ಯಕ್ಷಗಾನದ ಒಂದೊಂದೇ ಅಂಗಗಳಿಗೆ ಕತ್ತರಿ ಬೀಳುತ್ತಿರುವುದು ದುರಂತ

(…ಹಿಂದಿನ ಸಂಚಿಕೆಯಿಂದ ಮುಂದುವರೆದದ್ದು : ಭಾಗ -5)

ಶತಾವಧಾನಿ ಆರ್.ಗಣೇಶ ಅವರು ಕೂಟ ಕಲೆಯಾದ ಯಕ್ಷಗಾನವನ್ನು ಕುಗ್ಗಿಸಿ ‘ಯುಗಳ ಯಕ್ಷಗಾನ’, ‘ಏಕ ವ್ಯಕ್ತಿ ಯಕ್ಷಗಾನ’ ಪ್ರಯೋಗ ಮಾಡಿದರು. ಅದನ್ನೊಂದು ಪ್ರಯೋಗವಾಗಿ ಮೆಚ್ಚಿಕೊಳ್ಳಬಹುದೇ ವಿನ: ಯಕ್ಷಗಾನ ರಂಗಭೂಮಿಗೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ.

ಮಾರಕ ಬೆಳವಣಿಗೆಗಳು :

೧ ) ಅಸಮತೋಲನ:
                         ಯಕ್ಷಗಾನದ ಒಂದೊಂದೇ ಅಂಗಗಳು ಊದಿಕೊಳ್ಳುವುದಕ್ಕೆ ಆರಂಭವಾಗಿ ಹಲವಾರು ವರ್ಷಗಳೇ ಸಂದು ಹೋಗಿವೆ. ಇದನ್ನು ವಿವರಿಸುವುದಕ್ಕೆ ನನ್ನ ಬಾಲ್ಯದ ದಿನಗಳಿಗೇ ಹೋಗಬೇಕು. ಆಗ ಯಕ್ಷಗಾನದ ಒಂದು ಅಂಗವಾದ ಮಾತುಗಾರಿಕೆ ವಿಜೃಂಭಿಸುತ್ತಿದ್ದ ಕಾಲ. ಆಗ ತೆಂಕಿನಿಂದ ಪ್ರಸಿದ್ಧ ವಾಗ್ಮಿಗಳನ್ನು ಕರೆಸುತ್ತಿದ್ದರು.
ರಂಗಸ್ಥಳದಲ್ಲಿ ಅವರಿಗೆ ಖುರ್ಚಿ ವ್ಯವಸ್ಥೆ ಇರುತ್ತಿತ್ತು. ಅವರು ವೇಷ ಧರಿಸಿ ಬಂದು ಖುರ್ಚಿಯಲ್ಲಿ ಕುಳಿತು ಮಾತನಾಡಿ ಹೋಗುತ್ತಿದ್ದರು.ಇದು ನಾನು ಕಣ್ಣಾರೆ ಕಂಡ ಸತ್ಯ. ಆಮೇಲೆ ಭಾಗವತಿಕೆಗೆ ಬಂತು ಶುಕ್ರ ದೆಸೆ ನೋಡಿ. ಭಾಗವತಿಕೆಗೆ ಜನ ಮುಗಿಬೀಳುವುದಕ್ಕೆ ಆರಂಭವಾದದ್ದು ಕಡತೋಕ ಮಂಜು ಭಾಗವತರ ಕಾಲದಲ್ಲಿ. ಮಂಜು

ಭಾಗವತರ ಭಾಗವತಿಕೆಯನ್ನು ಕೇಳುವುದಕ್ಕೆ ಹೋಗುತ್ತೇನೆ (ಆಟ ನೋಡುವುದಕ್ಕಲ್ಲ ) ಎಂದು ಬಹಳಷ್ಟು ಜನ ಹೋಗುತ್ತಿದ್ದುದನ್ನು ಕಂಡಿದ್ದೇನೆ. ಆಮೇಲೆ ಶುರುವಾದದ್ದೇ ನಾವುಡರ ಯುಗ. ಗುಂಡ್ಮಿ ಕಾಳಿಂಗ ನಾವುಡರ ಕಾಲಕ್ಕೆ ಭಾಗವತಿಗೆ ಜನಪ್ರೀಯತೆಯ ಉತ್ತುಂಗವನ್ನೇರಿತು. ಹೊಟೇಲು, ಬಸ್ಸು, ಕಾರು, ಸಾರ್ವಜನಿಕ ಸ್ಥಳಗಳಲ್ಲೆಲ್ಲ ನಾವುಡರ ಭಾಗವತಿಕೆ ಮಾರ್ದನಿಸತೊಡಗಿತು. ನಾವುಡರು ಯುಗಪ್ರವರ್ತಕ ಭಾಗವತರೇ ಆಗಿ ಹೋದರು. ಮುಂದಿನ ಕೆಲವು ವರ್ಷ ಸುಬ್ರಮಣ್ಯ ಧಾರೇಶ್ವರರು ಭಾಗವತಿಕೆಯ ಅನಭಿಷಿಕ್ತ ದೊರೆಯಾಗಿ ಮೆರೆದರು. ಈಗ ಆ ಸ್ಥಾನವನ್ನು ರಾಘವೇಂದ್ರ ಆಚಾರ್ ಜನ್ಸಾಲೆಯವರು ಆಕ್ರಮಿಸಿದ್ದಾರೆ. ಹೀಗೆ ಒಂದೊಂದು ಕಾಲ ಘಟ್ಟದಲ್ಲಿ ಯಕ್ಷಗಾನದ ಒಂದೊಂದು ಅಂಗ ವಿಜೃಂಭಿಸುತ್ತಾ ಹೋಯಿತು.

ಮುಂದೆ ಬಂದದ್ದೇ ಹಾಸ್ಯಗಾರರ ಯುಗ. ಹಾಸ್ಯಗಾರರು ಯಾರು ಎಂದು ನೋಡಿಕೊಂಡು ಆಟಕ್ಕೆ ಹೋಗುವ ಪರಿಪಾಠ ಬೆಳೆಯಿತು. ಹಾಸ್ಯಗಾರರಿಗಾಗಿಯೇ ಆಟಗಳಾಗುವುದಕ್ಕೆ ಆರಂಭವಾಯಿತು. ಅದು ಎಷ್ಟು ವಿಪರೀತಕ್ಕೆ ಹೋಯಿತೆಂದರೆ ಹಾಸ್ಯಗಾರರಿಗೆ ಸ್ಟಾರ್ ವ್ಯಾಲ್ಯು ಬಂತು. ಮುಂದೆ ಹಾಸ್ಯ ಅಪಹಾಸ್ಯಕ್ಕೆ ಗುರಿಯಾದದ್ದು ಬೇರೆ ಮಾತು.

ಆಮೇಲೆ ಬಂದದ್ದೇ ಸ್ತ್ರೀ ಯುಗ. ಇದ್ದಕ್ಕಿದ್ದ ಹಾಗೆ ಸ್ತ್ರೀ ಪಾತ್ರಕ್ಕೆ ಎಲ್ಲಿಲ್ಲದ ಬೇಡಿಕೆ ಬಂದು ಹೋಯಿತು. ಸ್ತ್ರೀ ಪಾತ್ರವೇ ವಿಶೇಷ ಆಕರ್ಷಣೆಯ ಕೇಂದ್ರವಾಯಿತು. ಮಂಟಪ ಪ್ರಭಾಕರ ಉಪಾ ಧ್ಯಾಯ ಶಶಿಕಾಂತಶೆಟ್ಟಿ, ನೀಲ್ಕೋಡ ಶಂಕರ ಹೆಗಡೆ, ಯಲಗುಪ್ಪ ಸುಬ್ರಮಣ್ಯ ಹೆಗಡೆ ಬಹು ಬೇಡಿಕೆಯ ಕಲಾವಿದರಾದರು. ಈ ಟ್ರೆಂಡ್ ಈಗಲೂ ಹಾಗೆಯೇ ಮುಂದುವರಿಯುತ್ತಿದೆ. ಈಗ ಕುಣಿತಕ್ಕೆ ರಾಜ ಮರ್ಯಾದೆ. ಒಂದೊಂದು ಪದ್ಯಕ್ಕೆ ವಿವಿಧ ಚಾಲುಗಳನ್ನು ಹಾಕಿ ಅರ್ಧ ಘಂಟೆ ಮುಕ್ಕಾಲು ಘಂಟೆ ಕುಣಿಯುತ್ತಾರೆ. ಪದ್ಯ ಮಗಿಯುವ ಹೊತ್ತಿಗೆ ಯಾವ ಪದ್ಯಕ್ಕೆ ಕುಣಿಯುತ್ತಿದ್ದಾನೆ ಎನ್ನುವುದು ಸ್ವತ: ಕಲಾವಿದನಿಗೂ ಪ್ರೇಕ್ಷಕನಿಗೂ ಮರೆತು ಹೋಗುವಷ್ಟು ಕುಣಿತ ವಿಜೃಂಭಿಸುತ್ತಿದೆ. ಇಲ್ಲೆಲ್ಲೂ ಯಕ್ಷಗಾನ ಇಡಿಯಾಗಿ ವಿಜೃಂಭಿಸಿದ್ದು ಕಂಡು ಬರುವುದಿಲ್ಲ. ಅಷ್ಟು ಕುಣಿಯುವ ಹುಮ್ಮಸ್ಸಿದ್ದರೆ ಯಕ್ಷಗಾನದಲ್ಲಿ ಕುಣಿತವನ್ನು ಬಯಸುವ ಸಂದರ್ಭಗಳು ಬೇಕಾದಷ್ಟಿವೆ. ಪ್ರವೇಶದ ಕುಣಿತಗಳಲ್ಲಿ ಎಷ್ಟೊಂದು ವೈವಿಧ್ಯಮಯವಾದ ಕುಣಿತಗಳಿವೆ. ಮರೆಯಾಗಿ ಹೋದ ಈ ಕುಣಿತಗಳನ್ನು ಚಲಾವಣೆಗೆ ತರಬಹುದು.ಪ್ರಯಾಣ ಕುಣಿತದಲ್ಲಿ ಎಷ್ಟೊಂದು ಪ್ರಕಾರಗಳಿವೆ. ಅವುಗಳನ್ನು ಕಲಿತು ಪ್ರಯಾಣ ಸನ್ನಿವೇಶದಲ್ಲಿ ಬೇಕಾದ ಹಾಗೆ ಕುಣಿಯುವುದಕ್ಕೆ ಅವಕಾಶವಿದೆ. ಅದೇ ರೀತಿಯಲ್ಲಿ ಯುದ್ಧದ ಕುಣಿತಗಳಲ್ಲಿ ಅನೇಕ ಬಗೆಯ

ಕುಣಿತಕ್ಕೆ ಅವಕಾಶವಿದೆ. ಆ ಎಲ್ಲ ಸಂದರ್ಭಗಳಲ್ಲಿ ಕುಣಿದು ತಮ್ಮ ಪ್ರಾವೀಣ್ಯತೆಯನ್ನು ಮೆರೆಸುವುದಕ್ಕೆ ಕಲಾವಿದರಿಗೆ ಸಾಕಷ್ಟು ಅವಕಾಶಗಳಿವೆ. ಎಲ್ಲೆಲ್ಲೊ ಕುಣಿದು ಔಚಿತ್ಯ ಭಂಗಗೊಳಿಸುವ ಬದಲು ಔಚಿತ್ಯವರಿತು ಇಂಥ ಸಂದರ್ಭಗಳನ್ನು ಕುಣಿತಕ್ಕೆ ಬಳಸಿಕೊಂಡರೆ ಅವರ ಘನತೆಯೂ ಹೆಚ್ಚುತ್ತದೆ. ಯಕ್ಷಗಾನದ ಆರೋಗ್ಯವನ್ನು ಕಾಪಾಡಿದಂತೆಯೂ ಆಗುತ್ತದೆ. ದೇಹದ ಯಾವುದೋ ಒಂದು ಭಾಗ ಅತಿಯಾಗಿ ಬೆಳೆದರೆ ಅದು ರೋಗವಾಗಿ ಪರಿಣಮಿಸುತ್ತದೆ. ಅದು ಅಂಗವೈಕಲ್ಯವೆನಿಸುತ್ತದೆಯೇ ಹೊರತೂ ಬೆಳವಣಿಗೆ ಅನಿಸಿಕೊಳ್ಳುವುದಿಲ್ಲ.

ಈಗ ನಾನು ಹೇಳಲಿಕ್ಕೆ ಹೊರಟಿರವುದು ಕತ್ತರಿ ಪ್ರಯೋಗದ ಬಗ್ಗೆ.ಇದು ಈ ಮೇಲೆ ಹೇಳಿದ್ದಕ್ಕೆ ತದ್ವಿರುದ್ಧ ಬೆಳವಣಿಗೆ.ಇಲ್ಲಿ ನಡೆದದ್ದು ಏನು ಅಂದರೆ ಯಕ್ಷಗಾನದ ಒಂದೊಂದೇ ಅಂಗಗಳಿಗೆ ಕತ್ತರಿ ಬೀಳುತ್ತಾ ಹೋದದ್ದು. ಇದು ಆರಂಭವಾದದ್ದು ಡಾ.ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯಿಂದ. ಅವರು ಮಾತುಗಾರಿಕೆಯನ್ನು
ಯಕ್ಷಗಾನದಿಂದ ಹೊರಗಿಟ್ಟು ಪ್ರಯೋಗ ನಡೆಸಿದರು. ಅಲ್ಲಿಗೆ ಯಕ್ಷಗಾನದ ಒಂದು ಅಂಗ ಊನವಾಯಿತು. ಶತಾವಧಾನಿ ಆರ್.ಗಣೇಶರು ಕೂಟ ಕಲೆಯಾದ ಯಕ್ಷಗಾನವನ್ನು ಕುಗ್ಗಿಸಿ ‘ಯುಗಳ ಯಕ್ಷಗಾನ’, ‘ಏಕ ವ್ಯಕ್ತಿ ಯಕ್ಷಗಾನ’ ಪ್ರಯೋಗ ಮಾಡಿದರು. ಅದನ್ನೊಂದು ಪ್ರಯೋಗವಾಗಿ ಮೆಚ್ಚಿಕೊಳ್ಳಬಹುದೇ ವಿನ: ಯಕ್ಷಗಾನ ರಂಗಭೂಮಿಗೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಈಗ ಕೆರೆಹೊಂಡದ ದಿವಾಕರ ಹೆಗಡೆಯವರಿಂದ

ಏಕವ್ಯಕ್ತಿ ತಾಳ ಮದ್ದಲೆಯ ಪ್ರಯೋಗ ನಡೆಯುತ್ತಿದೆ. ಕೆರೆಮನೆ ಶಂಭು ಹೆಗಡೆ ನಾಟ್ಯೋತ್ಸವದಲ್ಲಿ ಅದನ್ನು ನೋಡುವ ಅವಕಾಶವೂ ಒದಗಿ ಬಂತು. ಅಲ್ಲಿ ಅವರು ಕಾರ್ಯಕ್ರಮವನ್ನು ಆರಂಭಿಸುವ ಪೂರ್ವದಲ್ಲಿ ಒಂದು ಮಾತನ್ನು ಹೇಳಿದರು, ತನಗೆ ಈ ಏಕವ್ಯಕ್ತಿ ತಾಳಮದ್ದಲೆಯನ್ನು ನಡೆಸುವುದಕ್ಕೆ ಪ್ರೇರೇಪಿಸಿದ್ದು ಶತಾವಧಾನಿ ಆರ್.ಗಣೇಶ್ಎ ನ್ನುವುದಾಗಿ. ಯಕ್ಷಗಾನ ರಂಗಭೂಮಿಯ ವಿಘಟನೆಯಲ್ಲಿ ಆರ್.ಗಣೇಶ್ ಅವರಿಗೆ ಅದೇನ್ ಸುಖವೋ ನನಗೆ ಅರ್ಥವಾಗುವುದಿಲ್ಲ. ಈ ಎಲ್ಲ ಪ್ರಯೋಗಗಳೂ ಅಲ್ಪಾಯುಗಳೇ. ಏತನ್ಮಧ್ಯೆ ಯಕ್ಷಗಾನದ ಪೂರ್ವರಂಗಕ್ಕೆ ಸಂಪೂರ್ಣ ಕತ್ತರಿಪ್ರಯೋಗವಾಗಿದೆ. ಬಾಲಗೋಪಾಲ, ಪೀಠಿಕೆ ಸ್ತ್ರೀವೇಶ, ಒಡ್ಡೊಲಗ ಎಲ್ಲ ಈಗ ಉಪನ್ಯಾಸಗಳಲ್ಲಿ ಕೇಳುವ ವಿಷಯಗಳಾಗಿವೆ. ಯಾರೂ ಯಕ್ಷಗಾನವನ್ನು ಇಡಿಯಾಗಿ ನೋಡುವ ಮಾಡುವ ಪ್ರಯತ್ನವನ್ನುಮಾಡದೇ ಇರುವುದು ಯಕ್ಷಗಾನ ರಂಗಭೂಮಿಯ ದುರಂತವೇ ಸರಿ.

(ಮುಂದಿನ ಸಂಚಿಕೆಗೆ ಮುಂದುವರೆಯುವುದು…)

ಗಣಪತಿ ಹೆಗಡೆ ಕೊಂಡದಕುಳಿ,ಕುಮಟಾ
ಕವಿ, ಹವ್ಯಾಸಿ ಯಕ್ಷಗಾನ ಕಲಾವಿದ

Leave a Reply

Your email address will not be published. Required fields are marked *