ಮಲ್ಲಿಗೆಯ ನೆಲವೆಂದೇ ಯಾರಿಗೇ ಆದರೂ ಆಪ್ತವಾಗಿಬಿಡಬಹುದಾದ ನೆಲ ಭಟ್ಕಳ. ಹಾಗೆಯೇ ಕೋಟೆ, ಶಾಸನ, ಬಸದಿ, ದೇಗುಲ, ಮಸೀದಿ ಅಂತ ನೂರಾರು,
ಸಾವಿರಾರು ವರ್ಷಗಳ ಐತಿಹ್ಯವನ್ನು ಗರ್ಭದಲ್ಲಿಟ್ಟುಕೊಂಡ ನೆಲ ಕೂಡ ಇದೇ ಭಟ್ಕಳ. ಯಾಕೋ ಇತ್ತೀಚಿನ ವರ್ಷಗಳಲ್ಲಿ ‘ಧರ್ಮಸೂಕ್ಷ್ಮ ನೆಲ’ ವೆಂಬ ಅಪಖ್ಯಾತಿಗ ಭಟ್ಕಳದಂಥ ಭಟ್ಕಳ ಒಳಗಾಯಿತು ಎಂಬುದು ವಿಷಾದದ ವಿಷಯ.

ಈ ಪೀಠಿಕೆಯನ್ನಿಟ್ಟುಕೊಂಡು ಇಲ್ಲಿ ಹೇಳಲಿ ಹೊರಟಿರುವ ಸಂಗತಿ ಏನೆಂದರೆ ಹೊರ ಪ್ರಪಂಚ ಎನೇ ಆದರೂ ಅದೇ ಭಟ್ಕಳದ ಮೂಸಾ ನಗರ ಎಂಬ ಪುಟ್ಟ ಕಾಲನಿಯಲ್ಲಿ ವ್ಯಕ್ತಿಯೊಬ್ಬರು ಶಾಂತಿ ಮತ್ತು ಮುಗ್ಧತೆಯ ಸಂಕೇತವಾದ ಮುದ್ದಾದ ಮೊಲದ ಮರಿಗಳನ್ನು ಮುದ್ದಿಸುವ, ಸಾಕುವ ತನ್ನ ಪ್ರವತ್ತಿಯನ್ನೇ ವ್ಲತ್ತಿಯಾನ್ನಾಗಿ ಮಾಡಿಕೊಂಡು ಗಮನಸೆಳೆದಿದ್ದಾರೆ, ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಮೊಲ ಪ್ರಿಯ ವ್ಯಕ್ತಿಯ ಹೆಸರು ಮೊಹಮ್ಮದ್ ರಿಜ್ವಾನ್ ಗಂಗಾವಳಿ ಅಂತ. ಮೊಲ ಸಾಕಾಣಿಕೆಯಲ್ಲಿ ಯಶಸ್ವಿಯಾಗಿರುವ ಇವರು ಈಗ ಎಲ್ಲರಿಗೂ ತರಬೇತಿಯನ್ನು ಸಹ ನೀಡುತ್ತಿದ್ದಾರೆ. ಭಟ್ಕಳ ತಾಲೂಕಿನ ತೆಂಗಿನಗುಂಡಿಯ ಮಾರ್ಗವಾಗಿ ತೆರಳಿದರೆ ಮೂಸಾ ನಗರವೆಂಬ ಮಜರೆಯಿದೆ. ಅಲ್ಲಿ ಮೊಹಮ್ಮದ್ ರಿಜ್ವಾನ್ ಗಂಗಾವಳಿ ಎನ್ನುವವರು ಮೊಲಗಳ ಸಂರಕ್ಷಣಾ ಕೇಂದ್ರವನ್ನೇ ಖಾಸಗಿಯಾಗಿ ತೆರೆದು ಸರಕಾರಿ ಇಲಾಖೆಗಳಿಂದಾಗಬೇಕಿದ್ದ ರಕ್ಷಣೆಯ ಕಾರ್ಯವನ್ನು ಇವರು ಮಾಡುತ್ತಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದಲೂ ಮೊಲದ ಮೇಲೆ ವಿಶ್ವಾಸಾರ್ಹ ಪ್ರೀತಿಯನ್ನು ಹೊಂದಿರುವ ರಿಜ್ವಾನ್ ಅವರು ಕೆಲ

ವರ್ಷಗಳಿಂದ ಸಾಕಾಣಿಕಾ ಕೇಂದ್ರವನ್ನು ತೆರೆದು ಮೊಲಗಳ ಲಾಲನೆ-ಪಾಲನೆ ಮಾಡುತ್ತಾ ಬಂದಿದ್ದಾರೆ. ಇವುಗಳ ಆಗು-ಹೋಗುಗಳು, ವಿಶೇಷ ಆಹಾರ ಪದ್ದತಿ, ಇವುಗಳ ಸಂತತಿಯ ಅಭಿವೃದ್ಧಿ ಹಾಗೂ ಮುಖ್ಯವಾಗಿ ಮೊಲಗಳಿಗೆ ಬೇಕಾದ ಸ್ವಚ್ಛತೆಯ ಬಗೆಗಿನ ಕಾಳಜಿ ಎಲ್ಲವನ್ನು ಅವರು ಮಕ್ಕಳಿಗಿಂತ ಹೆಚ್ಚಾಗಿ ಚಂದ ರೀತಿಯಲ್ಲಿ ನೋಡಿಕೊಳ್ಳುತ್ತಾ ಬಂದಿರುವುದು ಮೆಚ್ಚುಗೆಯ ವಿಷಯವಾಗಿದೆ. ರಿಜ್ವಾನ್ ಅವರು ಮೂಲದಲ್ಲಿ ಪತ್ರಕರ್ತರಾಗಿದ್ದು, ಆನ್‌ಲೈನ್ ವೆಬ್‌ಸೈಟ್ ಮೀಡಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸದ ಮಧ್ಯೆ ಈ ಮೊಲಗಳ ಕೆಲಸವನ್ನು ಮಾಡುತ್ತಿರುವುದು ಸೋಜಿಗದ ಸಂಗತಿಯಾಗಿದೆ.

ಬೆಳಿಗ್ಗೆ ಬೇಗ ಎದ್ದು, ಮೊಲಗಳ ಸ್ವಚ್ಛತೆಯಿಂದ, ಸಾಕಾಣಿಕೆ ಕೇಂದ್ರದ ಸ್ವಚ್ಛತೆಯನ್ನು ಮಾಡಿ ಮೊಲಗಳಿಗೆ ನೀಡಬೇಕಾದ ಎಲ್ಲ ಆಹಾರವನ್ನು ನೀಡಿ ತಮ್ಮ ಕೆಲಸಕ್ಕೆ ತೆರಳುತ್ತಾರೆ. ಈ ಮೊಲಗಳ ಸಾಕುವ ಬಗ್ಗೆ ಬೆಂಗಳೂರು, ಕೇರಳ, ತಮಿಳುನಾಡು ಮುಂತಾದ ಪ್ರದೇಶಗಳಿಗೆ ತೆರಳಿ ವಿಶೇಷ ತರಬೇತಿಯನ್ನು ಪಡೆದು ಬಂದಿದ್ದಾರೆ. ಸುಮ್ಮನೆ ಹವ್ಯಾಸಕ್ಕೆ ಸಾಕುವ ಬದಲು ಮೊಲಗಳ ಬಗೆಗಿನ ಎಲ್ಲ ವಿಷಯವನ್ನು ತಿಳಿದು ಸಾಕುವುದು ಉತ್ತಮ ಎನ್ನುವುದು ಅವರ ಮಾತಾಗಿದೆ. ನಿಜ ಹೇಳಬೇಕೆಂದರೆ ಚಿಕ್ಕ ಮಕ್ಕಳಿಗಿಂತ ನಾಜೂಕಾಗಿ ಅತ್ಯಂತ ಪ್ರೀತಿಯಿಂದ ಈ ಮೊಲಗಳನ್ನು ಸಾಕಿದಾರೆ. ಅವುಗಳ ಮುಗ್ಧತೆಯಲ್ಲಿ ನೀವು ಕಳೆದುಹೋಗುವುದಂತೂ ಸತ್ಯ ಎಂದು ರಿಜ್ವಾನ್ ಹೇಳುತ್ತಾರೆ. ಮೊಲ ಸಾಕಾಣಿಕೆಯ ಜೊತೆಗೆ ರಿಜ್ವಾನ್ ಅವರು ಭಟ್ಕಳ ತಾಲೂಕಿನಲ್ಲಿ ಯಾರೇ ಮೊಲ ಸಾಕಿದ್ದರೂ ಅಲ್ಲಿಗೆ ಭೇಟಿ ನೀಡಿ ಅವರಿಗೆ ನೀಡಬೇಕಾದ ಎಲ್ಲಾ ಅತ್ಯವಶ್ಯಕ ಮಾಹಿತಿಯನ್ನು ನೀಡಿ ಬರುತ್ತಾರೆ. ಕಡಿಮೆ ಬಂಡವಾಳದಲ್ಲಿ ದೊಡ್ಡ ದುಡಿಮೆಯನ್ನು ಗಳಿಸಿಕೊಡುವ ಕೆಲಸವೂ ಇದಾಗಿದ್ದು, ಮುಖ್ಯವಾಗಿ ಈಗಿನ ನಿರುದ್ಯೋಗಿ ಯುವಕರಿಗೆ ಈ ಮೊಲ ಸಾಕಾಣಿಕೆಯ ಕಾರ್ಯ ಆರ್ಥಿಕವಾಗಿ ನೆರವಾಗುತ್ತದೆ ಎನ್ನುತ್ತಾರೆ ರಿಜ್ವಾನ.

ಇನ್ನು ಈ ಮೊಲಗಳಿಗೆ ಆಹಾರವಾಗಿ ಹಲಸಿನ ಎಲೆ, ಬಾಳೆ ಎಲೆ ಮತ್ತು ಹುಲ್ಲುಗಳನ್ನು ನೀಡಬಹುದಾಗಿದ್ದು, ಹೂಗೋಸಿನ ಸೊಪ್ಪುಗಳನ್ನು ಮಾತ್ರ ಮೊಲಗಳಿಗೆ ಹಾಕಬಾರದು. ಯಾಕೆಂದರೆ ಅವುಗಳಲ್ಲಿ ಕೆಮಿಕಲ್ ಪ್ರಮಾಣ ಜಾಸ್ತಿ ಇರುವುದರಿಂದ ಮೊಲಗಳು ಸಾಯುವ ಸಂದರ್ಭ ಹೆಚ್ಚಿರುತ್ತದೆ. ಮುಖ್ಯವಾಗಿ ಇವುಗಳಿಗೆ ಬರುವ ರೋಗಗಳಾದ ನ್ಯುಮೋನಿಯಾ, ಮೆಂಜ್ ಮತ್ತು ಕಿವಿಗಳು ದಪ್ಪಗಾಗುವುದು. ಈ ರೋಗಗಳಿಗೆ ಔಷಧಗಳಿದ್ದು, ಅದನ್ನು ಸರಿಯಾದ ಪ್ರಮಾಣದಲ್ಲಿ ಹಾಕಿದರೆ ಅವುಗಳು ರೋಗದಿಂದ ಮುಕ್ತವಾಗುತ್ತವೆ ಎನ್ನುತ್ತಾರೆ ರಿಜ್ವಾನ. ಇನ್ನು ಮೊಲಗಳ ಸ್ವಚ್ಛತೆಗೂ ಔಷಧಗಳಿದ್ದು, ಚಿಕ್ಕ ಮಕ್ಕಳತರ ಅವುಗಳ ಪಾಲನೆ-ಪೋಷಣೆ ಮಾಡಿದ್ದಲ್ಲಿ ಅವುಗಳು ವ್ಯಾಪಾರಕ್ಕೂ, ಮನಸ್ಸಿನ ಸಂತೋಷ ಮತ್ತು ನೆಮ್ಮದಿಗೂ ಸಹಕಾರಿ ಎನ್ನುತ್ತಾರೆ ರಿಜ್ವಾನ್.

ಮೊಲಗಳ ಜಾತಿಯಲ್ಲಿ ಊರ ಮೊಲ, ಹೈಬ್ರಿಡ್ ಮೊಲ, ಚೆಂಚಲ, ನ್ಯೂಜಿಲೆಂಡ್ ವೈಟ್ ಮತ್ತು ಡಚ್ ಬ್ರೀಡ್ ಗಳಿದ್ದು ಮೂರು ತರಹದ ಮೆಡಿಸಿನ್‌ಗಳನ್ನು ಪ್ರತಿನಿತ್ಯ ಪದ್ದತಿಯ ಅನುಸಾರ ಹಾಕಬೇಕು. ಒಂದು ಮೊಲ ಪ್ರಾರಂಭದಲ್ಲಿ 4 ಮರಿಗಳಿಂದ ಕ್ರಮೇಣ ಎಂಟು-ಹತ್ತು ಮರಿಗಳನ್ನು ಹಾಕುತ್ತದೆ. ಈ ಬಗ್ಗೆ ‘ಹಣತೆ ವಾಹಿನಿ’ ಯೊಂದಿಗೆ ಮಾತನಾಡಿದ ರಿಜ್ವಾನ್ ಗಂಗಾವಳಿ, ಕೆಲವು ಕಡೆಗಳಲ್ಲಿ ಮೊಲಗಳ ಮೇಲೆ ಚಿತ್ರಹಿಂಸೆ ನಡೆಯುತ್ತಿದ್ದು, ಸಾಕಲು ಸಾಧ್ಯವಾಗದಿದ್ದರೆ ಅವುಗಳನ್ನು ಬಿಟ್ಟುಬಿಡಿ, ದಯವಿಟ್ಟು ಚಿತ್ರಹಿಂಸೆ ನೀಡಿ ಸಾಯಿಸಬೇಡಿ. ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳ ಸಂತತಿಗಳು ಕೂಡ ಕಡಿಮೆಯಾಗುತ್ತಿದ್ದು, ಸಾಧ್ಯವಾದರೆ ಮೊಲಗಳ ಸಂತತಿಯನ್ನು ಉಳಿಸಲು ಮನಸ್ಸು ಮಾಡಿ, ಇಲ್ಲದಿದ್ದರೆ ಸುಮ್ಮನಿರಿ ಎನ್ನುತ್ತಾರೆ. ಆಸಕ್ತಿಯುಳ್ಳವರಿಗೆ ಮೊಲ ಸಾಕಾಣಿಕೆ ಬಗ್ಗೆ ಮಾಹಿತಿಗಳನ್ನು ನೀಡಿ ಅದರ ಆರೋಗ್ಯದ ಕಾಳಜಿ ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಸರಳ ವಿಧಾನದ ಮೂಲಕ ಹೇಳಿಕೊಡುತ್ತಾರೆ. ಮಾಧ್ಯಮಗಳ ಸಹಾಯದಿಂದ ಈಗಾಗಲೇ ದೇಶ ವಿದೇಶಗಳಿಂದ ಜನರು ತಮ್ಮಲ್ಲಿ ಬಂದು ಮೊಲಗಳ ಸಾಕಾಣಿಕೆಯ ಬಗ್ಗೆ ಮಾಹಿತಿ ಪಡೆದು ಹೋಗುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ ರಿಜ್ವಾನ್.

ಕೇರಳದ ಆಶಿಯಾನಾ ರೆಬಿಟ್ ಫಾರ್ಮ್ ಮಾಲೀಕ ಡಾ. ಮಿಗ್‌ದಾದ್ ಅವರು ಮೊಲಸಾಕಾಣಿಕೆ ವಿಷಯದಲ್ಲಿ ಪಿ.ಎಚ್.ಡಿ. ಪದವಿ ಪಡೆದುಕೊಂಡಿದ್ದಾರೆ. ಇವರಿಗೆ ರಾಷ್ಟç ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳು ಲಭ್ಯವಾಗಿದೆ. ಮಿಗ್‌ದಾದ್ ಅವರು 15 ವರ್ಷದಲ್ಲಿ 15 ಪ್ರಶಸ್ತಿಗಳನ್ನು ಕೇರಳ ಸರಕಾರದಿಂದ ಪಡೆದುಕೊಂಡಿರುವುದು ಅವರ ಹೆಚ್ಚುಗಾರಿಕೆಯಾಗಿದೆ. ಮೊಲ ಸಾಕಾಣಿಕೆಯಲ್ಲಿ ವಿಶೇಷ ತರಬೇತಿಯನ್ನು ಪಡೆದುಕೊಂಡಿರುವ ರಿಜ್ವಾನ್ ಅವರು ತಿಂಗಳಿಗೊಮ್ಮೆ ಕೇರಳಕ್ಕೆ ಭೇಟಿನೀಡಿ ಮೊಲ ಸಾಕಾಣಿಕೆಯಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಬರುತ್ತಾರೆ. 34 ವರ್ಷಗಳಿಂದ ಮೊಲ ಸಾಕಾಣಿಕೆಯನ್ನು ಮಾಡುತ್ತಿರುವ ರಿಜ್ವಾನ್ ಅವರು ಕಳೆದೊಂದು ವರ್ಷದಿಂದ ನಿರುದ್ಯೋಗಿ ಯುವಕರಿಗೆ ಉಚಿತವಾಗಿ ಭಟ್ಕಳದಲ್ಲಿ ತರಬೇತಿಯನ್ನು ನೀಡುತ್ತಿದ್ದಾರೆ. ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಆಗಮಿಸುವ ಯುವಕರು ಇಲ್ಲಿ ತರಬೇತಿ ಪಡೆದು ಮೊಲಸಾಕಾಣಿಕೆ ಉದ್ಯಮದಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ.
ಆಂದ್ರಪ್ರದೇಶ, ತೆಲಂಗಾಣ, ಗೋವಾ, ಮಹಾರಾಷ್ಟ್ರ, ಹರಿಯಾಣ, ಉತ್ತರಪ್ರದೇಶ, ಮಧ್ಯಪ್ರದೇಶ, ಪಶ್ಚಿಮಬಂಗಾಳ, ಬಿಹಾರ, ಗುಜರಾತ ರಾಜ್ಯಗಳಿಂದಲೂ ಮೊಲ ಸಾಕಾಣಿಕೆಯ ತರಬೇತಿಗಾಗಿ ಯುವಕರು ಆಗಮಿಸುತ್ತಿದ್ದಾರೆ. ರಿಜ್ವಾನ್ ಅವರ ಈ ಶ್ಲಾಘನೀಯ ಕಾರ್ಯಕ್ಕೆ ‘ಹಣತೆವಾಹಿನಿ’ ಅಭಿನಂದನೆಯನ್ನು ಸಲ್ಲಿಸುತ್ತದೆ.
–ತೇಜಸ್ವಿ ಬಿ.ನಾಯ್ಕ, ಗೋಕರ್ಣ ಪತ್ರಕರ್ತರು