ನಾವು ನೋಡುವ ಮತ್ತು ನಮ್ಮ ಸಂಪರ್ಕಕ್ಕೆ ಬರುವ ಎಲ್ಲರಲ್ಲಿ ಇರುವ ಈ ಭಾವವೈವಿಧ್ಯತೆಯನ್ನು ನಾವು ಒಪ್ಪಿಕೊಳ್ಳಬೇಕು. ಹಾಗಲ್ಲದೆ ನಮಗೆ ಹೇಗೆ ಅನುಕೂಲವೋ ಹಾಗಿರಬೇಕೆಂದುಕೊಳ್ಳುವುದು ಶುದ್ಧ ತಪ್ಪು.
ಹಿಂದಿನವಾರ ಮುಲ್ಲಾ ನಸ್ರುದ್ದೀನ್ ಜ್ಞಾನೋದಯಕ್ಕಾಗಿ (Enlightement) ಹುಡುಕಾಟ ನಡೆಸಿರುವ ಕಥೆ ಓದಿದ್ದೇವೆ.
ಸಂವಹನದಡಿ ಬರುವ ಮಾತುಕತೆಯ (Negotiation) ಒಂದು ಸ್ಯಾಂಪಲ್ ಅದು ಅಷ್ಟೆ, ಇದರ ಸರಳಾರ್ಥ ಇದರಲ್ಲಿ ಯಾವುದೇ ಕಟ್ಟುನಿಟ್ಟಾದ ನೀತಿ ನಿಯಮಗಳಿಲ್ಲವೆಂಬುದು ನಾವು ಅರಿತುಕೊಳ್ಳಬೇಕು.

ಸಂದರ್ಭಕ್ಕೆ ಅನುಗುಣವಾಗಿಯೇ ನೀತಿ ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ಇದರಲ್ಲಿರುವ ಆ ಕ್ಷಣದ ಮಾತುಗಳು ನಿಮ್ಮ ಸಾಮರ್ಥ್ಯವನ್ನು ನಿರ್ಧರಿಸುತ್ತದೆ. ಆದರೆ ಆ ನಿರ್ಧಾರಗಳನ್ನು ಎಂದಿಗೂ ಸರಿ ತಪ್ಪು ಎಂದು ಆಯಾ ಕಾರಣಗಳ ಆಧಾರದ ಮೇಲೆ ವಿಶ್ಲೇಷಿಸುವುದು ಕಷ್ಟವಾಗುತ್ತದೆ. ಆದಾಗ್ಯೂ ಅಂತಹ ನಿರ್ಧಾರಗಳಿಗೆ
ಪೂರಕವಾದ ಪರ ವಿರೋಧದ ಸಂಗತಿಗಳು ಆಧಾರವಾಗಿ ದೊರಕಬಹುದು ಎಂಬುದನ್ನು ಅರಿತುಕೊಂಡೆವು.

ಸಂವಹನ ಕೇವಲ ಔನ್ನತ್ಯದ ಜೀವನದ ರುಚಿಗೆ ಮಾತ್ರ ಸೀಮಿತವಾಗಿಲ್ಲ.ಜೀವನದ ಪ್ರಾರಂಭಿಕ ಹಂತಗಳಲ್ಲಿ ಎಲ್ಲಾ ಭಾವ, ಅನುಭಾವಗಳನ್ನು ಬಿಂಬಿಸಿಕೊಂಡು ಸಂವಹನ ಕ್ರಿಯೆಗಳಲ್ಲಿ ತೊಡಗಿಕೊಂಡಾಗ ಸಂವಹನದ ಪ್ರಭಾವ, ಯಶಸ್ಸು, ಸಾಧನಾ ಅಂಶಗಳು ನಿಮಗೇ ಮನನವಾಗುತ್ತವೆ. ಅದಕ್ಕೆ ಪೂರಕವಾಗಿ ನಾವೇನು ಮಾಡಬಹುದು ಎಂಬುದರ ಕುರಿತಾಗಿ ಈ ವಾರ ಮಾಹಿತಿಯನ್ನು ಪಡೆದುಕೊಳ್ಳೋಣ.

ನೆನಪಿನಲ್ಲಿಡಬೇಕಾದ ಅಂಶಗಳು:
● ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಿ.
● ವಿಷಯದ ಬಗ್ಗೆ ಅಂಕಿ ಅಂಶಗಳನ್ನು ಸಂಗ್ರಹಿಸಿರಿ.
● ಇತ್ತೀಚಿನ ಆಗುಹೋಗುಗಳ ಬಗ್ಗೆ ಗಮನಹರಿಸಿರಿ.
● ಅಂತಿಮ ನಿರ್ಧಾರಕ್ಕೆ ಆತುರತೆ ತೋರಬೇಡಿ.
● ನಿಮಗೆ ತಿಳಿದ ವಿಷಯವನ್ನು ಎಳೆ ಎಳೆಯಾಗಿ ಬಿಡಿಸುತ್ತಾ ಬನ್ನಿರಿ.
● ನಿಮ್ಮ ಎದುರುದಾರರು ಹೇಳಬಹುದಾದ ವಿಷಯಕ್ಕೆ ಅಥವಾ ಕೇಳಬಹುದಾದ ಪ್ರಶ್ನೆಗೆ
ನಿಮ್ಮ ಮಾಹಿತಿ ಕಣಜದಿಂದ ಉತ್ತರವನ್ನು ಆಗಾಗ ಹೆಕ್ಕಿ ಹೆಕ್ಕಿ ತೆಗೆಯುತ್ತಿರಿ.

● ನಿಮ್ಮ ಜ್ಞಾನ ಭಂಡಾರ ಬರಿದಾಗದಂತಿರಲಿ. ನಿಮ್ಮ ಗುರು ಸ್ಥಾನದಲ್ಲಿರುವವರೊಂದಿಗೆ, ಅತ್ಯಂತ ಹಿರಿಯರೊಂದಿಗೆ ವಾದ ವಿವಾದಗಳಲ್ಲಿ ತೊಡಗಿಸಿಕೊಳ್ಳಬೇಡಿರಿ.
● ಸಮಾನಾಂತರ ವೇದಿಕೆಗಳಲ್ಲಿ (ಪ್ಲಾಟ್ ಫಾರಂ) ಮಾತ್ರ ಮಾತುಕತೆ ಸಾಧ್ಯ ಎಂಬುದು ನಿಮ್ಮ ಗಮನದಲ್ಲಿರಲಿ.
● ಇತರರ ಸಹಾಯ ಪಡೆಯುವ ಅವಕಾಶ ಸಮನಾಗಿರಲಿ.
ಆಲ್ಬರ್ಟ್ ಐನ್‌ಸ್ಟೈನ್ ಒಂದೆಡೆ ಹೇಳಿರುವಂತೆ ಇದರಲ್ಲಿ ಬುದ್ಧಿವಂತಿಕೆಗಿಂತ (Knowledge) ಆಲೋಚನಾ ಸಾಮರ್ಥ್ಯ (Imagination)ಕ್ಕೆ ಹೆಚ್ಚಿನ ಮೌಲ್ಯವಿರುತ್ತದೆ ಎಂಬುದು ತಿಳಿದಿರಲಿ.
ಯಾವುದೇ ನಿರ್ಧಾರವೂ ಅಂತಿಮವಲ್ಲ ಎನ್ನುವ ಸತ್ಯ ನಿಮ್ಮೊಳಗೆ ಸದಾ ಜಾಗೃತವಾಗಿರಲಿ.
ಜೀವನದ ಪರಮ ಸತ್ಯದ ಈ ಕೆಳಗಿನ ಅರಿವಿನ ಬಗ್ಗೆ ನಿರಂತರವಾಗಿ ತಿಳಿದುಕೊಳ್ಳುತ್ತಿರಿ. ಉದಾಹರಣೆಗೆ ಇಂತಹ ಒಂದು ಅಂಶ ಹೀಗಿದೆ.. “ಯಾವುದು ಬದಲಾಗುವುದೋ ಅದು ಶಾಶ್ವತವಲ್ಲ. ಹಾಗೆಯ ಯಾವುದು ಬದಲಾಗುವುದಿಲ್ಲವೋ ಅದೂ ಶಾಶ್ವತವಲ್ಲ”
ಕೊನೆಗೊಮ್ಮೆ,….
⮚ ಗೆಲ್ಲಲೇಬೇಕೆಂಬ ಹಠಬೇಡ.
⮚ ಸಂವಹನ ಕ್ರಿಯೆಗಳಲ್ಲಿ ಸರಳತೆಯಿರಲಿ.
⮚ ಆಗಾಗ ಹೊಸತನವನ್ನು ಅಳವಡಿಸಿಕೊಳ್ಳಿರಿ.
⮚ ವಾದ-ವಿವಾದಗಳೇ ಜೀವನವಲ್ಲ ಎಂಬ ತಿಳುವಳಿಕೆ ಜಾಗೃತವಾಗಿರಲಿ.
⮚ ಅಂತಿಮದಿಂದ ಪ್ರಾರಂಭ; ಪ್ರಾರಂಭದಿಂದ ಅಂತಿಮ ಇದಕ್ಕೆ ಕೊನೆ ಇಲ್ಲ ಇದು ತಿಳಿದಿರಲಿ.

ನಾನು ಹೇಳುವುದನ್ನೇ ಅವರು ಕೇಳಬೇಕೆಂಬ ಹಠ ಬೇಡ.ತಪ್ಪು ಪರಿಕಲ್ಪನೆಗಳು ಮತ್ತು ಪರಸ್ಪರ ದೂಷಣೆಗಳಿಂದ ಮುಕ್ತವಾಗಿರುವಂತಹ ಚರ್ಚೆಗಳ ಕೌಶಲ್ಯವನ್ನು ಕರಗತ ಮಾಡಿಕೊಂಡಾಗ ಮಾತ್ರ ವ್ಯಕ್ತಿಯಾಗಲಿ, ಸಮಾಜವಾಗಲಿ, ತಮ್ಮಗಳ ಮನಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವಂತಹ ಸ್ಥಿತಿ ಸಾಧ್ಯವಾಗುತ್ತದೆ. ಇದೆ ಅತ್ಯುತ್ತಮ ಕೌಶಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡುತ್ತದೆ ಮತ್ತು ನಮ್ಮಗಳ ಜೀವನಗಳು ಹಸನಾಗುತ್ತವೆ.
ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಷ್ಟು
ಒಪ್ಪಿರ್ದೊಡದು ಭೋಜ್ಯವಂತು ಜೀವಿತಂ॥
ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ
ಯಿಪ್ಪತ್ತು ಸೇರೆರುಚಿ- ಮಂಕುತಿಮ್ಮ.॥
ನಾವು ಮಾಡುವ ಊಟದಲ್ಲಿಉಪ್ಪು, ಹುಳಿ, ಕಾರ, ಸಿಹಿ, ಸರಿಯಾದ ಪ್ರಮಾಣದಲ್ಲಿ ಒಪ್ಪವಾಗಿ ಇದ್ದರೆ ಹೇಗೆ ತೃಪ್ತಿಯಿಂದ ಭೋಜನಮಾಡಬಹುದು.ಹಾಗೆಯೇ ಬದುಕಿನಲ್ಲೂ ಸರಿ, ತಪ್ಪು, ಪೆದ್ದುತನ, ಜಾಣ್ಮೆ, ಅಂದ, ಕುಂದು, ಮುಂತಾದ ಹತ್ತಾರು ಬಗೆಯ ಭಾವಗಳು ಸೇರಿದರೆ ಜೀವನವೂ ನೀರಸವಾಗದೆ ‘ಸಮರಸ’ವಾಗಿರುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಾವು ಉಣ್ಣುವ ಆಹಾರ ರುಚಿಯಾಗಿರುವಂತೆ ಮಾಡಲು ನಾವು ಎಷ್ಟು ಬಗೆಯ ಮಿಶ್ರಣ (combinations) ಗಳನ್ನು ಉಪಯೋಗಿಸುತ್ತೇವೆ. ಮಿಶ್ರಣದ ವ್ಯತ್ಯಯವಾದರೆ ಬಯಸಿದ ರುಚಿಬಾರದೆ ಬೇರೆ ಏನೋ ರುಚಿ ಬರುತ್ತದೆ. ಆಗ ತೃಪ್ತಿ ಇರುತ್ತದೋ ಇಲ್ಲವೋ ಗೊತ್ತಿಲ್ಲ. ಉಪ್ಪು, ಹುಳಿ, ಕಾರಗಳ ಸರಿಯಾದ ಮಿಶ್ರಣವೇ ಅಡಿಗೆಯನ್ನು “ಬೋಜ್ಯ”
ವೆಂದೆನಿಸುತ್ತದೆ. ಅಂತಹ ಊಟವನ್ನು ಮಾಡಿದಾಗ ಒಂದು ತೃಪ್ತಿಯುಂಟಾಗುತ್ತದೆ. ಮೂಲತಃ ಪ್ರತಿಯೊಬ್ಬರೂ ದುಡಿಯುವುದೂ ಸಂಪಾದನೆ ಮಾಡುವುದೂ ಅಂತಹ ಒಂದು ತೃಪ್ತಿಗಾಗಿ.
ಅದೇ ರೀತಿ ಬದುಕಿನಲ್ಲೂ ಸಹ ಸರಿ-ತಪ್ಪುಗಳು, ಜಾಣ್ಮೆ-ಬೆಪ್ಪುತನಗಳು, ಕುಂದು- ಕೊರತೆಗಳು, ನಮ್ಮೆಲ್ಲರಲ್ಲೂ ಇದ್ದು, ಅವುಗಳು ಬೇರೆ ಬೇರೆ ಪ್ರಮಾಣಗಳಲ್ಲಿ ಬೆರೆತು ಇದ್ದರೆ, ಜಗತ್ತಿನ ವೈವಿಧ್ಯತೆಗೆ ಕಾರಣವಾಗಿ ಬದುಕುಸೊಗಸಾಗಿರುತ್ತದೆ. ಹಾಗೆ ವೈವಿಧ್ಯತೆ ಇಲ್ಲದೆ ಎಲ್ಲರೂ ಸಮರಾಗಿ ಇದ್ದರೆ ಸ್ವಾರಸ್ಯವಿಲ್ಲದೆ ಒಂದು ರೀತಿಯ ನೀರವತೆ ತುಂಬಿಬಿಡುತ್ತದೆ. ಯಾವ ಉತ್ಸಾಹವೂ ಇಲ್ಲದೆ, ಜೀವನ ನೀರಸವಾಗಿಬಿಡುತ್ತದೆ, ಆದ್ದರಿಂದ
ನಾವು ನೋಡುವ ಮತ್ತು ನಮ್ಮ ಸಂಪರ್ಕಕ್ಕೆ ಬರುವ ಎಲ್ಲರಲ್ಲಿ ಇರುವ ಈ ಭಾವವೈವಿಧ್ಯತೆಯನ್ನು ನಾವು ಒಪ್ಪಿಕೊಳ್ಳಬೇಕು. ಹಾಗಲ್ಲದೆ ನಮಗೆ ಹೇಗೆ ಅನುಕೂಲವೋ ಹಾಗಿರಬೇಕೆಂದುಕೊಳ್ಳುವುದು ಶುದ್ಧ ತಪ್ಪು. ನಾವು ಈ ವೈವಿಧ್ಯತೆಯನ್ನು ಕಾಣಬೇಕು, ಒಪ್ಪಿಕೊಂಡು ಅನುಭವಿಸಬೇಕು. ಪೂರ್ವಾಗ್ರಹಪೀಡಿತರಾಗದೆ, ಇಲ್ಲದ್ದನ್ನು ಬಯಸಿ ನಮ್ಮ ನಮ್ಮ ಬದುಕನ್ನು ನರಕವಾಗಿಸಿಕೊಳ್ಳದೆ,ಇರುವುದನ್ನು ಇರುವಂತೆಯೇ ಸ್ವೀಕರಿಸಿ ಆನಂದದಿಂದಿರಬೇಕು.
ಸ್ವಲ್ಪ ಸ್ವಲ್ಪವಾಗಿ ಉಪ್ಪು, ಹುಳಿ, ಕಾರ ಮತ್ತು ಸಿಹಿಗಳು ಸೇರಿದರೆ ಹೇಗೆ ಸೊಗಸಾದ ಮತ್ತು ರುಚಿಯಾದ ಊಟ ತಯಾರಾಗುತ್ತದೆಯೋ, ಹಾಗೆಯೇ ತಪ್ಪು, ಸರಿ, ಬೆಪ್ಪು, ಜಾಣತನ, ಚೆಲುವು ಮತ್ತು ಕೊರತೆಗಳ ಹತ್ತಾರು ಬೇರೆ ಬೇರೆ ಗುಣಗಳು ಸೇರಿದರೆ ಜೀವನವು ರುಚಿಕರವಾಗಿರುತ್ತದೆ. ಇಲ್ಲದೇ ಇದ್ದರೆ ಅದು ಬಹು ನೀರಸವಾಗಿ ಹೋಗುತ್ತದೆ.

ಇಂದಿನ ದಿನದಲ್ಲಿ ವ್ಯಾವಹಾರಿಕ ಪ್ರಪಂಚದ ಸಂದರ್ಭಗಳಲ್ಲಿ ವ್ಯಕ್ತಿಯೊಬ್ಬನ ಸಂವಹನ ಸಾಮರ್ಥ್ಯವೇ ಹೆಚ್ಚು ಗಣನೆಗೆ ಬರುತ್ತಿದ್ದು, ಅಲ್ಲಿ ಸ್ಪಷ್ಟವಾದ ಮಾತುಗಾರಿಕೆ, ಗಹನವಾಗಿ ಕೇಳಿಸಿಕೊಳ್ಳುವಿಕೆ, ಸಹ್ಯವಾಗಬಹುದಾದ ಆಂಗಿಕ ಭಾಷೆ ಇವೆಲ್ಲವನ್ನೂ ಸೇರಿಸಿಕೊಂಡರೆ ಉಳಿದ ವ್ಯಕ್ತಿಗಳಿಗಿಂತ ಆತ ಸರ್ಧೆಯಲ್ಲಿ ಸದಾ ಉನ್ನತ
ಸ್ಥಾನದಲ್ಲಿರಬಲ್ಲ. ಸ್ವಪ್ರಯತ್ನದಿಂದ ಸಂವಹನ ಜಾಣ್ನೆಯನ್ನು ವೃದ್ಧಿಸಿಕೊಳ್ಳಬಹುದಾಗಿದ್ದು, ಇದರಿಂದ ಉತ್ತಮ ಮಾತುಗಾರನು ಸಮಾಜದಲ್ಲಿ, ಕುಟುಂಬದಲ್ಲಿ, ವೃತ್ತಿ ಕ್ಷೇತ್ರದಲ್ಲಿ ಪ್ರಶಂಸೆಗೆ ಒಳಗಾಗುತ್ತಾನೆ. ಸಂವಹನ ಕ್ಷೇತ್ರದಲ್ಲಿ
ಪ್ರತಿನಿತ್ಯವೂ ಕಲಿಯುವುದು ಮತ್ತು ಅಳವಡಿಸಿಕೊಳ್ಳುವುದು ಬಹಳಷ್ಟಿದ್ದು, ಯಾವ ವ್ಯಕ್ತಿ ಆಗಿಂದಾಗ್ಗೆ ತನ್ನ ಸ್ವಭಾವವನ್ನು ಸ್ವಯಂ ಪರಿಶೀಲನೆಗೆ ಒಳಪಡಿಸಿಕೊಳ್ಳುತ್ತಿರುತ್ತಾನೋ ಆತ ಮಾತನ್ನು ಗೆಲ್ಲಬಲ್ಲ ಮಾತನ್ನು ಗೆದ್ದವನು ಪ್ರಪಂಚವನ್ನೇ ಗೆಲ್ಲಬಲ್ಲ ಎನ್ನಬಹುದು.ಇದು ಔನ್ನತ್ಯದ ಜೀವನದ ರುಚಿಗೆ ಮಾತ್ರ ಸೀಮಿತವಾಗಿಲ್ಲ. ಜೀವನದ ಪ್ರಾರಂಭಿಕ ಹಂತಗಳಲ್ಲಿ ಎಲ್ಲಾ ಭಾವ, ಅನುಭಾವಗಳನ್ನು ಬಿಂಬಿಸಿಕೊಂಡು ಸಂವಹನ
ಕ್ರಿಯೆಗಳಲ್ಲಿ ತೊಡಗಿಕೊಂಡಾಗ ಸಂವಹನದ ಪ್ರಭಾವ, ಯಶಸ್ಸು, ಸಾಧನಾ ಅಂಶಗಳು ನಿಮಗೇ ಮನನವಾಗುತ್ತವೆ.
ಈ ರೀತಿ ಸಂವಹನ ಕೌಶಲ್ಯಗಳ ಕಲಿಕೆ, ಅಳವಡಿಕೆಗಳೇ ಜೀವನವನ್ನು ಸುಂದರ ಸಂಗಮದತ್ತ ಕರೆದೊಯ್ಯುವ ಶಕ್ತಿಶಾಲಿ ಅಂಶವಾಗಿ ಕೊನೆಗಾಲದವರೆಗೆ ಉಳಿಯುತ್ತದೆ.
( ಮಾತು ಮುತ್ತು ಸಂವಹನಕ್ಕೆ ಸಂಬಂಧಿಸಿದಂತೆ ಕೆಲವು ಕಂತುಗಳಲ್ಲಿ ಬರೆದ ಬರೆಹ ಇಲ್ಲಿಗೆ ಮುಗಿಯಿತು, ನಿಮ್ಮ ಪ್ರತಿಕ್ರಿಯೆಗೆ ಪ್ರೀತಿಯ ಸ್ವಾಗತ ; ಕಾಯುತ್ತಿರುತ್ತೇನೆ. ಆರ್ ಕೆ ಬಾಲಚಂದ್ರ. ಮುಂದಿನ ವಾರ ಹೊಸ ಅಂಕಣದೊಂದಿಗೆ ಭೇಟಿಯಾಗೋಣ. – ಆರ್.ಕೆ. ಬಾಲಚಂದ್ರ, ಅಂಕಣಕಾರ. )

ಲೇಖಕರು :
ಆರ್.ಕೆ. ಬಾಲಚಂದ್ರ
ಬೆಂಗಳೂರು