ಮಲಗಿದ್ದಾನೆ ಅಂಗಾತ
ಸೂರನ್ನು ದೃಷ್ಟಿಸುತ್ತ
ಮೈ ಮೇಲೆ ಈಗ ಆಸ್ಪತ್ರೆಯ ಗೌನು
ಗುರುತಿನ ಪಟ್ಟಿಯಲ್ಲಿ ಒಳರೋಗಿಯ ಅನುಕ್ರಮ ಸಂಖ್ಯೆ
ಕಾದಿದ್ದಾನೆ ಆಪರೇಷನ್ ಕೋಣೆಯ ಹೊರಗಿನ ಸಿದ್ಧತೆಯ ಕೋಣೆಯಲ್ಲಿ
ಮಲಗಿ- ತನ್ನ ಸರದಿಗಾಗಿ

ಹೊಟ್ಟೆಯಲ್ಲೇನೋ ವ್ರಣವಂತೆ
ಕರುಳನ್ನು ಕತ್ತರಿಸಿ ಕೆಲವು ಭಾಗ ತೆಗೆದುಹಾಕಿ ಮತ್ತೆ ತುದಿಗಳ ಬೆಸೆದು ಹೊಲಿಯುವ-
ಎಲ್ಲ ನುರಿತ ಕೈಗಳ ಕೆಲಸ
ಎಷ್ಟೊಂದು ಜನರ ಹೊಟ್ಟೆಯ ಮೇಲೆ ಹೊಡೆದೇ ಬದುಕು ಕಟ್ಟಿದ್ದು ಈತ
ಕಲಬೆರಕೆ ಕಾಳಸಂತೆ ಏನೆಲ್ಲ
ಹಲವರಿಗೆ ಆಶ್ರಯವನ್ನೂ ನೀಡಿದ್ದಾನೆ
ತನ್ನ ಸಾಮ್ರಾಜ್ಯದ ಪೋಷಣೆ ವಿಸ್ತರಣೆಗಾಗಿ

ಇತ್ತೀಚೆಗೆ ಯಶಸ್ವೀ ಉದ್ಯಮಿ ಎನಿಸಿ
ಸಿನಿಮಾಗಳ ನಿರ್ಮಿಸಿ ನಟಿಸಿ ‘ಸೆಲೆಬ್ರಿಟಿ’ ಪಟ್ಟ
ಜಾಹಿರಾತಿನಲ್ಲೂ ಅವ ಕಾಣಿಸಿಕೊಂಡಿದ್ದುಂಟು-
“ಆರೋಗ್ಯ ಪೂರ್ಣ ಬದುಕಿಗಾಗಿ
‘…. ಎಣ್ಣೆ’ ಬಳಸಿ!
…. ಬ್ರಾಂಡಿನ ಹಿಟ್ಟು ಅಮೃತ!”
-ಒಂದೇ ಎರಡೇ!
ಈಗ ಮುಂಗೈನಲ್ಲಿ ಒಂದು ಕ್ಯಾನ್ಯುಲಾ
ಅಂಟು ಪಟ್ಟಿ ಹಚ್ಚಿದ್ದು
ನಳಿಕೆಯಿಂದ ಒಂದೊಂದೇ ಹನಿ ಸಲೈನು ಇಳಿದು ಮೈಸೇರುತ್ತ
ಬಾಗಿಲ ಆಚೆಗೆ ಎಲ್ಲ ಸನ್ನದ್ಧ
ಸಲಕರಣೆಯ ಮೇಜಿನ ಮೇಲೆ
ಎಷ್ಟೆಲ್ಲ ಬಗೆಯ ಚಾಕು ಕತ್ತರಿ ಚಿಮ್ಮಟ
ಹೊಲಿಗೆಯ ಸಾಧನಗಳು
ಜೀವ ಉಳಿಸಲು ಏನೆಲ್ಲ ಉಪಾಯಗಳು
ಎಷ್ಟೆಲ್ಲ ಉರಿದು ಉರಿಸಿ ಮೆರೆದು
ಎಷ್ಟು ಅಸಹಾಯ ಮನುಷ್ಯ
ಒಂದು ಕತ್ತರಿ ಒಂದು ಸೂಜಿಯ ಕರುಣೆಗಾಗಿ ಕಾಯುತ್ತ
ಈಗ ಬಂದಿದೆ ತಳ್ಳುಗಾಡಿ
ಅವನ ಹೊತ್ತು
ಸಾವು ಬದುಕಿನ ತಿರುಗಣಿಯಲ್ಲಿ ನೂಕಲು

ಸರ್ಜನರು ಅರಿವಳಿಕೆ ತಜ್ಞರು ಸಹಾಯಕರು ದಾದಿಯರು
ಎಷ್ಟೆಲ್ಲ ಕೈಗಳಲ್ಲಿ
ಒಂದು ಜೀವದ ಪಯಣ
ಕಲಬೆರಕೆಯಿಲ್ಲ ಖೊಟ್ಟಿ ಖಾತ್ರಿಗಳಲ್ಲಿ
ಚಿಕಿತ್ಸೆ ಸಾಧ್ಯವಿಲ್ಲ
ರೋಗ ನಿವಾರಿಸುವ ಉಸಿರ ಪೊರೆಯುವ ಶುದ್ಧ ತಪಸ್ಸು ಮಾತ್ರ
ಆದರೂ ಎಷ್ಟೆಲ್ಲ ಅಂತಃಕರಣಗಳ ನಡುವೆ ಪ್ರಾರ್ಥನೆಗಳ ನಡುವೆ
ಮನುಷ್ಯ ಒಂಟಿ
ಸಾವಿನ ಜೊತೆ ಸೆಣಸಾಟದಲ್ಲಿ
ಆಪರೇಷನ್ ಕೋಣೆಯ ಹೊರಗೆ ಹೊತ್ತಿದೆ ಕೆಂಪು ದೀಪ
ಅವನ ಪುಟಾಣಿ ಮಗಳ ಕಣ್ಣುಗಳಲ್ಲಿ
ಬೆಳೆದ ಅದರ ಬಿಂಬ
★ಡಾ. ಗೋವಿಂದ ಹೆಗಡೆ, ಹುಬ್ಬಳ್ಳಿ
ಚೆನ್ನಾಗಿದೆ. ಮಾರ್ಮಿಕವಾಗಿದೆ ❤️🙏