ಕುಮಟಾ ತಾಲೂಕು ಇತಿಹಾಸ ಸಮ್ಮೇಳನದಲ್ಲಿ ಐತಿಹಾಸಿಕ ಮಿಂಚುಗಳು

ಕುಮಟಾ: ಇತಿಹಾಸ ತಜ್ಞರು ಈ ನೆಲವನ್ನು ಅಗೆ ಅಗೆದು ಮೊಗೆಮೊಗೆದು ತೆಗೆದ ಬೆಳಕಿನ ಪರಾಮರ್ಷೆ ಮಾಡಲು ಕುಮಟಾ ತಾಲೂಕಿನ ಇತಿಹಾಸ ಕುರಿತಂತೆ ‘ಜಿಲ್ಲಾ ಮಟ್ಟದ ಇತಿಹಾಸ ಸಮ್ಮೇಳನ’ವನ್ನು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಇತ್ತೀಚಿಗೆ ಹಮ್ಮಿಕೊಂಡು ಸಾರ್ವಜನಿಕರಿಂದ ಪ್ರಶಂಸೆ ಪಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ ಕುಮಟಾದಲ್ಲಿ ಕೆಲವು ಐತಿಹಾಸಿಕ ಸ್ಮಾರಕಗಳನ್ನು ಸರಕಾರ ರಕ್ಷಿಸುತ್ತಿದೆ. ಆದರೆ ಈ ರಕ್ಷಣೆಯ ನೆಪದಲ್ಲಿ ಪುರಾತತ್ವ ಇಲಾಖೆಯ ನಿಯಮಾವಳಿಯಿಂದಾಗಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಈ ನಿಯಮಾವಳಿಗೆ ತಿದ್ದುಪಡಿ ತಂದು ಸ್ಮಾರಕಗಳ ರಕ್ಷಣೆಯ ಜೊತೆಗೆ ಊರಿನ ಅಭಿವೃದ್ಧಿಗೂ ಸರಕಾರ ಅವಕಾಶ ಕಲ್ಪಿಸಬೇಕು ಎಂದರು.

ವೇದಿಕೆಯಲ್ಲಿ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಪ್ರೊ. ಎಂ.ಜಿ.ನಾಯ್ಕ, ಉದ್ಯಮಿ ಸುಬ್ರಾಯ ವಾಳ್ಕೆ, ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯ ವಿಶ್ರಾಂತ ಅಧೀಕ್ಷಕ ಎಸ್.ಎಸ್.ನಾಯ್ಕ ಮುಂತಾದವರು ಪಾಲ್ಗೊಂಡಿದ್ದರು.

ಇತಿಹಾಸ ಸಮ್ಮೇಳನದ ಸಂಚಾಲಕ ಹಾಗೂ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಪ್ರಮೋದ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕುಮಟಾದಲ್ಲಿ ಅತಿ ಹೆಚ್ಚು ತಿಗಳಾರಿ ಲಿಪಿ : ಶ್ಯಾಮಸುಂದರ ಗೌಡ

ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಇತಿಹಾಸ ತಜ್ಞ ಶಾಮಸುಂದರ
ಗೌಡ (Historian Shyamasundar Gouda), ಕುಮಟಾ ತಾಲೂಕಿನಲ್ಲಿ ಹತ್ತಕ್ಕೂ ಮಿಕ್ಕಿ  ತಿಗಳಾರಿ ಲಿಪಿಯ ಶಾಸನಗಳು ದೊರೆತಿವೆ. ಈವರೆಗೂ ತಿಗಳಾರಿ ಲಿಪಿಯ ವಿಕಾಸದ ಕುರಿತು ಗಮನಿಸುವಂತಹ ಅಧ್ಯಯನಗಳು ನಡೆದಿಲ್ಲ ಹಾಗೊಮ್ಮೆ ತಿಗಳಾರಿ ಲಿಪಿಯ ಕುರಿತು ಗಂಭೀರ ಅಧ್ಯಯನಗಳು ನಡೆದಲ್ಲಿ ತಮಿಳು ಗ್ರಂಥ ಲಿಪಿಯ ಉಗಮದ ಕುರಿತು ಹೊಸ ಅಂಶಗಳು ಬೆಳಕಿಗೆ ಬರಲಿವೆ. ತಾಲೂಕಿನ  ಮೂರೂರು ಮತ್ತು ಉಳ್ಳೂರು ಮಠಗಳಲ್ಲಿ ದೊರೆತ ಶಾಸನಗಳ ಲಿಪಿ ಗಮನಾರ್ಹವಾಗಿದ್ದು 10-11ನೇ ಶತಮಾನದ
ಕಾಲಾವಧಿಯ ಈ ಶಾಸನಗಳಲ್ಲಿ ಬ್ರಾಹ್ಮಿಯ ‘ಯ’, ‘ಎ’ ಅಕ್ಷರಗಳು ಸೇರಿಕೊಂಡಿವೆ. ಹಾಗೂ ಪ್ರತಿ ಅಕ್ಷರದ ಕೆಳಗಡೆ ತ್ರಿಕೋನಾಕೃತಿಯ ಸಂಕೇತವನ್ನು ಅಕ್ಷರಕ್ಕೆ ಜೋಡಿಸಿ ಕೊರೆದಿರುವುದರಿಂದ ಇವು ವಿಶೇಷವಾಗಿದ್ದು, ಕನ್ನಡ ಲಿಪಿಯ ಅವಸ್ಥಾಂತರದ ಅಧ್ಯಯನ ತೊಡಗಿಕೊಳ್ಳುವ ಸಂದರ್ಭದಲ್ಲಿ ಉದಾಹರಿಸಲೇಬೇಕಾದ ಶಾಸನಗಳಾಗಿರುವುದರಿಂದ ಇವುಗಳತ್ತ ಹೆಚ್ಚಿನ ಗಮನಕೊಡುವ ಅಗತ್ಯತೆಯನ್ನು ಪ್ರತಿಪಾದಿಸಿದರು.
ಕುಮಟಾ ತಾಲೂಕಿನ  ಇತಿಹಾಸಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅಧ್ಯಯನಗಳು ನಡೆದಿಲ್ಲ. ನೆರೆಯ ಅಂಕೋಲಾ, ಹೊನ್ನಾವರ ತಾಲೂಕುಗಳಲ್ಲಿ ಬೃಹತ್ ಶಿಲಾಯುಗ ಸೂಕ್ಷ್ಮ, ಶಿಲಾಯುಗ ಕಾಲದ ನೆಲೆಗಳು ಪತ್ತೆಯಾಗಿವೆ ಹಾಗಾಗಿ ಕುಮಟಾ  ತಾಲೂಕಿನಲ್ಲೂ ಆ ಕಾಲದ ನೆಲೆಗಳನ್ನು ಗುರುತಿಸುವ ಅಧ್ಯಯನಗಳು ನಡೆಯಬೇಕಾಗಿದೆ ಎಂದರು.

ಹನೆಹಳ್ಳಿಯಲ್ಲಿ ಇರುವ ಚಂದಾವರ ಕಾದಂಬರ ಶಾಸನಗಳು 15ನೇ ಶತಮಾನದ ಆರಂಭಿಕ ದಶಕಕ್ಕೆ ಸೇರಿದವಾಗಿದ್ದರೂ 12ನೇ ಶತಮಾನದಲ್ಲಿ ಲಿಪಿಯಲ್ಲಿ ಬರೆದಿದ್ದಾರೆ ಅಲ್ಲಿಯೇ ದೊರೆತಿರುವ ಇಮ್ಮಡಿ ಹರಿಹರನ ಶಾಸನ ಸರಿಸುಮಾರು ಅದೇ ಕಾಲಾವಧಿಯ ವಿಜಯನಗರ ಕಾಲದ ಲಿಪಿಯಲ್ಲಿದೆ ಹೀಗಿರುವಾಗ ಚಂದಾವರ ಕಾದಂಬರ ಶಿಲ್ಪಿಗಳ ಮೇಲೆ ಲಿಪಿಕಾರರ ಮೇಲೆ ವಿಜಯನಗರದ ಪ್ರಭಾವ ಆಗಿರಲಿಲ್ಲ ಎಂಬ ವಿಷಯದ ಕಡೆಗೆ ಶ್ಯಾಮಸುಂದರ ಗೌಡ ಬೊಟ್ಟು ಮಾಡಿ ತೋರಿಸಿದರು. ನಾಗವರ್ಮ ಅರಸ ಎನ್ನುವವನು ಗೋಕರ್ಣ ಪುರವರಾಧೀಶ್ವರ ಎಂಬ ಬಿರುದಿನೊಂದಿಗೆ ಸರಿಸುಮಾರು 47 ವರ್ಷಗಳ ಕಾಲ ಹೊನ್ನಾವರದಿಂದ ಕಾರವಾರದವರೆಗಿನ ಪ್ರದೇಶಗಳನ್ನು ಆಳಿದ್ದನ್ನು ತಿಳಿಸಿ, ಆತನ ರಾಜಧಾನಿಯಾದ ಗೋಕರ್ಣಪುರದ ವ್ಯಾಪ್ತಿಯನ್ನು ವಿವರಿಸಿದರು. ಮುಂದುವರಿದು ನಾಗವರ್ಮ ಅರಸನ ಶಾಸನಗಳ ವೈಶಿಷ್ಟ್ಯಗಳನ್ನು ತಿಳಿಸಿ, ಆತನ ಕಾಲಾವಧಿಯ ಹಳದಿಪುರ ಮತ್ತು ಕೆಕ್ಕಾರುಗಳಲ್ಲಿರುವ ವೀರಗಂಬಗಳನ್ನು ಮಡಿದ ವೀರರ ಪತ್ನಿಯರೇ ನೆಟ್ಟಿರುವುದರಿಂದ ಆ ಕಾಲದಲ್ಲಿ ಸತಿ ಪದ್ಧತಿ ಕಡ್ಡಾಯವಾಗಿರಲಿಲ್ಲ ಎಂಬುದನ್ನು ಸಹ ಗಮನಿಸಬೇಕು ಎಂದ ಅವರು ತಿಳಿಸಿದರು.

 ಚಂದಾವರ ಕಾದಂಬರ  ಕಾಲದಿಂದ ಹನೇಹಳ್ಳಿ ಒಂದು ಪ್ರಮುಖ ವ್ಯಾಪಾರಿ ಕೇಂದ್ರವಾಗಿತ್ತು ಇಲ್ಲಿ ಅನೇಕ ವ್ಯಾಪಾರಿ ಸಂಘಗಳು ಅಸ್ತಿತ್ವದಲ್ಲಿದ್ದು ಅವುಗಳ ಕುರಿತಾಗಿ ಅಧ್ಯಯನಗಳು ನಡೆಯಬೇಕಾಗಿದೆ ಎಂದರು. ಗೋಕರ್ಣದಲ್ಲಿ ಶೈವರಿಗೆ ಸಂಬಂಧಿಸಿದ ಎರಡು ವೈಷ್ಣವರಿಗೆ ಸಂಬಂಧಿಸಿದ ಎರಡು ಮಠಗಳಿವೆ. ಈವರೆಗೆ ಈ ಮಠ ಪರಂಪರೆಗಳ ಕುರಿತಾಗಿ ಯಾವುದೇ ಅಧ್ಯಯನಗಳು ನಡೆದಿಲ್ಲ. ವಿಜಯನಗರದ ದೊರೆ ಇಮ್ಮಡಿ ದೇವರಾಯ ಗೋಕರ್ಣದ ಯತಿಯೊಬ್ಬರಿಗೆ ಚಿನ್ನದ ಕಿರೀಟ, ಆಂದೋಳಿಕ, ಹಗಲು ದೀವಟಿಗೆ, ಪಂಚವಾದ್ಯ ಇತ್ಯಾದಿ  ರಾಜ ಪರಿಕರಗಳನ್ನು ನಿತ್ಯ ಉಪಯೋಗಿಸುವಂತೆ ನೀಡಿದ ಬಗ್ಗೆ ಶಾಸನ ಕೂಡ ಇದೆ ಹಾಗಾಗಿ ಗೋಕರ್ಣದ ಮಠ ಪರಂಪರೆ ಅಧ್ಯಯನ ಅಗತ್ಯವಾಗಿ ಆಗಲೇ ಬೇಕಾಗಿದೆ
ಎಂದರು. ಮಾತುಗಳನ್ನು ಮುಂದುವರಿಸಿದ ಅವರು ಮೊದಲಿಗೆ  ಬೌದ್ಧ ಕೇಂದ್ರವಾಗಿದ್ದ ಹಿರೇಗುತ್ತಿ
10-11ನೇ ಶತಮಾನದ ವೇಳೆಗೆ ಜೈನ ಕೇಂದ್ರವಾಗಿ ಗುರುತಿಸಿಕೊಂಡಿತ್ತು. ನಂತರದ ದಿನಗಳಲ್ಲಿ ವಿಜಯನಗರದ ಕಾಲದ ಅವಧಿಯಲ್ಲಿ ಪ್ರಮುಖ ಶೈವ ಕೇಂದ್ರವಾಗಿ ಬೆಳವಣಿಗೆ ಹೊಂದಿದ್ದನ್ನು ವಿವರಿಸಿ ಈ ಕುರಿತು ಸಂಶೋಧನೆಗಳು ನಡೆಯಬೇಕೆಂದು ಅವರು ಒತ್ತಾಯಿಸಿದರು

ಇತ್ತೀಚಿನ ವರ್ಷಗಳಲ್ಲಿ ಕುಮಟಾ ತಾಲೂಕು ಹಾಗೂ ಉತ್ತರ ಕನ್ನಡ ಜಿಲ್ಲೆಯ ಇತರ ತಾಲೂಕುಗಳ ಕುರಿತಂತೆ ಸಂಶೋಧನಾ ಪ್ರಬಂಧಗಳು ಮಂಡಿತವಾಗುತ್ತಿವೆ. ಆದರೆ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ನಡೆದ ಈ ಸಂಶೋಧನೆಗಳು ತತ್ವ ಮತ್ತು ತರ್ಕ ರಹಿತವಾಗಿರುವುದರಿಂದ ಚರಿತ್ರೆಯ ಮೇಲೆ ಹೊಸಬೆಳಕು ಚೆಲ್ಲುವಲ್ಲಿ ಇವು ಸೋಲುತ್ತಿವೆ ಎಂದು ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅಂಕೋಲಾ ವಿಷಾದದಿಂದ ನುಡಿದರು.

ಇಂದಿಗೂ ಅರಣ್ಯ ಭಾಗದಲ್ಲಿರುವ ದೇವಾಲಯಗಳು ಮತ್ತು
ಶಾಸನಗಳನ್ನು ಪತ್ತೆ ಹಚ್ಚಬೇಕಾಗಿದೆ : ಡಾ. ಗಣಪತಿ ಗೌಡ

ಉತ್ತರ ಕನ್ನಡ ಜಿಲ್ಲಾ ಮಟ್ಟದ ಇತಿಹಾಸ ಸಮ್ಮೇಳನದಲ್ಲಿ ‘ಜಿಲ್ಲೆಯ ಇತಿಹಾಸ ಮತ್ತು ಶಾಸನಗಳ’ ಕುರಿತು ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಡಾ. ಗಣಪತಿ ಗೌಡ( Dr.Ganapati Gouda, Mangalore University- History and Archaeologicalism
Dept. Head) ಹನ್ನೊಂದು ತಾಲೂಕುಗಳನ್ನೊಳಗೊಂಡ ಉತ್ತರ ಕನ್ನಡ ಜಿಲ್ಲೆಯಲ್ಲಿ ನೂತನ ಶಿಲಾಯುಗದಿಂದಲೂ ಮಾನವ ನೆಲೆಯೂರಿ ಬದುಕು ಸಾಗಿಸುತ್ತಿದ್ದನೆಂಬುದಕ್ಕೆ ಆಧಾರಗಳಿವೆ. ಇಲ್ಲಿ ಪ್ರಮುಖ ರಾಜಮನೆಗಳ ಜೊತೆಗೆ 15 ಸಾಮಂತ ರಾಜಮನೆತನಗಳು ಆಳ್ವಿಕೆ ನಡೆಸಿಜ ಜಿಲ್ಲೆಯ ಇತಿಹಾಸ ಮೇಲೆ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ್ದಾರೆ. ಜಿಲ್ಲೆಯಲ್ಲಿನ ಶಾಸನಗಳ ಸಂಶೋಧನೆ ಮತ್ತು ಅಧ್ಯಯನಗಳನ್ನು ರಾಜ್ಯದ ಬೇರೆ ಭಾಗಗಳಿಗೆ ಹೋಲಿಸಿದರೆ ವಿಶೇಷವಾಗಿ ನಡೆದಿಲ್ಲವೆಂದೇ ಹೇಳಬೇಕು. ಬಹುಶಃ ಜಿಲ್ಲೆಯಲ್ಲಿನ

ವಿಶಿಷ್ಟವಾದ ಬೌಗೋಳಿಕ ಲಕ್ಷಣಗಳು, ಮಡಿವಂತಿಕೆ, ಮಠಮಾನ್ಯಗಳ ವಶದಲ್ಲಿರುವ ಶಾಸನಗಳ ಅಧ್ಯಯನಕ್ಕೆ ದೊರಕದ ಸಹಕಾರ ಮೊದಲಾದವುಗಳು ಹೊಸದನ್ನು ಹುಡುಕಲು ಹೊರಡುವ ಕೆಲವು ಉತ್ಸಾಹಿ ಸಂಶೋಧಕರಿಗೆ ತುಸು ತೊಡಕಾಗಿ ಪರಿಣಮಿಸಿರಬಹುದು ಎಂದು ಅಭಿಪ್ರಾಯಪಟ್ಟರು. ಇಂದಿಗೂ ಅರಣ್ಯಗಳ ಮಧ್ಯಭಾಗದಲ್ಲಿರುವ ಅನೇಕ ದೇವಾಲಯಗಳು ಮತ್ತು ಶಾಸನಗಳನ್ನು ಪತ್ತೆ ಹಚ್ಚಬೇಕಾದ ಅವಶ್ಯಕತೆ ಇದೆ. ತಾಲೂಕುವಾರು ಮತ್ತು ಹಳ್ಳಿ ಹಳ್ಳಿಗಳಲ್ಲಿಯ ಪ್ರಾಚ್ಯವಸ್ತು ಸರ್ವೇಕ್ಷಣಾ ಕಾರ್ಯವನ್ನು ಕೂಲಂಕುಶವಾಗಿ ಕೈಗೊಂಡು ಹೊಸದಾಗಿ ದೊರೆಯುವ ಶಾಸನಗಳನ್ನು ಓದಿ ಅವುಗಳನ್ನು ವಿಮರ್ಶಾತ್ಮಕವಾಗಿ ಪ್ರಕಟಿಸಬೇಕಾಗಿದೆ.
1975ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ದೊರೆತ ಶಾಸನಗಳನ್ನು ಕೆಲಹಾಕಿದ ಡಾ. ಆರ್.ಎನ್. ಗುರವ್ ಅವರು ಇದರ ಒಟ್ಟು ಸಂಖ್ಯೆ 400 ಎಂದು ಹೇಳಿದ್ದಾರೆ. ಆದರೆ ಈಗ ತಮ್ಮ ಗಮನಕ್ಕೆ ಬಂದ ಬಂದಿರುವ ಒಟ್ಟು ಶಾಸನಗಳ ಸಂಖ್ಯೆ 475. ಅವುಗಳಲ್ಲಿ ಹಲವಾರು ಶಾಸನಗಳು ಓದಲಾರದ ಸ್ಥಿತಿಗೆ ತಲುಪಿವೆ. ಇನ್ನು ಶಾಸನಗಳು ಇದ್ದ ಸ್ಥಳದಿಂದಲೇ ನಾಪತ್ತೆಯಾಗಿವೆ ಎಂದು ಹೇಳಿದ ಡಾ.ಗಣಪತಿ ಗೌಡ ಅವರು, ಜಿಲ್ಲೆಯಲ್ಲಿ ದೊರೆಯುವ ಶಾಸನಗಳಲ್ಲಿ ಅಧಿಕ ಸಂಖ್ಯೆಯವು ಶಿಲಾಶಾಸನಗಳು. ಇವುಗಳಲ್ಲಿ ವೈವಿಧ್ಯಮಯವಾದ ಸ್ಥಂಭವೀರಗಲ್ಲುಗಳು, ಮತ್ತು ಸತಿಗಲ್ಲುಗಳು ಸೇರುತ್ತವೆ ಮಾತ್ರವಲ್ಲ, ಇವುಗಳು ಭಾಷಾ ಅಧ್ಯಯನ ದೃಷ್ಟಿಯಿಂದಲೂ ವಿಶೇಷತೆ ಪಡೆದುಕೊಂಡಿವೆ.
ಈ ಭಾಗದಲ್ಲಿ ಸಂಸ್ಕೃತ, ಪ್ರಾಕೃತ, ಕನ್ನಡ, ಮಲಿಯಾಳಿ, ತಿಗಳಾರ್ಯ, ಮರಾಠಿ, ಚೀನಿ ಮತ್ತು ಅರೇಬಿಕ್ ಭಾಷೆಯ ಶಾಸನಗಳನ್ನು ನೋಡಲು ಸಾಧ್ಯ ಎಂದು ತಿಳಿಸಿದರು. ಉತ್ತರ ಕನ್ನಡ ಜಿಲ್ಲೆಯ ಶಾಸನಗಳು ಕೆಲವು ವೈಶಿಷ್ಟ್ಯವುಳ್ಳ ಭೌಗೋಳಿಕ ಸ್ವರೂಪವನ್ನು ತಿಳಿಸುತ್ತವೆ ಎಂದು ಉದಾಹರಣೆಯೊಂದಿಗೆ ವಿಶ್ಲೇಷಿಸಿದ ಡಾ. ಗೌಡ, ಶಿಕಾರಿಪುರ,
ಗುಂಡಬಾಳ, ತುಂಬೊಳ್ಳಿ ಶಾಸನಗಳು ಕೊಂಕಣ ಮತ್ತು ಹೈವೆಯ ಬಗ್ಗೆ ಮಾಹಿತಿ ನೀಡುತ್ತವೆ. ‘ಕೊಂಕಣಧಾತ್ರೀವನಿತೆಯ, ಕಂಕಣದಂತೆಸೆವ ಹೈವೆ’ ಎಂಬ ಶಾಸನೋಕ್ತಿಯನ್ನು ಗಮನಿಸಿದಾಗ ಕೊಂಕಣದ ಬಾಗದಲ್ಲಿ ಹೈವೆ ಸೇರಿತ್ತೆಂಬುದು ತಿಳಿಯುತ್ತದೆ. ಬೊಂಬಾಯಿಯಿಂದ ಕನ್ಯಾಕುಮಾರಿಯವರೆಗಿನ ಪಶ್ಚಿಮ ಕರಾವಳಿಯ ತೀರ ಪ್ರದೇಶವು ಕೊಂಕನ ಬಾಗವಾಗಿತ್ತು. ಇನ್ನು ಹೈವೆ ಪ್ರದೇಶವು ಉತ್ತರದಲ್ಲಿ ಕುಮಟಾ ತಾಲೂಕಿನ
ಅಘನಾಶಿನಿ ನದಿಯಿಂದ ದಕ್ಷಿಣದಲ್ಲಿ ಭಟ್ಕಳ ತಾಲೂಕು, ಪೂರ್ವದಲ್ಲಿ ಪಶ್ಚಿಮ ಘಟ್ಟದಿಂದ ಪಶ್ಚಿಮದಲ್ಲಿ ಅರಬ್ಬಿ ಸಮುದ್ರದ ವರೆಗೆ ಹಬ್ಬಿತ್ತೆಂದು ಹೇಳಬಹುದು ಎಂದು ಹೇಳಿದರು.

ಜಿಲ್ಲೆಯಲ್ಲಿನ ಅನೇಕ ಮಹಿಳೆಯರು ಸಾಹಿತಿಗಳಾಗಿ ಧರ್ಮ ಪೋಷಕರಾಗಿ ಮತ್ತು ರಾಣಿಯರಾಗಿ ರಾಜ್ಯಾಡಳಿತದಲ್ಲಿ ಸಕ್ರೀಯವಾಗಿ ಬಾಗವಹಿಸಿದ್ದರು. ಮುದ್ದುಗಹಳಿಯಿತನ ಹೆಂಡತಿ ಮಾರಬ್ಬೆ ತನ್ನ ಗಂಡ ಯುದ್ಧದ್ಲಲಿ ಮಡಿದಾಗ ಇನ್ನಿತರ ಮಹಿಳೆಯರಾದ ಬನ್ದಿಯಬ್ಬೆ ಮತ್ತು ಮುಂಬಳಿಯ ಬೂತಬ್ಬೆಗೆಲ್ಲತಿಯ ಜತೆಗೂಡಿ ತನ್ನ ಗಂಡನ ಹೆಸರಿನಲ್ಲಿ ಅತ್ಯಾಕರ್ಷಕವಾದ ಚಂಡೇಶ್ವರದ ವೀರಗಂಬವನ್ನು ಮಾಡಿಸಿದ್ದಳು. ಅಷ್ಟೇ ಅಲ್ಲ, ಸಿಸುಗಲಿ
ಪಾಂಡ್ಯರ ಇಮ್ಮಡಿ ಕಾಮದೇವನ ರಾಣಿ ಕಾಳಲದೇವಿ ಎಂಬುವವಳು ತುಂಬೊಳ್ಳಿಯಲ್ಲಿ ವಿಷ್ಣು ದೇವಾಲಯವನ್ನು ಕಟ್ಟಿಸಿ ಅದರ ನಿರ್ವಹಣೆಗಾಗಿ ಹಲವಾರು ಗ್ರಾಮಗಳನ್ನು ದತ್ತಿ ಬಿಟ್ಟಿದ್ದಳು. ಅಂದರೆ ಈ ಬಾಗದಲ್ಲಿ ಗೇರಸೊಪ್ಪೆ ನಗಿರೆಯನ್ನು ಆಳಿದ ರಾಣಿ ಚೆನ್ನಾಬೈರಾದೇವಿ ಸಹಿತಿ ಹಲವಾರು ಮಹಿಳೆಯರು ಜಿಲ್ಲೆಯ ಇತಿಹಾಸದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದು ಡಾ. ಗಣಪತಿ ಗೌಡ ಹೇಳಿದರು.

‘ಉತ್ತರ ಕನ್ನಡದಲ್ಲಿ ಸ್ವಾತಂತ್ರ್ಯ ಸಂಗ್ರಾಮ’ ವಿಷಯದ ಮೇಲೆ ದಾಂಡೇಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿ ಪ್ರಾಧ್ಯಾಪಕ ಡಾ. ಬಸವರಾಜ ಅಕ್ಕಿ ಪ್ರಬಂಧ ಮಂಡಿಸಿದರೆ, ‘ಕುಮಟಾ ತಾಲೂಕಿನಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆ’ ವಿಷಯದ ಮೇಲೆ ಕುಮಟಾದ ಡಾ. ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಅರವಿಂದ ನಾಯಕ ಪ್ರಬಂಧ ಮಂಡಿಸಿದರು.

ಪ್ರಾಚಾರ್ಯೆ ವಿಜಯಾ ಡಿ.ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಶ್ರಾಂತ ಪ್ರಾಧ್ಯಾಪಕಿ ಪ್ರೊ. ಆರತಿ ನಾಯಕ, ವಿಶ್ರಾಂತ ಪ್ರಾಧ್ಯಾಪಕ, ಕವಿ ಪ್ರೊ.ಟಿ.ಜಿ.ಭಟ್ಟ ಹಾಸಣಗಿ, ಉತ್ತರ ಕನ್ನಡ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಹಾಗೂ ‘ಹಣತೆ ವಾಹಿನಿ’ ಸಂಪಾದಕ ಅರವಿಂದ ಕರ್ಕಿಕೋಡಿ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಐಕ್ಯುಎಸಿ ಸಂಚಾಲಕ ಹಾಗೂ ಸಹ ಪ್ರಾಧ್ಯಾಪಕ ಪ್ರೊ.ಐ.ಕೆ.ನಾಯ್ಕ, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಹಾಗೂ ಸಹ ಪ್ರಾಧ್ಯಾಪಕ ಪ್ರೊ. ವಿನಾಯಕ ಎಂ. ನಾಯಕ, ಸಾಂಸ್ಕೃತಿಕ ವಿಭಾಗದ ಸಂಚಾಲಕಿ ಹಾಗೂ ಸಹ ಪ್ರಾಧ್ಯಾಪಕಿ ಡಾ. ಗೀತಾ ಬಿ.ನಾಯಕ, ಇತಿಹಾಸ ಸಮ್ಮೇಳನದ ಸಹ ಸಂಚಾಲಕ ಹಾಗೂ ಸಹಾಯಕ ಪ್ರಾಧ್ಯಾಪಕ ಪ್ರೊ. ಸಂದೇಶ ಎಚ್. ಉಪಸ್ಥಿತರಿದ್ದರು ಹಾಗೂ ಪ್ರೊ. ಗಿರೀಶ್ ನಾಯ್ಕ್ ವನ್ನಳ್ಳಿ ನಿರೂಪಿಸಿದರು.

Leave a Reply

Your email address will not be published. Required fields are marked *