ಒಳ್ಳೆಯ ಶಿಷ್ಯರು ಪ್ರಾಪ್ತರಾಗುವುದು ದೇವರ ದಯೆ : ಎಚ್.ಎನ್ ಪೈ

ಹೊನ್ನಾವರ: ಶಿಷ್ಯರಿಗೆ ಒಳ್ಳೆಯ ಗುರು ಸಿಗಲು ಹೇಗೆ ಯೋಗ ಪ್ರಾಪ್ತವಾಗಬೇಕೋ, ಅದೇ ರೀತಿ ಒಬ್ಬ ಗುರುವಾದವನಿಗೆ ಒಳ್ಳೆಯ ಶಿಷ್ಯಂದಿರು ಸಿಗಲೂ ಸಹ ಯೋಗ ಬೇಕು.

ನನಗೆ ಅಂತಹ ಒಳ್ಳೆಯ ಶಿಷ್ಯರು  ಪ್ರಾಪ್ತವಾಗಿರುವುದು ದೇವರ ದಯೆ ಎಂದೇ ಭಾವಿಸುತ್ತೇನೆ ಎಂದು ಹಳದೀಪುರದ ಆರ್.ಇ.ಎಸ್.ಪ್ರೌಢಶಾಲೆಯ ನಿವೃತ್ತ ಗಣಿತ ಶಿಕ್ಷಕ ಎಚ್.ಎನ್ ಪೈ ಹೇಳಿದರು.

ಅವರು ತಾಲೂಕಿನ ಹಳದೀಪುರದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ತಮ್ಮ ಶಿಷ್ಯರು ಹಾಗೂ ಹಿತೈಷಿಗಳಿಂದ ಗೌರವಪೂರ್ವಕವಾಗಿ ಗುರುವಂದನೆ ಸ್ವೀಕರಿಸಿ ಮಾತನಾಡುತ್ತ, ಪ್ರತಿಯೊಬ್ಬರಿಗೆ ಬದುಕಿನಲ್ಲಿ ನಿಗದಿತ ಗುರಿ ಇರಬೇಕು. ಶಿಕ್ಷಕನಾದವನು ತನ್ನ ಗುರಿಯ ಜೊತೆಗೆ ತನ್ನ ಶಿಷ್ಯರ ಬದುಕಿನ ಗುರಿಯನ್ನೂ ಸಾಧಿಸುವ ಮಹಾನ್ ವ್ಯಕ್ತಿಯಾಗಿರುತ್ತಾನೆ. ಶಿಕ್ಷಕನಿಗೆ ಆತ್ಮತೃಪ್ತಿ ಇರಬೇಕು. ಶಿಕ್ಷಕರು ಸ್ವಾಭಿಮಾನದಿಂದ


ಬದುಕಬೇಕು. ಶಿಸ್ತು ಸಂಯಮ, ವಿದ್ಯಾರ್ಥಿಗಳ ಮೇಲೆ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದರು. ಶಿಕ್ಷಕ‌ ಎಲ್ಲಿಯವರೆಗೆ ವಿದ್ಯಾರ್ಥಿಯಾಗಿ ಓದು ಮುಂದುವರೆಸುವುದಿಲ್ಲವೋ ಆತ ಶಿಕ್ಷಕನಾಗಲಾರ. ದೇವರಿಗೆ ನಾವು ಹೊಸ ಹೂವನ್ನು ನೀಡುತ್ತೇವೆಯೇ ಹೊರತೂ ಹಳತಲ್ಲ. ಹೀಗೆಯೇ ವಿದ್ಯಾರ್ಥಿಗಳಿಗೆ ನಾವು ಹೊಸ ಜ್ಞಾನವನ್ನು ನೀಡಬೇಕು. ಹೀಗಾಗಿ ಶಿಕ್ಷಕನು ಹೊಸ ಹೊಸತನ್ನು ಕಲಿತು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದರು.

ಅಭಿನಂದನಾ ನುಡಿಗಳನ್ನು ಆಡಿದ ಜನತಾ ವಿದ್ಯಾಲಯ ಮಿರ್ಜಾನಿನ ಮುಖ್ಯೋಪಾಧ್ಯಾಯರಾದ ಶ್ರೀ ವಿ.ಪಿ ಶಾನಭಾಗ ಮಾತನಾಡಿ ಎಚ್.ಎನ್ ಪೈ ಅವರನ್ನು ಶಿಸ್ತಿಗೆ, ಸಂಯಮಕ್ಕೆ, ಜ್ಞಾನ ಖಣಿಗೆ ಮಾದರಿ ಎಂಬಂತೆ ನೋಡಬಹುದು ಎಂದರು. ಸಮಾಜಸೇವಕಿ ಲತಿಕಾ ಭಟ್ಟ ಎಚ್.ಎನ್ ಪೈ ಅವರು ಪ್ರೌಢಶಾಲೆಯಲ್ಲಿ ನೀಡಿದ ಶಿಕ್ಷಣದ ರೀತಿ, ತೋರಿದ ಪ್ರೀತಿ, ಬದುಕಿಗೆ ಕಟ್ಟಿಕೊಟ್ಟ ಆದರ್ಶಗಳನ್ನು ವಿವರಿಸಿದರು.

ಹಿರಿಯ ಪತ್ರಕರ್ತ ಜಿ.ಯು ಭಟ್ಟ ಮಾತನಾಡುತ್ತ, ಎಚ್.ಎನ್. ಪೈ ಅವರು ಪ್ರಸಿದ್ಧಿ, ಪ್ರಚಾರ ಯಾವುದನ್ನೂ ಬಯಸದೇ ಗಟ್ಟಿಯಾಗಿ ತನ್ನ ಕೆಲಸ ಮಾಡಿದವರು. ಸಮರ್ಪಣಾ ಭಾವದಿಂದ ಕೆಲಸ‌ಮಾಡಿದವರು. ಗುರು ಬೆಲ್ಲವಾದರೆ ಶಿಷ್ಯ ಸಕ್ಕರೆಯಾಗುತ್ತಾನೆ. ಪೈ ಮಾಸ್ಟ್ರು ಬೆಲ್ಲ. ಶಿಷ್ಯರೆಲ್ಲಾ ಸಕ್ಕರೆ ಎನ್ನುತ್ತಾ, ಎಂದಿಗೂ ಗುರುವಿನ ಋಣ ತೀರಿಸಲು ಸಾಧ್ಯವಿಲ್ಲ, ಕೃತಜ್ಞತೆ ಹೇಳಬಹುದು, ಆ ಕೆಲಸವನ್ನು ಶಿಷ್ಯರೆಲ್ಲರೂ ಸೇರಿ ಈ ದಿನ
ಮಾಡಿದ್ದೀರಿ ಎಂದರು. ಎಲ್ಲಾ ಕಾರ್ಯದಲ್ಲಿ ಪ್ರಮಾಣಿಕವಾಗಿ ತೊಡಗಿಕೊಂಡ ಪೈ ಅವರು ಮಕ್ಕಳು ಹಸಿದಿರುವಾಗ ಪಾಠ ಮಾಡಿ ಪ್ರಯೋಜನವಿಲ್ಲ ಎಂದು ಅವರ ಹಸಿವು ನೀಗಿಸಲು ಊಟದ ವ್ಯವಸ್ಥೆ ಮಾಡಿದವರು, ತಾಯ್ತನವನ್ನು ತೋರಿಸಿದವರು ಎಂದರು.

ಉದ್ಯಮಿ ಮುರಳೀಧರ ಪ್ರಭು ಮಾತನಾಡಿ ಶಿಕ್ಷಕನೋರ್ವ ಗುರುವಾಗಲು ಒಂದು ಹಂತವನ್ನು ದಾಟಿ‌ ಮೇಲಕ್ಕೆ ಹೋಗಬೇಕು. ಪೈ ಅವರು ಆಧ್ಯಾತ್ಮಿಕ ಗುರುವಾಗಿಯೂ ಕಾಣಿಸಿಕೊಂಡಿದ್ದಾರೆ. ಶಿಕ್ಷಕನ‌ ಕೆಲಸ ಇನ್ಫಾರ್ಮೇಶನ್ ಕೊಡುವುದಲ್ಲ. ಶಿಷ್ಯರ ಬದುಕನ್ನು ಬೆಳಗಿಸುವ ಕಾರ್ಯವನ್ನು ಶಿಕ್ಷಕ ಮಾಡಬೇಕು, ಹೀಗಾಗಿ ಮಾಹಿತಿ ಹಾಗೂ ಜ್ಞಾನ ಎರಡೇ ವಿಚಾರಗಳು ಸಾಲದು. ಅದರ ಮುಂದಿನ ಹಂತವೇ ಗುರಿ. ಮಾಹಿತಿ, ಜ್ಞಾನ ಹಾಗೂ ಗುರಿಯನ್ನು ಕೊಡುವ ಶಿಕ್ಷಕರು ಪೈ ಅವರು. ಪೈ ಅಂತವರು ಶಿಕ್ಷಕರಿಗೆ ಮಾರ್ಗದರ್ಶನ ಮಾಡಲು ಮುಂದಾಗಬೇಕು ಎಂದರು.

ಡಾ. ಜಿ.ಜಿ ಸಭಾಹಿತ ಅಧ್ಯಕ್ಷತೆವಹಿಸಿ ಮಾತನಾಡಿದರು. ಎಚ್.ಎನ್ ಪೈ ಅವರನ್ನು ಶಿಷ್ಯರು ಹಾಗೂ ಹಿತೈಶಿಗಳು ಸೇರಿ ಸನ್ಮಾನಿಸಿ ಸಂಭ್ರಮಿಸಿದರು. ಪ್ರಶಾಂತ ಹೆಗಡೆ ಮೂಡಲಮನೆ ನಿರೂಪಿಸಿದರು. ಗಣೇಶ ಜೋಶಿ ಸಂಕೊಳ್ಳಿ ಸ್ವಾಗತಿಸಿದರು. ಗಣೇಶ ಹಳದೀಪುರ ವಂದಿಸಿದರು.

ಮುಂಜಾನೆ ಕಾರ್ಯಕ್ರಮದ ಕೇಂದ್ರಬಿಂದು ಎಚ್.ಎನ್.ಪೈ ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ.ಜಿ.ಎಲ್ ಹೆಗಡೆ ಉದ್ಘಾಟಿಸಿ ಮಾತನಾಡಿ ಓರ್ವ ಗುರುವನ್ನು ಮತ್ತೆ ಮತ್ತೆ ಸ್ಮರಿಸುವಂತಹ ಶಿಕ್ಷಣ ನೀಡಿದ ಗುರು ನಿಜವಾಗಿಯೂ ಸಾರ್ಥಕ್ಯ ಅನುಭವಿಸುತ್ತಾನೆ. ಎಚ್.ಎನ್ ಪೈ ಕೇವಲ ಶಿಕ್ಷಕರಾಗಿ ಕಂಡವರಲ್ಲ ಬದುಕಿನುದ್ದಕ್ಕೂ ಆದರ್ಶವನ್ನೇ ತೋರಿದವರು ಎಂದರು.
ಬೆಂಗಳೂರು ವಿಶ್ವವಿದ್ಯಾನಿಲಯದ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಪರಮೇಶ್ವರ ಪಂಡಿತ್ ಅಭಿನಂದನಾ ಗ್ರಂಥ ‘ಹರಿ ನಮನ’ ಬಿಡುಗಡೆ ಮಾಡಿದರು.

ಮಾರ್ಥೋಮಾ ಶಿಕ್ಷಣ ಸಂಸ್ಥೆಯ ಖಜಾಂಚಿ ಕೆ.ಸಿ ವರ್ಗೀಸ್ ಅತಿಥಿಯಾಗಿದ್ದರು. ಗುರುವಂದನಾ ಸಮಿತಿಯ ಸಂಚಾಲಕ ಮಂಜುನಾಥ ಭಟ್ಟ ಸುವರ್ಣಗದ್ದೆ ಅಧ್ಯಕ್ಷತೆ ವಹಿಸಿದ್ದರು.

ನಂತರ ಶ್ರೀ ಗುರು ಸುಧೀಂದ್ರ ಕಾಲೇಜ ಭಟ್ಕಳದ ಶ್ರೀನಾಥ ಪೈ ‘ವಿದ್ಯಾರ್ಥಿಗಳ ಭವಿಷ್ಯ ಸವಾಲು- ಸಾಧ್ಯತೆಗಳು’ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಾಮ ಪಂಚಾಯತ್ ಹಳದೀಪುರದ ಅಧ್ಯಕ್ಷೆ ಪುಷ್ಪಾ ಮಹೇಶ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮಾರ್ಥೋಮಾ ಶಾಲೆಯ ಮ್ಯಾನೇಜರ್ ಫಾದರ್ ಲಿಜೋ ಚಾಕೋ ವೇದಿಕೆಯಲ್ಲಿದ್ದರು.


ನಂತರ ಗ್ರಾ.ಪಂ ಉಪಾಧ್ಯಕ್ಷ ಅಜಿತ ಮುಕುಂದ ನಾಯ್ಕ ಅಧ್ಯಕ್ಷತೆಯಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸಮಾಜ ಸೇವಕಿ ಬಿ.ಕೆ‌ ಲತಿಕಾ, ವಿಶ್ವವಿದ್ಯಾಲಯ ಸಹಾಯಕ ಪ್ರಾದ್ಯಾಪಕ  ಬಾಬು ಗಿರಿಯಾ ಗೌಡ, ಪ್ರಾಂಶುಪಾಲ ರವಿ ಗೌಡ ಅವರನ್ನು ಸನ್ಮಾನಿಸಲಾಯಿತು.


ಶಶಿಧರ ದೇವಾಡಿಗ, ವಿನಾಯಕ ಮಡಿವಾಳ, ಪ್ರದೀಪ ನಾಯ್ಕ, ವಿನಾಯಕ ನಾಯ್ಕ, ಲಕ್ಷ್ಮಣ ನಾಯ್ಕ, ಗಜಾನನ ಶೇಟ್, ರಾಮದಾಸ ನಾಯ್ಕ, ರಾಮಚಂದ್ರ ಹಳದೀಪುರ, ವಸಂತ ನಾಯ್ಕ, ರವಿಗೌಡ, ಲತಾ ದೇವಾಡಿಗ, ಶೇಖರ ಹರಿಕಾಂತ, ರಾಮಾ ಗೌಡ, ಚಂದ್ರಶೇಖರ ಬಡಗಣಿ, ಶಿವಾನಂದ ಹೆಗಡೆ, ನಾಸಿರ್ ಖಾನ್, ಎಸ್.ಎನ್ ಗೋಪಾಲಕೃಷ್ಣ ಇತರರು ಸಹಕರಿಸಿದರು.

Leave a Reply

Your email address will not be published. Required fields are marked *