಾಡುತ್ತಿದ್ದ ಹನುಮಂತನನ್ನು ಪಾತಾಳಲೋಕದ ರಾಜನೆದುರು ಹಾಜರುಪಡಿಸಿದಾಗ, ವಿಷಯ ತಿಳಿದ ರಾಜ ಉಂಗುರ ಮರಳಿಸುವಂತೆ ಸೇವಕರಿಗೆ ಆಜ್ಞಾಪಿಸಿದನು. ರೇಷ್ಮೆಯಮೇಲುಹೊದಿಕೆಯಿದ್ದ ದೊಡ್ಡ ಹರಿವಾಣವೊಂದರೊಡನೆ ಬಂದ ಸೇವಕಿಯೊಬ್ಬಳು
ಹನುಮನ ಮುಂದೆ ಹರಿವಾಣ ಇಟ್ಟು ಹೊದಿಕೆ ಸರಿಸಿದಾಗ ಅವಾಕ್ಕಾಗುವ ಸರದಿ ಹನುಮನದ್ದು. ತಟ್ಟೆಯ ತುಂಬೆಲ್ಲಾ ಸಾವಿರಾರು ಮುದ್ರೆಯುಂಗುರಗಳು. ಎಲ್ಲವೂ ರಾಮ ಕಳೆದುಕೊಂಡ ಉಂಗುರಗಳೆ. ಹನುಮಂತ ನಿರುತ್ತರನಾದ. ಪಾತಾಳರಾಜ ಹನುಮನುದ್ದೇಶಿಸಿ, ಈ ಹರಿವಾಣದಲ್ಲಿರುವ ಉಂಗುರಗಳಷ್ಟು ಸಂಖ್ಯೆಯ ರಾಮರು ಭೂಲೋಕದಲ್ಲಿ ಬಂದುಹೋಗಿದ್ದಾರೆ. ನೀನು ಇಲ್ಲಿಂದ ನಿನ್ನ ರಾಮನ ಬಳಿಗೆ ಹಿಂತಿರುಗುವ ವೇಳೆಗೆ ಆತನ ಅಂತ್ಯವೂ ಆಗಿರುತ್ತದೆ. ಹೀಗೆ ಪ್ರತಿಯೊಬ್ಬ ರಾಮನೂ ತನ್ನ ಅಂತ್ಯದಲ್ಲಿ ತನ್ನ ಮುದ್ರೆಯುಂಗುರ ಕಳೆದುಕೊಳ್ಳುತ್ತಾನೆ ಹಾಗೂ ಅವೆಲ್ಲವೂ ಈ ಹರಿವಾಣದಲ್ಲಿ ಶೇಖರವಾಗಿವೆ ಎಂದಾಗ ಹನುಮ ನಿರುತ್ತರನಾಗಿ
ನಿಲ್ಲುತ್ತಾನೆ.

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಹಾಸುಹೊಕ್ಕಾಗಿರುವ ಜಾನಪದ ರಾಮಾಯಣವೊಂದರ ಕಥೆ ಇದು. ಎ.ಕೆ. ರಾಮಾನುಜನ್ ತಮ್ಮ ‘Three Hundred Ramayanas’ ಪ್ರಬಂಧದಲ್ಲಿ ಈ ಕಥೆಯನ್ನು ಉಲ್ಲೇಖಿಸುತ್ತಾರೆ.
ಏಷ್ಯಾದ ಪ್ರತಿ ರಾಷ್ಟ್ರವೂ ತನ್ನದೇ ಆದ ರಾಮಾಯಣದ ಆವೃತ್ತಿಗಳನ್ನು ಹೊಂದಿದ್ದು, ಅವುಗಳ ಕಥೆಯೂ ಸಹ ಒಂದಕ್ಕೊಂದು ಭಿನ್ನವಾಗಿವೆ. ಬೌದ್ಧ ಕಥನಗಳಲ್ಲಿಯೂ ಸಹ
‘ಬೋಧಿಸತ್ವ ರಾಮ’ನ ಉಲ್ಲೇಖವಿದ್ದು, ಪ್ರೀತಿ, ಸ್ನೇಹ, ಸೌಹಾರ್ದ, ಕರುಣೆ ಮತ್ತು ಅಹಿಂಸೆಗಳ ಪ್ರತಿಪಾದಕನಾಗಿ ಕಾಣಿಸಲಾಗಿದೆ.
ಆಧ್ಯಾತ್ಮ ರಾಮಾಯಣ (2.4.77.8; See Nath 1913, 39) ದಲ್ಲಿ ಪಿತೃವಾಕ್ಯ ಪರಿಪಾಲನಾರ್ಥವಾಗಿ ವನವಾಸಕ್ಕೆ ಹೊರಟ ರಾಮ, ಸೀತೆಯು ತನ್ನೊಡನೆ ಬರಬಾರದೆಂದು ಹೇಳಿದಾಗ ಕುಪಿತಳಾದ ಸೀತೆ ‘ಈ ಹಿಂದೆ ರಚಿತವಾಗಿರುವ
ರಾಮಾಯಣಗಳು ತಿಳಿದಿವೆಯಾ ನಿನಗೆ? ಅವುಗಳಲ್ಲೊಂದರಲ್ಲಿ ಸೀತೆ ರಾಮನೊಡನೆ ವನವಾಸಕ್ಕೆ ತೆರಳದಿರುವ ರಾಮಾಯಣವು ಒಂದಿದೆ ಗೊತ್ತಿದೆ ತಾನೆ’ ಎಂದಾಗ ರಾಮ ಮೌನವಾಗುತ್ತಾನೆ. ‘ಜೈನ ರಾಮಾಯಣ’ ವಂತೂ ಮತ್ತೊಂದು ಹೆಜ್ಜೆ ಮುಂದೆಯೇ ಸಾಗಿ ಸೀತೆಯನ್ನು ರಾವಣನ ಪುತ್ರಿಯಾಗಿ ಚಿತ್ರಿಸುತ್ತದೆ. ತನ್ಮೂಲಕ ಆಧುನಿಕ ಮನೋವಿಜ್ಞಾನ ವ್ಯಾಧಿಯೆಂದು ಗುರುತಿಸಿದ ‘ಈಡಿಪಸ್ ಕಾಂಪ್ಲೆಕ್ಸ್’ಗೆ ಉದಾಹರಣೆಯಾಗಿ ನಿಲ್ಲುತ್ತದೆ.

ಹೀಗೆ ಪುರಾಣಗಳನ್ನು ಆಸ್ಥೆಯಿಂದ ಗಮನಿಸುತ್ತಾ ಹೋದರೆ ‘ಇನ್ನಷ್ಟು ರಾಮ’ರು ಗೋಜರಿಸುತ್ತಾ ಹೋಗುತ್ತಾರೆ. ‘ರಾಮ ಭರಾಟೆ’ಯ ವರ್ತಮಾನದಲ್ಲಿ ಈ ಅಧ್ಯಯನ ಹೊರಡಿಸುವ ಧ್ವನಿಗಳು ಹಲವು.

ಲೇಖಕರು :
ಪ್ರೊ. ಸಂದೇಶ ಎಚ್ ರತ್ನಪುರಿ ಮೈಸೂರು,
ಇಂಗ್ಲೀಷ್ ಪ್ರಾಧ್ಯಾಪಕರು