ಮಂಗನ ಕಾಯಿಲೆ ಉಲ್ಬಣ : ಸರಕಾರದ ನಿರ್ಲಕ್ಷ್ಯ ಸಲ್ಲ

ಉತ್ತರ ಕನ್ನಡ ಸಹಿತ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾತ್ರವಲ್ಲ, ಬೇರೆ ಬೇರೆ ರಾಜ್ಯಗಳಲ್ಲೂ ಈ ವರ್ಷ ಮತ್ತೆ ಮಂಗನ ಕಾಯಿಲೆ ಕಾಣಿಸಿಕೊಂಡ ಬಗ್ಗೆ ವರದಿಗಳು ಬರುತ್ತಿವೆ.

ಅದರಲ್ಲೂ ಈ ಬಾರಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಮಂಗನ ಕಾಯಿಲೆ ಗಾಬರಿ ಹುಟ್ಟಿಸುವ ಮಟ್ಟಿಗೆ ಹೆಚ್ಚಿನ ಸಂಖ್ಯೆಗಳಲ್ಲಿ ಕಂಡುಬಂದಿದೆ. ಇನ್ನೂ ಆತಂಕದ ಸಂಗತಿ ಏನೆಂದರೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಪ್ಪನಮನೆ ಗ್ರಾಮದ ಅನನ್ಯ ಎಂಬ ಹೆಸರಿನ 18 ವರ್ಷದ ಹುಡುಗಿಯೋರ್ವಳು ಜನವರಿಯಲ್ಲಿ ಮಂಗನ ಕಾಯಿಲೆಗೆ ಬಲಿಯಾಗಿದ್ದಾಳೆ. ವಿಪರೀತ ಚಳಿ ಜ್ವರ ಮತ್ತು ತಲೆ ನೋವು ಬಂದ ಆಕೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಲ್ಲೂ ಆಕೆಯನ್ನು ಬದುಕಿಸಲು ಸಾಧ್ಯವಾಗಿಲ್ಲ ಎಂದು ಶಿವಮೊಗ್ಗ ಡಿ.ಎಚ್.ಓ. ರಾಜೆಶ್ ಸುರಗಿಹಳ್ಳಿ ಅವರು ‘ಹಣತೆ ವಾಹಿನಿ’ಗೆ ತಿಳಿಸಿದ್ದಾರೆ.

ಸರ್ಕಾರ ಈ ಬಲಿಯನ್ನು ಹಗುರವಾಗಿ ತೆಗೆದುಕೊಂಡಂತೆ ಅನಿಸುತ್ತದೆ. ಯಾಕೆಂದರೆ ಮಂಗನ ಕಾಯಿಲೆಗೆ ಜೀವ ಕಳೆದುಕೊಂಡರೂ ಸರಕಾರ ಈ ಸವಾಲನ್ನು ಎದುರಿಸಲು ಇನ್ನೂ ಸರಿಯಾದ ದಿಕ್ಕಿನಲ್ಲಿ ಕಾರ್ಯಪ್ರವತ್ತವಾದಂತೆ ಕಾಣಿಸುತ್ತಿಲ್ಲ. ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸಲು ನಿರೀಕ್ಷಿತ ಮಟ್ಟದಲ್ಲಿ ಕೆಲಸಗಳು ನಡೆದಂತೆ ಅನಿಸುತ್ತಿಲ್ಲ.

ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಮಲೆನಾಡು, ಅರೆಮಲೆನಾಡು ಪ್ರದೇಶದಲ್ಲಿ ಮಂಗನ ಕಾಯಿಲೆ ಗೋಚರವಾಗುತ್ತದೆ. ಕ್ಯಾಸನೂರು ಫಾರೆಸ್ಟ್ ಡಿಸೀಸ್ (Kyasanur Forest Disease) ಎಂದು ಕರೆಯಲ್ಪಡುವ ಮಂಗನ ಕಾಯಿಲೆ ನಿಯಂತ್ರಣದ ವಿಚಾರದಲ್ಲಿ ಅಂತಹ ಕಳಕಳಿ ಕಂಡುಬಂದಿಲ್ಲವೇಕೆ ಎಂಬ ಪ್ರಶ್ನೆ ಮಲೆನಾಡಿನ ಭಾಗದ ಜನರನ್ನು ಕಾಡುತ್ತಿದೆ. ಮಂಗನ ಕಾಯಿಲೆಯು ಮಲೆನಾಡಿಗೆ ಹೊಸದಲ್ಲ.; ಇದರ ಬಗ್ಗೆ ಸರ್ಕಾರಗಳ ನಿರ್ಲಕ್ಷ್ಯವೂ
ಹೊಸದಲ್ಲ. ಆದರೆ ಪ್ರತಿ ಸಲವೂ ಜನ ‘ಈ ಸಲ ಪುನರಾವರ್ತನೆ ಆಗದಿರಲಿ’ ಎಂದು ಅಸಹಾಯಕರಾಗಿ ಅವರಿಗೆ ಅವರೇ ನಿಟ್ಟುಸಿರು ಬಿಡುತ್ತ ದೈನಂದಿನ ಕೃಷಿ ಕೆಲಸಗಳಲ್ಲಿ ಮಗ್ನರಾಗಿರುತ್ತಾರೆ. ನಿಯಂತ್ರಣ ಕ್ರಮಗಳನ್ನು ಕೂಡಲೇ ತೆಗೆದುಕೊಂಡರೆ ಸಾವು-ನೋವು ತಡೆಯಬಹುದು. ಹಿಂದೆಲ್ಲ ಮಂಗನ ಕಾಯಿಲೆಗೆ ಸಾವಿರಾರು ಜನ ಬಲಿಯಾದವರಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ, ಹೊನ್ನಾವರ, ಜೊಯಿಡಾ, ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ, ಕೊಪ್ಪ, ದಕ್ಷಿಣ ಕನ್ನಡದ ಪುತ್ತೂರು, ಸುಳ್ಯ ಇವೆಲ್ಲ ಪ್ರತಿ ಸಲ ಕಾಯಿಲೆ ಭಾದಿತವಾಗುವ ಪ್ರದೇಶಗಳು. ಆದರೆ ಈ ಬಾರಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ವಿಪರೀತವಾಗಿ ಅಂದರೆ 36 ಜನರಿಗೆ ಮಂಗನ ಕಾಯಿಲೆಯ ಸೋಂಕು ತಗುಲಿ ಜನತೆಯಲ್ಲಿ ಬೀತಿ ಹುಟ್ಟಿಸಿದೆ. ಈ ಬಗ್ಗೆ ‘ಹಣತೆ ವಾಹಿನಿ’ ಉತ್ತರ ಕನ್ನಡದ ಡಿಎಚ್ಓ ಡಾ. ನೀರಜ್


ಬಿ.ವಿ. ಅವರನ್ನು ಸಂಪರ್ಕಿಸಿದಾಗ ಇಲಾಖೆ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಅಲ್ಲಿ ಸೋಂಕಿತರ ಪೈಕಿ 23 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಜನ ಸಿದ್ದಾಪುರ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದರೆ, 3 ಮಂದಿ ಮಣಿಪಾಲದಲ್ಲಿ ಹಾಗೂ 1 ಸೋಂಕಿತ ಮಂಗಳೂರಿನ ಎನಪೋಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರ ವರದಿಯನ್ನು ಪ್ರತಿನಿತ್ಯ ತರಿಸಿಕೊಂಡು ನಿಗಾ ವಹಿಸುತ್ತಿದ್ದೇವೆ. ಸೋಂಕಿತರ
ರಕ್ತಮಾದರಿಯನ್ನು ಪಡೆದು ಶಿವಮೊಗ್ಗದ ಕೆ.ಎಫ್.ಡಿ. ಲ್ಯಾಬರೋಟರಿಗೆ ಕಳುಹಿಸಲಾಗಿತ್ತು. ಯಾರ ಆರೋಗ್ಯದ ಬಗ್ಗೂ ಆತಂಕ ಪಡಬೇಕಾಗಿಲ್ಲ. ಸಿದ್ದಾಪುರದಲ್ಲಿ ಒಂದು ಅಂಬುಲೆನ್ಸ್ ನ್ನು ಮಂಗನ ಕಾಯಿಲೆ ಸೋಂಕಿತರಿಗಾಗಿಯೇ ತಕ್ಷಣ ಆಸ್ಪತ್ರೆಗೆ ದಾಖಲಿಸಲು ಅನುಕೂಲವಾಗಲಿ ಎಂದು ವಿಶೇಷವಾಗಿ ಮೀಸಲಾಗಿಡಲಾಗಿದೆ ಎಂದು ತಿಳಿಸಿದರು.

ಹಾಗೆಯೇ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ 1, ಕೊಪ್ಪ ತಾಲೂಕಿನಲ್ಲಿ 2 ಜನರಲ್ಲಿ ಮಂಗನ ಕಾಯಿಲೆ ಸೋಂಕು ದೃಢಪಟ್ಟಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ, ಮಂಗನ ಕಾಯಿಲೆ ನಿಯಂತ್ರಿಸುವುದು ಆಡಳಿತದ ಆದ್ಯತೆ ಆಗಬೇಕು. ಖಾಸಗಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಉಚಿತ ಚಿಕಿತ್ಸೆ ಕೊಡುವಲ್ಲಿ ಸರ್ಕಾರ ಮುಂದಾಗಬೇಕಾಗಿದೆ. ಸೋಂಕಿತರನ್ನು ತುರ್ತು ಚಿಕಿತ್ಸೆಗೆ ಕರೆದೊಯ್ಯಲು ಬಾಧಿತ ತಾಲೂಕುಗಳ ಸರ್ಕಾರಿ ಆಸ್ಪತ್ರೆಯಲ್ಲಿ ಅಂಬುಲೆನ್ಸ್ ಸಿದ್ದವಿಟ್ಟಿರಬೇಕು. ಸಿದ್ದಾಪುರದಲ್ಲಿ ಒಂದು ಅಂಬುಲೆನ್ಸ್ ನ್ನು ಮಂಗನ ಕಾಯಿಲೆ ಸೋಂಕಿತರಿಗಾಗಿಯೇ ಇಟ್ಟಿರುವುದು ಒಳ್ಳೆಯ ತೀರ್ಮಾನವಾಗಿದೆ.

ಶಿವಮೊಗ್ಗ ಜಿಲ್ಲೆಯ ಕ್ಯಾಸನೂರಿನಲ್ಲಿ 1957ರಲ್ಲಿ ಮೊದಲ ಬಾರಿಗೆ ಕಂಡು ಬಂದು ನೂರಾರು ಸಾವುಗಳಾದರೂ, ಸೋಂಕಿತರು ಇನ್ನಿಲ್ಲದಂತೆ ಬವಣೆ ಪಡುವಂತಾದರೂ ಈ ತನಕ ಸರಕಾರ ಸೋಂಕು ಪತ್ತೆಗೆ ಬೇಕಾದ ಅತ್ಯಾಧುನಿಕ ಪ್ರಯೋಗಾಲಯ ಈ ತನಕ ಸ್ಥಾಪಿತವಾಗದಿರುವುದು ಸರಕಾರ ಮಂಗನ ಕಾಯಿಲೆಯನ್ನು ಎಷ್ಟು ಹಗುರವಾಗಿ ಪರಿಗಣಿಸಿದೆ ಎಂಬುದಕ್ಕೆ ನಿದರ್ಶನ.

ಮಂಗನ ಕಾಯಿಲೆ ಕಾಡಂಚಿನ ಪ್ರದೇಶಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತ ಬಂದಿದೆ. ಅರಣ್ಯ ಪ್ರದೇಶದ ಒತ್ತುವರಿಯೂ ಈ ಸೋಂಕು ಹರಡುವ ಕಾರಣಗಳಲ್ಲೊಂದು ಎಂದು ಗುರುತಿಸಲಾಗಿದೆ. ಸೋಂಕು ಹರಡುವ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದರೂ ಕಾಡಂಚಿನ ಜನ ಸರಕಾರದ ಹಳೆ ಕಾಲಕ ಚಿಕಿತ್ಸೆಯ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ.ಆರೋಗ್ಯ ಇಲಾಖೆಯು ಮೊದಲು ಕಾಡಂಚಿನ ಜನರನ್ನುವಿಶ್ವಾಸಕ್ಕೆ
ತೆಗೆದುಕೊಂಡು, ಅವರಲ್ಲಿ ಜಾಗೃತಿ ಮೂಡಿಸಬೇಕು. ಅವರಲ್ಲಿ ಆತಂಕ, ಅನುಮಾನಗಳನ್ನು ದೂರ ಮಾಡಬೇಕು. ಇಲ್ಲದಿದ್ದರೆ ಮಾಡುವ ಕೆಲಸಗಳೆಲ್ಲವೂ ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತಾಗುತ್ತದೆ.

ಮಂಗನ ಕಾಯಿಲೆಗೆ ಈವರೆಗೂ ರೋಗ ನಿರೋಧಕ ಲಸಿಕೆಯನ್ನು ನೀಡಲಾಗುತ್ತದೆಯೇ ಹೊರತು ನಿರ್ಧಿಷ್ಟ ಚಿಕಿತ್ಸೆ ಲಭ್ಯವಿಲ್ಲ. ಪ್ರತಿ ಬೇಸಿಗೆ ಕಾಲದಲ್ಲಿ ಈ ಭಾಗದ ಜನರನ್ನು ವಾರ್ಷಿಕ ಪಿಡುಗಾಗಿ ಕಾಡುತ್ತಿರುವ ಕೆ.ಎಫ್.ಡಿ ಇತ್ತೀಚಿನ ವರ್ಷಗಳಲ್ಲಿ ಚಳಿಗಾಲದಲ್ಲೇ ಕಾಣಿಸಿಕೊಂಡು ಆತಂಕ ಹೆಚ್ಚಿಸುತ್ತಿದೆ. ಮಳೆ ಪ್ರಮಾಣ ಕಡಿಮೆ ಆಗುತ್ತಿರುವುದೂ ಇದಕ್ಕೆ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಮಲೆನಾಡು ಮಾತ್ರವಲ್ಲ, 2018-19ರಲ್ಲಿ ಬಂಡೀಪುರ ಭಾಗದಲ್ಲೂ ಮಂಗನ ಕಾಯಿಲೆ ಕಾಣಿಸಿಕೊಂಡು ಆ ಭಾಗದ ಜನರನ್ನು ಬೆಚ್ಚಿಬಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ನೆರೆ ರಾಜ್ಯಗಳಾದ ಕೇರಳ, ತಮಿಳುನಾಡಿನ ಕೆಲ ಪ್ರದೇಶಗಳಿಗೂ ಈ ಕಾಯಿಲೆ ಹರಡಿರುವುದನ್ನು ಕಾಣಬಹುದು. ಹೀಗಾಗಿ ಬಾಧಿತ ರಾಜ್ಯಗಳು ಈ ಬಗ್ಗೆ ಗಂಭೀರವಾಗಿ ಆಲೋಚಿಸಿ, ಮಂಗನ ಕಾಯಿಲೆಗೆ ಮದ್ದು ಕಂಡು ಹಿಡಿಯುವ ಕೆಲಸ್ಕಕೆ ಬಲ ತುಂಬಬೇಕು.

ನೆನಪಾಗುವ ಡಾ. ಬಾಸ್ಕರ್- ಡಾ. ಭೋಸ್ಕಿ


ಪ್ರತಿ ಬಾರಿಯಂತೆ ಈ ಬಾರಿಯೂ ಮಂಗನ ಕಾಯಿಲೆ ಬಂದು ಉತ್ತರ ಕನ್ನಡ ಜಿಲ್ಲೆಯನ್ನು ಆತಂಕಕ್ಕೆ ತಳ್ಳಿರುವ ಸಂದರ್ಭದಲ್ಲಿ ಹೊನ್ನಾವರ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಡಾ.ಟಿ.ಎನ್.ಭಾಸ್ಕರ್ ಮತ್ತು ಡಾ. ಐ.ಐ.ಭೋಸ್ಕಿ ಅವರನ್ನು ಈ ಭಾಗದ ಜನ ಪದೇ ಪದೆ ನೆನಪಿಸಿಕೊಳ್ಳುತ್ತಿದ್ದಾರೆ. ಅವರೀರ್ವರೂ ಇದೀಗ ನಿಧನರಾಗಿದ್ದರೂ ತಮ್ಮ ಸೇವಾವಧಿಯಲ್ಲಿ ಕೆ.ಎಫ್.ಡಿ. ವೈದ್ಯಾಧಿಕಾರಿಗಳಾಗಿ ಅತ್ಯಂತ ಕಳಕಳಿಯಿಂದ ಮಂಗನ ಕಾಯಿಲೆ ಸೋಂಕಿತರಿಗೆ ಪರಿಣಾಮಕಾರಿಯಾಗಿ ಸ್ಪಂದಿಸಿದ್ದರು.

ಬೇಸಿಗೆ ಬಂತು ಅಂದರೆ ತಮ್ಮ ಎಂದಿನ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುವುದರ ಜೊತೆಗೇ ಸರಕಾರಿ ಅದೇಶದಂತೆ ಕೆ.ಎಫ್.ಡಿ ಜವಾಬ್ದಾರಿ ಕೂಡ ನಿಭಾಯಿಸಬೇಕಿತ್ತು. ಕೆಲವೊಮ್ಮೆ ಸೋಂಕಿತ ಬೇರೆ ಜಿಲ್ಲೆಗಳಗೂ ಹೋಗಿ ಅಲ್ಲಿಯ ರೋಗಿಗಳಿಗೆ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿ ಬರುತ್ತಿದ್ದರು.

ತೊಂಭತ್ತರ ದಶಕದಲ್ಲಂತೂ ಮಂಗನ ಕಾಯಿಲೆ ಜಿಲ್ಲೆಯ ಜೋಯಿಡಾ, ಹೊನ್ನಾವರ, ಸಿದ್ದಾಪುರ ಭಾಗಗಳಲ್ಲಿ ವಿಪರೀತ ಜಾಸ್ತಿಯಾಗಿತ್ತು. ಮೇಲಿನ ಎಲ್ಲ ತಾಲೂಕುಗಳ ಅರಣ್ಯ ಪ್ರದೇಶಗಳಲ್ಲೂ ಮಂಗ ಸಾಯುವ ಸಂಖ್ಯೆ ಜಾಸ್ತಿಯಾಗಿತ್ತು. ಆಗ ಈ ಇಬ್ಬರೂ ತಮ್ಮ ತಮ್ಮ ಸೇವಾವಧಿಯಲ್ಲಿ ಕೆ.ಎಫ್.ಡಿ. ಬಗ್ಗೆ ಅಷ್ಟೇ ಜವಾಬ್ದಾರಿಯಿಂದ ಇಲಾಖೆ ಕೆಲಸಗಳನ್ನು ನಿರ್ವಹಿಸಿದ್ದಾರೆ. ಯಾವುದೇ ಪ್ರದೆಶಗಳಳ್ಲಿ ಮಂಗ ಸತ್ತು ಬಿದ್ದರೂ ನಸುಕಿನಲ್ಲೇ ಡಾ. ಭಾಸ್ಕರ್ ಮತ್ತು ಡಾ. ಬೊಸ್ಕಿ ( ಕೆ.ಎಫ್.ಡಿ.ಯಲ್ಲಿ ಇವರಿಬ್ಬರ ಸೇವೆ ಬೇರೆ ಬೇರೆ ವರ್ಷಗಳಲ್ಲಿತ್ತು) ಅರಣ್ಯಗಳಲ್ಲಿ ಮಂಗ ಸತ್ತ ಸ್ಥಳಕ್ಕೇ ತೆರಳಿ ಅಲ್ಲಿ ಹರಿದಾಡುವ ಉಣ್ಣೆಗಳನ್ನು ಹಿಡಿದು, ಅದರ ರಕ್ತದ ಮಾದರಿಯನ್ನು ಸಂಗ್ರಹಿಸುತ್ತಿದ್ದರು. ಅಲ್ಲದೇ ಮಂಗಳ ಹೊಟ್ಟೆ ಭಾಗವನ್ನು ಕತ್ತರಿಸಿ ಅದರ ಲಿವರ್ ಮತ್ತಿತರ ಅಗತ್ಯ ವಸ್ತುಗಳ
ಸಣ್ಣ ತುಂಡನ್ನು ಕತ್ತರಿಸಿ ಪುಣೆ ಲ್ಯಾಬ್ ಗೆ ಕಳುಹಿಸುತ್ತಿದ್ದರು. ಹೀಗೆ ಮಾಡುವಾಗ ವೈದ್ಯರು ಜೀವದ ಹಂಗು ತೊರದು ಕೆಲಸ ಮಾಡಬೇಕಾಗಿರತ್ತು. ಅಷ್ಟೆ ಅಲ್ಲ, ತಮ್ಮ ಕುಟುಂಬ ಸದಸ್ಯರ ಜೀವದ ಬಗ್ಗೂ ಕಾಳಜಿ ವಹಿಸಬೇಕಿತ್ತು. ಯಾಕೆಂದರೆ ಮಂಗ ಸತ್ತ ಪ್ರದೆಶಕ್ಕೆ ಹೋಗಿ ಬಂದ ಇವರ ಬಟ್ಟೆಗಳ ಮೇಲೆಯೇ ಉಣ್ಣೆ ಅಥವಾ ವೈರಸ್ ಹರಿದು ಮನೆಗೆ ಬಂದಾಗ ಕುಟುಂಬ ಸದಸ್ಯರಿಗೂ ಅಪಾಯ ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿರಲಿಲ್ಲ. ಇಂಥ ಎಲ್ಲ ಸವಾಲನ್ನೂ ಎದುರಿಸಿ ಈ ಇಬ್ಬರು ತಮ್ಮ ಸರಕಾರಿ ಸೇವೆಯಲ್ಲಿ ಪ್ರಾಮಾಣಿಕವಾಗಿದ್ದು ಜನರಿಗೆ ಮಂಗನ ಕಾಯಿಲೆ ಚಿಕಿತ್ಸೆ ಕೊಡುವಲ್ಲಿ ಮತ್ತು ಸೋಂಕು ಪೀಡಿತ ಪ್ರದೇಶದ ಅಧ್ಯಯನ ಮಾಡುವಲ್ಲಿ ಗಂಭೀರವಾಗಿ ಸ್ಪಂದಿಸಿದ್ದರು, ಹಾಗಾಗಿ ಪ್ರತಿ ವರ್ಷದ ಬೇಸಿಗೆಯಲ್ಲಿ ಮಂಗನ ಕಾಯಿಲೆ ಬಂದಾಗಲೆಲ್ಲ ಜನರಿಗೆ ಡಾ. ಟಿಎನ್.ಭಾಸ್ಕರ್ ಮತ್ತು ಡಾ. ಐ ಐ ಭೋಸ್ಕಿ ಅವರ ನೆನಪಾಗದಿರಲು ಸಾಧ್ಯವೇ?

ಏಳು ದಶಕಗಳ ಹಿಂದೆಯೇ ಕ್ಯಾಸನೂರು ಫಾರೆಸ್ಟ್ ಡಿಸೀಸ್ ರಾಜ್ಯದಲ್ಲಿ ಕಾಣಿಸಿಕೊಂಡಿದ್ದು ಈವರೆಗೂ ಸರಿಯಾದ ಚಿಕಿತ್ಸೆ, ವೈರಾಣು ಶಮನದ ಲಸಿಕೆ ಇತ್ಯಾದಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇದರ ಬಗ್ಗೆ ಸರ್ಕಾರದ ಮುತುವರ್ಜಿ ಏನೇನೂ ಸಾಲದು. ಶಿವಮೊಗ್ಗದಲ್ಲಿ ಓಬಿರಾಯನ ಕಾಲದ ಕೆ.ಎಫ್.ಡಿ. ಲ್ಯಾಬರೋಟರಿ ಇಟ್ಟುಕೊಂಡು ಅದರ ಮೂಲಕವೇ ಸುತ್ತ ಮುತ್ತಲ ಜಿಲ್ಲೆಗಳ ಮಂಗನ ಕಾಯಿಲೆ ಸೋಂಕಿನ ರಕ್ತ, ಕಫ ಇತ್ಯಾದಿಗಳ ಪರೀಕ್ಷೆಗೆ ಬಳಸಿಕೊಳ್ಳಲಾಗುತ್ತಿದೆ. ಚಿಕಿತ್ಸೆಗೆ ಅಂತ ಈ ಎಂಭತ್ತರ ದಶಕದಲ್ಲಿ ಕಂಡು ಹಿಡಿದ ಲಸಿಕೆಯನ್ನೇ ಈಗಲೂ ಸೋಂಕಿತರಿಗೆ ಕೊಡುತ್ತಿದ್ದಾರೆ. ಅದರಲ್ಲೂ ಈ ವರ್ಷ ಆ ಹಳೆಯ ಲಸಿಕೆಯ ಕೊರತೆಯೂ ಇಲ್ಲದೇ ಪೂರೈಕೆಯನ್ನೇ ನಿಲ್ಲಿಸಲಾಗಿದೆ. ವೈದ್ಯರು ಹರಸಾಹಸ ಪಟ್ಟು ರೋಗಿಗಳನ್ನು ಗುಣಪಡಿಸುವುದು ಸವಾಲಾಗಿ ಪರಿಗಣಿಸಲ್ಪಟ್ಟಿದೆ.

1957 ರಲ್ಲಿ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಗ್ರಾಮದಲ್ಲಿ ಕಾಣಿಸಿಕೊಂಡ ಈ ಕಾಯಿಲೆ

Arvind karkikodi

ಲೇಖಕರು
ಅರವಿಂದ ಕರ್ಕಿಕೋಡಿ
ಪ್ರಧಾನ ಸಂಪಾದಕರು
ಹಣತೆವಾಹಿನಿ

Leave a Reply

Your email address will not be published. Required fields are marked *