ಯಾರು ಆ ಅಧಿನಾಯಕ… ?

FLAG

ಈ ಬಾರಿ ನಾನು 75ನೇ ಗಣರಾಜ್ಯೋತ್ಸವನ್ನು ಆಚರಿಸಿದೆವು… ಶಾಲೆ ಕಾಲೇಜು, ಸರಕಾರೀ ಕಚೇರಿ, ಅಷ್ಟೇ ಏಕೆ, ಖಾಸಗೀ ಸಂಸ್ಥೆಗಳೂ ತಮ್ಮ ತಮ್ಮ ಸ್ಥಳಗಳಲ್ಲಿ ಗಣರಾಜ್ಯೋತ್ಸವವನ್ನು ಧ್ವಜ ಹಾರಿಸುವುದರ ಮೂಲಕ ಆಚರಿಸಿದವು..

ತ್ರಿವರ್ಣ ಧ್ವಜ ಬಣ್ಣ ಬಣ್ಣದ ಹೂವುಗಳನ್ನು ಚಿಮ್ಮಿಸಿ ನಭದಲ್ಲಿ ವಿರಾಜಿಸುತ್ತಿದ್ದಂತೆ… ಎದೆಯುಬ್ಬಿಸಿ ನಿಂತು… ಸೆಲ್ಯೂಟ್ ಹೊಡೆದು ವಂದನೆ ಅರ್ಪಿಸುತ್ತೇವೆ… ಒಟ್ಟಿಗೆ ರಾಷ್ಟ್ರಗೀತೆಯನ್ನು ಹೇಳುತ್ತೇವೆ… ಹಿರಿಯರ ಹಿತನುಡಿಗಳನ್ನು ಕೇಳುತ್ತೇವೆ…  ಈ ಮೂಲಕ ರಾಷ್ಟ್ರಕಂಡ ನಾಯಕರುಗಳನ್ನು ನೆನೆಯುತ್ತೇವೆ… ಸಿಹಿ ಹಂಚಿ ಸಂಭ್ರಮಿಸುತ್ತೇವೆ… ಇದಾದ ನಂತರ ಇನ್ನೊಂದು ಖುಷಿಯ ವಿಷಯವೆಂದರೆ…  ಎಲ್ಲರಿಗೂ ಅಂದು ರಜೆ… ಈ ಪ್ರಕ್ರಿಯೆ ಪ್ರತೀ ರಾಷ್ಟೀಯ ಹಬ್ಬಗಳಲ್ಲೂ ನಮ್ಮ ಮದ್ಯೆ ನಡೆದೇ ಇರುತ್ತದೆ….

ಇವೆಲ್ಲದರ ಮದ್ಯೆ ಒಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ… ಯಾಕೆ ನಾವು ರಾಷ್ಟ್ರಗೀತೆಯನ್ನು ಹಾಡಬೇಕು ? ಎಂದುದು…

ನಮ್ಮ ಮದ್ಯೆ ಪಟ್ಟನೆ ಉತ್ತರ ಬಂದು ಬಿಡಬಹುದು… ” ಅರೆ.. ಅದು ರಾಷ್ಟ್ರಗೀತೆ…. ದೇಶಕ್ಕೆ ಗೌರವ ಕೊಡಬೇಕೆಂದರೆ ಹಾಡಲೇ ಬೇಕು… ಅದು ಹಾಗೆ ! ಅದು ಹೀಗೆ… !” ಎಂಬಿತ್ಯಾದಿ…

ನಮ್ಮ ರಾಷ್ಟ್ರಗೀತೆಯ ಮೊದಲ ಸಾಲು ಈ ರೀತಿ ಇದೆ…
” ಜನ ಗಣ ಮನ ಅಧಿನಾಯಕ ಜಯ ಹೇ…. ” , ಅದೇ ರೀತಿ  ಕೊನೆಯ ಸಾಲೂ ಕೂಡ ” ಜಯ ಜಯ ಜಯ ಹೇ …. ” ಎಂತಲೇ ಮುಗಿಯುತ್ತದೆ… !
ಅಂದರೆ ಒಬ್ಬ ಅಧಿನಾಯಕನಿಗೆ ಜಯಕಾರ ಕೂಗಲಾಗುತ್ತಿದೆ ಎಂಬುದು ನಮಗೆ ತಿಳಿಯುತ್ತದೆ… ಯಾಕೆ ಅವನಿಗೆ ಜಯಕಾರ ಕೂಗುವ ಹಾಡನ್ನು ರಾಷ್ಟ್ರಗೀತೆ ಎಂದು ಹಾಡುತ್ತೇವೆ ?  ಆದರೆ ಆ ಅಧಿನಾಯಕ ಯಾರು… ? ದೇಶ ಕಾಯುವ ಸೈನಿಕನೇ ? ದೇಶದ ಪ್ರಧಾನಿ ಅಥವಾ ಯಾವುದೊ ಜನಪ್ರತಿನಿಧಿಯೇ ? ಸ್ವತಂತ್ರ ಹೋರಾಟಗಾರನೇ ? ಯಾವುದೂ ಕ್ರಿಕೆಟಿಗ ಅಥವಾ ಕ್ರೀಡಾಳುವೆ ? ಅಥವಾ ಇನ್ನ್ಯಾರು ?

ಇದನ್ನು ಯೋಚಿಸುವ ಮೊದಲು, ರಾಷ್ಟ್ರಗೀತೆಯ ಅರ್ಥವನ್ನೊಮ್ಮೆ ನೋಡೋಣ..


” ಎಲ್ಲ ಜನರ ಮನವನ್ನು ಆಳುವ ನಾಯಕನೇ… ಭಾರತ ದೇಶದ ಭವಿಷ್ಯ ರೂಪಿಸುವವನೇ …. ನಿನಗೆ ಜಯವಾಗಲಿ…. ಭಾರತದ ಎಲ್ಲ ಭೂಪ್ರದೇಶಗಳು ( ಪಂಜಾಬ , ಸಿಂಧು , ಗುಜರಾತ, ದ್ರಾವಿಡ ನಾಡು  , ಒರಿಸ್ಸಾ ,  ಬಂಗಾಳ) ನಿನ್ನ ಗುಣಗಾನ ಮಾಡುತ್ತಿದೆ… ವಿಂದ್ಯ ಪರ್ವತಗಳು , ಹಿಮಾಲಯ ಪರ್ವತಶ್ರೇಣಿಗಳಲ್ಲಿ ನಿನ್ನ ಹೆಸರಿನ ಪ್ರತಿಧ್ವನಿ ಕೇಳುತ್ತಿದೆ… ಯಮುನಾ , ಗಂಗಾ ಈ ಎಲ್ಲ ನದಿಗಳ ಅಲೆಗಳು ನಿನ್ನ ಹೆಸರನ್ನು ಬರೆಯುತ್ತಿವೆ… ಸರ್ವ ಜನರ ಹಿತ ಬಯಸುವ ನಿನ್ನ ಧೋರಣೆಗೆ ಜಯ ಸಿಗಲಿ ಎಂದು ಆಶಿಸುತ್ತಿವೆ… ನಿನ್ನ ವಿಜಯದ ಗಾಥೆಯನ್ನು ಹಾಡಿವೆ… ಹಾಡಲಿವೆ.. . ಇಡೀ ದೇಶದ ಜನರ ಮನವನ್ನು ಆಳುವ ಅಧಿನಾಯಕನೇ… ಭಾರತದ ಭವಿಷ್ಯವನ್ನು ಬರೆಯುವ ವಿಧಾತನೆ… ನಿನಗೆ ಜಯವಾಗಲಿ….  ನಿನಗೆ ಜಯವಾಗಲಿ….  ನಿನಗೆ ಜಯವಾಗಲಿ…. “
ಇದು ನಮ್ಮ ರಾಷ್ಟ್ರಗೀತೆಯ ಸಾರಾಂಶ..

ಹೀಗಿರುವಾಗ ಆ ಅಧಿನಾಯಕ ಯಾರು ? ಬೇರಾರೂ ಅಲ್ಲ… ಅದು ನಾವೇ…!  ಅಥವಾ… ನೀವೇ …! ರಾಷ್ರ್ಟದ ಪ್ರತಿಯೋರ್ವ ಪ್ರಜೆಯೇ ಆ ಅಧಿನಾಯಕ…!
ತನ್ನ ಕುಟುಂಬ ದಿಂದ ಪ್ರಾರಂಭಿಸಿ.. ತನ್ನ ಊರು… ತನ್ನ  ದೇಶ… ಇವುಗಳ ಮಹತ್ವ ಅರಿತು ಅದರ ಸರ್ವತೋಮುಖ ಅಭಿವ್ರದ್ದಿಗೆ ಶ್ರಮಿಸುವ ಹಾಗು ಆ ನಿಟ್ಟಿನಿನಲ್ಲಿ ತನ್ನ ಕಾಯಕದಲ್ಲಿ ತೊಡಗಿರುವ ಪ್ರತಿಯೋರ್ವನೂ ಅಧಿನಾಯಕನೇ… ಆ ವ್ಯಕ್ತಿ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ತನ್ನ ಸುತ್ತಲಿನ ಸಮಾಜಕ್ಕೆ ಯಾವುದೋ ರೀತಿಯಲ್ಲಿ ನೆರವಾಗುತ್ತಿರುವ ಸರಕಾರೀ ಅಥವಾ ಖಾಸಗಿ ನೌಕರ ಇರಬಹುದು .. ಅನ್ನ ಕೊಡುವ ರೈತ ಅಥವಾ ಹೋಟೆಲ್ ಉದ್ಯಮಿ ಇರಬಹುದು… ದೇಶ ಕಾಯುವ ಸೈನಿಕ ಅಥವಾ ಆರಕ್ಷಕ ಇರಬಹುದು… ನ್ಯಾಯಾಧೀಶ ಅಥವಾ  ವಕೀಲನೆ ಇರಬಹುದು … ಸಮಾಜದ ಆಗುಹೋಗುಗಳನ್ನು ಜನರಿಗೆ ತಿಳಿಸುತ್ತ ಜಾಗ್ರತ ಸಮಾಜ ಸೃಷ್ಟಿಸುವ ಪತ್ರಕರ್ತನಿರಬಹುದು… ಪ್ರಯಾಣಿಗರ ಅಥವಾ ಸರಕುಗಳ ಜವಾಬ್ದಾರಿ ಹೊತ್ತು ವಾಹನ ಚಲಾಯಿಸುವ ವಾಹನ ಚಾಲಕರಿರಬಹುದು… ಸಂದೇಶ ರವಾನೆ ಮಾಡುವವರಿರಬಹುದು… ತಂತ್ರಜ್ಞಾನದ ಮೂಲಕ ಹಲವು ಜನರ ಸಮಸ್ಯೆಗಳನ್ನು ಸುಲಭಗೊಳಿಸುವ ತಂತ್ರಜ್ಞರಿರಬಹುದು… ಊರಿನ…. ನಾಡಿನ ಜನರ ಹಿತರಕ್ಷಣೆಯ ಜವಾಬ್ದಾರಿ ಹೊತ್ತ ಜನಪ್ರತಿನಿಧಿ ಇರಬಹುದು… ಈ ಎಲ್ಲ ರಂಗಗಳಲ್ಲಿ ದುಡಿವ ಜನರ ಕಾಲು ನೋಯದಿರಲಿ ಎಂದು ಚಪ್ಪಲಿ ಮಾಡುವವ ಅಥವಾ ಹೊಲಿಯುವವ ನೇ ಇರಬಹುದು….  ಹಾಗೆಯೇ … ಭವಿಷ್ಯದ ಹಲವು ಕನಸುಗಳನ್ನು ಹೊತ್ತು  ಸ್ಕೂಲ್ ಬ್ಯಾಗ್ ಹಾಕಿ ಶಾಲೆಗೆ  ಹೊರಟ ಪುಟ್ಟ ವಿದ್ಯಾರ್ಥಿಯೆ ಆಗಿರಬಹುದು… ಹೀಗೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಭವ್ಯ ಭಾರತದ ನಿರ್ಮಾಣಕ್ಕೆ ಕೊಡುಗೆದಾರರೇ ಆಗಿದ್ದಾರೆ …. ಅಲ್ಲವೇ …. ?

ದಿನಬೆಳಗಾದರೆ , ನಮ್ಮ ರಾಷ್ಟ್ರಗೀತೆಯ ಈ ಸಾಲುಗಳನ್ನು ಒಮ್ಮೆ ನೆನಪು ಮಾಡಿಕೊಂಡರೆ… ನಮಗಿರುವ ಅಧಿನಾಯಕ ಪಟ್ಟಕ್ಕಿರುವ ಜಯಕಾರ  ನಮ್ಮ ದಿನನಿತ್ಯದ ಕಾಯಕದಲ್ಲಿ ಹುರುಪು ಹೆಚ್ಚಿಸೀತು… ಪರಿಣಾಮಕಾರಿಯಾಗಿ ಜವಾಬ್ದಾರಿ ನಿರ್ವಹಿಸಲು ಪ್ರೇರೆಪಿಸೀತು…! ಅಲ್ಲವೇ ?

ಲೇಖಕರು :
ರಾಘವೇಂದ್ರ ಲಕ್ಷ್ಮೇಶ್ವರ್

Founder & Creative Head
Grapito Desings (Design and Marketing agency)

One thought on “ಯಾರು ಆ ಅಧಿನಾಯಕ… ?

  1. ಹಕ್ಕುಗಳ ಜೊತೆ ಜೊತೆಗೆ ತಮ್ಮ ತಮ್ಮ ಕರ್ತವ್ಯ ಅರಿತು ನಡೆದರೆ ನಿಜವಾದ ಅರ್ಥದಲ್ಲಿ ಅವರು ಅಧಿನಾಯಕರೇ! ಮಾಡುವ ಕಾಯಕ ಯಾವುದೇ ಇರಲಿ ಅರ್ಪಣಾ ಮನೋಭಾವನೆಯಿಂದ ಮಾಡುವ ಕಾಯಕಯೋಗಿಯೇ ಅಧಿನಾಯಕ… ಅರ್ಥ್ ಪೂರ್ಣ ಲೇಖನ. 👍

Leave a Reply

Your email address will not be published. Required fields are marked *