ಶಿಕ್ಷಣದ ಮತ್ತೊಂದು ಮುಖ

1897 ರಲ್ಲಿ ಸ್ವಾಮಿ ವಿವೇಕಾನಂದರು ಆಡಿದ ಮಾತಿದು: The Universities have not produced one original man. They are merely an examining body. ಪ್ರಾಯಃ ನಮ್ಮ ವಿದ್ಯಾಭ್ಯಾಸ ಪದ್ಧತಿ ನಮ್ಮ ಮನಃಶ್ಶುದ್ಧಿ, ಏಕಾಗ್ರತೆ,
ಆತ್ಮಚಿಂತನೆ, ಸಾಮರಸ್ಯವನ್ನು ಹೊಂದುವಂತೆ ಮಾಡಲು ಪ್ರಾಧಾನ್ಯವನ್ನು ನೀಡುತ್ತಿಲ್ಲ.

ನಮ್ಮ ಕಡೆ ರೂಢಿಯ ಮಾತೊಂದಿದೆ: ‘ಓದಿದ್ದು ಹೆಚ್ಚಾಯ್ತು, ಕಾಲು ಮೇಲಾಯ್ತು’ ಅಂತ. ಕೇವಲ ಜೀವನ ನಿರ್ವಹಣೆ, ಉದ್ಯೋಗ ಖಾತರಿ, ಪ್ರಶಸ್ತಿ ಪತ್ರ, ಹಣ ಸಂಪಾದನೆಯ ಜೊತೆ ಜೊತೆಯಲ್ಲಿ ಅಹಂಕಾರ, ಅಸಡ್ಡೆ, ನಾನೇ ಮೇಲು, ನನ್ನ ವಿಚಾರಗಳೇ ಶ್ರೇಷ್ಠ, ಹಿರಿಯರಲ್ಲಿ ಅಗೌರವ, ಕಿರಿಯರಲ್ಲಿ ತಾತ್ಸಾರ, ದುರಭಿಮಾನ- ಇವೆಲ್ಲ ಇರೋದು ಶಿಕ್ಷಣ ಪಡೆದವರಲ್ಲೇ ಹೊರತು ಅವಿದ್ಯಾವಂತರಲ್ಲಿ ಅಲ್ಲ.  ಶಿಕ್ಷಣ ಇಲ್ಲದವನನ್ನು ಮೂಢ, ದಡ್ಡ, ಹೆಡ್ಡ, ಹೆಬ್ಬೆಟ್ಟು ಅನ್ನೋ ಹಾಗೆ ನಿಕೃಷ್ಟವಾಗಿ ಸಮಾಜದಲ್ಲಿ ಬಿಂಬಿಸಿದ್ದೇ ಶಿಕ್ಷಣ ಪಡೆದವರು. ಅವರಲ್ಲಿ ಸುಪೀರಿಯಾರಿಟಿ ಭಾವ ಬೆಳೆಸಿದೆ. ಅನಕ್ಷರಸ್ಥರಿಗಿಂತ ನಾವು ಎಲ್ಲದರಲ್ಲೂ ಹೆಚ್ಚುಗಾರಿಕೆಯನ್ನು ಹೊಂದಿದವರು. ಎಲ್ಲಕ್ಕಿಂತ ಮುಖ್ಯವಾಗಿ, ಒಬ್ಬ ಸಾಮಾನ್ಯ ಮನುಷ್ಯನನ್ನು ಸಮಾಜ ರೂಪಿಸಿಕೊಂಡಿದ್ದ ಚೌಕಟ್ಟಿಗೆ ಸೆಡ್ಡು ಹೊಡೆದು ನಿಲ್ಲುವ ಸಲುವಾಗಿ ನಾನು ಮೇಲು, ನೀನು ಕೀಳು ಅನ್ನೋ ಹಾಗೆ ನಾನು ವಿದ್ಯಾವಂತ, ನೀನು ಅವಿದ್ಯಾವಂತ ಎಂಬ ಭಾವವನ್ನು ವಿದ್ಯಾವಂತರೇ ವಿಸ್ತರಿಸಿದರು. ಕಲಿತವರು ಇಡೀ ಸಮಾಜವನ್ನು ತನ್ನ ಭಾವನೆಗಳಿಗಿಂತ ಒಂದು ಹಂತ ಕೆಳಗಿನ ದೃಷ್ಟಿಯಲ್ಲಿ ನೋಡತೊಡಗಿದರು ‘ನಿಮಗೇನೂ ಗೊತ್ತಿಲ್ಲ’ ಎಂದೂ ಅವರ ಅಜ್ಞಾನವನ್ನು ಎತ್ತಿ ತೋರಿಸಲು ಮುಂದಾದರು. ಇದೆಲ್ಲ ಸಾಧ್ಯವಾದದ್ದು ಕಲಿತ ವಿದ್ಯೆಯಿಂದಲ್ಲದೇ ಮತ್ತೇನು?

ಶಿಕ್ಷಣ ಸ್ವಾವಲಂಬೀ ಸ್ವಾಭಿಮಾನವನ್ನು ಬೆಳೆಸುತ್ತದೆ. ಅದೇ ಶಿಕ್ಷಣ ಸ್ವಾವಲಂಬೀ ಸ್ವಾಭಿಮಾನವನ್ನು ಬಲಿ ತೆಗೆದುಕೊಳ್ಳುತ್ತದೆ. ಭಾಷೆ, ಉಡುಗೆ-ತೊಡುಗೆ, ಮಾತು, ಹಾವಭಾವ, ವಿನಯ, ಸಾಮಾಜಿಕ ಸಂಬಂಧಗಳು ಎಲ್ಲವನ್ನೂ ಪಡೆದ  ಶಿಕ್ಷಣದಿಂದಲೇ ಅಳೆಯಲು ಆರಂಭಿಸಿದಾಗ ಅಶಿಕ್ಷಿತರು, ಶಿಕ್ಷಣವಂಚಿತರು ಇದೇ ಸಮಾಜದ ಶಾಶ್ವತ ನಿರ್ಲಕ್ಷ್ಯಕ್ಕೆ ಒಳಗಾದರು. ಇದು ದುರಂತ. ಸಾಮಾಜಿಕ ಸ್ಥಿತಿಗತಿಯನ್ನು, ಅಭಿವೃದ್ಧಿಯನ್ನು,
ಬದುಕಿನ ಬಗೆಯನ್ನು, ಜ್ಞಾನಾರ್ಜನೆಯ ಮಟ್ಟವನ್ನು ಹಾಗೂ ಪ್ರಗತಿಯನ್ನು ವಿದ್ಯೆಯಿಂದಲೇ ಬದಲಾಯಿಸಲು ಸಾಧ್ಯ ಎಂಬುದನ್ನು ಈ ಸಮಾಜ ಒಪ್ಪಿಕೊಂಡಿದೆಯಾದರೂ ನಾಗರಿಕ ಸಮಾಜ ವಿದ್ಯಾವಂತರನ್ನು ಅಸ್ಪೃಶ್ಯ ಭಾವದಿಂದ ನೋಡಿದ್ದು ಸತ್ಯ. ದೊಡ್ಡ ಕಂದಕ ಇವರೀರ್ವರ ಮಧ್ಯೆ ಬೆಳೆಯುತ್ತಲೇ ಇದೆ. ಇದಕ್ಕೆ ಕಾರಣವಿದ್ಯಾವಂತರೇ ಹೊರತು ಅವಿದ್ಯಾವಂತರಲ್ಲ. ಅವಿದ್ಯಾವಂತರಿಗೆ ಇವೆಲ್ಲ ಅರ್ಥವಾಗದ ಸಂಗತಿಗಳು. ತಾವಾಯಿತು, ತಮ್ಮ ಪಾಡಾಯಿತು ಅಂತ ಬದುಕುವವರಿಗೆ ಈ ಬಗೆಯ ಭಾವ ಹೇಗೆ ಹುಟ್ಟಲು ಸಾಧ್ಯ ಹೇಳಿ? ಎಲ್ಲವನ್ನೂ ಜ್ಞಾನದ ಮಾನದಂಡದಿಂದಲೇ, ಬುದ್ಧಿಯ ತರ್ಕದಿಂದಲೇ ನಡೆದುಬಿಟ್ಟರೆ ಮಾನವೀಯತೆಗೆಲ್ಲಿ ಆಸ್ಪದವಿದ್ದೀತು? ಏನೂ ಓದದ ನಮ್ಮ ಹಿರಿಯರು ನಮಗೆ ಬುದ್ಧಿಬೋಧೆ ಮಾಡಲಿಲ್ಲವೆ?  ಅವರು ಓದಿಲ್ಲವೆಂದೂ ತುಚ್ಛವಾಗಿ ಕಂಡರೆ, ಅವಮಾನಿಸಿದರೆ ನಾವು ಕಲಿತ ವಿದ್ಯೆಗೆ ಯಾವ ಬೆಲೆ ಬಂದೀತು?  ಇಂದಿನ ಶಿಕ್ಷಣ ಪದ್ದತಿ ಎರಡು ವರ್ಗಗಳನ್ನು ಈ ದೇಶದಲ್ಲಿ ಹುಟ್ಟು ಹಾಕಿದೆ. ಒಂದು ಶ್ರಮಿಕ ವರ್ಗ, ಇನ್ನೊಂದು ಬುದ್ಧಿಜೀವಿ ವರ್ಗ. ಮೊದಲನೆಯದಕ್ಕೆ ಬುದ್ಧಿಯಿಲ್ಲ, ಎರಡನೆಯದಕ್ಕೆ ಕಾಲಿಲ್ಲ. ‘ಪಂಗ್ವಂಧನ್ಯಾಯ’ ದಂತಾಗಿದೆ ನಮ್ಮ ಸ್ಥಿತಿ. ಕುರುಡ ಹೆಳವನನ್ನು ಹೊತ್ತುಕೊಂಡ ಹಾಗೆ. ಇಬ್ಬರಿಗೂ ಮೆದುಳಿದೆ. ಹೊಂದಿಕೆಯಿಲ್ಲ. ಇರ್ವರೂ ಬೆಸೆಯಲಾರು.
ಆದ್ದರಿಂದ ಸಾಮರಸ್ಯವಿಲ್ಲ. ಬುದ್ಧಿಜೀವಿ ಶ್ರಮಜೀವಿಯಾಗಲಾರ. ಶ್ರಮಜೀವಿ ಬುದ್ಧಿಜೀವಿಯಾಗಲಾರ.

ವಿದ್ಯಾವಂತ, ಶೂರ, ರೈತ- ಈ ಮೂವರು ಮಾತ್ರ ಭೂಮಿಯನ್ನು ಸೇವಿಸಬಲ್ಲರು ಎಂಬ ಮಹಾಭಾರತದ ಮಾತಿಗೆ ನಮ್ಮ ದೇಶದಲ್ಲಿ ಅರ್ಥವಿದೆಯೇ? “ಯಾವ ವಿದ್ಯೆ, ವಿದ್ಯಾರ್ಥಿಯ ಏಕಾಗ್ರತೆ ಹೆಚ್ಚಿಸಿ ಸುಪ್ತ ಜ್ಞಾನವನ್ನು ಅನಾವರಣ ಗೊಳಿಸಬಲ್ಲುದೋ; ಯಾವ ವಿದ್ಯೆ, ರಾಷ್ಟ್ರ ಕುಂಡಲಿನೀ ಶಕ್ತಿಯನ್ನು ಜಾಗೃತಗೊಳಿಸಿ, ಭಾರತೀಯ ವಿದ್ಯಾರ್ಥಿಗೆ ಭಾರತೀಯತ್ವದ ಪುನರ್ದಾನ ಮಾಡಬಲ್ಲುದೋ; ಯಾವ ವಿದ್ಯೆ, ಪುರುಷಸಿಂಹರನ್ನು ಸೃಷ್ಟಿಸಿ ಅವರಲ್ಲಿರುವ ಪರಿಪೂರ್ಣತೆಯನ್ನು ಹೊರಹೊಮ್ಮಿಸಬಲ್ಲುದೋ; ಯಾವ ವಿದ್ಯೆ, ಭಾರತೀಯ ಸಂಸ್ಕೃತಿ, ತತ್ತ್ವಶಾಸ್ತ್ರ, ವಿಜ್ಞಾನ  ಪರಂಪರೆಯ ಆಧಾರದಲ್ಲಿ ರೂಪಿತವಾಗಿರುವದೋ, ಯಾವ ವಿದ್ಯೆ, ನಮ್ಮನ್ನು ಅಸತ್ತಿನಿಂದ ಸತ್ತಿನೆಡೆಗೆ, ತಮಸ್ಸಿನಿಂದ ಜ್ಯೋತಿಯೆಡೆಗೆ, ಮೃತ್ಯುವಿನಿಂದ ಅಮೃತದೆಡೆಗೆ ಒಯ್ಯಬಲ್ಲುದೋ, ಅದೇನಿಜವಾದವಿದ್ಯೆ” ಎಂದರು ಸ್ವಾಮಿ ವಿವೇಕಾನಂದರು. ಸಾಮರಸ್ಯದ ಭಾವವನ್ನು ಹೊಂದಿಸದ ವಿದ್ಯೆಯನ್ನು ಅದು ವಿದ್ಯೆ ಹೇಗೆ ಕರೆಯಲಾದೀತು? ವಿದ್ಯೆಯೆಂಬ ಕಲ್ಪನೆ ಹುಟ್ಟುವ ಮೊದಲು ಈಗಿರುವುದಕ್ಕಿಂತ ಚೆನ್ನಾಗಿ ಶಾಂತಿಯಿಂದ, ಸಾಮರಸ್ಯದಿಂದ ಜನರು ಬದುಕಿದ್ದರು. ಯಾವಾಗ ಕಲಿತದ್ದು ಹೆಚ್ಚಾಯಿತೋ ಆವಾಗ ಮನುಷ್ಯ ತರ್ಕಕ್ಕೆ, ವಾದಕ್ಕೆ, ಜ್ಯೇಷ್ಠತೆಗೆ, ಅಹಂಕಾರ ಪ್ರದರ್ಶನಕ್ಕೆ, ಬಲಪ್ರದರ್ಶನಕ್ಕೆ ಬಿದ್ದ. ಜಗತ್ತು ಅಡ್ಡದಾರಿ ಹಿಡಿಯಿತು.

ಆಧುನಿಕತೆ ಕೂಡ ವಿದ್ಯೆಯ ಕೊಡುಗೆ. ಕಲಿತ ವಿದ್ಯೆಯಿಂದಲೇ ಜನ್ಯವಾದ ಇದು ಎಲ್ಲ ಬಗೆಯ ಅಧಃಪತನಕ್ಕೆ ಹೇತುವಾಗಿಬಿಟ್ಟಿದೆ ಎಂದರೆ ಅಚ್ಚರಿಯಾಗುತ್ತದೆ. ಯಾವ ಶಿಕ್ಷಣ ನಮ್ಮನ್ನು ಸಂಸ್ಕರಿಸಬೇಕಿತ್ತೋ ಅದೇ ಇಂದು ಸಂತೆಯಲ್ಲಿ ಮಾರುವ ಸರಕಿನಂತಾಗಿದೆ. ಇದಕ್ಕೆ ಕಾರಣವಿದ್ಯಾವಂತರೇ! ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಲೇ
ಶಿಕ್ಷಣವನ್ನು ಹಣಕೊಟ್ಟು ಖರೀದಿಸುವಂತೆ ಮಾಡಿ ಶಿಕ್ಷಣದ ನೈತಿಕತೆಯನ್ನು ಕುಸಿಯುವಂತೆ ಮಾಡಿದರು. ಶಿಕ್ಷಣ ಪಡೆದವರು ಆಧುನಿಕರಾಗುತ್ತಿದ್ದರಂತೆ ಎಲ್ಲ ಬಗೆಯ ಅಸ್ಪಶೃತೆಯೂ ಮುಗಿಯಿತು ಅಂದುಕೊಂಡಾಗಲೇ ಶಿಕ್ಷಣ ಪಡೆದವರ ಮತ್ತೊಂದು ಮುಖ ಅನಾವರಣವಾಗುತ್ತಲೇ ಬೃಹದಾಕಾರವಾಗಿ ಬೆಳೆಯುತ್ತಾ ಬಂತು. ಅನಾಗರಿಕರಂತೆ
ವಿದ್ಯಾವಂತರು ವರ್ತಿಸಲು ಆರಂಭಿಸಿದರು ಎಂಬುದು ನಿತ್ಯವೂ ನಮ್ಮ ಕಣ್ಣ ಮುಂದೆಯೇ ದರ್ಶನವಾಗುತ್ತಿದೆ. ವಿದ್ಯಾವಂತರ ನೈತಿಕತೆ ಆಳವಾದ ಪ್ರಪಾತಕ್ಕೆ ಇಳಿಯತೊಡಗಿತು. ಪ್ರತಿಯೊಂದೂ ವಿಚಾರಗಳಲ್ಲಿ ಭಿನ್ನತೆ ಬೆಳೆದು ಸೇಡು, ದ್ವೇಷದ ಭಾವಉದ್ದೀಪನವಾಗುತ್ತಾಬಂತು.ಬುದ್ಧಿನಿರ್ಜೀವವಾಯಿತು.ಯಾವಶಿಕ್ಷಣಸೌಹಾರ್ದವನ್ನು
ಬೆಳೆಸಬೇಕಿತ್ತೋ ಅದೇ ruine ಆಗಿ ಪರಿವರ್ತನೆಗೊಂಡು ಮನುಷ್ಯನ ಸಂಬಂಧಗಳ ಮೇಲೆ, ಬೌದ್ಧಿಕತೆಯ ಮೇಲೆ ಮಾರಕ ಪ್ರಭಾವವನ್ನು ಬೀರಿತು ಎಂದರೆ ನಮ್ಮ ಶಿಕ್ಷಣ ಪದ್ಧತಿಯಲ್ಲಿಯೇ ಲೋಪ ಇದೆ ಅಂತ ಒಪ್ಪಿಕೊಳ್ಳಲೇಬೇಕು. ಶಿಕ್ಷಣವನ್ನು ಪಡೆದರೆ ಸಮಾಜವನ್ನು ಆವರಿಸಿಕೊಂಡು ಕಾಡುತ್ತಿರುವ ಮನೋಪ್ರವೃತ್ತಿಗಳು  ನಿರ್ನಾಮವಾಗುತ್ತವೆ
ಎನ್ನುವ ನಿರೀಕ್ಷೆಗಳು ಹುಸಿಯಾದದ್ದು ನಮ್ಮ ಕಣ್ಣ ಮುಂದೆಯೇ ಇದೆ. ಬರಬರುತ್ತಾ ಜಾತೀಯತೆ ಹೆಚ್ಹುತ್ತಾ ಹೋಯಿತು. ಶೋಷಣೆಯೂ ಬೆಳೆಯಿತು. ಹಿಂಸೆಯೂ  ಪ್ರವರ್ಧಮಾನಕ್ಕೆ ಬಂತು. ಇವು ಕ್ಷುಲ್ಲಕ ವಿಷಯಗಳಿಗೆ ಘರ್ಷಣೆಗಳಿಗೆ ವೈಪರೀತ್ಯಗಳಿಗೆ ನಮ್ಮನ್ನು ಮುಟ್ಟಿಸಿತು. ಅನಕ್ಷರಸ್ಥರಾದವರು ತಿದ್ದಲು ಬಂದರೆ ಕೀಳಾಗಿ ಕಂಡು
ದೂರಗೊಳಿಸಿದವರೂ ಇದೇ ಅಕ್ಷರಸ್ಥ ಸಮಾಜದ ವಿದ್ಯಾವಂತರೇ! ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಅಭಿವ್ಯಕ್ತಿಸಲು ಸಾಧ್ಯವಾಗದಂತೆ ನಾವು ಕಲಿತ ವಿದ್ಯೆಯೇ ನಮ್ಮನ್ನು ಧಾರ್ಷ್ಟ್ಯಗೊಳಿಸುತ್ತಿದೆ. ಪರಂಪರೆಯನ್ನು ಉಳಿಸಿ ಬಾಳಿಸಿಕೊಂಡುಬಂದ ಅದೆಷ್ಟೋ ನಂಬಿಕೆಗಳನ್ನು, ಜೀವನ ಮೌಲ್ಯಗಳನ್ನು ಉದಾಸೀನವಾಗಿ ಕಾಣುವಂತೆ ಮಾಡಿ, ಪ್ರತಿಯೊಂದನ್ನೂ ಪ್ರಶ್ನಿಸುವ, ವಿರೋಧಿಸುವ ಭಾವನೆ ಬೆಳೆದು ನಮ್ಮಲ್ಲಿ ಉದ್ಧಟತನವನ್ನು ಉದ್ದೀಪಿಸಿದೆ. ಆಡುವ ಮಾತಿನ ಭಾಷೆ ಸಂಸ್ಕಾರ ಹೀನವಾಗಿದೆ. ಆಧುನಿಕತೆಯ ಹುಚ್ಚು ಹೆಚ್ಚಿದೆ. ಕಲಿತ ವಿದ್ಯೆ ದುರುಪಯೋಗಕ್ಕೆ ಬಳಕೆಯಾಗುತ್ತಿದೆ. ಭ್ರಷ್ಟರನ್ನು, ಧನಮದ ಹೊಂದಿರುವವರನ್ನು, ಕಿಡಿಗೇಡಿಗಳನ್ನು, ಸಂಸ್ಕೃತಿ ಹೀನರನ್ನು, ಧೂರ್ತರನ್ನು, ದುರುಳರನ್ನು ಈ ವಿದ್ಯಾವಂತ ಸಮಾಜ ಆದರಿಸಿ ಗೌರವಿಸುತ್ತಾ ಬಂದಿರುವುದರಿಂದ ಸಮಾಜಘಾತುಕರೇ ಹೆಚ್ಚುವಂತೆ ಮಾಡಿದೆ. ಇದಕ್ಕೆ ಕಾರಣ ಯಾರು ಎಂಬುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ವಿದ್ಯಾವಂತರಾದ ಯುವಕ ಸಮೂಹ ಅಡ್ಡದಾರಿ ಹಿಡಿದಿದೆ. ಕೊಲೆ, ಸುಲಿಗೆ, ದರೋಡೆ, ಕಿಡ್ನಾಪ್ ಪ್ರಕರಣಗಳು ದಿನೇದಿನೇ ಉಲ್ಬಣಿಸುತ್ತಿರುವುದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಲೇ ಇದೆ. ಹೊಟ್ಟೆಬಟ್ಟೆ ಕಟ್ಟಿ
,ಕಾಸುಕಾಸು ಕೂಡಿಸಿ, ನಮ್ಮ ಹಾಗೆ ಆಗಬಾರದೆಂದು ಬಡವರು, ದೀನರು, ಕೃಷಿಕರು ತಮ್ಮ ಮಕ್ಕಳನ್ನು ವಿದ್ಯಾವಂತರಾಗಿಸಲು ಪ್ರಯತ್ನಿಸುತ್ತಿದ್ದಾರೆ. ಅವರಿಗೂ ಅವರು ಕಲಿತ ವಿದ್ಯೆ ದಾರಿ ತಪ್ಪಿಸುತ್ತಿದೆ. ಶಾಲೆಗೆ ಹೋಗಿ ನಮ್ಮ ಮಕ್ಕಳು ಕಲಿಯಬಾರದು ಕಲಿತರು ಎಂಬಷ್ಟರ ಮಟ್ಟಿಗೆ ಹೆತ್ತವರು ಹತಾಶಾರಾಗಿದ್ದಾರೆ. ಹೆಚ್ಚೆಚ್ಚು ಕಲಿತವರು ವೈಯಕ್ತಿಕ ಮತ್ತು ಸಾಮಾಜಿಕ ಸಂಬಂಧಗಳ ಕಡೆ ಅಮಾನವೀಯರಾಗುತ್ತಿದ್ದಾರೆ. ಹೆತ್ತವರನ್ನು,
ಸುತ್ತಮುತ್ತಲಿನವರನ್ನು ಕಂಡರೆ ಅಸಹ್ಯವನ್ನು ಪ್ರಕಟಿಸುತ್ತಿದ್ದಾರೆ. ವಿದ್ಯಾವಂತರ ಕಣ್ಣಿಗೆ ಎಲ್ಲರೂ ಸಣ್ಣವರಂತೆ ಕಾಣುತ್ತಿದ್ದಾರೆ. ವಿದ್ಯಾವಂತರು ತಮ್ಮ ಗೆಳೆಯರ ನಡುವೆ ಅನಕ್ಷರಸ್ಥ ತಮ್ಮ ತಂದೆ ತಾಯಂದಿರನ್ನು ಪರಿಚಯಿಸಲು ಮುಚ್ಚುಮರೆ ಮಾಡುತ್ತಾರೆ, ಹಿಂಜರಿಯುತ್ತಾರೆ. ಇಲ್ಲದ Guilt ಇವರನ್ನು ಕಾಡುತ್ತಿದೆ. ಹೆತ್ತವರಲ್ಲಿ ಎಲ್ಲವನ್ನೂ

ಹೇಳುವುದಿಲ್ಲ. ರಹಸ್ಯಾತಿ ರಹಸ್ಯವನ್ನು ಕಾಪಾಡುತ್ತಾರೆ. ತಮ್ಮ ಬಾಹ್ಯ ಸಂಬಂಧ, ವ್ಯವಹಾರದ ಬಗ್ಗೆ ಹೆತ್ತವರಿಗೆ ಮಾಹಿತಿ ಕೊಟ್ಟಿರುವುದಿಲ್ಲ. ಸಮಾಜದೊಡನೆ ಬೆರೆಯುವ ಮನಸ್ಥಿತಿ ಇವರಿಗಿಲ್ಲ. ನಾವು ಪಡೆದ ವಿದ್ಯೆ ನಮ್ಮ ನಮ್ಮೊಳಗಿನ ಕಂದಕದ ಆಳ ಮತ್ತು ಅಗಲವನ್ನು ವಿಸ್ತರಿಸುತ್ತಾ ಹೋಯಿತು. ಸಾಮಾಜಿಕವಾದ, ಆರ್ಥಿಕವಾದ, ರಾಜಕೀಯವಾದ, ನೈತಿಕವಾದ  ಸಂಸ್ಕೃತಿ ಶಿಕ್ಷಿತರಿಂದಲೇ ಅಧಃಪತನವಾಗುತ್ತಿದೆ. ವಾಮಮಾರ್ಗವನ್ನು
ಹಿಡಿಯುವಂತೆ ಪ್ರೇರಣೆ, ಪ್ರಚೋದನೆಗೆ ಒಳಗಾಗುವವರು ಕಲಿತವರೇ ಹೊರತು ಅವಿದ್ಯಾವಂತರಲ್ಲ ಎಂಬುದು ವರ್ತಮಾನದಲ್ಲಿ ನಿಚ್ಚಳವಾಗಿದೆ. ವಿದ್ಯೆ ವಿನಯವನ್ನು ಕೊಡುತ್ತದೆಂಬ ಮಾತು ಸತ್ವಹೀನವಾಗಿದೆ. ಮಾತಿಗೆ ಪ್ರತಿಮಾತು, ವಾದಕ್ಕೆ ಪ್ರತಿವಾದ, ಸವಾಲಿಗೆ ಸವಾಲು, ಸೇಡಿಗೆ ಸೇಡು, ದ್ವೇಷಕ್ಕೆ ದ್ವೇಷ, ಮುಯ್ಯಿಗೆ ಮುಯ್ಯಿಯ ಪ್ರವೃತ್ತಿ  ಕಲಿತವರಲ್ಲೇ ಹೆಚ್ಚಾಗಿ ವಿಧ್ವಂಸಕ ಪ್ರವೃತ್ತಿ ಸಮಾಜಕ್ಕೆ ಘಾತವನ್ನುನೀಡುತ್ತಿದೆ. ಹಿಂಸಾ ಸ್ವಭಾವವನ್ನು ಎಲ್ಲೆಡೆ ಹರಡುತ್ತಿದೆ. ವ್ಯವಸ್ಥೆಯೇ ಇದಕ್ಕೆಲ್ಲಾ ಪೂರಕವಾಗಿದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ವ್ಯಾವಹಾರಿಕವಾಗಿ ನಾವು ಬದುಕಬಾರದು. ಶಾಲೆಗಳು, ವಿದ್ಯಾರ್ಥಿಗಳು, ಪ್ರಭುತ್ವ  ಹಾಗೂ ಸಮುದಾಯದ ಮಧ್ಯೆ ಮಾನವೀಯ ಸಂಬಂಧ ಏರ್ಪಡುವಂತಾಗಬೇಕು‌ ಅಂದರೆ ಶಿಕ್ಷಣ ಮೌಲ್ಯಗಳು ಸ್ವಸ್ಥ ಸಮಾಜವನ್ನು ನಿರ್ಮಿಸುವಂತಿರಬೇಕು.‌ ವಿದ್ಯೆ ಅನಾಹುತಕ್ಕೆ ಎಡೆಮಾಡಿಕೊಡಬಾರದು. ಜೀವನ ಮೌಲ್ಯಗಳನ್ನು ಬೆಳೆಸುವ ಕಾರ್ಯ ಮನೆ, ಶಾಲೆ, ಸಮುದಾಯ ಮತ್ತು ಪ್ರಭುತ್ವದಿಂದ ಆಗಬೇಕು.‌ ಅಂದ ಹಾಗೆ ಯಾರೂ ಶಿಕ್ಷಣವನ್ನು ಪಡೆಯಬಾರದೆಂಬುದು ನನ್ನ ವಾದವಲ್ಲ. ಇಂದಿನ ವಿದ್ಯಾಭ್ಯಾಸ ಪದ್ಧತಿ ನಮ್ಮನ್ನು ಕೇವಲ ಅಂಕ ಗಳಿಕೆಗೊಂದೇ ಪ್ರಾಧಾನ್ಯವನ್ನು ನೀಡುತ್ತಿದೆ. ಜೀವನ ಮೌಲ್ಯಗಳನ್ನು ಬೆಳೆಸುತ್ತಿಲ್ಲ. ಅಧ್ಯಾಪಕರು ಮನಸು ಮಾಡಿದ್ರೆ
ಮಾನವೀಯ ಮೌಲ್ಯಗಳನ್ನುಳ್ಳ ಜನಾಂಗವನ್ನು ನಿರ್ಮಿಸಬಹುದು. ಶೈಕ್ಷಣಿಕ ಮೌಲ್ಯಗಳು ಈ ಬಗೆಯಲ್ಲಿ ರೂಪಿತವಾಗಬೇಕಿದೆ. ನಾವು ಕಲಿಸುವ ವಿದ್ಯೆಯಿಂದ ನಮ್ಮ ಅಸ್ತಿತ್ವದ  ಅಧಃಪತನಕ್ಕೆ ಹೇತುವಾಗಬಾರದು ಎಂಬ ಎಚ್ಚರ ಪ್ರಭುತ್ವಕ್ಕೆ ಇದ್ದರೆ ಭಾರತದ ಭವಿಷ್ಯ ಉಜ್ವಲವಾಗಿ ಉಳಿದೀತು.

ಲೇಖಕರು
ದೇವಿದಾಸ್ ಟಿ.

Leave a Reply

Your email address will not be published. Required fields are marked *