ಫೆ.4: ಕುಮಟಾದಲ್ಲಿ ಘರ್ ಘರ್ ಕೊಂಕಣಿ -150

ಸಾರಥ್ಯ ಕಾಸರಕೋಡು ಚಿನ್ನಾ ; ಆತಿಥ್ಯ ಸುಬ್ರಾಯ ವಾಳ್ಕೆ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಹಿರಿಯ ರಂಗಕರ್ಮಿ, ಚಿತ್ರನಟ, ಸಾಹಿತಿ ಕಾಸರಗೋಡು ಚಿನ್ನಾ ಅವರ ಮಹಾತ್ವಾಕಾಂಕ್ಷೆಯ ‘ಘರ ಘರ ಕೊಂಕಣಿ 150’ನೇ ಸರಣಿ ಕಾರ್ಯಕ್ರಮದ ಉದ್ಘಾಟನೆ ಕುಮಟಾದ ಉದ್ಯಮಿ, ಸಾಂಸ್ಕೃತಿಕ ಜೀವಿ ಸುಬ್ರಾಯ ವಾಳ್ಕೆ ಮತ್ತು ವೀಣಾ ಸುಬ್ರಾಯ ವಾಳ್ಕೆ ಅವರ ಮನೆಯ ಅಂಗಳದಲ್ಲಿ ಫೆ. 4 (ಭಾನುವಾರ) ರಂದು ಮುಂಜಾನೆ 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಬ್ರಾಯ ವಾಳ್ಕೆ ವಹಿಸಲಿದ್ದು, ಕಾಸರಗೋಡು ಚಿನ್ನಾ ಅವರು ದೀಪ ಬೆಳಗಲಿದ್ದಾರೆ. ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ವಿನೋದ ಪ್ರಭು, ಮಧುಸೂದನ ಶೇಟ್, ಎಂ.ಬಿ.ಪೈ, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಮನಾಥ ಶಾನಬಾಗ್, ಶಿಕ್ಷಕಿ ಶೈಲಾ ಗುನಗಿ ಮುಂತಾದ ಕೊಂಕಣಿ ಬಾಷಿಕ ಸಮುದಾಯದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಅನಂತರದ ಸಾಂಸ್ಕೃತಿಕ ಕಾರ್ಯಕ್ರಮ, ವೇದಿಕೆ ಕಾರ್ಯಕ್ರಮ ಮಧ್ಯಾಹ್ನ 3.30 ರಿಂದ ಪಟ್ಟಣದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸಭಾಭವನದಲ್ಲಿ ನಡೆಯಿಲಿದೆ.

150ರ ಮೈಲುಗಲ್ಲಿನತ್ತ ಚಿನ್ನಾ ಅವರ ‘ಘರ ಘರ ಕೊಂಕಣಿ’ ರಥ

ಕಾಸರಗೋಡು ಚಿನ್ನಾ ಅವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಅವರ ಕನಸಿನ ಕೂಸು ಈ ‘ಘರ ಘರ ಕೊಂಕಣಿ’ ಪರಿಕಲ್ಪನೆ. ಆಗಲೇ ಅವರು ಈ ಮಹಾತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಆರಂಭಿಸಿ ಕೊಂಕಣಿ ಭಾಷಿಕರ ಮನೆ ಮನೆಗೂ ಕೊಂಕಣಿ ಬೆಳಕನ್ನು ಕೊಂಡೊಯ್ದು ಅದರ ಪ್ರಭೆ ಹೆಚ್ಚಿಸಿದರು. ಹೀಗಾಗಿ ಕೊಂಕಣಿ ಅಕಾಡೆಮಿ ಮತ್ತು ಕೊಂಕಣಿ ಭಾಷೆಯ ಅಸ್ಮಿತೆ ಎಲ್ಲರ ಮನೆಯಲ್ಲಿ ಪಸರಿಸುವಂತಾಯಿತು.

ಕೊಂಕಣಿ ಬಾಷೆ ಮಾತನಾಡುವ ಸಮುದಾಯ ಒಂದೆರಡಲ್ಲ. ನೂರಾರು ಸಮುದಾಯಗಳು ಕೊಂಕಣಿ ಭಾಷೆಯನ್ನೇ ತಮ್ಮ ಉಸಿರಾಗಿಸಿಕೊಂಡಿವೆ. ಕ್ರಿಶ್ಚಿಯನ್ ಧರ್ಮದವರೂ ಕೊಂಕಣಿ ಬಾಷೆಯನ್ನು ತಮ್ಮ ಬದುಕಿನ ಸಂವಹನದ ಶಕ್ತಿಯಾಗಿಸಿಕೊಂಡಿದ್ದಾರೆ. ಹೀಗೆ ಕೊಂಕಣಿ ಭಾಷೆಕರೆಲ್ಲರ ಮನೆ ಮನೆಗೂ ‘ಘರ ಘರ ಕೊಂಕಣಿ’ ಅಭಿಯಾನದ ದೊಂದಿಯನ್ನು ಚಿನ್ನಾ ಕೊಂಡೊಯ್ದರು. ಈ ಅಭಿಯಾನದ ಸರಣಿ ಒಂದೆರಡು, ಮೂರ್ನಾಲ್ಕಕ್ಕಷ್ಟೇ ನಿಲ್ಲಲಿಲ್ಲ ಅಥವಾ ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳಿಗಷ್ಟೇ

ಸಮೀತವಾಗಿಲ್ಲ. ಅದು ನೆರೆಯ ಉಡುಪಿ, ಉತ್ತರ ಕನ್ನಡ ಜಿಲ್ಲೆ, ಗೋವಾ ರಾಜ್ಯಕ್ಕೂ ಪಸರಿಸಿತು. ಚಿನ್ನಾ ಕೊಂಕಣಿ ಅಕಾಡೆಮಿ ಅಧಿಕಾರದಿಂದ ಇಳಿದರೂ ಸುಮ್ಮನಾಗದೆ ಈ ಅಭಿಯಾನ ಮುಂದುವರೆಸಿದರು. ಇಂದು ‘ಘರ ಘರ ಕೊಂಕಣಿ ಅಣಿಯಾನ’ ದ ರಥ 150 ರ ಮೈಲುಗಲ್ಲಿನತ್ತ ಬಂದು ನಿಂತಿದೆ. ಈ ಅಭಿಯಾನದ ರಥವನೆಳೆಯಲು ಚಿನ್ನಾ ಅವರಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಥ್ ಕೊಟ್ಟವರು ಅಂದು ಕೊಂಕಣಿ ಅಕಾಡೆಮಿ ಸದಸ್ಯರಾದ ಚಿದಾನಂದ ಭಂಡಾರಿ ಅವರು.

ಸಾಂಸ್ಕೃತಿಕ ಚೈತನ್ಯ ಸುಬ್ರಾಯ ವಾಳ್ಕೆ

‘ಘರ ಘರ ಕೊಂಕಣಿ-150’ ಕಾರ್ಯಕ್ರಮದ ಆತಿಥ್ಯ ವಹಿಸಿಕೊಂಡು ತಮ್ಮ ಮನೆಯಂಗಳವನ್ನು, ಮನದಂಗಳವನ್ನು ವೇದಿಕೆಯಾಗಿಸಿ ನಡೆಸಿ ಕೊಡುತ್ತಿದ್ದವರು ಉದ್ಯಮಿ ಸುಬ್ರಾಯ ವಾಳ್ಕೆ. ಕನ್ನಡದ ಹಲವಾರು ಚಿತ್ರಗಳಿಗೆ ಬೆನ್ನೆಲುಬಾಗಿ ನಿಂತ ಸುಬ್ರಾಯ ವಾಳ್ಕೆ ಅವರು ಪರಿಣಾಮಕಾರಿ ನಿರ್ಮಾಪಕ. ಅವರದೇ ಬ್ಯಾನರ್ ಅಡಿ ಬಂದ ‘ಎಕ್ಸಪ್ರೆಸ್ ಟ್ರೇನ್’ ಸದಭಿರುಚಿಯ ಚಿತ್ರವನ್ನು ಜನ ಇನ್ನೂ ಮರೆತಿಲ್ಲ. ಸೌಜನ್ಯದ ಮೇರು ವ್ಯಕ್ತಿತ್ವದ ವಾಳ್ಕೆಯವರು ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕತಿಕ ಚೇತನ.

ಮಾತ್ರವಲ್ಲ, ಕುಮಟಾ ಸಹಿತ ಉತ್ತರ ಕನ್ನಡ ಜಿಲ್ಲೆಯ ರಾಜಕಾರಣದಲ್ಲಿ ತನ್ನದೇ ಛಾಪು ಮೂಡಿಸಿದ ಅವರು ಮುಖಂಡತ್ವದ ಎಲ್ಲ ಸಾಧ್ಯತೆಗಳಿಗೆ ತಮ್ಮನ್ನು ತೆರೆದುಕೊಂಡವರು. ಬಿಜೆಪಿಯ ಕಾರ್ಯಕರ್ತನಾಗಿ ತಳ ಮಟ್ಟದಿಂದಲೇ ಬೆಳೆದ ವಾಳ್ಕೆ ಅವರು ಸತ್ವ ಮತ್ತು ಸತ್ವವುಳ್ಳ ಮುಖಂಡ ಅನ್ನುವಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಕಷ್ಟದ ಬದುಕನ್ನು ಸವೆದು ಸಮಾಜದ ಪ್ರತಿಷ್ಠಿತ ಸ್ಥಾನಕ್ಕೆ ಬಂದ ಸುಬ್ರಾಯ ವಾಳ್ಕೆ ಅವರೊಳಗೆ ಅಪಾರ ಓದು ಇದೆ. ಆ ಕಸುವಿನಿಂದಲೇ ಅವರ ಮಾತಿನಲ್ಲಿ ಸ್ಪಷ್ಟತೆ ಇದೆ, ಖಚಿತತೆ ಇದೆ. ಜನಾನುರಾಗಿಯಾದ ವಾಳ್ಕೆ ಅವರು ಹಲವಾರು ಅಸಹಾಯಕ ಜೀವಗಳಿಗೆ ಆಸರೆಯಾದದ್ದು ಅವರೊಳಗಿನ ಮನುಷ್ಯತ್ವದ ಬಿಂಬವಾಗಿದೆ.

ಇಂದು ನೂರಾರು ಜನರಿಗೆ ಕೆಲಸ ಕೊಟ್ಟ ಸುಬ್ರಾಯ ವಾಳ್ಕೆ, ಕನ್ನಡದ ಬಗ್ಗೆ ಕಾಳಜಿ, ಕೊಂಕಣಿ ಬಗ್ಗೆ ಮಮತೆ ಇಟ್ಟುಕೊಂಡವರು. ಈ ಕಾರಣಕ್ಕಾಗಿಯೇ ಅವರು ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ, ಘರ ಘರ ಕೊಂಕಣಿಯಂಥ ಕಾರ್ಯಕ್ರಮಕ್ಕೂ ಮುಂದೆ ನಿಲ್ಲುತ್ತಾರೆ. ಅದಕ್ಕಾಗಿಯೇ ಈ ನೆಲದ ಸಾಂಸ್ಕೃತಿಕ ಚೇತನವೆಂದು ಜನರು ಕರೆಯುತ್ತಾರೆ.

‘ಘರ ಘರ ಕೊಂಕಣಿ-150’ ಕಾರ್ಯಕ್ರಮಕ್ಕೆ ಸಹೃದಯರು ಬರಬೇಕು ಅಂತ ಆತಿಥ್ಯ ವಹಿಸಿದ ವಾಳ್ಕೆ ಕುಟುಂಬ ಪ್ರೀತಿಯಿಂದ ಕೋರಿದೆ.

ಮಧ್ಯಾಹ್ನ 3-30ಕ್ಕೆ ಪಟ್ಟಣದ ಕೊಂಕಣ ಎಜುಕೇಶನ್ ಸಭಾಭವನದಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಂಕಣಿ ಭಜನೆ, ಕೊಂಕಣಿ ಸುಗಮ ಸಂಗೀತ, ಕೊಂಕಣಿ ನಾಟಕ, ಪುಗಡಿ ನೃತ್ಯ, ಕೋಲಾಟ, ಕೊಂಕಣಿ ಬಾವಗೀತೆ, ಕೊಂಕಣಿ ನೃತ್ಯ ಮುಂತಾದವುಗಳು ನಡೆಯಲಿವೆ. ನಂತರ ನಡೆಯಲಿರುವ ಸಭಾಕಾರ್ಯಕ್ರದ ಅಧ್ಯಕ್ಷತೆಯನ್ನು ಕುಮಟಾ ಕೊಂಕಣಿ ಪರಿಷದ ಉಪಾಧ್ಯಕ್ಷ ಮುರಳೀಧರ ಪ್ರಭು ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ ಅವರು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ,

ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಯಲ್ಲಾಪುರ, ಮಾಜಿ ಶಾಸಕಿ ರೂಪಾಲಿ ನಾಯ್ಕ ಕಾರವಾರ, ಕುಮಟಾ ಕೊಂಕಣಿ ಪರಿಷದ್ ಉಪಾಧ್ಯಕ್ಷ ಮುರಳೀಧರ ಪ್ರಭು, ಉದ್ಯಮಿ ದೀಪಕ ಶೇಟ್ ಉಡುಪಿ, ಸಮಾಜ ಸೇವಕ ಸದಾನಂದ ಕಾಮತ್ ಮುಂತಾದವರು ಪಾಲ್ಗೊಂಡು ಮಾತನಾಡಲಿದ್ದಾರೆ.

Leave a Reply

Your email address will not be published. Required fields are marked *