ಕುಮಟಾದ ಕಾಮತ್ ಬುಕ್ ಸ್ಟಾಲ್ ನಲ್ಲಿ ನಾನು ನಿಯತಕಾಲಿಕವೊಂದನ್ನು ಕೊಂಡುಕೊಂಡು ಹಿಂತಿರುಗುವಷ್ಟರಲ್ಲಿ ಆ ಭಿಕ್ಷುಕ ಪುಸ್ತಕದ ಅಂಗಡಿಯ ಹುಡುಗನಲ್ಲಿ ಒಂದು ‘ಇಂಡಿಯನ್ ಎಕ್ಸಪ್ರೆಸ್’ ಕೊಡಿ ಅಂತ ಹೇಳುತ್ತಿದ್ದ.
ಹುಡುಗ ಎಕ್ಸಪ್ರೆಸ್ ಕೊಟ್ಟ. ಆತ ದುಡ್ಡು ಕೊಟ್ಟ. ಆತನ ನಡೆನುಡಿ ಸ್ವಲ್ಪ ಕುತೂಹಲಕರ ಅನಿಸಿತು. ನಾನು ಅವನನ್ನೇ ನೋಡುತ್ತಿದ್ದೆ. ಆತ ತುಸು ನಕ್ಕು ಅಂಗಡಿಯ ಮೆಟ್ಟಿಲು ಇಳಿದು ಹೊರಡುತ್ತಿದ್ದ. ಯಾಕೋ ಅವನನ್ನು ಮಾತನಾಡಿಸಬೇಕು ಅನಿಸಿತು. ‘Where are you from?’ ಅಂತ ಕೇಳಿದೆ. ಆತ ವಯನಾಡ್ ಅಂದ. ಮತ್ತೆ ಆತನೇ ಮುಂದುವರೆದು ಕೇರಳ ವಯನಾಡ್ ಅಂದ.ಅವನೊಳಗನ್ನು ಮತ್ತಷ್ಟು ಕೆದರಬೇಕು ಅಂತ ‘Is it the same Parliament Constituency where Rahul Gandhi won? ಅಂತ ಕೇಳಿದೆ. ಆತ ಹೌದು ಅಂತ
ತಲೆ ಅಲ್ಲಾಡಿಸಿದ.

ಸ್ವಲ್ಪ ಹೊತ್ತು ನನ್ನನ್ನು ನೋಡುತ್ತ ನಿಂತ. ನಾನು ಅವನೊಂದಿಗೆ ಮಾತನಾಡಲು ಇಳಿದೆ. ತುಂಬ ವಿನಯದಿಂದಲೇ ನಾನು ಕೇಳಿದ್ದಕ್ಕೆಲ್ಲ ಉತ್ತರಿಸುತ್ತಿದ್ದ. ಈಗ ಅನಿಸುತ್ತದೆ, ಆತ ನನ್ನೊಂದಿಗೆ ಮಾತನಾಡುತ್ತಿರಲಿಲ್ಲ. ನನ್ನ ಮೂಲಕ ನಿಮ್ಮೆಲ್ಲರೊಂದಿಗೇ ಮಾತನಾಡುತ್ತಿದ್ದ ಅಂತ.
ಕಾವಿ ಬಟ್ಟೆ ತೊಟ್ಟು ತಲೆಗೆ ಅದೇ ಬಣ್ಣದ ರುಮಾಲು ಸುತ್ತಿಕೊಂಡ ಆ ಮನುಷ್ಯನ ಕೈಯಲ್ಲಿ ಒಂದು ಪ್ಲಾಸ್ಟಿಕ್ ಬಟ್ಟಲು. ಅದರಲ್ಲಿ ತಾಮ್ರ ಬಣ್ಣದ ಪ್ಲಾಸ್ಟಿಕ್ ಚಂಬು ಪ್ಲಾಸ್ಟಿಕ್, ಮಾವಿನ ಎಲೆ, ಪ್ಲಾಸ್ಟಿಕ್ ತೆಂಗಿನ ಕಾಯಿ. ಒಟ್ಟಾರೆ ಅದೊಂದು ಪ್ಲಾಸ್ಟಿಕ್ ಕಳಸ ಭಿಕ್ಷೆ ಬೇಡಲು ಸಿದ್ಧ ಪರಿಕರ ಅನಿಸುತ್ತದೆ. ಆದರೆ ಹಣೆಯಲ್ಲಿ ವಿಭೂತಿ,ಕುಂಕುಮ, ಕುತ್ತಿಗೆಯಲ್ಲಿ ರುದ್ರಾಕ್ಷಿ ಸರ ಇವ್ಯಾವುದೂ ಇರಲಿಲ್ಲ ಒಟ್ಟಾರೆ ಅವನನ್ನು ಭಿಕ್ಷುಕನಂತೆ ಕಾಣುವ ಸಂತ ಅನ್ನಬೇಕೋ ಅಥವಾ ಸಂತನಂತೆ ಕಾಣುವ ಭಿಕ್ಷುಕ ಅನ್ನಬೇಕೋ ಎಂಬ ಗೊಂದಲ ನನ್ನೊಳಗೂ ಸುಳಿದಾಡಿತು. ಸ್ವಷ್ಟ ಇಂಗ್ಲೀಷು, ಸ್ವಚ್ಛ ಬಟ್ಟೆ.

ಅವನನ್ನು ನೋಡುತ್ತಿದ್ದರೆ ಅವನೊಳಗೆ ಇನ್ನಾರೋ ಇದ್ದಾರೆ ಅಂತ ಅನ್ನಿಸದೇ ಇರದು. ನಾನು ಕೇಳುತ್ತಿದ್ದ ಪ್ರಶ್ನೆಗಳಿಗೆಲ್ಲ ಆತ ಯಾವ ಬಿಡಿಯ ಇಲ್ಲದೇ ಮಾತನಾಡುತ್ತಿದ್ದ. ನಾನು ಕೇಳುತ್ತಿದ್ದುದು ಪ್ರಶ್ನೆ ಆಗಿರಲಿಲ್ಲ. ಅವನನ್ನು ಕೆದರಲು ಅವನೊಳಗೆ ನಾನು ಇಳಿದೆ ಅಷ್ಟೆ. ಅವನ ಕಥೆ ಒಂಥರ ವಿಚಿತ್ರವೇ.
ಅವನು ಕೇಳಪ್ಪನ್ ಕುಂಜು ಅಂತ. ಕೇರಳದ ವಯನಾಡ್ ಜಿಲ್ಲೆಯ ಕಲ್ಪೆಟ್ಟಾದ ಕರಿಂಕಣ್ಣಿ ಕಟ್ಟುನಾಯ್ಕ ಕಾಲನಿಯವ. ಪ್ರಾಯ ಸುಮಾರು 65 ಆಗಿರಬಹುದು ಅಂತ ಅನಿಸುತ್ತದೆ. ಬುಡಕಟ್ಟು ಸಮುದಾಯುದಲ್ಲಿ ಹುಟ್ಟಿದ ಅವನು ಆರ್ಥಿಕವಾಗಿ ಮಧ್ಯಮ ವರ್ಗದಲ್ಲಿ ಬೆಳೆದ. ತಂದೆ ಮುನ್ಸಿಪಾಲ್ಟಿ ಟ್ರ್ಯಾಕ್ಟರ್ ಓಡಿಸುತ್ತಿದ್ದನಂತೆ. ಹಾಗಾಗಿ ಸಣ್ಣ ಸರ್ಕಾರಿ ನೌಕರಿ ಸಂಬಳದಲ್ಲೇ ಸಂಸಾರ ನಡೆಯುತ್ತಿತ್ತು. ಕೇಳಪ್ಪನ್ ಅರ್ಧಕ್ಕೇ ಶಾಲೆ ಬಿಟ್ಟು ಹೆಂಚು
ಕಾರ್ಕಾನೆಯಲ್ಲಿ ಕೆಲಸಕ್ಕೆ ಸೇರಿಕೊಂಡ.
60ರ ದಶಕದ ಉತ್ತರಾರ್ಧದಲ್ಲಿ ಮತ್ತು 70ರ ದಶಕದ ಆರಂಭದಲ್ಲಿ ಮೇಲ್ವರ್ಗದ ಭೂ ಮಾಲಿಕರಿಂದ ಕ್ರೂರ ಶೋಷಣೆಗೊಳಗಾದ ವಯನಾಡಿನ ಸಾವಿರಾರು ಬುಡಕಟ್ಟು ಜನರು ಭೂ ರಹಿತ ರೈತರ ಸಂರಕ್ಷಕರಾಗಿ ನಕ್ಸಲೀಯರು ಹೊರಹೊಮ್ಮಿದರು. ಆಗ ತಿರುನೆಲ್ಲಿ ಅರಣ್ಯದಲ್ಲಿ ನಡೆದ ಪೊಲೀಸ್ ಎನ್ ಕೌಂಟರ್ ನಲ್ಲಿ ಹಲವಾರು ನಕ್ಸಲ್ ನಾಯಕರ ಸಾವಿಗೆ ಕಾರಣವಾಯಿತು. ಹಂಚಿನ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕೇಳಪ್ಪನ್ ಕೂಡ ತನ್ನ ಸಮುದಾಯ ಕ್ರೂರ ಶೋಷಣೆಗೆ ನಲುಗುತ್ತಿರುವುದನ್ನು ಹತ್ತಿರದಿಂದ ಕಂಡು ವ್ಯಗ್ರನಾಗಿದ್ದ.
ಉಳ್ಳವರಿಂದ ಕಸಿದು ನಿರ್ಗತಿಕರಿಗೆ ಹಂಚುವ ಈ ನಕ್ಸಲ್ ಚಳುವಳಿಯತ್ತ ಆಕರ್ಷಿತನಾದ. ಅದಾಗಾಗಲೇ ಯಾರಿಗೂ ಹೇಳದೇ ನಕ್ಸಲ್ ಚಳುವಳಿಯ ಭಾಗವೇ ಆಗಿಬಿಟ್ಟ. ಆಗ ಸರಕಾರದ ವಿರುದ್ಧ, ಜಮೀನುದಾರರ ವಿರುದ್ಧ ನಡೆದ ನಡೆದ ದಂಗೆಯಲ್ಲೂ ಈತನಿದ್ದ. ಕೊನೆಗೊಂದು ದಿನ ಪೊಲೀಸರ ಕೈಗೆ ಸಿಕ್ಕಿಬಿದ್ದ ತಮ್ಮ ನಕ್ಸಲ್ ತಂಡದ ನಾಯಕನ ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಿ ಎಳೆದೊಯ್ದು, ಅನಂತರ ಆತನನ್ನು ನಿಗೂಢ ಸ್ಥಳದಲ್ಲಿ ಎನ್ಕೌಂಟರ್ ಮಾಡಿಬಿಟ್ಟರು!
ಆಗ ತಮ್ಮ ತಂಡ ನಾವಿಕನಿಲ್ಲದ ನೌಕೆಯಂತಾಯ್ತು. ಆ ಸಮಯದಲ್ಲಿ ತಾನು ಮನೆಯನ್ನೂ ಬಿಟ್ಟು ತುಂಬ ದೂರ ಬಂದಿದ್ದೆ. ಅದೇ ತಂಡದಲ್ಲಿ ಇರುವ ಓರ್ವ ನಕ್ಸಲ್ ಕಾರ್ಯಕರ್ತೆಯನ್ನು ಮದುವೆಯಾದೆ. ಅವಳ ಹೆಸರು ಪಾಪಿಯಮ್ಮ ಕುಟ್ಟಿ. ಇಬ್ಬರ ಕೈನಲ್ಲೂ ಬಂದೂಕು. ನಾಡು ಮರೆತ ನಮಗೆ ಕಾಡಿನಲ್ಲೇ ಸಂಸಾರ. ನಿತ್ಯ ಬಂದೂಕು,
ಗುಂಡು, ರಕ್ತಪಾತ.. ತಮ್ಮ ಹೋರಾಟಕ್ಕೆ ಬೆಂಬಲ ಕೊಡುವವರು ಯಾರೂ ಇರಲಿಲ್ಲ.. ಪೊಲೀಸರು ತಮ್ಮ ಜಾಡನ್ನು ಗುರುತು ಹಚ್ಚಿಬಿಟ್ಟಿದ್ದರು. ತಮ್ಮಲ್ಲಿದ್ದ ಪ್ರಚೋದನಕಾರಿ ಕೆಂಪು ಕರಪತ್ರಗಳನ್ನೆಲ್ಲ ಅವರು ವಶಪಡಿಸಿಕೊಂಡರು.
ಒಂದು ದಿನ ತನ್ನ ಹೆಂಡತಿ ತನಗೆ ಬುದ್ಧಿ ಹೇಳಿ, ತಾವು ಇವನ್ನೆಲ್ಲ ಬಿಟ್ಟು ನಮ್ಮ ಸಂಸಾರ ಚೆನ್ನಾಗಿ ಕಟ್ಟಿಕೊಳ್ಳೋಣ ಅಂತ ಹೇಳಿದಳು. ಅಷ್ಟೊತ್ತಿಗಾಗಲೇ ಕಾಡಿನಲ್ಲಿ ಬಿದಿರು, ತರಗೆಲೆ,ತಾಡಪತ್ರಿಗಳಿಂದೆಲ್ಲ ಹಾಕಿಕೊಂಡ ಟಂಬಿನಲ್ಲೇ ತನ್ನ ಹೆಂಡತಿ ಗರ್ಭಿಣಿಯಾಗಿದ್ದಳು. ತನ್ನನ್ನು ನಂಬಿ ಮದುವೆಯಾದ ಅವಳ ಮಾತನ್ನು ಕೇಳಿ ನಕ್ಸಲ್ ಚಳುವಳಿ ಬಿಟ್ಟು ಕೆಲ ವರ್ಷ ಅಜ್ಞಾತ ವಾಸದಲ್ಲಿದ್ದೆವು. ಕ್ರಮೇಣ ನಾಗರಿಕ ಸಮಾಜಕ್ಕೆ ಬಂದು ತಲುಪಿದೆವು. ಇಬ್ಬರು
ಮಕ್ಕಳು ಹುಟ್ಟಿದ್ದರು. ಕಷ್ಟದಲ್ಲಿಯೇ ತಕ್ಕ ಮಟ್ಟಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದೆವು.
ಕಾಡನ್ನು ಬಿಟ್ಟು ನಾಡು ಸೇರಿದೆನಾದರೂ ತಾನು ಕಮ್ಯುನಿಷ್ಟ್ ಚಿಂತನೆಯತ್ತ ವಾಲಿದೆ. ಮಲಿಯಾಳಿಯಲ್ಲಿದ್ದ ಕೆಲ ಪುಸ್ತಕಗಳನ್ನೂ ಓದಿ ತನ್ನ ಮಿತಿಯಲ್ಲಿ ಕಮ್ಯುನಿಷ್ಟ್ ಸಿದ್ಧಾಂತದ ಕುರಿತಂತೆ ಅಧ್ಯಯನ ಮಾಡತೊಡಗಿದೆ. ಆಗಲೇ ಕೊಲ್ಲಂ, ಕೊಟ್ಟಾಯಂ, ಪಾಲಕ್ಕಾಡ್ ಮುಂತಾದೆಡೆ ಕಮ್ಯುನಿಷ್ಟ್ ಸಭೆಗಳನ್ನೂ ಸಂಘಟಿಸಿದ್ದೆ.
ಇದೇ ಸಂದರ್ಭದಲ್ಲಿ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥೀತಿ ಹೇರಿ ಜನರ ಬದುಕೇ ಅಸ್ಥಿರಗೊಳ್ಳುವಂತೆ ಮಾಡಿದರು. ಅದು 1975ರ ಜೂನ್ ಸಮಯ. ತನ್ನ ರಕ್ತದಲ್ಲಿ ಮೊದಲಿನಿಂದಲೂ ಹೋರಾಟದ ಮನೋಭಾವ ಇದ್ದರಿಂದ ಗೆಳೆಯರನ್ನು ಕಟ್ಟಿಕೊಂಡು ತುರ್ತು ಪರಿಸ್ಥಿತಿ ವಿರುದ್ಧ ಬೀದಿಗಿಳಿದೆ. ಪರಿಣಾಮ ತನ್ನನ್ನು ಎರಡುವರೆ ವರ್ಷ ತಿರುವನಂತಪುರಂ ಜೈಲಿಗಟ್ಟಿದರು. ಮತ್ತೆ ತನ್ನ ಸಂಸಾರ ಅತಂತ್ರವಾಗಿತ್ತು.

ಪ್ರೊಫೆಸರ್ ಶ್ರೀಜಿತ್ ಕೊಟ್ಟಾಯಂ ಅವರು ತನ್ನೊಟ್ಟಿಗೆ ಜೈಲಿನಲ್ಲಿದ್ದರು. ಅವರು ತುಂಬ ಇಂಗ್ಲಿಷ್ ಪುಸ್ತಕಗಳನ್ನು ಓದುತ್ತಿದ್ದರು. ಅವರು ತನ್ನನ್ನು ತುಂಬ ಪ್ರೀತಿಸುತ್ತಿದ್ದರು. ಆಗಲೇ ತನಗೆ ಪ್ರೊಫೆಸರ್ ಕೊಟ್ಟಾಯಂ ಇಂಗ್ಲಿಷ್ ಹೇಳಿಕೊಟ್ಟರು. ಓದಲು ಬರೆಯಲು ಅಷ್ಟೇ ಅಲ್ಲ, ಇಂಗ್ಲಿಷ್ ಮಾತನಾಡಲು ಕಲಿಯಲು ಆ ಎರಡುವರೆ ವರ್ಷಗಳನ್ನು ಬಳಸಿಕೊಂಡೆ. ಹಾಗಾಗಿ ನನಗೆ ಜೈಲು ಕೂಡ ಶಾಲೆಯಾಯಿತು. ಪ್ರೊಫೆಸರ್ ಕೊಟ್ಟಾಯಂ
ಅವರೇ ಗುರುಗಳಾದರು.
ಜೈಲಿನಿಂದ ಬಂದವ ಕಲ್ಪೆಟ್ಟಾದಲ್ಲಿ ಮನೆ ಹತ್ತಿರವೇ ಸಣ್ಣ ಚಹಾ ಅಂಗಡಿ, ಮಾಡಿಕೊಂಡೆ. ಅದರಲ್ಲಿ ‘ಮಲೆಯಾಳಂ ಮನೋರಮ’ ದಿನಪತ್ರಿಕೆ, ಮತ್ತಿತರ ನಿಯತಕಾಲಿಕೆಗಳನ್ನು ಮಾರಾಟ ಮಾಡಿದೆ. ದಿನಪತ್ರಿಕೆ ಇಟ್ಟುಕೊಂಡು ಬದುಕು ದೂಡಿದೆ. ಮಕ್ಕಳು ದೊಡ್ಡವರಾದರು. ಸಾಲ ಸೋಲ ಮಾಡಿ ಮಗನಿಗೆ ಎಂ.ಬಿ.ಬಿಎಸ್, ಮಗಳಿಗೆ

ಇಂಜಿನಿಯರಿಂಗ್ ಮಾಡಿಸಿದೆವು. ಮಗ ಈಗ ಚೆನ್ನೈ ನಲ್ಲಿ ಡಾಕ್ಟರ್ ಆಗಿದ್ದಾನೆ. ಸೊಸೆ ಕೂಡ ಅಲ್ಲಿಯೇ ಡಾಕ್ಟರ್. ಮಗಳು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಇಂಜಿನಿಯರ್. ಆಕೆಯ ಗಂಡ ಕೂಡ ಅಲ್ಲಿ ಇಂಜಿನಿಯರ್. ಮೂರು ವರ್ಷಗಳ ಹಿಂದೆ ತನ್ನನ್ನು ತುಂಬ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದ ಹೆಂಡತಿ ಕೊರೋನಾದಿಂದ ಕೊನೆ ಉಸಿರೆಳೆದಳು. ತಾನು ಒಬ್ಬಂಟಿಯಾದೆ.
ಇದೀಗ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ನೆಪದಲ್ಲಿ ತನ್ನ ಮನೆ, ಅಂಗಡಿ ಎಲ್ಲವೂ ರಸ್ತೆಗೆ ಹೋಯಿತು. ಒಂದುವರೆ ಕೋಟಿ ಪರಿಹಾರ ಸರಕಾರದಿಂದ ಬಂದಿತ್ತು. ಆ ದುಡ್ಡನ್ನು ಮಗ-ಮಗಳು ಇಬ್ಬರೂ ತನ್ನಿಂದ ಕಸಿದುಕೊಂಡು ಅರ್ಧರ್ಧ ಹಂಚಿಕೊಂಡರು. ನಯಾ ಪೈಸೆಯನ್ನೂ ತನಗೆ ಕೊಟ್ಟಿಲ್ಲ. ತನ್ನನ್ನು ಅನಾಥಾಶ್ರಮದಲ್ಲಿ ಬಿಟ್ಟರು. ಯಾಕೋ ಅಲ್ಲಿ ಉಳಿಯಲು ಮನಸ್ಸಾಗಲಿಲ್ಲ. ಊರೂರು ಅಲೆಯುತ್ತಿದ್ದೇನೆ. ಮರ, ಅಂಗಡಿ, ಬಸ್ ನಿಲ್ದಾಣ ಇವೇ ತನ್ನ ಮನೆ. ನದಿ ಕಂಡಲ್ಲಿ ಉಟ್ಟ ಬಟ್ಟೆಯನ್ನು ತೊಳೆದು, ಒಣಗಿಸಿಕೊಂಡು
ಮತ್ತೆ ಹೊರಡುತ್ತಿದ್ದೇನೆ. ತನ್ನ ಹೆಂಡತಿ ಕೆಲವು ನಾಣ್ಯಗಳನ್ನು ಸಂಗ್ರಹಿಸಿದ್ದಳು. ಅವುಗಳನ್ನು ಉತ್ತರ ಕಾಶಿಯ ಗಂಗಾ ನದಿಯಲ್ಲಿ ಹಾಕಬೇಕು. ಕರ್ಕೊಂಡು ಹೋಗಿ ಅಂತಿದ್ದಳು. ರಸ್ತೆ ಪರಿಹಾರದ ಹಣ ಬಂದ ನಂತರ ಹೋಗೋಣ ಅಂತ ಹೇಳಿದ್ದೆ. ಆದರೆ ರಸ್ತೆಗೇ ಬಿದ್ದುಬಿಟ್ಟೆ. ಆದರೂ ತನ್ನ ಹೆಂಡತಿ ಕೂಡಿಟ್ಟ ದುಡ್ಡಿನ ಗಂಟನ್ನು ಅವಳ ಆಸೆಯಂತೆ ಆ ನದಿಗೆ ಹಾಕಲು ಹೊರಟಿದ್ದೇನೆ. ಅಲ್ಲಿಗೆ ತಾನು ತಲುಪುತ್ತೇನೋ-ಇಲ್ಲವೋ ಗೊತ್ತಿಲ್ಲ. ಆದರೆ ಉಸಿರಿರುವವರೆಗೂ ನಡೆಯುತ್ತಲೇ ಇರುತ್ತೇನೆ. ಅಲ್ಲಿಗೆ ತಲುಪಿದರೆ ತನ್ನವಳ ದುಡ್ಡಿನ ಗಂಟನ್ನು ಗಂಗಾ ನದಿಯಲ್ಲಿ ಹಾಕುತ್ತೇನೆ. ಇಲ್ಲವಾದರೆ ತನ್ನ ಕೊನೆಯ ಹೆಜ್ಜೆ ನಿಲ್ಲುವ ನದಿಯಂಚಿಗೆ ತೆರಳಿ ಅಲ್ಲಿಯೇ ಈ ಗಂಟನ್ನು ಹಾಕುತ್ತೇನೆ.
ತನ್ನ ಹೆಂಡತಿ ತನಗಾಗಿ ಏನೆಲ್ಲ ಮಾಡಿದಳು. ಆದರೆ ಅವಳಿಗಾಗಿ ತಾನು ಏನನ್ನೂ ಮಾಡಿಲ್ಲ. ಅವಳ ಈ ಆಸೆಯನ್ನಾದರೂ ಪೂರೈಸಲು ಪ್ರಯತ್ನಿಸುತ್ತೇನೆ ಅಂತ ಹೇಳುತ್ತ , ಪುಸ್ತಕ ಅಂಗಡಿ ಹುಡುಗನತ್ತ ಮತ್ತೆ ತೆರಳಿ ಒಂದು ಸೂಜಿ ಮತ್ತು ದಾರದ ಉಂಡೆ ಕೊಂಡುಕೊಂಡ. ಕೇಳಪ್ಪನ್ ಪಂಚೆ ಅಲ್ಲಲ್ಲಿ ಹರಿದಿದ್ದುದನ್ನು ನಾನು ಗಮನಿಸಿದ್ದೆ.
ನೀವು ನಕ್ಸಲೈಟ್ ಆಂತ ನಿಗೂಢವಾಗಿದ್ದವರು. ಅನಂತರ ಕಮ್ಯುನಷ್ಟ್ ಅಂತ ಚಳುವಳಿಗಳಲ್ಲಿ ಬಾಗವಹಿಸಿದವರು. ಈಗ ನೋಡಿದರೆ ತೀರ್ಥಕ್ಷೇತ್ರ, ಕಾವಿ ಬಟ್ಟೆ, ಕೈಯಲ್ಲಿ ಪ್ಲಾಸ್ಟಿಕ್ ಕಳಸ ಇವೆಲ್ಲ ಏನು? ಯಾಕಾಗಿ? ದೇವರನ್ನು ನಂಬುತ್ತೀರಾ? ಅಂತ ಕೇಳಿದೆ.
ತೀರ್ಥಕ್ಷೇತ್ರಕ್ಕೆ ಹೋಗಲು ಹಂಬಲಪಟ್ಟಿದ್ದು ಹೆಂಡತಿಗಾಗಿಯಷ್ಟೇ. ಅವಳ ಆಸೆ ಪೂರೈಸುವುದಕ್ಕಿಂತ ತನ್ನ ಪ್ರತಿಷ್ಠೆ ಏನೂ ಇಲ್ಲ. ತಾನು ವೈಯಕ್ತಿಕವಾಗಿ ದೇವರನ್ನು ನಂಬಲ್ಲ; ತಾನು ನಂಬುವುದು ‘ಕನ್ನಡಿ’ಯನ್ನು ಮಾತ್ರ ಅಂತ ತನ್ನ ಜೋಳಿಗೆಯಲ್ಲಿದ್ದ ಸಣ್ಣ ಕನ್ನಡಿಯನ್ನು ನನಗೆ ತೋರಿಸಿದ. ತಾನು ನಿತ್ಯ ನೋಡಿ ಕೈಮುಗಿಯುವುದು ಈ
ಕನ್ನಡಿಗೆ! ತಾನು ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿ. ಅವರು ದಾರಿ ತೋರಿಸಿದಂತೆ ನಡೆಯುವುದು ಮಾತ್ರ ತನ್ನ ಕೆಲಸ. ಎಂದು ಹೇಳುತ್ತ ಕೈಯಲ್ಲಿದ್ದ ‘ಇಂಡಿಯನ್ ಎಕ್ಸಪ್ರೆಸ್’ ಪತ್ರಿಕೆಯನ್ನು ಜೋಳಿಗೆಯಲ್ಲಿ ಹಾಕಿಕೊಂಡು ಕುಮಟಾ ಹೆದ್ದಾರಿಯತ್ತ ಕೇಳಪ್ಪನ್ ಕುಂಜು ಹೆಜ್ಜೆ ಹಾಕಿದ.

ಲೇಖಕರು
ಅರವಿಂದ ಕರ್ಕಿಕೋಡಿ
ಪ್ರಧಾನ ಸಂಪಾದಕರು
ಹಣತೆವಾಹಿನಿ
Wonderful story of a revolutionary Jangama who remains a Jangama who is out to become a part of eternity
ಸರ್ ಪಾಪ ಅಲ್ವಾ ಅವನು