ಬೆಂಗಳೂರು: ನಾಡಿನ ಹಿರಿಯ ನಾಟಕಕಾರ, ರಂಗಕರ್ಮಿ ಹೂಲಿ ಶೇಖರ್ ಅವರು 2024ನೇ ಸಾಲಿನ ತೋ. ನಂಜುಂಡಸ್ವಾಮಿ ನೆನಪಿನ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ ಎಂದು ಇಲ್ಲಿಯ ಉಳ್ಳಾಲು ಗ್ರಾಮದ ತೋ. ನಂಜುಂಡಸ್ವಾಮಿ ಗೆಳೆಯರ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಫೆ. 10 ಸಂಜೆ 6 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಚಯ ಆವರಣದಲ್ಲಿ ನಡೆಯಲಿದೆ.

ಹೂಲಿ ಶೇಖರ್ ನಡೆದು ಬಂದ ಹಾದಿ : ಉತ್ತರ ಕನ್ನಡ ಜಿಲ್ಲೆಯ ಅಂಬಿಕಾನಗರದ ಹೂಲಿ ಶೇಖರ್ ಅವರು ಅವರು ಹಾವು ಹರಿದಾಡತಾವ, ಅರಗಿನ ಬೆಟ್ಟ, ರಾಕ್ಷಸ, ದಫನ್, ಗಾಂಧಿನಗರ, ಹಲಗಲಿ ಬೇಡರ ದಂಗೆ, ಸತ್ಯವತಿ, ಬಂಟ ಅಮಟೂರು ಬಾಳಪ್ಪ, ರಂಗ ಪುರಂದರ, ಅಹಿರಾವಣ-ಮಹಿರಾವಣ, ಭವ್ಯ ಕರ್ನಾಟಕ, ಬೆಕುವ ಮುಂತಾದ ಹವ್ಯಾಸಿ ನಾಟಕಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಅರಗಿನ ಬೆಟ್ಟ- ಹಿಂದಿಗೆ, ರಾಕ್ಷಸ-ತಮಿಳಿಗೆ, ಬೆಕುವ-ಮರಾಠಿಗೆ,ಅರಗಿನ ಬೆಟ್ಟ- ತುಳುವಿಗೆ ಬಾಷಂತರ ಕೂಡ ಆಗಿದೆ.
ಭೂತ ಬಂತು ಭೂತ, ಚಂಡಕ-ಪಿಂಡಕ ಪುರಾಣ, ಮಂತ್ರದ ತಾಯತ, ಮಹಾನ್ ಭಾರತ, ಟಿಪ್ಪು, ಇಮ್ಮಡಿ ಪುಲಕೇಶಿ, ಇಲಿಯಪ್ಪ ಈ ಎಲ್ಲ ಮಕ್ಕಳ ನಾಟಕಗಳನ್ನು ನಾಡಿಗೆ ಕೊಟ್ಟ ಹೂಲಿ ಶೇಖರ್ ಅವರು ಸಶಕ್ತ ರಂಗ ನಿರ್ದೇಶಕರೂ, ಕಲಾವಿದರೂ ಆಗಿದ್ದಾರೆ.

ಹೂಲಿ ಶೇಖರ್ ಅವರು ದೂರದರ್ಶನ ವಾಹಿನಿಗಳಲ್ಲಿ ಮೂಡಲಮನೆ, ಮಹಾನವಮಿ ಮುಂತಾದ ಧಾರಾವಾಹಿಗಳಿಗೆ ಕಥೆ-ಚಿತ್ರಕಥೆ-ಸಂಬಾಷಣೆಯನ್ನು ಬರೆದು ಉತ್ತರ ಕರ್ನಾಟಕದ ಭಾಷಾ ಸೊಗಡಿಗೆ ಹೊಸ ಬಾಷ್ಯ ಬರೆದರು ಎಂದೇ ಕಿರುತೆರೆ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ, ಬಿಂಬ ಪ್ರಶಸ್ತಿ, ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿ ಮುಂದಾದ ಹಲವಾರು ಪ್ರಶಸ್ತಿಗಳು ಇವರ ಅರ್ಹತೆಗೆ ಸಂದಿದ್ದು ಇದೀಗ ಬೆಂಗಳೂರಿನ ತೋ. ನಂಜುಂಡಸ್ವಾಮಿ ಪ್ರಶಸ್ತಿ ಕೂಡ ಇವರತ್ತ ಬಂದಿದೆ.

ಹೂಲಿ ಶೇಖರ್ ಅವರು ಮೂಲತಃ ಬೆಳಗಾವಿಯವರಾದರೂ ಅವರ ಕರ್ಮಭೂಮಿ ಉತ್ತರ ಕನ್ನಡ. ಈ ಜಿಲ್ಲೆಯ ಅಂಬಿಕಾನಗರ ದ ಕೆಪಿಸಿಯಲ್ಲಿ ಕಾರ್ಯನಿರ್ವಹಿಸುತ್ತ ಸುಮಾರು 35 ವರ್ಷ ಇಲ್ಲಿಯೇ ಬದುಕು ಕಟ್ಟಿಕೊಂಡಿದ್ದರು. ಅದೇ ಸಂದರ್ಭದಲ್ಲಿ ಸ್ಥಳಿಯ ರಂಗಾಸಕ್ತರೊಡಗೂಡಿ ‘ಜೋಕುಮಾರ ಸ್ವಾಮಿ ಕಲಾ ಬಳಗ ಅಂಬಿಕಾನಗರ’ ಎಂಬ
ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡು ನೂರಾರು ನಾಟಕ, ಬೀದಿನಾಟಕಗಳನ್ನು ಮಾಡಿ ಜನ ಮನ್ನಣೆಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.