ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿಯಾಗಿದೆ. ಗರ್ಭಗುಡಿಯಲ್ಲಿ ಬಾಲರಾಮನನ್ನು ನಿಲ್ಲಿಸಿಯೂ ಆಗಿದೆ. ಆರ್.ಎಸ್.ಎಸ್. ತಾನು ಮಾಡಿದ ಪ್ರಯತ್ನಕ್ಕೆ ಸಾರ್ಥಕತೆಯ ನಿಟ್ಟುಸಿರು ಬಿಟ್ಟರೆ,
ಬಿಜೆಪಿ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲೇ ರಾಮ ಮಂದಿರನ್ನು ಲೋಕಾರ್ಪಣೆ ಮಾಡಿ, ಪ್ರಚಾರದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಎಲ್ಲ ಪಕ್ಷದ ‘ಹಿಂದುತ್ವ’ ವಾದಿಗಳು ದೇಶದ ತುಂಬ ಕೇಸರಿ ಬಾವುಟ ಹಾರಿಸಿ ಮೈ ಮರೆತಿದ್ದಾರೆ.
ಇಲ್ಲಿಗೆ ‘ರಾಮ ಮಂದಿರ’ದ ಒಂದು ಅಧ್ಯಾಯ ಮುಗಿಯಿತು.
ಇದೀಗ ದೇಶದ ಬೇರೆ ಬೇರೆ ಭಾಗಗಳಲ್ಲಿ ರಾಮ ಮಂದಿರದ ಬೇರೆ ಬೇರೆ ಅಧ್ಯಾಯದ ಪುಟಗಳು ತೆರೆದುಕೊಳ್ಳುತ್ತಿವೆ. ಅದರಲ್ಲೊಂದು ಅಧ್ಯಾಯ ಮೈಸೂರಿನಲ್ಲಿ ತೆರೆದುಕೊಳ್ಳುತ್ತಿದೆ. ಈ ಅಧ್ಯಾಯ ಮುಮ್ಮುಖ ಭಾರತದ ಬಗ್ಗೆ ಪಾಠ ಮಾಡುವ ಬದಲು ಹಿಮ್ಮುಖ ಭಾರತದ ಪಾಠ ಮಾಡಲು ಹೊರಟಂತಿದೆ.
ಈಗ ಆ ಹೊಸ ಅಧ್ಯಾಯದ ಪುಟಗಳನ್ನು ತೆರೆಯೋಣ. ಬಾಲರಾಮನ ಮೂರ್ತಿಯನ್ನು ಕಪ್ಪು ಕೃಷ್ಣಶಿಲೆಯಲ್ಲೇ ಕೆತ್ತಬೇಕು ಎಂಬುದು ಅಯೋಧ್ಯಾ ರಾಮ ಮಂದಿರ ಟ್ರಸ್ಟಿಗಳ ಒತ್ತಾಸೆ. ದೇಶದಾದ್ಯಂತ ಹುಡುಕಾಡಿದಾಗ ಆ ತಂಡಕ್ಕೆ ಕೃಷ್ಣಶಿಲೆ ಸಿಕ್ಕಿದ್ದು ಮೈಸೂರಿನ
ಎಚ್.ಡಿ.ಕೋಟೆ ತಾಲೂಕಿನ ಹಾರೋಹಳ್ಳಿಯಲ್ಲಿ. ಇದೀಗ ಬಲರಾಮನ ರೂಪ ಪಡೆದ ಕೃಷ್ಣಶಿಲೆ ಸಿಕ್ಕಿದ ಸ್ಥಳ ರಾಮದಾಸ್ ಎಂಬುವವರಿಗೆ ಸೇರಿದ್ದು. ಈ ಹಾರೋಹಳ್ಳಿ ಇರುವುದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ. ಈ ಕ್ಷೇತ್ರದ ಶಾಸಕ ಜೆಡಿಎಸ್ ನ ಜಿ.ಟಿ.ದೇವೇಗೌಡ.
ನನ್ನ ಪೀಠಿಕೆ ಸಾಕಿನ್ನು, ಮತ್ತೆ ತಡ ಮಾಡುವುದಿಲ್ಲ. ಶಾಸಕ ದೇವೇಗೌಡರು ಪತ್ರಿಕಾಗೋಷ್ಠಿ ಕರೆದು ಒಂದು ಫರ್ಮಾನನ್ನೇ ಹೊರಡಿಸುತ್ತಾರೆ. ರಾಮನ ಅವತಾರ ಎತ್ತಿದ ಆ ಕೃಷ್ಣ ಶಿಲೆ ಸಿಕ್ಕಿದ ಹಾರೋಹಳ್ಳಿ ಹನುಮಯ್ಯ ಅವರ ಮಗ ರಾಮದಾಸ ಅವರ ಮಾಲಿಕತ್ವದ ಜಾಗದಲ್ಲಿಯೇ ಒಂದು ರಾಮನ ದೇವಸ್ಥಾನ ನಿರ್ಮಿಸಲಾಗುವುದು. ಅದಕ್ಕೆ ರಾಮದಾಸ ಅವರ ಒಪ್ಪಿಗೆ ಪಡೆಯಲಾಗಿದೆ. ಅಯೋಧ್ಯೆಯಲ್ಲಿ 2024 ಜನವರಿ 22 ರಂದು ರಾಮಮಂದಿರ ಲೋಕಾರ್ಪಣೆಗೆ ನಿಗದಿ ಆದ ದಿನ. ಅಂದೇ ಹಾರೋಹಳ್ಳಿಯಲ್ಲಿ ಕೃಷ್ಣಶಿಲೆ ಸಿಕ್ಕಿದ ಜಾಗದಲ್ಲೂ ರಾಮನ ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಶೇಷ ಪೂಜೆ ನೆರವೇರಿಸಲಾಗುವುದು ಎಂದು ಹೇಳಿದ ದೇವೇಗೌಡರು ಮುಂದುವರಿದು, ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಬಂದ ಸಂದರ್ಭದಲ್ಲಿ ಚಾಮುಂಡೇಶ್ವರಿಗೆ ಪ್ರಾರ್ಥನೆ ಮಾಡಿದ್ದರು. ಅದರ ಪರಿಣಾಮ ಮೈಸೂರಿನಲ್ಲೇ ಬಾಲರಾಮನ ಮೂರ್ತಿ ನಿರ್ಮಾಣಕ್ಕೆ ಶಿಲೆ ಸಿಕ್ಕಿದೆ. ಶಾಸಕರ ಮಾತು ಅಲ್ಲಿಗೇ ನಿಲ್ಲುವುದಿಲ್ಲ. ‘ಶಿಲೆ ಸಿಕ್ಕಿದ ಸ್ಥಳದ ಮಾಲಕ ರಾಮದಾಸ್ ದಲಿತರು. ದಲಿತ ಬಾಂಧವರ ಜಾಗದಲ್ಲಿ ಶಿಲೆ ಸಿಕ್ಕಿದ್ದರಿಂದ ಅವರಿಗೆ ಅಯೋಧ್ಯಾಕ್ಕೆ ಕರೆದುಕೊಂಡು ಹೋಗಿ ರಾಮನ ದರ್ಶನ ಮಾಡಿಸುವ ವ್ಯವಸ್ಥೆ ಮಾಡುತ್ತೇವೆ’ ಎಂದು ಶಲ್ಯ ಕೊಡವಿ ಹೇಳುತ್ತಾರೆ. ರಾಮದಾಸರನ್ನು ಮತ್ತು ಅವರ ಕುಟುಂಬದವರ ಬಗ್ಗೆ ಪ್ರಸ್ತಾಪ ಮಾಡುವಾಗ ಯಾಕಾಗಿ ಪದೆ ಪದೇ ದಲಿತರು … ದಲಿತರು ಅಂತ ಶಾಸಕರು ಪ್ರಸ್ತಾಪಿಸಿದರೆಂದು ಯಾರಿಗೂ
ಈವರೆಗೂ ಅರ್ಥ ಆಗಿಲ್ಲ. ಹಾಗೆ ಹೇಳುವುದರ ಮೂಲಕ ಸಾಮಾಜಿಕ ವ್ಯವಸ್ಥೆಯ ಏರಿಳಿತವನ್ನು ಮತ್ತೆ ಮತ್ತೆ ಎಚ್ಚರಿಸುವ ಕೆಲಸ ಮಾಡಿದರೇ? ಅಥವಾ ಚುನಾವಣೆಯಲ್ಲಿ ಆ ಸಮುದಯಾದವರ ಮತಗಳು ಕೆಲಸಕ್ಕೆ ಬರಬಹುದು ಎಂಬ ಕಾರಣಕ್ಕೆ ಹಾಗೆಂದಿರಬಹುದೇ? ಶಾಸಕರು ಹೇಳಿದಂತೆ 2024 ಜವವರಿ 22 ರಂದೇ ಹಾರೋಹಳ್ಳಿಯ ಶಿಲೆ ಸಿಕ್ಕಿದ ಜಾಗದಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ವಿಶೇಷ ಪೂಜೆ ಮಾಡಿಸಲಾಯಿತು. ಅರಮನೆ ರಾಜಪುರೋಹಿತರನ್ನು ಕರೆಸಿ ಸ್ಥಳದಲ್ಲಿ ವಿಶೇಷ ಪೂಜೆ ಮಾಡಿಸಿದರು. ಸಾವಿರಾರು ಭಕ್ತರು
ಬಂದು ಕೃತಾರ್ಥರಾದರು.
ಕ್ಷಮಿಸಿ, ನನ್ನ ಮುಖ್ಯವಾದ ಪ್ರಶ್ನೆ ಇವ್ಯಾವುದೂ ಅಲ್ಲ. ಅಯೋಧ್ಯಾ ಬಾಲರಾಮನ ಮೂರ್ತಿ ಮೈಸೂರಿನ ಕೃಷ್ಣಶಿಲೆಯಲ್ಲಿ ನಿರ್ಮಾಣವಾದುದು ಆ ಬಾಗದ ರಾಮಭಕ್ತರಿಗೆಲ್ಲ ಸಹಜವಾಗಿಯೇ ಖುಷಿಯಾಗಿರುತ್ತದೆ. ಆದರೆ ಆ ಜಾಗದಲ್ಲಿ ದೇವಸ್ಥಾನ ಕಟ್ಟಲು ಹೊರಟ ಈ ಶಾಸಕ ಏನನ್ನು ಸಾಧಿಸಲು ಹೊರಟಿದ್ದಾರೆ ? ಇದು ಕೇವಲ ರಾಮಭಕ್ತಿ ಅಥವಾ ಧಾರ್ಮಿಕ ಶ್ರದ್ಧೆ ಅನಿಸುವುದಿಲ್ಲ. ರಾಜಕಾರಣಿಗಳು ಅಮಾಯಕ ಭಕ್ತರ ಮತ್ತು ಅಸಹಾಯಕರ ಹಸಿವನ್ನೇ ಬಂಡವಾಳ ಮಾಡಿಕೊಂಡೆ ಇಲ್ಲಿಯವರೆಗೆ ಬಂದಿದ್ದಾರೆ. ಯಾಕೆ ಆ ಜಾಗದಲ್ಲಿ ರಾಮಮಂದಿರವನ್ನೇ ನಿರ್ಮಾಣ ಮಾಡಬೇಕು? ಈಗಾಗಲೇ ಸಂದಿ ಸಂದಿಯಲ್ಲೆಲ್ಲ ದೇವಸ್ಥಾನಗಳೇ ತಲೆ ಎತ್ತಿ ನಿಂತಿವೆ. ಮತ್ತೂ ತಲೆ ಎತ್ತುತ್ತಲೇ ಇವೆ. ಆದರೆ ಅಮಾಯಕ ಭಕ್ತ ಮಾತ್ರ ಇನ್ನೂ ತಲೆ ತಗ್ಗಿಸಿಯೇ ನಿಂತಿದ್ದಾನೆ. ಲಾಗಾಯ್ತಿನಿಂದ ಬಂದ ದೇವಸ್ಥಾನದಲ್ಲಿನ ದೇವರನ್ನು ಆರಾಧಿಸಿಕೊಂಡು ಬರುವುದು ಒಂದು ರೀತಿ. ಆದರೆ ಏನೂ ಇಲ್ಲದ ಸ್ಥಳದಲ್ಲಿ
ಕೇವಲ ಶಿಲೆ ಸಿಕ್ಕಿದ ಜಾಗ ಎಂಬ ನೆಪ ಮಾಡಿಕೊಂಡು ಮತ್ತೊಂದು ಹೊಸ ದೇವಸ್ಥಾನವನ್ನು ವಂತಿಗೆ ಸೇರಿಸಿ ನಿರ್ಮಾಣ ಮಾಡಲು ಹೊರಟಿರುವುದು ಭಾರತದಂಥ ದೇಶಕ್ಕೆ ಒಳ್ಳೆಯ ಬೆಳವಣಿಗೆಯಲ್ಲ. ನಿಜ, ಭಾರತದಂಥ ದೇಶಕ್ಕೆ ಬೇಕಾಗಿರುವುದು ಸರಕಾರಿ ಶಾಲೆ, ಕಾಲೇಜು, ಗ್ರಂಥಾಲಯಗಳು. ಶ್ರೀರಾಮನ ವಿಗ್ರಹಕ್ಕಾಗಿ ಕೃಷ್ಣಶಿಲೆ ಸಿಕ್ಕಿದ ದಲಿತರ ಜಾಗದಲ್ಲಿ ಯಾಕೆ ಒಂದು ಸರಕಾರಿ ಶಾಲೆಯನ್ನೇ ನಿರ್ಮಿಸಬಾರದು? ಯಾಕೆ ಒಂದು ಸರಕಾರಿ ಕಾಲೇಜನ್ನೇ
ನಿರ್ಮಿಸಬಾರದು? ಯಾಕೆ ಒಂದು ಸರಕಾರಿ ಗ್ರಂಥಾಲಯವನ್ನೇ ಸ್ಥಾಪಿಸಬಾರದು? ಅದ್ಯಾವುದು ಆಗಲ್ಲ ಅಂದರೆ ಪುಟಾಣಿ ಮಕ್ಕಳಿಗೆ ಸಕಲ ಸೌಲಭ್ಯ ಇರುವ ಒಂದು ಅಂಗನವಾಡಿಯನ್ನೇ ಯಾಕೆ ಕಟ್ಟಬಾರದು?
ಇನ್ನೆಷ್ಟು ಅಂತ ಜನರನ್ನು ಮರಳು ಮಾಡಲು ಹೊರಟಿದ್ದೀರಿ ದೇವೇಗೌಡರೇ? ಬಿಜೆಪಿ ಪಕ್ಷ ಈ ನೆಲದ ದೇವರು, ಧರ್ಮವನ್ನೇ ಬಂಡವಾಳ ಮಾಡಿಕೊಂಡು ಗೆಲುವು ಸಾಧಿಸಲು ಸಾಧ್ಯವಾದರೆ, ತಾವೂ ಯಾಕೆ ಒಂದು ಕೈ ನೋಡಬಾರದು ಎಂಬ ಉಮೇದಿಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಬೀಜ ಜನರ ತಲೆಯಲ್ಲಿ ಬಿತ್ತಲು ಯಾಕೆ ಪ್ರಯತ್ನಿಸಿರಬಾರದು ಎಂಬ ಲೆಕ್ಕಾಚಾರ ಹಾಕಿರುತ್ತಾರೆ.
ಕಾಂಗ್ರೆಸ್ ನಲ್ಲೂ ಅನೇಕರು ‘ಧರ್ಮ’ ದ ಹಾದಿ ಹಿಡಿದರೆ ತಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಅಂತ ಮನಸ್ಸಿನಲ್ಲೇ ಮಂಡಿಗೆ ಜಗಿಯುತ್ತಿದ್ದಾರೆ. ಒಟ್ಟಾರೆ ಎಲ್ಲ ರಾಜಕೀಯ ಪಕ್ಷಗಳೂ ಜನರ ಭಾವನೆ ಮತ್ತು ಅಸಹಾಯಕತೆಗಳನ್ನಿಟ್ಟುಕೊಂಡು ಆಟ ಆಡುತ್ತ ಸಿಂಹಾಸನದ ಹತ್ತಿರ ಹತ್ತಿರ ಹೋಗಲು ಪ್ರಯತ್ನಿಸುತ್ತಿವೆ. ಮೈಸೂರು ಭಾಗದ ಜನರು ಹಾರೋಹಳ್ಳೀಯಲ್ಲಿ‘ ಆ ಸ್ಥಳದಲ್ಲಿ ರಾಮ ಮಂದಿರ ಬೇಡ, ಅದೇ ಸ್ಥಳಲ್ಲಿ ಶಾಲೆ ಬೇಕು’ ಎಂಬ ಆಂದೋಲನ ಮಾಡಿದರೆ ಮುಂದಿನ ದಿನಗಳಲ್ಲಿ ಭಾರತ ‘ಪ್ರಕಾಶಿಸಬಹುದು’, ‘ಅಚ್ಛೇ ದಿನ್ ‘ಬರಲೂಬಹುದು.
ಲೇಖಕರು
ಅರವಿಂದ ಕರ್ಕಿಕೋಡಿ
ಪ್ರಧಾನ ಸಂಪಾದಕರು
ಹಣತೆವಾಹಿನಿ