ಕಾಲೇಜಿನ ನನ್ನ ಗೆಳೆಯನೊಬ್ಬ ದುಬೈನಲ್ಲಿ ಕೆಲಸಮಾಡುತ್ತಿದ್ದ. ಅವನು ಭಾರತಕ್ಕೆ ಬಂದಿದ್ದಾನೆಂದು ನನಗೆ ಸುದ್ದಿ ಸಿಕ್ಕಿತು. ನನ್ನ ಬಳಿ ಅವನ ಫೋನ್ ನಂಬರ್ ಇರಲಿಲ್ಲ… ನನ್ನ ಇನ್ನೊಬ್ಬ ಕಾಲೇಜಿನ ಗೆಳೆಯನಿಗೆ ಫೋನ್ ಮಾಡಿ ಅವನ ನಂಬರ್ ಕೇಳಿದೆ…
ಅವನು ” ಅವನ ಬಗ್ಗೆ ನನ್ನ ಹತ್ತಿರ ಏನೂ ಕೇಳಬೇಡ ” ಎಂದ…
” ಯಾಕೆ… ಏನಾಯ್ತು… ” ಅಂತ ಕೇಳಿದೆ ಅವನಿಗೆ…
” ಅವನು ಸತ್ತರೆ ನನಗೇನು ಸೂತಕ ಇದೆಯಾ ? ” ಅವನು ನನಗೆ ಮರುಪ್ರಶ್ನೆ ಕೇಳಿಬಿಟ್ಟ… ಮಾತು ಕಠೋರವಾಗಿದ್ದರೂ… ಅವನಿಗೆ ಆ ದುಬೈ ಗೆಳೆಯನಿಂದ ಯಾವುದೊ ವಿಷಯದಲ್ಲಿ ತುಂಬಾ ನೋವಾಗಿದೆ ಎಂಬುದು ಅವನ ಮಾತಿನ ಶೈಲಿಯಲ್ಲಿ ಎದ್ದು ತೋರುತ್ತಿತ್ತು…

” ಯಾಕೋ ? ಕಾಲೇಜಲ್ಲಿ ಒಟ್ಟಿಗೆ ಇದ್ದೋರಲ್ವಾ ನೀವು… ? ಒಟ್ಟಿಗೆ ಎಣ್ಣೆ ಹಾಕ್ತಿದ್ರೀ … ಈಗ ಏನಾಯ್ತು ? ” ಮತ್ತೆ ಕೇಳಿ ಬಿಟ್ಟಿದ್ದೆ…
ಆಗಲೇ ಅವನು ತನ್ನ ನೋವು ತೋಡಿಕೊಳ್ಳಲು ಶುರು ಮಾಡಿದ್ದ…
” ದುಬೈ ಹೋದ ಮೇಲೆ ಅದೆಷ್ಟೋ ಸಲ ಅವನು ಊರಿಗೆ ಬಂದ… ಸಿಕ್ಕಿದ ಕೂಡ… ನಾನು ಎಷ್ಟೋ ಸಲ ಕರೆದೆ… ಬಾ ಎಣ್ಣೆ ಪಾರ್ಟಿ ಮಾದ್ವ ಒಮ್ಮೆ… ಅಂತ… ಬರ್ತೇನೆ ಬರ್ತೇನೆ ಹೇಳುತ್ತಾ … ಒಂದು ಸಲ ಸಿಗಲಿಲ್ಲ… “
ಅವನು ಮಾತು ಮುಂದುವರಿಸಿದ್ದ…
” ಕಳೆದ ವರ್ಷ ಬಂದಾಗ ಏನು ಮಾಡಿದ ಗೊತ್ತಾ…. ಮತ್ತೆ ನಾನು ಮತ್ತು ನನ್ನ ಕೆಲವು ಗೆಳೆಯರು ಪಾರ್ಟಿಗೆ ಕರೆದೆ… ಬರುತ್ತೇನೆ ಅಂದವ ಬಂದ… ಬಂದು ತುಂಬಾ ಬ್ಯುಸಿ ಇದ್ದವರಂತೆ ನಾಟಕ ಆಡಿ… ‘ಮಗಾ … ನೀವು ಪಾರ್ಟಿ ಮಾಡಿ…. ಅದರ ಬಿಲ್ ನಾನು ಈಗಲೇ ಕೊಟ್ಟು ಹೋಗುತ್ತೇನೆ.. ನನಗೆ ಪಾರ್ಟಿಲಿ ಇರೋಕಾಗಲ್ಲ’ ಅಂದ…. ಎಷ್ಟು ಕೊಬ್ಬು ಅವನಿಗೆ… ನಾವೇನು ದುಡ್ಡಿಲ್ಲದೆ ಇವನಿಗೆ ಪಾರ್ಟಿಗೆ ಕರೆದೇವಾ ? ನಾವೂ ಇವನಷ್ಟೇ ಅರ್ನ್ ಮಾಡುತ್ತೇವೆ … ನಾವೇನು ಬಿಕಾರಿಗಳಾ ? ಸುಮ್ನೆ ನನ್ನ ಫ್ರೆಂಡ್ಸ್ ಎದುರು ಮರ್ಯಾದೆ ಹೋಯಿತು … ‘ ನೀನೇನೂ ಬಿಲ್ ಕೊಡುವುದು ಬೇಡ ನೀನು ಹೊರಡು ‘ ಅಂತ ಅವನ ಕಳುಹಿಸಿಬಿಟ್ಟೆ … ಅವತ್ತಿಂದ ನಾನು ಅವನ ಸುದ್ದಿಗೆ ಹೋಗಿಲ್ಲ… ಅವನ ಈಗಿನ ಫೋನ್ ನಂಬರ್ ಕೂಡ ನನ್ನ ಬಳಿ ಇಲ್ಲ… ” ಎಂದು ನಡೆದ ಘಟನೆ ಹೇಳಿದ…

” ಏನೋ ಪ್ರಾಬ್ಲಮ್ ಇರಬಹುದು… ಬಿಡೋ… ನಿನಗೂ ಇಲ್ಲ ಹೇಳೋಕೆ ಆಗದೆ ಹಾಗಾಗಿರಬಹುದು… ” ಎನ್ನುತ್ತಾ ಸಮಾಧಾನ ಮಾಡಲು ನೋಡಿದೆ…
” ಏನ್ ಪ್ರಾಬ್ಲಮ್ ಇಲ್ಲ ಬಿಡು … ದುರಹಂಕಾರ ಅವನಿಗೆ… ” ಎಂಬ ಉತ್ತರ ಬಂತು…
ಇಲ್ಲಿ ತಪ್ಪು ಯಾರದ್ದು… ? ಆ ಕೋಪ ನಿಜವಾದ ಕೋಪವೋ ಅಥವಾ ಗೆಳೆತನದಲ್ಲಿ ಬರುವ ತಾತ್ಕಾರಿಕ ಕೋಪವೋ … ? ನಿಜಕ್ಕೂ ಅದು ದುರಹಂಕಾರವೇ ಆಗಿತ್ತೇ ? ಆ ಸಮಯದಲ್ಲಿ ಅರ್ಥವಾಗಲಿಲ್ಲ… !
ಆದರೆ ಇನ್ನೂ ಕೆಲವು ಪ್ರಶ್ನೆಗಳು ಮಾತ್ರ ಹುಟ್ಟಿಕೊಂಡಿದ್ದವು … ಈ ” ಎಣ್ಣೆ ” ಎದುರಿಗೆ ಸಿಕ್ಕ ಗೆಳೆಯ ನಿಜವಾದ ಗೆಳೆಯನೇ…. ? “, ಎಣ್ಣೆ ಪಾರ್ಟಿ ಇದ್ದರೆ ಮಾತ್ರ ಗೆಳೆತನ ವನ್ನು ಮೆರೆಯಬಹುದೇ ? ” ಎಂಬುದು… ಈ “ಎಣ್ಣೆ ” ಎಂಬುದು ಇದ್ದಲ್ಲೇ ತುಂಬಾ ಗೆಳೆಯರು ಸೇರುವುದನ್ನ ನನ್ನ ನೋಡಿದ್ದೇ.. ಕೇಳಿದ್ದೆ… ! ಈ ” ಎಣ್ಣೆ ” ಸಿಗುತ್ತದೆ ಎಂತಲೇ ಕೆಲವರು ಕೆಲವರ ಗೆಳೆಯರಾಗಿರುತ್ತಾರೆ… ಈ ” ಎಣ್ಣೆ ” ಸಿಗುವಷ್ಟು ಹೊತ್ತು ಮಾತ್ರ ಗೆಳೆಯರಾಗಿರುತ್ತಾರೆ … ಇನ್ನು ಕೆಲವು ಕಡೆ ” ಎಣ್ಣೆ ” ಯ ಪ್ರಭಾವ ಹೆಚ್ಚಾಗುತ್ತಿದ್ದಂತೆ ಗೆಳೆತನದ ಆಳ ಹೆಚ್ಚಾಗಿ… ಪ್ರಭಾವ ಇಳಿದಾಗ ಸಾಮಾನ್ಯ ಎನಿಸುವುದನ್ನೂ ನಾವು ನೋಡುತ್ತೇವೆ…
ಗೆಳೆತನ ಎಂದ ಕೂಡಲೇ ನಮಗೆ ನೆನಪಾಗುವುದು, ಶ್ರೀ ಕೃಷ್ಣ ಮತ್ತು ಸುಧಾಮರ ಗೆಳೆತನ… ಅಲ್ಲಿ ಈ ” ಎಣ್ಣೆ ” ಇರಲಿಲ್ಲ…. ಒಂದು ಹಿಡಿ ಅವಲಕ್ಕಿ ಇತ್ತು… ಆ ಅವಲಕ್ಕಿಯಲ್ಲಿ ಗೆಳೆತನದ ಪ್ರೀತಿ ತುಂಬಿ ತುಳುಕುತ್ತಿತ್ತು… ಆ ಅವಲಕ್ಕಿ ಯ ಸ್ಥಾನವನ್ನು ಈ ” ಎಣ್ಣೆ ” ತುಂಬಲು ಸಾಧ್ಯವಿಲ್ಲ. ಏಕೆಂದರೆ ಆ ಅವಲಕ್ಕಿ ಹಿಡಿದು ಬಂದವ ತನ್ನಿಂದಾಗಿ ತನ್ನ ಗೆಳೆಯನ ಗೌರವಕ್ಕೆ ದಕ್ಕೆ ಬಂದೀತೆ ? ಎಂಬ ಅಳುಕು , ಭಯ ದೊಂದಿಗೆ ತನ್ನ ಗೆಳೆಯನ ಹಿತದ ಬಗ್ಗೆಯೇ ಯೋಚಿಸುತ್ತಿದ್ದರೆ… ಇನ್ನೊಂದೆಡೆ ತನ್ನ ಗೆಳೆಯ ತಂದ ಆ ಹಿಡಿ ಅವಲಕ್ಕಿಯನ್ನು ತನ್ನ ಪ್ರೀತಿಯ ಮಡದಿಗೂ ನೀಡಲು ಹಿಂಜರಿಯುವಷ್ಟು ಇಷ್ಟಪಟ್ಟು , ಅಮೃತ ಎಂಬಂತೆ ಸವಿದೇ ಬಿಟ್ಟಿದ್ದ … ತನ್ನ ಗೆಳೆಯನ ಕಷ್ಟಗಳನ್ನು ಅವನ ಬಾಯಲ್ಲಿ ಕೇಳದೆ, ತಾನೇ ಅರಿತು ಅವನ ಎಲ್ಲ ಕಷ್ಟಗಳನ್ನು ದೂರ ಮಾಡಿದ್ದ… ಈ ಪರಸ್ಪರ ಅರಿತು ಹಿತ ಬಯಸುವುದೇ ಗೆಳೆತನ ಅಲ್ಲವೇ ?

ಇಂದಿನ ನಮ್ಮ ನಡುವಿನ ಈ ” ಎಣ್ಣೆ ” ಗೆಳೆತನ, ಗೆಳೆಯರ ನಡುವೆ ಅವರವರ ಸಮಸ್ಯೆಗಳನ್ನು ಅರಿತುಕೊಳ್ಳುತ್ತದೋ …. ಭಾವನೆಗಳನ್ನು ಗೌರವಿಸುತ್ತದೆಯೋ … ಪರಸ್ಪರ ಅವರವರ ಕಷ್ಟಗಳನ್ನು ದೂರ ಮಾಡಿಸುವ ಮನೋಭಾವ ಹೊಂದಿದೆಯೋ ಗೊತ್ತಿಲ್ಲ … ಆದರೆ ಈ ಬಗ್ಗೆ ಯೋಚಿಸುತ್ತಿದ್ದ ನನಗೆ ಒಂದು ವಿಚಾರ ತಲೆಯಲ್ಲಿ ಮಿಂಚಿ ಹೋಯಿತು… ಈ ” ಎಣ್ಣೆ ” ಗೆ ಪ್ರಜಾ ಪ್ರಭುತ್ವವನ್ನು ಖರೀದಿಸುವ ಶಕ್ತಿಯೇ ಇರುವುದನ್ನು ಚುನಾವಣಾ ಸಮಯದಲ್ಲಿ ನಾವು ನೋಡುತ್ತಾ ಇರುತ್ತೇವೆ … ಹೀಗಿರುವಾಗ ಗೆಳೆತನವನ್ನು ಬೀಳಿಸುವ ಅಥವಾ ಗಟ್ಟಿಯಾಗಿಸುವ ಶಕ್ತಿ ಈ ” ಎಣ್ಣೆ ” ಗೆ ಇಲ್ಲದೆ ಹೋದೀತೇ ? ಎಂಬುದು..

ಲೇಖಕರು :
ರಾಘವೇಂದ್ರ ಲಕ್ಷ್ಮೇಶ್ವರ್
Founder & Creative Head
Grapito Desings (Design and Marketing agency)