ಆಧುನಿಕ ವರ್ತಮಾನವೂ…., ಗಾಂಧಿಯೆಂಬ ಮಹಾಕಾವ್ಯವೂ….!

ಆಧುನಿಕ ಭಾರತದ ಮಹಾಚರಿತ್ರೆಯಲ್ಲಿ ಗಾಂಧಿ ಮತ್ತು ಅಂಬೇಡ್ಕರರ ಬದುಕು, ಹೋರಾಟ, ಸಿದ್ಧಾಂತ ಮತ್ತು ವ್ಯಕ್ತಿತ್ವಗಳು ನಿಜಕ್ಕೂ ಮಹಾಕಾವ್ಯಗಳಿಗಿರಬೇಕಾದ ಗುಣಲಕ್ಷಣಗಳನ್ನು ಹೊಂದಿವೆ.

ಇಲ್ಲಿ ಮೋಹನ್ ದಾಸ್ ಕರಮಚಂದ್ ಗಾಂಧಿಯವರು ಹತ್ಯೆಯಾದ ದಿನವನ್ನು ಹುತಾತ್ಮರ ದಿನವೆಂದು ಸಂತಾಪಿಸುವಾಗ ಅನ್ನಿಸುವುದು Yes! Gandhi is an Epic, in the history of Modern India.

1920 ರ ಸುಮಾರಿಗೆ ಭಾರತದ ಸ್ವಾತಂತ್ರ್ಯ ಚಳುವಳಿ ಪ್ರವೇಶಿಸುವ ಮೋಹನದಾಸರು, ಸರಿಸುಮಾರು 27 ವರ್ಷಗಳ ಕಾಲ ಸ್ವಾತಂತ್ರ್ಯ ಚಳುವಳಿ ಮಂದಗಾಮಿಗಳ ನೇತೃತ್ವದಲ್ಲಿ ಹದತಪ್ಪದಂತೆಯೂ, ತೀವ್ರಗಾಮಿ ಮನೋಭಾವದವರಿಂದ ಹಾದಿತಪ್ಪದಂತೆಯೂ ಜತನದಿಂದ ಕಾಯ್ದು, ಆಧುನಿಕ ಯುಗದ ರೀತಿ ರಿವಾಜುಗಳಿಗನುಗುಣವಾಗಿ ಪ್ರಜಾತಾಂತ್ರಿಕ ಹೋರಾಟ ಹಾಗೂ ರಾಜತಾಂತ್ರಿಕ ಕುಶಲತೆಗಳನ್ನು ಪರಿಣಾಮಕಾರಿಯಾಗಿ ವಸಾಹತುಷಾಹಿಗಳ ವಿರುದ್ಧ ಬಳಸಿ ಅಂತಿಮವಾಗಿ ವಿಜಯದ ನಗೆ ಬೀರಿದವರು. ಹೌದು,
ಸ್ವಾತಂತ್ರ್ಯ ಚಳುವಳಿಯ ಯಶಸ್ಸಿನ ಶ್ರೇಯ ಗಾಂಧಿಯೊಬ್ಬರದೇ ಅಲ್ಲ; ಆದರೆ ಗಾಂಧಿಯವರದೂ ಹೌದು!

ಹುಟ್ಟಿನಿಂದಲೇ ಸನಾತನಿಯಾದ ಗಾಂಧಿ (Mahatma Gandhi) ತಮ್ಮ ಜೀವಮಾನದುದ್ದಕ್ಕೂ ಪ್ರತ್ಯಕ್ಷವಾಗಿಯೇ ಪೋಷಿಸಿದ್ದು ಗೀತಾಪ್ರಣೀತ ಚಾತುರ್ವರ್ಣ್ಯವನ್ನು. ಆದರೂ ದಾಸ್ಯದಿಂದ ದೇಶ ಬಿಡುಗಡೆ ಹೋರಾಟದ ಪ್ರಾಯೋಗಿಕ ಅನುಭವ ಮತ್ತು ತಮ್ಮ ವ್ಯಕ್ತಿತ್ವದ ಭಾಗವಾಗಿ ರೂಪಿಸಿಕೊಂಡಿದ್ದ ಆಧ್ಯಾತ್ಮಿಕ
ಪ್ರಭಾವಗಳು ಅವರ ಆಲೋಚನಾ ಲಹರಿಯ ಹರಿವಿನ ದಿಕ್ಕಿನಲ್ಲಿ ಜೀವಕಾರುಣ್ಯದ ಹೊಳಹುಗಳನ್ನು ಚಿಮ್ಮಿಸುವಲ್ಲಿ ಯಶಸ್ವಿಯಾಗಿದ್ದವು.

ಗಾಂಧಿ ಗಳಿಸಿಕೊಂಡ ಈ ಜೀವಕಾರುಣ್ಯ ಅಂಬೇಡ್ಕರರ (Dr. B.R.Ambedkar) ಸಂದರ್ಭದಲ್ಲಿ ಅದರಲ್ಲೂ ಮುಖ್ಯವಾಗಿ ‘ಪೂನಾ ಒಪ್ಪಂದ’ ವೆಂಬ ‘ಜಗನ್ನಾಟಕ’ದ ಸಮಯದಲ್ಲಿ ಧರ್ಮರಕ್ಷಣೆಯ ಸೋಗುಹಾಕಿ ನಿಂತಿತ್ತಾದರೂ, ತದನಂತರದಲ್ಲಿ ಈ ನೆಲದ ಅಸ್ಪೃಶ್ಯರ ಸಾಕುಮಗ ತಾನು ಎಂಬ ಮಾತುಗಳನ್ನು ಹೊರಡಿಸುವುದರಲ್ಲಿ ಯಶಸ್ವಿಯಾಗಿತ್ತು. ಗಾಂಧಿಯವರ ಈ ಮಾತುಗಳನ್ನು ಅಗ್ನಿದಿವ್ಯಕ್ಕೊಳಪಡಿಸುವುದು ಈ ಲೇಖನದ ಉದ್ದೇಶವಲ್ಲ.

ಬದಲಿಗೆ ಬದುಕಿನುದ್ದಕ್ಕೂ ಭಗವಾನ್ನಾಮಸ್ಮರಣೆಯನ್ನೇ ಜೀವಮಂತ್ರವಾಗಿಸಿಕೊಂಡು, ಹಿಂದೂ ಸನಾತನ ನಿಯಮಗಳ ಪರಿಪಾಲಕರಾಗಿ, ಹಿಂದೂ ಉಚ್ಛ್ರಾಯತೆಯ ಕನಸನ್ನು ಕಂಡು, ಜಾತಿವ್ಯವಸ್ಥೆಯೇ ಹಿಂದೂ ಧರ್ಮದ ಬೆನ್ನೆಲುಬು ಎಂಬ ಸಾರ್ವಕಾಲಿಕ ಸತ್ಯದ ಸಮರ್ಥ ಪ್ರತಿಪಾದಕರಾಗಿ, ಶ್ರೇಷ್ಟ ಹಿಂದೂವಾಗಿ ಕಂಗೊಳಿಸುತ್ತಿದ್ದ ಮೋಹನದಾಸರು, ಅದೇ ಧರ್ಮದ ಅಫೀಮಿನ ಅಮಲಿನಲ್ಲಿದ್ದ ಹತಾಶ ಮತಾಂಧನೊಬ್ಬನಿಂದ ಗುಂಡೇಟು
ತಿಂದು ‘ಹೇ ರಾಮ್’ ಎನ್ನುತ್ತಲೇ ಜೀವ ತ್ಯಜಿಸಿದ್ದು ನಿಜಕ್ಕೂ ಧಾರುಣ. ಹೌದು, ನಿಜಕ್ಕೂ ಅನ್ನಿಸುತ್ತದೆ. ಸತ್ತಾಗ 78 ವರ್ಷಗಳಾಗಿದ್ದ ಗಾಂಧಿಯವರ ಕುರಿತು ಈ ಮಾತುಗಳು ತುಸು ಕಟುವಾದವೇನೊ ಎಂದು. ಸನಾತನದ ಕೂಸಾಗಿದ್ದ ಮನುಷ್ಯನೊಬ್ಬ ಸವರ್ಣೀಯ ಮದುವೆಗಳು ಅಪಚಾರ ಎನ್ನಬೇಕಾದರೆ, ಜಾತಿ ಸಮರ್ಥಕ ವ್ಯಕ್ತಿಯೊಬ್ಬ
ಮ್ಲೇಚ್ಛರ ಪಾಯಿಖಾನೆ ಸ್ವಚ್ಛಗೊಳಿಸಲೊಪ್ಪದ ಧರ್ಮಪತ್ನಿಯ ನಡೆಯನ್ನು ಒಪ್ಪದಿದ್ದು ನಿಜಕ್ಕೂ ಜೀವಕಾರುಣ್ಯ ವ್ಯಕ್ತಿತ್ವದ ಮಹಾನಡಿಗೆಯೇ ಸರಿ. ಆ ಕಾರಣಕ್ಕೆ ಗಾಂಧಿಯನ್ನು Epic ಎಂದದ್ದು. ಮಹಾಕಾವ್ಯ, ಧರ್ಮಗ್ರಂಥವಲ್ಲ!

ಖಿಲಾಫತ್ ಚಳುವಳಿಯಿಂದ ಆರಂಭಿಸಿ, ದೇಶ ವಿಭಜನೆಯ ಅಂತಿಮ ಘಟ್ಟದವರೆಗೂ ಈ ನಾಡನ್ನು ಸೌಹಾರ್ದತೆಯ ಬೀಡಾಗಿಸಲು ಇನ್ನಿಲ್ಲದ ಶ್ರಮ ಹಾಕಿದ ಹೊರತಾಗಿಯೂ ಭ್ರಾತೃತ್ವ ಮಹೋನ್ನತೆಯ ಗಾಂಧಿಪ್ರಣೀತ ರಾಮರಾಜ್ಯದ ಪರಿಕಲ್ಪನೆ ಕನ್ನಡಿಯ ಗಂಟಾಗಿಯೇ ಉಳಿಯಿತು.

ರಘುಪತಿ ರಾಘವ ರಾಜಾರಾಮ್
ಪತಿತ ಪಾವನ ಸೀತಾರಾಮ್
ಈಶ್ವರ ಅಲ್ಲಾ ತೇರೇನಾಮ್
ಸಬಕೋ ಸನ್ಮತಿ ದೇ ಭಗವಾನ್

ಎನ್ನುವ ಕರಮ್ ಚಂದ್ ಗಾಂಧಿಯವರ ನಿತ್ಯ ಪ್ರಾರ್ಥನೆಯನ್ನೇ ಅರ್ಥೈಸಿಕೊಳ್ಳದ ತಲೆಕೆಟ್ಟ ಧಾರ್ಮಿಕರು, ಗಾಂಧಿ ಮುಸಲ್ಮಾನರ ಪಕ್ಷಪಾತಿ ಎಂಬ ಅನರ್ಥಕಾರಿ ನಿಲುವು ತಾಳಿದ್ದು ವರ್ತಮಾನಕ್ಕೆನೂ ಆಶ್ಚರ್ಯಕರವಲ್ಲ ‘ದೇಶ ವಿಭಜನೆಯಾಗುವುದಾದರೆ, ನನ್ನ ಹೆಣದ ಮೇಲೆ’ ಎಂದ ಗಾಂಧಿಯೇ, ದೇಶ ವಿಭಜನೆಗೆ ಕಾರಣ ಎಂದು
ರೋಧಿಸತೊಡಗಿದರೇ, ಅಂತಹವರ ಕಣ್ಣೀರು ವಿಭಜನೆಯ ನಿಜಚರಿತ್ರೆ ಉಗಿದ ಎಂಜಲಲ್ಲದೆ ಮತ್ತೇನಲ್ಲ.

ಪಾಲು ಕೇಳಿದ ಮೂಢ ಸಹೋದರನಿಗೆ ಕರುಣೆ ತೋರುವ ಹಿರಿಯಣ್ಣನಾಗಿ ವಿಭಜನೆಯ ಸಂದರ್ಭದಲ್ಲಿ ಪಾತ್ರ ವಹಿಸಿದ ಗಾಂಧಿ, ತಮ್ಮ ಕಠೋರ ಧಾರ್ಮಿಕ ಹಿನ್ನೆಲೆ, ಇತಿಹಾಸದ ಅಪಸವ್ಯಗಳ ಕಾರಣಕ್ಕೆ ಮುಸಲ್ಮಾನರಿಂದಲೂ, ಮುಸಲ್ಮಾನರ ಕುರಿತಾದ ಔದಾರ್ಯತೆಯ ಕಾರಣಕ್ಕೆ ಹಿಂದೂಗಳಿಂದಲೂ ಹಾಗೂ ತಮ್ಮ ಬದುಕಿನ ಸಂಧ್ಯಾಕಾಲದಲ್ಲಿ ‘ಹರಿಜನೋದ್ಧಾರ’ ದ ಕುರಿತಾಗಿ ಕಾರ್ಯಪ್ರವೃತ್ತರಾದರೂ, ಅಸ್ಪೃಶ್ಯರ ಹಕ್ಕುಗಳ
ಕುರಿತಾಗಿ ತಮ್ಮ ಈ ಹಿಂದಿನ ನಿಲುವುಗಳ ಕಾರಣಕ್ಕೆ ದಲಿತರಿಂದಲೂ ಸಮಾನ ತಿರಸ್ಕೃತರಾಗಿ, ವರ್ತಮಾನದಲ್ಲೂ ಅಷ್ಟೇ ತೀವ್ರವಾಗಿ ದ್ವೇಷಿಸಲ್ಪಡುತ್ತಿರುವ ಈ ನಿರ್ಭಾಗ್ಯ ವ್ಯಕ್ತಿ ನಿಜಕ್ಕೂ ಮಹಾತ್ಮನೆ.

1948, ಜನವರಿ 30 ರ ಇಳಿಸಂಜೆಯಲ್ಲಿ ದೆಹಲಿಯ ಬಿರ್ಲಾಹೌಸ್ ನಲ್ಲಿ ಪ್ರಾರ್ಥನೆಗೆ ಸಜ್ಜಾಗುತ್ತಿದ್ದ ವೃದ್ಧ ಗಾಂಧಿಗೆ ಹಿಂದೂ ರಾಷ್ಟ್ರೀಯವಾದಿ ಗೋಡ್ಸೆ ಹಾರಿಸಿದ ಗುಂಡುಗಳು ಸ್ವಾತಂತ್ರ್ಯಾ ನಂತರದಲ್ಲಿ ಭಾರತದ ಸೌಹಾರ್ದ ಪರಂಪರೆ ಕಟ್ಟಬಹುದಾಗಿದ್ದ ಅಹಿಂಸಾಪ್ರೇರಿತ – ಕಾರುಣ್ಯಪೂರಿತ ಸಮಾಜದ ಗೋರಿಯ ತೋರುಗಲ್ಲುಗಳಾಗಿ ಸ್ಥಾಪಿತವಾದವು.

ಈಗಲಾದರೂ ವರ್ತಮಾನ ಗಾಂಧಿಯ ಕುರಿತು ಮೃದುವಾಗಬೇಕಿದೆ. ಹಿಂದೂ ಸೌಹಾರ್ದತೆಯ ಔನ್ನತ್ಯಕ್ಕಾಗಿ, ಮುಸ್ಲಿಂ ಸಹೋದರತ್ವಕ್ಕಾಗಿ, ದಲಿತರ ಕುರಿತು ಸಹನೆ ಬೆಳೆಸಿಕೊಂಡದ್ದಕ್ಕಾಗಿ….
ಮೋಹನದಾಸ್ ಕರಮ್ ಚಂದ್ ಗಾಂಧಿಯವರನ್ನು

ಇವನಾರವ
ಇವನಾರವ
ಎಂದು ದೂರ ಸರಿಸದೆ
ಇವ ನಮ್ಮವ
ಇವ ನಮ್ಮವ

ಎಂದು ಒಪ್ಪಿಕೊಳ್ಳಬೇಕಿದೆ.

ತನ್ಮೂಲಕ, ಮರಣಾನಂತರ ಹೆಚ್ಚು ಜೀವಿಸುತ್ತಿರುವ, ಜೀವಿಸಬೇಕಾದ ಗಾಂಧಿಯನ್ನು, ಅವರ ಮಾಗಿದ ಪರಿಪಕ್ವ ಚಿಂತನೆಗಳ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕಿದೆ. ರಾಮರಾಜ್ಯದ ರಂಗಿನ ಗದ್ದಲದಲ್ಲಿ ಮುಳುಗಿರುವ ಯುವ
ಸಮೂಹಕ್ಕೆ ಪ್ರಜಾಪ್ರಭುತ್ವದ ಆಶಯಗಳನ್ನು ‘ಸಾಂವಿಧಾನಾತ್ಮಕ’ ದ ಪರಿಕಲ್ಪನೆಯಲ್ಲಿ ಅರ್ಥಮಾಡಿಸಬೇಕಿದೆ.

Cosmopolitan ಕಾಲದ ಜನಾಂಗ outdated ಎಂದೇ ಭಾವಿಸಿರುವ ಗಾಂಧಿಯವರ ಬದುಕು, ಬರಹ, ಹೋರಾಟ, ಸಿದ್ಧಾಂತ ಮತ್ತು ವ್ಯಕ್ತಿತ್ವಗಳು ಧಾವಂತದಲ್ಲಿರುವ ದೇಶಕ್ಕೆ ಎಷ್ಟು ಅಗತ್ಯ ಎಂದು ತಿಳಿದುಕೊಂಡರೆ ಹುತಾತ್ಮರ ದಿನ
ಅರ್ಥ ಪಡೆಯುತ್ತದೆ.

ಲೇಖಕರು :
ಪ್ರೊ. ಸಂದೇಶ ಎಚ್ ರತ್ನಪುರಿ ಮೈಸೂರು,
ಇಂಗ್ಲೀಷ್ ಪ್ರಾಧ್ಯಾಪಕರು

Leave a Reply

Your email address will not be published. Required fields are marked *